Homeಕರ್ನಾಟಕಸಿನಿಮಾ ವಿಮರ್ಶೆ; ಬಿರಿಯಾನಿ ಘಮಲಿನ ಮ್ಯಾಜಿಕ್ ಸೃಷ್ಟಿಸಲು ವಿಫಲವಾದ ’ಡೇರ್‌ಡೆವಿಲ್ ಮುಸ್ತಫಾ’

ಸಿನಿಮಾ ವಿಮರ್ಶೆ; ಬಿರಿಯಾನಿ ಘಮಲಿನ ಮ್ಯಾಜಿಕ್ ಸೃಷ್ಟಿಸಲು ವಿಫಲವಾದ ’ಡೇರ್‌ಡೆವಿಲ್ ಮುಸ್ತಫಾ’

- Advertisement -
- Advertisement -

ಇಸ್ಲಮಾಫೋಬಿಯಾವನ್ನು ಎಗ್ಗಿಲ್ಲದೆ ಹರಡುವ ಸಿನಿಮಾಗಳನ್ನು (ದ ಕೇರಳ ಸ್ಟೋರಿ, ದ ಕಾಶ್ಮೀರ್ ಫೈಲ್ಸ್) ಸಂಭ್ರಮಿಸುವ ಯುಗಧರ್ಮದಲ್ಲಿ ನಾವಿದ್ದೇವೆ. ಇಂತಹ ಸಿನಮಾಗಳಿಗೆ ಸಮಾಜದ ಒಂದು ಸೆಕ್ಷನ್‌ನ ಬೆಂಬಲ ಮಾತ್ರವಲ್ಲದೆ ಪ್ರಭುತ್ವದ ನೆರವು ಕೂಡ ದೊಡ್ಡಮಟ್ಟದಲ್ಲಿ ಸಿಗುತ್ತಿದೆ. ಈ ಸನ್ನಿವೇಶದಲ್ಲಿ ಇಂಡಿಯಾದ ಬಹುಸಂಖ್ಯಾತರಾದ ಹಿಂದೂ ಧರ್ಮೀಯರ ಮತ್ತು ಅಲ್ಪಸಂಖ್ಯಾತ ಧರ್ಮೀಯರಾದ ಮುಸಲ್ಮಾನರ ಸಹಬಾಳ್ವೆಯ ಕಥೆಗಳನ್ನು ಯಾವುದೇ ಕಲಾಪ್ರಕಾರದಲ್ಲಿ ಹೇಳಿದರೂ, ಅಂತಹ ಪ್ರಯತ್ನಗಳನ್ನು ಗುರುತಿಸುವುದು ಮುಖ್ಯವಾದೀತು. ಅಂತಹ ಆಶಯ ಹೊತ್ತ ’ಡೇರ್‌ಡೆವಿಲ್ ಮುಸ್ತಫಾ’ ಸಿನಿಮಾ ಕಳೆದ ವಾರ ಬಿಡುಗಡೆ ಕಂಡಿತು. ಆದರೆ ತನ್ನ ಆಶಯವನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗಿದೆಯೇ? ಕನ್ನಡದ ಖ್ಯಾತ ಕಥೆಗಾರ ಪೂರ್ಣಚಂದ್ರ ತೇಜಸ್ವಿ ಅವರ ಅಷ್ಟೇನೂ ಜನಪ್ರಿಯವಲ್ಲದ ಒಂದು ಕಥೆಯನ್ನು ಆಯ್ದುಕೊಂಡು, ಸಿನಿಮಾಗೆ ಅಳವಡಿಸಿರುವ ಈ ಪ್ರಯತ್ನ ಯಾವೆಲ್ಲಾ ನೆಲೆಗಳಲ್ಲಿ ಸಫಲವಾಗಿದೆ? ಎಲ್ಲೆಲ್ಲಿ ತನ್ನ ಆಶಯವನ್ನು ಹೊರಲಾರದೇ ಭಾರಕ್ಕೆ ಕುಸಿದಿದೆ?

ತೇಜಸ್ವಿಯವರ ಅಷ್ಟೇನೂ ಜನಪ್ರಿಯವಲ್ಲದ, 80ರ ದಶಕದ ಆರಂಭದಲ್ಲಿ ಬರೆದ ಕಥೆಯನ್ನು ಆಯ್ದುಕೊಳ್ಳುವುದರಲ್ಲಿ, ಒಂದು ರೀತಿಯ ಅಡ್ವಾಂಟೇಜ್ ಇದ್ದರೂ, ಅದೇ ಮಟ್ಟದ ರಿಸ್ಕ್ ಕೂಡ ಇದೆ. ಅನುಕೂಲ ಈ ತೆರನಾದದ್ದು; ಅಪರಿಚಿತತೆ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಹಾಕುವ ಸಾಧ್ಯತೆ ಕಡಿಮೆಯಿರುತ್ತದೆ ಮತ್ತು ಮೂಲಕಥೆಯನ್ನು ಮೀರಿಸಿ ಚಿತ್ರಕಥೆಯನ್ನು ಬೆಳೆಸುವ ಅವಕಾಶ ಹೆಚ್ಚಿರುತ್ತದೆ. ಸುಲಭಕ್ಕೆ ತಿಳಿಯಬಹುದಾದಂತೆ ರಿಸ್ಕ್ ಏನೆಂದರೆ, ಬಾಬ್ರಿ ಮಸೀದಿ ಧ್ವಂಸಕ್ಕೂ ಮೊದಲು ಬರೆದ ಕಥೆಯಿದು; ಮುಸಲ್ಮಾನರನ್ನು ರಾಕ್ಷಸೀಕರಿಸುವ ಸಂಘ ಪರಿವಾರದ ಬೆಂಬಲದಿಂದ, ಹಿಂದೂ ನ್ಯಾಷನಲಿಸಂನ ಪ್ರತಿಪಾದಕ ಪಕ್ಷ 2014ರ ಅಧಿಕಾರ ಹಿಡಿದು, ತೀವ್ರ ಬಲಪಂಥೀಯ ಸರ್ಕಾರ ರಚಿತವಾಗುವುದಕ್ಕೂ 5 ದಶಕದ ಹಿಂದೆ ಬರೆದ ಕಥೆಯನ್ನು ಅಳವಡಿಸಿಕೊಳ್ಳಲು ಮುಂದಾಗುವ ನಿರ್ದೇಶಕ-ಚಿತ್ರಕಥೆಗಾರನಿಗೆ ನಿಜಕ್ಕೂ ಅದು ದೊಡ್ಡ ಸವಾಲೆಸೆಯುತ್ತದೆ. ’ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಲ್ಲಿರುವ, ಅಲ್ಲಿರುವ ಇತರ ಕಥೆಗಳಗೆ ಹೋಲಿಸಿದರೆ ಅಷ್ಟೇನೂ ಸೂಕ್ಷ್ಮ ನಿರೂಪಣೆ ಇರದ ಅಥವಾ ಕಥಾ ಸಂಘರ್ಷವನ್ನು ಬಗೆಹರಿಸುವ ನಿಟ್ಟಿಯಲ್ಲಿ ಅಷ್ಟೇನೂ ಮಹತ್ವದ ಕಥೆಯಾಗದ ’ಡೇರ್‌ಡೆವಿಲ್ ಮುಸ್ತಫಾ’ ಮೂಲಕಥೆ ಚಿತ್ರತಂಡಕ್ಕೆ ನಿರೀಕ್ಷೆಗೂ ಮೀರಿದ ಸವಾಲೊಡ್ಡಿದೆ.

ಪೂರ್ಣಚಂದ್ರ ತೇಜಸ್ವಿ

ತೇಜಸ್ವಿಯವರ ಈ ಕಥೆಯಲ್ಲಿ ಬರುವ ಕಥಾ ನಿರೂಪಕ, ಸದರಿ ಕಥೆ ನಡೆಯುವ ಕಾಲೇಜಿನ ವಿದ್ಯಾರ್ಥಿ. ಮುಸಲ್ಮಾನರ ಬಗ್ಗೆ ವಿಪರೀತ ತಪ್ಪು ಮತ್ತು ಕಲ್ಪಿತ ಪೂರ್ವಾಗ್ರಹಗಳನ್ನುಳ್ಳವನು. ನಿರೂಪಕನಾಗಲೀ ಅಥವಾ ಉಳಿದ ಕಾಲೇಜು ವಿದ್ಯಾರ್ಥಿಗಳಾಗಲೀ, ತಮ್ಮ ಕಾಲೇಜಿಗೆ ಹೊಸದಾಗಿ ಬರುವ ಮುಸಲ್ಮಾನ ವಿದ್ಯಾರ್ಥಿಯ ಬಗ್ಗೆ ಹೊಂದಿರುವ ಪೂರ್ವಾಗ್ರಹಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳದೆಯೇ ಕಥೆ ತಣ್ಣಗೆ ಮುಕ್ತಾಯವಾಗುತ್ತದೆ. ಇದೇ ಜಾಡು ಹಿಡಿಯುವ ಸಿನಿಮಾ ಕೂಡ ಮುಸಲ್ಮಾನರ ಬಗ್ಗೆ ಹಿಂದೂ ವಿದ್ಯಾರ್ಥಿಗಳಿಗಿರುವ ಪೂರ್ವಾಗ್ರಹದ ಸಂಘರ್ಷವನ್ನು ಕಥೆಯಲ್ಲಿ ಚಿತ್ರಿಸಿದರೂ, ಅದನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯವಾಗದೆ ಒದ್ದಾಡಿರುವಂತೆ ಭಾಸವಾಗುತ್ತದೆ. ಇಂದಿನ ಮೆಜಾರಿಟೇರಿಯನ್ ಮನೋಧರ್ಮ ಸೃಷ್ಟಿಸುವ ’ಅನ್ಯತನದಿಂದ’ ಭುಗಿಲೇಳುತ್ತಿರುವ ಸಮಸ್ಯೆಯ ತಿಳಿವಳಿಕೆ ಲಭ್ಯವಿರುವ ಸಮಯದಲ್ಲಿ, ಸದರಿ ಸಿನಿಮಾ ಕಟ್ಟಿಕೊಡುವ ನಿರ್ಣಯ ಏನೇನೂ ಸಾಲದೆಂಬಂತೆ ಭಾಸವಾಗುತ್ತದೆ.

ಅಬಚೂರು ಎಂಬ ಊರಿನಲ್ಲಿರುವ ಕಾಲೇಜಿನಲ್ಲಿ ನಡೆಯುವ ಕಥೆಯಿದು. ಹಿಂದೂ ಧರ್ಮದ ವಿವಿಧ ಜಾತಿಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾತ್ರ ಇರುವ ಕಾಲೇಜಿಗೆ ಮುಸಲ್ಮಾನ ಧರ್ಮದ ವಿದ್ಯಾರ್ಥಿಯೊಬ್ಬ ಸೇರ್ಪಡೆಯಾದಾಗ ಅನಾವರಣಗೊಳ್ಳುವ ಪೂರ್ವಗ್ರಹಗಳನ್ನು ಹಿಡಿದಿಡುವ ಘಟನೆಗಳೇ ಸಿನಿಮಾದ ಕಥಾಹಂದರ.

ಈ ಊರನಲ್ಲಿ ಮೊದಲಿನಿಂದಲೂ ಗಣಪತಿ ವಿಸರ್ಜನೆಯ ಸಮಯದಲ್ಲಿ ಹಿಂದೂ ಮುಸ್ಲಿಂ ಕೋಮುಘರ್ಷಣೆಯಿದೆ ಎಂಬ ಅಂಶವನ್ನು ಸಿನಿಮಾದಲ್ಲಿ ಮೊದಲೇ ಹೇಳಲಾಗುತ್ತದೆ. ಅದರಂತೆಯೇ ಇದು ಧರ್ಮದ ಆಧಾರದಲ್ಲಿ ಒಡೆದಿರುವ ಊರೆಂದು ಮಾತುಗಳ ಸಂಭಾಷಣೆಯ ಮೂಲಕ ನಿರ್ದೇಶಕ ಎಸ್ಟಾಬ್ಲಿಷ್ ಮಾಡುತ್ತಾರೆ. ಮುಸ್ತಫಾ ಹೆಸರನ್ನು ಅಟೆಂಡೆನ್ಸ್‌ಗಾಗಿ ಕರೆದಾಗ ಹುಟ್ಟುವ ಕಮೋಷನ್‌ನಿಂದ ಹಿಡಿದು ಆತ ನಿಜಕ್ಕೂ ಕಾಲೇಜನ್ನು ಪ್ರವೇಶಿಸಿದಾಗ ಆಗುವ ಅನಾದರಣೀಯ ಘಟನೆಗಳನ್ನು ಕಟ್ಟಿಕೊಟ್ಟಿರುವ ರೀತಿ, ಜೀವನದಲ್ಲಿ ಮುಸಲ್ಮಾನರನ್ನೇ ನೋಡಿರದೆ ಕೇಳಿರದೆ ಬೆಳೆದಿರುವ ವ್ಯಕ್ತಿಗಳ ಚಿತ್ರಣದಂತಿದ್ದು, ಎಕ್ಸಾಜರೇಟೆಡ್ ಅನ್ನಿಸದೆ ಇರದು. ಇರಲಿ, ಊರಿನಲ್ಲಿ ಮುಸಲ್ಮಾನರಿದ್ದರೂ ವಿದ್ಯಾರ್ಥಿಗಳ ಇಗ್ನೊರೆನ್ಸ್‌ಅನ್ನು, ಪ್ರಿಜ್ಯುಡೈಸ್‌ಅನ್ನು ಸಿನಿಮಾದ ಭಾವ ತೀವ್ರತೆಗಾಗಿ ಬೇಕೆಂದೇ ಉತ್ಪ್ರೇಕ್ಷಿತವಾಗಿ ಕಟ್ಟಿಕೊಟ್ಟಿರಬಹುದು ಎಂದುಕೊಳ್ಳೋಣ; ಆದರೆ ಆ ಇಗ್ನೊರೆನ್ಸ್ ಮತ್ತು ಪ್ರಿಜ್ಯುಡೈಸ್‌ಗಳನ್ನು ತಗ್ಗಿಸುವ ದೃಶ್ಯಗಳನ್ನು ಕಟ್ಟುವುದಕ್ಕೆ ಕಥೆಗಾರ-ನಿರ್ದೇಶಕ ಜೋಡಿ ಸಫಲರಾಗಿಲ್ಲ. ಎಲ್ಲ ವಿಷಯಗಳಲ್ಲೂ ಮುಸ್ತಫಾ ಜೊತೆಗೆ ಕ್ಯಾತೆ ತೆಗೆಯುವ ರಾಮಾನುಜ ಅಯ್ಯಂಗಾರಿಯ ಮನಸ್ಸು ಬದಲಾಗುವಂತಹ ಘಟನೆಗಳು ತೆರೆದುಕೊಳ್ಳುವುದೇ ಇಲ್ಲ. ಕಾಲೇಜಿನಲ್ಲಿ ಉಳಿದವರಿಗೆ ಆಗಾಗ ಮುಸ್ತಫಾನ ಮೇಲೆ ಚೂರು ಕಾನ್ಫಿಡೆನ್ಸ್ ಬೆಳೆಯುವ ಘಟನೆಗಳು ಜರುಗುತ್ತವೆ, ಆದರೆ ಅವ್ಯಾವುವೂ ಮೆಜಾರಿಟೇರಿಯನ್ ಮನೋಧರ್ಮವನ್ನು ಪ್ರಶ್ನಿಸುವ ಮಟ್ಟಕ್ಕೆ ಬೆಳೆಯುವುದೇ ಇಲ್ಲ. ಅಂತಹ ಒಂದು ಘಟನೆ ಗಣಪತಿ ಪ್ರೊಸೆಷನ್‌ನಲ್ಲಿ ಗಲಾಟೆಗೆ ಕಾರಣವಾಗುವ ಹೋರಿಯನ್ನು ಮುಸ್ತಫಾ ಹಿಡಿದು ತಹಬದಿಗೆ ತರುವುದು. ಇದು ’ಒಳ್ಳೆಯತನ’ವನ್ನು ಪ್ರೂವ್ ಮಾಡುವುದು ಅಲ್ಪಸಂಖ್ಯಾತನ ಕರ್ತವ್ಯ ಎಂಬಂತಹ ಮನೋಧೋರಣೆಯ ಭಾಗವಾಗಿಯೇ ಉಳಿಯುವುದರಿಂದ ಈ ದೃಶ್ಯದ ಕಟ್ಟುವಿಕೆಯಲ್ಲಿಯೂ ಸಮಸ್ಯೆ ತಲೆದೋರುತ್ತದೆ.

ಅಬಚೂರಿನ ಪೋಸ್ಟಾಫೀಸು

ಕಥೆ ಓದಿರುವವರಿಗೆ ಮತ್ತೊಂದು ಗೊಂದಲ ಮೂಡದೆ ಇರದು; ಗಣಪತಿ ವಿಸರ್ಜಿಸುವ ದಿನ ಯಾವಾಗಲೂ ಗಲಾಟೆಯಾಗುತ್ತದೆ ಎಂದು ಬಿಂಬಿಸುವ ಕಥೆಗಾರ-ನಿರ್ದೇಶಕ ಒಂದು ಸಮುದಾಯದ ಮೇಲೆ ತನಗೆ ಗೊತ್ತಿಲ್ಲದಂತೆಯೇ ಆರೋಪ ಹೊರಿಸುತ್ತಿರುತ್ತಾನೆ; ಸಿನಿಮಾದಲ್ಲಿ ಬರುವ ಗಣಪತಿ ಹಬ್ಬದ ವರ್ಷದಲ್ಲಿ ಅಂತಹ ಗಲಭೆಗಳು ಪೊಲೀಸರ ಮತ್ತು ಕಾಲೇಜು ಸ್ಪೋರ್ಟ್ಸ್ ಟೀಂನ ಮುನ್ನೆಚ್ಚರಿಕೆಯಿಂದ ಘಟಿಸುವುದಿಲ್ಲ ಎಂಬ ರೀತಿಯಲ್ಲಿ ಕಟ್ಟಿಕೊಡಲಾಗಿದೆಯೇ ಹೊರತು, ಕೋಮು ಸಾಮರಸ್ಯ ಕದಡುವ ಗಲಭೆಗಳು ಪಿತೂರಿಯಿಂದ ಕೂಡಿರುತ್ತವೆ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಅದಕ್ಕೆ ಸಾಮಾನ್ಯವಾಗಿ ಕಾರಣವಾಗಿರುವುದಿಲ್ಲ ಎಂಬ ವಿವೇಕ ಎಲ್ಲಿಯೂ ಧ್ವನಿಸುವುದಿಲ್ಲ. ಇಂದಿನ ದಿನಕ್ಕೆ ಈ ಕಥೆಯನ್ನು ಕಟ್ಟಿಕೊಡಬೇಕಾದರೆ ಅಂತಹ ಬದಲಾವಣೆಗಳು ಅಗತ್ಯ ಎಂಬುದು ಚಿತ್ರತಂಡಕ್ಕೆ ಅನ್ನಿಸದೆ ಹೋಗಿದ್ದರೂ ಕನಿಷ್ಟ ಪಕ್ಷ ಮೂಲ ಕಥೆಯಲ್ಲಿ ನಿರೂಪಕ ಹೇಳುವಂತೆ ಮೊಹರಂ-ಗಣಪತಿ ಹಬ್ಬಗಳೆರಡರಲ್ಲೂ ಗಲಭೆಗಳಾಗುತ್ತಿತ್ತು ಎಂಬ ಅಂಶವನ್ನಾದರೂ ಒಳಗೊಳ್ಳಲು ಪ್ರಯತ್ನಿಸಿದ್ದರೆ ಒಂದಿಷ್ಟು ಸಮತೋಲನ ಸಾಧ್ಯವಾಗುತ್ತಿತ್ತೇನೋ!

ಚಿತ್ರತಂಡ ಕೆಲವು ಕಡೆಗೆ ಸ್ವಾಗತಾರ್ಹ ಬದಲಾವಣೆಗಳನ್ನೂ ಮಾಡಿಕೊಂಡಿದೆ. ಉದಾಹರಣೆಗೆ ಮುಸ್ತಫಾ ’ಕನ್ನಡ ಸರಿಯಾಗಿ ಬರುತ್ತಿರಲಿಲ್ಲ’ ಎಂಬ ಮೂಲ ಕಥೆಯ ಧೋರಣೆಯನ್ನು ಬದಲಾಯಿಸಿಕೊಂಡು ಆತ ಚೆನ್ನಾಗಿಯೇ ಕನ್ನಡ ಮಾತನಾಡಬಲ್ಲ ವಿದ್ಯಾರ್ಥಿಯಾಗಿದ್ದಾನೆ. (ಹೀಗೆ ಬರೆಯುವ ಉದ್ದೇಶ, ಕನ್ನಡ ಬರದಿದ್ದರೆ ತಪ್ಪು ಎಂದು ಹೇಳುವುದಲ್ಲ; ಬದಲಿಗೆ ಈಗಾಗಲೇ ತುಂಬಿ ತುಳುಕುತ್ತಿರುವ ಪೂರ್ವಾಗ್ರಹಗಳಿಗೆ ಸಿನಿಮಾ ಈ ವಿಷಯದಲ್ಲಿ ಅದನ್ನು ಬೆಳೆಸದಂತೆ ಜಾಗರೂಕ ಹೆಜ್ಜೆಯನ್ನಿಟ್ಟಿದೆ.) ಜೊತೆಗೆ ರಾಮಾನುಜ ಅಯ್ಯಂಗಾರಿಯ ಗೆಳೆಯರ ಕೆಲವರಲ್ಲಿ ಆಗುವ ಬದಲಾವಣೆಗಳನ್ನು ಸಿನಿಮಾ ಹಿಡಿದಿದೆ. ಒಬ್ಬಳು ವಿದ್ಯಾರ್ಥಿನಿಯ ಪಾತ್ರವೂ ಬಂದು, ಆಕೆ ಮಸ್ತಫಾನ ಬಗ್ಗೆ ತನ್ನ ಧೋರಣೆಯನ್ನು ಬದಲಿಸಿಕೊಳ್ಳುವುದು ಹೊಸ ಸೇರ್ಪಡೆಯಾಗಿ ಗಮನ ಸೆಳೆಯುತ್ತದೆ.

ಇದನ್ನೂ ಓದಿ: ಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’

ಮಸ್ತಫಾಗಿಂತಲೂ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಪಡೆಯುವಂತೆ ಕಾಣುವ ರಾಮಾನುಜನ ಪಾತ್ರದಲ್ಲಿ ಬದಲಾವಣೆಯಾಗುವಂತಹ ಯಾವ ಸಂದರ್ಭಗಳೂ ಬರದೆ ’ಕಾಲೇಜು ವಾರ್ಷಿಕ ದಿನ’ದ ಘಟನೆಯ ಚಿತ್ರಣ ವೀಕ್ಷಕರಿಗೆ ಎದುರಾಗುತ್ತದೆ. ಅಲ್ಲಿ ನಡೆಯುವ ’ಮ್ಯಾಜಿಕ್ ಶೋ’ ಸಿನಿಮಾದ ಸಂಘರ್ಷವನ್ನು ಪುನರಾವರ್ತಿಸುವ ರೀತಿಯಲ್ಲಿ ’ಮೊಟ್ಟೆಯೊಡೆಯುವ’ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಸಿನಿಮಾ ಮುಗಿಯುತ್ತಾ ಬಂದರೂ ಬಹುಸಂಖ್ಯಾತ ಮನೋಧರ್ಮದ ಬದಲಾವಣೆಯ ಮ್ಯಾಜಿಕ್ ನಡೀತಾ ಇಲ್ಲವೆಲ್ಲೆಂದುಕೊಳ್ಳುವ ಹೊತ್ತಿಗೆ ಕ್ರಿಕೆಟ್ ಮ್ಯಾಚುಗಳು ಮತ್ತು ಹೊಸ ಸಂಘರ್ಷಗಳು ಪ್ರಾರಂಭವಾಗುತ್ತವೆ. ಇದು ಮೂಲ ಕಥೆಯಲ್ಲಿಲ್ಲದೆ ಸಂಪೂರ್ಣ ವಿಭಿನ್ನ ಸೇರ್ಪಡೆಯಾಗಿರುವುದರಿಂದಲೋ ಏನೋ, ಚಿತ್ರತಂಡ ಇಲ್ಲಿ ಮತ್ತಷ್ಟು ಎಡವಿದೆ.

ಮುಸ್ತಫಾನ ಬಗೆಗಿನ ’ಅದರ್‌ನೆಸ್’ಅನ್ನು ನಿವಾರಿಸಲು ಹೋಗಿ, ಸಿನಿಮಾದಲ್ಲಿ ಚಿತ್ರಿತವಾಗುವ ’ಎಲ್ಲ ಮುಸಲ್ಮಾನ’ ಸಮುದಾಯ ವ್ಯಕ್ತಿಗಳ ಕ್ರಿಕೆಟ್ ತಂಡವನ್ನೇ ಅನ್ಯರ ರೀತಿಯಲ್ಲಿ ಕಟ್ಟಿಕೊಡುವುದು, ಸಿನಿಮಾ ನಿಭಾಯಿಸಲು ಸೋತಿರುವ ವಿರೋಧಾಭಾಸ. ಆ ತಂಡದ ಸದಸ್ಯರನ್ನು ರೌಡಿ ಎಲಿಮೆಂಟ್‌ಗಳ ರೀತಿಯಲ್ಲಿ ಚಿತ್ರಿಸುವುದು, ಅವರ ನಡುವಿನ ಪಂದ್ಯಕ್ಕೆ ಪೊಲೀಸ್ ಪೇದೆಯೊಬ್ಬನನ್ನು ಅಂಪೈರ್ ಆಗುವಂತೆ ನೋಡಿಕೊಳ್ಳುವುದು ಸಿನಮಾ ತನ್ನ ಆಶಯವನ್ನೇ ಸ್ವಲ್ಪ ಕಾಲ ಮರೆತಂತೆ ಭಾಸವಾಗುತ್ತದೆ. ಆ ಮುಸಲ್ಮಾನ ತಂಡದ ವಿರುದ್ಧ ಮುಸ್ತಫಾ ಸೆಣೆಸಿ ಕಾಲೇಜು ತಂಡವನ್ನು ಗೆಲ್ಲಿಸಬೇಕಿರುವ, ಅಂದರೆ ತನ್ನ ’ನಿಷ್ಠೆ’ಯನ್ನು ಸಾಬೀತುಪಡಿಸುವ ಸಂಘರ್ಷವನ್ನು ಚಿತ್ರತಂಡ ಅನಗತ್ಯವಾಗಿ ತುರುಕುತ್ತದೆ. ಈ ನಿರ್ಣಾಯಕ ಪಂದ್ಯದಲ್ಲಿಯೂ (ಮತ್ತು ಸಿನಮಾ ನಿರ್ಣಯ ಮಾಡಬೇಕಿರುವ ಹಂತಕ್ಕೆ ಬಂದಿರುವಾಗಲೂ) ರಾಮಾನುಜ ಮತ್ತು ಗೆಳೆಯರು ಮುಸ್ತಫಾನ ಮೇಲಿನ ಕೋಪಕ್ಕೆ ತಮ್ಮದೇ ತಂಡವನ್ನು ಸೋಲಿಸಲು ಮುಂದಾಗುತ್ತಾರೆ! ವಿದೋಧಿ ತಂಡದ ಕ್ಯಾಪ್ಟನ್ ಇವರನ್ನು ’ಜರಿ’ಯುವುದರಿಂದ ಕೆಲವರು ಬದಲಾಗಿ ಮುಸ್ತಫಾನ ಬೆಂಬಲಕ್ಕೆ ನಿಂತು ಆಡುತ್ತಾರೆ! ರಾಮಾನುಜ ಮಾತ್ರ ಕೊನೆಯ ಬಾಲ್‌ವರೆಗೂ ಬದಲಾಗುವುದೇ ಇಲ್ಲ. ಕೊನೆಯ ಬಾಲ್‌ನಲ್ಲಿ ಮಾತ್ರ ’ಸರ್ವ ಜನಾಂಗದ ಶಾಂತಿಯ ತೋಟ’ವನ್ನು ಜಪಿಸುವ ಮ್ಯಾಜಿಕ್ ಮಾಡಲು ನಿರ್ದೇಶಕ ಮುಂದಾದರೂ ಅದು ಪ್ರೇಕ್ಷಕನನ್ನು ಕನ್ವಿನ್ಸ್ ಮಾಡಲು ಸಾಧ್ಯವಾಯಿತೇ ಎಂಬ ಪ್ರಶ್ನೆ ದೊಡ್ಡ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅತ್ತ ತನ್ನ ಅಕ್ಕ ಮುಸಲ್ಮಾನ ಹುಡುಗನ ಜೊತೆಗೆ ಪ್ರೀತಿಸಿ ಮದುವೆಯಾಗಿರುವುದರಿಂದ, ತನ್ನ ಕುಟುಂಬದ ಸಣ್ಣತನವನ್ನು-ದ್ವೇಷವನ್ನು ಬಳವಳಿಯಾಗಿ ಪಡೆದಿರುವ ರಾಮಾನುಜನನ್ನು ಕೂಡ ಸಂತ್ರಸ್ತ ಎಂಬಂತೆ ಕಟ್ಟಿಕೊಡಲಾಗಿದೆ (ಇದು ಕೂಡ ಮೂಲ ಕಥೆಯಿಂದ ಆಗಿರುವ ಡೀವಿಯೇಷನ್). ಆದರೆ ಆತನಿಗೆ ಸರಿಯಾದ ತಿಳಿವಳಿಕೆ ಸಿಗುವಂತಹ, ತನ್ನ ಸ್ಥಿತಿಯಿಂದ ನೈಜ ಬಿಡುಗಡೆ ಪಡೆಯುವಂತಹ ಘಟನೆಗಳನ್ನು ಕಥೆಯಲ್ಲಿ ಹೆಣೆಯದೆ, ದೃಶ್ಯಗಳಲ್ಲಿ ಕಟ್ಟದೆ ಸಿನಿಮಾದ ಆಶಯ ಕೇವಲ ಬಾಯಿಪಾಠದಂತೆ ಕಾಣುತ್ತದೆ. ’ಸರ್ವ ಜನಾಂಗದ ಶಾಂತಿಯ ತೋಟ’ದ ಆಶಯವೇನೋ ಸರಿ, ಆದರೆ ಅದರತ್ತ ಹೆಚ್ಚು ಕೆಲಸ ಮಾಡಬೇಕಿರುವುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಮೇಲೆ ’ನಿಷ್ಠೆ’ ಸಾಬೀತುಪಡಿಸುವ ಒತ್ತಡವನ್ನು ಹೇರುವುದು ಸಲ್ಲ ಎಂಬ ಆಶಯಕ್ಕೆ ಸಿನಿಮಾ ಧ್ವನಿಯಾಗುವುದೇ ಇಲ್ಲ.

ಶಶಾಂಕ್ ಸೋಗಾಲ್

ಮುಸ್ತಫಾ ಮನೆಯ ಪರಿಸರವನ್ನು ಕಟ್ಟಿಕೊಡಬೇಕು ಎಂದೆನಿಸದಿರುವುದು ಕೂಡ ಚಿತ್ರತಂಡದ ಲಿಮಿಟೇಶನ್‌ಅನ್ನು ಎತ್ತಿಹಿಡಿಯುವ ಸಂಗತಿ. ರಾಮಾನುಜ ಅಯ್ಯಂಗಾರ್ ಈ ಸಿನಿಮಾದ ಕೇಂದ್ರ ಪಾತ್ರವಾದನೇನೋ ಎಂಬಂತೆ ಭಾಸವಾಗುತ್ತದೆ! ಅತ್ತ 70ರ ದಶಕಕ್ಕೆ ಕೂಡ ಪ್ರೇಕ್ಷಕನ ಮನೋಲಹರಿಯನ್ನು ಸರಿಯಾಗಿ ಟ್ರಾನ್ಸ್‌ಪೋರ್ಟ್ ಮಾಡಲು ಸಾಧ್ಯವಾಗಿಲ್ಲ. (ಕ್ರಿಕೆಟ್ ಪಂದ್ಯದ ವೇಳೆ ಚಿಯರ್ ಮಾಡಲು ಬಳಸಿರುವ ಸಂಭಾಷಣೆಯನ್ನು ನೆನಪಿಸಿಕೊಳ್ಳಿ.) ಲವಲವಿಕೆಯನ್ನು ಸೃಷ್ಟಿಸಬೇಕು ಎನ್ನುವ ಭರದಲ್ಲಿ ಮಾತಿನ ಮಂಟಪವನ್ನೇನೋ ಕಟ್ಟಲು ಪ್ರಯತ್ನ ಪಟ್ಟಿದ್ದರೂ, ಸಂಭಾಷಣೆಯನ್ನು ಪ್ರೇಕ್ಷಕ ಹೇಗೆ ಗ್ರಹಿಸಬಹುದು ಎಂಬುದರ ಪರಿವೇ ಚಿತ್ರತಂಡಕ್ಕೆ ಇದ್ದಂತಿಲ್ಲ. ಆರಂಭದಲ್ಲಿಯೇ ಮುಸ್ತಫಾನ ಪರಿಚಯ ಮಾಡಿಕೊಟ್ಟಾಗ ಆತನ ಜೇಬನ್ನು ಖಾಲಿ ಮಾಡಿಸುವ ಪ್ರಿನ್ಸಿಪಲ್, ಜೇಬಿನಿಂದ ಹೊರಬೀಳುವ ಬೆಂಕಿಪೊಟ್ಟಣದಲ್ಲಿ ಇಟ್ಟಿಗೆಯೇಕಿದೆ ಎಂದು ಪ್ರಶ್ನಿಸುತ್ತಾನೆ; ಅದಕ್ಕೆ ಅಟೆಂಡರ್ ಅಷ್ಟೂ ಗೊತ್ತಿಲ್ಲವೇ ಎನ್ನುವ ರೀತಿಯಲ್ಲಿ ಗಹಗಹಿಸುತ್ತಾನೆ. ಇಂತಹ ಅನವಶ್ಯಕ ಜೋಕುಗಳು ಸಿನಿಮಾದುದ್ದಕ್ಕೂ ತುಂಬಿವೆ. ಇನ್ನೂ, ಮುಸ್ತಫಾ ವಿರುದ್ಧ ಹಿಂದೂ ಹುಡುಗಿಯರನ್ನು ಪ್ರೀತಿಸುವ ಮತ್ತು ಮೋಸ ಮಾಡುವ ಆರೋಪವನ್ನು ರಾಮಾನುಜ & ಕೋ ಕೈಲಿ ಮಾಡಿಸುವ ನಿರ್ದೇಶಕ, ಅದಕ್ಕೂ ತಾರ್ಕಿಕ ಅಂತ್ಯ ನೀಡದೆ ಕನ್ಸರ್ವೆಟಿವ್ ಆಗುತ್ತಾರೆ. ಮುಸ್ತಫಾ ಜೊತೆಗಿನ ಹಿಂದೂ ವಿದ್ಯಾರ್ಥಿನಿ ರಮಾಮಣಿಯ ಪ್ರೀತಿಯನ್ನು ಬೆಳೆಸದೆ ಅಬ್ರಪ್ಟ್ ಆಗಿ ಮೊಟಕುಗೊಳಿಸುತ್ತಾರೆ. ಹೀಗೆ, ಪೂರ್ವಾಗ್ರಹದ ವಿದ್ಯಾರ್ಥಿಗಳಿಗೆ ಬದಲಾವಣೆಯ ಭಾಗ್ಯ ಕಾಣಿಸಿ, ಭೀಫ್ ಬಿರಿಯಾನಿಯ ಅಮೋಘ ರುಚಿ ದಕ್ಕುವಂತೆ ಏನಾದರೂ ನಿರ್ದೇಶಕ ಮಾಡಿರಬಹುದೇ ಎಂದು ನಿರೀಕ್ಷೆಯಿಟ್ಟು ಹೊರಟರೆ ನಿರಾಶೆ ಖಂಡಿತಾ.

ಒಟ್ಟಿನಲ್ಲಿ ಒಳ್ಳೆಯ ಆಶಯವನ್ನೇನೋ ಹೊಂದಿರುವ ಆದರೆ ಅದನ್ನು ದೃಶ್ಯಕ್ಕೆ ಪರಿವರ್ತಿಸಲಾಗದ ಮತ್ತು ಹಿಂದೂ ಮುಸ್ಲಿಂ ಸಾಮರಸ್ಯದ ತೊಡಕುಗಳನ್ನು ಇಂದಿನ ಮೆಜಾರಿಟೇರಿಯನ್ ಸಂದರ್ಭದಲ್ಲಿ ಹೇಗೆ ಕಟ್ಟಿಕೊಡಬೇಕೆಂದು ತಿಳಯದೆ ತೊಳಲಾಡಿರುವ ಚಿತ್ರತಂಡ, ಸಿಕ್ಕಾಪಟ್ಟೆ ಮಾತುಗಳ ಕಾರಣಕ್ಕೆ ಕೆಲವು ವೀಕ್ಷಕರಿಗೆ ಮುದ ನೀಡಿದ್ದರೆ, ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಳ್ಳುವವರಿಗೆ ತ್ರಾಸ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...