ಅಮೆರಿಕಾ ಮತ್ತು ಚೀನಾ ನಂತರ ಭಾರತವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶವಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಪುನಃ ಭದ್ರಪಡಿಸಿಕೊಂಡಿದ್ದಾರೆ ಎಂದು ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಹೊಸ ಪಟ್ಟಿಯು ತಿಳಿಸಿದೆ. ಒಂದು ವರ್ಷದ ಹಿಂದೆ ಚೀನಾ ಉದ್ಯಮಿ ಜ್ಯಾಕ್ ಮಾ ಅವರು ಈ ಸ್ಥಾನಕ್ಕೆ ಏರಿದ್ದರು.
ಭಾರತದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿ ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. 84.5 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನು ಹೊಂದಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ತಮ್ಮ ಸ್ಥಾನವನ್ನು ಪುನಃ ಪಡೆದುಕೊಂಡಿದ್ದಾರೆ.
“ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಅಂದಾಜು 84.5 ಬಿಲಿಯನ್ ಡಾಲರ್‌ಗಳಾಗಿದ್ದು, ಅವರು ವರ್ಷದ ಹಿಂದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಚೀನಾದ ಜ್ಯಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ” ಎಂದು ಫೋರ್ಬ್ಸ್ ಹೇಳಿದೆ.
ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ಅಂಬಾನಿ 1 ಗಂಟೆಯಲ್ಲಿ ಗಳಿಸಿದ ಆದಾಯವನ್ನು ಸಾಮಾನ್ಯ ವ್ಯಕ್ತಿ ಗಳಿಸಲು ಎಷ್ಟು ವರ್ಷ ಬೇಕು ಗೊತ್ತೇ?
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್‌ನ 35 ನೇ ವಾರ್ಷಿಕ ಪಟ್ಟಿಯಲ್ಲಿ ಅಮೆಜಾನ್ ಸಿಇಒ ಮತ್ತು ಸ್ಥಾಪಕ ಜೆಫ್ ಬೆಜೋಸ್ ಸತತ ನಾಲ್ಕನೇ ವರ್ಷವು ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಮೆಜಾನ್ ತನ್ನ ಷೇರುಗಳನ್ನು ಹೆಚ್ಚಿಸಿದ ಪರಿಣಾಮವಾಗಿ ಅವರ ಆಸ್ತಿಯು 177 ಬಿಲಿಯನ್ ಅಮೇರಿಕನ್ ಡಾಲರ್ ಆಗಿದೆ. ಕಳೆದ ಒಂದು ವರ್ಷದಲ್ಲಿ ಅವರ ಆಸ್ತಿಯು 64 ಬಿಲಿಯನ್ ಅಮೆರಿಕನ್ ಡಾಲರ್‌ಷ್ಟು ಹೆಚ್ಚಾಗಿದೆ ಎಂದು ಫೋರ್ಬ್ಸ್ ಹೇಳಿದೆ.
ಎರಡನೇ ಸ್ಥಾನದಲ್ಲಿ ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲನ್ ಮಸ್ಕ್ ಅವರಿದ್ದು, ಅವರ ಆಸ್ತಿಯು 151 ಬಿಲಿಯನ್ ಡಾಲರ್‌ಗಳಿಗೆ ಏರಿದೆ. ಕಳೆದ ವರ್ಷದಿಂದ ಈ ವರ್ಷಕ್ಕೆ ಅವರ ಆಸ್ತಿಯು 126.4 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷ ಅವರು ಈ ಪಟ್ಟಿಯಲ್ಲಿ 31 ನೇ ಸ್ಥಾನದಲ್ಲಿದ್ದು, 24.6 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನು ಹೊಂದಿದ್ದರು.
ಇದನ್ನೂ ಓದಿ: ಕೊರೊನಾ: ಬೆಂಗಳೂರು ವಿವಿ 15 ದಿನ ರಜೆ; ಸಾರಿಗೆ ಮುಷ್ಕರ ಹಿನ್ನಲೆ ಪರೀಕ್ಷೆ ಮುಂದೂಡಿಕೆ
ತನ್ನ ಎಲೆಕ್ಟ್ರಿಕ್ ವಾಹನಗಳ ಕಂಪೆನಿಯಾದ ಟೆಸ್ಲಾ ಷೇರುಗಳಲ್ಲಿ 705% ರಷ್ಟು ಏರಿಕೆಯಾಗಿರುವುದೇ ಎಲನ್ ಮಸ್ಕ್ ಅವರ ಈ ರೀತಿಯ ಬೆಳವಣಿಗೆಗೆ ಮುಖ್ಯ ಕಾರಣ ಎಂದು ಫೋರ್ಬ್ಸ್ ಹೇಳಿದೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಪೂನವಾಲ್ಲಾ ಸಮೂಹದ ಅಧ್ಯಕ್ಷ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಸೈರಸ್ ಪೂನವಾಲ್ಲಾ ಅವರು ಫೋರ್ಬ್ಸ್ ಪಟ್ಟಿಯಲ್ಲಿ 169 ನೇ ಸ್ಥಾನದಲ್ಲಿದ್ದು, ಅವರ ಆಸ್ತಿಯು 12.7 ಬಿಲಿಯನ್ ಡಾಲರ್ ಆಗಿದೆ. ಭಾರತೀಯ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಪೂನವಾಲ್ಲಾ ಏಳನೇ ಸ್ಥಾನದಲ್ಲಿದ್ದಾರೆ.
ಎಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡರ್, ಭಾರತದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದು, ಜಾಗತಿಕವಾಗಿ 71 ನೇ ಸ್ಥಾನದಲ್ಲಿದ್ದಾರೆ.
ಭಾರತದ ಅಗ್ರ 10 ಕೋಟ್ಯಾಧಿಪತಿಗಳಲ್ಲಿ ಡಿಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಸಿಇಒ ಉದಯ್ ಕೊಟಕ್, ಆರ್ಸೆಲರ್‌ಮಿತ್ತರ್ ಅಧ್ಯಕ್ಷ ಲಕ್ಷ್ಮಿ ಮಿತ್ತಲ್, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ, ಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕ ದಿಲೀಪ್ ಶಂಘ್ವಿ ಮತ್ತು ಭಾರ್ತಿ ಸಂಸ್ಥಾಪಕ ಅಧ್ಯಕ್ಷ ಸುನಿಲ್ ಮಿತ್ತಲ್ ಸೇರಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಪಟ್ಟು ಬಿಡದ ಸರ್ಕಾರ, ರೋಡಿಗಿಳಿದ ಖಾಸಗಿ ಬಸ್‌ಗಳು


