ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶದ ಎಲ್ಲ ರಾಜ್ಯಗಳು “ದೆಹಲಿ ಮಾದರಿ” ಯನ್ನು ಅನುಸರಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಆಸ್ಪತ್ರೆಯಾಗಿ ಪರಿವರ್ತಿಸಲಾದ ಗಚಿ ಬೌಲಿಯ ಕ್ರೀಡಾ ಸಂಕೀರ್ಣದ 14 ಅಂತಸ್ತಿನ ಕಟ್ಟಡವಾದ ತೆಲಂಗಾಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ (ಟಿಮ್ಸ್) ಗೆ ಸಚಿವರು ಭೇಟಿ ನೀಡಿ ಮಾತನಾಡಿದ ಅವರು “ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯತ್ತ ಗಮನಹರಿಸುವಂತೆ ನಾನು ತೆಲಂಗಾಣ ರಾಜ್ಯ ಸರ್ಕಾರವನ್ನು ವಿನಂತಿಸುತ್ತೇನೆ ಎಂದಿದ್ದಾರೆ.
“ದೆಹಲಿಯನ್ನು ನಾನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ದೆಹಲಿಯಲ್ಲಿ ಶೇಕಡಾ 84 ರಷ್ಟು ಚೇತರಿಕೆ ಪ್ರಮಾಣವಿದೆ. ಎಲ್ಲಾ ರಾಜ್ಯಗಳು ದೆಹಲಿ ಮಾದರಿಯನ್ನು ಅನುಕರಿಸಬೇಕು” ಎಂದು ಅವರು ಹೇಳಿದರು.
ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಭವಿಷ್ಯದಲ್ಲಿಯೂ ಸಹ ಕೇಂದ್ರವು ಅಗತ್ಯ ಪ್ರಮಾಣದ ಪಿಪಿಇ ಕಿಟ್‌ಗಳು ಮತ್ತು ವೆಂಟಿಲೇಟರ್‌ಗಳನ್ನು ತೆಲಂಗಾಣಕ್ಕೆ ಕಳುಹಿಸುತ್ತದೆ ಎಂದ ಅವರು, “COVID-19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ವೃತ್ತಿಪರರನ್ನು ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಅಗತ್ಯವಿರುವ ಪ್ರಮಾಣದಲ್ಲಿ ಆಮ್ಲಜನಕ ಲಭ್ಯವಾಗುವಂತೆ ಎಲ್ಲಾ ಆಸ್ಪತ್ರೆಗಳು ಖಚಿತಪಡಿಸಿಕೊಳ್ಳಬೇಕು. ಕೇಂದ್ರವು ತೆಲಂಗಾಣಕ್ಕೆ 1,200 ವೆಂಟಿಲೇಟರ್‌ಗಳನ್ನು ಒದಗಿಸಿದೆ. N-95 ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ಗಳು ಮತ್ತು ಹೈಡ್ರೋಕ್ಲೋರೋಕ್ವಿನ್ ಮಾತ್ರೆಗಳನ್ನು ಸಹ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ “ಎಂದು ಅವರು ಹೇಳಿದ್ದಾರೆ.
ರೋಗಲಕ್ಷಣವಿಲ್ಲದ ರೋಗಿಗಳು ಮನೆಯಲ್ಲಿಯೇ ಪ್ರತ್ಯೇಕತೆಯಲ್ಲಿರಬೇಕು. ರೋಗ ತಡೆಗಟ್ಟುವಿಕೆಯನ್ನು ಖಚಿತಪಡಿಸಿಕೊಳ್ಳಲು ಅವರು ಮನೆಯಿಂದ ಹೊರಬರಬಾರದು ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಪರೀಕ್ಷಿಸುವ ಆರ್‌ಟಿ-ಪಿಸಿಆರ್ ಕಿಟ್‌ಗಳಿಗೆ ಮೂರು ಪಟ್ಟು ಹಣಕೊಟ್ಟು ಖರೀದಿಸಿದ ಕರ್ನಾಟಕ!