ಪ್ರೊ ಕಬಡ್ಡಿ ಲೀಗ್ ಹಂತದ ಕೊನೆಯ ಮೂರು ಪಂದ್ಯಗಳು ಇಂದು ನಡೆಯಲಿವೆ. ಈಗಾಗಲೇ ಪಟ್ನಾ ಪೈರೇಟ್ಸ್, ದಬಾಂಗ್ ಡೆಲ್ಲಿ ಮತ್ತು ಯು.ಪಿ ಯೋಧ ತಂಡಗಳು ಪ್ಲೇ-ಆಫ್ ಪ್ರವೇಶಿಸಿವೆ. ತೆಲುಗು ಟೈಟನ್ಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ ಮತ್ತು ತಮಿಳು ತಲೈವಾಸ್ ತಂಡಗಳು ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿವೆ. ಪ್ಲೇ-ಆಫ್ ನ ಉಳಿದ ಮೂರು ಸ್ಥಾನಕ್ಕಾಗಿ ಬೆಂಗಳೂರು ಬುಲ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಹರಿಯಾಣ ಸ್ಟೀಲರ್ಸ್, ಗುಜರಾತ್ ಜೈಂಟ್ಸ್ ಮತ್ತು ಪುಣೇರಿ ಪಲ್ಟನ್ ಸೇರಿ ಐದು ತಂಡಗಳು ಪೈಪೋಟಿ ನಡೆಸುತ್ತಿವೆ.
ಅಂಕಪಟ್ಟಿ ಲೆಕ್ಕಾಚಾರ
ಕಬಡ್ಡಿ ಅಂಕಪಟ್ಟಿಯ ಮೊದಲ ಮೂರು ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ (81 ಅಂಕ) ದಬಾಂಗ್ ಡೆಲ್ಲಿ(75 ಅಂಕ) ಮತ್ತು ಯುಪಿ ಯೋಧ (68 ಅಂಕ) ಈಗಾಗಲೇ ಪ್ಲೇ-ಆಫ್ ತಲುಪಿವೆ. ಆದರೆ, 4ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಈಗಾಗಲೇ ತನ್ನ ಎಲ್ಲಾ 22 ಪಂದ್ಯಗಳನ್ನೂ ಆಡಿದ್ದು 66 ಅಂಕಗಳನ್ನು ಗಳಿಸಲಷ್ಟೇ ಶಕ್ತವಾಗಿದೆ. ಬೇರೆ ಪ್ರತಿಸ್ಪರ್ಧಿ ತಂಡಗಳ ಸೋಲು ಬೆಂಗಳೂರು ಬುಲ್ಸ್ ಪ್ಲೇ-ಆಫ್‌ಗೆ ದಾರಿಯಾಗಲಿದೆ.
ಬೆಂಗಳೂರು ಬುಲ್ಸ್ ಪ್ಲೇ-ಆಫ್ ತಲುಪಲು ಈ ತಂಡಗಳು ಸೋಲಬೇಕು
ಇಂದು ಮೂರು ಪಂದ್ಯ ನಡೆಯಲಿವೆ. ಅದರಲ್ಲಿ ಮೊದಲ ಪಂದ್ಯದ ಫಲಿತಾಂಶದಲ್ಲಿಯೂ ಬೆಂಗಳೂರು ಭವಿಷ್ಯ ನಿಂತಿರುತ್ತದೆ.
ಮೊದಲ ಪಂದ್ಯ: ಜೈಪುರ್ ಪಿಂಕ್ ಪ್ಯಾಂಥರ್ಸ್ v/s ಪುಣೇರಿ ಪಲ್ಟನ್
ಈ ಪಂದ್ಯದಲ್ಲಿ ಈಗಾಗಲೇ 62 ಅಂಕ ಪಡೆದಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆದ್ದರೆ ಅದು 67 ಅಂಕಗಳೊಂದಿಗೆ ಪ್ಲೆ ಆಫ್ ಪ್ರವೇಶಿಸುತ್ತದೆ. ಆಗ ರೇಸ್‌ನಿಂದ 61 ಅಂಕ ಪಡೆದಿರುವ ಪುಣೇರಿ ಪಲ್ಟನ್ ಹೊರಗುಳಿಯುತ್ತದೆ. ಒಂದು ವೇಳೆ ಪುಣೇರಿ ಪಲ್ಟಾನ್ ಗೆದ್ದರೆ ಜೈಪುರ್ ಹೊರಗುಳಿಯುತ್ತದೆ. ಆಗ ಬೆಂಗಳೂರು ತಂಡ 66 ಅಂಕ ಮತ್ತು ಪುಣೇರಿ ಪಲ್ಟಾನ್ 66 ಅಂಕ ಗಳಿಸಿ ಸಮಬಲ ಸಾಧಿಸುತ್ತವೆ. ಆದರೆ ಸ್ಕೋರ್ ಡಿಫರೆನ್ಸ್‌ನಲ್ಲಿ ಬೆಂಗಳೂರು 59 ಹೆಚ್ಚಿನ ಸ್ಕೋರ್ ಇದ್ದರೆ ಪುಣೇರಿ 26 ಮಾತ್ರ ಇದೆ. ಹಾಗಾಗಿ ಪುಣೇರಿ ಪಲ್ಟಾನ್ ಈ ಪಂದ್ಯವನ್ನು 28 ಸ್ಕೋರ್ ಅಂತರದಿಂದ ಗೆದ್ದರೆ ಮಾತ್ರ ಬೆಂಗಳೂರು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸಲು ಸಾಧ್ಯ. 27 ಅಂಕಕ್ಕಿಂತ ಕಡಿಮೆ ಅಂತರದಲ್ಲಿ ಪುಣೇರಿ ಗೆದ್ದರೂ ಬೆಂಗಳೂರೂ ಪ್ಲೇಆಫ್ ಪ್ರವೇಶಿಸುತ್ತದೆ.
ಎರಡನೇ ಪಂದ್ಯ: ಗುಜರಾತ್ ಜೈಂಟ್ಸ್ v/s ಯು ಮುಂಬಾ
ಗುಜರಾತ್ ಜೈಂಟ್ಸ್ 62 ಅಂಕ ಗಳಿಸಿದೆ. ಆದರೆ ಯು ಮುಂಬಾ ರೇಸ್‌ನಿಂದ ಹೊರಹೋಗಿದ್ದು ಕೊನೆಯ ಔಪಚಾರಿಕ ಲೀಗ್ ಪಂದ್ಯ ಆಡುತ್ತಿದೆ. ಇಲ್ಲಿ ಗುಜರಾತ್ ಅನ್ನು ಯು ಮುಂಬಾ ಮಣಿಸಿದರೆ ಗುಜರಾತ್ ಸಹ ಸ್ಪರ್ಧೆಯಿಂದ ಹೊರಗುಳಿಯುತ್ತದೆ. ಬೆಂಗಳೂರು ಬುಲ್ಸ್ ಪ್ಲೆ ಆಫ್‌ಗೆ ಪ್ರವೇಶ ಪಡೆಯುತ್ತದೆ.
ಮೂರನೇ ಪಂದ್ಯ: ಪಟ್ನಾ ಪೈರೇಟ್ಸ್ v/s ಹರ್ಯಾಣ ಸ್ಟೀಲರ್ಸ್
ಪಟ್ನಾ ಪೈರೇಟ್ಸ್ ಈಗಾಗಲೇ ಪ್ಲೆ ಆಫ್ ಪ್ರವೇಶಿಸಿ ಅಗ್ರಸ್ಥಾನದಲ್ಲಿಗೆ. ಮೊದಲ ಸ್ಥಾನದಲ್ಲಿರುವ ಕಾರಣ ನೇರವಾಗಿ ಸೆಮಿಫೈನಲ್ ತಲುಪಿದೆ. ಅದು ತನ್ನ ಕೊನೆಯ ಪಂದ್ಯವನ್ನು 63 ಅಂಕಗಳನ್ನು ಗಳಿಸಿರುವ ಹರ್ಯಾಣ ಸ್ಟೀಲರ್ಸ್ ಎದರು ಆಡಲಿದೆ. ಇಲ್ಲಿ ಪಟ್ನಾ ಗೆದ್ದರೆ ಹರಿಯಾಣವನ್ನು ಹಿಂದಿಕ್ಕಿ ಬೆಂಗಳೂರು ಬುಲ್ಸ್ ಪ್ಲೇ ಆಫ್ ಕಡೆಗೆ ನಡೆಯುತ್ತದೆ.
ಆದರೆ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್, ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮೂರನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಗೆದ್ದರೆ ಆ ಮೂರು ತಂಡಗಳು ಪ್ಲೆ ಆಫ್ ಪ್ರವೇಶಿಸಲಿವೆ. ಬೆಂಗಳೂರು ಮತ್ತು ಪುಣೇರಿ ತಂಡಗಳು ಹೊರಬೀಳಲಿವೆ.
ಪ್ಲೇಆಫ್ ಪಂದ್ಯಾವಳಿ
ಪ್ಲೇಆಫ್‌ನ ಮೊದಲೆರಡು ಸ್ಥಾನದಲ್ಲಿರುವ ಪಟ್ನಾ ಮತ್ತು ಡೆಲ್ಲಿ ನೇರವಾಗಿ ಸೆಮಿಫೈನಲ್ ತಲುಪಲಿವೆ. ಫೆಬ್ರವರಿ 21 ರಂದು 3 v/s 6 ನೇ ಸ್ಥಾನದ ತಂಡಗಳು ಮತ್ತು 4 v/s5 ನೇ ಸ್ಥಾನದ ತಂಡಗಳು ಎಲಿಮಿನೇಟರ್ ಪಂದ್ಯಗಳನ್ನು ಆಡಲಿವೆ. ಅಲ್ಲಿ ಗೆದ್ದವರು ಫೆಬ್ರವರಿ 23 ರಂದು ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಫೆಬ್ರವರಿ 25 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?


