Homeಚಳವಳಿಕೃಷಿ ಭೂಮಿ ರೈತರ ಹಕ್ಕು, ಉದ್ಯಮಿಗಳದ್ದಲ್ಲ: ಭೂಸ್ವಾಧೀನದ ವಿರುದ್ದ ತಿರುಗಿಬಿದ್ದ ರೈತರು

ಕೃಷಿ ಭೂಮಿ ರೈತರ ಹಕ್ಕು, ಉದ್ಯಮಿಗಳದ್ದಲ್ಲ: ಭೂಸ್ವಾಧೀನದ ವಿರುದ್ದ ತಿರುಗಿಬಿದ್ದ ರೈತರು

ದೇವನಹಳ್ಳಿ ತಾಲ್ಲೂಕಿನಲ್ಲಿ ಇದುವರೆಗೂ KIADB ನಾಲ್ಕನೇ ಬಾರಿ ಭೂಸ್ವಾಧೀನಕ್ಕೆ ಮುಂದಾಗಿದ್ದು ರೈತರ ಆಕ್ರೋಶಕ್ಕೆ ತುತ್ತಾಗಿದೆ.

- Advertisement -
- Advertisement -

ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದಾಗ ಸುತ್ತಲಿನ ಜನರು ಹಲವು ಕನಸುಗಳನ್ನು ಕಟ್ಟಿಕೊಂಡಿದ್ದರು. ವಿಮಾನ ನಿಲ್ದಾಣವು ಸ್ಥಳೀಯರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನೂರಾರು ಜನ ತಮ್ಮ ಜಮೀನು ಬಿಟ್ಟುಕೊಟ್ಟಿದ್ದರು. ಆದರೆ ಇಂದು ಆ ಕನಸುಗಳೆಲ್ಲ ನುಚ್ಚು ನೂರಾಗಿವೆ. ಭೂಮಿ ಬಿಟ್ಟು ಕೊಟ್ಟವರೆಲ್ಲಾ ಇಂದು ಏನಾಗಿದ್ದಾರೆ ಎಂಬ ಗುರುತು ಸಹ ಸಿಗದಷ್ಟು ಮಟ್ಟಿಗೆ ಕಣ್ಮರೆಯಾಗಿದ್ದಾರೆ. ಅವರಿಗೆ ವ್ಯಾಪಾರ ಉದ್ಯೋಗ ಸಿಗುವುದು ಇರಲಿ, ಈಗ ಅವರು ತಾವು ಇರುವ ಜಾಗದಿಂದಲೂ ಎತ್ತಂಗಡಿಯಾಗಬೇಕಾದ ಅಪಾಯ ಎದುರಿಸುತ್ತಿದ್ದಾರೆ.

“1999-2000 ರ ಸಮಯದಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸುಮಾರು 4,030 ಎಕರೆ ಹೆಚ್ಚು ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದಕ್ಕಾಗಿ ಬಾವಾಪುರ, ಅರಿಶಿನಗುಂಟೆ ಮತ್ತು ಗಂಗೋಪನಹಳ್ಳಿ ಎಂಬ ಮೂರು ಹಳ್ಳಿಗಳ ಜನರನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿತ್ತು. 200ಕ್ಕೂ ಹೆಚ್ಚು ಕುಟಂಬಗಳಿಗೆ ಸೂಲಿಬೆಲೆ ಪಕ್ಕದ ಬಾಲೆಪುರ ಎಂಬಲ್ಲಿ ನಿವೇಶನಗಳನ್ನು ನೀಡಲಾಗಿತ್ತು. ಅವರು ಕಳೆದುಕೊಂಡ ಜಮೀನಿಗೆ ಸೂಕ್ತ ದಾಖಲೆ ಇದ್ದವರಿಗೆ ಮಾತ್ರ ಸರ್ಕಾರ ಪ್ರತಿ ಎಕರೆಗೆ 5 ಲಕ್ಷ ರೂ ಪರಿಹಾರ ನೀಡಿತ್ತು. ಅವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ 2008ರಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಾಗ ಅವರಿಗೆ ಯಾವುದೇ ಉದ್ಯೋಗಗಳನ್ನು ನೀಡಲಿಲ್ಲ! ಹಾಗಾಗಿ ಆ ಜನ ಬಾಲೆಪುರದಲ್ಲಿಯೂ ಸಹ ನೆಲೆಗೊಳ್ಳದೆ ಮನಬಂದ ಕಡೆ ಹೋದರು” ಎನ್ನುತ್ತಾರೆ ಸುಸ್ಥಿರ ಕೃಷಿ ಕುರಿತು ಅಧ್ಯಯನ ನಡೆಸುತ್ತಿರುವ ರಮೇಶ್ ಚೀಮಾಚನಹಳ್ಳಿ.

2014-15 ರಲ್ಲಿ ಸಹ ಏರೋಸ್ಪೇಸ್ ಎಸ್‌ಇಜೆಡ್‌ಗಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 900 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಯ್ತು. ಆ ಜಮೀನು ಹಲವು ಕಾರ್ಖಾನೆಗಳಿಗೆ ನೀಡಿದ್ದರೂ ಇದುವರೆಗೂ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ನಂತರ 2018-19 ರಲ್ಲಿ ಹರಳೂರು ಕೈಗಾರಿಕಾ ಅಭಿವೃದ್ದಿ ಪ್ರದೇಶಕ್ಕಾಗಿ ಮೊದಲ ಹಂತದಲ್ಲಿ 1,300 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅದು ಸಾಲದೆಂಬಂತೆ ಈಗ KIADB ಮತ್ತೆ ಎರಡನೇ ಹಂತದಲ್ಲಿ 1,777 ಎಕರೆ ಜಮೀನು ವಶಪಡಿಸಿಕೊಳ್ಳಲು ಮುಂದಾಗಿದೆ. ಈ ರೀತಿ ಪದೇ ಪದೇ ನಮ್ಮ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿದ್ದರೆ ನಾವೆಲ್ಲಿಗೆ ಹೋಗಬೇಕು? ನಾವು ಹೇಗೆ ಬದುಕಬೇಕು ಎಂದು ಪ್ರಶ್ನಿಸುತ್ತಾರೆ ಬಚ್ಚೇನಹಳ್ಳಿ, ಪಾಳ್ಯ, ಹರಳೂರು, ಪೋಲನಹಳ್ಳಿ, ನಲ್ಲಪನಹಳ್ಳಿ, ಮಲ್ಲೇಪುರ, ನಲ್ಲೂರು, ಹ್ಯಾಡಾಳ ಮುಂತಾದ ಗ್ರಾಮದ ಜನರು.

“ಕೃಷಿ ಭೂಮಿ ರೈತರ ಹಕ್ಕು, ಉದ್ಯಮಿಗಳದ್ದಲ್ಲ” ಎಂಬ ಘೋಷಣೆಯೊಂದಿಗೆ KIADB ಭೂ ಸ್ವಾಧೀನ ವಿರೋಧಿಸಿ ಅನಿರ್ಧಿಷ್ಟವಧಿ ಧರಣಿ ನಡೆಸುತ್ತಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಸುತ್ತಲಿನ 11 ಗ್ರಾಮದ ರೈತರು.

ಈ ನಮ್ಮ ಫಲವತ್ತಾದ ಭೂಮಿಯಲ್ಲಿ ಆಹಾರ ಧಾನ್ಯ, ತರಕಾರಿ, ದ್ರಾಕ್ಷಿ, ಮಾವು, ರೇಷ್ಮೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದು, ನಮ್ಮ ಹಳ್ಳಿಗಳ ಜೀವನೋಪಾಯವೇ ಈ ಕೃಷಿ ಭೂಮಿಯಾಗಿದೆ. ಹತ್ತಿರದಲ್ಲೇ ಇರುವ ಕೃಷಿಭೂಮಿಯಲ್ಲಿ ಕಟ್ಟಿಕೊಂಡಿರುವ ವಾಸದ ಮನೆಗಳು, ಕೋಳಿಫಾರಂ, ಪಾಲಿಹೌಸ್ ಮುಂತಾದವು ಕೂಡ ಸರ್ಕಾರದ ಉದ್ದೇಶಿತ ಸ್ವಾಧೀನ ಪ್ರಕ್ರಿಯೆಯಲ್ಲಿ ಸೇರಲಿವೆ. ಜೊತೆಗೆ, ಭೂರಹಿತರು, ಸಣ್ಣರೈತರು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ದಾಖಲೆಯಾಗದ ತುಂಡು ಜಮೀನುಗಳು ಇದರಲ್ಲಿ ಸೇರುತ್ತವೆ. ಸರ್ಕಾರ ಇದನ್ನೆಲ್ಲ ಕಿತ್ತುಕೊಂಡರೆ ನಾವೆಲ್ಲಿಗೆ ಹೋಗಬೇಕು ಎನ್ನುತ್ತಾರೆ ರೈತರಾದ ಮಾರೇಗೌಡ.

ಅಭಿವೃದ್ದಿಗಾಗಿ, ಕೈಗಾರಿಕೆಗಳಿಗಾಗಿ ಭೂಮಿ ಬಿಟ್ಟು ಕೊಡಿ ಎಂದು ಪದೇ ಪದೇ ಭೂ ಸ್ವಾಧೀನ ಪಡಿಸಿಕೊಂಡರೆ ನಮ್ಮ ಗತಿಯೇನು? ಇಲ್ಲಿನ ಅರ್ಧದಷ್ಟು ಜನರ ಬಳಿ ಸರ್ಕಾರ ಕೇಳುವ ಭೂಮಿಗೆ ಸಂಬಂಧಿಸಿದ 21 ದಾಖಲೆಗಳು ಇಲ್ಲ. ಅವರಿಗೂ ಪರಿಹಾರವೂ ಸಿಗುವುದಿಲ್ಲ. ಹಾಗೆಂದು ಅವರು ಬದುಕಬಾರದೇನು? ದೇವರಾಜು ಅರಸು ಕಾಲದಲ್ಲಿ ಉಳುವವನೆ ಭೂ ಒಡೆಯ ಕಾನೂನಿನ ಅಡಿ ಒಂದಷ್ಟು ಜನರಿಗೆ ಭೂಮಿ ದಕ್ಕಿದೆ. ಅದನ್ನು ಈಗ ಸರ್ಕಾರವೇ ವಾಪಸ್ ಕಿತ್ತುಕೊಳ್ಳುವುದು ಸರಿಯೇ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಇಲ್ಲಿನ 11 ಹಳ್ಳಿಗಳ ಜನರು ಯಾವುದೇ ಕಾರಣಕ್ಕೂ ತಮ್ಮ ಕೃಷಿ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕೂತಿದ್ದಾರೆ. ಏಪ್ರಿಲ್ 4 ರಿಂದ ಆರಂಭವಾದ ಅನಿರ್ಧಿಷ್ಟವಧಿ ಧರಣಿ ಈಗ 8ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಈಗಾಗಲೇ ಕೈಗಾರಿಕ ಸಚಿವರಾದ ಮುರುಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸುಧಾಕರ್, ಸಂಸದ ಬಚ್ಚೆಗೌಡ, ಶಾಸಕರಾದ ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ರನ್ನು ಭೇಟಿ ಮಾಡಿ ನಮ್ಮ ಭೂಮಿ ಉಳಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು, ಮಾಜಿ ಪ್ರಧಾನಿಗಳಾದ ಎಚ್‌.ಡಿ ದೇವೇಗೌಡರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ಕೇಳಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿ ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ಧಿಯ ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಕೈ ಬಿಡಬೇಕು. ಬಗರ್ ಹುಕುಂ ಸಾಗುವಳಿ ಭೂಮಿಗಾಗಿ ಫಾರಂ ನಂಬರ್ 50, 53, 57ರಡಿ ಅರ್ಜಿ ಸಲ್ಲಿಸಿದ ರೈತರಿಗೆ ಭೂಮಿ ಮಂಜೂರು ಮಾಡಬೇಕು ಮತ್ತು ಹಿಂದಿನ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಉದ್ಯೋಗ, ಆರ್ಥಿಕ ಭದ್ರತೆ ಒದಗಿಸಬೇಕು ಎಂಬ ಮೂರು ಹಕ್ಕೊತ್ತಾಯಗಳನ್ನು ಧರಣಿ ಮುಂದುವರೆದಿದೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ರೈತರ ಸಮಸ್ಯೆಗಳನ್ನು ಆಲಿಸಬೇಕಿದೆ.


ಇದನ್ನೂ ಓದಿ: ಇರುವ ಮನೆಗಳ ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಹಂಚುವುದು ಯಾವ ನ್ಯಾಯ?: ಬಿಡಿಎ ವಿರುದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು...

0
NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರಾಜೀನಾಮೆ ಪ್ರಕಟಿಸಿದ ಬೆನ್ನಲ್ಲೆ 'ರವೀಶ್ ಕುಮಾರ್ ಅಫಿಶಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್‌ ಅನ್ನು ಆರಂಭಿಸಿದ್ದಾರೆ. ತಮ್ಮ ಮೊದಲ ವಿಡಿಯೋದಲ್ಲಿ "ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಿರುವ...