ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ಹರಡಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೆ ಕಾರಣವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾಡಿದ ಆರೋಪಕ್ಕೆ ದೆಹಲಿ ಮತ್ತು ಮಹರಾಷ್ಟ್ರ ಸರ್ಕಾರಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮೋದಿ ಸಂಪೂರ್ಣ ಸುಳ್ಳು ಹೇಳುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದರೆ, 5 ರಾಜ್ಯಗಳ ಚುನಾವಣೆಗಾಗಿ ಮೋದಿ ವಾಸ್ತವವನ್ನು ತಿರುಚಿತ್ತಿದ್ದಾರೆ ಎಂದು ಮಹಾರಾಷ್ಟ್ರದ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಹೊಸ ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿದೆ.
“ಪ್ರಧಾನಿಯವರ ಹೇಳಿಕೆ ಸಂಪೂರ್ಣ ಸುಳ್ಳು. ಕೊರೋನಾ ಅವಧಿಯ ಸಂಕಷ್ಟ ಅನುಭವಿಸಿದವರು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ಪ್ರಧಾನಿ ಸಂವೇದನಾಶೀಲರಾಗುತ್ತಾರೆ ಎಂದು ದೇಶ ಭಾವಿಸುತ್ತದೆ. ಜನರ ನೋವಿನಲ್ಲಿ ರಾಜಕೀಯ ಮಾಡುವುದು ಪ್ರಧಾನಿಗೆ ಸರಿಹೊಂದುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
प्रधानमंत्री जी का ये बयान सरासर झूठ है। देश उम्मीद करता है कि जिन लोगों ने कोरोना काल की पीड़ा को सहा, जिन लोगों ने अपनों को खोया, प्रधानमंत्री जी उनके प्रति संवेदनशील होंगे। लोगों की पीड़ा पर राजनीति करना प्रधानमंत्री जी को शोभा नहीं देता। pic.twitter.com/Dd4NsRNGCY
— Arvind Kejriwal (@ArvindKejriwal) February 7, 2022
ನಿನ್ನೆ ಸಂಸತ್ತಿನಲ್ಲಿ ಮೋದಿ, “ವಿರೋಧ ಪಕ್ಷಗಳು ಸಕರಾತ್ಮಕವಾಗಿ ಏನನ್ನು ಮಾಡಲಿಲ್ಲ, ಕೋವಿಡ್ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಿ ಎಂದು ಜನರಿಗೆ ಮನವಿ ಮಾಡಲಿಲ್ಲ, ಆದರೆ ದೇಶಾದ್ಯಂತ ಕೋವಿಡ್ ಹರಡಲು ಅವರ ಕೊಡುಗೆ ಸಾಕಷ್ಟಿದೆ. ಮೊದಲ ಕೋವಿಡ್ ಅಲೆಯಲ್ಲಿ ನಾವು ಲಾಕ್‌ಡೌನ್ ಹೇರಿದ್ದೆವು. ವಿಶ್ವ ಆರೋಗ್ಯ ಸಂಸ್ಥೆಯು ನೀವು ಇರುವಲ್ಲಿಯೇ ಇರಿ ಎಂದು ಎಚ್ಚರಿಕೆ ನೀಡಿತ್ತು. ಆದರೆ ಕಾಂಗ್ರೆಸ್ ಪಕ್ಷವು ತನ್ನ ಮಿತಿಯನ್ನು ದಾಟಿತು. ಅದು ಮುಂಬೈ ರೈಲ್ವೆ ಸ್ಟೇಷನ್‌ನಲ್ಲಿ ವಲಸೆ ಕಾರ್ಮಿಕರಿಗೆ ಟಿಕೆಟ್ ಕೊಡಿಸಿ ದೇಶಾದ್ಯಂತ ವೈರಸ್ ಹರಡಿ ಎಂದು ಹುರಿದುಂಬಿಸಿತು” ಎಂದು ಆರೋಪಿಸಿದ್ದರು.
ಮುಂದುವರಿದು ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳೇ ಕೋವಿಡ್ ಹರಡಲು ಕಾರಣವಾಗಿವೆ. ಅವು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದವು. ದೆಹಲಿ ಸರ್ಕಾರವು ವಾಹನಗಳಲ್ಲಿ ಮೈಕ್ ಹಾಕಿಕೊಂಡು ನಿಮಗಾಗಿ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಸಾರಿತು. ಹಾಗಾಗಿ ಉತ್ತರ ಪ್ರದೇಶ ಸೇರಿದಂತೆ ಯಾವ ರಾಜ್ಯಗಳಲ್ಲಿ ಕೊರೊನಾ ಇರಲಿಲ್ಲವೋ ಅಲ್ಲಿಯೂ ಕೊರೊನಾ ಹರಡಲು ಕಾರಣವಾಯಿತು.ಕೆಲವರು ಕೊರೊನಾ ಮೋದಿಯವರ ವರ್ಚಸ್ಸನ್ನು ಹಾಳು ಮಾಡುತ್ತದೆ ಎಂದು ನಂಬಿದ್ದರು. ಹಾಗಾಗಿಯೇ ಈ ಕೆಲಸ ಮಾಡಿದರು ಎಂದು ನರೇಂದ್ರ ಮೋದಿ ಹೇಳಿದ್ದರು.
ಪ್ರಧಾನಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಹಾಗೂ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ “ಕೇಂದ್ರವು ಯಾವುದೇ ಪೂರ್ವಸಿದ್ದತೆ ಇಲ್ಲದೆ ಲಾಕ್‌ಡೌನ್ ಹೇರುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು ಮತ್ತು ಕಾರ್ಮಿಕರನ್ನು ಸಾಯಲು ಬಿಟ್ಟಿತು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿರುವ ಉತ್ತರ ಪ್ರದೇಶ ಮತ್ತು ಬಿಹಾರದ ನಮ್ಮ ಸಹೋದರರ ಪರಿಸ್ಥಿತಿ ಹದಗೆಟ್ಟಿತು ಮತ್ತು ಅವರು ಹಸಿವಿನಿಂದ ಬಳಲುತ್ತಿದ್ದರು. ಕೊರೋನಾ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಮತ್ತು ಕಾಂಗ್ರೆಸ್ ನೀಡಿದ ಬೆಂಬಲದ ಬಗ್ಗೆ ನಾವು ಹೆಮ್ಮೆಪಡುತ್ತೇವೆ” ಎಂದು ತಿಳಿಸಿದ್ದಾರೆ.
ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ಪ್ರತಿಕ್ರಿಯಿಸಿ, “ದೇಶದಲ್ಲಿ ಕೋವಿಡ್ ಹರಡಲು ನರೇಂದ್ರ ಮೋದಿಯವರೆ ನೇರ ಕಾರಣ. ಅವರು ಫೆಬ್ರವರಿ 2020 ರಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಏರ್ಪಡಿಸಿ ಕೋವಿಡ್ ಹರಡಲು ಕಾರಣರಾದರು. ಅಲ್ಲದೆ ಸೂಕ್ತ ಸಮಯದಲ್ಲಿ ಅಂತರಾಷ್ಟ್ರೀಯ ಗಡಿ ಮತ್ತು ವಿಮಾನ ನಿಲ್ದಾಣಗಳನ್ನು ಮುಚ್ಚಿದ್ದರೆ ಕೊರೊನಾ ಹರಡದಂತೆ ತಡೆಯಬಹುದಿತ್ತು” ಎಂದಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, “ಲಾಕ್‌ಡೌನ್ ಘೋಷಣೆಯಾಗುವ 4 ಗಂಟೆಗಳ ಮೊದಲು, ರೈಲುಗಳು ನಿಂತುಹೋದವು, ಅಂತರರಾಜ್ಯ ಪ್ರಯಾಣವು ಸ್ಥಗಿತಗೊಂಡಿತು. ವಲಸಿಗರು – ಮುಖ್ಯವಾಗಿ ದೈನಂದಿನ ಕೂಲಿ ಕಾರ್ಮಿಕರು ಸಿಕ್ಕಿಹಾಕಿಕೊಂಡರು. ಅವರಿಗೆ ಆಹಾರ ಮತ್ತು ಆಶ್ರಯ ನೀಡಿ ನೋಡಿಕೊಳ್ಳುವುದು ಪ್ರಧಾನಿಯ ದೃಷ್ಟಿಯಲ್ಲಿ ತಪ್ಪಾಗಿದ್ದರೆ, ಮಾನವೀಯತೆಗಾಗಿ ಈ ತಪ್ಪನ್ನು 100 ಬಾರಿ ಮಾಡುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
4 hours before lockdown announced, trains stopped, interstate travel stopped. Migrants- majorly daily wage labourers were left stranded. If looking after them – with food and shelter was wrong in the eyes of the PM, then will make this mistake 100 times over .. for humanity.
— Priyanka Chaturvedi🇮🇳 (@priyankac19) February 7, 2022
ಮೋದಿಯವರ ಸಂಸತ್ತಿನ ಭಾಷಣಕ್ಕೆ ವಿಪಕ್ಷಗಳು ಮಾತ್ರವಲ್ಲದೆ ನಾಗರೀಕರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿಭಾಯಿಸುವಲ್ಲಿ ತಮ್ಮ ಸಂಪೂರ್ಣ ವೈಫಲ್ಯವನ್ನು ಮುಚ್ಚಿಹಾಕಲು ವಿಪಕ್ಷಗಳನ್ನು ಟೀಕಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಒಂದೆಡೆ ವಲಸೆ ಕಾರ್ಮಿಕರಿಗೆ ಉಚಿತ ಟಿಕೆಟ್, ಬಸ್ ವ್ಯವಸ್ಥೆ ಮಾಡಿದ್ದಕ್ಕೆ ಮೋದಿ ವಿಪಕ್ಷಗಳನ್ನು ಕೋವಿಡ್ ಹರಡಲು ಕಾರಣ ಎಂದು ದೂರುತ್ತಿದ್ದಾರೆ. ಅದೇ ಸಂದರ್ಭದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದ ಪ್ರಕಾರ, 2020ರ ಮಾರ್ಚ್-ಜೂನ್ ನಡುವಿನ ಅವಧಿಯಲ್ಲಿ 1 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ದೇಶಾದ್ಯಂತ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಆ ಸಂದರ್ಭದಲ್ಲಿ ಸಾವಿರಾರು ಕಿ.ಮೀ ಅಂತರವನ್ನು ನಡೆದು ಸಾಗುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು.
ಇದನ್ನೂ ಓದಿ: ಕಾಂಗ್ರೆಸ್ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ಮೂಲಕ ದೇಶಾದ್ಯಂತ ಕೊರೊನಾ ಹರಡಿತು: ಪಿಎಂ ಮೋದಿ


