Homeಅಂಕಣಗಳುದಹಾಡ್: ಅಂಜಲಿ ಭಾಟಿ ಎಂಬ ದಿಟ್ಟ ದಲಿತ್ ಪ್ರೊಟಾಗನಿಸ್ಟ್

ದಹಾಡ್: ಅಂಜಲಿ ಭಾಟಿ ಎಂಬ ದಿಟ್ಟ ದಲಿತ್ ಪ್ರೊಟಾಗನಿಸ್ಟ್

- Advertisement -
- Advertisement -

ಜಗತ್ತಿನ ಬಹುತೇಕ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾ/ಧಾರಾವಾಹಿಗಳನ್ನು ಗಮನಿಸಿದರೂ, ಪ್ರೇಕ್ಷಕನಲ್ಲಿ ರ್‍ಯಾಡಿಕಲ್ ಆದ ಅಥವಾ ಚಿಂತನಾರ್ಹ ಸಂವೇದನೆ ಉಂಟುಮಾಡುವುದಕ್ಕಿಂತಲೂ ಪ್ರಧಾನವಾಗಿ, ರೋಚಕ ತಿರುವುಗಳೊಂದಿಗೆ ಕ್ಷಣಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸಿ ರೋಮಾಂಚನಗೊಳಿಸುವ ಕಡೆಗೇ ಹೆಚ್ಚು ಒತ್ತು ಇರುತ್ತದೆ. ಅಷ್ಟಾಗಿಯೂ ಕೆಲವರಾದರೂ ಈ ಬಗೆಯ ಸಿನಿಮಾಗಳನ್ನು ಮಾಡುವಾಗ ಸಮಕಾಲಿನ ಸಾಮಾಜಿಕ ಪಿಡುಗುಗಳಾದ ಧರ್ಮ, ಜಾತಿ, ಜನಾಂಗೀಯತೆ, ಅಸಮಾನತೆ ಮುಂತಾದ ಸಂಗತಿಗಳು ಜನಸಮುದಾಯಗಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎಂಬ ವಾಸ್ತವಗಳನ್ನು ಒಳಗೊಳ್ಳಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, ಇವತ್ತಿಗೂ ಅಗ್ರಪಟ್ಟಯಲ್ಲಿ ಕಾಣಿಸಿಕೊಳ್ಳುವ ಅಮೆರಿಕದ ಡೇವಿಡ್ ಫಿಂಚರ್ ಮತ್ತು ದಕ್ಷಿಣ ಕೊರಿಯಾದ ಪಾರ್ಕ್ ಚಾನ್ ಹುಕ್ ಇವರುಗಳ ಸಿನಿಮಾಗಳನ್ನು ಗಮನಿಸಬಹುದು.

ಇತ್ತೀಚಿಗೆ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾದ ದಹಾಡ್ ಧಾರಾವಾಹಿಯ ಕಟ್ಟುವಿಕೆಯಲ್ಲಿನ ಸೂಕ್ಷ್ಮತೆ ಮತ್ತು ಕುಶಲತೆಯ ಬಗ್ಗೆ ಸಾಕಷ್ಟು ಒಳ್ಳೆಯ ಸಂಗತಿಗಳನ್ನು ಉದಾಹರಿಸಿ ಚರ್ಚಿಸಬಹುದಾದರೂ ಈ ನನ್ನ ಅಭಿಪ್ರಾಯದಲ್ಲಿ ಅದಕ್ಕೆ ಹೆಚ್ಚು ಒತ್ತು ಇಲ್ಲ. ಕೇವಲ ಮೂರು ಸಂಗತಿಗಳನ್ನಷ್ಟೆ ಇಲ್ಲಿ ಪ್ರಸ್ತಾಪಿಸುತ್ತೇನೆ. 1. ಅಂಜಲಿ ಭಾಟಿ ಪಾತ್ರವನ್ನು ಕಟ್ಟುಕೊಟ್ಟಿರುವುದು 2. ಅಂಜಲಿ ಭಾಟಿ ಮತ್ತು ಅವಳ ಅಧಿಕಾರಿಗಳ ನಡುವಿನ ವೃತ್ತಿಸಂಬಂಧಗಳು 3. ಪ್ರಧಾನವಾಗಿ ಬರುವ ಮೂವರು ಪೊಲೀಸ್ ಅಧಿಕಾರಿಗಳ ಕೌಟುಂಬಿಕ ಬದುಕಿನ ಚಿತ್ರಣ.

ಈ ಧಾರಾವಾಹಿಯಲ್ಲಿ ಸೃಷ್ಟಿಸಿರುವ ಅಂಜಲಿ ಭಾಟಿ ಎಂಬ ಪ್ರಧಾನ ಪಾತ್ರ ಇದುವರೆಗೂ ಭಾರತದ ಮುಖ್ಯವಾಹಿನಿ ಸಿನಿಮಾ ಅಥವಾ ಧಾರಾವಾಹಿಗಳು ದಲಿತ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಕ್ಕಿಂತ ಭಿನ್ನವಾಗಿದೆ. (ನನ್ನ ಸೀಮಿತ ತಿಳಿವಳಿಕೆಯಲ್ಲಿ). ವಾಸ್ತವದಲ್ಲಿ ಸಾವಿರಾರು ವರ್ಷಗಳ ಕಾಲ ದೌರ್ಜನ್ಯಕ್ಕೆ ಒಳಪಟ್ಟ ದಲಿತ ಸಮುದಾಯದ ಪಾತ್ರವೊಂದು ಈ ರೀತಿ ಇರಲು ಸಾಧ್ಯವೇ ಅಂತ ಅನಿಸಿದರೂ, ಅಂತಹ ಒಂದು ಪಾತ್ರ ವಾಸ್ತವವಾದರೆ ಸ್ವಸ್ಥ ಸಮಾಜದ ಬೆಳವಣಿಗೆಗೆ ಎಷ್ಟು ಅನುಕೂಲ ಎಂಬ ಭರವಸೆಯೂ ಚಿಗುರುತ್ತದೆ. ಅಂಜಲಿ ತಾನು ಬೆಳೆದ ಊರಿನಲ್ಲಿಯೇ ಪೊಲೀಸ್ ಅಧಿಕಾರಿಯಾಗಿದ್ದಾಳೆ, ತನ್ನ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದ ಕಾರಣ ಆರ್ಥಿಕವಾಗಿ ಸಬಲವಾಗಿದ್ದಾಳೆ. ಇಷ್ಟಾಗಿಯೂ ತನ್ನ ಜಾತಿ ಮೂಲದ ಕಾರಣ ಊರಿನ ಜನರಿಂದ ಪ್ರತಿನಿತ್ಯ ಅಪಮಾನಕ್ಕೆ ಒಳಗಾಗುತ್ತಾಳೆ. ಇಂತಹ ಜಾತಿನಿಂದನೆಯ ದೃಶ್ಯಗಳಲ್ಲಿ ಅಂಜಲಿಯ ತೋರಿಸುವ ಜೆಸ್ಚರ್ ಬಹಳವಾಗಿ ಕಾಡುತ್ತದೆ ಮತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಜಾತಿಯ ಕಾರಣಕ್ಕೆ ತಾನು ನಿಂದನೆಗೆ ಒಳಗಾಗುವ ಪ್ರತಿ ಸಂದರ್ಭದಲ್ಲೂ ಅಂಜಲಿ ಪ್ರತಿಕ್ರಿಯಿಸುವ ರೀತಿ, ಈಗಾಗಲೆ ಹಲವು ಕಲಾ ಪ್ರಕಾರಗಳಲ್ಲಿ ದಲಿತ ಪಾತ್ರವನ್ನ ಕಟ್ಟಿಕೊಟ್ಟ ರೀತಿಯ ಕೀಳರಿಮೆ, ಸಂಕಟ, ಅಪಮಾನಗಳಿಂದ ಕೂಡಿರದೆ ದಿಟ್ಟತನದಿಂದ ವಾಪಸ್ ಕೊಡುವಂಥದ್ದು. ಅಂಜಲಿ ಪಾತ್ರ ಪ್ರೇಕ್ಷಕನಿಂದ ಯಾವ ಸಿಂಪಥಿಯನ್ನು ಬಯಸುವುದಿಲ್ಲ. ಗಾಂಭೀರ್ಯದಲ್ಲಿ ಕೊಂಚವೂ ವ್ಯತ್ಯಾಸವಾಗದೆ, ಜಾತಿನಿಂದಕರನ್ನು ಕ್ಷುದ್ರ ಜೀವಿಯಂತೆ ತಿರಸ್ಕಾರದಿಂದ ನೋಡುತ್ತಾಳೆ. ಆ ನೋಟ ಮತ್ತು ಮುಖಭಾವ ಎಷ್ಟು ಪರಿಣಾಮಕಾರಿಯಾಗಿದೆ ಅಂದರೆ ಜಾತಿನಿಂದನೆ ಮಾಡುವವನಿಗೇ ಸಿಂಪಥಿಯ ಅಗತ್ಯವಿದೆಯೆನೊ ಅನಿಸುವಮಟ್ಟಿಗೆ. ವೆಬ್ ಸೀರಿಸ್‌ನ ಕೊನೆಯ ಮತ್ತು 8ನೇ ಎಪಿಸೋಡಿನಲ್ಲಿ ಕೊಲೆಗಾರನ ತಂದೆಗೆ ನೀಡುವ ಸಂವಿಧಾನದ ಎಚ್ಚರಿಕೆಯ ದೃಶ್ಯವಂತೂ ಅನನ್ಯವಾದದ್ದು. ತಳ ಸಮುದಾಯದ ವ್ಯಕ್ತಿ ಸಮಾಜದಲ್ಲಿ ಇಷ್ಟು ಧೈರ್ಯವಾಗಿ, ಸ್ವಾಭಿಮಾನಿಯಾಗಿ, ಅಷ್ಟೇ ಆತ್ಮವಿಶ್ವಾಸದಿಂದ ಕಂದಾಚಾರಗಳಿಗೆ ಮತ್ತು ಅವನ್ನು ಅನುಸರಿಸುವ ಶೋಷಕರಿಗೆ ಸೆಡ್ಡು ಹೊಡೆದು ನಿಲ್ಲುವುದು ವಾಸ್ತವವೇ? ವಾಸ್ತವ ಯಾಕಾಗಬಾರದು ಎಂಬ ಭಾವನೆಯೊಂದಿಗೆ ಅಂಜಲಿ ಪಾತ್ರ ಮನಸ್ಸಿನಲ್ಲಿ ಉಳಿಸುತ್ತದೆ.

ಒಂದೇ ಜಾಗದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಡುವೆ ಪರಸ್ಪರ ಸಾಮರ್ಥ್ಯವನ್ನು ಗೌರವಿಸುವ ಮತ್ತು ಬಹಳ ಮುಖ್ಯವಾಗಿ ಪರಸ್ಟರ ನಂಬಿಕೆಯ ಕೊರತೆ ಇರುತ್ತದೆ. ಅದರಲ್ಲೂ ಹೆಚ್ಚಿನ ಅಧಿಕಾರ ಹಾಗು ಸಾರ್ವಜನಿಕ ಜವಾಬ್ದಾರಿ ಇರುವ ಕಡೆ ಕೆಲಸದ ಒತ್ತಡ, ಮೇಲಧಿಕಾರಿಗಳ ದಬ್ಬಾಳಿಕೆ, ರಾಜಕಾರಣಿಗಳ ಹಸ್ತಕ್ಷೇಪ ಹೆಚ್ಚಾಗಿರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಪರಿಸರ ಸೌಹಾದವಾಗಿರಲು ಸಾಧ್ಯವಿಲ್ಲ ಇದರ ಪರಿಣಾಮ ಸಾರ್ವಜನಿಕರ ಮೇಲಾಗುತ್ತದೆ. ದಹಾಡ್ ಧಾರಾವಾಹಿಯಲ್ಲಿ ಸರಣಿ ಕೊಲೆಗಾರನನ್ನು ಹುಡಕಲು ಹೊರಡುವ ತನಿಖಾ ತಂಡದ ಇನ್ಸಪೆಕ್ಟರ್ ದೇವಿಲಾಲ್ ಸಿಂಗ್ (ಗುಲ್ಷನ್ ದೇವಯ್ಯ), ಸಬ್ ಇನ್ಸಪೆಕ್ಟರ್‌ಗಳಾದ ಕೈಲಾಸ್ ಪರ್ಗಿ (ಸೊಹುಮ್ ಷಾ) ಮತ್ತು ಅಂಜಲಿ ಭಾಟಿ (ಸೋನಾಕ್ಷಿ ಸಿನ್ಹಾ)- ಈ ಮೂವರು ಅಧಿಕಾರಿಗಳ ನಡುವಿನ ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಹೊಂದಾಣಿಕೆಯ ಸನ್ನಿವೇಶಗಳು ಧಾರಾವಾಹಿಯಲ್ಲಿ ಐಡಿಯಲ್ ಆಗಿ ಮೂಡಿಬಂದಿವೆ. ಇಲ್ಲಿ ದೇವಿಲಾಲ್ ಸಿಂಗ್ ಮುಖ್ಯಾಧಿಕಾರಿಯಾಗಿದ್ದರೆ, ಪರ್ಗಿ ಮತ್ತು ಅಂಜಲಿ ಅವನ ಅಧೀನಾಧಿಕಾರಿಗಳು. ಅದರಲ್ಲಿ ಅಂಜಲಿಗಿಂತ ಪರ್ಘಿ ಸೇವೆಯಲ್ಲಿ ಹಿರಿಯನಾಗಿದ್ದಾನೆ. ಪರ್ಗಿ ಮತ್ತು ಅಂಜಲಿ ಇವರು ಸರಣಿ ಕೊಲೆ ಪ್ರಕರಣವನ್ನು ಗ್ರಹಿಸುವ ಕ್ರಮ ಭಿನ್ನವಾಗಿರಿತ್ತದೆ; ಈ ಕಾರಣವಾಗಿ ಇವರಿಬ್ಬರ ನಡುವೆ ಯಾವಾಗಲೂ ವಾಗ್ವಾದ ಏರ್ಪಡುತ್ತಿರುತ್ತದೆ. ದೇವಿಲಾಲ್ ಸಿಂಗ್‌ಗೆ ಅಂಜಲಿ ಮತ್ತು ಅವಳ ಸಾಮರ್ಥ್ಯದ ಮೇಲೆ ಅಗಾಧವಾದ ವಿಶ್ವಾಸ; ಅಂಜಲಿ ಪ್ರಕರಣವನ್ನು ಗ್ರಹಿಸುವ ಮತ್ತು ಅದಕ್ಕೆ ಪೂರಕವಾದ ಅವಳ ಹೈಪಾಥೀಸಿಸ್ ದೇವಿಲಾಲ್‌ಗೆ ಬಹಳ ಬೇಗ ಕನ್ವಿನ್ಸ್ ಆಗಿಬಿಡುತ್ತದೆ. ಅಷ್ಟಾಗಿಯೂ ಒಬ್ಬ ಮೇಲಧಿಕಾರಿಯಾಗಿ ಈ ಇಬ್ಬರ ನಡುವೆ ಬ್ಯಾಲೆನ್ಸ್ ಮಾಡುವುದು ಮತ್ತು ಅವರಿಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂದರ್ಭಗಳು ಬಹಳ ಚೆನ್ನಾಗಿ ಮತ್ತು ಮೊದಲೇ ಹೇಳಿದಂತೆ ಐಡಿಯಲ್ ಆಗಿ ಮೂಡಿ ಬಂದಿವೆ. ಪರ್ಗಿಗೆ, ಅಂಜಲಿ ತನ್ನ ಸೇವಾಹಿರಿತನಕ್ಕೆ ಬೆಲೆಕೊಡದೆ ಯಾವಾಗಲೂ ಛೇಡಿಸುವ ಮತ್ತು ಪ್ರಮೋಷನ್ ಸಲುವಾಗಿ ಮೇಲಧಿಕಾರಿಗೆ ಬಕೆಟ್ ಹಿಡಿಯುತ್ತೀಯಾ ಎಂದು ಹಂಗಿಸುವುದರ ಬಗ್ಗೆ ಅಸಮಾಧಾನ ಇರುತ್ತದೆ. ಒಂದು ಸಂದರ್ಭದಲ್ಲಿ ಪರ್ಗಿ ಅಂಜಲಿಗೆ ’ನಾನು ಸೇವೆಯಲ್ಲಿ ನಿನಗಿಂತ ಹಿರಿಯ, ಶೋ ಸಮ್ ರೆಸ್ಪೆಕ್ಟ್’ ಎಂದು ಹೇಳುತ್ತಾನೆ; ಅಷ್ಟೇ ಪ್ರಾಮಾಣಿಕವಾಗಿ ಅಂಜಲಿ ಸಾರಿ ಕೇಳುತ್ತಾಳೆ. ಈ ತರಹದ ಸಣ್ಣಸಣ್ಣ ದೃಶ್ಯಗಳು ಘನವಾದುದನ್ನೇ ಕನ್ವೆ ಮಾಡುತ್ತವೆ ಅನಿಸುತ್ತದೆ. ಆಪಾದಿತನೊಬ್ಬ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣ ತನಿಖೆ ಮುಗಿಸುವ ಒತ್ತಡದಲ್ಲಿ ಪರ್ಗಿ ಇರುತ್ತಾನೆ. ಈ ಪ್ರಕರಣವನ್ನು ಭೇದಿಸಿದರೆ ಪ್ರಮೋಷನ್ ನೀಡುವುದಾಗಿ ಎಸ್‌ಪಿ ಆಶ್ವಾಸನೆ ನಿಡಿರುತ್ತಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ (ನಿರಪರಾಧಿಯಾಗಿದ್ದರೂ ಮೇಲ್ಜಾತಿ ಸಮುದಾಯಗಳ ಪಿತೂರಿಗೆ ಬಲಿಯಾಗಿರುವ) ಜೈಲಿನಿಂದ ಪರಾರಿಯಾಗಲು ಅಂಜಲಿ ಮತ್ತು ದೇವಿಲಾಲ್ ಸಹಾಯ ಮಾಡಿದ್ದರು ಎಂಬುದಕ್ಕೆ ಪೂರಕವಾದ ದಾಖಲೆ ಸಿಗುತ್ತದೆ. ಇದರ ಮುಖಾಂತರ ತನ್ನನ್ನು ಛೇಡಿಸುವ ಅಂಜಲಿಯನ್ನು ಬಹಳ ದೊಡ್ಡ ಸಂಕಷ್ಟಕ್ಕೆ ಸಿಲುಕಬಹುದಾದ ಅವಕಾಶ ಪರ್ಗಿಗೆ ಒದಗುತ್ತದೆ. ಇದರ ಕುರಿತು ವರದಿ ಮಾಡಲು ಎಸ್‌ಪಿ ಕಚೇರಿಗೆ ತೆರಳಿದ ಮೇಲೆಯೂ, ಈ ಕುರಿತು ಏನನ್ನು ಪ್ರಸ್ತಾಪ ಮಾಡದೆ ಎಸ್‌ಪಿ ಹತ್ತಿರ ಬಾಯಿಗೆಬಂದಂತೆ ಬೈಯಿಸಿಕೊಂಡು ಹಿಂದಿರುಗುತ್ತಾನೆ. ಈ ಸನ್ನಿವೇಶವನ್ನು ವಾಚ್ಯಗೊಳಿಸದೆ, ಪರ್ಗಿ ಮತ್ತು ಅಂಜಲಿ ನಡುವಿನ ಮೇಲ್ಮಟ್ಟದ ತಕರಾರುಗಳಿಗಿಂತ ಪರಸ್ಪರ ವ್ಯಕ್ತಿ ಗೌರವಕ್ಕೆ ಅವರ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ.

ಇದನ್ನೂ ಓದಿ: ಸಿನಿಮಾ ವಿಮರ್ಶೆ; ಬಿರಿಯಾನಿ ಘಮಲಿನ ಮ್ಯಾಜಿಕ್ ಸೃಷ್ಟಿಸಲು ವಿಫಲವಾದ ’ಡೇರ್‌ಡೆವಿಲ್ ಮುಸ್ತಫಾ’

ದಹಾಡ್‌ನಲ್ಲಿ ನಾಲ್ಕು ಕುಟುಂಬಗಳಲ್ಲಿನ ಸಂಬಂಧಗಳ ಸನ್ನಿವೇಶಗಳನ್ನು ಪ್ರಧಾನವಾಗಿ ಕಟ್ಟಿಕೊಡಲಾಗಿದೆ. ಸೀರಿಯಲ್ ಕಿಲ್ಲರ್ ಆನಂದ್, ಇನ್ಸಪೆಕ್ಟರ್ ದೇವಿಲಾಲ್, ಸಬ್ ಇನ್ಸಪೆಕ್ಟರ್‌ಗಳಾದ ಪರ್ಗಿ ಮತ್ತು ಅಂಜಲಿಯವರದ್ದು. ಆನಂದ್ ಕುಟುಂಬಕ್ಕಿರುವ ಜಾತಿ ಶ್ರೇಷ್ಠತೆ, ಪುರುಷಪ್ರಧಾನತೆ, ಇನ್ನಿತರ ಸಂಗತಿಗಳು ಆನಂದನ ಕೃತ್ಯಕ್ಕೆ ಪರೋಕ್ಷವಾಗಿ ಎಷ್ಟು ಪ್ರಭಾವ ಬೀರಿವೆ ಎಂಬುದನ್ನು ಬಹಳ ವಿಷದವಾಗಿಯೇ ಚರ್ಚೆ ಮಾಡಬೇಕಾಗುತ್ತದೆ. ಇನ್ನೂ ದೇವಿಲಾಲ್ ಸಿಂಗ್ ಕುಟುಂಬದ ಸನ್ನಿವೇಶಗಳು ಕೂಡ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ದೇವಿಲಾಲ್ ಸಿಂಗ್ ಪಾತ್ರಧಾರಿ ಗುಲ್ಷನ್ ದೇವಯ್ಯ ನಟನೆ ವೈಯಕ್ತಿಕವಾಗಿ ಅವರ ನಟನಾ ಕೆರಿಯರ್‌ನಲ್ಲಿ ನೆನಪಿನಲ್ಲಿ ಉಳಿಯುವಂತದ್ದು; ಅಷ್ಟು ಮಾಗಿದ ಅಭಿವ್ಯಕ್ತಿ. ದೇವಿಲಾಲ್ ತನ್ನ ಮಗಳಿಗೆ ವಿಶ್ವಾಸ ತುಂಬುವ ಸನ್ನಿವೇಶಗಳು ಬಹಳ ಪ್ರಮುಖವಾದವು. ಪೇಟ್ರಿಯಾರ್ಕಿ ಸೊಸೈಟಿಯ ಪ್ರಭಾವದಲ್ಲೇ ಬೆಳೆದು ಬಂದ ದೇವಯ್ಯ ತನ್ನ ಮಗಳಿಗೆ, ಕೆರಿಯರ್‌ಗೆ ನೀಡಬೇಕಾದ ಮಹತ್ವ, ಗಂಡು ಹೆಣ್ಣು ನಡುವಿನ ಸಾಮರ್ಥ್ಯದ ಬಗ್ಗೆ ಇರುವ ಪೂರ್ವಗ್ರಹ, ಆರ್ಥಿಕವಾಗಿ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಮಹತ್ವ, ಸಮಾಜ ಹೆಣ್ಣುಮಕ್ಕಳಿಗೆ ವಿಧಿಸುವ ನಿರ್ಬಂಧದ ಬಗ್ಗೆ ಮಗಳಿಗೆ ಆತ್ಮವಿಶ್ವಾಸ ತುಂಬುವ ಮತ್ತು ಮಗನ ಲೈಂಗಿಕ ಆಸಕ್ತಿಯ ಬಗ್ಗೆ ತಿಳಿಹೇಳುವ ದೃಶ್ಯಗಳು- ಹೀಗೆ ಅನನ್ಯವಾದ ಚಿತ್ರಣವನ್ನು ನಿರ್ದೇಶಕಿ ಮೂಡಿಸುತ್ತಾರೆ. ಆದರೆ ಹೆಂಡತಿ ನಡುವಿನ ವಾಗ್ವಾದದ ಸಂದರ್ಭದಲ್ಲಿ ಅವನ ಬೆಳೆದುಬಂದ ಪರಿಸರದ ಪ್ರಭಾವ ವ್ಯಕ್ತವಾಗುತ್ತದೆ. ಈ ತರಹದ ವೈರುಧ್ಯದ ಸಂಕೀರ್ಣತೆಯನ್ನು ದೇವಿಲಾಲ್ ತನ್ನ ವೈವಾಹಿಕ ಜೀವನದ ಬಗ್ಗೆ ಅಂಜಲಿ ಜೊತೆ ಹೇಳಿಕೊಳ್ಳುವಾಗ ಕೊಂಚ ಅರ್ಥಮಾಡಿಕೊಳ್ಳುವಂತೆಯೂ ಚಿತ್ರಿಸಲಾಗಿದೆ.

ಝೋಯಾ ಅಖ್ತರ್‌, ರೀಮಾ ಕಗ್ಟಿ

ಅಂಜಲಿ ತಂದೆ ತೀರಿಹೋಗಿದ್ದಾರೆ, ಆದರೆ ಅವಳ ತಾಯಿ ಯಾವಾಗಲೂ ಹೇಳುತ್ತಿರುತ್ತಾಳೆ: ಈ ರೀತಿಯ ನಿನ್ನ ಮೊಂಡ ಮತ್ತು ದಾರ್ಷ್ಟ್ಯದ ವರ್ತನೆಗೆ ನಿನ್ನ ತಂದೆಯೇ ಕಾರಣ ಎಂದು. ಬಹುಶಃ ಅಂಜಲಿಯಂತಹ ಧೈರ್ಯ ಮತ್ತು ಆತ್ಮವಿಶ್ವಾಸದ ವ್ಯಕ್ತಿತ್ವ ರೂಪುಗೊಳ್ಳಲು ಇರುವ ಸಾಧ್ಯತೆ ಮತ್ತು ಪ್ರೇರಣೆಯನ್ನು ಪರೋಕ್ಷವಾಗಿ ಕಟ್ಟಿಕೊಡಲೋಸ್ಕರವೇನೋ ದೇವಿಲಾಲ್ ಸಿಂಗ್ ಮತ್ತು ಅವಳ ಮಗಳ ನಡುವಿನ ಸನ್ನಿವೇಶಗಳನ್ನು ನಿರ್ದೇಶಕಿ ತಂದಿದ್ದಾರೆ. ಅಂಜಲಿ ತಾಯಿಗೆ ಮಗಳ ಮೇಲೆ ಎರಡು ವಿಷಯದಲ್ಲಿ ಬಹಳ ಅಸಮಾಧಾನ. 30 ವಯಸ್ಸು ದಾಟಿದರೂ ಮದುವೆ ಬಗ್ಗೆ ಆಸಕ್ತಿ ತೋರುತ್ತಿಲ್ಲ ಮತ್ತು ದಿನದ 24 ಗಂಟೆಗಳ ಕಾಲ ತನ್ನ ವೃತ್ತಿಯಲ್ಲಿ ಇನ್ವಾಲ್ವ್ ಆಗಿರೋದು. ತನ್ನ ತಾಯಿ ಮದುವೆ ವಿಚಾರದಲ್ಲಿ ಎಮೋಷನಲ್ ಬ್ಲಾಕ್‌ಮೇಲ್ ಮಾಡಲು ಬಂದಾಗ ಅಂಜಲಿ ಸೀರಿಯಲ್ ಕಿಲ್ಲಿಂಗ್ ಪ್ರಕರಣದಲ್ಲಿ ಮರಣ ಹೊಂದಿದ 29 ಹೆಣ್ಣುಮಕ್ಕಳ ಫೋಟೋಗಳನ್ನು ತೋರಿಸಿ, ’ನೋಡಮ್ಮ ನಿನ್ನ ತರಹವೇ, ಇವರ ಮನೆಗಳಲ್ಲಿ ಇವರ ತಂದೆ ತಾಯಿ ತನ್ನ ಮಗಳಿಗೆ ಇಷ್ಟು ವಯಸ್ಸಾದರೂ ಇನ್ನೂ ಮದುವೆ ಆಗಿಲ್ಲ ಎಂದು ಗೋಳಿಟ್ಟ ಕಾರಣವಾಗಿಯೇ, ಈ ಬಡ ಹೆಣ್ಣುಮಕ್ಕಳು ಪ್ರೀತಿ ಮತ್ತು ಮದುವೆ ಎಂಬ ಟ್ರಾಪ್‌ಗೆ ಸಿಲುಕಿ ಸೈಕೊ ಒಬ್ಬನಿಂದ ಬಲಿಯಾಗಿದ್ದಾರೆ; ಈ ಹೆಣ್ಣು ಮಕ್ಕಗಳಿಗೆ ತಮ್ಮ ಮನೆಗಳಲ್ಲಿ ಈ ರೀತಿಯ ಒತ್ತಡ ಇಲ್ಲದೆ ಇದ್ದಿದ್ದರೆ, ಅವರ ಮನೆಯಲ್ಲೇ ಅವರಿಗೆ ಬದುಕಲು ಅವಕಾಶವಾಗಿದ್ದರೆ ಅವರು ಸಾಯುವ ಸಂದರ್ಭ ಬರುತ್ತಿರಲಿಲ್ಲ’ ಎಂದು ಹೇಳುತ್ತಾಳೆ.

ಕೊನೆಯದಾಗಿ…

ಅಂಜಲಿ ಭಾಟಿ ಕೆಲಸ ಮಾಡುವ ಜಾಗದಲ್ಲಿ ಒಮ್ಮೆಯೂ ಜಾತಿನಿಂದನೆಗೆ ಒಳಗಾಗುವ ಸನ್ನಿವೇಶಗಳು ಇಲ್ಲ. ಅಥವಾ ಜಾತಿ ಕಾರಣವಾಗಿ ಅವಳ ಸಾಮರ್ಥ್ಯವನ್ನು ಅನುಮಾನಿಸುವ ಸನ್ನಿವೇಶಗಳು ಇಲ್ಲ. (ಆಕೆಗೆ ಗೊತ್ತಾಗದಂತೆ ಒಬ್ಬ ಕಾನ್‌ಸ್ಟೇಬಲ್‌ನ ವರ್ತನೆಯನ್ನು ಚಿತ್ರಿಸಲಾಗಿದೆ.) ಈ ತರಹದ ಐಡಿಯಲ್ ವರ್ಕಿಂಗ್ ಪ್ಲೇಸ್ ಕಲ್ಪನೆ ಬಹಳ ಅಗತ್ಯ ಅದರೂ ವಾಸ್ತವ ಬೇರೆ ಇದೆ. ಇವತ್ತು ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಬಹಳಷ್ಟು ಸಂದರ್ಭದಲ್ಲಿ ಜಾತಿ ನೋಡಿಯೇ ಅವರನ್ನು ಗೌರವಿಸುವುದು ಉಪಚರಿಸುವುದು ನಡೆದೇ ಇದೆ. ಇದು ಈ ದೇಶದ ನೂತನ ಸಂಸತ್ ಭವನದಾಣೆಗೂ ಸತ್ಯ.

ದಹಾಡ್ ವೆಬ್ ಸೀರಿಸ್‌ನ ಕ್ರಿಯೇಟರ್ ಮತ್ತು ನಿರ್ದೇಶಕರಾದ ರೀಮಾ ಕಗ್ಟಿ ಮತ್ತು ಝೋಯಾ ಅಖ್ತರ್‌ಗೆ ಹಾಗೂ ಕಲಾವಿದರಾದ ಸೋನಾಕ್ಷಿ ಸಿನ್ಹಾ, ಗುಲ್ಷನ್ ದೇವಯ್ಯ ಮತ್ತು ವಿಜಯ್ ವರ್ಮ ಅವರಿಗೂ ಅಭಿನಂದನೆಗಳ

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...