ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ (ಡಿ.21) ನಡೆದ 55ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯಲ್ಲಿ ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ನಿರ್ಧಾರವನ್ನು ಮುಂದೂಡಲಾಗಿದೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳ ಉಪಸ್ಥಿತಿಯಲ್ಲಿ ರಾಜಸ್ಥಾನದಲ್ಲಿ ನಡೆದ ಸಭೆಯಲ್ಲಿ ವಿಮಾ ಕಂತಿನ ಮೇಲಿನ ತೆರಿಗೆ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಹೆಚ್ಚಿನ ಚರ್ಚೆ ಹಾಗೂ ಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ಮಂಡಳಿ ಹೇಳಿದೆ.
ಸ್ವಿಗ್ಗಿ ಮತ್ತು ಝೊಮ್ಯಾಟೋದ ಆಹಾರ ವಿತರಣೆ ಮೇಲೆ ಪ್ರಸ್ತುತ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಶೇ.5ಕ್ಕೆ ಇಳಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಸದ್ಯಕ್ಕೆ ಇದನ್ನೂ ಮುಂದೂಡಲಾಗಿದೆ.
ಏವಿಯೇಷನ್ ಟರ್ಬೈನ್ ಫ್ಯೂಯಲ್ (ಎಟಿಎಫ್) ಅಥವಾ ವಿಮಾನ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವ ಕುರಿತ ಸಭೆಯ ಕಾರ್ಯಸೂಚಿಯಲ್ಲಿನ (ಸಭೆಯ ಅಜೆಂಡಾದ) ಮತ್ತೊಂದು ಮಹತ್ವದ ಅಂಶವನ್ನು ಮಂಡಳಿಯು ತಿರಸ್ಕರಿಸಿದೆ. ಪ್ರಸ್ತುತ, ಎಟಿಎಫ್ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್) ಒಳಪಟ್ಟಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಹೆಚ್ಚಿನ ವೆಚ್ಚಗಳು ಅಂತಿಮವಾಗಿ ಟಿಕೆಟ್ ದರಗಳ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಕೋರಲಾಗಿದೆ.
ರಾಜ್ಯಗಳ ಸಹಕಾರ ಬೇಕಿದೆ : ನಿರ್ಮಲಾ ಸೀತಾರಾಮನ್
ವಿಮಾನ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ರಾಜ್ಯಗಳು ಒಪ್ಪಲು ಸಿದ್ದವಿಲ್ಲ. ಕೇಂದ್ರ ಸರ್ಕಾರವೊಂದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇವಿ ಮಾರಾಟ ತೆರಿಗೆ ಪರಿಷ್ಕರಣೆ
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಎಲೆಕ್ಟ್ರಾನಿಕ್ ವಾಹನಗಳ (ಇವಿ) ಮಾರಾಟ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ. ವಿದ್ಯುತ್ ಚಾಲಿತ ಹೊಸ ಕಾರುಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಆದರೆ, ಸೆಕೆಂಡ್ ಹ್ಯಾಂಡ್ ಇವಿ ಕಾರನ್ನು ಅದರ ಮಾಲೀಕ ನೇರವಾಗಿ ಮಾರಾಟ ಮಾಡಿದರೆ ಜಿಎಸ್‌ಟಿ ಅನ್ವಯಿಸುವುದಿಲ್ಲ. ಯಾವುದಾದರು ಕಂಪನಿಯು ಸೆಕೆಂಡ್ ಹ್ಯಾಂಡ್ ಇವಿ ಮಾರಿದರೆ ಅಥವಾ ಮಾರಾಟಗಾರರು ಸೆಕೆಂಡ್ ಹ್ಯಾಂಡ್ ಇವಿ ಕಾರನ್ನು ಮಾರ್ಪಡಿಸಿ ಮಾರಿದರೆ ಶೇ.18ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ.
55ನೇ ಜಿಎಸ್‌ಟಿ ಸಭೆಯ ಇತರ ನಿರ್ಣಯಗಳು :
- ಅಂತಿಮ ಬಳಕೆಯ ಹೊರತಾಗಿಯೂ, ಬಲವರ್ಧಿತ ಅಕ್ಕಿ ಕಾಳುಗಳ ಜಿಎಸ್‌ಟಿ ದರವನ್ನು ಶೇ. 18ರಿಂದ ರಿಂದ ಶೇ.5ಕ್ಕೆ ಇಳಿಸಲಾಗಿದೆ. ಆಹಾರ ಪದಾರ್ಥವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ತಂದಿರುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
- ಸರ್ಕಾರದ ಯೋಜನೆಯಡಿಯಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಉಚಿತ ವಿತರಣೆಗಾಗಿ ಉದ್ದೇಶಿಸಲಾದ ಆಹಾರ ತಯಾರಿಕೆಯ ಮೇಲಿನ ರಿಯಾಯಿತಿಯ ಶೇ. 5 ಜಿಎಸ್‌ಟಿ ವಿನಾಯಿತಿ ಇರುತ್ತದೆ.
- ಉಪ್ಪು ಮತ್ತು ಮಸಾಲೆಗಳೊಂದಿಗೆ ಅನ್ಪ್ಯಾಕ್ ಮಾಡಲಾದ ಪಾಪ್‌ಕಾರ್ನ್ ಶೇ. 5 ಜಿಎಸ್‌ಟಿಗೆ ಒಳಪಡಲಿದೆ. ಆದರೆ, ಪ್ರಿ-ಪ್ಯಾಕ್ ಮಾಡಿದ ಪಾಪ್‌ಕಾರ್ನ್‌ಗೆ ಶೇ.12 ಮತ್ತು ಕ್ಯಾರಮೆಲ್ ಲೇಪಿತ ಪಾಪ್‌ಕಾರ್ನ್‌ಗೆ ಶೇ. 18 ಜಿಎಸ್‌ಟಿ ಅನ್ವಯವಾಗಲಿದೆ.
- ಸಾಲದ ಷರತ್ತುಗಳನ್ನು ಅನುಸರಿಸಲು ವಿಫಲವಾದಾಗ ಸಾಲಗಾರರಿಂದ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC) ವಿಧಿಸುವ ಮತ್ತು ಸಂಗ್ರಹಿಸುವ ದಂಡದ ಶುಲ್ಕಗಳ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ.
- ವಹಿವಾಟುಗಳಲ್ಲಿ 2,000 ರೂ.ಗಿಂತ ಕಡಿಮೆ ಮೊತ್ತವನ್ನು ಪ್ರಕ್ರಿಯೆಗೊಳಿಸುವ ಪಾವತಿ ಸಂಗ್ರಾಹಕರು ಜಿಎಸ್‌ಟಿ ವಿನಾಯಿತಿಗೆ ಅರ್ಹರಾಗಿರುತ್ತಾರೆ. ಆದರೆ, ಪಾವತಿ ಗೇಟ್‌ವೇಗಳು ಮತ್ತು ಫಿನ್‌ಟೆಕ್ ಸೇವೆಗಳನ್ನು ಇದರಲ್ಲಿ ಒಳಗೊಂಡಿಲ್ಲ.
- ಇದನ್ನೂ ಓದಿ : ಮಹಾರಾಷ್ಟ್ರ ಖಾತೆ ಹಂಚಿಕೆ | ಶಿಂದೆಗೆ ಎರಡು ಮತ್ತೊಂದು, ಅಜಿತ್‌ಗೆ ಹಣಕಾಸು


