Homeಮುಖಪುಟಬಿಜೆಪಿ ಆಡಳಿತದ ಮಧ್ಯಪ್ರದೇಶ, ಪುದುಚೆರಿಗೂ ವ್ಯಾಪಿಸಿದ ಹಿಜಾಬ್‌ ವಿವಾದ

ಬಿಜೆಪಿ ಆಡಳಿತದ ಮಧ್ಯಪ್ರದೇಶ, ಪುದುಚೆರಿಗೂ ವ್ಯಾಪಿಸಿದ ಹಿಜಾಬ್‌ ವಿವಾದ

- Advertisement -
- Advertisement -

ಭೋಪಾಲ್: ವಿದ್ಯಾರ್ಥಿಗಳು ಹಿಜಾಬ್ ಧರಿಸುವ ವಿವಾದವು ಕರ್ನಾಟಕ ರಾಜ್ಯದ ಗಡಿಯನ್ನು ದಾಟಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶ ಮತ್ತು ಪುದುಚೇರಿಯಲ್ಲಿಯೂ ಇದೇ ವಿವಾದ ಸೃಷ್ಟಿಯಾಗುವ ಸೂಚನೆಗಳು ಬಂದಿವೆ.

ಹಿಜಾಬ್‌‌ ಪರವಾಗಿ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿರುವುದು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಶಾಂತಿಯನ್ನು ಕಾಪಾಡಲು ಹೈಕೋರ್ಟ್ ಸೂಚಿಸಿದೆ. ಇದರ ನಡುವೆ ಮಧ್ಯಪ್ರದೇಶದ ಮಂತ್ರಿಯೊಬ್ಬರು ‘ಶಿಸ್ತು’ ಮತ್ತು ‘ಏಕರೂಪದ ಡ್ರೆಸ್ ಕೋಡ್’ ಬಗ್ಗೆ ನಿಯಮ ರೂಪಿಸುವುದಾಗಿ ಹೇಳಿದ್ದಾರೆ. ಶಾಲೆಯಲ್ಲಿ ಹಿಜಾಬ್‌ ಧರಿಸುವುದನ್ನು ಪುದುಚೆರಿಯಲ್ಲಿ ಶಿಕ್ಷಕನೊಬ್ಬ ಆಕ್ಷೇಪಿಸಿದ್ದಾನೆ. ಇದರ ಕುರಿತು ತನಿಖೆ ನಡೆಸುವಂತೆ ಅರಿಯಾಂಕುಪ್ಪಂನ ಸರ್ಕಾರಿ ಶಾಲೆಯ ಮುಖ್ಯಸ್ಥರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಹಿಜಾಬ್ ಧರಿಸಿರುವುದನ್ನು ವಿರೋಧಿಸಿ ಎಲ್ಲೆಡೆ ಕೇಸರಿಧಾರಿ ವಿದ್ಯಾರ್ಥಿಗಳು ದಾಂಧಲೆ ಮಾಡಿರುವುದನ್ನು ಕಂಡು ಮುಂದಿನ ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಪ್ರೌಢಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಕಳೆದ ತಿಂಗಳು ಉಡುಪಿಯ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸಲು ಕೋರಿದ್ದರಿಂದ ಅಮಾನವೀಯವಾಗಿ ಶಾಲೆಯಿಂದ ಹೊರಗಿಡಲಾಗಿಯಿತು. ಆ ಬಳಿಕ ವಿವಾದ ಉಂಟಾಯಿತು. ಇದೇ ರೀತಿಯ ಅಮಾನವೀಯ ಘಟನೆ ಕುಂದಾಪುರ ಕಾಲೇಜಿನಲ್ಲಿ ಕಂಡು ಬಂದ ಬಳಿಕ ವಿವಾದ ಭುಗಿಲೆದ್ದಿದೆ. ಹಿಜಾಬ್‌ ವಿರೋಧಿಯಾಗಿ ಕೇಸರಿ ಶಾಲು ಧರಿಸಿ ಬರುವ ಮೂಲಕ ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಹಬ್ಬುತ್ತಿದೆ.

ಇದನ್ನೂ ಓದಿರಿ: ಕುಶಾಲನಗರ: ಕೇಸರಿ ಶಾಲು ಹಾಕುವಂತೆ ಒತ್ತಾಯಿಸಿದ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

ಹಿಜಾಬ್ ನಿಷೇಧವನ್ನು ಬೆಂಬಲಿಸಿರುವ ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್, ಸರ್ಕಾರವು ಶಿಸ್ತಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

“ಹಿಜಾಬ್ ಶಾಲಾ ಸಮವಸ್ತ್ರದ ಭಾಗವಲ್ಲ, ಅದಕ್ಕಾಗಿಯೇ ಅದನ್ನು ಶಾಲೆಗಳಲ್ಲಿ ಧರಿಸುವುದನ್ನು ನಿಷೇಧಿಸಬೇಕು. ಜನರು ತಮ್ಮ ಮನೆಗಳಲ್ಲಿ ಸಂಪ್ರದಾಯಗಳನ್ನು ಅನುಸರಿಸಬೇಕು, ಶಾಲೆಗಳಲ್ಲಿ ಅಲ್ಲ. ನಾವು ಶಾಲೆಗಳಲ್ಲಿ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೆಲಸ ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಅಗತ್ಯವಿದ್ದರೆ, ಈ ಬಗ್ಗೆ ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

“ಕೋವಿಡ್ ಮಧ್ಯೆ ಶಾಲೆಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆಯೋ ಎಂಬುದನ್ನು ಗಮನಿಸುವೋ, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದೋ ಅಥವಾ ಕೋಮು ವಿಭಜನೆಯ ಕಾರ್ಯಸೂಚಿಯನ್ನು ಅನುಸರಿಸುವುದೋ? ಯಾವುದು ತಮ್ಮ ಆದ್ಯತೆ ಎಂಬುದನ್ನು ಸಚಿವರು ತಿಳಿಸಬೇಕು” ಎಂದು ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಒತ್ತಾಯಿಸಿದ್ದಾರೆ.

“ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಅವರ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ. ಆದರೆ ಬಿಜೆಪಿ ಸರ್ಕಾರವು ಶಾಲೆಗೆ ಹೋಗುವ ಮಕ್ಕಳನ್ನೂ ಅವರ ಧಾರ್ಮಿಕ ಆಚರಣೆಗಳಿಂದ ವಂಚಿಸಲು ಪ್ರಯತ್ನಿಸುತ್ತಿದೆ. ಸಿಖ್ಖರು ಪೇಟ ಧರಿಸುವುದು ಮತ್ತು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಮೊದಲಿನಿಂದಲೂ ನಡೆದುಬಂದಿದೆ. ಆದರೆ ಈ ಸರ್ಕಾರವು ಈ ಪ್ರಾಚೀನ ಸಂಪ್ರದಾಯಗಳನ್ನು ಕೊನೆಗಾಣಿಸಲು ಬಯಸುತ್ತಿದೆ. ಇದು ಪ್ರಸ್ತುತ ಅಧಿಕಾರದಲ್ಲಿರುವವರ ಮಾನಸಿಕ ದಿವಾಳಿತನವನ್ನು ತೋರುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದರ ನಡುವೆ ಪುದುಚೇರಿಯಲ್ಲಿ, ಶಿಕ್ಷಣ ನಿರ್ದೇಶನಾಲಯದ ವಕ್ತಾರರು, “ವಿದ್ಯಾರ್ಥಿಯು ಧರಿಸಿದ್ದ ಸ್ಕಾರ್ಫ್ ಅನ್ನು ವಿರೋಧಿಸಿದ ಶಿಕ್ಷಕನ ಬಗ್ಗೆ ವಿದ್ಯಾರ್ಥಿ ಗುಂಪುಗಳು ಮತ್ತು ಇತರ ಸಂಘಟನೆಗಳಿಂದ ದೂರುಗಳನ್ನು ಸ್ವೀಕರಿಸಲಾಗಿದೆ” ಎಂದು ಹೇಳಿದ್ದಾರೆ.

“ವಾಸ್ತವವಾಗಿ ಏನಾಯಿತು ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಶಾಲೆಯಿಂದ ವರದಿಯನ್ನು ಸ್ವೀಕರಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು” ಎಂದು ವಕ್ತಾರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಎಡ-ಬೆಂಬಲಿತ ವಿದ್ಯಾರ್ಥಿ ಫೆಡರೇಶನ್ ಆಫ್ ಇಂಡಿಯಾದ ಸ್ಥಳೀಯ ಮುಖ್ಯಸ್ಥರು, “ಬಾಲಕಿ ಕಳೆದ ಮೂರು ವರ್ಷಗಳಿಂದ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದು, ಈಗ ಆಕ್ಷೇಪಣೆ ಏಕೆ ಬಂದಿತು” ಎಂದು ಪ್ರಶ್ನಿಸಿದ್ದಾರೆ.

“ವೀರಂಪಟ್ಟಿನಂ, ಎಂಬಾಲಂ ಮತ್ತು ತಿರುಕನೂರ್‌ನ ಕೆಲವು ಶಾಲೆಗಳು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ ಆರ್‌ಎಸ್‌ಎಸ್‌ ಕಾರ್ಯಚೂಚಿಯನ್ನು ಪ್ರೋತ್ಸಾಹಿಸುತ್ತಿವೆ ಎಂಬ ದೂರುಗಳು ಬಂದಿವೆ” ಅಧಿಕಾರಿ ಹೇಳಿದ್ದಾರೆ.

“ನಾವು ಇದರ ಬಗ್ಗೆ ವಿವರವಾದ ತನಿಖೆಯನ್ನು ಬಯಸುತ್ತೇವೆ. ಅಧಿಕಾರಿಗಳ ವಿಭಾಗದ ಸಕ್ರಿಯ ಪ್ರೋತ್ಸಾಹದೊಂದಿಗೆ ಕೇಸರಿಕರಣವನ್ನು ತಡೆಯುತ್ತೇವೆ” ಎಂದು ಅವರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.


ಇದನ್ನೂ ಓದಿರಿ: ಇದು ಜಾತ್ಯತೀತ ರಾಷ್ಟ್ರ, ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ: ಬಾಲನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...