Homeಅಂಕಣಗಳುಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

- Advertisement -
- Advertisement -

ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಕೆಲವೇ ದಿನಗಳ ಅಂತರದಲ್ಲಿ ಎರಡನೆಯ ದೊಡ್ಡ ಹಿನ್ನಡೆ ಎದುರಿಸಿದೆ. ಅವರ ಸ್ಥಾನವನ್ನು ತುಂಬುವುದು ಸದ್ಯಕ್ಕೆ ಅಸಾಧ್ಯ ಎಂಬ ಮಾತುಗಳು ಸವಕಲಾಗಿ ಧ್ವನಿಸಿದರೂ ಸತ್ಯವಚನಗಳು.

ರೈತ ನಾಯಕ ಮಹೇಂದ್ರಸಿಂಗ್ ಟಿಕೇತ್ ಅವರ ಅತಿ ಸಮೀಪವರ್ತಿಯಾಗಿದ್ದ ಜೌಲಾ ನಾಡು ಕಂಡ ಅಪ್ರತಿಮ ರೈತ ಹೋರಾಟಗಾರ ಹಾಗೂ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಮಕಾಲೀನರೂ ಆಗಿದ್ದರು.

ಪಶ್ಚಿಮೀ ಉತ್ತರಪ್ರದೇಶದ ಮುಝಫರ್‌ನಗರ ಜಿಲ್ಲೆಯ ಜೌಲಾ ಗ್ರಾಮದ ನಿವಾಸಿ. ಭಾರತೀಯ ಕಿಸಾನ್ ಯೂನಿಯನ್ ಚಿಂತನ ಚಾವಡಿಯ ಸಕ್ರಿಯ ಸದಸ್ಯರು. ಟಿಕೇತ್ ಹೂಡಿದ ಹಲವು ರೈತ ಆಂದೋಲನಗಳಲ್ಲಿ ಜೌಲಾ ವಹಿಸಿದ್ದ ಪಾತ್ರ ಮಹತ್ತರ.

ಮಹೇಂದ್ರಸಿಂಗ್ ಟಿಕೇತ್

ರೈತ ಆಂದೋಲನಗಳ ವೇದಿಕೆಯಲ್ಲಿ ಹರಹರ ಮಹಾದೇವ್- ಅಲ್ಲಾಹ್ ಹೂ ಅಕ್ಬರ್ ಘೋಷಣೆ ಕೂಗಿಸಿದ ಸಮರಸ ಭಾವದ ನಾಯಕ. 2011ರಲ್ಲಿ ಮಹೇಂದ್ರಸಿಂಗ್ ಟಿಕೇತ್ ನಿಧನದ ನಂತರವೂ ಭಾರತೀಯ ಕಿಸಾನ್ ಯೂನಿಯನ್ ಜತೆ ಅವರ ಸಂಬಂಧ ಮುಂದುವರೆದಿತ್ತು. ಆದರೆ 2013ರಲ್ಲಿ ಜರುಗಿದ ಮುಝಫರ್‌ನಗರ ಕೋಮುಗಲಭೆಗಳಿಂದ ಅವರ ದಾರಿ ಬೇರೆಯಾಯಿತು. ಮುಸಲ್ಮಾನರೇ ಬಹುಸಂಖ್ಯೆಯಲ್ಲಿದ್ದ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ಕಟ್ಟಿದರು.

ಮೋದಿಯವರು ಜಾರಿ ಮಾಡಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ಸಿಡಿದ ರೈತ ಹೋರಾಟ ಜೌಲಾ ಮತ್ತು ಜಾಟ ರೈತರನ್ನು ಪುನಃ ಒಂದು ವೇದಿಕೆಗೆ ತಂದಿತ್ತು. ಭಾರತೀಯ ಕಿಸಾನ್ ಯೂನಿಯನ್‌ನ ಹಾಲಿ ಅಧ್ಯಕ್ಷ ಚೌಧರಿ ನರೇಶ್ ಟಿಕೇತ್ ಮತ್ತು ರಾಷ್ಟ್ರೀಯ ಲೋಕದಳದ ಉಪಾಧ್ಯಕ್ಷ ಜಯಂತ್ ಚೌಧರಿ ಅವರನ್ನು ಎಡಬಲಕ್ಕೆ ನಿಲ್ಲಿಸಿಕೊಂಡು ಅವರ ಹೆಗಲ ಮೇಲೆ ಕೈ ಹಾಕಿ ಜಾತಿ ಧರ್ಮಗಳಿಂದ ಮೇಲೆದ್ದು ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂದು ರೈತರಿಗೆ ಶಪಥ ಬೋಧನೆ ಮಾಡಿದ್ದ ಜೀವ.

ಒಕ್ಕಲುತನ ಮತ್ತು ಹೈನುಗಾರಿಕೆಯನ್ನು ನೆಚ್ಚಿರುವ ಜಾಟ ಸಮುದಾಯ ಉತ್ತರ ಭಾರತಕ್ಕೆ ಸೀಮಿತ. ಹರಿಯಾಣ, ಪಂಜಾಬ್, ಉತ್ತರಪ್ರದೇಶ ಹಾಗೂ ರಾಜಸ್ತಾನದಲ್ಲಿ ಜಾಟ ಜನಾಂಗ ಪಸರಿಸಿದೆ. ಪಕ್ಕಾ ಪಿತೃಪ್ರಧಾನ ಸಮಾಜ. ಊಳಿಗಮಾನ್ಯ ಗುಣ ಇನ್ನೂ ಅಳಿದಿಲ್ಲ. ಹಸಿರು ಕ್ರಾಂತಿಯ ಕಸುವಿನಿಂದಾಗಿ ಧನಾಢ್ಯ ಮತ್ತು ಬಲಾಢ್ಯ. ಚೌಧರಿ ಚರಣಸಿಂಗರು ಜಾಟ ಸೀಮೆಯ ನಿರ್ವಿವಾದಿತ ನಾಯಕರಾಗಿದ್ದರು. ಮುಸಲ್ಮಾನರೂ ಅವರ ನಾಯಕತ್ವ ಒಪ್ಪಿಕೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಚೌಧರಿ ಚರಣಸಿಂಗ್ ಅವರು ಮಧ್ಯಮವರ್ಗದ ರೈತಾಪಿಗಳನ್ನು ಸಂಘಟಿಸಿ ಬೆಳೆಸಿದ್ದ MAJGAR (ಮುಸ್ಲಿಮ್-ಆಹಿರ್ (ಯಾದವ್)- ಜಾಟ್- ಗುಜ್ಜರ್-ರಜಪೂತ) ಎಂಬ ಸಾಮಾಜಿಕ ಮೈತ್ರಿಕೂಟ ಚೆದುರಿಹೋಗಿತ್ತು. ಒಮ್ಮೆ ಬಿಜೆಪಿ, ಮತ್ತೊಮ್ಮೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ಸಿನ ಜೊತೆಗೆ ಚರಣಸಿಂಗ್ ಮಗ ಅಜಿತ್ ಸಿಂಗ್ ಮಾಡಿಕೊಂಡ ಅವಕಾಶವಾದಿ ಚುನಾವಣಾ ಮೈತ್ರಿಗಳು MAJGAR ಮೈತ್ರಿಕೂಟದ ಅಡಿಗಲ್ಲುಗಳನ್ನು ಕದಲಿಸಿಬಿಟ್ಟಿತ್ತು. 2013ರ ಕೋಮು ಗಲಭೆಗಳ ಹಾದಿ ಸಲೀಸಾಗಿತ್ತು. 2009ರಲ್ಲಿ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಐದು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರು. ಆದರೆ ಮುಸಲ್ಮಾನರು ಅವರಿಂದ ದೂರವಾಗಿದ್ದರು. ಚರಣಸಿಂಗ್ ನಿಧನದ ನಂತರ ಮೊದಲ ಬಾರಿಗೆ ಅವರ ಸೀಮೆಯ ಜಾಟರು ಮತ್ತು ಮುಸಲ್ಮಾನರು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಮತ ಚಲಾಯಿಸಿದ್ದರು.

1988ರ ಅಕ್ಟೋಬರ್ 25. ರಾಜೀವಗಾಂಧೀ ಅಂದಿನ ಪ್ರಧಾನಿ. ಬೊಫೋರ್ಸ್ ಹಗರಣ ಭುಗಿಲೆದ್ದು ವಿ.ಪಿ.ಸಿಂಗ್ ಅವರು ಕೇಂದ್ರ ಮಂತ್ರಿಮಂಡಲದಿಂದ ಹೊರಬಿದ್ದಿದ್ದರು. ಸರ್ಕಾರದ ಹೆಸರು ಕೆಟ್ಟಿತ್ತು. 35 ಬೇಡಿಕೆಗಳನ್ನು ಮುಂದಿಟ್ಟು ಲಕ್ಷಾಂತರ ರೈತರು ಟಿಕೇತ್ ನೇತೃತ್ವದಲ್ಲಿ ಸಂಸದ್ ಭವನಕ್ಕೆ ಕೂಗಳತೆ ದೂರದ ಬೋಟ್ ಕ್ಲಬ್‌ನಲ್ಲಿ ಮುತ್ತಿಗೆ ಹಾಕಿದ್ದರು.

ಚೌಧರಿ ಚರಣಸಿಂಗ್

ರೈತರ ಆಂದೋಲನ ದೆಹಲಿಯ ಸಾರ್ವಜನಿಕರ ಸಹಾನುಭೂತಿ ಗಳಿಸಿತ್ತು. ಏಳನೆಯ ದಿನ ಸರ್ಕಾರ ರೈತರ ಬೇಡಿಕೆಗಳನ್ನು ಒಪ್ಪಿತ್ತು. ರೈತರು ಬೋಟ್ ಕ್ಲಬ್ ಖಾಲಿ ಮಾಡಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಎನ್.ಡಿ.ತಿವಾರಿ ರೈತರ ಬೇಡಿಕೆಗಳ ಈಡೇರಿಕೆ ಆದೇಶಕ್ಕೆ ಸಹಿ ಹಾಕಿದರು.

ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರಸಿಂಗ್ ಟಿಕೇತ್ ಪಶ್ಚಿಮ ಯುಪಿಯಲ್ಲಿ ಚರಣಸಿಂಗ್ ಮತ್ತು ಅವರ ಪಕ್ಷ ಲೋಕದಳ ತೆರವು ಮಾಡಿದ್ದ ಸ್ಥಾನವನ್ನು ತುಂಬಿದ್ದರು. ಲಾಗಾಯ್ತಿನಿಂದ ಅವರ ಜೊತೆಗಿದ್ದವರು ಗುಲಾಮ್ ಮಹಮ್ಮದ್ ಜೌಲಾ.

ಮಹೇಂದ್ರಸಿಂಗ್ ಟಿಕೇತ್ ಅವರ ಕಾಲದಲ್ಲೇ ಜಾಟ್-ಮುಸ್ಲಿಮ್ ಏಕತೆಯ ಬಹುದೊಡ್ಡ ಚಹರೆಯಾಗಿದ್ದವರು. ಇತ್ತೀಚಿನ ರೈತ ಚಳವಳಿಯ ಕಾಲದಲ್ಲಿ ಜಾಟ್-ಮುಸ್ಲಿಮ್ ರೈತರ ಏಕತೆಯ ವಿಶೇಷ ಮಹತ್ವವನ್ನು ಗೆರೆ ಎಳೆದು ಪ್ರತಿಪಾದಿಸಿದ್ದರು.

ಮಹೇಂದ್ರಸಿಂಗ್ ಟಿಕೇತ್ ಅವರ ವೇದಿಕೆಗಳಲ್ಲಿ ಸಂಚಾಲನೆಯ ಪಾರುಪತ್ತೆ ಸಂಪೂರ್ಣವಾಗಿ ಜೌಲಾ ಅವರದೇ ಆಗಿತ್ತು. ಸಾವಿರಾರು ರ್‍ಯಾಲಿಗಳ ವೇದಿಕೆಗಳು ಜೌಲಾ ಅವರ ಸಂಚಾಲನಾ ಕೌಶಲ್ಯಕ್ಕೆ ಸಾಕ್ಷಿಯಾದವು.

2013ರಲ್ಲಿ ಹಠಾತ್ತನೆ ಸಿಡಿದ ಕೋಮು ಗಲಭೆಗಳು ಹಿಂದು-ಮುಸ್ಲಿಂ ಮತಗಳ ಧ್ರುವೀಕರಣಕ್ಕೆ
ಕಾರಣವಾದವು. ಮಾಯಾವತಿ ಅವರೊಂದಿಗೆ ಬಂಡೆಯಂತೆ ನಿಂತಿದ್ದ ದಲಿತ ಮತಗಳನ್ನು ಕೂಡ ಚೆದುರಿಸಿದ್ದವು. ಸಾವಿರಾರು ವರ್ಷಗಳ ಇತಿಹಾಸ ಉಳ್ಳ ಪ್ರಬಲ ಖಾಪ್ ಪಂಚಾಯಿತಿಗಳು ಖುಲ್ಲಂಖುಲ್ಲಾ ಮೋದಿ ಮಂತ್ರ ಪಠಿಸಿದ್ದವು. ಆರುನೂರು ಕಿ.ಮೀ. ಉದ್ದಗಲಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ’ಜನಿವಾರ ಕ್ರಾಂತಿ ಸಂದೇಶ’ದ ಬೃಹತ್ತಾದ ಕೇಸರಿ ಭಿತ್ತಿಪತ್ರಗಳು ರಾರಾಜಿಸಿದ್ದವು. ಗಂಗಾ ಬಯಲಿನ ಫಲವತ್ತು ನೆಲದಲ್ಲಿ ಕೋಮುದ್ವೇಷದ ಹಾಲಾಹಲದ ಹೊಲಗಳು ಹುಲುಸಾದವು.

ನರೇಶ್ ಟಿಕೇತ್

2021ರ ಜನವರಿ 28ರಂದು ಮುಝಫರ್‌ನಗರದಲ್ಲಿ ಜರುಗಿದ ಮೊದಲನೆಯ ಕಿಸಾನ್ ಮಹಾ ಪಂಚಾಯತ್ ಐತಿಹಾಸಿಕ ಎನಿಸಿತು. ಮುಝಫರ್‌ನಗರ ಕೋಮು ಗಲಭೆಗಳ ನಂತರ ಜಾಟರು ಮತ್ತು ಮುಸಲ್ಮಾನರು ಮೊದಲ ಸಲ ಒಂದೇ ವೇದಿಕೆಯ ಮೇಲೆ ಒಟ್ಟು ಸೇರಿದ್ದರು. ಕನಿಷ್ಠ ಪಕ್ಷ ಒಂದು ಲಕ್ಷ ರೈತರು ನೆರೆದಿದ್ದ ಈ ಸಭೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಮ್ ರೈತರು ಪಾಲ್ಗೊಂಡಿದ್ದರು. ಈ ಸೀಮೆಯಲ್ಲಿ ಹುಟ್ಟಿ ಹಾಕಲಾಗಿದ್ದ ಕೋಮುವಾದದ ಸಂಚನ್ನು ಮುರಿಯುವ ಪಣ ತೊಡಲಾಗಿತ್ತು. ಖುದ್ದು ನರೇಶ್ ಟಿಕೇತ್ ಈ ಸಮಾವೇಶದಲ್ಲಿ ಕ್ಷಮೆ ಕೋರಿದರು. ಚರಣ್ ಸಿಂಗ್ ಅವರ ಮಗ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ವಿರುದ್ಧ 2019ರ ಲೋಕಸಭಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಕ್ಕೆ ಮತ್ತು 2013ರ ಕೋಮುಗಲಭೆಗಳಲ್ಲಿ ಮುಸಲ್ಮಾನ ಸೋದರರ ಕೈಬಿಟ್ಟಿದ್ದಕ್ಕೆ ತಮ್ಮನ್ನು ಕ್ಷಮಿಸಬೇಕೆಂದು ವಿನಂತಿಸಿದರು. ನಾಯಕರು ರೈತರಲ್ಲಿ ಹಿಂದು-ಮುಸ್ಲಿಮ್ ಏಕತೆಯನ್ನು ಸಾರಿದರು. ಮಹೇಂದ್ರ ಸಿಂಗ್ ಟಿಕೇತ್ ಅವರ ಬಲಗೈಯಂತೆ ಕೆಲಸ ಮಾಡಿದ್ದ ರೈತ ನಾಯಕ ಗುಲಾಮ್ ಮಹಮ್ಮದ್ ಜೋಲಾಗೆ ಈಗ 85ರ ವಯಸ್ಸು. ಅವರೂ ಈ ಮಹಾಪಂಚಾಯತಿನಲ್ಲಿ ಭಾಗವಹಿಸಿ ವೇದಿಕೆ ಮೇಲಿದ್ದರು. 2013ರ ಕೋಮು ಗಲಭೆಗಳ ನಂತರ ಅವರು ಭಾರತೀಯ ಕಿಸಾನ್ ಯೂನಿಯನ್‌ನಿಂದ ದೂರವಾಗಿ ಭಾರತೀಯ ಕಿಸಾನ್ ಮಜ್ದೂರ್ ಮಂಚ್ ಕಟ್ಟಿಕೊಂಡಿದ್ದರು. ನರೇಶ್ ಕ್ಷಮೆ ಕೋರಿದ
ನಂತರ ಅಜಿತ್ ಸಿಂಗ್ ಅವರ ಮಗ ಜಯಂತ್ ಚೌಧರಿ ಮಹಮ್ಮದ್ ಜೌಲಾ ಅವರ ಕಾಲುಮುಟ್ಟಿ ನಮಸ್ಕರಿಸಿದರು. 60 ಮಂದಿಯನ್ನು ಬಲಿತೆಗೆದುಕೊಂಡು 65 ಸಾವಿರ ಮಂದಿ ಮುಸಲ್ಮಾನರನ್ನು ನಿರಾಶ್ರಿತರನ್ನಾಗಿ ಮಾಡಿದ ಕೋಮುಗಲಭೆಗಳ ಗಾಯಗಳು ಇನ್ನು ಮಾಯುತ್ತವೆ ಎಂಬ ವಿಶ್ವಾಸವನ್ನು ಜೌಲಾ ವ್ಯಕ್ತಪಡಿಸಿದರು. ಮುಸಲ್ಮಾನರಿಗೆ ಘನತೆಯ ಪ್ರಾತಿನಿಧ್ಯ ನೀಡಿದರೆ ತಮ್ಮ ಸಂಘಟನೆಯನ್ನು ಭಾರತೀಯ ಕಿಸಾನ್ ಯೂನಿಯನ್‌ನಲ್ಲಿ ವಿಲೀನಗೊಳಿಸಲೂ ಸಿದ್ಧವೆಂದು ಸಾರಿದ್ದರು.

ತಮ್ಮ ಮಾತಿನ ಸರದಿ ಬಂದಾಗ ಮುಲಾಜಿಲ್ಲದೆ ನೆರೆದಿದ್ದವರ ಮುಖಕ್ಕೆ ಹೊಡೆದಂತೆ ಜೌಲಾ ಹೇಳಿದ್ದರು- ’ಈವರೆಗೆ ನೀವು ಎರಡು ಬಹುದೊಡ್ಡ ತಪ್ಪುಗಳ ಮಾಡಿದ್ದೀರಿ. ಒಂದನೆಯದು ನೀವು ಅಜಿತ್ ಸಿಂಗ್ ಅವರನ್ನು ಸೋಲಿಸಿದಿರಿ. ಎರಡನೆಯದಾಗಿ 2013ರ ಕೋಮುಗಲಭೆಗಳಲ್ಲಿ ಮುಸಲ್ಮಾನರನ್ನು ಕೊಂದಿರಿ’. ಜೋಲಾ ಮಾತನ್ನು ಸಭೆ ತಿರಸ್ಕರಿಸಲಿಲ್ಲ, ಅಣಕಿಸಲಿಲ್ಲ. ಬದಲಾಗಿ ಆತ್ಮನಿರೀಕ್ಷೆ ಮಾಡಿಕೊಳ್ಳುತ್ತಿದೆ ಎಂಬಂತೆ ಸದ್ದಿಲ್ಲದೆ ಆಲಿಸಿತು.

2013ರಲ್ಲಿ ಹುಟ್ಟಿಹಾಕಲಾಗಿದ್ದ ಸಾಮಾಜಿಕ ಬಿಗುವು ಇದೀಗ ಸಡಿಲಾಗತೊಡಗಿದೆ. ನಾವು ಅವರನ್ನು ಕ್ಷಮಿಸಿದ್ದೇವೆ. ರಾಕೇಶ್ ಭಾವುಕರಾಗಿ ಕಣ್ಣೀರು ಹಾಕಿದ ನಂತರ ಮೇಲ್ವರ್ಗದ ಮುಸಲ್ಮಾನರು ಮಾತ್ರವೇ ಅಲ್ಲ, ಕೆಳಸ್ತರದ ಮುಸ್ಲಿಮರು ಕೂಡ ತಾವು ಮೊದಲು ರೈತರು, ಆನಂತರವೇ ಮುಸ್ಲಿಮರು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆಂದು ಜೌಲಾ ಘೋಷಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...