ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲಿನ ಹಲವಾರು ದಾಳಿಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮತ್ತು 32 ಲಕ್ಷ ರೂಪಾಯಿಗಳ ಸಾಮೂಹಿಕ ನಗದು ಬಹುಮಾನ ಘೋಷಣೆಯಾಗಿದ್ದ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ನಕ್ಸಲರು ಶುಕ್ರವಾರ (ಜ.31) ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಹಿರಿಯ ನಕ್ಸಲರ “ಟೊಳ್ಳು” ಮತ್ತು “ಅಮಾನವೀಯ” ಮಾವೋವಾದಿ ಸಿದ್ಧಾಂತ ಮತ್ತು ಬುಡಕಟ್ಟು ಜನಾಂಗದವರ ಶೋಷಣೆಯಿಂದ ನಿರಾಶೆಗೊಂಡ ಕಾರಣ, 7 ಮಂದಿ ನಕ್ಸಲರು ಹಿರಿಯ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಕಂಕೇರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ ಕಲ್ಯಾಣ್ ಎಲೆಸೆಲಾ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಶರಣಾದವರಲ್ಲಿ ಮಮತಾ ಅಲಿಯಾಸ್ ಶಾಂತಾ ಅಲಿಯಾಸ್ ವಾಸಣ್ಣ ಬತ್ತುಳಾಯಿ (60), ದಿನೇಶ್ ಮತ್ತಾಮಿ (20) ಮತ್ತು ಆಯ್ತು ರಾಮ್ ಪೋತಾಯಿ (27) ಸೇರಿದ್ದಾರೆ. ಇವರ ಸೆರೆಗೆ ತಲಾ 8 ಲಕ್ಷ ರೂಪಾಯಿ ಬಹುಮಾನವನ್ನು ಸರ್ಕಾರ ಘೋಷಿಸಿತ್ತು ಎಂದು ವರದಿ ತಿಳಿಸಿದೆ.
ನೆರೆಯ ತೆಲಂಗಾಣದ ಕರೀಂನಗರ ಜಿಲ್ಲೆಯ ನಿವಾಸಿ ಮಮತಾ ಅವರು ವಿಭಾಗೀಯ ಸಮಿತಿ ಸದಸ್ಯರಾಗಿ ಸಕ್ರಿಯರಾಗಿದ್ದರು ಮತ್ತು ಸಂಘಟನೆಯ ವಿಭಾಗವಾದ ‘ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘನ್’ (ಕೆಎಎಂಎಸ್) ನ ಉತ್ತರ ಬಸ್ತಾರ್ ವಿಭಾಗದ ಮುಖ್ಯಸ್ಥರಾಗಿದ್ದರು ಎಂದು ವರದಿ ವಿವರಿಸಿದೆ.
1996 ಮತ್ತು 2024ರ ನಡುವೆ, ಮಮತಾ ಅವರು 26 ನಕ್ಸಲ್ ಘಟನೆಗಳಲ್ಲಿ ಭಾಗಿಯಾಗಿದ್ದರು. ಇದರಲ್ಲಿ 2015ರಲ್ಲಿ ಕಂಕೇರ್ ಜಿಲ್ಲೆಯ ಕೊಯಾಲಿಬೇಡಾ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಯ ಸಂದರ್ಭ ಇಬ್ಬರು ಸೇನಾ ಸಿಬ್ಬಂದಿಯ ಸಾವಿಗೆ ಕಾರಣವಾದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟ ಮತ್ತು 2018ರಲ್ಲಿ ಇಬ್ಬರು ಬಿಎಸ್ಎಫ್ ಸಿಬ್ಬಂದಿಯ ಸಾವಿಗೆ ಕಾರಣವಾದ ಮಹ್ಲಾ ಹೊಂಚುದಾಳಿ ಸೇರಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ ಕಲ್ಯಾಣ್ ಎಲೆಸೆಲಾ ಮಾಹಿತಿ ನೀಡಿದ್ದಾಗಿ ವರದಿ ಹೇಳಿದೆ.
ಮತ್ತಾಮಿ ಅವರು ಮಾವೋವಾದಿಗಳ ಮಿಲಿಟರಿ ಕಂಪನಿ ಸಂಖ್ಯೆ 10ರ ಸದಸ್ಯರಾಗಿ ಸಕ್ರಿಯರಾಗಿದ್ದರು. ಪೊಟೈ ಮಿಲಿಟರಿ ಕಂಪನಿ ಸಂಖ್ಯೆ 5ರ ಸದಸ್ಯರಾಗಿದ್ದರು.
ಶರಣಾದ ಮತ್ತೊಬ್ಬರು ನಕ್ಸಲ್ ಸದಸ್ಯೆ ಜಮುನಾ ಅಲಿಯಾಸ್ ನೀರಾ ನೇತಮ್ (50) ಪಾರ್ತಾಪುರ ಪ್ರದೇಶ ಸಮಿತಿಯ ಸದಸ್ಯೆಯಾಗಿ ಸಕ್ರಿಯರಾಗಿದ್ದರು.
2007ರಲ್ಲಿ ಭುಸ್ಕಿ-ಮಿಚ್‌ಗಾಂವ್ ಗ್ರಾಮದಲ್ಲಿ ಐವರು ಪೊಲೀಸರು ಸಾವನ್ನಪ್ಪಿ, 18 ಜನರು ಗಾಯಗೊಂಡಿದ್ದ ಹೊಂಚುದಾಳಿ ಸೇರಿದಂತೆ ಹಲವು ನಕ್ಸಲ್ ದಾಳಿಗಳಲ್ಲಿ ಜಮುನಾ ಭಾಗಿಯಾಗಿದ್ದರು ಎಂದು ಎಲೆಸೆಲಾ ಹೇಳಿದ್ದಾರೆ. ಇವರ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇತರ ಮೂವರು, ಪಾರ್ತಾಪುರ್ ಎಲ್‌ಜಿಎಸ್ (ಸ್ಥಳೀಯ ಗೆರಿಲ್ಲಾ ದಳ) ಸದಸ್ಯ ಇಟ್ವಾರಿನ್ ಪಡ್ಡಾ (25), ಪಾನಿಡೋಬಿರ್/ರೌಘಾಟ್ ಎಲ್‌ಒಎಸ್ (ಸ್ಥಳೀಯ ಸಮಿತಿ ದಳ) ಸಂಜಯ್ ನರೆಟಿ (23) ಮತ್ತು ಪಾನಿಡೋಬಿರ್ ಎಲ್‌ಒಎಸ್ ಸದಸ್ಯ ಸಗ್ನು ರಾಮ್ ಅಂಚಲಾ (24) ಸೇರಿದ್ದಾರೆ. ಇವರ ತಲೆಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.
ಶರಣಾದ ಎಲ್ಲಾ ನಕ್ಸಲರಿಗೆ ತಲಾ 25,000 ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗಿದೆ. ಸರ್ಕಾರದ ನೀತಿಯ ಪ್ರಕಾರ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಎಎಸ್‌ಪಿ ಹೇಳಿದ್ದಾರೆ. ಕಳೆದ ವರ್ಷ, ಕಂಕೇರ್ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು.
ಕೃಪೆ : ಡೆಕ್ಕನ್ ಹೆರಾಲ್ಡ್
ಬಜೆಟ್ ಅಧಿವೇಶನ | ಜಿಡಿಪಿ ಬೆಳವಣಿಗೆ ದರ ಶೇ 6.3ರಿಂದ 6.8 : ಆರ್ಥಿಕ ಸಮೀಕ್ಷೆ


