ಕೇಂದ್ರದ ತಪ್ಪಿನಿಂದಾಗಿ 560 ಜನ ಮೃತಪಟ್ಟಿದ್ದಾರೆ, ಈ ಸಾವಿಗೆ ಯಾರು ಹೊಣೆ? ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, “ಎಐಸಿಸಿಯಿಂದ ಕೆಲ ವಿಚಾರಗಳ ಪ್ರಸ್ತಾಪ ಮಾಡಲು ಆದೇಶ ಇದೆ. ಕೊರೊನಾ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವುದು ಬೇಡ ಅಂದುಕೊಂಡಿದ್ದೆ. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಮಾತನಾಡುತ್ತಿದ್ದೇನೆ. ಕೊರೊನಾದಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರದ ತಪ್ಪಿನಿಂದಾಗಿ 560 ಜನ ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ? ಯುದ್ದದ ಸಮಯದಲ್ಲೂ ಇಂತಹ ಕಷ್ಟ ಆಗಿರಲಿಲ್ಲ. ಕೇಂದ್ರ ಯಾವುದೇ ಯೋಜನೆ ಇಲ್ಲದೇ ಲಾಕ್ಡೌನ್ ಮಾಡಿದೆ. 20 ಲಕ್ಷ ಕೋಟಿ ಶೇಕಡಾ 10 ಜಿಡಿಪಿ ಹಣ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ ಎಂದು ಹೇಳುತ್ತಾರೆ, ಆದರೆ 1.70 ಲಕ್ಷ ಕೋಟಿ ರೂಪಾಯಿ ಹಣ ಬಂದಿದೆ. ಬರೀ ಹೇಳಿದ್ದೇ ಹೇಳೋದು ಸುಳ್ಳು. ನಮಗೂ ಕೇಳಿ ಕೇಳಿ ಸಾಕಾಗಿದೆ. ಮೂರು ತಿಂಗಳ ಬಳಿಕ ಕಂತು ಕಟ್ಟಿ ಅಂದ್ರೆ ರಿಲೀಫ್ ಆಗುತ್ತಾ. ಕೆಲಸ ಇಲ್ಲದೇ ಮೂರು ತಿಂಗಳ ಬಳಿಕ ಹೇಗೆ ಕಂತು ಕಟ್ಟುತ್ತಾರೆ ಎಂದು ಖರ್ಗೆ ಪ್ರಶ್ನೆ ಮಾಡಿದರು.
ಕೂಲಿ ಕಾರ್ಮಿಕರು, ಕುಲಕಸುಬು ಆಧರಿಸಿದವರು ಬಹಳ ತೊಂದರೆಯಲ್ಲಿ ಇದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ಬಾರಿ ತೊಂದರೆ ಆಗಿದೆ. ವಲಸಿಗ ಕಾರ್ಮಿಕರು ದೇಶದಲ್ಲಿ 8 ಕೋಟಿ ಜನ ಸಮಸ್ಯೆಯಲ್ಲಿ ಸಿಕ್ಕಿದ್ದಾರೆ. ಅವರ ಜೀವನ ಅಸ್ತವ್ಯಸ್ತ ಆಗಿದೆ. ರೈತರು ಮತ್ತು ರೈತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕನ ಬಳಿ ಹಣ ಇದ್ದರೆ ಖರೀದಿ ಮಾಡುವ ಶಕ್ತಿ ಬರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ಬರುತ್ತದೆ. ಆದರೆ ಜನರ ಬಳಿ ಹಣ ಇಲ್ಲದೇ ಬೇಡಿಕೆ ಕುಸಿತ ಕಂಡಿದೆ ಎಂದು ಹೇಳಿದರು.
13 ಸಾವಿರ ಪ್ಯಾಸೆಂಜರ್ ರೈಲು ದೇಶದಲ್ಲಿ ಓಡಾಟ ಮಾಡುತ್ತಿದ್ದವು. 2.30 ಕೋಟಿ ಜನರು ದಿನವೂ ಪ್ರಯಾಣಿಸುತ್ತಿದ್ದರು. 5-6 ಕೋಟಿ ಜನ ವಲಸಿಗ ಕಾರ್ಮಿಕರು ಇದ್ರು. ಪ್ಯಾಸೆಂಜರ್ ರೈಲಿನಲ್ಲಿ ನಾಲ್ಕು ದಿನದಲ್ಲಿ ಕಳುಹಿಸಿಕೊಡಬಹುದಿತ್ತು. ಲಾಕ್ಡೌನ್ಗೂ ಮೊದಲು ಅವರನ್ನು ಅವರ ಸ್ಥಳಗಳಿಗೆ ತಲುಪಿಸಬಹುದಿತ್ತು. ಹಾಗೇ ಮಾಡಿದ್ರೆ ಬೀದಿಯಲ್ಲಿ ಸಾವು, ರಸ್ತೆಯಲ್ಲಿ ಹೆರಿಗೆ ಆಗುವುದು ಕಾಣುತ್ತಿರಲಿಲ್ಲ. ರೈಲ್ವೆ ಹಳಿಗಳ ಮೇಲೆ ಮಲಗಿ ಸಾಯುತ್ತಿರಲಿಲ್ಲ. ಅನ್ನ ಮತ್ತು ನೀರಿಲ್ಲದೇ ಜನರು ಪ್ರಾಣ ಬಿಡುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ 50 ಕೋಟಿ ಕೊಟ್ಟಿದ್ದಾರೆ. ಬರೀ ಪ್ರಚಾರ ಗಿಟ್ಟಿಸಿಕೊಳ್ಳುವುದಷ್ಟೇ ಇವರ ಕೆಲಸ. ಬಾಂಬೆಯಿಂದ ಲಕ್ನೋಗೆ ಹೋಗಬೇಕಾದರೆ ಬಿಹಾರ ಕಡೆ ಕಳಿಸಿದ್ದಾರೆ. ಮೂವತ್ತು ಗಂಟೆಯಲ್ಲಿ ಮುಗಿಯುವ ಪಯಣ 72 ಗಂಟೆ ಬೇಕಾಯಿತು. ಸೂಕ್ತ ವ್ಯವಸ್ಥೆ, ಊಟ ಇಲ್ಲದೆ ಇಷ್ಟು ಸಮಯ ಅವರು ರೈಲಿನಲ್ಲಿ ಇರೋದು ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರ ಮಾತನಾಡಲು ಸಿದ್ದವಿದೆ. ಆದರೆ ಕೆಲಸ ಮಾಡುವ ಹುಮ್ಮಸ್ಸು ಇಲ್ಲ. ಜನರ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸಿಲ್ಲ. ಜನರಿಗಾಗಿ ನಾವು ಸುಮ್ಮನಿದ್ದೇವೆ. ಸರ್ಕಾರದ ವೈಫಲ್ಯಗಳನ್ನ ಜನರ ಗಮನಕ್ಕೆ ತರುತ್ತಿದ್ದೇವೆ. ಕೂಲಿ ಕಾರ್ಮಿಕರನ್ನು ಕಳುಹಿಸಿ ಕೊಡುವ ವಿಚಾರದಲ್ಲಿ ಕೇಂದ್ರ ರೈಲ್ವೆ ಇಲಾಖೆ ವಿಫಲವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ. ಕೂಡಲೇ ಕೇಂದ್ರ ರೈಲ್ವೆ ಸಚಿವ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಓದಿ: ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು ಸಣ್ಣ ಘಟನೆ: ಬಂಗಾಳ BJP ಅಧ್ಯಕ್ಷ ದಿಲೀಪ್ ಘೋಷ್


