Homeಮುಖಪುಟನವೆಂಬರ್‌ 29 ರಂದು 60 ಟ್ರ್ಯಾಕ್ಟರ್‌ಗಳಲ್ಲಿ ಸಂಸತ್ತಿಗೆ ಮೆರವಣಿಗೆ: ರಾಕೇಶ್ ಟಿಕಾಯತ್

ನವೆಂಬರ್‌ 29 ರಂದು 60 ಟ್ರ್ಯಾಕ್ಟರ್‌ಗಳಲ್ಲಿ ಸಂಸತ್ತಿಗೆ ಮೆರವಣಿಗೆ: ರಾಕೇಶ್ ಟಿಕಾಯತ್

- Advertisement -
- Advertisement -

ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶಾಸನಬದ್ಧವಾಗಿ ಖಾತರಿಗೊಳಿಸಬೇಕು ಎಂದು ಒತ್ತಾಯಿಸಿ ಇದೇ ನವೆಂಬರ್ 29ರಂದು ನಡೆಯುತ್ತಿರುವ ಸಂಸತ್ ಚಲೋನಲ್ಲಿ ಒಟ್ಟು 60 ಟ್ಯ್ರಾಕ್ಟರ್‌ಗಳು ಸಂಸತ್ತಿಗೆ ತೆರಳಲಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಗಾಜಿಯಾಬಾದ್‌ನಲ್ಲಿ ಘೋಷಿಸಿದ್ದಾರೆ.

“ನವೆಂಬರ್‌ 29 ರಂದು 60 ಟ್ರ್ಯಾಕ್ಟರ್‌ಗಳು ಸಂಸತ್ತಿಗೆ ಮೆರವಣಿಗೆ ನಡೆಸಲಿವೆ. ಸರ್ಕಾರ ತೆರೆದಿರುವ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳು ಹೋಗುತ್ತವೆ. ನಾವು ರಸ್ತೆಗಳನ್ನು ನಿರ್ಬಂಧಿಸಿದ್ದೇವೆ ಎಂದು ಅವರು ಆರೋಪಿಸಿದ್ದರು. ನಾವು ರಸ್ತೆಗಳನ್ನು ನಿರ್ಬಂಧಿಸಿಲ್ಲ. ರಸ್ತೆ ತಡೆ ನಮ್ಮ ಚಳವಳಿಯಲ್ಲ. ನಮ್ಮ ಆಂದೋಲನವು ಸರ್ಕಾರದೊಂದಿಗೆ ಮಾತನಾಡುವುದಾಗಿದೆ. ನಾವು ನೇರವಾಗಿ ಸಂಸತ್ತಿಗೆ ಹೋಗುತ್ತೇವೆ’ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದು, ಈ ಮೂರು ಕೃಷಿ ಕಾನೂನುಗಳ ರದ್ದತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡುವ ಸಾಧ್ಯತೆ ಇದೆ. ಆದರೆ ಅಷ್ಟಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಕಾಯ್ದೆ ಸಂಸತ್ತಿನಲ್ಲಿ ರದ್ದಾಗುವುದರ ಜೊತೆಗೆ ಎಂಎಸ್‌ಪಿ ಖಾತ್ರಿ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾವು ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿ ಜಂತರ್‌ ಮಂತರ್‌ನಲ್ಲಿ ಸೇರಿ ಕಿಸಾನ್ ಸಂಸತ್ತು ನಡೆಸಿದೆವು. ಆದರೆ ಕಳೆದ ಬಾರಿ ಹೋದಂತೆ ಈ ಬಾರಿ 200 ಜನರು ಇರುವುದಿಲ್ಲ. ಬದಲಿಗೆ, ಸಾವಿರ ಜನರು ಸಂಸತ್ತಿಗೆ ತೆರಳಲಿದ್ದಾರೆ ಎಂದು ಟಿಕಾಯತ್ ವಿವರಿಸಿದ್ದಾರೆ.

‘ಎಂಎಸ್‌ಪಿ ಕುರಿತು ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ಅದರೊಂದಿಗೆ ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಘಟನೆಗಳು, 750 ರೈತರ ಸಾವು… ಇವೆಲ್ಲದರ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

2020 ನವೆಂಬರ್ ತಿಂಗಳಿನಲ್ಲಿ ಆರಂಭವಾದ ರೈತ ಹೋರಾಟ ಹಲವು ಏಳು ಬೀಳುಗಳ ನಡುವೆಯೂ ಯಶಸ್ವಿ ಕಂಡಿದೆ. ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನಲ್ಲಿ ಕಾಯ್ದೆಗಳು ಅಧಿಕೃತವಾಗಿ ರದ್ಧಾಗುವವರೆಗೂ ಕಾಯುವುದಾಗಿ ತಿಳಿಸಿತ್ತು. ಅದರೊಂದಿಗೆ ಇನ್ನು ಮುಖ್ಯ ಬೇಡಿಕೆಗಳಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ವಿದ್ಯುತ್ ಕಾಯ್ದೆಯನ್ನು ಹಿಂಪಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಪೂರೈಸುವವರೆಗೂ ಹೋರಾಟವನ್ನು ನಡೆಸುವುದಾಗಿ ತಿಳಿಸಿತ್ತು.

ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 23 ರವರೆಗೆ ಮುಂದುವರೆಯುವ ನಿರೀಕ್ಷೆಯಿದೆ.


ಇದನ್ನೂ ಓದಿ: ರೈತ ಚಳವಳಿಯನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳು: ಪುರುಷೋತ್ತಮ ಬಿಳಿಮಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...