ಆಂಟಿಗುವದ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಎದುರು 4 ವಿಕೆಟ್‌ಗಳ ಜಯ ಗಳಿಸುವದರೊಂದಿಗೆ ಭಾರತವು 5ನೇ ಬಾರಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು 190 ರನ್‌ಗಳ ಗುರಿ ನೀಡಿತು. ಭಾರತ ತಂಡವು 47.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶೈಕ್ ರಶೀದ್ 84 ಎಸೆತಗಳಲ್ಲಿ 50 ರನ್ ಗಳಿಸಿದರೆ, ನಿಶಾಂತ್ ಸಿಂಧು 54 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರಲ್ಲಿಯೂ ಕೊನೆಯ ಎಸೆತದಲ್ಲಿ ಸಿಕ್ಸರ್ ಭಾರಿಸುವ ಮೂಲಕ ಭಾರತ ತಂಡ 195 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ತಂಡದ ಜೋಶ್ಹು ಬೋಯ್ಡೆನ್, ಜೇಮ್ಸ್ ಸೇಲ್ಸ್ ಮತ್ತು ಥಾಮಸ್ ಅಸ್ಪಿನ್ವಾಲ್ ತಲಾ ಎರಡು ವಿಕೆಟ್ ಪಡೆದರು.
ಅದಕ್ಕು ಮುನ್ನ ಬೌಲ್ ಮಾಡಿದ ಭಾರತ ತಂಡ ಇಂಗ್ಲೆಂಡ್ ಆಟಗಾರರ ಬೆವರಿಳಿಸಿತು. ರಾಜ್ ಬಾವಾ 31 ರನ್ ನೀಡಿ ಐದು ವಿಕೆಟ್ ಕಬಳಿಸಿದರೆ, ರವಿಕುಮಾರ್ 4 ವಿಕೆಟ್ ಪಡೆದು ಮಿಂಚಿದರು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡ 45 ರನ್‌ಗಳಿಗೆ 5 ವಿಕೆಟ್ ಕಳೆದುಕಂಡು ಸಂಕಷ್ಟದಲ್ಲಿತ್ತು. ಇನ್ನು ಮುಂದುವರಿದು 91 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಆಲೌಟ್ ಹೊಸ್ತಿಲಲ್ಲಿತ್ತು. ಆದರೆ ಆ ಸಮಯದಲ್ಲಿ ಬಂಡೆಯಂತೆ ನಿಂತು ಆಟವಾಡಿದ ಜೇಮ್ಸ್ ರಿವ್ 116 ಎಸೆತಗಳಲ್ಲಿ 95 ರನ್ ಗಳಿಸಿ ತಂಡ ಪೈಪೋಟಿಯುತ ಮೊತ್ತ ತಲುಪಲು ಸಹಕರಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ್ದ ಭಾರತದ ರಾಜ್ ಬಾವಾ ಬ್ಯಾಟಿಂಗ್‌ನಲ್ಲಿಯೂ ಸಹ 35 ರನ್‌ಗಳ ಕಾಣಿಕೆ ನೀಡಿದರು. ಹಾಗಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಈ ಫೈನಲ್ ಪಂದ್ಯದಲ್ಲಿ ಗೆಲುವಿನೊಂದಿಗೆ ಭಾರತ 5 ಬಾರಿ ಪ್ರಶಸ್ತಿ ಪಡೆದ ದಾಖಲೆ ಮಾಡಿತು. ಈ ಮೊದಲು 2000, 2008, 2012, 2018ರಲ್ಲಿ ಭಾರತದ ತಂಡ 19 ವರ್ಷದೊಳಗಿನವರ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಭಾರತ ತಂಡದ ಗೆಲುವಿಗೆ ಶ್ಲಾಘನೆ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 40 ಲಕ್ಷ ರೂಗಳ ಬಹುಮಾನ ಸಹ ಘೋಷಿಸಿದ್ದಾರೆ.
ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ


