Homeರಾಷ್ಟ್ರೀಯಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಪೊಲೀಸರು ರಾಜಧಾನಿಗೆ ಪ್ರವೇಶಿಸದಂರೆ ತಡೆದ ನಂತರ, ಹಲವಾರು ರೈತರು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಚಹಾ ತಯಾರಿಸಲು ಪ್ರಾರಂಭಿಸಿದ್ದಾರೆ

- Advertisement -
- Advertisement -

ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ ಮೊಹಾಲಿ ಗಡಿಯ ಬಳಿ ಪ್ರತಿಭಟನೆ ನಡೆಸಿದ್ದಾರೆ. ರೈತರು ರಾಜ್ಯ ರಾಜಧಾನಿ ಚಂಡೀಗಢ ಪ್ರವೇಶಿಸದಂತೆ ಸರ್ಕಾರ ತಡೆದ ಪರಿಣಾಮ ರೈತರು ಗಡಿಯಲ್ಲೆ ಬೀಡು ಬಿಟ್ಟಿದ್ದಾರೆ.

ಪ್ರತಿಭಟನಾಕಾರರು ಮುಂದೆ ಹೋಗದಂತೆ ಮೊಹಾಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ನೀರಿನ ಕ್ಯಾನನ್‌ಗಳನ್ನು ನಿಲ್ಲಿಸಿದ್ದಾರೆ. ರೈತರು ಮುಂದಕ್ಕೆ ಚಲಿಸದಂತೆ ಚಂಡೀಗಢ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಅನುಸರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೈತರು ಮುಂದುವರಿಯದಂತೆ ತಡೆದ ನಂತರ ಮಾತನಾಡಿದ ರೈತ ಮುಖಂಡರೊಬ್ಬರು, ಸರ್ಕಾರದೊಂದಿಗೆ ಯಾವುದೇ ಸಂಘರ್ಷವನ್ನು ಬಯಸುವುದಿಲ್ಲ, ಆದರೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಡೆತಡೆಗಳನ್ನು ಮುರಿದು ಚಂಡೀಗಢದತ್ತ ಸಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ದಿಟ್ಟ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯ

ಒಕ್ಕೂಟ ಸರ್ಕಾರವು ಘೋಷಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ವರ್ಷವಿಡೀ ನಡೆದ ಆಂದೋಲನದಂತೆಯೇ ಹಲವಾರು ರೈತ ಸಂಘಟನೆಗಳು ಚಂಡೀಗಢದಲ್ಲಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ಕರೆ ನೀಡಿದ ಮಧ್ಯೆ ಈ ಘಟನೆ ನಡೆದಿದೆ.

ರೈತರ ಬೇಡಿಕೆಗಳು

ತೀವ್ರವಾದ ಶಾಖದ ಅಲೆಗಳಿಂದಾಗಿ ಗೋಧಿ ಉತ್ಪಾದನೆಯಲ್ಲಿ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು, ಪ್ರತಿ ಕ್ವಿಂಟಾಲ್ ಗೋಧಿಗೆ 500 ರೂ ಬೋನಸ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೂನ್ 10 ರಿಂದ ಭತ್ತ ಬಿತ್ತನೆ ಮಾಡಬೇಕೆಂಬ ತಮ್ಮ ಬೇಡಿಕೆಯ ಜೊತೆಗೆ, ಹೆಸರುಕಾಳು ಮತ್ತು ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲು ಅಧಿಸೂಚನೆ ಹೊರಡಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಕಬ್ಬು ಪೂರೈಕೆಯ ಮೇಲಿನ ಬಾಕಿ ಪಾವತಿಯನ್ನು ಬಿಡುಗಡೆ ಮಾಡುವಂತೆ ಕೂಡಾ ರೈತರು ಒತ್ತಾಯಿಸಿದ್ದು, ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ವಿರುದ್ಧ ಪ್ರತಿಭಟಿಸಿದ್ದಾರೆ.

ಇದನ್ನೂ ಓದಿ: ಕೃಷಿ ಭೂಮಿ ರೈತರ ಹಕ್ಕು, ಉದ್ಯಮಿಗಳದ್ದಲ್ಲ: ಭೂಸ್ವಾಧೀನದ ವಿರುದ್ದ ತಿರುಗಿಬಿದ್ದ ರೈತರು

ಪಂಜಾಬ್ ಸಿಎಂ ಭಗವಂತ್ ಮಾನ್ ಭೇಟಿಗೆ ಆಗ್ರಹ

ಪಂಜಾಬ್‌ನ ವಿವಿಧ ಭಾಗಗಳಿಂದ ಬಂದ ರೈತರು ತಮ್ಮೊಂದಿಗೆ ಪಡಿತರ, ಹಾಸಿಗೆಗಳು, ಕೂಲರ್‌ಗಳು, ಫ್ಯಾನ್‌ಗಳು, ಪಾತ್ರೆಗಳು ಮತ್ತು ಸಿಲಿಂಡರ್‌ಗಳನ್ನು ಹೊತ್ತುಕೊಂಡು ಮೊಹಾಲಿಯ ಗುರುದ್ವಾರ ಅಂಬ್ ಸಾಹಿಬ್‌ನಲ್ಲಿ ಸಮಾವೇಶಗೊಂಡಿದ್ದಾರೆ.

ಮುಖ್ಯಮಂತ್ರಿಯ ಪ್ರತಿನಿಧಿಗಳು ರೈತರೊಂದಿಗೆ ಸಭೆ ನಡೆಸುವುದಾಗಿ ಸರ್ಕಾರ ತಿಳಿಸಿದ್ದರೂ, ಪ್ರಸ್ತುತ ದೆಹಲಿಯಲ್ಲಿದ್ದಾರೆ ಎನ್ನಲಾಗಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ನೇರವಾಗಿ ಭೇಟಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಗುರುದ್ವಾರದಿಂದ ಮೆರವಣಿಗೆ ಆರಂಭಿಸಿದ ರೈತರು ಮುಂದೆ ಸಾಗುತ್ತಾ ಮೊದಲ ಸಾಲಿನ ಬ್ಯಾರಿಕೇಡ್‌ಗಳನ್ನು ಮುರಿದ್ದಾರೆ. ಆದಾಗ್ಯೂ, ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಎರಡನೇ ಸಾಲಿನ ಅಡೆತಡೆಗಳನ್ನು ಮುರಿಯದಂತೆ ಪ್ರತಿಭಟನಾಕಾರರನ್ನು ಕೋರಿದ್ದು, ಬದಲಿಗೆ ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ರೈತನಿಗೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಹೆಣಗುವುದು, ಬೆಂಕಿಯೊಡನೆ ಸೆಣಸಿದಂತೆಯೇ!

ಈ ಮಧ್ಯೆ, ಭಾರತಿ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ಅವರು, “ದೆಹಲಿಯಲ್ಲಿ ನಡೆಸಿದ ಆಂದೋಲನದಂತೆಯೇ, ಇಲ್ಲಿಯು ಖಂಡಿತಾ ಯುದ್ಧವನ್ನು ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಅವರನ್ನು ತಡೆದ ನಂತರ, ಹಲವಾರು ರೈತರು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಚಹಾ ತಯಾರಿಸಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಪೊಲೀಸರು ಚಂಡೀಗಢ-ಮೊಹಾಲಿ ರಸ್ತೆಯಲ್ಲಿ ಸಂಚಾರವನ್ನು ಬದಲಾಯಿಸಿದ್ದಾರೆ. ಇದಕ್ಕೂ ಮುನ್ನ ಉಪ ಪೊಲೀಸ್ ಮಹಾ ನಿರೀಕ್ಷಕ ಗುರುಪ್ರೀತ್ ಸಿಂಗ್ ಭುಲ್ಲರ್ ಕೂಡ ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -