HomeಮುಖಪುಟNFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ - ಅಪಾಯಗಳೇನು?

NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

- Advertisement -
- Advertisement -

ಸಿನಿಮಾ ಮನರಂಜನೆಗಷ್ಟೇ ಸೀಮಿತವಾಗದೆ, ವಿವಿಧ ದೇಶ-ಕಾಲಗಳನ್ನು ಚಿತ್ರಿಸಿ ಪ್ರಾಪಂಚಿಕ ಜ್ಞಾನವನ್ನು ಕಟ್ಟಿಕೊಡುವ, ನಮ್ಮ ಚರಿತ್ರೆ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ, ಅರಿವನ್ನು ವಿಸ್ತಾರಗೊಳಿಸುವ, ಹಲವು ಸಮುದಾಯಗಳ ವಿಭಿನ್ನ ಕಥೆಗಳನ್ನು ಹೇಳುವ ಸಶಕ್ತ ಮಾಧ್ಯಮವಾಗಿದೆ. ಸಿನಿಮಾದ ಸಾಧ್ಯತೆಯ ಪಟ್ಟಿ ಇನ್ನೂ ದೊಡ್ಡದಿದೆ. ಸಿನಿಮಾ ಕ್ಷೇತ್ರಕ್ಕಿರುವ ಈ ಅಗಾಧ ಶಕ್ತಿಯ ಅರಿವಿದ್ದರಿಂದಲೇ ಸರ್ಕಾರಗಳು ಸಿನಿಮಾ, ಸಾಕ್ಷ್ಯಚಿತ್ರ, ಮಕ್ಕಳ ಚಿತ್ರ, ಮೂಕಿ ಚಿತ್ರ ಸೇರಿದಂತೆ ಹಲವು ಪ್ರಕಾರಗಳಿಗೆ ಭಿನ್ನ ಸಂಸ್ಥೆಗಳನ್ನು ಕಟ್ಟಿ, ಆಯಾ ಕ್ಷೇತ್ರದಲ್ಲಿ ಘನವಾದುದನ್ನು ಗುರುತಿಸಿ, ನಿರ್ಮಿಸಿ ಜನರಿಗೆ ತಲುಪಿಸುವ ಕೆಲಸ ಮಾಡುವ ಸಲುವಾಗಿ ನಿಯಮಗಳನ್ನು ರೂಪಿಸಿ ಸ್ವಾಯತ್ತತೆ ನೀಡಿತ್ತು. ಇತಿಹಾಸ ನೆನಪಿಡುವಂತಹ ಅಂತಹ ಹತ್ತು ಹಲವು ಮಹತ್ವದ ಕೆಲಸವನ್ನು ಈ ಸಂಸ್ಥೆಗಳು ಮಾಡಿವೆ. ಈ ದಿನದಂತೆ ಟಿವಿ ಚಾನೆಲ್‌ಗಳು ದೊಡ್ಡಮಟ್ಟದಲ್ಲಿ ಪಸರಿಸದೆ ಇದ್ದ ಕಾಲದಲ್ಲಿ ಸಿನಿಮಾ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜನರಿಗೆ ತೋರಿಸಿ, ದೂರದರ್ಶನವನ್ನು ಒಂದು ಶೈಕ್ಷಣಿಕ ಮಾಧ್ಯಮವನ್ನಾಗಿಸುವ ಸಲುವಾಗಿ ದುಡಿದ ಅವುಗಳ ಶಕ್ತಿ ಬೆರಗು ಮೂಡಿಸುವಂತದ್ದು. ಅಂತಹ ಸಂಸ್ಥೆಗಳನ್ನು ಇತ್ತೀಚಿನ ದಶಕಗಳಲ್ಲಿ ತೀರಾ ನಿರ್ಲಕ್ಷ್ಯ ಮಾಡಲಾಗಿತ್ತು. ಅವುಗಳ ಸ್ಥಾಪನೆಯ ಉದ್ದೇಶವನ್ನೇ ಮರೆತು ಲಾಭ ತರುತ್ತಿಲ್ಲವೆಂಬ ನೆಪ ಹೇಳಿ ಅನುದಾನ ನೀಡದೇ ಸತಾಯಿಸಲಾಗುತ್ತಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದೆ, ಹೋಗಿ ಅವುಗಳನ್ನೆಲ್ಲ ಒಂದು ಕೇಂದ್ರೀಕೃತ ಸಂಸ್ಥೆಯಡಿ ವಿಲೀನ ಮಾಡಲು ಸರ್ಕಾರ ಮುಂದಾಗಿದೆ.

ಸಿನಿಮಾಗಳ ಮೂಲಕ ಶೈಕ್ಷಣಿಕ ತಿಳುವಳಿಕೆ ಮೂಡಿಸಲು 1948ರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಚಲನಚಿತ್ರ ವಿಭಾಗಕ್ಕೆ (Film Divison of India -FDI) ತನ್ನದೇ ಆದ ಮಹತ್ವವಿದೆ. ಇದು ಇಂದಿಗೂ 8,000ದಷ್ಟು ಅಪರೂಪದ ಸಿನಿಮಾ, ಸಾಕ್ಷ್ಯಚಿತ್ರಗಳ ಕೋಶ. ಹಲವು ಮಹಾನ್ ವ್ಯಕ್ತಿಗಳ ಕುರಿತು ಸಾಕ್ಷ್ಯಚಿತ್ರಗಳು ಇಲ್ಲಿವೆ. ಇನ್ನು 1955ರಲ್ಲಿ ಸ್ಥಾಪನೆಯಾದ ಭಾರತೀಯ ಮಕ್ಕಳ ಚಿತ್ರ ಸಮಾಜವು (Childrens Film Society Of India- CFSI) ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅನುವಾಗುವ ನೂರಾರು ಸಿನಿಮಾಗಳನ್ನು ಸೃಷ್ಟಿಸಿದೆ. ಎಲ್ಲ ವಯೋಮಾನದ ಮಕ್ಕಳಿಗಾಗಿ ಹಾಗೂ ವಿಶೇಷ ಚೇತನ ಮಕ್ಕಳಿಗಾಗಿ ಚಿತ್ರಗಳು ಎಲ್ಲಾ ಭಾರತೀಯ ಭಾಷೆಗಳಲ್ಲಿ ನಿರ್ಮಾಣಗೊಂಡಿವೆ. ಮಕ್ಕಳ ಚಿತ್ರಗಳಿಂದ ಹಣ ಬರುವುದಿಲ್ಲವೆಂದು ನಿರ್ಮಾಪಕರ ಕೈಚೆಲ್ಲಿದಾಗಲೆಲ್ಲ CFSI ಅನುದಾನ ನೀಡಿ ಅದ್ಭುತವಾದ ಮಕ್ಕಳ ಚಿತ್ರಗಳನ್ನು ನಿರ್ಮಿಸಿದೆ. ಅದೇ ರೀತಿಯಾಗಿ ಭಾರತದ ಚಲನಚಿತ್ರ ಪರಂಪರೆಯನ್ನು ಕಾಪಿಡುವ ಉದ್ದೇಶದಿಂದ 1964ರಲ್ಲಿ ಸ್ಥಾಪನೆಯಾದ ’ರಾಷ್ಟ್ರೀಯ ಚಲನಚಿತ್ರ ಭಂಡಾರವು (National Film Archive Of Inida -NFAI) ಐತಿಹಾಸಿಕವಾದ ಮತ್ತು ಮಹತ್ವಪೂರ್ಣವಾದ 70,000ಕ್ಕೂ ಹೆಚ್ಚು ಭಾರತೀಯ ಸಿನಿಮಾಗಳ ಸಂಗ್ರಹ ಹೊಂದಿದೆ. ಸ್ವಾತಂತ್ರ್ಯಪೂರ್ವದಿಂದ ಆರಂಭವಾಗಿ ಇಂದಿನವರೆಗೂ ನಡೆದಿರುವ ಐತಿಹಾಸಿಕ ಘಟನೆಗಳ ವಿಡಿಯೋಗಳು ಇಲ್ಲಿವೆ. ಅವುಗಳು ಹಾಳಾಗದಂತೆ ಕಾಪಿಡಲಾಗಿದ್ದು, ಈ ದೇಶದ ಯಾರಾದರೂ ಅವುಗಳನ್ನು ನೋಡಬಹುದಾಗಿದೆ. 1973ರಲ್ಲಿ ಸ್ಥಾಪನೆಯಾದ ಚಲನಚಿತ್ರೋತ್ಸವ ನಿರ್ದೇಶನಾಲಯವು (Directorate Of Film Festivals -DFF) ಭಾರತ ಸೇರಿದಂತೆ ಪ್ರಪಂಚದ ಅತ್ಯುತ್ತಮ ಚಿತ್ರಗಳನ್ನು ಪ್ರತಿವರ್ಷ ಸಿನಿಮೋತ್ಸವಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈಗ ಈ ನಾಲ್ಕು ಸಂಸ್ಥೆಗಳನ್ನು 1975ರಲ್ಲಿ ಉತ್ಕೃಷ್ಟ ಗುಣಮಟ್ಟದ ಸಿನಿಮಾ ತೆಗೆಯುವ ಉದ್ದೇಶದಿಂದ ರಚನೆಯಾಗಿದ್ದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ (National Film Development Corporation – NFDC) ವಿಲೀನ ಮಾಡುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಚ್ 30ರಂದು ಘೋಷಿಸಿದೆ.

ಬಸವ ಬಿರಾದರ್

ಈ ನಾಲ್ಕು ಸಂಸ್ಥೆಗಳು ನಷ್ಟದಲ್ಲಿ ನಡೆಯುತ್ತಿವೆ. ಎಷ್ಟೇ ಅನುದಾನ ನೀಡಿದರೂ ಸ್ವಯಂ ನಿಭಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ನೆಪದಲ್ಲಿ ಇವುಗಳನ್ನು ಒಂದು ಕೇಂದ್ರೀಕೃತ ಆಡಳಿತದ ಕೆಳಗೆ ತರಲಾಗುತ್ತಿದೆ. ಹಿರಿಯ ಐಎಎಸ್ ಅಧಿಕಾರಿ ಬಿಮಲ್ ಜುಲ್ಕಾ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ನಡೆಯಿಂದ ಹೆಚ್ಚಿನ ಅನುದಾನ ದೊರಕಿ ಈ ಸಂಸ್ಥೆಗಳ ಪುನರುಜ್ಜೀವನ ಸಾಧ್ಯ ಎಂಬ ಚರ್ಚೆ ಒಂದೆಡೆಯಾದರೆ, ಇದು ಅವುಗಳ ಸ್ವಾಯತ್ತತೆಯನ್ನು ಕಿತ್ತುಕೊಂಡು ಖಾಸಗೀಕರಣದೆಡೆಗೆ ನಡೆಯುವ ಹುನ್ನಾರವಾಗಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ನ್ಯಾಯಪಥ ಪತ್ರಿಕೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪರಿಣಿತರನ್ನು ಮಾತನಾಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈ ನಾಲ್ಕು ಸಂಸ್ಥೆಗಳನ್ನು ಬೇರೆಬೇರೆ ಸಮಯದಲ್ಲಿ ವಿಭಿನ್ನ ಉದ್ದೇಶಗಳಿಗಾಗಿ ಸ್ಥಾಪಿಸಲಾಗಿದೆ. ಭಾರತದ ಬಹು ವೈವಿಧ್ಯತೆಯನ್ನು, ಬಹು ಸಂಸ್ಕೃತಿಯನ್ನು, ಬಹು ಭಾಷೆಗಳ ಒಳಗೊಳ್ಳುವಿಕೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಈ ಸಂಸ್ಥೆಗಳು ಸದ್ದಿಲ್ಲದೆ ಮಾಡಿಕೊಂಡು ಬಂದಿವೆ. ಸುಖ್‌ದೇವ್‌ರಂತಹ ಹೆಸರಾಂತ ಸ್ವತಂತ್ರ ಸಿನಿಮಾ ನಿರ್ದೇಶಕರು ’ಇಂಡಿಯಾ 67’ ಎಂಬಂತಹ ಅತ್ಯುತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಫಿಲ್ಮ್ ಡಿವಿಷನ್ ನೆರವು ನೀಡಿದೆ. ಇಂದು ಫಿಲ್ಮ್ ಸೊಸೈಟಿ ಬಿಟ್ಟರೆ ಮಕ್ಕಳಿಗಾಗಿ ಸಿನಿಮಾ ಮಾಡುವವರು ಅಪರೂಪದಲ್ಲಿ ಅಪರೂಪವಾಗಿದೆ. ಇಂತಹ ಸಂಸ್ಥೆಗಳನ್ನು ಈಗ ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿರುವುದರಿಂದ ಅವುಗಳ ಉದಾತ್ತ ಧ್ಯೇಯಗಳು ಕಣ್ಮರೆಯಾಗುವ ಆತಂಕ ಹುಟ್ಟಿಸಿದೆ. ಈ ಸಂಸ್ಥೆಗಳ ಅಗತ್ಯ ಈ ಕಾಲಕ್ಕೆ ಇಲ್ಲ, ಇತರ ಮಾಧ್ಯಮಗಳ ಮೂಲಕ ಜನ ಅವುಗಳನ್ನು ನೋಡಿಕೊಳ್ಳುತ್ತಾರೆ ಎಂದು ಸರ್ಕಾರ ಹೇಳುತ್ತಿರುವುದು ಅದು ಮುಚ್ಚಿಹೋಗಲಿದೆ ಎಂಬ ಆತಂಕಕ್ಕೆ ಕಾರಣ” ಎನ್ನುತ್ತಾರೆ ಕೆಜಿಎಫ್ ಬಗ್ಗೆ ’ಇನ್ ಸರ್ಚ್ ಆಫ್ ಗೋಲ್ಡ್’ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿರುವ ಬಸವ ಬಿರಾದರ್.

“ಸಂಶೋಧಕರಿಗೆ ಆರ್ಕೈವ್ ಮಾಡಲಾಗಿರುವ ಸಿನಿಮಾಗಳ ಬಗ್ಗೆ ಅಧ್ಯಯನ ಮಾಡಲು, ನೋಡಲು NFAI ಅತ್ಯುತ್ತಮ ವೇದಿಕೆಯಾಗಿದೆ. ಅತಿ ಕಡಿಮೆ ದರದಲ್ಲಿ ನಾವು ಅದರ ಉಪಯೋಗ ಪಡೆಯುತ್ತಿದ್ದೇವೆ. ಅದು NFDC ಕೈಗೆ ಹೋದಲ್ಲಿ ಕಮರ್ಷಿಯಲ್ ಆಗುವ ಅಪಾಯವಿದೆ. ಅದನ್ನು ರಿಲಾಯನ್ಸ್‌ನಂತಹ ದೊಡ್ಡ ಕಂಪನಿಗಳು ಕೊಂಡುಕೊಳ್ಳಲು ಯತ್ನಿಸುತ್ತಿವೆ ಎಂಬ ಆರೋಪಗಳಿವೆ. ಹಾಗೇನಾದರೂ ಆದಲ್ಲಿ ಅದು ಉಳ್ಳವರಿಗೆ ಮಾತ್ರ ಕೈಗೆಟಕುವ ಮಾರಾಟದ ಸರಕಾಗಿ ಬದಲಾಗುತ್ತದೆ. ಈಗಾಗಲೇ ಹಲವು ವರ್ಷಗಳಿಂದ ಫಿಲ್ಮ್ ಡಿವಿಷನ್ ಹಿಂದಿ ಕೇಂದ್ರಿತವಾಗಿ ಕೆಲಸ ಮಾಡುತ್ತಿದೆ. ಸ್ವತಂತ್ರ ನಿರ್ದೇಶಕರ ಬದಲಾಗಿ ಒಂದು ಸಿದ್ಧಾಂತದ ಪರ ಕೆಲಸ ಮಾಡುವವರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ಈಗ ಕೇಂದ್ರಸರ್ಕಾರ ಈ ವಿಲೀನದ ಮೂಲಕ ಮತ್ತಷ್ಟು ಕೇಂದ್ರೀಕರಣ ಮಾಡಲು ಹೊರಟಿರುವುದು ಅವುಗಳ ಸ್ವಾಯತ್ತತ್ತೆಗೆ ಧಕ್ಕೆ ಬರಲಿದೆ ಮಾತ್ರವಲ್ಲ, ಅವುಗಳ ವಿನಾಶಕ್ಕೂ ಕಾರಣವಾಗಲಿದೆ” ಎಂದರು ವಿಮರ್ಶಕರೂ ಆಗಿರುವ ಬಸವ.

“ಈ ನಾಲ್ಕು ಸರ್ಕಾರಿ ಸಂಸ್ಥೆಗಳ ಉದ್ದೇಶ ಲಾಭ ಗಳಿಸುವುದಲ್ಲ. ಈ ಸಂಸ್ಥೆಗಳನ್ನು ಕಟ್ಟಿದ್ದೇ ಭಾರತೀಯ ಸಿನಿಮಾಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕಾಗಿ. ಅವುಗಳನ್ನು ಒಂದು ಕಾರ್ಪೊರೇಷನ್ ಅಡಿಗೆ ವಹಿಸುವುದು ಅಪಾಯಕಾರಿ. ಏಕೆಂದರೆ ಕಾರ್ಪೊರೇಷನ್ ಉದ್ದೇಶವೇ ವ್ಯಾವಹಾರಿಕವಾದುದು” ಎನ್ನುತ್ತಾರೆ ಹಲವು ಬಾರಿ ಸ್ವರ್ಣಕಮಲ ಪುರಸ್ಕೃತ ಹಿರಿಯ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು.

ಗಿರೀಶ್ ಕಾಸರವಳ್ಳಿ

“ಫಿಲ್ಮ್ ಡಿವಿಷನ್ ನೆಹರೂರವರ ಕನಸಿನ ಕೂಸಾಗಿದೆ. ಅದು ಸರ್ಕಾರಿ ಯೋಜನೆಗಳನ್ನು ಜನಪ್ರಿಯ ಮಾಡಲು ಇರುವ ಮಾಧ್ಯಮ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಅದು ಬಹಳ ಒಳ್ಳೆಯ ಸಿನಿಮಾಗಳನ್ನು, ಭಾರತದಲ್ಲಿನ ಎಲ್ಲಾ ಮಹತ್ವದ ಘಟನೆಗಳನ್ನು ದಾಖಲು ಮಾಡಿಟ್ಟಿದೆ. ಬಾಕ್ರಾನಂಗಲ್ ಅಣೆಕಟ್ಟು ಕಟ್ಟಿದ್ದು, ಬಾಹ್ಯಾಕಾಶ ಸಂಸ್ಥೆ ಕಟ್ಟಿದ್ದು ಎಲ್ಲವೂ ಅಲ್ಲಿದೆ. ಜೊತೆಗೆ ರವೀಂದ್ರನಾಥ್ ಟಾಗೂರ್, ಎಂಎಸ್ ಸುಬ್ಬಲಕ್ಷ್ಮಿ ಥರದ ಮಹಾನ್ ವ್ಯಕ್ತಿಗಳ ಜೀವನ ಚಿತ್ರಗಳು ಅಲ್ಲಿ ನಮಗೆ ಸಿಗುತ್ತವೆ. ಇಂತಹ ಐತಿಹಾಸಿಕ ಸಂಸ್ಥೆ ಲಾಭ ತಂದುಕೊಟ್ಟಿಲ್ಲ ಎಂದು ಹೇಳುವುದೇ ತಪ್ಪಲ್ಲವೇ” ಎನ್ನುತ್ತಾರೆ ಕಾಸರವಳ್ಳಿ.

ಅವರು ಮುಂದುವರೆದು “ಚಿಲ್ದ್ರನ್ ಫಿಲ್ಮ್ ಸೊಸೈಟಿಯು ಮಕ್ಕಳ ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಕೆಲವೊಂದು ಮಾತ್ರವೇ ವಿಫಲವಾಗಿರಬಹುದು. ಅದನ್ನು ಹೊರತುಪಡಿಸಿ ಈ ಸಂಸ್ಥೆಗಳು ಅಗಾಧ ಸಾಧನೆಗೈದಿವೆ. ಸುಳ್ಳು ನೆವ ಕೊಟ್ಟು ಇವುಗಳನ್ನು ಕಾರ್ಪೋರೇಷನ್‌ಗೆ ಕೊಡುವುದನ್ನು ಒಪ್ಪುತಕ್ಕದ್ದಲ್ಲ. ಭಾರತದಲ್ಲಿ ಬೇರೆ ರೀತಿಯ ಸಿನಿಮಾಗಳು ತಯಾರಾಗುತ್ತಿಲ್ಲ ಎಂಬ ಕಾರಣಕ್ಕಾಗಿ NFDC ರಚನೆಯಾಗಿದೆ. ಅದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವುದನ್ನು, ವ್ಯವಹಾರಿಕವಾಗಿ ಲಾಭವಾಗುವ ಸಿನಿಮಾಗಳನ್ನು ಮಾತ್ರವೇ ಮಾಡಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ ಎಂದರು.

“ಈ ನಾಲ್ಕು ಸಂಸ್ಥೆಗಳು ಸ್ಥಾಪನೆಯಾಗಿದ್ದು ಬೇರೆಬೇರೆ ಉದ್ದೇಶಗಳಿಗಾಗಿ. ಮಕ್ಕಳಿಗಾಗಿ, ಸಾಕ್ಷ್ಯಚಿತ್ರಗಳಿಗಾಗಿ ಅಥವಾ ಹೊಸ ರೀತಿಯ ಸಿನಿಮಾ ತಯಾರಿಕೆಗೆ ನೆರವು ನೀಡಲು, ಸಿನಿಮಾಗಳನ್ನು ರಕ್ಷಿಸಿ ಇಡಲು ಇವುಗಳು ಸ್ಥಾಪನೆಯಾಗಿವೆ. ಇವು ಒಂದೇ ದೋಣಿಯಲ್ಲಿ ಸಾಗುವಾಗ ಒಳಿತಿಗಿಂತ ಕೆಡುಕು ಆಗುವುದೇ ಹೆಚ್ಚು” ಎನ್ನುತ್ತಾರೆ ’ಪುಟ್ಟಕ್ಕನ ಹೈವೇ’ ಖ್ಯಾತಿಯ ಸಿನಿಮಾ ನಿರ್ದೇಶಕ ಬಿ.ಸುರೇಶ್.

ಬಿ.ಸುರೇಶ್

“ಫಿಲ್ಮ್ ಆರ್ಕೈವ್ಸ್ ಒಂದಷ್ಟು ಒಳ್ಳೆಯ ಕೆಲಸ ಮಾಡುತ್ತಿತ್ತು. NFDCಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಪಡೆದಿತ್ತು. ಆದರೆ ಕಳೆದ ಎರಡು ಮೂರು ದಶಕಗಳಿಂದ ಈ ಸಂಸ್ಥೆಗಳನ್ನು ಹೇಗೆ ನಿರ್ಜೀವಗೊಳಿಸಲಾಯಿತು ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. 2000ರ ನಂತರವಂತೂ ಈ ಸಂಸ್ಥೆಗಳಿಗೆ ಸಮರ್ಪಕ ಅನುದಾನ ನೀಡದೆ, ಗಮನ ನೀಡದೆ ಹತಾಶ ಸ್ಥಿತಿಯಲ್ಲಿರಿಸಲಾಗಿತ್ತು. ಒಂದು ಸಂಸ್ಥೆಯನ್ನು ಆರಂಭಿಸಿದಾಗ ಅದಕ್ಕೆ ಗುರಿ-ಉದ್ದೇಶಗಳನ್ನು ಸ್ಪಷ್ಟಪಡಿಸಲಾಗಿರುತ್ತದೆ. ಇಲ್ಲಿ ಆ ಉದ್ದೇಶಗಳಿಗೆ ಧಕ್ಕೆ ತರಲಾಗುತ್ತಿದೆ. ಇಷ್ಟೆಲ್ಲಾ ಅಪಾಯಗಳ ಹೊರತಾಗಿಯೂ ಸಕಾರಾತ್ಮಕವಾಗಿ ಯೋಚಿಸುವುದಾದರೆ ಇನ್ನು ಮುಂದೆ NFDCಯು ಫಿಲ್ಮ್ ಸೊಸೈಟಿಗೆ ಸಹಾಯ ಮಾಡಿ ಅತ್ಯುತ್ತಮ ಚಿತ್ರಗಳನ್ನು ತಯಾರಿಸಬಹುದು. ಅದೇ ರೀತಿ ಆರ್ಕೈವ್‌ಗೆ ಅನುದಾನ ನೀಡಿ ಹೆಚ್ಚುಹೆಚ್ಚು ಸಿನಿಮಾಗಳನ್ನು ಸಂಗ್ರಹಿಸಿಡಲಿ ಎಂದು ಆಶಿಸುತ್ತೇನೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳ ಬೆನ್ನುಮೂಳೆ ಮುರಿಯುತ್ತಿರುವುದನ್ನು ನೋಡಿದರೆ ಭಾರತ ದೇಶದಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು  ಮಾರಿಬಿಡುವ ಪ್ರಯತ್ನ ಆಗುತ್ತಿದೆ ಎಂದೆನಿಸುತ್ತಿದೆ. ಅದರ ಮುಂದುವರಿಕೆಯ ಭಾಗವಾಗಿ ಈ ವಿಲೀನ ಆಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನಮ್ಮ ಅನುಮಾನಗಳು ಸತ್ಯವಾಗದಿರಲಿ, ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ” ಎಂದರು ಬಿ ಸುರೇಶ್.

ಸರ್ಕಾರಿ ಕ್ಷೇತ್ರದ ಸಂಸ್ಥೆಗಳು ಲಾಭದ ದೃಷ್ಟಿಯಿಂದ ಯೋಚಿಸದೆ, ಖಾಸಗಿ ವಲಯ ಹೆಚ್ಚಾಗಿ ಕೈಗೆತ್ತಿಕೊಳ್ಳದ ಜನಪರವಾದ ಕೆಲಸಗಳನ್ನು ಮಾಡಲೆಂದೆ ಕಟ್ಟಿರುವಂತಹವು. ಈಗ ನಷ್ಟದ ಕಾರಣ ನೀಡಿ ಮಾಡುವ ಇಂತಹ ವಿಲೀನ ಯೋಜನೆಗಳಿಂದ ಜನಹಿತದ ಸಿನಿಮಾ ಕೆಲಸಗಳಿಗೆ ಹಿನ್ನಡೆಯಾಗಬಹುದೇ ಎಂಬ ಸಂದೇಹ ಎದುರಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...