Homeಮುಖಪುಟಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

ಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

- Advertisement -
- Advertisement -

’ಒಂದು ಸಾಹಿತ್ಯ ಕೃತಿ ಕೊಡುವ ಅನುಭೂತಿ, ಒಳನೋಟ ಮತ್ತು ತಿಳಿವಳಿಕೆಯನ್ನು ಸಿನಿಮಾ ಕೂಡ ಕೊಡಬೇಕು… ಇದನ್ನು ನಾನು ನನ್ನ ಸಿನಿಮಾಗಳಲ್ಲಿ ಸಾಧಿಸಲು ಪ್ರಯತ್ನಿಸುತ್ತೇನೆ’ – ಇವು ಇವತ್ತಿಗೆ ವಿಷ್ಯುವಲ್ ಮಾಸ್ಟರ್ ಎಂದು ಗುರುತಿಸುವ ಟರ್ಕಿಯ ಪ್ರಸಿದ್ಧ ಸಿನಿಮಾ ನಿರ್ದೇಶಕ ನೂರಿ ಬಿಲ್ಗೆ ಸೆಲಾನ್‌ನ ಮಾತುಗಳು. ಸಿನಿಮಾ ಸಾಹಿತ್ಯಕ್ಕಿಂತ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿದೆ ಎಂದು ಚರ್ಚಿಸುವಾಗಲೆ ಈ ಮಾತನ್ನು ಬಿಲ್ಗೆ ಹೇಳುತ್ತಾನೆ. ಸಾಹಿತ್ಯ ಸಿನಿಮಾಗೆ ಮುತ್ತಜ್ಜ ಆಗಿರುವುದರಿಂದ, ಸಾಹಿತ್ಯ ಕೃತಿಗಳನ್ನು ಆಧರಿಸಿ ಹಲವಾರು ಸಿನಿಮಾಗಳು ಬಂದಿವೆ. ಆದರೆ ಸುಮಾರು ಸಂದರ್ಭದಲ್ಲಿ ಆ ಕೃತಿ ಕೊಟ್ಟ ಅನುಭೂತಿಯನ್ನ ಸಿನಿಮಾ ಕೊಡುವುದಕ್ಕೆ ಸಾಧ್ಯವಾಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ಕೃತಿಯ ಆಶಯವನ್ನ ಸಿನಿಮಾ ದಾರಿ ತಪ್ಪಿಸಿರುವುದೂ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಹಿತ್ಯ ಕೃತಿಯನ್ನು ದೃಶ್ಯಕ್ಕೆ ಅಳವಡಿಸುವಾಗ ಮಾಡಿಕೊಳ್ಳಬೇಕಾದ ಬದಲಾವಣೆಗಳೆ ಹಲವರಿಗೆ ಸವಾಲಿನ ಕೆಲಸವಾಗಿರುತ್ತದೆ. ಜಗತ್ತಿನಾದ್ಯಂತ ದೊಡ್ಡ ಮಟ್ಟದ ಓದುಗರನ್ನು ಹೊಂದಿರುವ ಜಪಾನಿ ಸಾಹಿತಿ ಹರುಕಿ ಮುರಾಕಮಿಯ ಸಣ್ಣ ಕಥೆ ‘Drive My Car’ ಆಧರಿಸಿ ಅದೇ ಹೆಸರಿನಲ್ಲಿ ಬಂದ ಈ ಸಿನಿಮಾ, ಒಂದು ಸಾಹಿತ್ಯ ಕೃತಿ ವ್ಯಕ್ತಪಡಿಸುವ ಆಶಯಕ್ಕೆ ಎಳ್ಳಷ್ಟು ಧಕ್ಕೆ ಬರದ ಹಾಗೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬಂತೆ ದೃಶ್ಯರೂಪಕ್ಕೆ ಅಳವಡಿಸಿರುವುದಕ್ಕೆ ಬಹಳ ಒಳ್ಳೆಯ ಉದಾಹರಣೆ. ಉತ್ತಮ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದ ಜಾನಿ ಕ್ಯಾಂಪಿಯನ್‌ಳ ’ದ ಪವರ್ ಆಫ್ ದ ಡಾಗ್’ ಕೂಡ ಮತ್ತೊಂದು ಉದಾಹರಣೆ. (ಇದು ಥಾಮಸ್ ಸಾವೆಜ್ ಬರೆದ ಇದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ)

ಡ್ರೈವ್ ಮೈ ಕಾರ್ ಸಿನಿಮಾ ಬಿಡುಗಡೆಗೊಂಡ ದಿನದಿಂದ ಹಿಡಿದು ನಿನ್ನೆಯ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದವರೆಗೂ ಇದರ ಕುರಿತು ಪ್ರಶಂಸೆಯ ಮಾತುಗಳು ಬರುತ್ತಲೇ ಇವೆ. ಕಾನ್‌ನಿಂದ ಆಸ್ಕರ್‌ವರೆಗೂ ಈ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಒಂದು ಯಶಸ್ವಿ ಸಿನಿಮಾ ಜೊತೆ ಅದಕ್ಕೆ ಪ್ರೇರಣೆಯಾದ ಸಾಹಿತ್ಯ ಕೃತಿ ಮತ್ತು ಅದರ ಕರ್ತೃ ಸಿನಿಮಾದಷ್ಟೆ ಚರ್ಚೆ ಆಗುವುದು ಬಹಳ ಅಪರೂಪ. ಡ್ರೈವ್ ಮೈ ಕಾರ್ ಸಿನಿಮಾ ಇದಕ್ಕೆ ಕೊಂಚ ಅಪವಾದ. ಈ ಮೊದಲು ಮುರಾಕಮಿಯ ಕತೆ ಮತ್ತು ಕಾದಂಬರಿಗಳನ್ನು ಆಧಾರವಾಗಿಟ್ಟುಕೊಂಡು ಬಹಳಷ್ಟು ಸಿನಿಮಾಗಳು ಬಂದಿವೆ. 2017ರಲ್ಲಿ ತೆರೆಕಂಡ ಲೀ ಚಾಂಗ್ ಡಾಂಗ್ ನಿರ್ದೇಶನದ ’ಬರ್ನಿಂಗ್’ ಸಿನಿಮಾ ಹೊರತುಪಡಿಸಿ ಇನ್ಯಾವ ಸಿನಿಮಾಗಳಿಗೂ ಇಷ್ಟು ಚರ್ಚೆ ಆಗಲಿಲ್ಲ ಮತ್ತು ಮನ್ನಣೆಯೂ ಸಿಗಲಿಲ್ಲ. ಬರ್ನಿಂಗ್ ಸಿನಿಮಾ ಚರ್ಚೆ ಸಂದರ್ಭದಲ್ಲೂ ಮುರಾಕಮಿ ಹೆಸರು ಮತ್ತು ಅವನ ಕೃತಿಗಳ ಬಗ್ಗೆ ಚರ್ಚೆ ಆಗಿದ್ದು ಅಷ್ಟಾಗಿ ಇಲ್ಲ. ಡ್ರೈವ್ ಮೈ ಕಾರ್ ಸಿನಿಮಾ, ಸಂಬಂಧಿಸಿದಂತೆ ಮಾತ್ರ ಏಕೆ ಮುರಾಕಮಿಯ ಬಗ್ಗೆ ಇಷ್ಟು ಪ್ರಸ್ತಾಪ, ಚರ್ಚೆಯೆಲ್ಲಾ ಆಗುತ್ತಿದೆ ಎಂದು ಯೋಚಿಸುವಾಗ ನನಗೆ ಅನಿಸಿದ್ದು: ಡ್ರೈವ್ ಮೈ ಕಾರ್ ’ಮೆನ್ ವಿಥೌಟ್ ವುಮೆನ್’ ಕಥಾ ಸಂಕಲನದಲ್ಲಿರುವ ಕೆಲವೆ ಪುಟಗಳ ಒಂದು ಸಣ್ಣ ಕಥೆ. ನಿರ್ದೇಶಕ ರಿಸುಕೆ ಹಮಿಗುಚಿ ಈ ಕಥೆಯನ್ನ ಯಾವ ಪರಿಯಲ್ಲಿ ವಿಸ್ತರಿಸಿಕೊಂಡಿದ್ದಾನೆ ಅಂದರೆ, ಮುರಾಕಮಿಯ ಇತರೆ ಕಥೆಯಲ್ಲಿನ ಹಲವಾರು ಸಂಗತಿಗಳು ಈ ಸಿನಿಮಾದಲ್ಲಿ ಸಾವಯವವಾಗಿ ಮೇಳೈಸಿ ಬಂದಿವೆ. ಮುರಾಕಮಿ ತನ್ನ ಕಥೆಗಳಲ್ಲಿ ಹೇಳಲು ಬಯಸುವ ಅಲೋಚನೆಯ ಸಾರವನ್ನ ಹಮಿಗುಚಿ ಪ್ರೇಕ್ಷಕನಿಗೆ ದಾಟಿಸಿದ್ದಾನೆ. ಕೇವಲ ಒಂದು ಕಥೆಯಲ್ಲಿನ ಘಟನೆ ಮತ್ತು ಸಂಗತಿಯನ್ನು ಹೇಳುವುದು ಮಾತ್ರವಲ್ಲ ಕೃತಿಕಾರನ ಹಲವು ಕೃತಿಗಳ ಮೂಲ ಅಲೋಚನೆಯನ್ನೇ ಪ್ರೇಕ್ಷಕನಿಗೆ ದಾಟಿಸಿದ್ದಾನೆ ಅನಿಸುತ್ತದೆ.

ಡ್ರೈವ್ ಮೈ ಕಾರ್

ಮನುಷ್ಯ ಮನುಷ್ಯನ ನಡುವೆ ಸಂಬಂಧ ಬೆಸೆಯುವುದಾಗಲಿ, ಮನುಷ್ಯ ತನ್ನ ಮುರಿದ ಬದುಕನ್ನು ಮರು ಕಟ್ಟಿಕೊಳ್ಳುವುದಾಗಲಿ- ಅದು ಯಾವ ಕಾಲಕ್ಕೂ ಮನುಷ್ಯ ಸಹಜ ಸ್ಪಂದನೆ ಮತ್ತು ಮಾನವೀಯತೆಯಿಂದ ಮಾತ್ರ ಸಾಧ್ಯ ಅನಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವ ಮತ್ತು ಆ ಹಂತಕ್ಕೆ ತಲುಪುವ ಪ್ರಯಾಣ ಭಿನ್ನವಾಗಿರುತ್ತದೆ ಅಷ್ಟೆ. ಆಧುನಿಕ ಮತ್ತು ನಗರೀಕರಣ ಸಮಾಜದ ಸಂಕೀರ್ಣ ವ್ಯವಸ್ಥೆಯಲ್ಲಿ ಬದುಕು ಅನಿಶ್ಚಿತವಾಗಿದೆ. ಮನುಷ್ಯ ಮನುಷ್ಯನ ನಡುವೆ ಅಂತರ ಹೆಚ್ಚಾಗಿದೆ. ಮನುಷ್ಯ ತನ್ನ ಸಾಮುದಾಯಿಕ ಬದುಕಿನಿಂದ ವಿಮುಖನಾಗಿದ್ದಾನೆ. ಒಮ್ಮೆ ಬಿರುಕುಗೊಂಡ ಬದುಕನ್ನು ಮತ್ತೆ ಕೂಡಿಸಿಕೊಂಡು ಹೊಸ ಚೇತನದೊಂದಿಗೆ ಪರಸ್ಪರ ಗೌರವಗಳೊಂದಿಗೆ ಮರುಕಟ್ಟಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಬಹಳ ಸಂಕೀರ್ಣವಾದ ಈ ಆಧುನಿಕ ಸಮಾಜ ಮತ್ತು ವ್ಯವಸ್ಥೆಯೊಳಗೆ ಮನುಷ್ಯ ತನ್ನನ್ನು ತಾನು ಮರು ಮೌಲ್ಯಮಾಪನ ಮಾಡಿಕೊಳ್ಳುವ, ಪರಸ್ಪರ ಗೌರವಗಳೊಂದಿಗೆ, ಮಾನವೀಯತೆಯ ಮುಖಾಂತರ ತಮ್ಮ ಬದುಕುಗಳನ್ನು ಗಟ್ಟಿಗೊಳಿಸಿಕೊಳ್ಳುವ ಆಳದ ಆಶಯ ಡ್ರೈವ್ ಮೈ ಕಾರ್ ಸಿನಿಮಾದು.

ಈ ಸಿನಿಮಾದಲ್ಲಿ ಎರಡು ಪ್ರಧಾನ ಪಾತ್ರಗಳಾದ ಕಫುಕ ಮತ್ತು ವಟಾರಿ – ಈ ಇಬ್ಬರ ನಡುವೆ ಬೆಳೆಯುವ ಒಂದು ವಿಶೇಷವಾದ ಸಂಬಂಧದ ಪ್ರಯಾಣವಾಗಲಿ, ಸಿನಿಮಾದೊಳಗೆ ಬರುವ ಆಂಟೊನ್ ಚೆಕಾವ್ ರಚಿತ ’ಅಂಕಲ್’ ವನ್ಯ ನಾಟಕದ ಸಂಗತಿ ಮತ್ತು ಪಾತ್ರಗಳಾಗಲಿ, ಮೇಲೆ ಚರ್ಚಿಸಿದ ಆಶಯದ ಪೂರಕವಾಗಿಯೇ ಅಭಿವ್ಯಕ್ತಿಗೊಂಡಿದೆ. ಇದು ದೇಶ ಭಾಷೆಗಳ ಗಡಿಗಳನ್ನು ಮೀರಿದ್ದು. ಅದಕ್ಕಾಗಿಯೇ ಈ ಸಿನಿಮಾದಲ್ಲಿ ಬರುವ ’ಅಂಕಲ್’ ವನ್ಯ ನಾಟಕದಲ್ಲಿ, ಪಾತ್ರಗಳ ದೇಶ ಭಾಷೆ ಭಿನ್ನವಾಗಿದೆ. ನಾಟಕದ ಸಂಭಾಷಣೆಯನ್ನು ಆ ಪಾತ್ರಗಳು ತಮ್ಮದೇ ಭಾಷೆಯಲ್ಲಿ ಪ್ರಸ್ತುತಪಡಿಸುತ್ತವೆ.

ಡ್ರೈವ್ ಮೈ ಕಾರ್ ಕಥೆಯಲ್ಲಿನ, ಬಹಳ ಪ್ರಬುದ್ಧ ಮತ್ತು ಅಷ್ಟೇ ನಿರ್ಲಿಪ್ತವಾಗಿರುವ ವಟಾರಿಯಳ ಪಾತ್ರ ಮತ್ತು ಕಾರ್ ಡ್ರೈವಿಂಗ್‌ನಲ್ಲಿ ಅವಳಿಗಿರುವ ಕೌಶಲ್ಯದ ವಿವರಗಳನ್ನು ಹಮಿಗುಚಿ ದೃಶ್ಯಗಳಲ್ಲಿ ಹೇಗೆ ಕಟ್ಟಿಕೊಟ್ಟಿರಬಹುದೆಂಬುದರ ಬಗ್ಗೆ ತುಂಬಾ ಕುತೂಹಲವಿತ್ತು. ಬಹಳ ಸಶಕ್ತವಾಗಿ ಈ ಪಾತ್ರ ಮೂಡಿಬಂದಿದೆ. ಈ ಪಾತ್ರದಲ್ಲಿ ಟೊಕೊ ಮಿಉರಿ ಬಹಳ ಅದ್ಭುತವಾಗಿ ನಟಿಸಿದ್ದಾಳೆ.

ನಿರ್ದೇಶಕ ರಿಸುಕೆ ಹಮಿಗುಚಿ

ಹಮಿಗುಚಿ ಜಪಾನ್ ದೇಶದ ಹೊಸ ತಲೆಮಾರಿನ ಸಿನಿಮಾ ನಿರ್ದೇಶಕ. ಸಾಕಷ್ಟು ಕಿರು ಚಿತ್ರ ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಹಮಿಗುಚಿ ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘Asako I & II’ 2018ರಲ್ಲಿ ತೆರೆಕಂಡಿತು. ಇದು ಕಾನ್ ಚಿತ್ರೋತ್ಸವದಲ್ಲಿ ಪಡೆದ ಮನ್ನಣೆ ಒಳಗೊಂಡಂತೆ ಜಾಗತಿಕವಾಗಿ ಹೆಸರು ತಂದುಕೊಟ್ಟಿತು. 2021ರಲ್ಲಿ ತೆರೆಕಂಡ Wheel of Fortune and Fantacy ಕೂಡ ಹಮಿಗುಚಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿತು. ಮುರಾಕಮಿ ಕಥೆಯನ್ನು ಇಷ್ಟು ಪರಿಣಾಮಕಾರಿಯಾಗಿ ಚಿತ್ರಕಥೆಗೆ ಒಗ್ಗಿಸಿ ಅದನ್ನು ಇನ್ನೊಂದು ಹಂತಕ್ಕೆ ದಾಟಿಸಿ ದೃಶ್ಯದಲ್ಲಿ ಕಟ್ಟಿರುವ ಹಮಿಗುಚಿಯ ಸಾಮರ್ಥ್ಯ ಮತ್ತು ದೃಶ್ಯ ಮಾಧ್ಯಮದ ಸಾಧ್ಯತೆ ಕುರಿತ ಅವನಿಗಿರುವ ಅರಿವು ಮಾತ್ರ ಅಸಾಧ್ಯವೆಂಬಂತೆ ಕಾಣುತ್ತದೆ. ಹಮಿಗುಚಿಗೆ ತನ್ನದೇ ಆದ ಒಂದು ಶೈಲಿ ಇದೆ.

ರಿಸುಕೆ ಹಮಿಗುಚಿ

2020ರಲ್ಲಿ ದಕ್ಷಿಣ ಕೊರಿಯಾದ ನಿರ್ದೇಶಕ ಬಾಂಗ್ ಜೂನ್-ಹೊನ ’ಪ್ಯಾರಸೈಟ್’ ಸಿನಿಮಾ ಆಸ್ಕರ್ ಪ್ರಶಸ್ತಿಯ ಸಂಪ್ರದಾಯವನ್ನ ಮುರಿದು, ಮೊದಲ ಬಾರಿಗೆ ನಾನ್-ಇಂಗ್ಲಿಷ್ ಸಿನಿಮಾವೊಂದು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೇ ಇತಿಹಾಸವನ್ನು ಹಮಿಗುಚಿಯ ಡ್ರೈವ್ ಮೈ ಕಾರ್ ಕೂಡ ಮುಂದುವರೆಸುತ್ತದೆ ಎಂಬ ದಟ್ಟವಾದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಕಾನ್‌ನಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈಗಾಗಲೆ ಮೂರು ಪ್ರಶಸ್ತಿಗಳನ್ನು ಪಡೆದಿದ್ದ ಈ ಸಿನಿಮಾ ಆಸ್ಕರ್‌ನಲ್ಲೂ ನಾಲ್ಕು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಕೊನೆಗೆ ಪ್ರಶಸ್ತಿ ದಕ್ಕಿದ್ದು ಮಾತ್ರ ’ಉತ್ತಮ ವಿದೇಶಿ ಚಿತ್ರ’ ಎಂಬ ಒಂದೇ ಒಂದು ಕೆಟಗರಿಯಲ್ಲಿ. ಕನಿಷ್ಟ Best Screenplay Adaptation ವಿಭಾಗದಲ್ಲಾದರೂ ಮತ್ತೊಂದು ಪ್ರಶಸ್ತಿ ಸಿಗಬೇಕಾಗಿತ್ತು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

 


ಇದನ್ನೂ ಓದಿ: ಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...