80ರ ದಶಕ ಕರ್ನಾಟಕ ರಾಜ್ಯ ರೈತಸಂಘ ಹಲವು ಚಳವಳಿಗಳನ್ನು ಕೈಗೊಂಡು ವೇಗವಾಗಿ ಬೆಳೆದ ದಶಕ. ಇದರ ಏಕಮೇವ ನಾಯಕರಾಗಿ ಸ್ಥಾಪಿತರಾದ ಎಂ.ಡಿ ನಂಜುಂಡಸ್ವಾಮಿಯವರು ರಾಜ್ಯದ ಪ್ರಮುಖ ನಾಯಕರಾಗಿ ಗುರುತಿಸಲ್ಪಟ್ಟ ದಶಕ. ಅಷ್ಟೇ ಅಲ್ಲ, ಈ ಚಳವಳಿಗಳಿಗೆ ಸಿಕ್ಕ ಜನ ಬೆಂಬಲದ ಬಲದಿಂದ ದೇಶದಲ್ಲಿ ಮಾತ್ರವಲ್ಲ, ವಿಶ್ವದ ರೈತ ಚಳವಳಿಗಳ ನಾಯಕರೊಬ್ಬರಾಗಿ ಬೆಳೆದರು. ಕೃಷಿಯ ಹಾಗೂ ರೈತರ ಸಮಸ್ಯೆಗಳ ಅಧ್ಯಯನ ಮತ್ತು ವಿಶ್ಲೇಷಕರಾಗಿ ರಾಜ್ಯದ, ದೇಶದ ಒಳಗೆ ಮತ್ತು ಹೊರಗೆ ಮಾನ್ಯರಾದರು.
ಹೀಗಾಗಿ ಕರ್ನಾಟಕ ರಾಜ್ಯ ರೈತಸಂಘದ ಬೆಳವಣಿಗೆಗೆ ನಂಜುಂಡಸ್ವಾಮಿಯವರ ನಾಯಕತ್ವವೇ ಕಾರಣ ಎಂಬುದು ರೈತ ಸಂಘದ ಒಳಗೂ ಹೊರಗೂ ಇರುವ ಸರ್ವೆಸಾಮಾನ್ಯ ಅಭಿಪ್ರಾಯ.
ಮುಂದೆ ರೈತಸಂಘದ ಹೋರಾಟಗಳು ಇಳಿಮುಖಗೊಂಡದ್ದರ ಮತ್ತು ರೈತಸಂಘ ವಿಘಟನೆಯಾದುದರ ಹೊಣೆಯನ್ನೂ ಕೂಡಾ ಅನೇಕ ಜನರು ಅವರ ತಲೆಗೇ ಕಟ್ಟುತ್ತಾರೆ. ರೈತಸಂಘದ ಹಲವು ನಾಯಕರು ಹಾಗೂ ಹೊರಗಿನಿಂದ ಬೆಂಬಲಿಸುತ್ತಿದ್ದ ಅಭಿಮಾನಿಗಳೂ ಹತಾಶೆ, ತಳಮಳಗಳಿಂದ ಇದನ್ನು ತಮ್ಮ ಬರಹ-ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗೆ ಎರಡೂ ಬಗೆಯ ಅಭಿಪ್ರಾಯಗಳಿವೆ. ಅದರಲ್ಲಿ ಕೆಲವರು ನಂಜುಂಡಸ್ವಾಮಿಯವರನ್ನು ಆರಾಧನಾ ಮನೋಭಾವದಿಂದ ನೋಡುತ್ತಾ, ಅವರ ಮಾತು, ವಿಶ್ಲೇಷಣೆ, ಮುನ್ನುಗ್ಗುವ ಪರಿ, ನಾಯಕತ್ವದ ಗುಣಗಳನ್ನು ಎತ್ತಿಹಿಡಿದು ರೈತ ಸಂಘದ ಸಮಸ್ಯೆಗಳೆಲ್ಲವನ್ನೂ ಬೇರೆಯವರ ತಲೆಗೇ ಕಟ್ಟುತ್ತಾರೆ. ಇನ್ನೂ ಕೆಲವರು ನಂಜುಂಡಸ್ವಾಮಿಯವರ ಬಗೆಗಿನ ಟೀಕೆಯನ್ನೇ ಪ್ರಧಾನವಾಗಿಸುತ್ತಾರೆ. ಈ ಎರಡೂ ರೀತಿಗಳೂ ರೈತ ಚಳವಳಿಯ, ಒಟ್ಟಾರೆ ಸಾಮಾಜಿಕ ಚಳವಳಿಯ ಬೆಳವಣಿಗೆಗೆ ಸಹಾಯಕವಲ್ಲ.
ಈ ಎರಡು ದಶಕಗಳಲ್ಲಿ ರೈತರ ಒಟ್ಟಾರೆ ಪರಿಸ್ಥಿತಿ, ಕರ್ನಾಟಕ ರಾಜ್ಯ ರೈತಸಂಘದ ಸ್ವರೂಪ, ಅದರ ಬೆಳವಣಿಗೆ, ತೆಗೆದುಕೊಂಡ, ತೆಗೆದುಕೊಳ್ಳದ ಸಮಸ್ಯೆಗಳು, ಹೋರಾಟದ ವಿಧಾನಗಳು, ಪರಿಣಾಮಗಳು, ರೈತರ ಸ್ಪಂದನೆಗಳು, ಆಳುವವರ ಪ್ರತಿಕ್ರಿಯೆ – ಇವುಗಳನ್ನು ಇತರ ರೈತ ಚಳವಳಿಗಳು, ದಲಿತ ಮೊದಲಾದ ಚಳವಳಿಗಳು, ರಾಜಕೀಯ ಬೆಳವಣಿಗೆಗಳು, ಆಳುವ ಸರ್ಕಾರಗಳು ಅನುಸರಿಸಿದ ಧೋರಣೆಗಳು ಇವುಗಳ ಹಿನ್ನೆಲೆಯಲ್ಲಿ ಅಧ್ಯಯನ-ವಿಶ್ಲೇಷಣೆ ಮಾಡಬೇಕಾಗಿದೆ. ಇವೆಲ್ಲವುಗಳಲ್ಲಿ ನಂಜುಂಡಸ್ವಾಮಿಯವರ ಪಾತ್ರ, ಅವರ ನಾಯಕತ್ವದ ವೈಶಿಷ್ಟ್ಯ, ಅವರ ಅಧ್ಯಯನ-ವಿಶ್ಲೇಷಣಾ ಸಾಮರ್ಥ್ಯ, ಅವರ ಮಿತಿಗಳು ಇವುಗಳೆಲ್ಲದರ ಬಗ್ಗೆ ಒಂದು ಸಮಗ್ರವಾದ ಮತ್ತು ವಸ್ತುನಿಷ್ಠವಾದ ಅಧ್ಯಯನ-ವಿಶ್ಲೇಷಣೆ ಮಾಡಿದಾಗ ಮಾತ್ರ ರೈತ ಚಳವಳಿಗೂ, ಇತರ ಯಾವುದೇ ಸಾಮಾಜಿಕ ಚಳವಳಿಗಳಿಗೂ ಮಾತ್ರವಲ್ಲದೇ ಕರ್ನಾಟಕದ ಇತಿಹಾಸಕ್ಕೂ ಮುಖ್ಯ ಕೊಡುಗೆಯಾಗುತ್ತದೆ. ಚಳವಳಿಗಳ ಮುನ್ನಡೆಗೆ ಸಹಾಯವಾಗುತ್ತದೆ.
ರಾಜ್ಯ ರೈತಸಂಘದ ಕೆಲ ಹೋರಾಟಗಳು, ಘಟನೆಗಳನ್ನು ಮತ್ತು ಅವುಗಳಲ್ಲಿ ನಂಜುಂಡಸ್ವಾಮಿಯವರ ಪಾತ್ರವನ್ನು ವಿವರಿಸುವ ಹಲವು ಲೇಖನಗಳು ಇವೆ. ವಿ.ವಿ.ಗಳಿಂದ ಮೂರು ನಾಲ್ಕು ಅಧ್ಯಯನ ಅಥವಾ ಪುಸ್ತಕಗಳು ಹೊರಬಂದಿದ್ದರೂ, ಅವುಗಳಲ್ಲಿ ಹಲವು ರೈತ ಸಂಘದ ಆರಂಭದ ಬೆಳವಣಿಗೆ ಮತ್ತು ಹೋರಾಟಗಳನ್ನು ಮಾತ್ರ ವಿಶ್ಲೇಷಿಸುವುದಕ್ಕೆ ಹೆಚ್ಚು ಗಮನ ನೀಡಿವೆ. ಮತ್ತೆ ಕೆಲವು ಅಕಾಡೆಮಿಕ್ ಲೋಕದ ಸೋಮಾರಿತನದ ಕಾಣಿಕೆಯಾಗಿವೆ ಅಥವಾ ಪಕ್ಷಪಾತದಿಂದ ಕೂಡಿವೆ.
ಹಸಿರು ಕ್ರಾಂತಿ ಮತ್ತು 80ರ ದಶಕದ ಚಳವಳಿಗಳು
ಅರವತ್ತರ ದಶಕದ ಮಧ್ಯಭಾಗದಿಂದ ಆರಂಭವಾಗಿ ಎಪ್ಪತ್ತರ ದಶಕದಲ್ಲಿ ವ್ಯಾಪಕವಾದ ಹಸಿರುಕ್ರಾಂತಿಯೇ 80ರ ದಶಕದ ರೈತ ಚಳವಳಿಗಳ ಹುಟ್ಟಿನ ಮೂಲ ಎಂಬುದು ಸರಿಸುಮಾರು ಎಲ್ಲರೂ ಒಪ್ಪುವ ಮಾತು.
ಹಸಿರುಕ್ರಾಂತಿಯ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಮತ್ತು ನರಗುಂದ- ನವಲಗುಂದ ರೈತ ಬಂಡಾಯ, ನಂತರ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಹಬ್ಬಿದ ಚಳವಳಿಗಳ ಬಗ್ಗೆ ಈಗಾಗಲೇ ನ್ಯಾಯಪಥದ 29.12.21 – 19.1.22 – 26.1.22ರ ಸಂಚಿಕೆಗಳಲ್ಲಿ ವಿವರಿಸಿದ್ದೇನೆ.
ಮಲಪ್ರಭಾ ನೀರಾವರಿ ಪ್ರದೇಶದಲ್ಲಿ ನೀರಾವರಿ ತೆರಿಗೆ ಏರಿಕೆ ಮತ್ತು ಹತ್ತಿ, ಮುಸುಕಿನ ಜೋಳದ ಬೆಲೆ ಕುಸಿತದಿಂದ ರೈತರಲ್ಲಿ ಬೇಯುತ್ತಿದ್ದ ಸಿಟ್ಟಿಗೆ ಮಲಪ್ರಭಾ ನೀರಾವರಿ ರೈತ ಸಮನ್ವಯ ಸಮಿತಿ ಮೂಲಕ ಸಂಘಟಿತ ರೂಪ ಕೊಟ್ಟ ಸಲುವಾಗಿ ಅದು ದೊಡ್ಡದಾಗಿ ಸ್ಫೋಟಗೊಂಡಿತು. ಅದರ ನಂತರ ರಾಜ್ಯಾದ್ಯಂತ ನಾಲ್ಕಾರು ತಿಂಗಳ ಕಾಲ ಎದ್ದ ಚಳವಳಿಯ ಅಲೆ ತಂತಾನೆ ಸ್ಫೋಟಗೊಂಡಿತು. ಈ ಸ್ಫೋಟಗಳಿಗೆ ಯಾರೂ ನಾಯಕರಿರಲಿಲ್ಲ. ಇಂತಹ ಹೋರಾಟಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ರೂಪುಗೊಂಡಿತು.
ಇದೇ ರೀತಿ ಹಸಿರು ಕ್ರಾಂತಿಯ ರೈತರ ಸಿಟ್ಟು ಸ್ಫೋಟಗೊಂಡ ಪರಿಣಾಮ ಮಹಾರಾಷ್ಟ್ರದ ಶೇತ್ಕರಿ ಸಂಘಟನ, ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್, ಪಂಜಾಬಿನ ಭಾರತೀಯ ಕಿಸಾನ್ ಯೂನಿಯನ್ ಇತ್ಯಾದಿ ಹುಟ್ಟಿದವು. 80ರ ದಶಕದಲ್ಲಿ ವೇಗದ ಮತ್ತು ಏರುಮುಖದ ಬೆಳವಣಿಗೆ ಕಂಡವು. ಆಯಾ ಪ್ರದೇಶದಲ್ಲಿ ಅವುಗಳದ್ದೇ ಆದ ಪರಿಣಾಮ ಬೀರಿದವು. ಹಾಗೆಯೇ ಸರಿಸುಮಾರು ಇವೆಲ್ಲವೂ 80ರ ದಶಕದ ಕೊನೆಯಲ್ಲಿ ಇಳಿಮುಖಗೊಳ್ಳಲಾರಂಭಿಸಿದವು. ಈ ಸಮಯದಲ್ಲಿಯೇ ಒಡೆಯಲಾರಂಭಿಸಿದವು. ಮುಂದುವರಿದು, 90ರ ದಶಕದ ಮಧ್ಯ ಭಾಗದ ವೇಳೆಗೆ ತೀರಾ ಕುಗ್ಗುತ್ತಾ ಬಂದವು. ಈ ಚಳವಳಿಗಳ ನಾಯಕರ ವ್ಯಕ್ತಿತ್ವ, ತಿಳಿವಳಿಕೆ, ಗುಣದೋಷಗಳಲ್ಲಿ ಗಣನೀಯ ಭಿನ್ನತೆ ಇದ್ದರೂ (ಕೆಳಗೆ ಕೆಲ ನಾಯಕರ ಉದಾಹರಣೆ ನೀಡಲಾಗಿದೆ) ಹುಟ್ಟಿನಲ್ಲಿ, ಬೆಳವಣಿಗೆಯಲ್ಲಿ ಮಾತ್ರವಲ್ಲದೆ ಇಳಿಮುಖತೆ, ಒಡಕುಗಳಲ್ಲಿಯೂ ಈ ಸಂಘಟನೆಗಳ ನಡುವೆ ಅಚ್ಚರಿ ಎನ್ನಿಸುವ ಸಾಮ್ಯತೆ ಇದೆ. ತಮಿಳುನಾಡಿನ ವ್ಯವಸಾಯಿಗಳ್ ಸಂಘ ಮಾತ್ರ 70ರ ದಶಕದಲ್ಲಿಯೇ ಬೆಳೆದಿತ್ತು. ಹಾಗೆಯೇ 80ರ ದಶಕದ ಮಧ್ಯ ಭಾಗದಲ್ಲಿಯೇ ಅದರ ಉರುಬು ತಗ್ಗಿತು.
ಈ ಚಳವಳಿ, ಸಂಘಟನೆಗಳ ಬೆಳವಣಿಗೆಯಲ್ಲಿ ಇರುವ ಸಮಾನ ಅಂಶಗಳನ್ನು ಪರಿಗಣಿಸದೆ ಒಂದೊಂದು ಸಂಘಟನೆಯನ್ನೇ ಪ್ರತ್ಯೇಕ ಪ್ರತ್ಯೇಕವಾಗಿ ಪರಿಗಣಿಸಿದರೆ ಈ ಸಂಘಗಳ ಹುಟ್ಟು, ಬೆಳವಣಿಗೆ, ಇಳಿಮುಖ ಯಾವುದನ್ನೂ ಅರ್ಥೈಸಿಕೊಳ್ಳಲಾಗುವುದಿಲ್ಲ.
ಆದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘವನ್ನೂ ಅದರ ಹುಟ್ಟು, ಬೆಳವಣಿಗೆಗಳನ್ನು ಈ ಅಲೆಯ ಭಾಗವಾಗಿ, ಈ ಎಲ್ಲ ರೈತ ಸಂಘಟನೆಗಳು ಮತ್ತು ಅದರ ನಾಯಕತ್ವದ ಜೊತೆಜೊತೆಯಲ್ಲಿಯೇ ಅಧ್ಯಯನ ಮಾಡಬೇಕು. ಆಗ ಮಾತ್ರ ನಂಜುಂಡಸ್ವಾಮಿಯವರ ಮೇಲೆಯೇ ಅದರ ಒಡಕು, ಕುಗ್ಗುವಿಕೆಗಳ ಹೊಣೆಯ ಭಾರವನ್ನೆಲ್ಲಾ ಹೊರಿಸದೆ ಒಂದು ವಸ್ತುನಿಷ್ಠ ವಿಶ್ಲೇಷಣೆ ಸಾಧ್ಯ.
ಭಿನ್ನ ವ್ಯಕ್ತಿತ್ವದ ವಿಭಿನ್ನ ನಾಯಕರು
ಈ ಚಳವಳಿಗಳ ನಾಯಕರಲ್ಲಿ ಒಬ್ಬೊಬ್ಬರೂ ಬೇರೆಬೇರೆ ಹಿನ್ನೆಲೆಯವರು, ಬೇರೆಬೇರೆ ರೀತಿಯಲ್ಲಿ ಬೆಳೆದವರು, ಬೇರೆಬೇರೆ ಸ್ವಭಾವದವರು. ವಿಭಿನ್ನ ಚಿಂತನೆಯವರು.
ನಂಜುಂಡಸ್ವಾಮಿಯವರ ದಿಟ್ಟತನದ ಹೋರಾಟಗಳ ಬಗ್ಗೆ ಬಹಳಷ್ಟು ಜನಕ್ಕೆ ತಿಳಿದಿದೆ. ಅವರು ಒಬ್ಬ ಗ್ರಾಮೀಣ ಭಾಗದ ಶ್ರೀಮಂತರ ಮನೆತನದವರು. ನೂರಾರು ಎಕರೆ ಭೂಮಿಯ ಒಡೆತನವುಳ್ಳ ಕುಟುಂಬ, ತಂದೆ ಹಲವು ಅವಧಿಗೆ ಶಾಸಕರಾಗಿದ್ದವರು. ಈ ಮನೆತನ ಜಸ್ಟಿಸ್ ಪಾರ್ಟಿ, ಒಡೆಯರ ಕಾಲದ ಮೀಸಲಾತಿ ಚಳವಳಿ, ಪ್ರಜಾ ಸೋಷಿಯಲಿಸ್ಟ್ ಪಕ್ಷ ಮೊದಲಾದವುಗಳ ಸಂಪರ್ಕವಿದ್ದವರು. ನಂಜುಂಡಸ್ವಾಮಿಯವರು ವಿಜ್ಞಾನದ ಪದವಿ ಮುಗಿಸಿ ಕಾನೂನು ಪದವೀಧರರಾದರು. ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಬಗ್ಗೆ ಉನ್ನತ ವಿದ್ಯಾಭ್ಯಾಸ ಮಾಡಲು ಹೋದವರು. ರೈತರ ಪರಿಸ್ಥಿತಿ ಬಗೆಗಿನ ಕಾಳಜಿಯಿಂದ ಕೃಷಿಯಲ್ಲಿ ತೊಡಗಿಕೊಂಡರು. ನಂತರ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಲೋಹಿಯವಾದದ ಸೆಳೆತಕ್ಕೆ ಒಳಗಾಗಿ ಸಮಾಜವಾದಿ ಯುವಜನ ಸಭಾದ ಕಾರ್ಯದರ್ಶಿಯಾಗಿ ಸಮಾಜವಾದಿ ಪಕ್ಷದ ಹಿರಿಯ ನಾಯಕರ ವಿರುದ್ಧ ದಂಗೆ ಎದ್ದು ಬೇರೆಯೇ ಸಮಾಜವಾದಿ ಯುವಜನ ಸಭಾ ಕಟ್ಟಿ ಹಲವು ಹೋರಾಟಗಳನ್ನು ಮಾಡಿದವರು. ಲಂಕೇಶ್, ತೇಜಸ್ವಿ, ಚಂಪಾ, ಕಿರಂ, ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಮೊದಲಾದ ಸಾಹಿತಿಗಳನ್ನು ಹೋರಾಟಗಳಿಗೆ ಸೆಳೆದವರು ಮತ್ತು ಅದರಲ್ಲಿ ಅವರನ್ನು ತೊಡಗಿಸಿದವರು. ಅನೇಕ ಪ್ರಗತಿಪರ ವೈಚಾರಿಕ ಚಳವಳಿಗಳ ಭಾಗವಾದವರು. ಈ ಎಲ್ಲ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವ, ಅವರ ಗುಣ ಸ್ವಭಾವಗಳು ರೂಪುಗೊಂಡಿದ್ದವು. ಹೋರಾಟಗಳ ಅನುಭವವೂ, ವೈಚಾರಿಕತೆಯ ಪರಿಚಯ ಇದರೊಡನೆ ಮೇಳವವಾಗಿತ್ತು.
ಮೊದಲೇ ರೈತರ ಕೆಲ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದರೂ ಕೂಡ 1980ರ ನಂತರ ರೈತ ಚಳವಳಿಗೆ ಧುಮುಕಿ ಸರಿಸುಮಾರು ಅದರಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡರು.

ಇನ್ನು ಶರದ್ ಅನಂತ ಜೋಷಿಯವರು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುತ್ತಿದ್ದ ಒಬ್ಬ ವಿದ್ಯಾರ್ಥಿ. ಐ.ಎ.ಎಸ್ ಜೊತೆಯ ಪರೀಕ್ಷೆಯಲ್ಲಿ ಪಾಸಾಗಿ ಐಆರ್‌ಎಸ್ ಹುದ್ದೆಯಲ್ಲಿ ಕೆಲಸ ಮಾಡಿ ವಿಶ್ವಸಂಸ್ಥೆಯ ಒಂದು ಅಧೀನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ರೈತರ ಪರಿಸ್ಥಿತಿ ಸುಧಾರಿಸಲೆಂದೇ ಭಾರತಕ್ಕೆ ಮರಳಿ ಭೂಮಿ ಕೊಂಡು ಬೇಸಾಯ ಆರಂಭಿಸಿ 1979ರಲ್ಲಿ ಶೇತ್ಕರಿ ಸಂಘಟನೆ ಆರಂಭಿಸಿದವರು. ಅವರೂ ಕೂಡ 80ರ ದಶಕದ ಆರಂಭದಲ್ಲಿ ಪ್ರಬಲ ಹೋರಾಟಗಳನ್ನು ಕಟ್ಟಿದವರು. ನಂಜುಂಡಸ್ವಾಮಿಯವರಂತೆಯೇ ಉತ್ತಮ ಭಾಷಣಕಾರರು. ಅರ್ಥಶಾಸ್ತ್ರದ ವಿಷಯಗಳನ್ನು ಸರಳವಾಗಿ ರೈತರಿಗೆ ಹೇಳುವ ಕಲೆ ಕರಗತ ಮಾಡಿಕೊಂಡವರು. ಯಾವುದೇ ಪ್ರಗತಿಪರ ವೈಚಾರಿಕತೆ, ಹೋರಾಟಗಳ ಅನುಭವವೇನೂ ಇಲ್ಲದೆ ರೈತ ಚಳುವಳಿಗೆ ಧುಮುಕಿದವರು.
ಮಹೇಂದ್ರ ಟಿಕಾಯತ್‌ರವರು ಪಕ್ಕಾ ಗ್ರಾಮೀಣ ರೈತಾಪಿ ಕುಟುಂಬದವರು. ಜಾಟ್ ಎಂಬ ರೈತ ಜಾತಿಯ ಖಾಪ್ (ಜಾತಿ) ಪಂಚಾಯತಿ ಮುಖ್ಯಸ್ಥರಾಗಿ ಜಾಟ್ ಜಾತಿಯ ರೈತರ ಮೇಲೆ ಹಿಡಿತ ಹೊಂದಿದ್ದವರು. ರೈತರದೇ ಉಡುಪು, ಮುಖಭಾವ ಮತ್ತು ವರ್ತನೆ. ರೈತ ಹೋರಾಟದ ವೇದಿಕೆಗಳಲ್ಲೂ ಹುಕ್ಕಾ ಸೇದುತ್ತಾ ಬೇರೆಯವರಿಗೂ ಸೇದಿಸುತ್ತಿದ್ದವರು. ಮನೆಗೆ ಬಂದವರೆಲ್ಲರಿಗೆ ಊಟ ಮೊದಲು, ನಂತರ ಮಾತು ಎನ್ನುವ ಸ್ವಭಾವ. ಗ್ರಾಮೀಣ ತತ್ವಜ್ಞಾನಿಯಂತೆ ಮಾತಾಡುತ್ತಿದ್ದವರು. ಬಾಬಾ ಅಥವಾ ಸಂತ ಎಂದೇ ಖ್ಯಾತಿ. ಅಲ್ಪ ಕಾಲ ಪ್ರಧಾನಿಯಾಗಿದ್ದ ಜಾಟ್ ನಾಯಕ ಚೌಧುರಿ ಚರಣ ಸಿಂಗರ ಪ್ರಭಾವದಲ್ಲಿ ಬೆಳೆದವರು. ಚರಣ್ ಸಿಂಗ್‌ರವರು ಸ್ಥಾಪಿಸಿದ ಭಾರತ ಕಿಸಾನ್ ಯೂನಿಯನ್‌ಅನ್ನು ಅವರು ಅನಾರೋಗ್ಯದಿಂದ ನಿಷ್ಕ್ರಿಯರಾದ ನಂತರ ತಮ್ಮ ಊರಿಗೇ ವರ್ಗಾಯಿಸಿ ಅದರ ನಾಯಕತ್ವ ವಹಿಸಿದವರು.
ಹೀಗೆ ಭೂಪೀಂದ್ರ ಸಿಂಗ್ ಮಾನ್ ರಾಜೇವಾಲ್ ಮತ್ತಿತರ ನಾಯಕರ ವಿಭಿನ್ನ ಹಿನ್ನೆಲೆ, ವೈಶಿಷ್ಟ್ಯಗಳನ್ನು ವಿವರಿಸುತ್ತಾ ಹೋಗಬಹುದು. ಈ ವಿವರಣೆಯ ಉದ್ದೇಶ ಈ ನಾಯಕರೆಲ್ಲ ಎಷ್ಟೊಂದು ಭಿನ್ನ ಹಿನ್ನೆಲೆಯವರು ಎಂಬುದನ್ನು ಗುರುತಿಸಲು. ಆದರೆ ಈ ಭಿನ್ನತೆಗಳು ಆಗಲೇ ಹೇಳಿದಂತೆ ಸಂಘಟನೆಗಳ ಬೆಳವಣಿಗೆ, ಇಳಿಮುಖದ ಪ್ರಕ್ರಿಯೆಗಳಲ್ಲಿ ಮಾತ್ರವಲ್ಲ ಇವರು ಕೈಗೆತ್ತಿಕೊಂಡ ರೈತ ಸಮಸ್ಯೆಗಳು, ಹೋರಾಟದ ವಿಧಾನಗಳು, ಕೊಟ್ಟ ಘೋಷಣೆಗಳು, ಎಲ್ಲ ರಾಜಕೀಯ ಪಕ್ಷಗಳನ್ನು ಕೀಳ್ಗಳೆಯುವ, ರಾಜಕೀಯ ನಾಯಕರ ಬಗ್ಗೆ, ಅಧಿಕಾರಿಗಳ ಬಗ್ಗೆ ಖಡಕ್ಕಾಗಿ, ಕೆಲವೊಮ್ಮೆ ನಿಂದಿಸಿ ಮಾತಾಡುವ ಶೈಲಿ, ಮೊದಮೊದಲು ಚುನಾವಣೆಯ ನಿರಾಕರಣೆ, ನಂತರ ರಾಜಕೀಯ ಪಕ್ಷಗಳಿಗೆ ಬೆಂಬಲ ಅಥವಾ ತಾವೇ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ಹಿಡಿವ ಹಂಬಲ, ದೇಶದ ಬೇರೆ ರೈತ ಸಂಘಟನೆಗಳನ್ನೂ ಕಡೆಗಣ್ಣಿನಿಂದ ನೋಡುವುದು, ತಾವೇ ಒಂದು ರಾಷ್ಟ್ರೀಯ ಒಕ್ಕೂಟ ಮಾಡಿಕೊಂಡಿದ್ದು ಇಂತಹ ಅನೇಕ ಸಾಮ್ಯತೆಗಳಿಗೇನೂ ಅಡದಡಿಯಾಗಲಿಲ್ಲ.
(ಈ ಅಂಶಗಳ ಬಗ್ಗೆ, ಅದರ ಪರಿಣಾಮಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ..)

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.
ಇದನ್ನು ಓದಿ: ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್


