ಕೋವಿಡ್ ಪರೀಕ್ಷಿಸುವ ಆರ್‌ಟಿ-ಪಿಸಿಆರ್ ಕಿಟ್‌ಗಳಿಗೆ ಮೂರು ಪಟ್ಟು ಹಣಕೊಟ್ಟು ಖರೀದಿಸಿದ ಕರ್ನಾಟಕ!

ವೈದ್ಯಕೀಯ ಸಾಮಗ್ರ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರವು ದೊಡ್ಡ ಭ್ರಷ್ಟಾಚಾರವೆಸಗಿದೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ಹೊತ್ತಿನಲ್ಲಿ ಈ ವಿಚಾರಕ್ಕೆ ಭಾರೀ ಮಹತ್ವ ಬಂದಿದೆ.

0
43
ಪ್ರಾತಿನಿಧಿಕ ಚಿತ್ರ

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಾಗ ಮೇ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕೋವಿಡ್ ಪರೀಕ್ಷಿಸುವ ಆರ್‌ಟಿ-ಪಿಸಿಆರ್ ಮತ್ತು ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳಿಗೆ ಮೂರು ಪಟ್ಟು ಹಣಕೊಟ್ಟು ಖರೀದಿಸಿದೆ ಎಂದು ತಿಳಿದುಬಂದಿದೆ.

ವೈದ್ಯಕೀಯ ಸಾಮಗ್ರ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರವು ದೊಡ್ಡ ಭ್ರಷ್ಟಾಚಾರವೆಸಗಿದೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ಹೊತ್ತಿನಲ್ಲಿ ಈ ವಿಚಾರಕ್ಕೆ ಭಾರೀ ಮಹತ್ವ ಬಂದಿದೆ.

ಕರ್ನಾಟಕ ಸ್ಟೇಟ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯು ಕಿಟ್‌ಗಳನ್ನು ಖರೀದಿ ಮಾಡಿದ್ದು, ಬೇರೆ ರಾಜ್ಯಗಳು ಪಾವತಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕ ಪಾವತಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಒಡಿಶಾ ಮತ್ತು ಗುಜರಾತ್‌ನಂತಹ ರಾಜ್ಯಗಳು ಆರ್‌ಟಿ-ಪಿಸಿಆರ್ ಮತ್ತು ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳನ್ನು ಪ್ರತ್ಯೇಕವಾಗಿ ಖರೀದಿಸಿದರೆ, ಕರ್ನಾಟಕದ ಕೆಎಸ್‌ಡಿಎಲ್‌ಡಬ್ಲ್ಯೂಎಸ್ ಇವೆರಡನ್ನೂ ಜೊತೆಯಾಗಿ ಹೆಚ್ಚಿನ ಬೆಲೆಗೆ ಖರೀದಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೈದರಾಬಾದ್ ಮೂಲದ ಕಂಪನಿಯೊಂದರಿಂದ ಒಡಿಶಾ ರಾಜ್ಯವು ಆರ್‌ಟಿ-ಪಿಸಿಆರ್ ಕಿಟ್‌ನ್ನು ಪ್ರತಿ ಯೂನಿಟ್‌ಗೆ 550 ರೂ.ಗೆ ಖರೀದಿಸಿದರೆ, ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗೆ ತಲಾ 100 ರೂ. ಪಾವತಿಸಿದೆ. ಗುಜರಾತ್ 25,000 ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳಿಗೆ ಅದೇ ಸಂಸ್ಥೆಯಿಂದ ಪ್ರತಿ ಯೂನಿಟ್‌ಗೆ 179 ರೂ ನಂತೆ ಖರೀದಿಸಿದೆ. ಚತ್ತೀಸ್‌ಘಡ ಸರ್ಕಾರವು ಪ್ರತಿ ಆರ್‌ಟಿ-ಪಿಸಿಆರ್ ಕಿಟ್‌ಗೆ 571.2 ರೂ ನಂತೆ ಖರೀದಿಸಿದೆ.

ಆದರೆ ಅದೇ ಹೈದರಾಬಾದ್ ಮೂಲದ ಸಂಸ್ಥೆಯು ತಯಾರಿಸಿದ ಆರ್‌ಟಿ-ಪಿಸಿಆರ್ ಮತ್ತು ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳನ್ನು ಬೆಂಗಳೂರು ಮೂಲದ ಕಂಪನಿಯ ಮೂಲಕ 1,120 ರೂಗೆ ಕೆಎಸ್‌ಡಿಎಲ್‌ಡಬ್ಲ್ಯೂಎಸ್ ಖರೀದಿಸಿದೆ. ಪ್ರತಿ ಆರ್‌ಟಿ-ಪಿಸಿಆರ್ ಮತ್ತು ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳ ಬೆಲೆ ನಮೂದಿಸದಿದ್ದರೂ ಒಟ್ಟಾರೆಯಾಗಿ ಕೆಎಸ್‌ಡಿಎಲ್‌ಡಬ್ಲ್ಯೂಎಸ್ ಮೇ ತಿಂಗಳ ಕೊನೆಯಲ್ಲಿ 3.92 ಕೋಟಿ ರೂ.ಗಳ ವೆಚ್ಚದಲ್ಲಿ 35,000 ಪರೀಕ್ಷಾ ಕಿಟ್‌ಗಳನ್ನು ಖರೀದಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಕುರಿತು ಕರ್ನಾಟಕ ರಾಷ್ಟ್ರ ಸಮಿತಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದರೂ ಕೂಡ ಯಾವುದೇ ತನಿಖೆ ನಡೆದಿಲ್ಲ. “ಎಸಿಬಿಯು ಪ್ರಾಥಮಿಕ ವಿಚಾರಣೆಯನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಕೋರಿದ್ದು, ಎಫ್ಐಆರ್ ದಾಖಲಿಸಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ” ಎನ್ನಲಾಗಿದೆ.

ಒಟ್ಟಾರೆಯಾಗಿ ಮೇಲ್ನೋಟಕ್ಕೆ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿರುವುದು ಕಂಡುಬಂದಿದೆ. ಇದು ಸಾಕಷ್ಟು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.


ಇದನ್ನೂ ಓದಿ: ಭ್ರಷ್ಟಾಚಾರದ ಆರೋಪ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಬಿಜೆಪಿಯಿಂದ ನೋಟಿಸ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here