ಭಾರತದ ಹೆಸರಾಂತ ಪುಸ್ತಕ ಪ್ರಕಾಶನ ಕಂಪನಿ ವೆಸ್ಟ್‌ಲ್ಯಾಂಡ್ ಬುಕ್ಸ್ ಅನ್ನು ಮುಚ್ಚುವುದಾಗಿ ಅಮೆಜಾನ್ ಪ್ರಕಟಿಸಿದ್ದು, ಈ ನಿರ್ಧಾರವನ್ನು ಕಂಪನಿಯ ಹಿರಿಯ ಉದ್ಯೋಗಿಗಳಿಗೆ ಸಿಇಒ ಗೌತಮ್ ಪದ್ಮನಾಭನ್ ಮಂಗಳವಾರ ತಿಳಿಸಿದ್ದಾರೆ.
ಟಾಟಾ ಗ್ರೂಪ್‌ನ ಅಂಗಸಂಸ್ಥೆ ಟ್ರೆಂಟ್ ಲಿಮಿಟೆಡ್‌ನಿಂದ ವೆಸ್ಟ್‌ಲ್ಯಾಂಡ್ ಬುಕ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಐದು ವರ್ಷಗಳ ನಂತರ ಅಮೆಜಾನ್ ಪ್ರಕಟಿಸಿದ ಈ ತೀರ್ಮಾನ ಆಘಾತಕಾರಿ ಬೆಳವಣಿಗೆ ಎಂಬ ಅಭಿಪ್ರಾಯ ಪುಸ್ತಕ ಪ್ರೇಮಿಗಳು ಹಾಗೂ ಬರಹಗಾರರ ವಲಯದಲ್ಲಿ ವ್ಯಕ್ತವಾಗಿದೆ.
ಅಮೆಜಾನ್ 2016ರಲ್ಲಿ ವೆಸ್ಟ್‌ಲ್ಯಾಂಡ್ ಬುಕ್ಸ್ ಅನ್ನು ಖರೀದಿಸಿದಾಗ ಜಾಗತಿಕವಾಗಿ ನಡೆಸುತ್ತಿರುವ ತನ್ನ ಅಮೆಜಾನ್ ಪಬ್ಲಿಷಿಂಗ್‌ನ ಅಡಿ ಇ-ಕಾಮರ್ಸ್ ಮತ್ತು ಇಂಟರ್ನೆಟ್ ಸೇವೆಯ ಮೂಲಕ ಇದರ ಪುಸ್ತಕ ಪ್ರಕಾಶನ ಮಾಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿತ್ತು.
ಅಮೆಜಾನ್, ವೆಸ್ಟ್‌ಲ್ಯಾಂಡ್ ಬುಕ್ ಪಬ್ಲಿಕೇಷನ್ ಅನ್ನು ಬೇರೆಯವರಿಗೆ ಮಾರಾಟ ಮಾಡದೇ ಮುಚ್ಚಲು ಉದ್ದೇಶಿಸಿರುವ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಅಲ್ಲದೇ ವೆಸ್ಟ್‌ಲ್ಯಾಂಡ್ ಬುಕ್ಸ್‌ನ ಉದ್ಯೋಗಿಗಳನ್ನು ಅಮೆಜಾನ್ ಸಂಸ್ಥೆಯ ಸಿಬ್ಬಂದಿಯನ್ನಾಗಿ ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂಬ ಭರವಸೆ ನೀಡಿದೆ.
ಇದನ್ನೂ ಓದಿರಿ: ಕ್ಲಬ್‌ಹೌಸ್‌ನಲ್ಲಿ ಮಹಿಳೆಯರ ವಿರುದ್ಧ ದ್ವೇಷ ಪ್ರಕರಣ: ಮೂವರಲ್ಲಿ ಒಬ್ಬ ಆರೋಪಿಗೆ ಜಾಮೀನು
ಭಾರತ ಮೂಲದ ಪ್ರಕಾಶನ ಸಂಸ್ಥೆಯಾದ ವೆಸ್ಟ್‌ಲ್ಯಾಂಡ್ ಪಬ್ಲಿಕೇಶನ್ ರೂ. 30 ಕೋಟಿ ವಹಿವಾಟು ಹೊಂದಿತ್ತು. ಅಲ್ಲದೇ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ಖ್ಯಾತ ಬಹುರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಾದ ಪೆಂಗ್ವಿನ್ ರಾಂಡಮ್ ಹೌಸ್, ಹಾರ್ಪರ್ ಕಾಲಿನ್ಸ್ ಮತ್ತು ಹ್ಯಾಚೆಟ್ ಗ್ರೂಪ್‌ಗಳಿಗಿಂತ ವಿಭಿನ್ನವೆಂದು ಗುರ್ತಿಸಿಕೊಂಡಿತ್ತು.
ವೆಸ್ಟ್‌ಲ್ಯಾಂಡ್ ಪ್ರಕಾಶನ ಚೇತನ್ ಭಗತ್ ಮತ್ತು ಅಮಿಶ್ ತ್ರಿಪಾಠಿಯವರಂಥ ಹಲವು ಖ್ಯಾತ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದೆ. ಈ ಲೇಖಕರ ಸ್ಥಳೀಯ ಭಾಷೆಯಲ್ಲಿ ಮುದ್ರಣಗೊಂಡ ಪುಸ್ತಕಗಳು ಅತಿ ಹೆಚ್ಚು ಮಾರಾಟವಾದ ನಿದರ್ಶನಗಳಿವೆ. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬಂದ ಅಧ್ಯಯನ ಆಧಾರಿತ ಕೃತಿಗಳ ಹಿನ್ನೆಲೆಯಲ್ಲಿ ಪ್ರಕಾಶನ ಸಂಸ್ಥೆ ಮೇಲೆ ರಾಜಕೀಯ ಒತ್ತಡ ಸೃಷ್ಟಿಯಾಗಲು ಕಾರಣವಿರಬಹುದು ಎಂಬ ವಾದವು ಕೇಳಿಬಂದಿದೆ.
ಕಂಪ್ಯೂಟರ್ ವಿಜ್ಞಾನಿ ಅರವಿಂದ್ ನಾರಾಯಣ್ ಅವರ ಇಂಡಿಯಾಸ್ ಅನ್ ಡಿಕ್ಲೇರ್ಡ್ ಎಮೆರ್ಜೆನ್ಸಿ, ಆಕಾರ್ ಪಟೇಲ್ ಅವರ ಅವರ್ ಹಿಂದು ರಾಷ್ಟ್ರ, ಪ್ರೈಸ್ ಆಫ್ ದಿ ಮೋದಿ ಇಯರ್ಸ್, ಜೋಸಿ ಜೋಸೆಫ್ ಅವರ ದಿ ಸೈಲೆಂಟ್ ಕೂಪ್, ಕ್ರಿಸ್ಟೋಫ್ ಜಾಫರ್ ಲಾಟ್ ಅವರ ಮೋದೀಸ್ ಇಂಡಿಯಾ ಕೃತಿಗಳು ಪ್ರಸ್ತುತ ಸರ್ಕಾರದ ಆಡಳಿತ ವೈಖರಿ ಹಾಗೂ ಜನವಿರೋಧಿ ನಿಲುವುಗಳನ್ನು ಟೀಕಿಸಿದ್ದು ಪರೋಕ್ಷವಾಗಿ ಅಮೆಜಾನ್ ಈ ನಿರ್ಧಾರಕ್ಕೆ ಬರಲು ಕಾರಣವಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಕಾಶನ ಸಂಸ್ಥೆಯೊಂದಿಗೆ ಉತ್ತಮ ಸ್ನೇಹವಿಟ್ಟುಕೊಂಡಿದ್ದ ಹಲವು ಲೇಖಕರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಲೇಖಕ ಆಕಾರ್ ಪಟೇಲ್ ಎಂಟುಎಂ ಮೀಡಿಯಾದೊಂದಿಗೆ ಮಾತನಾಡಿ, “ಹೌದು. ವೆಸ್ಟ್‌ಲ್ಯಾಂಡ್ ಪಬ್ಲಿಕೇಷನ್ ಮುಚ್ಚುತ್ತಿರುವುದು ನಿಜ. ವೆಸ್ಟ್‌ಲ್ಯಾಂಡ್ ಪಬ್ಲಿಕೇಷನ್‌ಗೆ ನಾನು ಪುಸ್ತಕವನ್ನು ಬರೆದಿದ್ದೇನೆ. ಸಂಸ್ಥೆಯೊಂದಿಗೆ ಉತ್ತಮ ಒಡನಾಟವಿತ್ತು. ಆದರೆ ಯಾವ ಕಾರಣಕ್ಕೆ ಪಬ್ಲಿಕೇಷನ್ ಅನ್ನು ಮುಚ್ಚುತ್ತಿದ್ದಾರೆಂಬುದು ನನಗೆ ತಿಳಿಸಿಲ್ಲ. ಆದರೆ ಸೂಕ್ತ ಕಾರಣಕ್ಕೆ ಮುಚ್ಚುತ್ತಿದ್ದಾರೆಂದು ನಾನು ನಂಬಿದ್ದೇನೆ” ಎಂದು ಹೇಳಿದ್ದಾರೆ.
ಡೆಸ್ಪೈಟ್ ದ ಸ್ಟೇಟ್ ಪುಸ್ತಕದ ಲೇಖಕ ಎಂ.ರಾಜಶೇಖರ್ ತಮ್ಮ ಟ್ವೀಟ್‌ನಲ್ಲಿ “ವ್ಯವಹಾರ ಲಾಭದಾಯಕವಾಗಿರದಿದ್ದರೆ ಇದಕ್ಕೆ ಬೇಕಿರುವ ಇತರ ಮಾರ್ಗಗಳನ್ನು ಕಂಡುಕೊಳ್ಳಬಹುದಿತ್ತು. ಅಥವಾ ಖರೀದಿದಾರರನ್ನು ಹುಡುಕಬಹುದಿತ್ತು. ಹೀಗೆ ವೆಸ್ಟ್‌ಲ್ಯಾಂಡ್‌ನ್ನು ಮುಚ್ಚುತ್ತಿರುವುದು ಸರಿಯಲ್ಲ. ಬೇಸರದ ಸಂಗತಿಯಾಗಿದ್ದು, ಒಂದು ರೀತಿಯ ಅನಿಶ್ಚಿತತೆಯನ್ನು ಸೃಷ್ಟಿಸಿದೆ ಮತ್ತು ಹಲವು ಯೋಜನೆಗಳನ್ನು ಹಾಳು ಮಾಡಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರೀತಿ ಶೋನಿ ಎಂಬ ಲೇಖಕಿ, “ವೆಸ್ಟ್‌ಲ್ಯಾಂಡ್ ಬಂದ್ ವಿಚಾರ ಬೇಸರದ ಸಂಗತಿ. ಇದು ಭಾರತದ ಪ್ರಕಾಶನ ಕ್ಷೇತ್ರಕ್ಕಾಗುತ್ತಿರುವ ದೊಡ್ಡ ಹಾನಿ. ನನ್ನ 6 ಪುಸ್ತಕಗಳನ್ನು ಸಂಸ್ಥೆಯೊಂದಿಗೆ ಹೊರತರುವ ನಿರೀಕ್ಷೆಯಲ್ಲಿದ್ದೆ. ಆದರೆ ವೆಸ್ಟ್ ಲ್ಯಾಂಡ್ ತಂಡದೊಂದಿಗೆ ಕೆಲವು ಅದ್ಭುತ ನೆನಪುಗಳಿವೆ. ಅವರು ಬೇರೆ ಸಂಸ್ಥೆಗೆ ಹೋಗುವುದನ್ನು ಊಹಿಸಲು ಕಷ್ಟವಾಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಮನು ಪಿಳ್ಳೈ ಎಂಬ ಲೇಖಕರು “ವೆಸ್ಟ್‌ಲ್ಯಾಂಡ್ ಹೊರತಂದ ಉತ್ತಮ ಪುಸ್ತಕಗಳ ದೊಡ್ಡ ಪಟ್ಟಿಯೇ ಇದ್ದು, ಆ ತಂಡದೊಂದಿಗೆ ಕೆಲಸ ಮಾಡಲು ಸಂತಸವಾಗುತ್ತಿತ್ತು. ಇಂಥ ಯಶಸ್ವಿ ಸಂಸ್ಥೆಯನ್ನು ಮುಚ್ಚುತ್ತಿರುವ ನಿಜವಾದ ಕಾರಣಗಳ ಹಿಂದಿರುವ ಸತ್ಯಗಳು ದೇವರಿಗಷ್ಟೇ ತಿಳಿದಿರಬೇಕು” ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಇಂಗ್ಲಿಷ್ ಪ್ರಕಾಶನ ಸಂಸ್ಥೆಗಳ ಪೈಕಿ ಇದೇ ಮೊದಲ ಬಾರಿಗೆ ಮಾರಾಟ ಮಾಡದೇ ಶಾಶ್ವತವಾಗಿ ಮುಚ್ಚುತ್ತಿರುವುದು ಅಚ್ಚರಿ ಮೂಡಿಸಿದೆ. ಹಲವು ಜನಪ್ರಿಯ, ಮೆಚ್ಚುಗೆ ಪಡೆದ, ವಿಮರ್ಶಾತ್ಮಕ ಬರಹಗಳನ್ನೊಳಗೊಂಡ, ಗೌರವ ಮತ್ತು ಪ್ರಶಸ್ತಿ ಪಡೆದ ಕಾದಂಬರಿಗಳು, ಸಾಹಿತ್ಯ, ರಾಜಕೀಯ, ಸಮಾಜ, ಕಲೆ ಆಧಾರಿತ ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿಗೆ ಸಂಸ್ಥೆಗಿದೆ. ಅಮೆಜಾನ್‌ನ ದಿಢೀರ್ ನಿರ್ಧಾರವನ್ನು ಪುಸ್ತಕ ಲೋಕದ ಓದುಗ ಮತ್ತು ಲೇಖಕ ವರ್ಗ ಅರಗಿಸಿಕೊಳ್ಳಲು ಯತ್ನಿಸುತ್ತಿದೆ.
– ಅನಿತಾ
ಇದನ್ನೂ ಓದಿರಿ: ಶಬರಿಮಲೆ ಭ್ರಷ್ಟಾಚಾರ ಪ್ರಕರಣ: ಸ್ವಯಂ ದೂರು ದಾಖಲಿಸಿದ ಕೇರಳ ಹೈಕೋರ್ಟ್


