Homeಅಂಕಣಗಳುಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

- Advertisement -
- Advertisement -

ಉತ್ತರಪ್ರದೇಶದ ಮೊದಲ ಎರಡು ಹಂತಗಳ ಮತದಾನದಲ್ಲಿ ಬಿಜೆಪಿ ಮುಳುಗುವ ನಿಶ್ಚಿತ ಸುಳಿವುಗಳು ಮೇಲೆ ತೇಲಿವೆ. ಮೋದಿ-ಶಾ-ಯೋಗಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ರಾಜ್ಯವು ಬಿಜೆಪಿ ಬಡಿದೆಬ್ಬಿಸಬಹುದಾದ ಭಾವೋದ್ವೇಗದ ಬಿರುಗಾಳಿಗೆ ಸಿಕ್ಕರೆ ಅಚ್ಚರಿಪಡಬೇಕಿಲ್ಲ.

ಹಾಲಿ ಯೋಗಿ ಸರ್ಕಾರ ಮಾತ್ರವಲ್ಲ, ಎರಡು ವರ್ಷಗಳ ನಂತರ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ಅಳಿವು ಉಳಿವನ್ನೂ ಪ್ರಭಾವಿಸುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಏಳು ಹಂತದ ಮತದಾನ ಜರುಗಿದೆ. ಸೋಮವಾರ ಎರಡನೆಯ ಹಂತದ ಮತದಾನ ಮುಗಿದಿದ್ದು ಬಿಜೆಪಿಯನ್ನು ಕಳವಳಕ್ಕೆ ತಳ್ಳಿದೆ.

ಕಳೆದ ಸಲ ಬೀಸಿದ್ದ ಬಿಜೆಪಿ ಪರ ಗಾಳಿ ಈ ಸಲ ಕಂಡುಬಂದಿಲ್ಲ. ಪರವಾದ ಗಾಳಿ ಒತ್ತಟ್ಟಿಗಿರಲಿ, ಮೊದಲ ಎರಡು ಹಂತಗಳಲ್ಲಿ ಎದುರು ಗಾಳಿ ಬೀಸಿರುವ ಸೂಚನೆಗಳಿವೆ. ಬಿಜೆಪಿ ಬೆಂಬಲಿಗರು ಉತ್ಸಾಹ ಕಳೆದುಕೊಂಡಿದ್ದು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ಕಳೆದುಕೊಳ್ಳುವ ದುಸ್ಥಿತಿ ಎದುರಿಸಿದೆ.

ಜಯಂತ್ ಚೌಧರಿ

ಉತ್ತರಪ್ರದೇಶದಲ್ಲಿ ಉಳಿದ ಆರು ಹಂತಗಳಲ್ಲಿ ತಡವಾಗಿಯಾದರೂ ತನ್ನ ರಣತಂತ್ರ ಬದಲಿಸಿ ಬಿಜೆಪಿಗೆ ಚುನಾವಣೆಗಳನ್ನು ಗೆದ್ದುಕೊಡುವ ಜಾದೂಗಾರ ಅಮಿತ್ ಶಾ ’ಚಮತ್ಕಾರ’ ಮಾಡದೆ ಹೋದರೆ ಸೋಲು ಗೋಡೆ ಮೇಲಿನ ಬರೆಹ.

ಹಿಂದೂ-ಮುಸ್ಲಿಮ್ ಧ್ರುವೀಕರಣ, ಯಾದವೇತರ ಹಿಂದುಳಿದ ಜಾತಿಗಳು ಮತ್ತು ಮೇಲ್ಜಾತಿಗಳ ಸಾಮಾಜಿಕ ಎಂಜಿನಿಯರಿಂಗ್‌ನ ಬಿಜೆಪಿ ತಂತ್ರಗಳು ಶಿಖರ ಮುಟ್ಟಿಬಿಟ್ಟಿವೆ. ಅಲ್ಲಿಂದ ಕೆಳಗೆ ಇಳಿಯಬೇಕೇ ವಿನಾ ಮೇಲೇರುವ ಸಾಧ್ಯತೆ ಇಲ್ಲ. ಶಿಖರದಲ್ಲೇ ಉಳಿಯುವ ಶಕ್ತಿಯೂ ಬಿಜೆಪಿಗೆ ಉಳಿದಿಲ್ಲ. ಧ್ರುವೀಕರಣದ ಹೊಸ ಪ್ರಯತ್ನಗಳು ಫಲ ನೀಡುತ್ತಿಲ್ಲ. ಧ್ರುವೀಕರಣದ ಬೆಂಕಿಗೆ ಅರಿವಿಲ್ಲದೆ ತುಪ್ಪ ಸುರಿಯುವ ತಪ್ಪುಗಳನ್ನು ಪ್ರತಿಪಕ್ಷಗಳು ಮಾಡುತ್ತಿಲ್ಲ.

ಯೋಗಿ-ಮೋದಿ ಅವರನ್ನು ಅಭಿವೃದ್ಧಿ ಕಾರ್ಯಗಳ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿದೆ. ಈ ದಿಸೆಯಲ್ಲಿ ಇಬ್ಬರ ಸಾಧನೆಗಳೂ ನಿರಾಶಾದಾಯಕ.

2014ರ ಲೋಕಸಭೆ, 2017ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಉತ್ತರಪ್ರದೇಶದ ಮತದಾರರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ಅಭೂತಪೂರ್ವ ಗೆಲುವು ಗಳಿಸಿಕೊಟ್ಟಿದ್ದಾರೆ. ಮೂರು ಚುನಾವಣೆಗಳ ಸತತ ಗೆಲುವು ಆಳುವ ಪಕ್ಷ ಬಿಜೆಪಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡಿಸಿದ್ದುಂಟು.

ಆದರೆ ಇತ್ತೀಚೆಗೆ ಸಿಡಿದಿರುವ ಸಂಕೇತಗಳು ಬಿಜೆಪಿಯ ನಿದ್ದೆ ಕೆಡಿಸಿವೆ. ದೆಹಲಿಯ ಗಡಿಗಳಲ್ಲಿ ಹದಿಮೂರು ತಿಂಗಳ ಕಾಲ ಜರುಗಿದ ರೈತ ಚಳವಳಿ ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಯ ಕಾಲಕೆಳಗಿನ ನೆಲವನ್ನು ನಡುಗಿಸಿದೆ. ಚುನಾವಣೆಗಳಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬೀಸುವ ಗಾಳಿ ಈ ದೈತ್ಯ ರಾಜ್ಯದ ಇತರೆ ಸೀಮೆಗಳ ಮೇಲೂ ಪ್ರಭಾವ ಬೀರುತ್ತದೆಂಬ ನಂಬಿಕೆಗೆ ಆಧಾರಗಳಿವೆ.

ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳಲ್ಲಿ ಕರ್ನಾಟಕದ ಒಕ್ಕಲಿಗ ಜನಾಂಗಕ್ಕೆ ಹೋಲಿಸಬಹುದಾದ ಉತ್ತರ ಭಾರತದ ಬಲಿಷ್ಠ ಜಾತಿ ಜಾಟರದು. ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಅವರ ಜನಸಂಖ್ಯಾ ಪ್ರಮಾಣ ಶೇ.20ಕ್ಕೂ ಹೆಚ್ಚು. ರಾಜ್ಯದಲ್ಲಿ ಇವರ ಪ್ರಮಾಣ ಶೇ.2ರಷ್ಟು. ಮೊದಲ ಹಂತದ ಮತದಾನ ಜರುಗಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಜನಾಂಗದ ಪ್ರಭಾವ ಮಾಮೂಲಾಗಿಯೇ ಬಲು ದಟ್ಟ.

ಮೋದಿಯವರು ಮೂರು ಕೃಷಿ ಕಾನೂನುಗಳನ್ನು ವಾಪಸು ತೆಗೆದುಕೊಂಡ ನಂತರ ರೈತರ ನೈತಿಕ ಸ್ಥೈರ್ಯ ಎತ್ತರದಲ್ಲಿದೆ. ಗೋರಕ್ಷಣೆಯ ಹೆಸರಿನಲ್ಲಿ ಯೋಗಿ ಸರ್ಕಾರ ತಂದಿರುವ ಕಾನೂನಿನ ಫಲವಾಗಿ ಬೀಡಾಡಿ ದನಗಳು ಹಿಂಡುಹಿಂಡಾಗಿ ಹೊಲಗಳನ್ನು ನುಗ್ಗಿ ಮೇಯುತ್ತಿವೆ. ಅಡುಗೆ ಅನಿಲ ಸಿಲಿಂಡರ್ ದರ, ಟ್ರ್ಯಾಕ್ಟರುಗಳಿಗೆ ತುಂಬಿಸಬೇಕಿರುವ ಡೀಸೆಲ್ ದರ ಮುಗಿಲು ಮುಟ್ಟಿರುವ ಕುರಿತು ಭಾರೀ ಅಸಮಾಧಾನ ನೆಲೆಸಿದೆ. ಮೂರೂ ಚುನಾವಣೆಗಳಲ್ಲಿ ಬಲವಾಗಿ ಬಿಜೆಪಿಯ ಕೈಹಿಡಿದಿದ್ದ ಯುವಜನರು ನಿರುದ್ಯೋಗ ಸಮಸ್ಯೆಯಿಂದ ಭ್ರಮನಿರಸನ ಹೊಂದಿದ್ದಾರೆ.

ಇದೇ ಹತ್ತರಂದು ನಡೆದ ಮೊದಲ ಹಂತದ ಮತದಾನ ಹನ್ನೊಂದು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ 58 ಸೀಟುಗಳಲ್ಲಿ ಪಕ್ಷಗಳ ಹಣೆಬರೆಹ ಬರೆಯಲಿದೆ. ಕಳೆದ ಬಾರಿ ಮೊದಲ ಹಂತದ ಈ 58 ಸೀಟುಗಳ ಪೈಕಿ 53ನ್ನು ಮತ್ತು ಎರಡನೆಯ ಹಂತದ 55 ಸೀಟುಗಳ ಪೈಕಿ 38ನ್ನು ಗೆದ್ದು ವಿಕ್ರಮ ಸ್ಥಾಪಿಸಿತ್ತು ಬಿಜೆಪಿ. ಕಳೆದ ಮೂರು ಚುನಾವಣೆಗಳಲ್ಲಿ ಜಾಟರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯತ್ತ ಸರಿದಿದ್ದರು. ಚರಣಸಿಂಗ್ ನಿಧನದ ನಂತರ ಅವರ ಮಗ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಸರಸವಾಡಿದ ಕಾರಣ ಮುಸ್ಲಿಮರು ಲೋಕದಳದಿಂದ ದೂರವಾಗಿದ್ದರು. ಅಜಿತ್ ಸಿಂಗ್ ನಿಧನದ ನಂತರ ಪಕ್ಷದ ಆಡಳಿತಸೂತ್ರ ಅವರ ಮಗ ಜಯಂತ್ ಚೌಧರಿ ಕೈಯಲ್ಲಿದೆ. ಸಮಾಜವಾದಿ ಪಕ್ಷದ ತಲೆಯಾಳು ಅಖಿಲೇಶ್ ಸಿಂಗ್ ಈ ಸಲ ಹಲವು ಸಣ್ಣ ಪಕ್ಷಗಳನ್ನು ಸೆಳೆದು ಬಣ್ಣಬಣ್ಣದ ಬೆಚ್ಚನೆಯ ಕೌದಿ ಹೊಲಿದಿದ್ದಾರೆ. ಪಕ್ಷ ಕಳೆದುಕೊಂಡಿರುವ ಜನಾಧಾರವನ್ನು ಮರಳಿ ಗಳಿಸಲು ಹಗಲಿರುಳು ಶ್ರಮಿಸಿರುವ ಜಯಂತ್ ಮತ್ತು ಅಖಿಲೇಶ್ ಚುನಾವಣಾ ಮೈತ್ರಿ ಮಾಡಿಕೊಂಡಿರುವುದು ಇಬ್ಬರ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ದೆಹಲಿ ಗಡಿಗಳಲ್ಲಿ ಜರುಗಿದ ರೈತ ಚಳವಳಿಯು ಅವರ ಈ ಪ್ರಯತ್ನಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರ ಲೋಕದಳವನ್ನು ಸೋಲಿಸಿದ್ದ ಜಾಟ ಜನಾಂಗ ಅದಕ್ಕಾಗಿ ಪಶ್ಚಾತ್ತಾಪಪಡುತ್ತಿದೆ. ಬಿಜೆಪಿ ಹುಟ್ಟಿ ಹಾಕಿದ ಹಿಂದೂ-ಮುಸ್ಲಿಮ್ ಧ್ರುವೀಕರಣದ ಅಲೆಯಲ್ಲಿ ತೇಲಿಹೋಗಿದ್ದ ಬಹುತೇಕ ಜಾಟರು ಈ ಸಲ ಬಿಜೆಪಿಗೆ ಎದುರಾಗಿ ನಿಂತಿದ್ದಾರೆ.

ಉತ್ತರಪ್ರದೇಶದಲ್ಲಿ ಯಾದವರದು ಸಂಖ್ಯಾಬಾಹುಳ್ಯದಲ್ಲಿ ಪ್ರಭಾವೀ ಹಿಂದುಳಿದ ಜಾತಿ. ಇವರ ಪ್ರಾಬಲ್ಯದಿಂದ ಅಸಮಾಧಾನಗೊಂಡ ಇತರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಾಂಗಗಳನ್ನು ಒಲಿಸಿಕೊಂಡಿದ್ದು ಬಿಜೆಪಿಗೆ ಕಳೆದ ಮೂರು ಚುನಾವಣೆಗಳಲ್ಲಿ ಭಾರೀ ಶಕ್ತಿ ನೀಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ ಅವರ ಕಾರ್ಯವೈಖರಿಯಿಂದ ಕುದಿಯುತ್ತಿದ್ದ ಕೆಲ ಪ್ರಮುಖ ಓ.ಬಿ.ಸಿ. ನಾಯಕರು ಪಕ್ಷ ತೊರೆದು ಅಖಿಲೇಶ್ ಅವರೊಂದಿಗೆ ಕೈ ಜೋಡಿಸಿರುವ ವಿದ್ಯಮಾನ ಬಿಜೆಪಿಯ ಶಕ್ತಿಯನ್ನು ಕುಂದಿಸಿರುವುದರಲ್ಲಿ ಅನುಮಾನವಿಲ್ಲ. ತಮ್ಮ ಜಾತಿ ರಜಪೂತರ ಪಕ್ಷಪಾತಿಯೆಂದು ಆಡಳಿತದಲ್ಲಿ ಢಾಳಾಗಿ ತೋರಿಸಿಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ ಅವರು ಬಿಜೆಪಿಯ ಕಟ್ಟರ್ ಬೆಂಬಲಿಗರಾಗಿದ್ದ ಬ್ರಾಹ್ಮಣರನ್ನೂ ಸಾಕಷ್ಟು ಎದುರು ಹಾಕಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಶೇ.12ಕ್ಕೂ ಹೆಚ್ಚು ಪ್ರಮಾಣದಲ್ಲಿರುವ ಬ್ರಾಹ್ಮಣರು ಈಗಲೂ ಬಿಜೆಪಿಯ ಬೆಂಬಲಿಗರೇ. ಆದರೆ ಕಳೆದ ಮೂರೂ ಚುನಾವಣೆಗಳಲ್ಲಿ ಕಂಡುಬಂದಿದ್ದ ಅವರ ಅಖಂಡ ಬೆಂಬಲದಲ್ಲಿ ಈ ಸಲ ಬಿರುಕುಗಳು ಮೂಡಿವೆ.

ಪಶ್ಚಿಮ ಉತ್ತರಪ್ರದೇಶ ಸೀಮೆಯಲ್ಲಿ ಮುಸಲ್ಮಾನರ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳ ಲೆಕ್ಕ ಹಿಡಿದರೆ ಈ ಪ್ರಮಾಣ ಶೇ.35. ಲಾಗಾಯತಿನಿಂದ ಚೌಧರಿ ಚರಣಸಿಂಗ್ ಅವರ ಅನುಯಾಯಿಗಳು. ಜಯಂತ್ ಚೌಧರಿ ಕಾಲದಲ್ಲಿ ಲೋಕದಳದಿಂದ ದೂರ ಸರಿದಿದ್ದರು. 2013ರಲ್ಲಿ ಬಿಜೆಪಿ ಬಡಿದೆಬ್ಬಿಸಿದ್ದ ಕೋಮುವಾದಿ ಧ್ರುವೀಕರಣವನ್ನು ರೈತ ಚಳವಳಿ ಕರಗಿಸಿರುವ ನಿಚ್ಚಳ ಸೂಚನೆಗಳಿವೆ. ಜಾಟರು ಮತ್ತು ಮುಸಲ್ಮಾನರು ಪುನಃ ಹತ್ತಿರವಾಗಿದ್ದಾರೆ. ಇಬ್ಬರ ಸಂಯುಕ್ತ ಶಕ್ತಿ ಬಿಜೆಪಿಗೆ ಮುಳುವಾಗಬಲ್ಲದು. ಮಾಯಾವತಿ ಅವರ ಬಿ.ಎಸ್.ಪಿ. ಮತ್ತು ಅಖಿಲೇಶ್-ಜಯಂತ್ ಅವರ ಮೈತ್ರಿಕೂಟದ ನಡುವೆ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ ವಿರುದ್ಧ ಮಾಯಾವತಿ ಅವರ ವಿರೋಧ ಇತ್ತೀಚಿನ ದಿನಗಳಲ್ಲಿ ಮೊಂಡಾಗಿರುವ ಬೆಳವಣಿಗೆಯನ್ನು ಮುಸಲ್ಮಾನರು ಗಮನಿಸಿದ್ದಾರೆ.

ಮೋದಿ ಮತ್ತು ಶಾ ಕ್ರೊನಾಲಜಿಸೋಮವಾರ ಮತದಾನ ನಡೆದ ಉತ್ತರಪ್ರದೇಶದ ಹನ್ನೊಂದು ಜಿಲ್ಲೆಯ ಐದರಲ್ಲಿ ಮುಸಲ್ಮಾನರ ಮತದಾರರ ಪ್ರಮಾಣ ಶೇ.40ರಿಂದ 50. ರಾಂಪುರದಲ್ಲಿ ಶೇ.60. ಮುರಾದಾಬಾದಿನಲ್ಲಿ ಶೇ.47, ಬಿಜನೂರಿನಲ್ಲಿ ಶೇ.43, ಶಹಜಹಾನಪೂರ ಮತ್ತು ಮುಝಫ್ಫರ್ ಪುರದಲ್ಲಿ ಶೇ.41. ಈ ಮತಗಳು ಕಳೆದ ಸಲದಂತೆ ಬಿ.ಎಸ್.ಪಿ. ಮತ್ತು ಸಮಾಜವಾದಿ ಪಾರ್ಟಿಯ ನಡುವೆ ದೊಡ್ಡ ಪ್ರಮಾಣದಲ್ಲಿ ಚದುರಿರುವ ಸಂಕೇತಗಳಿಲ್ಲ. ಈ ಬೆಳವಣಿಗೆ ಬಿಜೆಪಿಗೆ ಒಳ್ಳೆಯ ಸುದ್ದಿಯೇನೂ ಅಲ್ಲ. ಕಡೆಯ ಗಳಿಗೆಯ ತನಕ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸದೆ ಗೋಡೆಯ ಮೇಲೆ ಕುಳಿತುಕೊಳ್ಳುವ ಮತದಾರರ ಸಂಖ್ಯೆ ಸಣ್ಣದೇನೂ ಅಲ್ಲ. ಅವರು ಕಡೆಯ ನಿಮಿಷಗಳಲ್ಲಿ ಗೆಲ್ಲುವ ಪಕ್ಷದತ್ತ ವಾಲುತ್ತಾರೆ. ಈ ಬಾಬತ್ತಿನಲ್ಲಿಯೂ ಬಿಜೆಪಿ ಏಟು ತಿನ್ನುವ ಸಾಧ್ಯತೆಯೇ ಹೆಚ್ಚು.

ರಾಜ್ಯದ ಉಳಿದ ಭಾಗಗಳಾದ ಬುಂದೇಲಖಂಡ ಮತ್ತು ಅವಧದಲ್ಲಿ ಬಿಜೆಪಿ ಅಷ್ಟಾಗಿ ಶಕ್ತಿಗುಂದಿಲ್ಲ. ಪೂರ್ವಾಂಚಲದಲ್ಲಿ ಸಮಸಮ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ. ಒಂದು ಮತ್ತು ಎರಡನೆಯ ಹಂತದ ಒಟ್ಟು ಸೀಟುಗಳ ಸಂಖ್ಯೆ 113. ಈ ಪೈಕಿ 91 ಸೀಟು ಬಾಚಿದ್ದ ಬಿಜೆಪಿ ಈ ಸಲ ಭಾರೀ ನಷ್ಟ ಎದುರಿಸಲಿದೆ.

ಪಶ್ಚಿಮ ಯುಪಿಯ ಗಾಳಿ ಇತರೆಡೆಗೆ ಬೀಸಿದ್ದನ್ನು ಕಳೆದ ಚುನಾವಣೆಗಳಲ್ಲಿ ಕಂಡುಬಂದಿದೆ. ಈ ಗಾಳಿಯನ್ನು ತಡೆದು ನಿಲ್ಲಿಸಲು ಬಿಜೆಪಿ ಯಾವ ತಂತ್ರ ಬಳಸಲಿದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...