ಆಂಧ್ರಪ್ರದೇಶದ ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಕಾಂಪ್ಲೆಕ್ಸ್ ನಲ್ಲಿ ಇಂದು ಬೃಹತ್ ಕ್ರೇನ್ ಕುಸಿದು 9 ಜನರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೋಡ್-ಪರೀಕ್ಷಾ ಪ್ರಯೋಗಗಳ ಸಮಯದಲ್ಲಿ ಕ್ರೇನ್ ಕುಸಿದಿದೆ ಎನ್ನಲಾಗಿದೆ.
ಮೃತಪಟ್ಟವರಲ್ಲಿ ನಾಲ್ವರು ಶಿಪ್‌ಯಾರ್ಡ್ ನೌಕರರು ಮತ್ತು ಉಳಿದವರು ಗುತ್ತಿಗೆ ಸಿಬ್ಬಂದಿ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಆರ್.ಕೆ. ಮೀನಾ ತಿಳಿಸಿದ್ದಾರೆ.
ಎಂಟು ಸೆಕೆಂಡುಗಳ ವೀಡಿಯೊದಲ್ಲಿ ದೈತ್ಯ ಹಳದಿ ಕ್ರೇನ್ ಹಡಗುಕಟ್ಟೆಯಲ್ಲಿ ನೆಲದ ಮೇಲೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ.
ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಆಂಧ್ರಪ್ರದೇಶದ ಕರಾವಳಿ ನಗರದಲ್ಲಿರುವ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್, ಹಡಗು ನಿರ್ಮಾಣ, ಹಡಗು ರಿಪೇರಿ, ಜಲಾಂತರ್ಗಾಮಿ ನಿರ್ಮಾಣ ಮತ್ತು ರೀಫಿಟ್‌ಗಳ ಜೊತೆಗೆ ಕಡಲಾಚೆಯ ರಚನೆಗಳ ವಿನ್ಯಾಸ ಮತ್ತು ನಿರ್ಮಾಣದ ಅಗತ್ಯತೆಗಳನ್ನು ಪೂರೈಸುವಲ್ಲಿ ತೊಡಗಿಸಿಕೊಂಡಿದೆ.
ವಿಶಾಖಪಟ್ಟಣಂ ನಲ್ಲಿ ಇತ್ತೀಚೆಗೆ ಸರಣಿ ಅಪಘಾತ ಪ್ರಕರಗಳು ನಡೆದಿವೆ. ಅದಕ್ಕೆ ಇದು ಹೊಸ ಸೇರ್ಪಸೆಯಾಗಿದೆ.
ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿರುವ ಎಲ್ಜಿ ಪಾಲಿಮರ್ಸ್ ಸೌಲಭ್ಯ ಎಂಬ ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆಯಾದ ನಂತರ ಇಬ್ಬರು ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದರು ಮತ್ತು 1,000 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.
ಜೂನ್ 30 ರಂದು ಬಂದರು ನಗರದ ಔಷಧೀಯ ಘಟಕವೊಂದರಲ್ಲಿ ಅನಿಲ ಸೋರಿಕೆಯಾದ ನಂತರ ಇಬ್ಬರು ಸಾವನ್ನಪ್ಪಿದರು, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದರು.
ಜುಲೈನಲ್ಲಿ, ವಿಶಾಖಪಟ್ಟಣಂ ಬಳಿಯ ಮತ್ತೊಂದು ಔಷಧೀಯ ಘಟಕದಲ್ಲಿ ಸ್ಫೋಟ ಸಂಭವಿಸಿದ ನಂತರ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬ ಕಾರ್ಮಿಕ ಗಾಯಗೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಕೊರೊನಾ ನಿಯಂತ್ರಿಸಲು ದೆಹಲಿ ಮಾದರಿ ಅನುಸರಿಸಿ: ಕೇಂದ್ರ ಸಚಿವ


