Homeಮುಖಪುಟರೈತರ ಹೋರಾಟ ಮತ್ತು ಗಾಂಧೀಜಿ ಅಭಿವೃದ್ಧಿ ಮೀಮಾಂಸೆ: ಡಾ. ಟಿ ಆರ್ ಸಿ

ರೈತರ ಹೋರಾಟ ಮತ್ತು ಗಾಂಧೀಜಿ ಅಭಿವೃದ್ಧಿ ಮೀಮಾಂಸೆ: ಡಾ. ಟಿ ಆರ್ ಸಿ

- Advertisement -
- Advertisement -

ಕಳೆದ ಒಂದು ವರ್ಷಕ್ಕೂ ಮೀರಿ ದೇಶದಾದ್ಯಂತ ನಡೆಯುತ್ತಿರುವ ಭಾರತೀಯ ರೈತರ ಹೋರಾಟವು ಚಾರಿತ್ರಿಕವಾದುದು ಮತ್ತು ಜಾಗತಿಕ ಆಯಾಮವುಳ್ಳದ್ದಾಗಿದೆ (ರಿಹಾನ, ಗ್ರೇಟ ಥನ್‌ಬರ್ಗ್, ಅಂತಾರಾಷ್ಟ್ರೀಯ ಖ್ಯಾತಿಯ ಹೋರಾಟಗಾರರು, ಇಂಗ್ಲೆಂಡ್, ಅಮೆರಿಕ ಮುಂತಾದ ದೇಶಗಳ ಸಂಸತ್ ಸದಸ್ಯರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ). ಸ್ವಾತಂತ್ರೋತ್ತರ ಭಾರತವು ಕಂಡ ಅಭೂತಪೂರ್ವ ಚಳುವಳಿ ಇದಾಗಿದೆ. ಈ ಹೋರಾಟದಲ್ಲಿ ಗಾಂಧೀಜಿಯವರ ಹೆಸರು ಕೇಳಿಬರದಿದ್ದರೂ, ಸರ್ಕಾರ ರಚಿಸಿರುವ ಮೂರು ಕೃಷಿ ಕಾಯಿದೆಗಳ ಆಶಯಗಳು ಗಾಂಧೀಜಿ ಅಭಿವೃದ್ಧಿ ಸಿದ್ಧಾಂತವು ಪ್ರತಿನಿಧಿಸುವ ಪರಿಸರ ಸ್ನೇಹಿ ಮತ್ತು ಜನಮೂಲ-ನೆಲಮೂಲ ಅಭಿವೃದ್ಧಿ ಮೀಮಾಂಸೆಗೆ ವಿರುದ್ಧವಾಗಿದೆ. ಈ ಮೂರು ಕರಾಳ ಕಾಯಿದೆಗಳ ಮೂಲದಲ್ಲಿ ಪಾಶ್ಚಿಮಾತ್ಯ ಬೃಹತ್ ಪ್ರಮಾಣದ ಕೃಷಿ ವ್ಯವಸ್ಥೆಯ ಮಾದರಿಯಿದೆಯೇ ವಿನಾ ಭಾರತೀಯ ಪಾರಂಪರಿಕ ಜನ ಮೂಲ-ನೆಲಮೂಲದ ಕೃಷಿಯಿಲ್ಲ.

ಭಾರತೀಯ ಸಂಸ್ಕೃತಿಯ ಅಂತರ್ಗತ ಭಾಗವಾಗಿರುವ ಕೃಷಿಯನ್ನು ಅದರಿಂದ ಉಚ್ಚಾಟಿಸುವ ಒಂದು ಹುನ್ನಾರವನ್ನು ಸರ್ಕಾರ ರೂಪಿಸಿರುವ ಮೂರು ಕರಾಳ ಕೃಷಿ ಕಾಯಿದೆಗಳಲ್ಲಿ ಕಾಣಬಹುದು (ದಿ ಫಾರ್ಮಸಸ್ ಪ್ರೊಡ್ಯೂಸ್ ಟ್ರೇಡ್ ಆಂಡ್ ಕಾಮರ್ಸ್ (ಪ್ರೊಮೋಷನ್ ಆಂಡ್ ಫೆಸಿಲಿಟೇಶನ್) ಆಕ್ಟ್ 2020, ದಿ ಫಾರ್ಮಸ್ (ಎಂಪವರ್‌ಮೆಂಟ್ ಆಂಡ್ ಪ್ರೊಟೆಕ್ಷನ್) ಅಗ್ರಿಮೆಂಟ್ ಆಫ್ ಪ್ರೈಸ್ ಆಶುರೆನ್ಸ್ ಆಂಡ್ ಫಾರ್‍ಮ್ ಸರ್ವೀಸಸ್ ಆಕ್ಟ್ 2020 ಮತ್ತು ದಿ ಎಸ್ಸೆನ್ಸಿಯಲ್ ಕಮಾಡಿಟೀಸ್ (ಅಮೆಂಡ್‌ಮೆಂಟ್) ಆಕ್ಟ್ 2020). ಈ ಕಾಯಿದೆಗಳು ಹೇಗೆ ನಮ್ಮ ಪಾರಂಪರಿಕ ಕೃಷಿಯನ್ನು, ಕೃಷಿಕರ ಬದುಕನ್ನು, ಗಾಂಧೀಜಿ ಸ್ವರಾಜ್ ಕನಸನ್ನು ಹಾಗೂ ಪರಿಸರ-ಸ್ನೇಹಿ ಜನಮೂಲ ಸಾವಯವ ಸಂಸ್ಕೃತಿಯನ್ನು ನಾಶ ಮಾಡುತ್ತವೆ ಎಂಬುದನ್ನು ಕುರಿತಂತೆ ಕೆಲವು ಸಂಗತಿಗಳನ್ನು ಸ್ಥೂಲವಾಗಿ ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

1. ಈ ಮೂರು ಕರಾಳ ಕಾಯಿದೆಗಳು ಭಾರತೀಯ ಕೃಷಿಯನ್ನು ಉದ್ಯಮಪತಿಗಳ ವಶಕ್ಕೆ ನೀಡುವ ಪ್ರಚ್ಛನ್ನ ಗುರಿಯನ್ನು ಒಳಗೊಂಡಿವೆ. ಇದರ ಒಳಾರ್ಥವೇನೆಂದರೆ ಕೃಷಿಯನ್ನು ಸಂಪೂರ್ಣವಾಗಿ ಜನರಿಂದ ಬೇರ್ಪಡಿಸಿ ಅದನ್ನು ವ್ಯಾಪಾರಿ-ವಾಣಿಜ್ಯಮಯವನ್ನಾಗಿಸುವ ಉದ್ದೇಶ ಕಾಯಿದೆಗಳಿಗಿದೆ. ಉದಾ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪೋಷಿಸುವ ಮತ್ತು ಸುಗಮಗೊಳಿಸುವ) ಎನ್ನುವ ಕಾಯಿದೆಯ ಪರಿಭಾಷೆಯನ್ನು ನೋಡಬಹುದು. ರೈತರ ಬೆಳೆ ಬೆಳೆಯುವ ಸಾಮರ್ಥ್ಯವನ್ನು ಪೋಷಿಸಿ, ಅದನ್ನು ಸುಗಮಗೊಳಿಸಲಾಗುತ್ತದೋ ಅಥವಾ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಪೋಷಿಸಿ ಅದರ ಪ್ರಕ್ರಿಯೆಯನ್ನು ಸುಗಮಗೊಳಿಸಲಾತ್ತದೊ? ಈ ಕಾಯಿದೆಗಳು ಅತಿಸಣ್ಣ ಮತ್ತು ಸಣ್ಣ ಕೃಷಿಕರನ್ನು ಬೀದಿಪಾಲು ಮಾಡುತ್ತವೆ.

ಏಕೆಂದರೆ ಈ ರೈತಾಪಿಗಳಲ್ಲಿ ವ್ಯಾಪಾರ-ವಾಣಿಜ್ಯ ಸಾಮರ್ಥ್ಯ ಕಡಿಮೆ. ಅವರಿಗೆ ಬೇಕಾಗಿರುವುದು ಬೆಳೆ ಬೆಳೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಮತ್ತು ಅವರ ಪ್ರಯತ್ನವನ್ನು ಬೆಂಬಲಿಸುವುದು. ಈ ಕಾಯಿದೆಗಳು ’ಜಾನುವಾರು-ಮಹಿಳಾ-ಪರಿಸರ ಮೂಲ ಕೃಷಿ’ಯನ್ನು ’ಯಂತ್ರ ಮೂಲ-ರಾಸಾಯನಿಕ ಮೂಲ-ಮಾರುಕಟ್ಟೆ ಮೂಲ ಕೃಷಿ’ಯನ್ನಾಗಿಸುತ್ತವೆ. ಹಾಗಾದರೆ ಈಗ ರೈತರು ಯಂತ್ರಗಳನ್ನು, ರಾಸಾಯನಿಕಗಳನ್ನು ಬಳಸುತ್ತಿಲ್ಲವೇ, ಮಾರುಕಟ್ಟೆಯನ್ನು ಅವರು ಅವಲಂಬಿಸಿಲ್ಲವೇ ಎಂದು ಯಾರೂ ಕೇಳಬಹುದು. ರೈತಾಪಿ ವರ್ಗ ಕೃಷಿಯಲ್ಲಿ ಬಳಸುವ ಯಂತ್ರಗಳಿಗೂ, ರಾಸಾಯನಿಕಗಳಿಗೂ ಮತ್ತು ಮಾರುಕಟ್ಟೆಯ ಅವಲಂಬನೆಗೂ ಹಾಗೂ ಉದ್ಯಮಪತಿಗಳು-ಕಾರ್ಪೋರೇಟುಗಳು ಕೃಷಿ ಪ್ರವೇಶಿಸಿದ ಮೇಲೆ ಅವು ಬಳಸುವ ಯಂತ್ರಗಳಿಗೂ, ರಾಸಾಯನಿಕಗಳಿಗೂ ಮತ್ತು ಮಾರುಕಟ್ಟೆ ಅವಲಂಬನೆಗೂ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕಾರ್ಪೋರೆಟ್ ಪದ್ಧತಿಯದ್ದು ಬೃಹತ್ ಕೃಷಿ ವ್ಯವಸ್ಥೆಯಾಗಿದ್ದರೆ ರೈತಾಪಿಯದ್ದು ಸಣ್ಣ, ರೈತ ಕೇಂದ್ರಿತ ಮತ್ತು ಜಾನುವಾರು ಕೇಂದ್ರಿತ ಕೃಷಿಯಾಗಿದೆ. ಒಟ್ಟಾರೆ ಸದರಿ ಕಾಯಿದೆಗಳು ನಮ್ಮ ಕೃಷಿಯನ್ನು ಕಾರ್ಪೋರೆಟೀಕರಣಕ್ಕೆ ಒಳಪಡಿಸಿಬಿಡುತ್ತದೆ. ಇದು ನಮ್ಮ ಪಾರಂಪರಿಕ ಜನ-ನೆಲ ಮೂಲ ಗಾಂಧೀಜಿ ವ್ಯವಸ್ಥೆಗೆ ವಿರುದ್ಧವಾದುದಾಗಿದೆ.

2. ಕೃಷಿಯು ನಮ್ಮ ಭಾರತೀಯ ಸಂದರ್ಭದಲ್ಲಿ ಕೇವಲ ಉಳುಮೆ ಮಾಡುವ, ಬೀಜ ಬಿತ್ತಿ ಬೆಳೆ ಬೆಳೆಯುವ, ಉತ್ಪನ್ನವನ್ನು ಮಾರಾಟ ಮಾಡುವ ಚಟುವಟಿಕೆಗಳಿಗೆ ಸೀಮಿತವಾದುದಲ್ಲ. ಕೃಷಿಯು ನಮ್ಮ ಜನರ ಜೀವನ ಪದ್ಧತಿಯಾಗಿದೆ. ಇದರಲ್ಲಿ ಜಾನುವಾರು ಆರ್ಥಿಕತೆಯಿದೆ, ಕೃಷಿ ಅರಣ್ಯಗಾರಿಕೆಯಿದೆ, ಹೈನುಗಾರಿಕೆಯಿದೆ,
ಕುರಿ-ಕೋಳಿ ಸಾಕಣಿಕೆಯಿದೆ ಮತ್ತು ಇದು ಹತ್ತಾರು ಕಸಬುದಾರರನ್ನು (ಕುಂಬಾರಿಕೆ, ಮೇದಾರಿಕೆ, ಕಮ್ಮಾರಿಕೆ, ಬಡಗಿತನ, ಮಡಿವಾಳತನ, ಅಂಬಿಗತನ ಮುಂತಾದ ಕಸುಬುದಾರರು) ಒಳಗೊಂಡಿದೆ. ಇವೆಲ್ಲವುಗಳ ನಡುವೆ ಪರಸ್ಪರಾವಲಂಬನೆ ಕೊಡು-ಕೊಳೆ ಸಂಬಂಧವಿದೆ. ಈಗ ಒಕ್ಕೂಟ ಸರ್ಕಾರವು ತಂದಿರುವ ಮೂರು ಕರಾಳ ಕೃಷಿ ಶಾಸನಗಳು ಈ ಎಲ್ಲ ವೈವಿಧ್ಯಮಯ ಬಹುವಚನ ಜನ-ನೆಲ-ಜಾನುವಾರು ಮೂಲ ಕೃಷಿಗೆ ಕೊಡಲಿ ಪೆಟ್ಟು ನೀಡುತ್ತದೆ.

ಯಾವುದನ್ನು ನಾವು ’ಗಾಂಧಿ ಕೃಷಿ’ ಎಂದು ಬಗೆದಿದ್ದೇವೆಯೋ ಅದಕ್ಕೆ ಈ ಶಾಸನಗಳು ಮಾರಕವಾಗಿವೆ. ಸಾಂಪ್ರದಾಯಿಕವಾಗಿ ನಮ್ಮಲ್ಲಿ ಕೃಷಿಯು ಯಾವತ್ತೂ ಉಳುಮೆ-ಬೀಜ ಬಿತ್ತನೆ, ಉತ್ಪನ್ನಗಳನ್ನು ಮಾರಾಟ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಕುರಿ, ಕೋಳಿ, ಹಸು, ಎಮ್ಮೆ, ಆಡು ಮುಂತಾದವುಗಳನ್ನು ಒಳಗೊಂಡಂತೆ ಕೃಷಿ ಮಾಡುತ್ತಿದ್ದರು. ಕೃಷಿಕರು ತಮ್ಮ ಒಕ್ಕಲುತನಕ್ಕೆ ವಿವಿಧ ಬಗೆಯ ಕರಕುಶಲ ಕಸುಬುದಾರರನ್ನು ಮತ್ತು ಕರಕುಶಲ ಕಸುಬುದಾರರು ರೈತಾಪಿಗಳನ್ನು ಪರಸ್ಪರ ಅವಲಂಬಿಸಿಕೊಂಡಿದ್ದರು. ಕೃಷಿಯು ಸಾಮುದಾಯಿಕ ಬದುಕಾಗಿತ್ತು. ಬದುಕು-ಕೃಷಿ ಅಭಿನ್ನವಾಗಿದ್ದವು. ಮೂರು ಕರಾಳ ಕೃಷಿ ಕಾನೂನುಗಳು ಇಂತಹ ಸಾವಯವ ಸಾಮುದಾಯಿಕ ಬದುಕಿಗೆ ಬರೆಯೆಳೆಯುತ್ತದೆ. ಜಾನುವಾರು ಸಂಬಂಧಿ ಸಾವಯವ ಗೊಬ್ಬರ ವ್ಯವಸ್ಥೆಯನ್ನು ಇವು ಕೊನೆಗೊಳಿಸುತ್ತವೆ.

3. ಕೃಷಿಯು ಏಕಬೆಳೆ ಬೆಳೆಯುವ ಯಾಂತ್ರೀಕೃತ ಉದ್ಯಮವಾಗಿರಲಿಲ್ಲ. ರೋಣ ತಾಲ್ಲೂಕಿನಲ್ಲಿ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ನಾನೇ ಸ್ವತಃ ನೋಡಿದಂತೆ ಹೊಲದಲ್ಲಿ ಜೋಳ, ಗುರೆಳ್ಳು (ಹುಚ್ಚೆಳ್ಳು), ತೊಗರಿ, ಹರಳು, ಸಾಸಿವೆ, ಉಳ್ಳ್ಳಾಗಡ್ಡಿ, ಹಲಸಂದೆ, ಹುರುಳಿ, ಅವರೆ ಮುಂತಾದ ಹತ್ತಾರು ಬೆಳೆಗಳು ಏಕಕಾಲದಲ್ಲಿರುವ ಹೊಲದಲ್ಲಿನ ಬಹುಬೆಳೆ ಪದ್ಧತಿಯನ್ನು ನೋಡಿದ್ದೇನೆ. ಅಕ್ಕಡಿ ಸಾಲು ಎಂಬುದು ನಮ್ಮ ಖುಷ್ಕಿ ಕೃಷಿಯ ವಿಶಿಷ್ಟ ಆಯಾಮವಾಗಿದೆ. ಪ್ರಧಾನ ಬೆಳೆಯ ಜೊತೆಗೆ ಅಕ್ಕಡಿ ಸಾಲುಗಳಲ್ಲಿ ಅನೇಕ ಬಗೆಯ ಕಾಳು-ಧಾನ್ಯಗಳನ್ನು ಬೆಳೆಯಲಾಗುತ್ತದೆ. ಇಂತಹ ವಿಶಿಷ್ಟ-ವೈವಿಧ್ಯಮಯ-ಸಾವಯವ ಕೃಷಿಯನ್ನು ಈ ಕರಾಳ ಮೂರು ಕಾಯಿದೆಗಳು ಕೊನೆಗೊಳಿಸುತ್ತವೆ. ಕಾರ್ಪೋರೆಟ್ ಕೃಷಿಯು ಯಾಂತ್ರಿಕ ಕೃಷಿಯಾಗಿರುವುದರಿಂದ ಅಲ್ಲಿ, ರೋಣ ಪ್ರದೇಶದಲ್ಲಿ ಕಂಡುಬರುವ ವೈವಿಧ್ಯಮಯ ಕೃಷಿ ಸಾಧ್ಯವಿಲ್ಲ.

 

4. ಕೃಷಿಯಲ್ಲಿ ಮಹಿಳೆಯರ ತೊಡಗುವಿಕೆಯು ವಿಶಿಷ್ಟವಾದುದಾಗಿದೆ. ಮಹಿಳೆಯರ ತೊಡಗುವಿಕೆಯಿಲ್ಲದೆ ಕೃಷಿ ನಡೆಯುವುದಿಲ್ಲ. ರೈತರಿಗೆ ಬುತ್ತಿ ಒಯ್ಯುವುದು, ದನಕರುಗಳಿಗೆ ಮೇವು-ನೀರುಣಿಸುವುದು, ಕಾಳುಕಡ್ಡಿ, ಧಾನ್ಯ ಶೇಖರಣೆ ಮಾಡುವುದು, ಮನೆವಾರ್ತೆ ನಿರ್ವಹಿಸುವುದು, ಹೊಲದಲ್ಲಿ ಕಾಯಿಪಲ್ಯ ಬೆಳೆಸುವುದು, ಗೆಡ್ಡೆ-ಗೆಣಸು, ಸೊಪ್ಪು ಸೆದೆ ಸಂಗ್ರಹಿಸುವುದು, ಹೈನು ನಿರ್ವಹಣೆ, ಬೆಣ್ಣೆ – ತುಪ್ಪ ಉತ್ಪಾದಿಸುವುದು, ಕೋಳಿ ಸಾಕುವುದು, ಮೊಟ್ಟೆ, ಬೆಣ್ಣೆ, ಕಾಳು ಸಂತೆಗಳಲ್ಲಿ ಮಾರಾಟ ಮಾಡುವುದು ಮುಂತಾದ ಹತ್ತಾರು ಬಗೆಯಲ್ಲಿ ಅವರು ಕೃಷಿಯಲ್ಲಿ ಭಾಗವಹಿಸುತ್ತಾರೆ. ಸರ್ಕಾರವು ತಂದಿರುವ ಮೂರು ಕರಾಳ ಶಾಸನಗಳು ಹೀಗೆ ಮಹಿಳೆಯರನ್ನು ಒಳಗೊಂಡ ಕೃಷಿಯನ್ನು ಕಾರ್ಪೋರೆಟೀಕರಣಗೊಳಿಸುವುದರೊಂದಿಗೆ ಸಂಪೂರ್ಣವಾಗಿ ಉಚ್ಚಾಟಿಸಿಬಿಡುತ್ತವೆ. ಗ್ರಾಮೀಣ ಕೃಷಿ ಬದುಕಿನಲ್ಲಿ ಮಹಿಳೆಯರ ಪಾತ್ರವನ್ನು ಅಮರ್ತ್ಯ ಸೇನ್ ’ಸಾಮಾಜಿಕ ತಂತ್ರಜ್ಞಾನ’ ಎಂದು ಕರೆಯುತ್ತಾನೆ. ಅವರ ಚಟುವಟಿಕೆಗಳು ನೂರಕ್ಕೆ ನೂರು ಪಾಲು ಉತ್ಪಾದನಾ ಸ್ವರೂಪದವು ಎನ್ನುತ್ತಾರೆ.

5. ಜಾನುವಾರು ಮತ್ತು ಕೃಷಿ ನಡುವೆ ಅವಿನಾಭಾವ ಸಂಬಂಧವಿದೆ. ಯಾವುದನ್ನು ಸಾವಯವ ಕೃಷಿ ಎನ್ನುತ್ತೇವೆಯೋ ಅದರ ಮೂಲ ಜಾನುವಾರು ಪ್ರಣೀತ ಕೃಷಿಯಲ್ಲಿದೆ. ಜಾನುವಾರುಗಳು ನೀಡುವ ಸಗಣಿಯು ಸಾವಯವ ಗೊಬ್ಬರ ಅದಕ್ಕೆ ಮೂಲವಾಗಿದೆ. ಕಾರ್ಪೋರೆಟ್ ಕೃಷಿಯು ಜಾನುವಾರು ಮತ್ತು ಕೃಷಿಗಳ ನಡುವಿನ ಸಂಬಂಧವನ್ನು ಕಡಿದುಹಾಕಿಬಿಡುತ್ತದೆ. ಒಂದು ಕಡೆ ಇಂದು ಆಳುವ ಪಕ್ಷವು ಗೋಮಾತೆ ರಕ್ಷಣೆಗೆ ಆಕ್ರಮಣಕಾರಿ ನಿಲುವು ತಳೆದಿದೆ. ಅದಕ್ಕೆ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಆದರೆ ಅಂತಹ ಗೋಮಾತೆ-ಪ್ರಣೀತ ಕೃಷಿಯನ್ನು ಬುಡಮೇಲು ಮಾಡುವ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ವೈರುಧ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಕಾನೂನುಗಳಡಿಯಲ್ಲಿ ಕಾರ್ಪೋರೆಟ್ ಕೃಷಿಯಲ್ಲಿ ಸಣ್ಣ ಪ್ರಮಾಣದ ಜಾನುವಾರು ಆರ್ಥಿಕತೆಯು ನಾಶವಾಗಿ ಬಿಡುತ್ತದೆ. ದೊಡ್ಡ ಪ್ರಮಾಣದಲ್ಲಿ ಉದ್ದಿಮೆ ರೀತಿಯಲ್ಲಿ ಹೈನು ಉತ್ಪಾದನಾ ಹಸು ಸಾಕಣಿಕಾ ಚಟುವಟಿಕೆಯು ಅಸ್ತಿತ್ವಕ್ಕೆ ಬರಬಹುದು. ಆದರೆ ಇದು ಕೃಷಿ ಪ್ರಣೀತ ಜಾನುವಾರು ಆರ್ಥಿಕತೆಯಾಗುವುದಿಲ್ಲ.

6. ನಮ್ಮ ಆರ್ಥಿಕತೆಯಲ್ಲಿ ಕೃಷಿಯು ಬಂಡವಾಳಶಾಹಿ ಸ್ವರೂಪವನ್ನು ಪೂರ್ಣ ರೂಪದಲ್ಲಿ ಪಡೆದಿಲ್ಲ. ನಮ್ಮಲ್ಲಿ ಶೇ.85ಕ್ಕಿಂತ ಅಧಿಕ ರೈತರು ಅತಿಸಣ್ಣ (1 ಹೆಕ್ಟೇರು)-ಸಣ್ಣ (2 ಹೆಕ್ಟೇರು) ರೈತರಾಗಿದ್ದಾರೆ. ವಾಸ್ತವವಾಗಿ ಅತಿ ಸಣ್ಣ ಮತ್ತು ಸಣ್ಣ ರೈತರ ಸರಾಸರಿ ಭೂಮಿಯ ವಿಸ್ತೀರ್ಣ ಅನುಕ್ರಮವಾಗಿ 0.4 ಮತ್ತು 1.21 ಹೆಕ್ಟೇರುಗಳು. ಈಗ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕಾನೂನುಗಳು ಇಂತಹ ಅತಿಸಣ್ಣ-ಸಣ್ಣ ರೈತಾಪಿ ವರ್ಗವನ್ನು ನಾಶಮಾಡಿಬಿಡುತ್ತವೆ. ಹಣದ ಆಮಿಷಕ್ಕೆ ಒಳಗಾಗಿ ಇವರೆಲ್ಲರೂ ತಮ್ಮ ಭೂಮಿಯನ್ನು ಒಂದೋ ಮಾರಾಟ ಮಾಡುತ್ತಾರೆ ಇಲ್ಲವೇ ಗುತ್ತಿಗೆಗೆ ನೀಡಿಬಿಡುತ್ತಾರೆ. ಈ ಹೊಸ ಕಾನೂನುಗಳು ನಿಜ ಬಂಡವಾಳಶಾಹಿ ಕೃಷಿಗೆ ಅವಕಾಶ ಮಾಡಿಕೊಡುತ್ತದೆ.

7. ಪ್ರಧಾನಮಂತ್ರಿ, ಕೃಷಿ ಸಚಿವರು, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಮತ್ತು ಅನೇಕ ಸರ್ಕಾರ ಪೋಷಿತ ಅರ್ಥಶಾಸ್ತ್ರಜ್ಞರು ಈ ಕೃಷಿ ಸುಧಾರಣಾ ಕಾನೂನುಗಳು ರೈತರ ಪರವಾಗಿವೆ, ಅತಿಸಣ್ಣ-ಸಣ್ಣ ರೈತರ ಹಿತ ಕಾಯುತ್ತವೆ, ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಕೃಷಿ ಸುಧಾರಣೆ ಸಾಧ್ಯವಾಗುತ್ತದೆ ಮುಂತಾದ ರೀತಿಯಲ್ಲಿ ಸಮರ್ಥನೆ ಮಾಡುತ್ತಿದ್ದಾರೆ. ಕೃಷಿಗೆ ಬಂಡವಾಳ ಸಮೃದ್ಧವಾಗಿ ಹರಿದುಬರುತ್ತದೆ. ಆದರೆ ಇವರ್‍ಯಾರೂ ಯಾವ ರೀತಿಯಲ್ಲಿ ಇವು ರೈತರ ಪರವಾಗಿವೆ ಮತ್ತು ಹೇಗೆ ರೈತರಿಗೆ ಲಾಭದಾಯಕ ಎಂಬುದನ್ನು ಹೇಳುವುದಿಲ್ಲ. ಏಕೆಂದರೆ ಅವುಗಳ ಮೂಲಕ್ಕೆ ಹೋದರೆ ಅವು ಯಾರಿಗೆ ಲಾಭದಾಯಕ ಎಂಬುದು ಬಹಿರಂಗವಾಗಿಬಿಡುತ್ತದೆ. ಈ ಆಶ್ವಾಸನೆಗಳು 2013-14ರಲ್ಲಿ ಆಳುವ ಪಕ್ಷವು ತಾನು ಸರ್ಕಾರ ರಚಿಸಿದರೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕು ಖಾತೆಗೆ ರೂ. 15 ಲಕ್ಷ ಜಮೆ ಮಾಡಲಾಗುತ್ತದೆ ಎಂಬ ಹುಸಿ ಒಣ ಭರವಸೆಗೆ ಸಮನಾಗಿದೆ.

8. ಸರ್ಕಾರವು ಮತ್ತೆ ಮತ್ತೆ ಸದರಿ ಕಾಯಿದೆಗಳಿಂದ ಎಪಿಎಂಸಿ ನಾಶವಾಗುವುದಿಲ್ಲ ಮತ್ತು ಎಂಎಸ್‌ಪಿ ನಿಲ್ಲುವುದಿಲ್ಲ ಎಂದು ಹೇಳುತ್ತಿದೆ. ಇಲ್ಲಿಯೂ ಹೇಗೆ ಎಂಬುದನ್ನು ಹೇಳುವುದಿಲ್ಲ. ತಲೆಚಿಟ್ಟು ಹಿಡಿಯುವಷ್ಟು ಸಲ ಸರ್ಕಾರವು ಸದರಿ ಕಾಯಿದೆಗಳು ರೈತರಿಗೆ ಮಾರಾಟ ಮಾಡುವ ’ಸ್ವಾತಂತ್ರ್ಯ’ವನ್ನು ನೀಡುತ್ತವೆ ಎಂದು ಹೇಳುತ್ತಿದೆ. ವ್ಯಾಪಾರ-ವಾಣಿಜ್ಯ ವಹಿವಾಟಿನಲ್ಲಿ ಯಾರಿಗೆ ಬಾರ್‌ಗೈನಿಂಗ್ ಪವರ್ ಬಲಯುತವಾಗಿರುತ್ತದೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ಈ ರೀತಿಯಲ್ಲಿ ರೈತರಿಗೆ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಉತ್ಪನ್ನಗಳನ್ನು ಮಾರಾಟ ಮಾಡುವ ’ಸ್ವಾತಂತ್ರ್ಯ’ವನ್ನು ನೀಡುತ್ತವೆ ಎಂದು ಹೇಳುತ್ತಾ ವ್ಯಾಪಾರಗಾರರಿಗೆ-ವಾಣಿಜ್ಯೋದ್ಯಮಿಗಳಿಗೆ ರೈತರನ್ನು ಶೋಷಿಸುವ ಸ್ವಾತಂತ್ರ್ಯವನ್ನು ಈ ಮೂರು ಕರಾಳ ಕಾಯಿದೆಗಳ ಮೂಲಕ ನೀಡಲಾಗುತ್ತಿದೆ. ರೈತರು ಮತ್ತು ಬಲಶಾಲಿ ಕಾರ್ಪೋರೆಟ್‌ಗಳ ನಡುವೆ ಪೈಪೋಟಿ ನಡೆದರೆ ಯಾರು ಉಳಿಯುತ್ತಾರೆ, ಯಾರು ಬಲಿಯಾಗುತ್ತಾರೆ ಎಂಬುದನ್ನು ಹೇಳುವುದಕ್ಕೆ ದೊಡ್ಡ ಆರ್ಥಿಕ ಚಿಂತಕರೇನು ಬೇಡ.

ಈ ಕಾಯಿದೆಗಳಲ್ಲಿ ಎಪಿಎಂಸಿಗಳನ್ನು ಮುಚ್ಚುವ ಅಂಶಗಳೇನಿಲ್ಲ. ಆದರೆ ಅವುಗಳನ್ನು ಅಪೌಷ್ಟಿಕತೆಯಿಂದ ಸಾಯುವಂತೆ ಮಾಡಲಾಗುತ್ತದೆ. ಅವು ಸತ್ತಮೇಲೆ ಕೃಷಿ ಮಾರುಕಟ್ಟೆಯ ಮೇಲೆ ಖಾಸಗಿ ವ್ಯಾಪಾರಿ-ವಾಣಿಜ್ಯೋದ್ಯಮಿಗಳ ಏಕಸ್ವಾಮ್ಯ ಉಂಟಾಗಿಬಿಡುತ್ತದೆ. ಅಂದಮೇಲೆ ಯಾರಿಗೆ ಈ ಕಾಯಿದೆಗಳು ಸ್ವಾತಂತ್ರ್ಯ ನೀಡುತ್ತವೆ? ದೊಡ್ಡ ಬಂಡವಾಳಿಗರ ಜೊತೆಗಿನ ಪೈಪೋಟಿಯಲ್ಲಿ-ವ್ಯವಹಾರದಲ್ಲಿ ಸೋಲುವವರು (ಸಾಯುವವರು) ಸಣ್ಣ ರೈತರಾಗಿದ್ದಾರೆ. ಇನ್ನು ಎಂಎಸ್‌ಪಿ ಬಗ್ಗೆ ನಾಣ್ಣುಡಿಯಾಗಿ ಬಿಟ್ಟಿರುವ ಜನಪ್ರಿಯ ಘೋಷಣೆಯನ್ನೇ ನೀಡಲಾಗಿದೆ. ’ಎಂಎಸ್‌ಪಿ ಇತ್ತು, ಎಂಎಸ್‌ಪಿ ಇದೆ, ಎಂಎಸ್‌ಪಿ ಇರುತ್ತದೆ’ ಎಂಬುದೇ ಅಂತಹ ಘೋಷಣೆ. ಆದರೆ ಯಾವ ರೀತಿಯ ಎಂಎಸ್‌ಪಿ ಇರುತ್ತದೆ? ಇದು ಎ2+ಎಫ್‌ಎಲ್ ರೂಪದ್ದೋ ಅಥವಾ ಸಿ2+ಶೇ.50 ರೂಪದ್ದೋ ಎಂಬುದು ಮುಖ್ಯ. ಆದರೆ ಸರ್ಕಾರವು 2018ರಲ್ಲಿ ಎಂಎಸ್‌ಪಿ ಎನ್ನುವುದು ಎ2+ಎಫ್‌ಎಲ್ ಎಂದು ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ಸೆಪ್ಟೆಂಬರ್ 18, 2017ರಲ್ಲಿ ಎಮ್. ಎಸ್. ಸ್ವಾಮಿನಾಥನ್ ಹೇಳಿದ ಮಾತುಗಳಿವು:

‘MSP should be C2+50% with procurement, storage and distribution. Agricultural policies must base on conservation, cultivation, consumption, commerce’(ಸೆಪ್ಟೆಂಬರ್ 18, 2017).

ಸರ್ಕಾರವು ಜಾರಿಗೊಳಿಸಿರುವ ಮೂರು ಕರಾಳ ಶಾಸನಗಳು ಎಮ್.ಎಸ್.ಸ್ವಾಮಿನಾಥನ್ ಹೇಳುವ ಮೂರು ಸೂತ್ರಗಳಿಗೆ ವಿರುದ್ಧವಾಗಿವೆ. ಮೊದಲನೆಯದಾಗಿ ಅವರು ಹೇಳುವ ಸಿ2+50% ಆಧಾರ ಮಾಡಿಕೊಂಡ ಎಂಎಸ್‌ಪಿ ಸರ್ಕಾರ ನೀಡುತ್ತಿಲ್ಲ. ಎರಡನೆಯದಾಗಿ ಸರ್ಕಾರ ಜಾರಿಗೊಳಿಸಿರುವ ಮೂರು ಕಾಯಿದೆಗಳಲ್ಲಿ ಆಹಾರ ಸಂಗ್ರಹಣೆ, ದಾಸ್ತಾನು ಮತ್ತು ವಿತರಣೆ ಆಯಾಮಗಳಿಲ್ಲ. ಮೂರನೆಯದಾಗಿ ಈ ಕಾಯಿದೆಗಳಲ್ಲಿ ಪರಿಸರ ಸಂರಕ್ಷಣೆ, ಕೃಷಿ ಉಳುಮೆ, ರೈತರ ಅನುಭೋಗ ಮತ್ತು ವಾಣಿಜ್ಯ ಅಂಶಗಳನ್ನು ಸಂಯೋಜಿಸಿಲ್ಲ. ಇಂದು ರೈತ ಹೋರಾಟಗಳು ಎಂಎಸ್‌ಪಿ ಬಗ್ಗೆ ಹೆಚ್ಚು ಮಾತನಾಡುತ್ತಿವೆ. ಇದರ ಜೊತೆಯಲ್ಲಿ ಪಿಡಿಎಸ್(ಸಾರ್ವಜನಿಕ ವಿತರಣಾ ವ್ಯವಸ್ಥೆ) ಬಗ್ಗೆಯೂ ಮಾತನಾಡಬೇಕು. ಈ ಕರಾಳ ಮೂರು ಕೃಷಿ ಕಾನೂನುಗಳು ಪಡಿತರ ವ್ಯವಸ್ಥೆಯನ್ನು ರದ್ದು ಮಾಡುವ ಪ್ರಚ್ಛನ್ನ ಉದ್ದೇಶವನ್ನು ಒಳಗೊಂಡಿವೆ. ’ದಿ ಎಸ್ಸೆನ್ಸಿಯಲ್ ಕಮಾಡಿಟಿಸ್ ಅಮೆಂಡ್‌ಮೆಂಟ್ ಕಾಯಿದೆ 2020’ರಲ್ಲಿ ಪಡಿತರ ವ್ಯವಸ್ಥೆಯನ್ನು ಮುಚ್ಚುವ ಪ್ರಚ್ಛನ್ನ ಉದ್ದೇಶವನ್ನು ಗುರುತಿಸುವುದು ನಮಗೆ ಕಷ್ಟವಾಗಬಾರದು. ಈ ಕಾಯಿದೆಯಿಂದಾಗಿ ಹೋರ್ಡಿಂಗ್-ಕಳ್ಳ ದಾಸ್ತಾನು ಇಂದು ಅಪರಾಧವಾಗಿ ಉಳಿದಿಲ್ಲ. ಇವೆಲ್ಲವೂ ವ್ಯಾಪಾರಗಾರರಿಗೆ-ವಾಣಿಜ್ಯೋದ್ಯಮಿಗಳಿಗೆ ಅನುಕೂಲ ಒದಗಿಸುವ ಕಾಯಿದೆಗಳಾಗಿವೆ.

9. ರೈತ ಹೋರಾಟಗಳಲ್ಲಿನ ಮುಖಂಡರು ಮತ್ತೆ ಮತ್ತೆ ಹೇಳುತ್ತಿರುವಂತೆ ಮೂರು ಕರಾಳ ಕೃಷಿ ಕಾಯಿದೆಗಳು ರೈತರಿಗೆ-ಕೃಷಿಗೆ ಮಾತ್ರ ಮೃತ್ಯುಪ್ರಾಯವಾಗಿಲ್ಲ, ಇಡೀ ಸಮಾಜಕ್ಕೆ, ಎಲ್ಲ ಜನವರ್ಗಗಳಿಗೆ, ಮುಖ್ಯವಾಗಿ ದುಡಿಯುವ ವರ್ಗಕ್ಕೆ, ಮಹಿಳೆಯರಿಗೆ, ಪರಿಸರಕ್ಕೆ ಮಾರಕವಾಗಿವೆ. ಕೃಷಿಯ ಕಾರ್ಪೋರೆಟೀಕರಣದಿಂದ ಅತಿಸಣ್ಣ-ಸಣ್ಣರೈತರ, ಭೂರಹಿತ ಕೃಷಿ ಕೂಲಿಕಾರರ ಬದುಕು ಮೂರಾಬಟ್ಟೆಯಾಗುತ್ತದೆ. ಒಟ್ಟಾರೆ ಈ ಮೂರು ಕರಾಳ ಕೃಷಿ ಕಾಯಿದೆಗಳು ನಾಗರಿಕತೆ ಆಯಾಮವುಳ್ಳ ನಮ್ಮ ಕೃಷಿ ಸಂಸ್ಕೃತಿಗೆ ಕೊಡಲಿಪಟ್ಟು ನೀಡುತ್ತವೆ. ಕಾರ್ಪೋರೆಟ್ ಸಂಸ್ಕೃತಿಯು ಯಾವತ್ತೂ, ಎಲ್ಲಿಯೂ ಪರಿಸರ-ಸ್ನೇಹಿಯಾಗಿರುವುದಿಲ್ಲ. ಜಾನುವಾರು ಹತ್ಯಾ ನಿಷೇಧ ಕಾಯಿದೆಯ ಜೊತೆಯಲ್ಲಿ ಈ ಮೂರು ಕೃಷಿ ಕಾಯಿದೆಗಳು ಜಾನುವಾರು ಆರ್ಥಿಕತೆಗೆ ವಿಷವುಣಿಸುತ್ತವೆ.

10. ಒಟ್ಟಾರೆ ನಮ್ಮ ಕೃಷಿ ವ್ಯವಸ್ಥೆಯ ಸ್ವರೂಪವು ಬದಲಾಗುತ್ತದೆ. ಇದು ಸರಿ. ಆದರೆ ಈ ಬದಲಾವಣೆಯು ಕೃಷಿ ಸಂಸ್ಕೃತಿಗೆ, ರೈತಾಪಿ ವರ್ಗಕ್ಕೆ, ದುಡಿಯುವ ವರ್ಗಕ್ಕೆ, ಮಹಿಳೆಯರಿಗೆ ಮತ್ತು ಪರಿಸರಕ್ಕೆ ಮಹಾಮಾರಕವಾಗಿವೆ. ಕೃಷಿಯ ಕಾರ್ಪೋರೆಟೀಕರಣ, ಕೃಷಿ ಮಾರುಕಟ್ಟೆಯ ಖಾಸಗೀಕರಣ, ಕಳ್ಳ ದಾಸ್ತಾನು-ಹೋರ್ಡಿಂಗ್‌ಗಳ ನಿರಪರಾಧೀಕರಣ, ಕೃಷಿಯ ಸಂಪೂರ್ಣ ಪಾಶ್ಚಿಮಾತ್ಯೀಕರಣ, ಜಾನುವಾರು ಆರ್ಥಿಕತೆಯ ಅಂತ್ಯ ಮುಂತಾದ ಬೆಳವಣಿಗೆಗಳು ನಮ್ಮ ನಾಗರಿಕೋಪಾದಿಯ ಕೃಷಿ ಸಂಸ್ಕೃತಿಯನ್ನು ನಾಶಮಾಡಿಬಿಡುತ್ತದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಹೋರಾಟ ತೀವ್ರಗೊಳಿಸಲು ಗಟ್ಟಿ ನಿರ್ಧಾರ: ಮೇ ತಿಂಗಳಿನಲ್ಲಿ ಪಾರ್ಲಿಮೆಂಟ್ ಚಲೋಗೆ ರೈತರ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...