ದೇಶದ ಹೈಕೋರ್ಟ್‌ಗಳಲ್ಲಿ 2018ರಿಂದ ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇಕಡ 77ರಷ್ಟು ಮಂದಿ ಪ್ರಬಲ ಜಾತಿಗಳಿಗೆ ಸೇರಿದವರು ಎಂದು ಕೇಂದ್ರ ಕಾನೂನು ಸಚಿವಾಲಯ ಮಾರ್ಚ್ 20ರಂದು ಸಂಸತ್ತಿಗೆ ಒದಗಿಸಿದ ಮಾಹಿತಿಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸಂಸದ ಮನೋಜ್ ಕುಮಾರ್ ಝಾ ಅವರು ಉನ್ನತ ನ್ಯಾಯಾಂಗದಲ್ಲಿನ ಸಾಮಾಜಿಕ ವೈವಿಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, ನೇಮಕಾತಿಗಳ ಜಾತಿವಾರು ದತ್ತಾಂಶ ಲಭ್ಯವಿಲ್ಲ ಎಂದು ಹೇಳಿದೆ. ಏಕೆಂದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರನ್ನು ಸಂವಿಧಾನದ ವಿಧಿಗಳ ಅಡಿಯಲ್ಲಿ ನೇಮಕ ಮಾಡಲಾಗುತ್ತದೆ. ಅವುಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಇಲ್ಲ ಎಂದಿದೆ.
ಆದಾಗ್ಯೂ, 2018ರಿಂದ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳಿಗೆ ಶಿಫಾರಸು ಮಾಡಲ್ಪಡುವವರು ತಮ್ಮ ಸಾಮಾಜಿಕ ಹಿನ್ನೆಲೆಯ ಬಗ್ಗೆ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರ ಒದಗಿಸಿದ ದತ್ತಾಂಶವು ಶಿಫಾರಸು ಮಾಡಲ್ಪಟ್ಟವರು ಒದಗಿಸಿದ ಮಾಹಿತಿಯನ್ನು ಆಧರಿಸಿದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.
2018ರಿಂದ ಹೈಕೋರ್ಟ್‌ಗೆ ನೇಮಕಗೊಂಡ 715 ನ್ಯಾಯಾಧೀಶರಲ್ಲಿ 551 ಜನರು ಸಾಮಾನ್ಯ ವರ್ಗಕ್ಕೆ (General Category) ಸೇರಿದವರು ಎಂದು ಮೇಘವಾಲ್ ತಿಳಿಸಿದ್ದಾರೆ. 715 ನ್ಯಾಯಾಧೀಶರಲ್ಲಿ 22 (3%) ಜನರು ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸೇರಿದವರು, 16 (2.2%) ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಮತ್ತು 89 (12.4%) ಜನರು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಅವರು ಹೇಳಿದ್ದಾರೆ.
ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಯು ಆಗಸ್ಟ್ 2023ರಲ್ಲಿ ಸಂಸತ್ತಿಗೆ ಇದೇ ರೀತಿಯ ಡೇಟಾವನ್ನು ಮಂಡಿಸಿತ್ತು.
ನ್ಯಾಯಾಂಗ ನೇಮಕಾತಿಗಳಲ್ಲಿ ಸಾಮಾಜಿಕ ವೈವಿಧ್ಯತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಅನ್ನು ಅನುಸರಿಸಿದೆಯೇ ಎಂಬ ಬಗ್ಗೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, “ಪ್ರಸ್ತಾವನೆಗಳನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ವಹಿಸಲಾಗಿದೆ” ಎಂದು ಹೇಳಿದೆ.
“ಆದಾಗ್ಯೂ, ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ಸಾಮಾಜಿಕ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಧೀಶರ ನೇಮಕಾತಿಗೆ ಪ್ರಸ್ತಾವನೆಗಳನ್ನು ಕಳುಹಿಸುವಾಗ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಸೇರಿದ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸಬೇಕೆಂದು ಸರ್ಕಾರ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ವಿನಂತಿಸುತ್ತಿದೆ” ಎಂದು ಸಚಿವಾಲಯ ತಿಳಿಸಿದೆ.
ಅಂಬೇಡ್ಕರ್ ಸ್ಮಾರಕಕ್ಕೆ ಭೂಮಿ ನೀಡುವಂತೆ ದಲಿತ ನಾಯಕರಿಂದ ಫಡ್ನವೀಸ್‌ಗೆ ಮನವಿ


