ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ ಮಾಡಿದ್ದ 8 ಸಂಸದರನ್ನು ಒಂದು ವಾರಗಳ ಮಟ್ಟಿಗೆ ಅಮಾನತು ಮಾಡಲಾಗಿದೆ. ನಿನ್ನೆ ತೃಣಮೂಲ ಕಾಂಗ್ರೆಸ್ನ ಡೆರೆಕ್ ಒಬ್ರಯನ್ ಹಾಗೂ ಇನ್ನಿತರೆ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಡೆರೆಕ್ ಒಬ್ರಯನ್, ಸಂಜಯ್ ಸಿಂಗ್, ರಾಜೀವ್ ಸತವ್, ಕೆ.ಕೆ.ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್, ಸಯ್ಯದ್ ನಾಸೀರ್ ಹುಸೇನ್, ಎಳಮಾರನ್ ಕರೀಂ ಅಮಾನತುಗೊಂಡ ಸಂಸದರಾಗಿದ್ದಾರೆ. ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅಶಿಸ್ತಿನ ನಡವಳಿಕೆ ಎಂದು ಅಮಾನತು ಮಾಡಿ ಸದನದಿಂದ ಹೊರನಡೆಯಲು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆ ಎರಡು ಕೃಷಿ ಮಸೂದೆ ಅಂಗೀಕಾರ
ನಿನ್ನೆ ಕೃಷಿ ಮಸೂದೆಗೆ ಧ್ವನಿಮತದಿಂದ ಅಂಗೀಕಾರ ಪಡೆಯಲು ಸರಕಾರ ನಿರ್ಧರಿಸಿದೆ ಎಂದು ರಾಜ್ಯಸಭೆಯ ಉಪಾಧ್ಯಕ್ಷರು ಘೋಷಿಸಿದಾಗ ಸದನದಲ್ಲಿ ಗದ್ದಲ ಎಬ್ಬಿಸಿದ ವಿರೋಧ ಪಕ್ಷಗಳು, ತಾವು ಸದನದಲ್ಲೇ ಉಪಸ್ಥಿತರಿದ್ದು ಭೌತಿಕ ಮತದಾನದ ಮೂಲಕ ಮಸೂದೆಗೆ ಅಂಗೀಕಾರ ಪಡೆಯಬೇಕು ಎಂದು ಪಟ್ಟುಹಿಡಿದವು.
ಇದನ್ನು ನಿರಾಕರಿಸಿದ್ದಕ್ಕೆ ಸದನದ ಬಾವಿಗೆ ಬಂದ ತೃಣಮೂಲ ಪಕ್ಷದ ಸದಸ್ಯ ಡೆರೆಕ್ ಒಬ್ರೆಯನ್ ಸ್ಫೀಕರ್ ಟೇಬಲ್ ಮೇಲಿದ್ದ ರೂಲ್ ಬುಕ್ ಹರಿಯಲು ಮುಂದಾಗಿದ್ದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಘೋಷಣೆಗಳನ್ನ ಕೂಗಿದ್ರು. ವಿಪಕ್ಷಗಳು ಕೆಲ ಕಾಲ ಸದನದಲ್ಲಿ ಧರಣಿ ಕುಳಿತಿದ್ದರು.
ಇದರ ನಡುವೆಯೂ ವಿವಾದಿತ ಕೃಷಿ ಮಸೂದೆಗಳ ಕುರಿತು ಚರ್ಚೆಗೆ ಅವಕಾಶ ನೀಡದೆ ಅಂಗೀಕರಿಸಲು ಸಹಕರಿಸಿದ ಆರೋಪದ ಕಾರಣಕ್ಕಾಗಿ ಉಪಸಭಾಪತಿ ಹರಿವಂಶ್ ವಿರುದ್ಧ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ಭಾರತ ಕಮ್ಯೂನಿಸ್ಟ್ ಪಕ್ಷ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ, ನ್ಯಾಷನಲ್ ಕಾನ್ಫರೆನ್ಸ್, ದ್ರಾವಿಡ ಮುನ್ನೇತ್ರ ಕಜಗಂ, ಆಮ್ ಆದ್ಮಿ ಪಕ್ಷಗಳು ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿವೆ.
ನಿನ್ನೆ ವಿರೋಧ ಪಕ್ಷಗಳ ಭಾರಿ ಪ್ರತಿಭಟನೆಯ ನಡುವೆ ಎರಡು ಕೃಷಿ ಸಂಬಂಧಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಇಂದು ಮೂರನೇ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಸದ್ಯ ಅಮಾನತುಗೊಂಡ 8 ಸದಸ್ಯರ ಅಮಾನತಿನ ವಿರುದ್ಧ ಮತ್ತೆ ಇಂದು ಪ್ರತಿಭಟನೆ ಶುರುವಾಗಿದೆ.


