Homeಮುಖಪುಟರಾಜೀವ್ ರವಿಯ ’ತುರಮುಖಂ’: ಘನತೆ ಮತ್ತು ಮನುಷ್ಯತ್ವದ ಹೋರಾಟದ ಕಥನ

ರಾಜೀವ್ ರವಿಯ ’ತುರಮುಖಂ’: ಘನತೆ ಮತ್ತು ಮನುಷ್ಯತ್ವದ ಹೋರಾಟದ ಕಥನ

- Advertisement -
- Advertisement -

ಕಳೆದ ವಾರದ ಬರೆಹದಲ್ಲಿ ಚರ್ಚೆ ಮಾಡಿದಂತೆ, ಒಂದೂವರೆ ದಶಕದಿಂದ ಮಲೆಯಾಳಂನ ಹೊಸ ತಲೆಮಾರಿನ ಸಿನಿಮಾ ನಿರ್ಮಾತೃಗಳು ಭಾರತದ ಸಿನಿಮಾರಂಗಕ್ಕೆ ಹೊಸದು ಎಂಬಂತಹ ವಸ್ತುಗಳನ್ನು ತಮ್ಮ ಪರಿಸರಕ್ಕೆ ಒಗ್ಗಿಸಿಕೊಂಡು ಬಹಳ ಸೊಗಸಾಗಿ ಪ್ರಸ್ತುತಪಡಿಸಿ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಈ ಸಿನಿಮಾಗಳ ಮೂಲ ತಂತು ಮುಖ್ಯವಾಗಿ ಮನುಷ್ಯತ್ವವೇ ಆಗಿದೆ. ಇವುಗಳಲ್ಲಿ ಕೆಲವು, ಜಡ್ಡುಗಟ್ಟಿದ ಸಂಪ್ರದಾಯಗಳನ್ನು ಪ್ರಶ್ನೆ ಮಾಡಿ ಆಧುನಿಕ ಮತ್ತು ವೈಚಾರಿಕ ಸಂಗತಿಗಳನ್ನು ಪ್ರಸ್ತುತಪಡಿಸಿದರೆ, ಮತ್ತೆ ಕೆಲವು ಸಮಕಾಲಿನ ಸಂಗತಿ ಮತ್ತು ತಲ್ಲಣಗಳಿಗೆ ಸ್ಪಂದಿಸಿವೆ. ಇನ್ನೊಂದಷ್ಟು ಸಿನಿಮಾಗಳು ಮನುಷ್ಯನ ವ್ಯಕ್ತಿತ್ವದ ಮೂಲ ಯಾವುದು ಎಂಬುದರ ಜಿಜ್ಞಾಸೆಯ ’ತತ್ವಜ್ಞಾನ’ವನ್ನು ಕೂಡ ಅನ್ವೇಷಿಸುತ್ತವೆ. ಆದರೆ, ಇವುಗಳ ಪ್ರಧಾನ ಸಮಸ್ಯೆ, ತಾವು ಚರ್ಚಿಸುವ ಸಂಗತಿಗಳನ್ನು ಸರಳೀಕರಿಸಿ ಬಹಳ ಮೇಲ್ಪದರದಲ್ಲಿ ಪ್ರಸ್ತುತಪಡಿಸುವುದು, ಕಟ್ಟುವಿಕೆಯಲ್ಲಿ ಏಕತಾನತೆ ಮತ್ತು ಬಹಳ ಮುಖ್ಯವಾಗಿ ಕಥಾವಸ್ತುವಿನ ಬಹುತೇಕ ಸನ್ನಿವೇಶಗಳನ್ನು ಮನರಂಜನೆ ಸಲುವಾಗಿ ಭಾವುಕಗೊಳಿಸಿ, ಪ್ರೇಕ್ಷಕನನ್ನು ಅಲೋಚನೆಗೆ ವಿಮುಖನನ್ನಾಗಿಸುವುದು.

ರಾಜೀವ್ ರವಿಯ ಸಿನಿಮಾಗಳು ಮೇಲೆ ಹೇಳಿದವುಗಳಿಗಿಂತ ಸಾಕಷ್ಟು ಭಿನ್ನ ಎನ್ನಬಹುದು. ಅವುಗಳು ಚರ್ಚಿಸುವ ಸಂಗತಿಗಳು, ದೃಶ್ಯಗಳನ್ನು ಕಟ್ಟುವ ಕ್ರಮ, ಪ್ರೇಕ್ಷಕನ ಮೇಲೆ ಬೀರಬಹುದಾದ ಪರಿಣಾಮ ಎಲ್ಲದರಲ್ಲಿಯೂ ಅನನ್ಯತೆಯನ್ನು ಕಾಣಬಹುದು. ರಾಜೀವ್ ನಮ್ಮ ದಿನನಿತ್ಯದ ಬದುಕು-ಬವಣೆಗಳ ವಿವರಗಳನ್ನು ಸಾಮಾಜಿಕ ಮತ್ತು ರಾಜಕೀಯ ವಾಸ್ತವಗಳೊಂದಿಗೆ ಬಹಳ ಸಂಕೀರ್ಣವಾಗಿ ಹೆಣೆಯುತ್ತಾರೆ. ಮೂಲತಃ ಸಿನಿಮಾಟೋಗ್ರಾಫರ್ ಆಗಿರುವ ಇವರ ಮೊದಲ ನಿರ್ದೇಶನದ ಸಿನಿಮಾ ’ಅನ್ನಾಯುಮ್ ರಸೂಲುಮ್’ (2013). ಕೇರಳದ ವಿಪಿನ್ ಎಂಬ ಸಣ್ಣ ದ್ವೀಪವೊಂದರ ಸಂಪ್ರದಾಯವಾದಿ ಶ್ರಮಿಕ ವರ್ಗದ ಹಾಗು ಭಿನ್ನ ಧರ್ಮಗಳಿಗೆ ಸೇರಿದ ಅನ್ನ ಮತ್ತು ರಸೂಲ್‌ರ ನಡುವಿನ ದುರಂತ ಪ್ರೇಮ ಇದರ ಕಥಾವಸ್ತು. ಕೊಚ್ಚಿ ಎಂಬ ಕಾಸ್ಮೋಪಾಲಿಟನ್ ನಗರದ ಆಳದಲ್ಲಿರುವ ಬದುಕಿನ ಸಣ್ಣಸಣ್ಣ ವಿವರಗಳನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ರಾಜೀವ್ ರವಿ ಅದ್ಬುತವಾಗಿ ಕಟ್ಟಿಕೊಡುತ್ತಾರೆ. ’ಅನ್ನಾಯುಮ್ ರಸೂಲುಮ್’ನಲ್ಲಿ ಧರ್ಮಗಳು ನಿರ್ಮಿಸಿಕೊಂಡಿರುವ ಗಡಿಗಳ ದುರಂತಗಳನ್ನು ಚರ್ಚಿಸಿದ ರಾಜೀವ್ ರವಿ, ತನ್ನ 2016ರ ’ಕಮ್ಮಟಿಪಾಡಂ’ನಲ್ಲಿ ಜಾತಿ ದೌರ್ಜನ್ಯದ ಹಿಂದಿನ ರಾಜಕಾರಣವನ್ನು ಅದೇ ಕೊಚ್ಚಿ ನಗರದ ಬ್ಯಾಕ್‌ಡ್ರಾಪ್‌ನಲ್ಲಿ ಚರ್ಚಿಸುತ್ತಾರೆ. ಕಮ್ಮಟಿಪಾಡಂ ರಾಜೀವ್ ರವಿ ನಿರ್ದೇಶನ ಹಾಗೀ ಸಿನಿಮಾಟೋಗ್ರಫಿಯಲ್ಲಿ ಬಹಳ ಮುಖ್ಯವಾದ ಸಿನಿಮಾ.

ತುರಮುಖಂ

ನಿರ್ದೇಶಕನಾಗಿ ರಾಜೀವ್ ರವಿ ಅದ್ಭುತ ಚಲನೆ ಸಾಧಿಸಿರುವ ವ್ಯಕ್ತಿ. ಸಿನಿಮಾದಿಂದ ಸಿನಿಮಾಗೆ ಮಾಗಿ ಅವನು ಘನವಾದುದ್ದನ್ನು ಸಾಧಿಸುತ್ತಿರುವುದಕ್ಕೆ ಕಳೆದ ತಿಂಗಳು ಬಿಡುಗಡೆಗೊಂಡ ’ತುರಮುಖಂ’ (2023) ಸಾಕ್ಷಿ. ಇದು ಅಪ್ಪಟ ಸಮುದಾಯ ಕಾಳಜಿಯ ಸಿನಿಮಾ. ಘನತೆ ಮತ್ತು ಮನುಷ್ಯತ್ವದ ಹೋರಾಟವೊಂದರ ಕಥನವನ್ನು ಅಷ್ಟೇ ಘನವಾಗಿ ಕಟ್ಟಿರುವ ಸಿನಿಮಾ ತುರಮುಖಂ. ಇದರ ಕಟ್ಟುವಿಕೆಯಲ್ಲಿ ರಾಜೀವ್ ರವಿ ಮಾಡಿರುವ ತೆಗೆದುಕೊಂಡಿರುವ ರಿಸ್ಕ್ ಮಹತ್ವದ್ದು ಮಾತ್ರವಲ್ಲ ತನ್ನ ಸಮಕಾಲಿನ ಮತ್ತು ಮುಂದಿನ ತಲೆಮಾರಿನ ಸಿನಿಮಾ ನಿರ್ಮಾತೃಗಳಿಗೆ ದಾರಿದೀಪದಂತೆ ಭಾಸವಾಗುತ್ತದೆ.

ಅನ್ನಾಯುಮ್ ರಸೂಲುಮ್

1940 ಮತ್ತು 50ರ ದಶಕದ ನಡುವೆ ಕೇರಳದ ಕೊಚ್ಚಿ ಬಂದರಿನಲ್ಲಿದ್ದ ’ಚಪ್ಪಂ’ ಎಂಬ ಹೀನಾಯ ಪದ್ಧತಿಯನ್ನು ಕೊನೆಗೊಳಿಸಲು ಅಲ್ಲಿನ ಕಾರ್ಮಿಕರು ನಡೆಸಿದ ಹೋರಾಟದ ಐತಿಹಾಸಿಕ ಕಥನವೇ ತುರಮುಖಂ. 1953ರ ಮಟ್ಟನಚೆರ್ರಿಯಲ್ಲಿ ನೌಕರರ ಮೇಲೆ ನಡೆಸಿದ ಗುಂಡಿನ ದಾಳಿಯ ಘಟನೆ ಮತ್ತು ಕೆ.ಎಂ ಚಿದಂಬರನ್ ಬರೆದ ಇದೇ ಹೆಸರಿನ ನಾಟಕ ಇದಕ್ಕೆ ಪ್ರೇರಣೆಯೂ ಹೌದು. ತುರಮುಖಂ ಸಿನಿಮಾ ಅಂದಿನ ಕಾರ್ಮಿಕರ ಹೋರಾಟಕ್ಕೆ, ಅವರ ಬಲಿದಾನಕ್ಕೆ, ಕೊಚ್ಚಿ ನಗರಕ್ಕೆ, ಸಲ್ಲಿಸಿದ ಗೌರವವೂ ಹೌದು.

ಇದನ್ನೂ ಓದಿ: ಸಿನಿ ಪ್ರಬಂಧ; ನಾನು ನೋಡಿದ ಮಲೆಯಾಳಂ ಸಿನಿಮಾಗಳನ್ನು ಹಿಂದಿರುಗಿ ನೋಡಿದಾಗ..

ಮೂರು ಗಂಟೆಗಳ ಸುದೀರ್ಘವಾದ ಈ ಸಿನಿಮಾದ ಮೊದಲ 25 ನಿಮಿಷಗಳ ಕಥನವನ್ನು ಕಪ್ಪು-ಬಿಳುಪಿನಲ್ಲಿ ಚಿತ್ರಿಸಲಾಗಿದೆ. ಮುಂದೆ ಬರುವ ದೊಡ್ಡ ಕ್ಯಾನ್ವಸ್ ಕಥನಕ್ಕೆ ಈ 25 ನಿಮಿಷಗಳ ಭೂಮಿಕೆ ಅದ್ಭುತವಾಗಿ ಮೂಡಿ ಬಂದಿದೆ. ಬಂದರಿನಲ್ಲಿ ಕೆಲಸ ನೀಡಲು ಕಂಪನಿಯ ಆಡಳಿತ ಮಂಡಳಿ ನಡೆಸುವ ಹೀನಾಯ ’ಚಪ್ಪಂ’ ಪದ್ಧತಿ, ಅಲ್ಲಿನ ಕಾರ್ಮಿಕರ ಬದುಕು, ಯಾವ ಮೂಲಸೌಕರ್ಯಗಳು ಇಲ್ಲದ ಕೊಳಗೇರಿಯ ಪರಿಸರ- ಈ ಎಲ್ಲವನ್ನೂ ಯಾವ ಉತ್ಪ್ರೇಕ್ಷೆಯೂ ನುಸುಳದಂತೆ ಸಹಜವಾಗಿ ಪ್ರಸ್ತುತಪಡಿಸಲಾಗಿದೆ. ಚಪ್ಪಂ ಪದ್ಧತಿಯನ್ನು ವಿರೋಧಿಸಿ ಹೊರನಡೆಯುವ ’ಮೈಮು’ ಮಾರನೆ ದಿನವೇ ಇಲ್ಲವಾಗುತ್ತಾನೆ. ಅವನಿಗೆ ಮೂರು ಜನ ಮಕ್ಕಳು. ಮೈಮು ಇಲ್ಲದ ಈ ಕುಟುಂಬದ ಬದುಕಿನ ಚಿತ್ರಣ ಮತ್ತು ಕಾರ್ಮಿಕ ಹೋರಾಟ- ಈ ಎರಡು ಕಥನಗಳು ಒಂದಕ್ಕೊಂದು ಮೇಳೈಸಿದಂತೆ ಸಾವಯವವಾಗಿ ಸಿನಿಮಾವನ್ನು ಕಟ್ಟುತ್ತಾರೆ ರಾಜೀವ್. ಇದು ಮೈಮುವಿನ ಕುಟುಂಬದ ಕಥೆ ಮಾತ್ರವಲ್ಲ ಆ ಕಾಲಘಟ್ಟದ ಸಮಸ್ತ ಕಾರ್ಮಿಕ ವರ್ಗದ ಎಲ್ಲಾ ಕುಟುಂಬಗಳ ಕಥನವೇನೊ ಎಂಬುವಷ್ಠರ ಮಟ್ಟಿಗೆ ಪ್ರೇಕ್ಷಕನಿಗೆ ದಾಟುತ್ತದೆ.

ಕಮ್ಮಟಿಪಾಡಂ

ಆರಂಭದಲ್ಲೇ ಪ್ರಸ್ತಾಪಿಸಿದಂತೆ, ರಾಜೀವ್ ರವಿ ಈ ಸಿನಿಮಾಗಾಗಿ ತೆಗೆದುಕೊಂಡಿರುವ ರಿಸ್ಕ್ ಅತಿ ಮುಖ್ಯವಾದದ್ದು. ಇದುವರೆಗಿನ ಜನಪ್ರಿಯ ನರೇಟೀವ್‌ಅನ್ನು ಹೊಡೆದು, ತನ್ನನ್ನು ತಾನೆ ಮೀರಿದ್ದಾರೆ. ಪ್ರೇಕ್ಷಕ ಭಾವುಕವಾಗಿ ಮೈಮರೆಯಬಹುದಾದ ಸನ್ನಿವೇಶಗಳನ್ನು ಪಾಸ್ಸಿಂಗ್ ದೃಶ್ಯಗಳನ್ನಾಗಿಸಿ ತಾನು ಕಥಿಸುತ್ತಿರುವ ಬೃಹತ್ ಕಥನಕ್ಕೆ ಎಷ್ಟು ಪೂರಕವೋ ಅಷ್ಟನ್ನು ಮಾತ್ರ ತೋರಿಸಿ ಜಿಗಿಯುತ್ತಾರೆ. ಮನುಷ್ಯತ್ವವನ್ನು ಪ್ರತಿಬಿಂಬಿಸುವ ದೃಶ್ಯಗಳನ್ನು ಅವುಗಳಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲದಂತೆ ಕಟ್ಟಿ, ಸಮುದಾಯವೊಂದು ಒಗ್ಗಟ್ಟಾಗಿ ಪರಸ್ಪರ ಅವಲಂಬಿಸಿ ಬದುಕುವ ಪರಿಸರದಲ್ಲಿ ಸರ್ವೇ ಸಾಮಾನ್ಯವೇನೋ ಎಂಬಂತೆ ಚಿತ್ರಿಸಿದ್ದಾರೆ. ಈ ದೃಶ್ಯಗಳನ್ನೆ ಕರಳು ಹಿಂಡುವಂತೆ ಚಿತ್ರಿಸಿ ಭಾವುಕ ಸನ್ನಿವೇಶಗಳನ್ನು ಸೃಷ್ಟಿಸುವ ಸುಲಭ ಪರಿಕರಗಳಿದ್ದರೂ ಅವುಗಳನ್ನು ಅವಾಯ್ಡ್ ಮಾಡಿದ್ದಾರೆ. ಪ್ರೇಕ್ಷಕ ತನ್ನ ಅನುಭೂತಿಗೆ ಸಿಕ್ಕುವಷ್ಟು ಪ್ರಮಾಣದಲ್ಲಿ ಮಾತ್ರ ಸ್ವೀಕರಿಸಿಕೊಳ್ಳಬೇಕು ಎನ್ನುವ ಹಾಗೆ! ಉದಾಹರಣೆಗೆ: ಮೌಯಿದು ತನ್ನ ನೆರೆಯವನಿಗೆ ಪ್ರಾಣ ಹೋಗುವ ರೀತಿ ಹೊಡೆದಿದ್ದಾನೆ. ಹೊಡೆಸಿಕೊಂಡವನ ತಾಯಿ ಮೌಯಿದನ ತಾಯಿಗೆ ಬಾಯಿಗೆ ಬಂದಂತೆ ಬೈಯ್ದು ಶಾಪ ಹಾಕುತ್ತಿರುತ್ತಾಳೆ; ಅದೇ ಸಂದರ್ಭಕ್ಕೆ ಗಂಡನ ಮನೆಯಿಂದ ಅಸ್ವಸ್ಥಳಾಗಿ ಮರಳುವ ಮೌಯಿದನ ತಂಗಿಯ ಸ್ಥಿತಿ ನೋಡಿ ತಾನು ಜಗಳವಾಡುತ್ತಿರುವುದನ್ನೂ ಮರೆತು ಅವಳ ಬಳಿ ಪ್ರೀತಿಯಿಂದ ಮಾತನಾಡುತ್ತಾಳೆ. ಈ ದೃಶ್ಯವನ್ನು ಹೆಚ್ಚು ಭಾವುಕಗೊಳಿಸದೆ, ಪಾಸ್ಸಿಂಗ್ ದೃಶ್ಯವನ್ನಾಗಿ ಮಾತ್ರ ತೋರಿಸಲಾಗಿದೆ. ಈ ಸಣ್ಣಸಣ್ಣ ಧುತ್ತೆಂದು ಚಲಿಸುವ ದೃಶ್ಯಗಳ ಮುಖಾಂತರವೇ ರಾಜೀವ್ ರವಿ ಮನುಷ್ಯತ್ವದ ದೊಡ್ಡದೊಡ್ಡ ಸಂಗತಿಗಳನ್ನು ಬಿಚ್ಚಿಡುತ್ತಾರೆ.

ಭಾರತದ ಜನಪ್ರಿಯ ಸಿನಿಮಾಗಳಲ್ಲಿ ಅತಿಸಾಮಾನ್ಯವೆಂಬಂತೆ ತೋರಿಸುವ ಹಿರೋಯಿಸಂಅನ್ನು ಕೂಡ ರಾಜೀವ್ ತಮ್ಮ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಮತ್ತು ಈ ಸಿನಿಮಾದಲ್ಲಿ ನಿರ್ದಿಷ್ಟವಾಗಿ ತ್ಯಜಿಸುತ್ತಾರೆ. ಪಾತ್ರಗಳು ಇಲ್ಲಿ ತಮ್ಮ ಸ್ವಭಾವಕ್ಕೆ ತಕ್ಕಂತೆ ಬೆಳೆಯುತ್ತಾ ಹೋಗುತ್ತವೆ; ಕಾಲ ಮತ್ತು ಸಂದರ್ಭಗಳ ಈ ಕಥೆಯಲ್ಲಿ ಪ್ರಧಾನವಾಗಿ ಸಮುದಾಯದ ಹೊರಾಟವೇ ಬಿತ್ತರವಾಗಿ ಅದೇ ಕಥಾನಾಯಕನಾಗಿ ನಿಲ್ಲುತ್ತದೆ. ಇಲ್ಲಿ ಯಾವ ಸೇವಿಯರ್ ಕೂಡ ಇಲ್ಲದೆ, ಕಾರ್ಮಿಕ ಸಮುದಾಯ ತಮ್ಮ ಘನತೆಗಾಗಿ ನಡೆಸಿದ ಒಗ್ಗಟ್ಟಿನ ಹೋರಾಟ. ಉದಾ: ನಿವಿನ್ ಪೌಲಿ ನಟಿಸಿರುವ ಮೌಯಿದು ಪಾತ್ರವನ್ನು ಕಾಣಬಹುದು; ಯಾವ ಸಂದರ್ಭದಲ್ಲಾದರೂ ಅವನೊಬ್ಬ ಹೀರೋ ರೀತಿಯಲ್ಲಿ ಸಂಪೂರ್ಣ ಹೋರಾಟವನ್ನು ಮುನ್ನಡೆಸುವ ರೀತಿ ಕಟ್ಟುವ ಅವಕಾಶವಿದ್ದರೂ ಅದನ್ನು ಕೊನೆಯವರೆಗೂ ಮಾಡುವುದಿಲ್ಲ. ಒಂದು ದುರ್ಬಲವಾದ ವ್ಯಕ್ತಿತ್ವ ಯಾವ ರೀತಿ ಕೊನೆಯಾಗುತ್ತದೆಯೋ ಆ ರೀತಿ ಈ ಪಾತ್ರ ಕೊನೆಯಾಗುತ್ತದೆ.

ರಾಜೀವ್ ರವಿ

ರಾಜೀವ್ ರವಿ ಈ ಸಿನಿಮಾದಲ್ಲಿ ಅದ್ಭುತವಾಗಿ ಸಾಧಿಸಿರುವುದು ಮೈಮುವಿನ ಎರಡನೆ ಮಗ ಹಾಗು ಮೌಯಿದನ ತಮ್ಮ ’ಹಫ್ಜ’ ಪಾತ್ರ ಬೆಳೆಯುವ ಪರಿ. ಸಿನಿಮಾದ ಪ್ರಾರಂಭದಲ್ಲಿ ಈ ಪಾತ್ರವನ್ನು ಬಹಳ ಭಾವುಕ, ಸಹಾನುಭೂತಿ ಮತ್ತು ಮೌಯಿದನಿಗೆ ಹೋಲಿಸಿದರೆ ಧೈರ್ಯದಲ್ಲಿ ಕೊಂಚ ಹಿಂದೆ ಎಂಬಂತೆ ಸಿಂಪಥೈಸ್ ಮಾಡಿ ಕಟ್ಟಿಕೊಟ್ಟಂತೆ ಕಾಣುತ್ತದೆ. ಆದರೆ ಕಾರ್ಮಿಕ ಹೋರಾಟ ಕಾವು ಪಡೆದಂತೆಲ್ಲ ’ಹಫ್ಜ’ ಪಾತ್ರ ಕೂಡ ಗಟ್ಟಿಯಾಗುತ್ತಾ ಹೋಗುತ್ತದೆ. ಒಂದು ಸಂದರ್ಭದಲ್ಲಿ ತನ್ನ ಅಣ್ಣ ಮೌಯಿದ ಮಾಲೀಕನ ಆಜ್ಞೆ ಮೇರೆಗೆ ಹೋರಾಟನಿರತ ತನ್ನ ಸಹ ಕಾರ್ಮಿಕನನ್ನು ಕೊಲ್ಲಲು ಬಂದಾಗ, ಹಫ್ಜ ನಡುವೆಬಂದು ’ಅವನನ್ನು ಕೊಲ್ಲುವುದಾದರೆ ಮೊದಲು ನನ್ನ ಕೊಂದು ನಂತರ ಮುಂದುವರಿ’ ಎಂದು ಎದುರಾಗಿ ನಿಲ್ಲುತ್ತಾನೆ.

ಸಿನಿಮಾದಲ್ಲಿ ಬರುವ ಮೂರು ಹೆಣ್ಣು ಪಾತ್ರಗಳೂ ಬಹಳ ಘನತೆಯಿಂದ ಕೂಡಿದವು. ಅದರಲ್ಲೂ ಮೈಮುವಿನ ಹೆಂಡತಿಯ ಪಾತ್ರವಂತೂ ಬ್ರಿಲಿಯಂಟ್. ಮಗ ಮೌಯಿದ, ತಂಗಿ ಮದುವೆಗೆ ದುಡ್ಡು ಕೂಡಿಟ್ಟು ಕೊಡುತ್ತೇನೆ ಎಂದುಕೊಂಡು, ದುರಾಭ್ಯಾಸಗಳಿಗೆ ದಾಸನಾಗಿ ಮನೆಯನ್ನೇ ಸೇರುವುದಿಲ್ಲ. ಕೊನೆಗೆ ದುಡ್ಡು ಕೊಡುವುದಿರಲಿ ತಂಗಿ ಮದುವೆಗೆ ಕೂಡ ಬರುವುದಿಲ್ಲ. ಮತ್ತೆ ಯಾವಾಗಲೋ ಬಂದು ತಂದೆಯ ನೆನಪಲ್ಲಿ ತಾಯಿ ಮುಂದೆ ಗೋಳಾಡಿ ತನ್ನ ಜೇಬಿನಲ್ಲಿದ್ದ ದುಡ್ಡನ್ನು ಎಸೆಯುತ್ತಾನೆ. ಮಗ ಈ ರೀತಿ ವರ್ತಿಸಿದಾಗಲೂ ತಾಯಿ ಅವನ ಮೇಲೆ ಕೊಂಚವೂ ಬೇಸರಿಸಿಕೊಳ್ಳುವುದಿಲ್ಲ. ಅವನು ಎಸೆದ ದುಡ್ಡಿನ ನೋಟುಗಳನ್ನು ಆಯ್ದು ಸೆರಗಿಗೆ ಗಂಟು ಹಾಕಿಕೊಂಡು, ಅವನನ್ನು ತೊಡೆ ಮೇಲೆ ಮಲಗಿಸಿಕೊಂಡು ಸಂತೈಸುತ್ತಾಳೆ. ಗಂಡನನ್ನು ಕಳೆದುಕೊಂಡ ನೋವಿನಲ್ಲಿ ಬದುಕುತ್ತಿರುವ ಆಕೆ ಮಗನನ್ನು ಕಳೆದುಕೊಳ್ಳಲು ಯಾವ ಕಾರಣಕ್ಕೂ ತಯಾರಿರುವುದಿಲ್ಲ.

ಕೊನೆಯ ಮಾತು

ಈ ಸಿನಿಮಾದಲ್ಲಿ ರಾಜೀವ್ ರವಿಯವರ ಹೆಚ್ಚುಗಾರಿಕೆ ಇರುವುದೇ ಅವರು ಯಾವ ರೀತಿಯ ’ಜನಪ್ರಿಯತೆ’ಯ ಮೋಹಕ್ಕೂ ಒಳಗಾಗಿಲ್ಲವೆಂಬುದು. ಒಂದು ನೈಜ ಘನತೆಯ ಹೋರಾಟವನ್ನು ಯಾವ ಅಗ್ಗದ ಮನರಂಜನೆ, ವ್ಯವಹಾರದ ಪ್ರಲೋಭನೆಗಳಿಗೆ ಒಳಗಾಗದೆ ಕಥೆಗೆ ನಿಷ್ಠನಾಗಿ ಚಿತ್ರಿಸಲು ಶ್ರಮಿಸಿದ್ದಾರೆ. ಅದರಲ್ಲಿ ಯಶಸ್ವಿಯಾಗಿ, ಕಾಡುವ ಸಿನಿಮಾವೊಂದನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...