ಮಂಗಳವಾರ ಮಂಡನೆಯಾಗಿರುವ ಕೇಂದ್ರ ಬಜೆಟ್‌ನಲ್ಲಿ ಜನಸಾಮಾನ್ಯರು, ಮಧ್ಯಮ ವರ್ಗದವರಿಗೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ ಎಂದು ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಯೋಚಿಸದೆ, ಪೆಗಾಸಸ್ ವಿವಾದ ಮರೆಮಾಚುತ್ತಿರುವ ಬಜೆಟ್” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
“ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಜನಸಾಮಾನ್ಯರಿಗೆ ಬಜೆಟ್ ಒದಗಿಸಿರುವುದು ಶೂನ್ಯ. ಸರ್ಕಾರವು ದೊಡ್ಡ-ದೊಡ್ಡ ಮಾತುಗಳ ಮೂಲಕ ಬೊಗಳೆ ಬಿಡುತ್ತಿದೆ. ಇದು ಪೆಗಾಸೆಸ್ ಮರೆಮಾಚುತ್ತಿರುವ ಬಜೆಟ್” ಎಂದು ಅವರು ಟ್ವೀಟ್ ಮಾಡಿದ್ದಾರೆ.
BUDGET HAS ZERO FOR COMMON PEOPLE, WHO ARE GETTING CRUSHED BY UNEMPLOYMENT & INFLATION. GOVT IS LOST IN BIG WORDS SIGNIFYING NOTHING – A PEGASUS SPIN BUDGET
— Mamata Banerjee (@MamataOfficial) February 1, 2022
ಕೇಂದ್ರ ಬಜೆಟ್ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಮೋದಿ ಸರ್ಕಾರದ ಶೂನ್ಯ ಮೊತ್ತದ ಬಜೆಟ್ ಇದಾಗಿದೆ ಎಂದಿದ್ದಾರೆ. “ಮೋದಿ ಸರ್ಕಾರದ ಶೂನ್ಯ ಮೊತ್ತದ ಬಜೆಟ್! ಸಂಬಳ ಪಡೆಯುವ ವರ್ಗ, ಮಧ್ಯಮ ವರ್ಗ, ಬಡವರು ಮತ್ತು ವಂಚಿತರು, ಯುವಕರು, ರೈತರು ಹಾಗೂ ಎಂಎಸ್ಎಂಇಗಳಿಗೆ ಬಜೆಟ್‌ನಲ್ಲಿ ಏನೂ ಇಲ್ಲ” ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
M0di G0vernment’s Zer0 Sum Budget!
Nothing for
– Salaried class
– Middle class
– The poor & deprived
– Youth
– Farmers
– MSMEs— Rahul Gandhi (@RahulGandhi) February 1, 2022
ಸಿಪಿಎಂ ಪಕ್ಷದ ಸೀತಾರಾಮ್ ಯೆಚೂರಿ ಬಜೆಟ್ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ಜನವಿರೋಧಿ ಬಜೆಟ್ ಮಂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಜನವಿರೋಧಿ ಬಜೆಟ್. ಕಳೆದ ಎರಡು ವರ್ಷಗಳಲ್ಲಿ ಜನರು ಸಂಕಷ್ಟಲ್ಲಿರುವಾಗ ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಮೇಲಿನ ಸಬ್ಸಿಡಿಗಳನ್ನು ಕಡಿತಗೊಳಿಸಲಾಯಿತು. ಇದು ಜನರ ಜೀವನೋಪಾಯದ ಮೇಲೆ ಸರ್ಕಾರ ಮಾಡಿದ ಕ್ರೂರ ದಾಳಿ” ಎಂದು ತಿಳಿಸಿದ್ದಾರೆ.
ಸಾಮಾನ್ಯ ಜನರ ಪಾಲಿಗೆ ಭರವಸೆ ಆಶಾಕಿರಣವಾಗಬೇಕಿದ್ದ ಕೇಂದ್ರ ಬಜೆಟ್‌ನಲ್ಲಿ ಅಂಥ ಯಾವುದೇ ಅಂಶ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. “ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆಯವರು ಬಜೆಟ್ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ರಾಜ್ಯಕ್ಕೆ ಯಾವುದೇ ನೆರವು ದೊರೆತಿಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದಿಂದ ಆಯ್ಕೆಯಾಗಿ, ರಾಜ್ಯಕ್ಕೆ 2022-23ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆ/ವಿಶೇಷ ನೆರವು ಒದಗಿಸದೇ ನಿರ್ಮಲಾ ಸೀತಾರಾಮನ್ ವಂಚಿಸಿದ್ದಾರೆ. ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ” ಎಂದು ಹೇಳಿದ್ದಾರೆ.
“ರಾಜ್ಯಗಳ ತಲೆ ಮೇಲೆ 1 ಲಕ್ಷ ಕೋಟಿ ಸಾಲ ಕಟ್ಟಿರುವುದೇ ಈ ಬಜೆಟ್ ನ ಸಾಧನೆಯಾಗಿದೆ. ಸ್ಟಾರ್ಟ್ ಅಪ್ ಉತ್ತೇಜಿಸಲು ಯಾವುದೇ ಕ್ರಮವಿಲ್ಲ. ಆದಾಯ ತೆರಿಗೆ ಕಡಿಮೆ ಆಗಿಲ್ಲ. ಫಸಲ್ ಭೀಮಾ ಯೋಜನೆ ನಿಯಮಗಳಲ್ಲಿ ಬದಲಾವಣೆ ಇಲ್ಲ. ಕೃಷಿ ಕನಿಷ್ಠ ಬೆಂಬಲ ಬೆಲೆ ಕೂಡಾ ಇಳಿಸಲಾಗಿದೆ. ಮೂಲಸೌಕರ್ಯಕ್ಕೆ ಇತಿಹಾಸದಲ್ಲೇ ಅತ್ಯಂತ ಕಡಿಮೆ ಹಣ. ಹೀಗಿರುವಾಗ ಇದನ್ನು ಜನಪರ ಎನ್ನುವುದಾದರೂ ಹೇಗೆ?” ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ಬಜೆಟ್ 2022: ಒಕ್ಕೂಟ ಸರ್ಕಾರದ ಮೇಲೆ ಜನರ ನಿರೀಕ್ಷೆಗಳೇನು?


