ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸರು 9 ವರ್ಷದ ಬುಡಕಟ್ಟು ಬಾಲಕ ಯಾನಾಡಿ ವೆಂಕಟೇಶು ಅವರ ಅಕ್ರಮ ಬಂಧನ ಮತ್ತು ನಂತರದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಗುರುವಾರ (ಮೇ.22) ಸತ್ಯವೇಡು ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಡಿಎಸ್ಪಿ ಜಿ. ರವಿಕುಮಾರ್ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಬಂಧಿತರನ್ನು ತಿರುಪತಿ ಜಿಲ್ಲೆಯ ಸತ್ಯವೇಡು ಮಂಡಲದ ಎನ್. ಮುತ್ತು (60), ಅವರ ಪತ್ನಿ ಎಂ. ಧನಭಾಗ್ಯಂ (52), ಮತ್ತು ಅವರ ಮಗ ಎಂ. ರಾಜಶೇಖರ್ (32) ಎಂದು ಗುರುತಿಸಲಾಗಿದೆ.
ಡಿಎಸ್ಪಿ ಪ್ರಕಾರ, ಗುಡೂರು ಮಂಡಲದ ಚವಟಪಾಲೆಂನ ನಿವಾಸಿಗಳಾದ ಅನಕಮ್ಮ ಮತ್ತು ಪ್ರಕಾಶ್ ಮೃತ ವೆಂಕಟೇಶು ಸೇರಿದಂತೆ ತಮ್ಮ ಮೂವರು ಮಕ್ಕಳೊಂದಿಗೆ ನೆಲ್ಲೂರು ಜಿಲ್ಲೆಯ ದತ್ತಲೂರು ಮಂಡಲದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಸತ್ಯವೇಡು ಮಂಡಲದ ಎನ್.ಆರ್ ಅಗ್ರಹಾರದ ಮುತ್ತು ಮತ್ತು ಧನಭಾಗ್ಯಂ ದಂಪತಿ ವೆಂಕಟೇಶು ಅವರ ಕುಟುಂಬವನ್ನು ಸಂಪರ್ಕಿಸಿ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಆಹ್ವಾನಿಸಿದ್ದರು. ಮಾಸಿಕ 10,000 ರೂ. ಸಂಬಳ ನೀಡುವ ಭರವಸೆ ಕೊಟ್ಟಿದ್ದ ದಂಪತಿ, 15,000 ರೂಪಾಯಿನ್ನು ಮುಂಗಡವಾಗಿ ಪಾವತಿಸಿದ್ದರು.
ಮಾತುಕತೆಯಂತೆ ಬಾಲಕ ವೆಂಕಟೇಶು ಕುಟುಂಬ ಒಂದು ವರ್ಷ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಮುತ್ತು ಅವರ ಜಮೀನಿನಲ್ಲಿ ಕೃಷಿ, ಬಾತುಕೋಳಿಗಳ ನಿರ್ವಹಣೆ ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ಮಾಡಿತ್ತು. ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟಾಗ ಮುತ್ತು ನಿರಾಕರಿಸಿದ್ದರು. ಈ ನಡುವೆ ಅನಕಮ್ಮ ಅವರ ಪತಿ, ಅಂದರೆ ವೆಂಕಟೇಶು ಅವರ ಅಪ್ಪ ಪ್ರಕಾಶ್ ನಿಧನರಾಗಿದ್ದರು. ಅನಕಮ್ಮ ತನ್ನ ಪತಿಯ ಅಂತಿಮ ವಿಧಿವಿಧಾನಗಳಿಗಾಗಿ ಊರಿಗೆ ತೆರಳಿದ್ದರು.
ಅನಕಮ್ಮ ತೆರಳುವ ವೇಳೆ, ಇಲ್ಲೇ ಕೆಲಸ ಮುಂದುವರಿಸಿದರೆ 25,000 ರೂಪಾಯಿ ಬಾಕಿ ಹಣವನ್ನು ಕೊಡುವುದಾಗಿ ಮುತ್ತು ಭರವಸೆ ಕೊಟ್ಟಿದ್ದರು. ಆದರೆ, ಕೆಲಸದ ಪರಿಸ್ಥಿತಿ ಅಸಹನೀಯವಾಗಿದ್ದ ಕಾರಣ ಅದನ್ನು ಬಿಟ್ಟು ಹೋಗಲು ಅನಕಮ್ಮ ಮುಂದಾಗಿದ್ದರು. ಈ ವೇಳೆ ತನಗೆ 45,000 ರೂಪಾಯಿ ಪಾವತಿಸುವಂತೆ ಮುತ್ತು ಬೇಡಿಕೆ ಇಟ್ಟಿದ್ದ. ತಕ್ಷಣ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಾಗದೆ, ಊರಿಗೆ ಹೋಗಿ ಹಣದೊಂದಿಗೆ ಹಿಂತಿರುಗುವ ಭರವಸೆ ನೀಡಿದ ಅನಕಮ್ಮ ತನ್ನ ಮಗನನ್ನು ಮುತ್ತು ಬಳಿ ಬಿಟ್ಟು ಹೋಗಿದ್ದರು.
ಅನಕಮ್ಮ ಊರಿಗೆ ಹೋಗಿ ಹಣ ಹೊಂದಿಸಿ 9 ತಿಂಗಳು ಕಳೆದು ವಾಪಸ್ ಬರುವ ಹೊತ್ತಿಗೆ, ಮಗ ವೆಂಕಟೇಶು ತಪ್ಪಿಸಿಕೊಂಡಿರುವುದಾಗಿ ಮುತ್ತು ಕಥೆ ಹೇಳಿದ್ದ. ಆತನನ್ನು ಕೆಲಸಕ್ಕೆಂದು ಹೊರಗಡೆ ಕಳಿಸಿದ್ದೆ. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ, ಆಸ್ಪತ್ರೆಗೆ ದಾಖಲಿಸಿದ್ದೆ. ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದ.
ವರದಿಗಳ ಪ್ರಕಾರ, ಅನಕಮ್ಮ ಬಿಟ್ಟು ಹೋದ ಬಳಿ ಮುಂದಿನ ಒಂಬತ್ತು ತಿಂಗಳು ಮುತ್ತು ಬಾಲಕ ವೆಂಕಟೇಶುವಿನಿಂದ ಕಠಿಣ ಕೆಲಸಗಳನ್ನು ಮಾಡಿಸಿದ್ದ. ಆತ ಪದೇ ಪದೇ ತಾಯಿಯ ಬಳಿಗೆ ಹೋಗಲು ಅವಕಾಶ ನೀಡುವಂತೆ ಅಳುತ್ತಿದ್ದ. ಆದರೆ, ಮುತ್ತು ಅದಕ್ಕೆ ಅವಕಾಶ ನೀಡಿರಲಿಲ್ಲ. ಅನಕಮ್ಮ ಕೂಡ ತನ್ನ ಮಗನನ್ನು ಬಿಟ್ಟು ಕಳಿಸುವಂತೆ ಬೇಡಿಕೊಂಡಿದ್ದರು. ಆದರೆ, ಮುತ್ತು ಬೇರೆ ಬೇರೆ ಕಾರಣ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ.ಕಠಿಣ ಪರಿಸ್ಥಿತಿಯಿಂದ ತನ್ನನ್ನು ರಕ್ಷಿಸುವಂತೆ ವೆಂಕಟೇಶು ಅಮ್ಮನ ಬಳಿ ಬೇಡಿಕೊಂಡಿದ್ದ. ಅಮ್ಮ-ಮಗನ ಕೊನೆಯ ಸಂಭಾಷಣೆ ಫೋನ್ ಮೂಲಕ ಏಪ್ರಿಲ್ 15ರಂದು ನಡೆದಿತ್ತು.
ಮಗನ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ಅನಕಮ್ಮ ಮೇ 19ರಂದು ಸತ್ಯವೇಡು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಜೀತಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲಕಾರ್ಮಿಕ (ತಡೆ) ಕಾಯ್ದೆ, ಬಾಲ ನ್ಯಾಯ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ (ತಡೆ) ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ಭಾಗವಾಗಿ ಬಾಲಕ ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ಮುತ್ತು, ಆತನ ಪತ್ನಿ ಧನಭಾಗ್ಯಂ ಮತ್ತು ಅವರ ಮಗ ರಾಜಶೇಖರ್ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ತನಿಖೆಯ ಆರಂಭದಲ್ಲಿ ಬಾಲಕ ವೆಂಕಟೇಶು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆ, ಏಪ್ರಿಲ್ 11ರಂದು ತಮಿಳುನಾಡಿನ ಪುದುಪಾಲಂನ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಏಪ್ರಿಲ್ 12ರಂದು ಆತನ ಕೊನೆಯುಸಿರೆಳೆದಿದ್ದ. ಕಾನೂನಿಗೆ ಹೆದರಿ ಮುತ್ತು ಹಾಗೂ ಆತನ ಕುಟುಂಬ ಬಾಲಕನ ಶವವನ್ನು ಪಾಲಾರ್ ನದಿಯಲ್ಲಿ ಹೂತು ಹಾಕಿದ್ದಾರೆ ಎಂಬುವುದು ಬಯಲಾಗಿತ್ತು. ಅದಕ್ಕೆ ಪುಷ್ಠಿ ನೀಡುವ ಸಿಸಿಟಿವಿ ವಿಡಿಯೋಗಳು ಲಭ್ಯವಾಗಿತ್ತು.
ತಮಿಳುನಾಡಿನ ಪುದುಪಾಲಂನಲ್ಲಿ ಮುತ್ತುವಿನ ಅತ್ತೆಯನ್ನು ನೋಡಿಕೊಳ್ಳುವುದು, ಅವರ ಬಾತುಕೋಳಿಗಳನ್ನು ನಿರ್ವಹಣೆ ಮಾಡುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಬಾಲಕ ವೆಂಕಟೇಶುವನ್ನು ನೇಮಿಸಲಾಗಿತ್ತು. ಆತ ಸಾವನ್ನಪ್ಪಿದ ಬಳಿಕ ಶವವನ್ನು ಕಾಂಚಿಪುರಂ ಬಳಿ ಪಾಲಾರ್ ನದಿಯಲ್ಲಿ ಸಮಾಧಿ ಮಾಡಲಾಗಿತ್ತು.
ಕಾಂಚಿಪುರಂ ಸಬ್-ಕಲೆಕ್ಟರ್ ಮತ್ತು ಮ್ಯಾಜಿಸ್ಟ್ರೇಟ್ ರಫೀಕ್ ಅವರ ಮೇಲ್ವಿಚಾರಣೆಯಲ್ಲಿ, ಪೊಲೀಸರು ಶವವನ್ನು ಹೊರತೆಗೆದು ಚೆಂಗಲ್ಪಟ್ಟು ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ. ವಶಕ್ಕೆ ಪಡೆದಿದ್ದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ.
ಮುಂದುವರಿದ ಜೀತ ಪದ್ದತಿಗೆ ಉದಾಹರಣೆ
ಮೇಲ್ಗಡೆ ವಿವರಿಸಿದ ಪ್ರಕರಣದಲ್ಲಿ ವೆಂಕಟೇಶು ಎಂಬ ಬಾಲಕನ ಕುಟುಂಬ ಜೀತ ಪದ್ದತಿಗೆ ಒಳಗಾಗಿತ್ತು. ವೆಂಕಟೇಶುವಿನ ತಾಯಿ ಹಣ ಹೊಂದಿಸಿಕೊಂಡು ಬರಲು ಊರಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ವೆಂಕಟೇಶುವಿನಿಂದ ಕಠಿಣ ಕೆಲಸಗಳನ್ನು ಮಾಡಿಸಿದ್ದ ಭೂ ಮಾಲೀಕ ಮುತ್ತು ಮತ್ತು ಆತನ ಕುಟುಂಬ, ಕೊನೆಗೆ ಆತ ಅನಾರೋಗ್ಯಕ್ಕೆ ತುತ್ತಾಗಿ ಸಾಯಲು ಕಾರಣರಾಗಿದ್ದರು.
ತಾಯಿ ಊರಿಗೆ ಹೋದ ಬಳಿಕ, ಬಾಲಕ ವೆಂಕಟೇಶುವನ್ನು ಒಂದು ರೀತಿ ಬಂಧನದಲ್ಲಿ ಇಟ್ಟು ಭೂ ಮಾಲೀಕ ಮುತ್ತು ಮತ್ತು ಆತನ ಕುಟುಂಬ ದುಡಿಸಿಕೊಂಡಿದ್ದರು. ಈ ದೌರ್ಜನ್ಯವನ್ನು ವೆಂಕಟೇಶು, ಆತನ ತಂದೆ-ತಾಯಿ ಮಾತ್ರವಲ್ಲದೆ ಆತನ ಇಡೀ ‘ಯಾನಾಡಿ’ ಸಮುದಾಯವೇ ಎದುರಿಸಿದೆ. ಈಗಾಲೂ ಎದುರಿಸುತ್ತಿದೆ.
ಮುಂಗಡ ಕೊಂಚ ಹಣ ಪಾವತಿಸಿ ತಳವರ್ಗದ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು. ನಂತರ ಅವರು ಕೆಲಸ ಸ್ಥಳ ಬಿಟ್ಟು ಎಲ್ಲೂ ಹೋಗದಂತೆ ನಿರ್ಬಂಧಿಸುವುದು, ಸಂಬಳ, ಊಟ, ವಸತಿ ಕೊಡದಿರುವುದು, ಕೆಲಸ ಬಿಟ್ಟು ಹೋಗದಂತೆ ತಡೆಯುವುದು, ಸಂಬಳ ಕೇಳಿದರೆ ಹಿಂಸಿಸುವುದು ಇತ್ಯಾದಿಗಳು ಜೀತ ಪದ್ದತಿ (ನಿರ್ಮೂಲನೆ) ಕಾಯ್ದೆ, 1976 ರ ಅಡಿ ಕ್ರಿಮಿನಲ್ ಅಪರಾಧಗಳಾಗಿವೆ. ಆದರೆ, ಇದು ದೇಶದ ವಿವಿಧ ರಾಜ್ಯಗಳಲ್ಲಿ ಅನಿಯಂತ್ರಿತವಾಗಿ ಮುಂದುವರಿಯುತ್ತಿದೆ. ಈ ದೌರ್ಜನ್ಯಕ್ಕೆ ಬಲಿಯಾದ ವ್ಯಕ್ತಿಗಳಲ್ಲಿ ವೆಂಕಟೇಶು ಕೂಡ ಒಬ್ಬ.
ಕಳೆದ ತಿಂಗಳಷ್ಟೇ, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಯಾನಾಡಿ ಸಮುದಾಯದ ದಂಪತಿ ನಂಬೂರು ಪದ್ಮಾ ಮತ್ತು ಅಗ್ನಿ, 15 ವರ್ಷಗಳಿಗೂ ಹೆಚ್ಚು ಸಮಯದಿಂದ ಜೀತ ಪದ್ಧತಿಯಲ್ಲಿ ಸಿಲುಕಿಕೊಂಡಿರುವುದು ಬಹಿರಂಗವಾಗಿತ್ತು.
ಕಳೆದ ವರ್ಷಗಳಲ್ಲಿ ಆಂಧ್ರ ಪ್ರದೇಶ ಮತ್ತು ಅದರಾಚೆಗಿನ ಪ್ರದೇಶಗಳಲ್ಲಿ ಸುಮಾರು 50 ಯಾನಾಡಿ ವ್ಯಕ್ತಿಗಳನ್ನು ಜೀತಪದ್ಧತಿಯಿಂದ ರಕ್ಷಿಸಲಾಗಿದೆ. ಬಾತುಕೋಳಿ ಸಾಕಣೆ, ಇದ್ದಿಲು ಉತ್ಪಾದನೆ, ಇಟ್ಟಿಗೆ ಗೂಡುಗಳು, ಸೀಗಡಿ ಮತ್ತು ಏಡಿ ಸಂಸ್ಕರಣೆ ಮತ್ತು ಅಕ್ಕಿ ಗಿರಣಿಗಳಂತಹ ಕ್ಷೇತ್ರಗಳಲ್ಲಿ ಇವರ ಶೋಷಣೆ ವ್ಯಾಪಕವಾಗಿದೆ.
ಬಾಲಕ ವೆಂಕಟೇಶುವಿನ ಸಾವಿನಂತಹ ಪ್ರಕರಣಗಳು ಸಂಭವಿಸಿದಾಗ, ಅದಕ್ಕೆ ಸಂಬಂಧಿಸಿ ಮಾತ್ರ ಕ್ರಮ ಕೈಗೊಂಡರೆ ಸಾಲದು. ಆಂಧ್ರ ಪ್ರದೇಶವು ಕೈಗಾರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಲ್ಲಿ ಜೀತದಾಳುಗಳಾಗಿ ಸಿಲುಕಿಕೊಂಡಿರುವ ದುರ್ಬಲ ಸಮುದಾಯದ ಜನರನ್ನು ರಕ್ಷಿಸಲು ರಾಜ್ಯ ಸರ್ಕಾರ ತುರ್ತಾಗಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಎಡಿಆರ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಮತ್ತು ಜೀತದಾಳುಗಳ ಮೇಲಿನ ಜಿಲ್ಲಾ ಜಾಗೃತ ಸಮಿತಿಯ ಸದಸ್ಯ ಶೇಕ್ ಬಶೀರ್ ಹೇಳಿದ್ದಾರೆ.
ಸೌಜನ್ಯ : newindianexpress.com
ಸೋನೆಪತ್ ಜೈಲಿನಿಂದ ಬಿಡುಗಡೆಯಾದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್


