Homeಮುಖಪುಟಭಾರತ ಬುದ್ಧನನ್ನು ಹೆತ್ತು ಕೊಟ್ಟಿತೊ, ಬೆದರಿಸಿ ಓಡಿಸಿತೊ?

ಭಾರತ ಬುದ್ಧನನ್ನು ಹೆತ್ತು ಕೊಟ್ಟಿತೊ, ಬೆದರಿಸಿ ಓಡಿಸಿತೊ?

ಬುದ್ಧ, ಗಾಂಧಿ ವಿನಃ ಜಗತ್ತಿನ ಎದುರು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅನ್ಯ ಪ್ರತಿಮೆಗಳು ಯಾವು ಇವೆ?

- Advertisement -
- Advertisement -

| ಪ್ರೊ. ಶಿವರಾಮಯ್ಯ |

ಬೌದ್ಧ ಧರ್ಮದ ಜನಪ್ರಿಯತೆ ಸಹಿಸದ ಬ್ರಾಹ್ಮಣ ವರ್ಗ ಬುದ್ಧನನ್ನು `ನಾಸ್ತಿಕ’ ಎಂದು ದೂರುತ್ತಲೇ, ವಿಷ್ಣುವಿನ ದಶಾವತಾರಗಳಲ್ಲಿ ಬುದ್ಧನ ಅವತಾರವೂ ಒಂದೆಂದು ಘೋಷಿಸಿ ಬುದ್ಧನನ್ನೇ ಹೈಜಾಕ್ ಮಾಡಿಕೊಳ್ಳಲೂ ಯತ್ನಿಸಿದರು…

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ ವಿಶ್ವಕ್ಕೆ `ಭಾರತದ ಕೊಡುಗೆ ಯುದ್ಧವಲ್ಲ; ಬುದ್ಧ’ ಎಂದಿದ್ದಾರೆ. ನಿಜ. ವಿಶ್ವಕ್ಕೆ ಭಾರತ ಬುದ್ಧನನ್ನು ಕೊಟ್ಟಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಭಾರತ ಬುದ್ಧನನ್ನು `ಹೆತ್ತು ಕೊಟ್ಟಿತೊ ಅಥವಾ ಬೆದರಿಸಿ ಓಡಿಸಿತೊ’ ಎಂಬ ಸತ್ಯ ತಿಳಿದು ಬರುತ್ತದೆ. ಅದಕ್ಕಾಗಿ ನಾವು ಕೊಂಚ ಇತಿಹಾಸದ ಪುಟಗಳನ್ನು ತಿರುವಬೇಕಿದೆ. ಕಳಿಂಗ ಯುದ್ಧದ ನಂತರ ಸಾಮ್ರಾಟ್ ಅಶೋಕ ಚಕ್ರವರ್ತಿ (ಕ್ರಿ.ಪೂ.273-236) ಬೌದ್ಧ ಮತಾವಲಂಬಿಯಾಗಿ ಆ ಧರ್ಮ ಪ್ರಚಾರಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟನಷ್ಟೆ. ದೇಶವ್ಯಾಪಿ ಸಿಕ್ಕಿರುವ ಅಶೋಕನ ಶಾಸನಗಳೇ ಇದಕ್ಕೆ ಸಾಕ್ಷಿಯಾಗಿವೆ. ಇದಾದ 700 ವರ್ಷಗಳ ನಂತರ, ಒಬ್ಬರಾದ ಮೇಲೊಬ್ಬರು ಚೀನಾದ ಬೌದ್ಧ ಭಿಕ್ಷುಗಳು ಬುದ್ಧ ಹುಟ್ಟಿದ ಪವಿತ್ರ ಭೂಮಿಯನ್ನು ಅನ್ವೇಷಿಸುತ್ತಾ ಬಂದರು. ಅವರಲ್ಲಿ ಬಹಳ ಮುಖ್ಯವಾದ ಹೆಸರು ಎಂದರೆ ಪಾಹಿಯಾನ್ (ಕ್ರಿ.ಶ.399-410) ಮತ್ತು ಹುಯೆನ್‍ತ್ಸಾಂಗ್ (ಕ್ರಿ.ಶ.600-664). ಪಾಹಿಯಾನ್ ಬಂದಾಗ ಭಾರತದಲ್ಲಿ ಬೌದ್ಧ ಧರ್ಮ ಬಹಳ ಉಚ್ಪ್ರಾಯ ಗತಿಯಲ್ಲಿತ್ತು. ಆದರೆ ಹುಯೆನ್‍ತ್ಸಾಂಗ್ ಬರುವ ವೇಳೆಗೆ ಅದು ಉತ್ತರದ ಕೆಲವು ದೇಶಗಳಲ್ಲಿ ಕೊಂಚ ಇಳಿಮುಖವಾಗುತ್ತಿತ್ತು. ಸ್ಥಾಣೇಶ್ವರದ ರಾಜ ಹರ್ಷವರ್ಧನನು ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ರಾಜಧಾನಿಯಲ್ಲಿ `ಧರ್ಮಮೋಕ್ಷ’ವೆಂಬ ಸಮ್ಮೇಳನವನ್ನು ನಡೆಸುತ್ತಿದ್ದನು. ಅಲ್ಲಿ ಸರ್ವಧರ್ಮಗಳ ವಿದ್ವಾಂಸರು ತಂತಮ್ಮ ಮತ ದರ್ಶನದ ಬಗ್ಗೆ ವಾಗ್ವಾದ ಮಂಡಿಸುತ್ತಿದ್ದರು. ಇದು ಒಮ್ಮೊಮ್ಮೆ ತೀವ್ರ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿತ್ತು ಇತ್ಯಾದಿಯಾಗಿ ಹುಯೆನ್‍ತ್ಸಾಂಗ್ ದಾಖಲಿಸುತ್ತಾನೆ.

ಹೀಗಿರುತ್ತಾ ಒಮ್ಮೆ ದುಷ್ಕರ್ಮಿಗಳು ಆ ಧರ್ಮಸಭೆ ನಡೆಯುತ್ತಿದ್ದ ಚಪ್ಪರಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುತ್ತಾರೆ. ಇದರಲ್ಲಿ ಬ್ರಾಹ್ಮಣ ವಿದ್ವಾಂಸರ ಕೈವಾಡ ಇದೆ ಎಂಬುದು ಗುಪ್ತಚರರಿಂದ ರಾಜನಿಗೆ ತಿಳಿದು ಬಂತು. ಆಗ ಹರ್ಷವರ್ಧ(ಶಿಲಾಧಿತ್ಯ)ನು ಅದಕ್ಕೆ ಸಂಬಂಧಪಟ್ಟ 500 ಜನ ಬ್ರಾಹ್ಮಣರಿಗೆ ಗಡಿಪಾರು ಶಿಕ್ಷೆ ವಿಧಿಸಿ, ಅವರ ಅನುಯಾಯಿಗಳನ್ನು ಕ್ಷಮಿಸಿ ಬಿಟ್ಟನು ಎಂದೂ ಹೇಳುತ್ತಾನೆ. (ನೋಡಿ: ಎಚ್.ಎಲ್.ನಾಗೇಗೌಡ. ಪ್ರವಾಸಿಕಂಡ ಇಂಡಿಯಾ. ಸಂ.1 ಪುಟ.223)

ಬ್ರಾಹ್ಮಣರ ಟೆರರಿಸ್ಟ್ ವರ್ತನೆಗೆ ಇದು ಕೈಗನ್ನಡಿ. ಬೌದ್ಧ ಧರ್ಮದ ಏಳಿಗೆಯನ್ನು ನೋಡಿ ಬ್ರಾಹ್ಮಣರಲ್ಲಿ ಅಸಹನೆಯ ಬೀಜ ಆ ಸುಮಾರಿಗಾಗಲೇ ಮೊಳೆಯುತ್ತಿತ್ತು. ಇದಾದ ನೂರು ವರ್ಷ ಕಳೆಯುವುದರಲ್ಲಿ ಹೀಗೇ ಮೊಳೆತ ಆ ಅಸಹನೆಯ ವಿಷವೃಕ್ಷ ಗಿಡವಾಗಿ ಮರವಾಗಿ ಬೆಳೆದು ಶಂಕರಾಚಾರ್ಯ(ಕ್ರಿ.ಶ. ಎಂಟನೆಯ ಶತಮಾನ)ರ ಕಾಲಕ್ಕೆ ಫಲ ನೀಡುವಂತಾಯಿತು. ಅದು ಹೇಗೆ ಆ ಮೇಲೆ ಭಾರತದ ಧಾರ್ಮಿಕ ಇತಿಹಾಸದ ಕಾಲ್ತೊಡರಿನ ಕರುಣ ಕಥೆಯಾಗಿ ಪರಿಣಮಿಸಿತು ಎಂಬುದನ್ನು ಪ್ರೊ.ಕೆ.ಎಸ್.ಭಗವಾನರು ತಮ್ಮ `ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಎಂಬ ಪುಸ್ತಕದಲ್ಲಿ ಆಧಾರ ಸಹಿತ ನಿಖರವಾಗಿ ದಾಖಲಿಸುತ್ತಾರೆ.

ಬೌಧ್ಧರ ಧ್ವಂಸ ನಡೆದದ್ದು :

ಶಂಕರಾಚಾರ್ಯ ಶೂದ್ರರಿಗೆ ಜ್ಞಾನವನ್ನು ನಿರಾಕರಿಸಿದ್ದಷ್ಟೇ ಅಲ್ಲ ಅವನು ಮಾಡಿದ ಮಹಾಪರಾಧ ಎಂದರೆ ತನ್ನ ಸಿದ್ಧಾಂತಕ್ಕೆ ಬೃಹತ್ ಪ್ರಮಾಣದಲ್ಲಿ ಎದುರಾದ, ಬಲವಾಗಿ ಬೇರೂರಿದ್ದ ಬುದ್ಧ ಧಮ್ಮವನ್ನು ನಾಶಮಾಡಲು ಅವನು ತುಂಬಾ ಅನಾಗರಿಕ, ಅಸಂಸ್ಕೃತ, ಬರ್ಬರ, ಹೇಯ ವಿಧಾನಗಳನ್ನು ಅನುಸರಿಸಿದ. ಅವನು ತನ್ನ ವಿದ್ವತ್ತು ಮತ್ತು ವಾದದ ಮೂಲಕ ಬೌದ್ಧರನ್ನು ಸೋಲಿಸಿದ ಎಂಬುದು ಕೇವಲ ಬೂಟಾಟಿಕೆ. ವಾದದಲ್ಲಿ ಸೋಲುವುದು ಎಂದರೆ ಏನರ್ಥ? ವಾದಗಳು ಭಿನ್ನಾಭಿಪ್ರಾಯ ಮತ್ತು ಭಿನ್ನ ದೃಷ್ಟಿಕೋನಗಳಲ್ಲವೆ? ಹಾಗಿರುವಾಗ ಗೆಲ್ಲುವುದಾಗಲೀ ಸೋಲುವುದಾಗಲೀ ಎಲ್ಲಿ ಬಂತು? ಇದು ಘನ ಮೋಸದ ದೊಡ್ಡ ಕಥೆ. ಆಳುವ ವರ್ಗದ ಬೆಂಬಲದಿಂದ ಜನಪರವಾಗಿದ್ದ ಬೌದ್ಧರನ್ನು ಅವನು ನಿರ್ನಾಮ ಮಾಡಿದನು. ದಕ್ಷಿಣದಲ್ಲಿ ಪಲ್ಲವರೂ ಪಶ್ಚಿಮದಲ್ಲಿ ಚಾಲುಕ್ಯರೂ ಬ್ರಾಹ್ಮಣಧರ್ಮವನ್ನು ನಿಷ್ಠೆಯಿಂದ ಪೋಷಿಸುತ್ತಿದ್ದ ಪ್ರಬಲ ರಾಜ ಮನೆತನಗಳಾಗಿದ್ದವು ಆಗ. ಅವರ ಅಭಯ ಹಸ್ತವಿಲ್ಲದಿದ್ದರೆ ಶಂಕರಾಚರ್ಯ ಮುಂದೆ ಹೇಳುವಂತ ದುಸ್ತರವಾದ ಹೀನಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಬುದ್ಧ ಧಮ್ಮದ ಒಂದು ಗಟ್ಟಿ ನೆಲೆಯಾಗಿದ್ದ ನಾಗಾರ್ಜುನ ಕೊಂಡವನ್ನು ತನ್ನ ಅಸಂಖ್ಯಾತ ಅನುಯಾಯಿಗಳ ಜೊತೆ ಹೋಗಿ ಸ್ವಂತ ಮೇಲ್ವಿಚಾರಣೆಯಲ್ಲಿ ಧ್ವಂಸಪಡಿಸಿದನು. ಬೌದ್ಧರು, ಬೌದ್ಧ ವಿಗ್ರಹಗಳು, ಸ್ತೂಪಗಳು, ಸ್ಮಾರಕಗಳನ್ನು ನಿರ್ನಾಮ ಮಾಡಿದ ಎಂದು ನಾಗಾರ್ಜುನ ಕೊಂಡದಲ್ಲಿ ಮೊಟ್ಟಮೊದಲಿಗೆ ಭೂಶೋಧನೆ ನಡೆಸಿದ ಭಾರತ ಮತ್ತು ಸಿಲೋನಿನ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಎ.ಎಚ್.ಲಾಂಗ್ ಹಸ್ಟ್ ಅವರು `ನಾಗಾರ್ಜುನಕೊಂಡದ ಬೌದ್ಧಾವಶೇಷಗಳು’ ಎಂಬ ತಮ್ಮ ಅಮೂಲ್ಯ ಗ್ರಂಥದಲ್ಲಿ ದಾಖಲು ಮಾಡಿದ್ದಾರೆ [ಕೆ.ಎಸ್.ಭಗವಾನ್. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಟ.32-33].

ಎಂ.ಮೊನಿಯರ್ ವಿಲಿಯಮ್ಸ್ ಅವರ ಹಿಂದೂಯಿಸಂ (ಪುಟ.144) ಪ್ರಕಾರ ಅವೈದಿಕವಾದ ಬುದ್ಧ ಧರ್ಮಕ್ಕೆ ವಿರುದ್ಧವಾಗಿ ಶಂಕರಾಚಾರ್ಯ ಬ್ರಾಹ್ಮಣ ಮತದ ಪುನರುತ್ಥಾನಕಾರನಾಗಿದ್ದನು. ಹಾಗೆಯೇ ಮತ್ತೊಬ್ಬ ಪ್ರಾಕ್ತನಶಾಸ್ತ್ರ ವಿದ್ವಾಂಸನಾದ ಬೆ.ಗ್ಯಾರೆಟ್‍ನ ಪ್ರಕಾರ `ಶಂಕರಾಚಾರ್ಯನು ಅಧಿಕಾರಸ್ಥರಿಂದ ಬಾಧೆಕೊಡಿಸಿ ಬೌದ್ಧ ಮತವನ್ನು ಈ ದೇಶದಲ್ಲಿ (ನಾಸ್ತಿಕವೆಂದು) ಬಹಳ ಹಳಿದು ಬ್ರಾಹ್ಮಣರ ಮತವನ್ನು ತಿರುಗಿ ಸ್ಥಾಪಿಸಿದನು ಎಂದು ಆಧಾರದ ಸಹಿತ ಮಂಡಿಸುವನು.

ಪುರಾತತ್ವ ವಿಜ್ಞಾನಿ ಲಾಂಗ್ ಹಸ್ಟ್‍ನ ಅಭಿಪ್ರಾಯ ಹೀಗಿದೆ: ನಾಗಾರ್ಜುನಕೊಂಡದಲ್ಲಿ ಎಲ್ಲಾ ಕಟ್ಟಡಗಳೂ ಕ್ರೂರ ರೀತಿಯಲ್ಲಿ ಧ್ವಂಸವಾಗಿರುವುದನ್ನು ನೋಡಿದರೆ ಎದೆ ನಡುಗುತ್ತದೆ. ಅದು ಕೇವಲ ನಿಧಿ ಅನ್ವೇಷಕರ ಕೆಲಸವೆಂದು ಹೇಳುವಂತಿಲ್ಲ; ಏಕೆಂದರೆ ಬಹುಪಾಲು ಸ್ತಂಭಗಳು, ವಿಗ್ರಹಗಳು ಮತ್ತು ಶಿಲ್ಪಗಳನ್ನು ಮನಸೇಚ್ಛೆ ಒಡೆದು ಚೂರು ಚೂರು ಮಾಡಿದ್ದಾರೆ. ಅಮರಾವತಿಯಲ್ಲಿ ಇರುವಂತೆ ಅದರ ಸನಿಹದಲ್ಲಿ ಪಟ್ಟಣ ಇದ್ದಿದ್ದರೆ ಆಧುನಿಕ ನಿರ್ಮಾಪಕರು ಈ ಜಾಗವನ್ನು ಭಾರತದಲ್ಲಿ ಬಹುತೇಕ ಆಗಿರುವಂತೆ ಲೂಟಿ ಮಾಡಿದ್ದಾರೆಂದು ಭಾವಿಸಬಹುದಿತ್ತು. ಆದರೆ ಇದು ನಾಗಾರ್ಜುನಕೊಂಡದಲ್ಲಿ ಎಂದೂ ನಡೆಯಲಿಲ್ಲ; ಏಕೆಂದರೆ ಅದರ ಆಜುಬಾಜಿನಲ್ಲಿ ಯಾವ ಪಟ್ಟಣಗಳಿರಲಿಲ್ಲ; ಆ ಕಣಿವೆಯೊಳಕ್ಕೆ ಹೋಗಿ ಬರಲು ಗಾಡಿ ದಾರಿಗಳಿಲ್ಲ. ಮಧ್ಯಯುಗದ ಮಹಾ ಹಿಂದೂ ತತ್ವಜ್ಞಾನಿ ಮತ್ತು ಗುರು ಶಂಕರಾಚಾರ್ಯ ತನ್ನ ಹಿಂಬಾಲಕರ ಹಿಂಡಿನೊಡನೆ ಅಲ್ಲಿಗೆ ಬಂದು ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಐತಿಹ್ಯ ಹೇಳುತ್ತದೆ. ಇದು ಹಾಗಿರಲಿ; ಹಾಳಾದ ಕಟ್ಟಡಗಳಿರುವ ಈ ಕಣಿವೆಯ ಸಾಗುವಳಿ ಜಮೀನನ್ನು ಶಂಕರಾಚಾರ್ಯನಿಗೆ ಉಂಬಳಿಯಾಗಿ ಕೊಟ್ಟ ವಾಸ್ತವ ಸಂಗತಿ ಇಂದಿಗೂ ಉಳಿದಿದೆ. ಆ ಮಹಾ ಗುರುವಿನ ಅನುಯಾಯಿಗಳ ಧಾರ್ಮಿಕ ಮುಖಂಡನ ಅನುಮತಿಯಿಂದ ನಾನು ಇಲ್ಲಿ ಭೂಶೋಧನೆಗಳನ್ನು ಮಾಡಲು ಸಾಧ್ಯವಾಯಿತು. ಗುಂಟೂರು ಜಿಲ್ಲೆ ಪುಷ್ಪಗಿರಿಯಲ್ಲಿ ವಾಸಿಸುವ ಬ್ರಾಹ್ಮಣ ಜಗದ್ಗುರು ನಲ್ಲಮಲೈನಲ್ಲಿರುವ ಶ್ರೀಶೈಲಂ ದೇವಾಲಯದ ವಾರಸುದಾರನಾಗಿದ್ದಾನೆ. ಎಂದರೆ ಇದು ಮೂಲತಃ ಒಂದು ಬೌದ್ಧ ತಾಣವಾಗಿದ್ದಂತೆ ಕಾಣುವ ಈ ದೇವಸ್ಥಾನವನ್ನು ಅದೇ ರೀತಿಯಲ್ಲಿ ನಿಸ್ಸಂದೇಹವಾಗಿ ವಶಪಡಿಸಿಕೊಳ್ಳಲಾಯಿತು.

ಸಾರಾಂಶವಾಗಿ ಹೇಳುವುದಾದರೆ ಬೌದ್ಧ ಧರ್ಮದ ಜನಪ್ರಿಯತೆಗೆ ಸಹಿಸದ ಬ್ರಾಹ್ಮಣ ವರ್ಗ, ದೇವರ ವಿಚಾರವಾಗಿ ಮೌನಧರಿಸಿದ ಗೌತಮ ಬುದ್ಧನನ್ನು `ನಾಸ್ತಿಕ’ ಎಂದು ದೂರಿದ್ದಲ್ಲದೆ, ಅವನ ಕೆಲವು ವೈಚಾರಿಕ ನಿಲುವುಗಳನ್ನು ತಮ್ಮ ವೇದಾಂತಗಳಾದ ಉಪನಿಷತ್ತುಗಳಲ್ಲಿ ಅಳವಡಿಸಿಕೊಂಡರು. ಅಷ್ಟೇ ಅಲ್ಲ, ವಿಷ್ಣುವಿನ ದಶಾವತಾರಗಳಲ್ಲಿ ಬುದ್ಧನ ಅವತಾರವೂ ಒಂದೆಂದು ಘೋಷಿಸಿ ಬುದ್ಧನನ್ನೇ ಹೈಜಾಕ್ ಮಾಡಿಕೊಳ್ಳಲಾಯಿತು. ಮತ್ತು ಶಂಕರಾಚಾರ್ಯರ ಮಿಲಿಟೆಂಟ್ ಶಿಷ್ಯರು ಬುದ್ಧನ ಅಹಿಂಸಾವಾದಿ ಅನುಯಾಯಿಗಳನ್ನು ಹಿಮಾಲಯದ ಆಚೆ ದೇಶಾಂತರ ಅಟ್ಟಿಬಿಟ್ಟರು. ಈ ಕಾರಣದಿಂದಾಗಿ ಬೌದ್ಧಧರ್ಮ ತನ್ನ ಜನ್ಮಭೂಮಿಯನ್ನು ಕಳೆದುಕೊಂಡು ಪರದೇಶಗಳಾದ ಚೀನಾ, ಜಪಾನ್, ಇಂಡೋನೇಷಿಯಾ, ಕಾಂಬೋಡಿಯಾ ಮುಂತಾದ ಕಡೆ ತನ್ನ ನೆಲೆಕಂಡು ಕೊಳ್ಳಬೇಕಾಯಿತು.

ಹೀಗಿರುತ್ತಾ ಹುಯೆನ್‍ತ್ಸಾಂಗ್(ಕ್ರಿ.ಶ.600-604)ನ ಕಾಲಕ್ಕಾಗಲೇ ಅವನತಿಯತ್ತ ಸಾಗುತ್ತಿದ್ದ ಬುದ್ಧ ಧರ್ಮ ಮೌರ್ಯ ಸಾಮ್ರಾಜ್ಯದ ಅವನತಿಯೊಂದಿಗೆ ತನ್ನ ಕೊನೆಯುಸಿರೆಳೆಯಿತು. ಇತ್ತ ವೈದಿಕ ಹಿಂದೂ ಧರ್ಮವು ಪುನರುತ್ತಾನಗೊಂಡಿತು. ಪುನಃ ಅದೇ ಕರ್ಮಸಿದ್ಧಾಂತ, ಅದೇ ಜಾತಿಪದ್ದತಿ, ಅದೇ ವರ್ಗತಾರತಮ್ಯ ನೀತಿ ಬೇರೂರಿತು. ಇವತ್ತಿಗೂ ಮನುಧರ್ಮಶಾಸ್ತ್ರ ಬಿತ್ತಿದ ಮೌಢ್ಯಾಚಾರಣೆಗಳು ಜನರನ್ನು ಸುಲಿದು ಮುಕ್ಕುತ್ತಿವೆ ಎಂಬುದು ಸೂರ್ಯ ಸತ್ಯ. ಆದ್ದರಿಂದಲೇ `ಇಂಥ ಶೋಷಕ ಧರ್ಮದಲ್ಲಿ ನಾನು ಸಾಯಲಾರೆ’ ಎಂದು ಡಾ.ಅಂಬೇಡ್ಕರ್ ತಮ್ಮ ಕೊನೆಗಾಲದಲ್ಲಿ ಬೋಧಿವೃಕ್ಷದ ನೆರಳಿಗೆ ಹೋದರು.

ಇತಿಹಾಸ ಹೀಗಿದ್ದರೂ ಸಹ ಸನಾತನ ಹಿಂದುತ್ವವಾದಿಗಳು ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ತಮ್ಮ ಐಡೆಂಟಿಟಿಯನ್ನು ಸ್ಥಾಪಿಸಿಕೊಳ್ಳಲು ಬುದ್ಧ ಗಾಂಧಿ ಇವರ ಹೆಸರನ್ನೆತ್ತದೆ ವಿಧಿ ಇಲ್ಲ. ಬುದ್ಧ ಗಾಂಧಿ ಇವರಿಗೆ ಸಾವಿಲ್ಲ. ದೇವನೂರ ಮಹಾದೇವ ಎಂದಂತೆ ವಿದೇಶಕ್ಕೆ ಹೋದ ಗೋಡ್ಸೆಯ ಪ್ರೇತಕೂಡ ಗಾಂಧಿ ಜಪಮಾಡದೆ ವಿಧಿ ಇಲ್ಲ. ಯಾಕೆಂದರೆ ಜಗತ್ತಿಗೆ ಭಾರತ ನೀಡಿದ ಮಹಾನ್ ಕೊಡುಗೆ ಎಂದರೆ ಸತ್ಯ ಮತ್ತು ಅಹಿಂಸೆ. ಈ ದಿವ್ಯಾಸ್ತ್ರಗಳ ಜನಕರು ಬುದ್ಧ ಮತ್ತು ಗಾಂಧಿ. ಬುದ್ಧನ ನಾಡು, ಗಾಂಧಿಯ ನಾಡು ಎಂದೇ ವಿದೇಶಿಯರು ನಮ್ಮನ್ನು ಗುರ್ತಿಸುವುದು. ಕಣ್ಣೆದುರಿನ ಈ ಸತ್ಯ ಇರುವುದರಿಂದಲೇ ವಿದೇಶಿ ಪ್ರವಾಸಿಗರು ಸಾಲುಗಟ್ಟಿ ಇಲ್ಲಿಗೆ ಬಂದು ಹೋದದ್ದು. ಪಾಹಿಯಾನ್ ಮತ್ತು ಹುಯೇನ್‍ತ್ಸಾಂಗ್ ಎಂಬ ಬೌದ್ಧ ಭಿಕ್ಷುಗಳು 1500 ವರ್ಷಗಳ ಹಿಂದೆಯೇ ಹಿಮಾಲಯ ದಾಟಿ ನಮ್ಮೀ ಪವಿತ್ರನಾಡಿಗೆ ಯಾತ್ರೆ ಬಂದಿದ್ದರು. ಅಷ್ಟೇ ಅಲ್ಲ, ಬುದ್ಧನ ಕಾಲಕ್ಕೆ ನಾವು ಹುಟ್ಟಲಿಲ್ಲವಲ್ಲ ಎಂದು ಕೊರಗಿದರು ಸಹ.

ಈಚೆಗೆ ಪ್ರಧಾನಿ ನರೇಂದ್ರಮೋದಿ ವಿಶ್ವಸಂಸ್ಥೆ ವೇದಿಕೆಯಿಂದ `ಭಾರತದ ಕೊಡುಗೆ ಯುದ್ಧವಲ್ಲ; ಬುದ್ಧ’ ಎಂದು ಹೇಳಿರುವುದು ಈ ಅರ್ಥದಲ್ಲಿಯೇ ಎಂದು ತಿಳಿಯಬೇಕಾಗಿದೆ. ಆದರೆ, ಇದೇ ಮೋದಿ 2002ರಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ್ಯೆ ಅಲ್ಪಸಂಖ್ಯಾತ ಕೋಮಿನವರ, ಪೂರ್ವಯೋಜಿತವೆಂಬತೆ, ಮಾರಣಹೋಮ ನಡೆದುಹೋಯಿತು. ಆಗ ಸು.2000ಕ್ಕೂ ಹೆಚ್ಚು ಜನ ಅಸು ನೀಗಿದರು. ಆದರೂ ಅದಕ್ಕೆಲ್ಲ ಉತ್ತರದಾಯಿತ್ವವುಳ್ಳ ಆಗಿನ ಮುಖ್ಯಮಂತ್ರಿ, ಈಗಿನ ನಮ್ಮ ಪ್ರಧಾನಮಂತ್ರಿ ಮೋದಿಯವರ ಬಾಯಿಂದ ಇದುವರೆಗೆ ಒಂದೇ ಒಂದು ಪಶ್ಚಾತ್ತಾಪದ ನುಡಿಯಾಗಲಿ ಕೇಳಿ ಬಂದಿಲ್ಲ. ಇದು ನಮ್ಮ ಹಿಂದುತ್ವವಾದಿಗಳಿಗೆ ಬುದ್ಧ ಮತ್ತು ಗಾಂಧೀ ಮೇಲಿನ ಭಕ್ತಿ ಮತ್ತು ಪ್ರೇಮ!

ಬುದ್ಧ, ಗಾಂಧಿ ವಿನಃ ಜಗತ್ತಿನ ಎದುರು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅನ್ಯ ಪ್ರತಿಮೆಗಳು ಯಾವು ಇವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...