ರಾಜ್ಯದ ತುಮಕೂರಿನ ಮಹೀಂದ್ರಾ ಕಾರು ಶೋರೂಂನಲ್ಲಿ ಮಾರಾಟ ಸಿಬ್ಬಂದಿಯೊಬ್ಬ ರೈತರೊಬ್ಬರನ್ನು ಅವಮಾನಿಸಿದ ಘಟನೆಯ ಹಿನ್ನಲೆಯಲ್ಲಿ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮಂಗಳವಾರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ಅವರು ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಮಹತ್ವವನ್ನು ಒತ್ತಿಹೇಳಿದ್ದಾರೆ.
“ಮಹೀಂದ್ರಾದ ಮುಖ್ಯ ಉದ್ದೇಶ, ನಮ್ಮ ಸಮುದಾಯಗಳು ಮತ್ತು ಎಲ್ಲಾ ಪಾಲುದಾರರ ಬೆಳವಣಿಗೆಗೆ ಅನುವು ಮಾಡಿಕೊಡುವುದಾಗಿದೆ. ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ. ಈ ತತ್ತ್ವದ ಅಸಂಗತತೆಯನ್ನು ಬಹಳ ತುರ್ತಾಗಿ ಪರಿಹರಿಸಲಾಗುವುದು” ಎಂದು ಮಹೀಂದ್ರಾ ಅವರು ತಮ್ಮ ಕಂಪೆನಿಯ ಸಿಇಒ ವೀಜಯ್ ನಕ್ರಾ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಲಾಕ್‌ಡೌನ್ ಘೋಷಿಸಬೇಡಿ, ಅದರಿಂದ ಬಡವರಿಗೆ ಸಂಕಷ್ಟ- ಆನಂದ್ ಮಹೀಂದ್ರಾ
ತುಮಕೂರಿನಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿರುವ ವೀಜಯ್ ನಕ್ರಾ ಅವರು, ಮುಂಚೂಣಿ ಸಿಬ್ಬಂದಿಗೆ ಸಲಹೆ ಮತ್ತು ತರಬೇತಿ ಕೂಡಾ ನೀಡಲಿದ್ದೇವೆ ಎಂದು ಹೇಳಿದ್ದಾರೆ.
The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w
— anand mahindra (@anandmahindra) January 25, 2022
ವಾಹನ ಖರೀದಿಸಲು ಶೋರೂಮ್‌ಗೆ ತೆರಳಿದ್ದ ತುಮಕೂರಿನ ರೈತರೊಬ್ಬರ ವೇಷ ಭೂಷಣ ನೋಡಿ ಅಲ್ಲಿನ ಸಿಬ್ಬಂದಿ, ನಿನಗೆ ತನಗೆ ಕಾರು ಖರೀದಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದನು. ಸಿಬ್ಬಂದಿಯ ಸವಾಲನ್ನು ಸ್ವೀಕರಿಸಿದ್ದ ರೈತ ಕೆಲವೇ ಗಂಟೆಗಳಲ್ಲಿ ದುಡ್ಡಿನೊಂದಿಗೆ ಬಂದು ವಾಹನವನ್ನು ಕೊಡುವಂತೆ ಕೇಳಿಕೊಂಡಿದ್ದಾರೆ. ಘಟನೆಯು ದೇಶದಾದ್ಯಂತ ಸುದ್ದಿಯಾಗಿತ್ತು. ಘಟನೆಯ ವಿಡಿಯೊ ಕೂಡಾ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಆನಂದ್ ಮಹೀಂದ್ರ ಅವರ ಗಮನಕ್ಕೆ ತರಲಾಗಿತ್ತು.
ಇದನ್ನೂ ಓದಿ:ಮತ್ತೇ ಏಷ್ಯಾದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ
ತುಮಕೂರಿನ ರೈತ ಕೆಂಪೇಗೌಡ ಬೊಲೆರೋ ಪಿಕಪ್ ಖರೀದಿಸಲು ತೆರಳಿದ್ದ ವೇಳೆ, ಅವರೊಂದಿಗೆ ಸಿಬ್ಬಂದಿಯು ಅಸಭ್ಯವಾಗಿ ಮಾತನಾಡಿ ಅಲ್ಲಿಂದ ತೆರಳುವಂತೆ ಕೇಳಿಕೊಂಡಿದ್ದಾನೆ. “ಕಾರು 10 ಲಕ್ಷ ರೂ. ಮೌಲ್ಯದ್ದಾಗಿದ್ದು, ನಿಮ್ಮ ಜೇಬಿನಲ್ಲಿ 10 ರೂ. ಕೂಡ ಇರಲು ಸಾಧ್ಯವಿಲ್ಲ” ಎಂದು ಸಿಬ್ಬಂದಿಯು ಹೇಳಿದ್ದಾಗಿ ಕೆಂಪೇಗೌಡ ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಕೆಂಪೇಗೌಡ, ಅರ್ಧ ಗಂಟೆಯೊಳಗೆ ಹಣವನ್ನು ತಂದುಕೊಡುತ್ತೇನೆ, ಇಂದೇ ಕಾರು ನೀಡುವ ವ್ಯವಸ್ಥೆ ಮಾಡುವಂತೆ ಹೇಳಿಕೊಂಡಿದ್ದಾರೆ.
ಸ್ವಲ್ಪ ಸಮಯದ ನಂತರ ರೈತ, ತಾನು ಹೇಳಿದಂತೆ ಸರಿಯಾದ ಸಮಯಕ್ಕೆ ದುಡ್ಡಿನೊಂದಿಗೆ ಆಗಮಿಸಿದ್ದಾರೆ. ಆದರೆ ಸಿಬ್ಬಂದಿಯು ಹೇಳಿದಂತೆ ಕಾರಿನ ಮಾರಾಟವನ್ನು ತ್ವರಿತವಾಗಿ ಮಾಡಲು ಸಾಧ್ಯವಾಗಿಲ್ಲ. ಕಾರು ಶೋರೂಂನಿಂದ ಹೊರ ಬರಬೇಕೆಂದರೆ ಕನಿಷ್ಠ ನಾಲ್ಕು ದಿನಗಳು ಕಾಯಬೇಕಾಗುತ್ತದೆ ಎಂದು ರೈತನೊಂದಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ರೈತ ಕೆಂಪೇಗೌಡ ಮತ್ತು ಅವರ ಸ್ನೇಹಿತರು ಸಿಬ್ಬಂದಿಯೊಂದಿಗೆ ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ.
ನಂತರ ಪೊಲೀಸರು ಮಧ್ಯಪ್ರವೇಶಿಸಿ ವಾಗ್ವಾದವನ್ನು ಕೊನೆಗೊಳಿಸಿದ್ದಾರೆ. ಕೊನೆಗೆ ಸೇಲ್ಸ್ ಎಕ್ಸಿಕ್ಯೂಟಿವ್ ಕೆಂಪೇಗೌಡರ ಕ್ಷಮೆ ಯಾಚಿಸಿದ್ದಾರೆ. ಆದರೆ ರೈತನೂ ನಿಮ್ಮ ಶೋರೂಮ್‌ನಿಂದ ಕಾರು ಖರೀದಿಸಲು ನನಗೆ ಇಷ್ಟವಿಲ್ಲ ಎಂದು ತನ್ನ 10 ಲಕ್ಷ ರೂ ನೊಂದಿಗೆ ವಾಪಾಸು ತೆರಳಿದ್ದಾರೆ.
ಇದನ್ನೂ ಓದಿ:ಅಂಬಾನಿಗಾಗಿ NIA ತನಿಖೆ – ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ


