ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮದಲ್ಲಿ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿ 8 ಪೊಲೀಸರು ಹತ್ಯೆಗೆ ಕಾರಣರಾದವರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ, 12 ಪರಾರಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
“ಈ ಪ್ರಕರಣದಲ್ಲಿ ಇಲ್ಲಿಯವರೆಗೆ, ಮೂರು ಜನರನ್ನು ಬಂಧಿಸಲಾಗಿದೆ. ಆರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಮತ್ತು ಏಳು ಜನರನ್ನು ಜೈಲಿಗೆ ಕಳುಹಿಸಲಾಗಿದೆ (ಸೆಕ್ಷನ್ 120 ಬಿ ಐಪಿಸಿ ಅಡಿಯಲ್ಲಿ). ಇನ್ನೂ ಹನ್ನೆರಡು ಪ್ರಮುಖ ಅಪರಾಧಿಗಳು ಪರಾರಿಯಾಗಿದ್ದಾರೆ” ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೊಲೆ ಯೋಜಿಸಿದ ವ್ಯಕ್ತಿ, ದರೋಡೆಕೋರ ವಿಕಾಸ್ ದುಬೆ ಶುಕ್ರವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಶೂಟೌಟ್ ನಂತರ ಪರಾರಿಯಾಗಿದ್ದ ದುಬೆಯನ್ನು ಗುರುವಾರ ಮಧ್ಯಪ್ರದೇಶದ ಉಜ್ಜಯಿನಿ ನಲ್ಲಿ ಬಂಧಿಸಲಾಗಿತ್ತು.
ಪೊಲೀಸರು ದುಬೆಯನ್ನು ಪತ್ತೆಹಚ್ಚಲು ಹಲವು ತಂಡಗಳಲ್ಲಿ ತನಿಖೆ ನಡೆಸುತ್ತಿದ್ದರು. ದುಬೆಯ ಸಂಬಂಧಿಕರು ಸೇರಿದಂತೆ ಅನೇಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ವಿವಿಧ ನಗರಗಳಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಅವನ ಅನೇಕ ಸಹಾಯಕರು ಕೊಲ್ಲಲ್ಪಟ್ಟರು.
ಇದರ ಜೊತೆಗೆ, ಜುಲೈ 3 ರ ದಾಳಿಯ ಬಗ್ಗೆ ದುಬೆ ಹೇಗೆ ಮಾಹಿತಿ ಪಡೆದಿದ್ದ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದರು. ಇದು ದರೋಡೆಕೋರ ಮತ್ತು ಸ್ಥಳೀಯ ಪೊಲೀಸರ ನಡುವಿನ ಸಂಬಂಧವನ್ನು ಬಹಿರಂಗಪಡಿಸಿತ್ತು.
ಚೌಬೆಪುರದ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ಮಾಹಿತಿ ನೀಡಿದ್ದಾರೆ ಎಂಬ ಸಂಶಯ ವ್ಯಕ್ತಿವಾಗಿತ್ತು. ಹಾಗಾಗಿ ಅವರು ಮತ್ತು ಇತರ ಸಬ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಿ ಬಂಧಿಸಲಾಗಿದೆ.
ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ ಅನುಮಾನಾಸ್ಪದ: ಸಾರ್ವಜನಿಕರಿಂದ 5 ಪ್ರಶ್ನೆಗಳು


