ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯ ವಿಡಿಯೋ ದೊಡ್ಡಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ. ಅದು ಜನರ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗದೇ ಇದ್ದರೂ ಒಂದು ಸಣ್ಣ ಅಫರ್ಮೆಟಿವ್ ಆಕ್ಷನ್‌ಗೆ ಎಡೆಮಾಡಿಕೊಟ್ಟಿದೆ. ಮಹಿಳೆಯೊಬ್ಬಳು ತನ್ನ ಮೇಲೆ ಕಲ್ಲು ಎಸೆದಳು ಎಂದು ಆರೋಪಿಸಿದ ಒಬ್ಬ ಟ್ರಾಫಿಕ್ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್, ಆಕೆಗೆ ಒದೆಯುವ, ಜುಟ್ಟು ಹಿಡಿದು ಎಳೆಯುವ, ಅತಿ ಕೆಟ್ಟ ಬೈಗುಳಗಳನ್ನು ಬಳಸಿ ನಿಂದಿಸುವ ವಿಡಿಯೋ ಅದು. ಆ ಮಹಿಳೆ ಅಂಗವಿಕಲರಾಗಿದ್ದಾರೆ ಎಂಬುದನ್ನು ಕೂಡ ಲಕ್ಷಿಸದೆ ನಡೆಯುವ ಈ ದೌರ್ಜನ್ಯ ನಾಗರಿಕ ಸಮಾಜವೊಂದು ತಲೆತಗ್ಗಿಸಬೇಕಾದ ದುರಂತ ಎಂದೇ ಹೇಳಬಹುದು. ಆ ಮಹಿಳೆ ಒಂದು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು ಕೂಡ ಆತ ಮಾಡಿದ್ದು ಅತ್ಯಂತ ಹೀನಾಯವಾದ ಕೆಲಸ. ಇದು ಯಾವುದೋ ಒಂದು ಬಿಡಿ ಘಟನೆಯೇನಲ್ಲ. ಇಂತಹ ನೂರಾರು ಘಟನೆಗಳು ದೇಶದಾದ್ಯಂತ ನಡೆಯುತ್ತಲೇ ಇರುತ್ತವೆ!
ಅದಕ್ಕೂ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದ ಕೊರಗ ಸಮುದಾಯದ ಒಂದು ಕುಟುಂಬದ ಮದುವೆ ಸಮಾರಂಭದಲ್ಲಿ ಡಿಜೆ ಹಾಕಿ ಸಂಭ್ರಮಿಸುತ್ತಿದ್ದಾಗ ಅವರ ಮೇಲೆ ಪೊಲೀಸರು ದಾಳಿ ಮಾಡಿದ ಪ್ರಕರಣ ತುಸು ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಕೊರೊನಾ ಮೊದಲ ಲಾಕ್‌ಡೌನ್ ಸಮಯದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಂತಾನ್‌ಕುಳಂ ಪೊಲೀಸರು ಜಯರಾಜ್-ಬೆನಿಕ್ಸ್ (ಅಪ್ಪ-ಮಗ) ಅವರನ್ನು ಅರೆಸ್ಟ್ ಮಾಡಿ, ಲಾಕ್‌ಅಪ್‌ನಲ್ಲಿ ನಡೆದ ಹಲ್ಲೆಯ ಕಾರಣಕ್ಕೆ ಅವರಿಬ್ಬರೂ ಮೃತರಾಗಿದ್ದರು. ಮದ್ರಾಸ್ ಹೈಕೋರ್ಟ್ ಆರೋಪಿತ ಪೊಲೀಸರ ವಿರುದ್ಧ ಸುಮೋಟೋ ದೂರು ದಾಖಲಿಸಿದ ಮೇಲಷ್ಟೇ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈಗ ಸಿಬಿಐ ತನಿಖೆಯಾಗಿ ನ್ಯಾಯಾಲಯ ವಿಚಾರಣೆಯ ಹಂತದಲ್ಲಿದೆ. ಹೀಗೆ ಪೊಲೀಸರ ಹೈಹ್ಯಾಂಡೆಡ್‌ನೆಸ್ ತನಿಖೆಯಾಗುವ, ಮಾಡಿದ ತಪ್ಪಿಗೆ ಶಿಕ್ಷೆಯಾಗುವ ಪ್ರಕರಣಗಳು ವಿರಳಾತಿವಿರಳ. ಇನ್ನೂ ಈ ದೇಶದಲ್ಲಿ ಪೊಲೀಸಿಂಗ್ ಸುಧಾರಣೆ ಆಗಬೇಕೆಂಬ ಕೂಗಿಗೆ ಮನ್ನಣೆ ದೊರೆತದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ದೇಶದ ಬಹುಪಾಲು ಜನ ಸದ್ಯದ ಪೊಲೀಸ್ ವ್ಯವಸ್ಥೆಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಉಪಟಳಕ್ಕೆ ಒಳಗಾಗಿದ್ದರೂ ಅದರ ಸುಧಾರಣೆಯ ವಿರುದ್ಧ ಒಂದು ಒಗ್ಗಟ್ಟಿನ ಧ್ವನಿ ಎದ್ದಿಲ್ಲ ಅಥವಾ ಅದು ಸಾಧ್ಯವಾಗದ ಹಾಗೆ ಇಂದಿನ ವ್ಯವಸ್ಥೆ ನೋಡಿಕೊಂಡು ಬಂದಿದೆ.
ಇಂಗ್ಲಿಷ್ ಪದಗಳಾದ Police, Polite, Politics – ಗ್ರೀಕ್ ಪದ polisನಿಂದ ಹುಟ್ಟಿರುವಂತವು. ಅಲ್ಲಿ ಅದಕ್ಕೆ ಅರ್ಥ ಸಿಟಿ ಅಥವಾ ನಗರ. ಇದರ ಲ್ಯಾಟಿನ್ ಸಮಾನಾರ್ಥಕ civitas. ಇದರಿಂದ ಹುಟ್ಟಿರುವುದು ಸಿವಿಲಟಿ, ಸಿವಿಕ್ ಇತ್ಯಾದಿ ಪದಗಳು. ಇದು ಸಿವಿಲೈಸೇಶನ್ ಅಥವಾ ನಾಗರಿಕತೆ ಪದಗಳ ಮೂಲ. ಬುಡಕಟ್ಟು ಸಮುದಾಯ ಜೀವನದಿಂದ ನಗರೀಕರಣದ ನಾಗರಿಕ ಜೀವನವನ್ನೂ ಅದು ಸೂಚಿಸುತ್ತದೆ. ಹೆಚ್ಚು ಕಡಿಮೆ ನಾಗರಿಕರನ್ನು ಹದ್ದುಬಸ್ತಿನಲ್ಲಿಡುವ ಪರಿಕಲ್ಪನೆಗಳಾಗಿ ಇವುಗಳು ಬದಲಾಗಿ ಹೋಗಿರುವುದು ಸೋಜಿಗ ಮತ್ತು ಅದೇ ಸಮಯದಲ್ಲಿ ದುರಂತದ್ದಾಗಿದೆ. ಕೆಲವು ದೇಶಗಳು ಇದಕ್ಕೆ ಸುಧಾರಣೆಯನ್ನು ಕಂಡುಕೊಳ್ಳಲು ಶ್ರಮಿಸುತ್ತಿದ್ದರೆ ಭಾರತದಲ್ಲಿ ಇವಿನ್ನೂ ನಾಗರಿಕರನ್ನು ಭಯಬೀತಿಗೊಳಿಸುವ ನಿಟ್ಟಿನಲ್ಲಿಯೇ ಇವೆ.
ವಸಾಹತು ಪ್ರಜ್ಞೆಯಿಂದ ಬಿಡಿಸಿಕೊಳ್ಳದ ಪೊಲೀಸ್ ವ್ಯವಸ್ಥೆ
ಬ್ರಿಟಿಷ್ ಆಡಳಿತದಲ್ಲಿ ಜಾರಿಯಾದ ಪೊಲೀಸ್ ವ್ಯವಸ್ಥೆ, ಅಂದಿನ ಸರ್ಕಾರದ ವಿರುದ್ಧ ಜಾರಿಯಲ್ಲಿದ್ದ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಿ ಭಾರತೀಯರನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ರೂಪುಗೊಂಡಿದ್ದು. ಇಂದಿಗೂ ಪೊಲೀಸ್ ವ್ಯವಸ್ಥೆ ಪ್ರಭುತ್ವದ ಆಜ್ಞೆಯನ್ನು ಪಾಲಿಸುವ, ನಾಗರಿಕರ ವಿಶಾಲ ಸಂಕಟಗಳಿಗೆ ಸ್ಪಂದಿಸದೆ ವಸಾಹತುಶಾಹಿ ಪಳೆಯುಳಿಕೆ ಕಾನೂನುಗಳನ್ನು ಪಾಲಿಸುವ ವ್ಯವಸ್ಥೆಯಾಗಿಯೇ ಉಳಿದುಕೊಂಡು ಬಂದಿದೆ. ಇನ್ನು ಅದರಲ್ಲಿನ ಶ್ರೇಣೀಕರಣ ಇದನ್ನೆಲ್ಲಾ ಪೊರೆಯುವಂಥದ್ದು.
ಭಾರತದಲ್ಲಿ ಸೆಡಿಶನ್ ಅಥವಾ ದೇಶದ್ರೋಹಿ ಕಾನೂನನ್ನು ಪರಿಚಯಿಸಿದ ಬ್ರಿಟಿಷ್ ಆಡಳಿತ ತನ್ನ ದೇಶದಲ್ಲಿ ಆ ಕಾನೂನನ್ನು ಇಲ್ಲವಾಗಿಸಿದೆ. ಇಲ್ಲಿ ದಮನಕಾರಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿದ ವಸಾಹತು ಬ್ರಿಟಿಷ್ ತನ್ನ ದೇಶದಲ್ಲಿ ಇದ್ದುದರಲ್ಲಿ ಜನಸ್ನೇಹಿ ಎನ್ನಲಾದ ಪೀಲಿಯನ್ ತತ್ತ್ವಗಳ ಮೇಲೆ ತನ್ನ ಪೊಲೀಸಿಂಗ್‌ಅನ್ನು ರೂಪಿಸಿಕೊಂಡಿದೆ. 1800ರಲ್ಲಿ ರಾಬರ್ಟ್ ಪೀಲ್ ಎಂಬ ಸರ್ಕಾರದ ಆಡಳಿತದಲ್ಲಿದ್ದ ವ್ಯಕ್ತಿ ನೀಡಿದ ತತ್ತ್ವಗಳ ಆಧಾರದಲ್ಲಿ, ಪೊಲೀಸರು ಸಮವಸ್ತ್ರ ಧರಿಸಿದ ನಾಗರಿಕರು ಎಂಬ ಅರ್ಥದಲ್ಲಿ ಅದು ಅಲ್ಲಿ ರೂಪುಗೊಂಡಿದೆ. ’ಪೊಲೀಸಿಂಗ್ ಬೈ ಕನ್ಸೆಂಟ್’ – ಒಪ್ಪಿಗೆಯ ಆಧಾರದಲ್ಲಿ ಪೊಲೀಸಿಂಗ್ ಎಂಬ ತತ್ತ್ವ ತನ್ನೆಲ್ಲಾ ಕಾನೂನು ಪಾಲನೆಯಲ್ಲಿ ನಾಗರಿಕರನ್ನು ಸಾಧ್ಯವಾದಷ್ಟು ತೊಡಗಿಸಿಕೊಳ್ಳಲು ಶ್ರಮಿಸುತ್ತದೆ. ಇಂತಹ ಸುಧಾರಣೆಗಳನ್ನು ಭಾರತದ ಪೊಲೀಸಿಂಗ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾವುದೇ ರಾಜಕೀಯ ನಾಯಕತ್ವವಾಗಲೀ ಮನಸ್ಸು ಮಾಡಿಲ್ಲ. ನಾಗರಿಕ ಸಮಾಜಕ್ಕೂ ಒತ್ತಡ ಹೇರಲು ಸಾಧ್ಯವಾಗಿಲ್ಲ.
ಕೋವಿಡ್ ಸಮಯದಲ್ಲಿ ಕಣ್ಣಿಗೆ ರಾಚಿದ ಕಾನೂನು ಪಾಲನೆಯ ಕ್ರೌರ್ಯ!
ಕೋವಿಡ್ ಮೊದಲ ಲಾಕ್‌ಡೌನ್ ಸಮಯದಲ್ಲಿ ಜನ ಜೀವನೋಪಾಯಗಳನ್ನು ಕಳೆದುಕೊಂಡು ಕಿಲೋಮೀಟರ್‌ಗಟ್ಟಲೆ ಹಸಿವಿನಿಂದ ನಡೆದು ಹೋಗಬೇಕಾದರೆ, ಅವರನ್ನು ಅಲ್ಲಲ್ಲಿ ತಡೆಗಟ್ಟಿ ಹೊಡೆಯುವ, ಕಿರುಕುಳ ನೀಡುವ ಪೊಲೀಸ್ ದೌರ್ಜನ್ಯಗಳ ವಿಡಿಯೋಗಳು ಒಂದರಮೇಲೊಂದರಂತೆ ಬಂದವು. ಅಲ್ಲಲ್ಲಿ ಜನರಿಗೆ ಸಹಾಯ ಮಾಡಿದ ಪೊಲೀಸ್ ವ್ಯಕ್ತಿಗಳು ಬಿಡಿಬಿಡಿಯಾಗಿ ಇರಲಿಲ್ಲವೆಂದಲ್ಲ. ಆದರೆ ಒಂದು ವ್ಯವಸ್ಥೆಯಾಗಿ ಬಡಜನರ, ದೀನರ ಬಗ್ಗೆ ಹೆಚ್ಚು ಸಂಯಮದಿಂದ, ಕರುಣೆಯಿಂದ ನಡೆದುಕೊಳ್ಳಬೇಕಿದ್ದ ಪೊಲೀಸ್ ವ್ಯವಸ್ಥೆಯ ಬಹುತೇಕ ಮಂದಿ ಹೀಗೆ ಒರಟಾಗಿ, ಹೃದಯಶೂನ್ಯವಾಗಿ ನಡೆದುಕೊಂಡಿದ್ದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ಹಾಗೆಯೇ, ಟ್ರಾಫಿಕ್ ಸುವ್ಯವಸ್ಥೆಯ ನೆಪದಲ್ಲಿ ಜನಸಾಮಾನ್ಯರಿಗೆ ಗೋಳು ಹೊಯ್ದುಕೊಳ್ಳುವ ದೂರುಗಳು ಸಾರ್ವಕಾಲಿಕ. ಇತ್ತೀಚೆಗೆ ಡೆಲಿವರಿ ಕೆಲಸ ಮಾಡುವ ಒಬ್ಬ ವ್ಯಕ್ತಿಯ ಬೈಕ್‌ಅನ್ನು ನಿರ್ದಾಕ್ಷಿಣ್ಯವಾಗಿ ಎಳೆದೊಯ್ಯುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಟೋಯಿಂಗ್ ಕಾಂಟ್ರ್ಯಾಕ್ಟ್ ನೌಕರರ ದುರ್ವರ್ತನೆಯ ವಿಡಿಯೋ ಮನಕಲಕುವಂತಿತ್ತು. ಇವೆಲ್ಲಾ, ಇರುವ ಬೆಟ್ಟದಷ್ಟು ಸಮಸ್ಯೆಗಳಲ್ಲಿ, ಪ್ರಕರಣಗಳಲ್ಲಿ ಕಾಣಿಸಿಕೊಳ್ಳುವ ಬೆರಳೆಣಿಕೆಯ ಸಂಗತಿಗಳಷ್ಟೇ.
ಯಾವುದೇ ಸಮಯದಲ್ಲಿ ಪೊಲೀಸರನ್ನು ಕಾಣಲು ಜನಸಾಮಾನ್ಯರು ಹಿಂಜರಿಯುವ ಪರಿಸ್ಥಿತಿ ಇಂದಿಗೂ ಸಾಮಾನ್ಯವಾದುದಲ್ಲವೇ? ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕಾಣುತ್ತಿರುವ ಈ ಸಮಯದಲ್ಲಿಯೂ, ನಮ್ಮದೇ ಪೊಲೀಸ್ ವ್ಯವಸ್ಥೆಯನ್ನು ಕಂಡು ಜನ ಹೆದರುವ ಪರಿಸ್ಥಿತಿ ನಿರ್ಮಾಣವಾಗಿರುವುದೇಕೇ? 2006ರ ಪ್ರಕರಣದ ವಿಚಾರಣೆಯೊಂದರಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆಗೆ ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿದ್ದರೂ ಅವುಗಳು ಜಾರಿಯಾಗಿರುವ ಉದಾಹರಣೆ ಯಾವ ರಾಜ್ಯದಲ್ಲಿಯೂ ಇಲ್ಲ.
ಇನ್ನು ಪ್ರಭುತ್ವಗಳು ಜನರ ಹೋರಾಟಗಳನ್ನು, ಪ್ರತಿಭಟನೆಗಳನ್ನು ನಿಯಂತ್ರಿಸಲು, ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡ ನೂರಾರು ಉದಾಹರಣೆಗಳಿವೆ. ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠೆ ತೋರದೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಂತೆ, ಬಡಜನ, ದೀನ ದಲಿತರು ಮತ್ತು ಮಹಿಳೆಯರ ಜೊತೆಗೆ ವರ್ತಿಸುವಾಗ ಸೂಕ್ಷ್ಮತೆ ತೋರುವಂತೆ, ತಾವೂ ನಾಗರಿಕರೇ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ತರಬೇತು ನೀಡುವ ಮತ್ತು ಸಮಗ್ರ ಸುಧಾರಣೆಯನ್ನು ತರುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.
ಕೆಲವೇ ದಿನಗಳ ಹಿಂದೆ ಅಂಗವಿಕಲ ಮಹಿಳೆಗೆ ಒದ್ದ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಾನುಗೌರಿ ಸೇರಿದಂತೆ ವಿವಿಧ ಜನಪರ ಮಾಧ್ಯಮಗಳು ಒತ್ತಡ ಹೇರಿದ ಮೇಲೆ, ಆ ಎಎಸ್‌ಐಅನ್ನು ಸಸ್ಪೆಂಡ್ ಮಾಡಲಾಗಿದೆ. ಅದಷ್ಟೇ ಸಾಕೇ? ಆತನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕಲ್ಲವೇ? ವಾಹನಗಳ ಟೋಯಿಂಗ್ ಅನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಆದರೆ ಅದು ಮುಂದೊಂದು ದಿನ ಬೇರೊಂದು ರೀತಿಯಲ್ಲಿ ಬರಬಹುದು. ಇದರ ಬದಲು ನಾಗರಿಕರಿಗೆ ಬೇಕಾದ ರೀತಿಯಲ್ಲಿ ಕಾನೂನು ಪಾಲನೆ ಮಾಡುವ, ನಾಗರಿಕರನ್ನು ಒಳಗೊಂಡಂತೆ ಪೊಲೀಸ್ ವ್ಯವಸ್ಥೆ ಸೃಷ್ಟಿಸಿಕೊಳ್ಳಲು ಸಮಗ್ರ ಸುಧಾರಣೆಯ ಅಗತ್ಯವಿದೆ. ಇದಕ್ಕಾಗಿ ನಾಗರಿಕ ಸಮಾಜ ತನಗಿರುವ ಪ್ರಭಾವವನ್ನು ಬಳಸಿ ಒತ್ತಡ ಹೇರಬೇಕಿದೆ.
ಇದನ್ನೂ ಓದಿ: ’ಪ್ರಾಮಾಣಿಕತೆ’ ಕುಚೋದ್ಯಕ್ಕೆ ಒಳಗಾಗುತ್ತಿರುವ ಕಾಲದಲ್ಲಿ ನೆನೆಯಬೇಕಿರುವ ಬಿ.ಜಿ ಹಾರ್ನಿಮನ್


