ಡಾ. ಸಿ.ಎಸ್. ದ್ವಾರಕನಾಥ್‌,ಮೀರಾ ರಾಘವೇಂದ್ರ

ಸಾಹಿತಿ ಕೆ.ಎಸ್. ಭಗವಾನ್ ಅವರಿಗೆ ನ್ಯಾಯಾಲಯದ ಆವರಣದಲ್ಲೇ ಮುಖಕ್ಕೆ ಮಸಿ ಬಳಿದು ಹಲ್ಲೆಗೆ ಯತ್ನಿಸಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹೈಕೋರ್ಟ್ ವಕೀಲ ಡಾ. ಸಿ.ಎಸ್‌ ದ್ವಾರಕನಾಥ್‌‌ ಕರ್ನಾಟಕ ಬಾರ್‌ ಕೌನ್ಸಿಲ್‌ಗೆ ಪತ್ರ ಬರೆದಿದ್ದಾರೆ.

ಗುರುವಾರ ತಮ್ಮ ಮೇಲಿನ ಮೊಕದ್ದಮೆಗಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌‌ ಕೋರ್ಟ್‌ಗೆ ಆಗಮಿಸಿದ್ದ ಭಗವಾನ್ ಅವರ ಮೇಲೆ ವಕೀಲೆ ಮೀರಾ ರಾಘವೇಂದ್ರ ಎನ್ನುವವರು ಕೋರ್ಟಿನ ಆವರಣದಲ್ಲೇ ಮಸಿ ಬಳಿದು ಹಲ್ಲೆಗೆ ಪ್ರಯತ್ನಿಸಿದ್ದರು.

ಈ ಕೃತ್ಯವನ್ನು ಖಂಡಿಸಿರುವ ದ್ವಾರಕನಾಥ್‌, “ವ್ಯಕ್ತಿಯೊಬ್ಬರ ಮೇಲೆ ತಾವೇ ಕೇಸನ್ನು ಹಾಕಿ, ಅವರು ನ್ಯಾಯಾಲಯದ ಕರೆಗೆ ಗೌರವಿಸಿ ನ್ಯಾಯಾಲಯಕ್ಕೆ ಬಂದಾಗ ಅವರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ಮಾಡಿರುವುದು ದುರುದ್ದೇಶಪೂರ್ವಕ. ಇದರಿಂದಾಗಿ ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಬರುವ ಧೈರ್ಯವೇ ಇಲ್ಲದಂತಾಗಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಹಿರಿಯ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

“ವಕೀಲೆಯ ಈ ಕೃತ್ಯ ಇಡೀ ವಕೀಲ ಸಮುದಾಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ನ್ಯಾಯಾಲಯದ ಮೇಲೆ ನಂಬಿಕೆಯಿಲ್ಲದೆ ತಾವೇ ನ್ಯಾಯವನ್ನು ಕೈಗೆ ತೆಗದುಕೊಳ್ಳುವವರು ವಕೀಲ ವೃತ್ತಿಯಲ್ಲಿ ಮುಂದುವರೆಯಲು ಅರ್ಹರಲ್ಲ” ಎಂದು ದ್ವಾರಕನಾಥ್ ಹೇಳಿದ್ದಾರೆ.

“ವಕೀಲೆಯ ಈ ಕೃತ್ಯ ನೇರವಾಗಿ ವಕೀಲ ವೃತ್ತಿಗೆ ಹಾಗೂ ವಕೀಲರ ಘನತೆಗೆ ದಕ್ಕೆ ತರುವಂತಹದ್ದು. ಈ ಕಾರಣಕ್ಕೆ ವಕೀಲರ ಪರಿಷತ್ತು ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು” ಅವರು ಕರ್ನಾಟಕ ಬಾರ್‌ ಕೌನ್ಸಿಲ್‌ಗೆ ಮನವಿ ಮಾಡಿದ್ದಾರೆ.

ಸಾಹಿತಿ ಭಗವಾನ್ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ರಾಜ್ಯದ ಹಲವಾರು ಕಡೆ ಪ್ರತಿಭಟನೆಗಳಾಗಿವೆ. ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಪ್ರತಿಮೆ ಮುಂಭಾಗ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮೌನ ಪ್ರತಿಭಟನೆ ಮಾಡಿ ಆರೋಪಿಯ ವಿರುದ್ದ ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತ ಬುದ್ಧನನ್ನು ಹೆತ್ತು ಕೊಟ್ಟಿತೊ, ಬೆದರಿಸಿ ಓಡಿಸಿತೊ?

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕಾರ್ಯಕರ್ತರು ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಮೀರಾ ರಾಘವೇಂದ್ರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಮ್ಮ ವಿರುದ್ಧದ ಕೊಲೆ ಬೆದರಿಕೆ ಪತ್ರಕ್ಕೆ ಪ್ರಕಾಶ್‌ ರಾಜ್‌ ಕೊಟ್ಟ ಉತ್ತರ ’ಚಲೋ ಹಮ್‌ ದೇಖೇಂಗೆ’…!

LEAVE A REPLY

Please enter your comment!
Please enter your name here