Homeಮುಖಪುಟಹರಿಯಾಣದ ನೂಹ್ ಕೋಮುಗಲಭೆ; ಸರ್ಕಾರಿ ಪ್ರಾಯೋಜನೆಯ ಅನುಮಾನ ಮೂಡಿಸುತ್ತಿರುವ ಘಟನೆಗಳು

ಹರಿಯಾಣದ ನೂಹ್ ಕೋಮುಗಲಭೆ; ಸರ್ಕಾರಿ ಪ್ರಾಯೋಜನೆಯ ಅನುಮಾನ ಮೂಡಿಸುತ್ತಿರುವ ಘಟನೆಗಳು

- Advertisement -
- Advertisement -

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು 100 ದಿನಗಳಾದರೂ ಗಲಭೆಗಳು, ಸಾವುನೋವುಗಳು ಕೊನೆಯಾಗಿಲ್ಲ. ಅದೇ ಸಮಯದಲ್ಲಿ ಉತ್ತರಾಖಂಡದಲ್ಲಿ ಕೋಮುಗಲಭೆಗಳು ನಡೆದಿದ್ದವು. ಮಹಾರಾಷ್ಟ್ರದಲ್ಲಿ ಔರಂಗಜೇಬ್ ವಿಚಾರಕ್ಕೆ ಕೋಮು ಘರ್ಷಣೆಗಳು ಸಂಭವಿಸಿದ್ದವು. ಈಗ ಹರಿಯಾಣದಲ್ಲಿಯೂ ಕೋಮು ಗಲಭೆಗಳು ಆರಂಭವಾಗಿದ್ದು 6 ಜನರನ್ನು ಬಲಿ ತೆಗೆದುಕೊಂಡಿವೆ. ಈ ನಾಲ್ಕು ರಾಜ್ಯಗಳಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು ಕಾಕತಾಳೀಯವೇ?

ದೆಹಲಿಗೆ ಅಂಟಿಕೊಂಡಿರುವ ಕೃಷಿ ಪ್ರಧಾನ ರಾಜ್ಯ ಹರಿಯಾಣದಲ್ಲಿ ಇದುವರೆಗೂ ಕೋಮು ಗಲಭೆಗಳು ಹೆಚ್ಚಿನ ಪ್ರಮಾಣದಲ್ಲಿ ಘಟಿಸಿದ್ದಿಲ್ಲ. ಬದಲಿಗೆ ಅದು ಜಾತಿ ಸಂಘರ್ಷಗಳಿಗೆ ಕುಖ್ಯಾತಿಯಾಗಿತ್ತು. ಎನ್‌ಸಿಆರ್‌ಬಿ ವರದಿಗಳನ್ನು ಗಮನಿಸಿದರೆ 2019 ರಲ್ಲಿ 50 ಕೋಮು ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದರೆ, 2020ರಲ್ಲಿ ಆ ಸಂಖ್ಯೆ 51; ಮತ್ತು 2021ರಲ್ಲಿ ಅದು 40ಕ್ಕೆ ಇಳಿದಿದೆ. ಹೆಚ್ಚುಕಡಿಮೆ ಅಷ್ಟೇ ಪ್ರಮಾಣದಲ್ಲಿ ಜಾತಿ ಸಂಘರ್ಷಗಳು ಸಹ ವರದಿಯಾಗಿವೆ. ಹೀಗಿರಬೇಕಾದರೆ ಏಕಾಏಕಿ ಇಷ್ಟೊಂದು ದೊಡ್ಡ ಪ್ರಮಾಣದ ಕೋಮು ಹಿಂಸಾಚಾರ ಸಂಭವಿಸಿದ್ದಾದರೂ ಏಕೆ ಎಂಬ ಪ್ರಶ್ನೆ ಏಳುತ್ತದೆ.

ಸರ್ಕಾರ ಸ್ವಲ್ಪ ಜಾಗರೂಕತೆ ವಹಿಸಿದ್ದರೆ ಇತ್ತೀಚಿಗೆ ಸಂಭವಿಸಿದ ನೂಹ್ ಹಿಂಸಾಚಾರವನ್ನು ನಡೆಯದಂತೆಯೇ ತಡೆಯಬಹುದಿತ್ತು. ಹಿಂಸಾಚಾರ ಆರಂಭವಾದ ನಂತರವಾದರೂ ಮನಸ್ಸು ಮಾಡಿದ್ದರೆ ಸಂಪೂರ್ಣವಾಗಿ ನಿಗ್ರಹಿಸಲು ಸಾಧ್ಯವಿತ್ತು. ಆದರೆ ಅದಾಗಲಿಲ್ಲ. ಆಳುವ ಸರ್ಕಾರಗಳ ಬೆಂಬಲವಿಲ್ಲದಿದ್ದರೆ ಎಂತಹ ಕೋಮು ಗಲಭೆಗಳು ಸಹ ಸುದೀರ್ಘ ಕಾಲದವರೆಗೆ ಮುಂದುವರಿಯುವುದು ಸುಲಭವಲ್ಲ; ಇನ್ನೊಂದು ವರ್ಷದಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಗೆ ಹೋಗುತ್ತಿರುವಾಗ ಇದು ರಾಜ್ಯ ಪ್ರಾಯೋಜಿತ ಹಿಂಸಾಚಾರ ಎಂದು ವಿಪಕ್ಷಗಳು ಆರೋಪದಲ್ಲಿ ಹುರುಳಿದೆ ಅನಿಸುತ್ತಿದೆ.

ದೆಹಲಿಯಿಂದ 85 ಕಿ.ಮೀ ದೂರದಲ್ಲಿರುವ ಮುಸ್ಲಿಂ ಬಾಹುಳ್ಯದ ನೂಹ್ ಜಿಲ್ಲೆಯಲ್ಲಿ ಜುಲೈ 31ರಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳಿಂದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಹಲವು ವರ್ಷಗಳಿಂದ ನಿಂತಿದ್ದ ಈ ಯಾತ್ರೆಯನ್ನು ಕಳೆದ ಮೂರು ವರ್ಷಗಳಿಂದ ಮತ್ತೆ ಆರಂಭಿಸಲಾಗಿತ್ತು. ಈ ಯಾತ್ರೆಗೆ ಮುನ್ನ ಜುಲೈ 27ರಂದು ನೂಹ್ ಪೊಲೀಸರು ಮತ್ತು ಜಿಲ್ಲೆಯ ಅಧಿಕಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಜಮೀಯತ್ ಉಲೇಮಾ-ಇ-ಹಿಂದ್ ಸಂಘಟನೆಗಳ ಪ್ರತಿನಿಧಿಗಳು ಹಾಗು ಪ್ರದೇಶದ ನಿವಾಸಿಗಳ ಸಭೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಅಲ್ಲಿ ಪೊಲೀಸರು ಮತ್ತು ಮುಸ್ಲಿಂ ಪ್ರತಿನಿಧಿಗಳು ಯಾತ್ರೆಯಲ್ಲಿ ಆಯುಧಗಳನ್ನು ನಿಷೇಧಿಸಬೇಕೆಂದು ಒತ್ತಿ ಹೇಳಿದ್ದರು.

ಕಿಚ್ಚು ಹಚ್ಚಿದ ಫ್ರಿಂಜ್ ಎಲಿಮೆಂಟ್ ಮೋನು ಮಾನೇಸಾರ್ ವಿದೇವ್

ಈ ಒಬ್ಬ ವ್ಯಕ್ತಿಯ ಮಧ್ಯಪ್ರವೇಶವಿಲ್ಲದಿದ್ದರೆ ಈ ಹಿಂಸಾಚಾರವೇ ನಡೆಯುತ್ತಿರಲಿಲ್ಲವೇನೋ! ತನ್ನನ್ನು ತಾನು ಗೋರಕ್ಷಕ ಎಂದು ಕರೆದುಕೊಳ್ಳುವ, ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ, ಭಿವಾನಿ ಜಿಲ್ಲೆಯಲ್ಲಿ ಗೋ ಸಾಗಣೆ ಆರೋಪದಲ್ಲಿ ನಾಸಿರ್-ಜುನೈದ್ ಎಂಬ ಇಬ್ಬರು ಮುಸ್ಲಿಂ ಯುವಕರ ಕೊಲೆ ಆರೋಪ ಹೊತ್ತಿರುವ ಬಜರಂಗದಳದ ಕಾರ್ಯಕರ್ತ ಮೋನು ಮಾನೇಸಾರ್ ಆಲಿಯಾಸ್ ಮೋಹಿತ್ ಯಾದವ್ ಮಾಡಿದ ವಿದೇವ್‌ವೊಂದು ಕ್ಷೋಭೆಗೆ ಕಾರಣವಾಯ್ತು.

ಮೋನು ಮನೇಸರ್ ವಿದೇವ್

ಜುಲೈ 29ರಂದು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ “ನಾನು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಇಡೀ ತಂಡವೂ ಹಾಜರಿರುತ್ತದೆ. ಮೇವಾತ್‌ಗೆ ಬರುವುದು ಖಚಿತ” ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದ. ಕಳೆದ ಫೆಬ್ರವರಿಯಲ್ಲಿ ಭಿವಾನಿ ಜಿಲ್ಲೆಯಲ್ಲಿ ದನ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಮುಸ್ಲಿಂ ಯುವಕರನ್ನು ಎಸ್‌ಯುವಿ ಒಂದರಲ್ಲಿ ಕೂಡಿಹಾಕಿ ಬೆಂಕಿ ಹಚ್ಚಿ ಸಾಯಿಸಲಾಗಿತ್ತು. ಅವರ ಕೊಲೆ ಆರೋಪ ಹೊತ್ತಿರುವ ವ್ಯಕ್ತಿ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂಬುದು ಕೆಲವರನ್ನು ಕೆರಳಿಸಿತ್ತು. ಈ ಸಂದರ್ಭದಲ್ಲಾದರೂ ಜಿಲ್ಲಾಡಳಿತ ಮತ್ತು ಪೊಲೀಸರು ಯಾತ್ರೆಗೆ ಅನುಮತಿ ನಿರಾಕರಿಸಬಹುದಿತ್ತು ಅಥವಾ ಪರಿಷ್ಕರಿಸಬಹುದಿತ್ತು. ಆದರೆ ಅವರು ಅದಕ್ಕೆ ಮುಂದಾಗಲಿಲ್ಲ. ಸಾಲದೆಂಬಂತೆ ಮೋನು ಮಾನೇಸಾರ್ ಇದುವರೆಗೂ ನಾಪತ್ತೆಯಾಗಿದ್ದಾನೆ.

ಅಂದು ನಡೆದುದ್ದೇನು?

ಜುಲೈ 31ರಂದು ಯಾತ್ರೆ ಆರಂಭವಾದಾಗ ಸಾವಿರಾರು ಜನರು ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಹಿಡಿದು ನೂಹ್ ಜಿಲ್ಲೆಯ ನಲ್ಹಾರ್ ಪ್ರದೇಶದಿಂದ ಮೆರವಣಿಗೆ ಆರಂಭಿಸಿದರು. ಮೆರವಣಿಗೆಯ ನೇತೃತ್ವ ವಹಿಸಿದ್ದ ಸಾವಿರಾರು ಜನರ ಗುಂಪಿನಲ್ಲಿ ಮೇವಾತ್‌ನ ಸ್ಥಳೀಯರು ಅತಿ ಕಡಿಮೆ ಸಂಖ್ಯೆಯಲ್ಲಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಮೆರವಣಿಗೆಯು ಖೇಡ್ಲಾ ಮೋಡ್‌ಗೆ ಪ್ರವೇಶಿಸಿದಾಗ ಗುಂಪಿನಲ್ಲಿ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಲಾಗಿದೆ. ಹಾಗಾಗಿ ಅಲ್ಲಿ ಕಲ್ಲು ತೂರಾಟ ಆರಂಭವಾಗಿದೆ. ಸಂಜೆ ನಾಲ್ಕು ಗಂಟೆ ವೇಳೆಗೆ ಹಿಂಸಾಚಾರ ಇಡೀ ನೂಹ್ ನಗರಕ್ಕೆ ಹರಡಿದೆ. ದುಷ್ಕರ್ಮಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಅಂಗಡಿಗಳು, ವಾಹನಗಳು, ಪೊಲೀಸ್ ಠಾಣೆಗಳು ಮತ್ತು ಪೆಟ್ರೋಲ್ ಪಂಪ್‌ಗಳನ್ನು ಧ್ವಂಸ ಮಾಡಿದ್ದಾರೆ. ಬಂದೂಕಿನಿಂದ ಗುಂಡು ಸಹ ಹಾರಿಸಿದ್ದಾರೆ. ಇಬ್ಬರು ಹೋಮ್‌ಗಾರ್ಡ್‌ಗಳು ಸಾವನಪ್ಪಿದ್ದು, ಹಲವರು ಗಾಯಗೊಂಡರು. ಸರ್ಕಾರ ನೂಹ್ ಜಿಲ್ಲೆಯಲ್ಲಿ ಇಂಟರ್ನೆಟ್ ಬಂದ್ ಮಾಡಿತು. ಆದರೂ ಗುರ್ಗಾಂವ್, ಫರಿದಾಬಾದ್ ಮತ್ತು ಪಲ್ವಾಲ್ ನಗರಗಳಿಗೆ ಹಿಂಸಾಚಾರ ಹರಡಿತು.

ಇದನ್ನೂ ಓದಿ: ಹರಿಯಾಣ ಹಿಂಸಾಚಾರ: ಹಿಂದುತ್ವ ಗುಂಪುಗಳ ಬೆದರಿಕೆಗೆ ಪಲಾಯಾಣ ಮಾಡುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರು

ಆಗಸ್ಟ್ 1ರ ಬೆಳಗ್ಗೆ ಬಾದಶಹಪುರದ ಮುಸ್ಲಿಮರ ಅನೇಕ ಅಂಗಡಿಗಳನ್ನು ಲೂಟಿ ಮಾಡಿ ಸುಟ್ಟು ಹಾಕಲಾಯಿತು. ಗುರ್ಗಾಂವ್‌ನ ಸೆಕ್ಟರ್ 57ರ ಅಂಜುಮನ್ ಜಮಾ ಮಸೀದಿಯನ್ನು ನೂರಾರು ಜನಸಮೂಹವು ಸೇರಿ ಸುಟ್ಟುಹಾಕಿತು. ಮಸೀದಿಯ 22 ವರ್ಷದ ಡೆಪ್ಯೂಟಿ ಇಮಾಮ್ ಮೊಹಮ್ಮದ್ ಶಾದ್ ಹಲವು ಗುಂಡೇಟುಗಳಿಂದ ಮೃತಪಟ್ಟರು. ಪೊಲೀಸರು ಕರ್ಫ್ಯೂ ವಿಧಿಸಿದರು. ಆಗಸ್ಟ್ 2ರಂದು ಗಾಯಗೊಂಡಿದ್ದ ಬಜರಂಗದಳದ ಸಂಯೋಜಕ ಪ್ರದೀಪ್ ಶರ್ಮಾ ಮೃತಪಟ್ಟರು. ಸಾವಿನ ಸಂಖ್ಯೆ 6ಕ್ಕೆ ಏರಿತು. 116 ಜನರನ್ನು ಬಂಧಿಸಲಾಯಿತು. ಇಂಟರ್‌ನೆಟ್ ಮತ್ತು ಎಸ್‌ಎಂಎಸ್ ಸೇವೆಗಳ ನಿರ್ಬಂಧ ಮುಂದುವರಿಯಿತು.

ಆಗಸ್ಟ್ 5ರಂದು ನಲ್ಹಾರ್ ನಗರದಲ್ಲಿ 60 ಕಟ್ಟಡಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಕರೆಕೊಟ್ಟರು. ಅತಿಕ್ರಮಣ ಒತ್ತುವರಿ ತೆರವು ಎಂಬ ಹೆಸರು ನೀಡಲಾಯಿತು. ಆಗಸ್ಟ್ 6ರಂದು ಮತ್ತಷ್ಟು ಕಟ್ಟಡಗಳನ್ನು ಹೊಡೆದುರುಳಿಸಲಾಯಿತು. ಆಗಸ್ಟ್ 7ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹರಿಯಾಣ-ಪಂಜಾಬ್ ಹೈಕೋರ್ಟ್ ತಡೆ ನೀಡುವಷ್ಟರಲ್ಲಿ 162 ಶಾಶ್ವತ ಕಟ್ಟಡಗಳನ್ನು ಮತ್ತು 591 ತಾತ್ಕಾಲಿಕ ಕಟ್ಟಡಗಳನ್ನು ನೆಲಸಮ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ನೆಪದಲ್ಲಿ ಒಂದೇ ಧರ್ಮದ ಕಟ್ಟಡಗಳನ್ನು ನೆಲಸಮ ಮಾಡಿದ್ದೇಕೆ? ಜನಾಂಗೀಯ ನಿರ್ಮೂಲನೆ ಮಾಡಲು ಹೊರಟಿದ್ದೀರಾ ಎಂದು ಕೋರ್ಟ್ ಹರಿಯಾಣ ಸರ್ಕಾರಕ್ಕೆ ಛೀಮಾರಿ ಹಾಕಿ ನೋಟಿಸ್ ಜಾರಿಗೊಳಿಸಿದೆ.

ಬಿಟ್ಟು ಬಜರಂಗಿ

ಇದುವರೆಗೂ 56 ಎಫ್‌ಐಆರ್‌ಗಳನ್ನು ಹಾಕಿದ್ದಲ್ಲದೇ 156 ಜನರನ್ನು ಬಂಧಿಸಲಾಯಿತು. ಘರ್ಷಣೆಯ ಸಮಯದಲ್ಲಿ ಸ್ಥಳೀಯ ಡೀಲರ್‌ಗಳಿಂದ ಕನಿಷ್ಠ 500 ದೇಶಿ ನಿರ್ಮಿತ ಪಿಸ್ತೂಲ್ ಮತ್ತು ರಿವಾಲ್ವರ್‌ಗಳನ್ನು ಖರೀದಿಸಲಾಗಿದೆ. ದಾಳಿಗೊಳಗಾದ ಮನೆಗಳ ಛಾವಣಿಯ ಮೇಲೆ ಖಾಲಿ ಗಾಜಿನ ಬಾಟಲಿಗಳು, ಸುಧಾರಿತ ಪೆಟ್ರೋಲ್ ಬಾಂಬ್‌ಗಳು, ಕಲ್ಲುಗಳು, ಕಬ್ಬಿಣದ ರಾಡ್‌ಗಳು ಮತ್ತು ಮರದ ತುಂಡುಗಳು ಸಹ ಪತ್ತೆಯಾಗಿವೆ.

ಫರಿದಾಬಾದ್‌ನಲ್ಲಿ ಗೋರಕ್ಷಾ ಬಜರಂಗದಳದ ಅಧ್ಯಕ್ಷ ಬಿಟ್ಟು ಬಜರಂಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. 45 ವರ್ಷದ ಬಜರಂಗಿ ಅಲಿಯಾಸ್ ರಾಜ್ ಕುಮಾರ್, ಫರಿದಾಬಾದ್‌ನ ಗಾಜಿಪುರ ಮಾರುಕಟ್ಟೆ ಮತ್ತು ದಬುವಾ ಮಾರ್ಕೆಟ್‌ನಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ತನ್ನ ಗೋರಕ್ಷಕ ಗುಂಪನ್ನು ನಡೆಸುತ್ತಿದ್ದಾನೆ. ಕಳೆದ ಒಂದು ತಿಂಗಳಲ್ಲಿ ಅವನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಮೂರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಹಿಂಸಾಚಾರ ಭುಗಿಲೇಳಲು ಆತನೇ ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ.

ಹಿಂಸಾಚಾರದ ಸುಳಿವು ಮೊದಲೇ ಇತ್ತು ಎಂದ ಇನ್ಸ್‌ಪೆಕ್ಟರ್!

ಹರಿಯಾಣದಲ್ಲಿ ಕೋಮು ಹಿಂಸಾಚಾರ ವಾರಗಳ ಕಾಲ ಹಬ್ಬುತ್ತಿದ್ದರೂ ಅಲ್ಲಿನ ಸರ್ಕಾರ ಅದನ್ನು ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಯಿತು. ಸಿಎಂ ಕಟ್ಟರ್ ಕೇಂದ್ರದಿಂದ ತುಕಡಿಗಳಿಗೆ ಬೇಡಿಕೆ ಇಡುತ್ತಿದ್ದರೆ ಹೊರತು ಮುಂಜಾಗ್ರತೆ ವಹಿಸಲು ವಿಫಲರಾಗಿದ್ದರು. ಇನ್ನು ಗೃಹ ಸಚಿವ ಅನಿಲ್ ವಿಜ್ ಜೊತೆಗಿನ ಅವರ ಮುಸುಕಿನ ಗುದ್ದಾಟವೂ ಕಾನೂನು ಸುವ್ಯವಸ್ಥೆ ಕುಸಿಯಲು ಕಾರಣವಾಯಿತು.

ಗಲಭೆಗಳನ್ನು ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅನಿಲ್ ವಿಜ್, “ನನಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಎಂಗೆ ಮಾತ್ರ ಎಲ್ಲಾ ಮಾಹಿತಿ ಸಿಗುತ್ತಿದೆ ಮತ್ತು ಮಾಧ್ಯಮಗಳಿಗೆ ಅವರೇ ಹೇಳಿಕೆ ನೀಡುತ್ತಾರೆ. ನಿಜವೆಂದರೆ ನನಗೆ ನನ್ನದೇ ಮೂಲಗಳಿಂದ ಮಾಹಿತಿ ಬರುವವರೆಗೂ ಗಲಭೆ ನಡೆಯುತ್ತಿರುವುದು ಗಮನಕ್ಕೆ ಬಂದಿರಲಿಲ್ಲ” ಎಂದು ಹೇಳಿ ಬಹಿರಂಗವಾಗಿ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಏಕೆಂದರೆ ಹರಿಯಾಣದ ಮುಖ್ಯಮಂತ್ರಿ ಕಟ್ಟರ್‌ರವರು ಗುಪ್ತಚರ ಇಲಾಖೆಯ ಸಿಐಡಿ (ಅಪರಾಧ ತನಿಖಾ ವಿಭಾಗವನ್ನು) ಗೃಹ ಇಲಾಖೆಯಿಂದ ಕಿತ್ತು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರಿಬ್ಬರ ನಡುವೆ ಕಿತ್ತಾಟ ಮುಂದುವರೆದಿದೆ.

ಅನಿಲ್ ವಿಜ್

ಇನ್ನು ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರು ಹಿಂಸಾಚಾರದ ಸುಳಿವು ಮೊದಲೇ ಇತ್ತು ಎಂದು ಹೇಳಿಕೆ ನೀಡಿರುವ ವಿದೇವ್ ವೈರಲ್ ಆಗಿತ್ತು. ಈ ಕುರಿತು ಮಾತನಾಡಿರುವ ಅನಿಲ್ ವಿಜ್, “ಹಾಗಿದ್ದರೆ ಅವರು ಅದನ್ನು ಯಾರ ಗಮನಕ್ಕೆ ತಂದಿದ್ದರು? ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆ ವೀಡಿಯೊವನ್ನು ಪರಿಶೀಲಿಸಬೇಕು ಮತ್ತು ಸಿಎಂ ಕಚೇರಿ ಅಥವಾ ಸಿಐಡಿ ಗೃಹ ಇಲಾಖೆ ಅಥವಾ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆಯೇ” ಎಂದು ಪರಿಶೀಲಿಸುವಂತೆ ಕೇಳಿದ್ದಾರೆ.

ಗೃಹ ಇಲಾಖೆಯೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ವಿಳಂಬ ಮಾಡಿದ್ದೇಕೆ ಎಂದು ಪ್ರಶ್ನಿಸಿರುವ ಆಪ್ ಪಕ್ಷವು ಇದು ರಾಜ್ಯ ಪ್ರಾಯೋಜಿತ ಗಲಭೆ ಎಂದು ಆರೋಪಿಸಿದೆ.

ಕೇಂದ್ರ ಸಚಿವರ ಅಸಮಾಧಾನ

’ಮೆರವಣಿಗೆಯಲ್ಲಿ ಆಯುಧಗಳನ್ನು ಒಯ್ಯುವ ಮತ್ತು ಪ್ರದರ್ಶಿಸುವ ಅಗತ್ಯವೇನಿತ್ತು? ಇದು ತಪ್ಪು. ಈ ಕಡೆಯಿಂದಲೂ ಪ್ರಚೋದನೆ ನಡೆದಿದೆ. ಇನ್ನೊಂದು ಕಡೆಯಿಂದ ಯಾವುದೇ ಪ್ರಚೋದನೆ ಇಲ್ಲ ಎಂದು ನಾನು ಹೇಳುತ್ತಿಲ್ಲ’ ಎಂದು ಕೇಂದ್ರ ಸಚಿವ ಮತ್ತು ಗುರುಗ್ರಾಮ್ ಸಂಸದ ರಾವ್ ಇಂದರ್‌ಜಿತ್ ಸಿಂಗ್ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.

’1947ರಲ್ಲಿ ಭಾರತ ಮತ್ತು ಪಾಕ್ ವಿಭಜನೆಯಾದಾಗಲೂ ಮೇವಾತ್‌ನಲ್ಲಿ ಶಾಂತಿ ನೆಲೆಸಿತ್ತು. ಆದರೆ ಈಗ ಎರಡೂ ಸಮುದಾಯಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ; ಅವರು ಆ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು? ಅವರು ಅಂತಹ ವಾತಾವರಣವನ್ನು ಏಕೆ ಸೃಷ್ಟಿಸಿದರು?’ ಎಂದಿರುವ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಇದೊಂದು ತಪ್ಪಿಸಬಹುದಾಗಿದ್ದ ಗಲಭೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹದಿಂದ ಉಲ್ಬಣವಾಯಿತು ಎಂಬುದನ್ನು ಈ ಎಲ್ಲಾ ಆರೋಪ-ಪ್ರತ್ಯಾರೋಪಗಳು ನಿರೂಪಿಸುತ್ತವೆ.

ಗಲಭೆ ಹರಡದಂತೆ ತಡೆಯಲು ಮುಂದಾದ ರೈತರು

ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದ ರೈತರು ಈ ಗಲಭೆ ಹರಡದಂತೆ ತಡೆಯಲು ಶ್ರಮಿಸುತ್ತಿದ್ದಾರೆ. ನೂಹ್‌ನಿಂದ ಗುರ್ಗಾಂವ್, ಫರಿದಾಬಾದ್ ಮತ್ತು ಪಲ್ವಾಲ್‌ಗೆ ಗಲಭೆ ಹರಡಿದೆ. ಆದರೆ ಹರಿಯಾಣದ ಉಳಿದ ಭಾಗ ಶಾಂತಿಯುತವಾಗಿದೆ. ಜಿಂದ್‌ನ ಉಚ್ಚಾನಾ ಪಟ್ಟಣದಲ್ಲಿ ಕಳೆದ ವಾರ ಸರ್ವಧರ್ಮ ಸಮ್ಮೇಳನ ನಡೆಸಿ ಎಲ್ಲರೂ ಶಾಂತಿಯಿಂದ ಬಾಳುವ ನಿರ್ಣಯ ಕೈಗೊಳ್ಳಲಾಗಿದೆ. ಹಿಂದೂ, ಮುಸ್ಲಿಂ ಮತ್ತು ಸಿಖ್ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಜಿಂದ್‌ನ ರೈತ ಮುಖಂಡ ಆಜಾದ್ ಪಾಲ್ವಾ ಮಾತನಾಡಿ “ಜನರನ್ನು ಪ್ರಚೋದಿಸುವ ಪ್ರಯತ್ನಗಳಿಗಾಗಿ ಆರ್‌ಎಸ್‌ಎಸ್, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಮೇಲೆ ನಿಷೇಧ ಹೇರಲು ನಾವು ನಿರ್ಣಯ ಅಂಗೀಕರಿಸಿದ್ದೇವೆ. ಒಡೆದು ಆಳುವುದಕ್ಕೆ ಬಿಡುವುದಿಲ್ಲ” ಎಂದಿದ್ದಾರೆ.

ಕೋಮು ಸೌಹಾರ್ದತೆ ಕಾಪಾಡಲು, ಆಗಸ್ಟ್ 9ರಂದು ಹಿಸಾರ್ ಜಿಲ್ಲೆಯ ಬಾಸ್ ಗ್ರಾಮದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಅಲ್ಲಿ ರೈತರ ಸಮಸ್ಯೆಗಳ ಜೊತೆಗೆ ಮೇವಾತ್‌ನಲ್ಲಿ ಗಲಭೆ ಹೇಗೆ ಉಂಟಾಯಿತು? ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಏನು ಮಾಡಬೇಕೆಂದು ಚರ್ಚಿಸುತ್ತೇವೆ ಎಂದು ರೈತ ಮುಖಂಡ ಸುರೇಶ್ ಕೋತ್ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...