Homeಮನರಂಜನೆದೌರ್ಬಲ್ಯಗಳ ಮನೋವ್ಯಾಪಾರ, ಸಾವಿರಾರು ಕೋಟಿ ವ್ಯವಹಾರವೇ ಬಿಗ್ ಬಾಸ್..

ದೌರ್ಬಲ್ಯಗಳ ಮನೋವ್ಯಾಪಾರ, ಸಾವಿರಾರು ಕೋಟಿ ವ್ಯವಹಾರವೇ ಬಿಗ್ ಬಾಸ್..

ಜನರೇಕೆ ಇಂಥಾ ಕಾರ್ಯಕ್ರಮಗಳನ್ನು ಮುಗಿಬಿದ್ದು ನೋಡುತ್ತಾರೆ?

- Advertisement -
- Advertisement -

ಹಾಗಾದ್ರೆ ಏನಿದು ಬಿಗ್‍ಬಾಸ್? ಅಸಲಿಗೆ ಈ ಕಾರ್ಯಕ್ರಮದ ಮೂಲ ಯಾವುದು? ಭಾರತದಲ್ಲಿ ಈ ಕಾರ್ಯಕ್ರಮ ಸೃಷ್ಟಿಸಿರುವ ಭ್ರಮೆ ಏನು? ನಿಜಕ್ಕೂ ಕಾರ್ಯಕ್ರಮಗಳು ಮನರಂಜನೆಯನ್ನಷ್ಟೇ ನೀಡುತ್ತವಾ? ಕಳೆದ 13 ವರ್ಷದಲ್ಲಿ ಈ ಕಾರ್ಯಕ್ರಮ ಭಾರತದಲ್ಲಿ ಸೃಷ್ಟಿಸಿರುವ ಮಾರುಕಟ್ಟೆ ಮೌಲ್ಯ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಯಾವುದೇ ಒಬ್ಬ ವ್ಯಕ್ತಿಯ ಖಾಸಗಿತನವನ್ನು ಕಸಿದುಕೊಂಡು ಆತನ ಮೇಲೆ ನಿರಂತರ ಗಮನವಿಟ್ಟರೆ (Continuous serveillance) ಆತನ ಹಾವಭಾವ, ವ್ಯಕ್ತಿತ್ವ ಬದಲಾಗುತ್ತದೆ. ಇದು ಬ್ರಿಟಿಷ್ ಕಾದಂಬರಿಕಾರ ಜಾರ್ಜ್ ಆರ್ವೆಲ್ 1949ರಲ್ಲಿ ತನ್ನ ‘1984’ ಕಾದಂಬರಿಯಲ್ಲ್ಲಿ ಬರೆದಿರುವ ಸಂಗತಿ. ಇದನ್ನೇ ಹೂರಣವಾಗುಳ್ಳ ರಿಯಾಲಿಟಿ ಶೋ ಬಿಗ್‍ಬಾಸ್.

ಸದ್ಯಕ್ಕೆ ಕನ್ನಡದ ಅತ್ಯಂತ ಹೆಚ್ಚಿನ ವೀಕ್ಷಕರನ್ನುಳ್ಳ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್‍ಬಾಸ್‍ನ 7ನೇ ಸೀಸನ್‍ಗೆ ಕಳೆದ ಭಾನುವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇಲ್ಲಿಗೆ ಇಷ್ಟು ದಿನ ರಾಜ್ಯದಲ್ಲಿ ಸದ್ದು ಮಾಡಿದ ಅನರ್ಹ ಶಾಸಕರ ಕತೆ, ಅಪರೇಷನ್ ಕಮಲ, ಡಿಕೆಶಿ ಜೈಲುವಾಸ, ಮುನಿರತ್ನ ಮಹಾಭಾರತ ಮತ್ತು ದರ್ಶನ್-ಸುದೀಪ್ ಜಂಗೀಕುಸ್ತಿಗೆ ಕಾರಣವಾದ ಪೈಲ್ವಾನ್ ಸಿನಿಮಾ ಪೈರಸಿ ಹಗರಣ ಸೇರಿದಂತೆ ಎಲ್ಲಾ ಸುದ್ದಿಗಳು ತಣ್ಣಗಾಗಿ ಮೂಲೆ ಸೇರಲಿವೆ. ಇನ್ನೇನಿದ್ದರೂ ಬಿಗ್‍ಬಾಸ್ ಕುರಿತು ಮಾತು, ಚರ್ಚೆ ಮತ್ತು ಸುದ್ದಿಗೆ ಮೊದಲ ಆದ್ಯತೆ. ಬಿಗ್‍ಬಾಸ್ ಎಂಬ ಪಕ್ಕಾ ಕಮರ್ಶಿಯಲ್ ಕಾರ್ಯಕ್ರಮ ಸಮಾಜದಲ್ಲಿ ಹುಟ್ಟುಹಾಕಿರುವ ಮೋಡಿ ಅಂತಾದ್ದು.

ಭಾರತದ ಮನರಂಜನಾ ಮಾರುಕಟ್ಟೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಗಳಲ್ಲೊಂದು. ವಾರ್ಷಿಕ ಸಾವಿರಾರು ಕೋಟಿ ರೂ ಹಣ ವಹಿವಾಟು ನಡೆಸುವ ಭಾರತ ಮನರಂಜನಾ ಮಾರುಕಟ್ಟೆಯಲ್ಲಿ ಹಣ ಹೂಡಲು ವಿದೇಶಿ ಕಂಪೆನಿಗಳು ಸಹ ಇಂದು ತುದಿಗಾಲಿನಲ್ಲಿ ನಿಂತಿವೆ. ಭಾರತದ ಮನರಂಜನಾ ಮಾರುಕಟ್ಟೆಯ ತೂಕ ಒಂದಾದರೆ, ಕನ್ನಡ ತಮಿಳು, ತೆಲುಗು, ಹಿಂದಿ, ಮರಾಠಿ, ಮಳಯಾಳಂ, ಬೆಂಗಾಳಿ ಸೇರಿದಂತೆ ಭಾರತದ ಸುಮಾರು 7 ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ಎಂಬ ರಿಯಾಲಿಟಿ ಕಾರ್ಯಕ್ರಮದ್ದೇ ಒಂದು ತೂಕ.

ಬಿಗ್‍ಬಾಸ್ ಭಾರತದ ವಿವಿಧ ಭಾಷೆಗಳಲ್ಲಿ ಪ್ರಸಾರವಾದರೂ ಸಹ ಎಲ್ಲಾ ಭಾಷೆಗಳಲ್ಲೂ ಈ ರಿಯಾಲಿಟಿ ಕಾರ್ಯಕ್ರಮವನ್ನು ತಯಾರಿಸುವ ಕಂಪೆನಿ ಎಂಡೆಮೋಲ್ ಶೈನ್ ಇಂಡಿಯಾ, ವಯಾಕಾಂ 18 ಮತ್ತು ಕಲರ್ಸ್. ಡಚ್ ಮೂಲದ ಮಾಧ್ಯಮ ಕಂಪೆನಿಯಾದ ಎಂಡೆಮೋಲ್ ಹೊರತುಪಡಿಸಿ ಉಳಿದ ಎರಡೂ ಕಂಪೆನಿಗಳ ಮಾಲೀಕ ಭಾರತದ ಕುಬೇರರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಮುಖೇಶ್ ಧೀರೂಬಾಯಿ ಅಂಬಾನಿ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಯಾವುದೇ ಕ್ಷೇತ್ರವಿರಲಿ ಹಣ ಹೂಡಿ ಹಣ ಗಳಿಸುವ ಏಕಮಾತ್ರ ಸೂತ್ರದೊಂದಿಗೆ ಕಾರ್ಯನಿರ್ವಹಿಸುವ ಪಕ್ಕಾ ವ್ಯವಹಾರಸ್ಥ ಅಂಬಾನಿಯಿಂದ ಸಮಾಜ ಸೇವೆಯಂತಹ ಕೆಲಸವನ್ನು ನಿರೀಕ್ಷಿಸುವುದು ಮುಟ್ಟಾಳತನವೇ. ಕಳೆದ 13 ವರ್ಷಗಳಿಂದ ಸಮಾಜದ ನಡುವೆ ಭ್ರಮೆಯನ್ನು ಸೃಷ್ಟಿಸಿರುವ ಈ ಕಾರ್ಯಕ್ರಮದ ಮೂಲಕ ಅಂಬಾನಿ ಪಡೆದಿರುವ ಲಾಭದ ಅಂಕಿಅಂಶಗಳೇ ಈ ಕಾರ್ಯಕ್ರಮದ ಯಶಸ್ಸಿನ ಯಶೋಗಾಥೆಯನ್ನು ಹೇಳುತ್ತವೆ.

ಬಿಗ್ ಬ್ರದರ್‍ನಿಂದ ಬಿಗ್‍ಬಾಸ್‍ವರೆಗೆ

ಅಸಲಿಗೆ ಬಿಗ್‍ಬಾಸ್ ಎಂಬ ಕಾರ್ಯಕ್ರಮ ಭಾರತದ ಮೂಲದ್ದೇ ಅಲ್ಲ. ಇದು ಪಕ್ಕಾ ಹಾಲಿವುಡ್ ಟಿವಿ ಕಾರ್ಯಕ್ರಮದ ನಕಲಿ ಎರಕ. 2007ರಲ್ಲಿ ನೆದರ್‍ಲ್ಯಾಂಡ್‍ನ ಇಂಗ್ಲಿಷ್ ಟಿವಿ ಮಾಧ್ಯಮದಲ್ಲಿ ಬಿಗ್‍ಬ್ರದರ್ ಎಂಬ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಈ ಕಾರ್ಯಕ್ರಮಕ್ಕೆ ವಿದೇಶಿ ಕೋಟಾದ ಅಡಿಯಲ್ಲಿ ಭಾರತದ ನಟಿ ಕನ್ನಡತಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಡುವವರೆಗೆ ಭಾರತದಲ್ಲಿ ಯಾರೆಂದರೆ ಯಾರಿಗೂ ಹೀಗೊಂದು ಕಾರ್ಯಕ್ರಮ ಪ್ರಸಾರವಾಗುತ್ತಿರುವುದರ ಕುರಿತ ಮಾಹಿತಿಯೇ ಇರಲಿಲ್ಲ.

ನಟಿ ಶಿಲ್ಪಾ ಶೆಟ್ಟಿ ಈ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಾಗಲೂ ಅದು ಅಷ್ಟು ದೊಡ್ಡ ಮಟ್ಟದ ಸದ್ದಾಗಲಿಲ್ಲ. ಆದರೆ, ಆಕೆ ಭಾರತೀಯಳು ಎಂಬ ಏಕೈಕ ಕಾರಣಕ್ಕೆ ಆ ಕಾರ್ಯಕ್ರಮದ ಸ್ಪರ್ಧಿಯೊಬ್ಬಳು ಶಿಲ್ಪಾ ಶೆಟ್ಟಿ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರ ಪರಿಣಾಮ ಈ ಸುದ್ದಿ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಎಲ್ಲಾ ರಾಷ್ಟ್ರದವರೂ ಗಡಿಭೇದವಿಲ್ಲದೆ ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತರು. ನೋಡನೋಡುತ್ತಿದ್ದಂತೆ ನಟಿ ಶಿಲ್ಪಾ ಶೆಟ್ಟಿ ಬಿಗ್ ಬ್ರದರ್ 5ನೇ ಆವೃತ್ತಿಯ ಟೈಟಲ್ ವಿಜಯಶಾಲಿಯಾಗುವ ಮೂಲಕ ಮನೆಮಾತಾಗಿ ಹೋಗಿದ್ದರು. ಇವರ ಜೊತೆಗೆ ಬಿಗ್ ಬ್ರದರ್ ಎಂಬ ಪಕ್ಕಾ ಕಮರ್ಷಿಯಲ್ ಮಾರುಕಟ್ಟೆ ಭಾರತದಲ್ಲಿ ಬಿಗ್‍ಬಾಸ್ ಹೆಸರಿನಲ್ಲಿ ಹೆಜ್ಜೆ ಊರಲು ಸಿದ್ದವಾಗಿ ತುದಿಗಾಲಲ್ಲಿ ನಿಂತಿತ್ತು.

ಬಿಗ್‍ಬಾಸ್ ಹುಟ್ಟಿಸುತ್ತಿರುವ ಭ್ರಮೆಯೇ ಅಂತಾದ್ದು

2007ರಲ್ಲಿ ಶಿಲ್ಪಾ ಶೆಟ್ಟಿ ಬಿಗ್‍ಬ್ರದರ್ ಟೈಟಲ್ ವಿನ್ನರ್ ಎಂದು ಘೋಷಣೆಯಾಗುತ್ತಿದ್ದಂತೆ ಭಾರತದಲ್ಲೂ ಈ ಕಾರ್ಯಕ್ರಮವನ್ನು ಆರಂಭಿಸಲು ವಯಾಕಾಂ 18 ಮುಂದಾಗಿತ್ತು. 2007ರಲ್ಲಿ ಮೊದಲ ಬಾರಿಗೆ ಬಾಲಿವುಡ್ ನಟ ಸಲ್ಮಾನ್‍ಖಾನ್‍ರ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮ ಮೊದಲ ಆವೃತ್ತಿಯಲ್ಲೇ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ವರ್ಷದಿಂದ ವರ್ಷಕ್ಕೆ ಇದರ ಜನಪ್ರಿಯತೆ ಏರುತ್ತಲೇ ಇದೆಯೇ ಹೊರತು ಇಳಿಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

ಹಿಂದಿಯಲ್ಲಿ ಒಟ್ಟು 13 ಆವೃತ್ತಿಗಳನ್ನು ಕಂಡಿರುವ ಈ ಕಾರ್ಯಕ್ರಮ ಕನ್ನಡದಲ್ಲಿ ಇದೀಗ 7ನೇ ಆವೃತ್ತಿಯನ್ನು ಆರಂಭಿಸಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಬಿಗ್‍ಬಾಸ್ ಜನಪ್ರಿಯತೆ ಏರುಗತಿಯಲ್ಲಿರಲು ಏಕೈಕ ಕಾರಣ ಎಂದರೆ ಈ ಕಾರ್ಯಕ್ರಮದ ಮೂಲಕ ಆಯೋಜಕರು ಜನರಲ್ಲಿ ಹುಟ್ಟುಹಾಕುತ್ತಿರುವ ಭ್ರಮೆ.

ವಿಶ್ವದಲ್ಲೇ ಅತಿಹೆಚ್ಚು ಮಧ್ಯಮ ವರ್ಗದ ಕುಟುಂಬಗಳನ್ನು ಹೊಂದಿರುವ ದೇಶ ಭಾರತ. ದೇಶದ ಪ್ರತಿದಿನ ಶ್ರೀಮಂತಿಕೆಯನ್ನು ಅರಸಿ ಓಡುವ ಈ ಕುಟುಂಬಗಳಿಗೆ ಶ್ರೀಮಂತಿಕೆ, ಐಶಾರಾಮಿ ಮನೆ ಮತ್ತು ಬದುಕು ಎಂಬುದು ಸೂರ್ಯನ ಕುದುರೆಯೇ ಸರಿ. ಆದರೆ, ಭಾರತೀಯ ಟಿವಿ ಮಾಧ್ಯಮದ ಅತಿದೊಡ್ಡ ವೀಕ್ಷಕರೂ ಆಗಿರುವ ಇದೇ ಮಧ್ಯಮ ವರ್ಗಗಳ ಆಸೆ ಮತ್ತು ಮನುಷ್ಯರ ಮನದ ಸಹಜ ವಿಕೃತಿಗಳೇ ಇದೀಗ ಟಿವಿ ಮಾರುಕಟ್ಟೆಗಳ ಅತಿದೊಡ್ಡ ಬಂಡವಾಳವಾಗಿ ಬದಲಾಗಿದೆ.

ಮಧ್ಯಮ ವರ್ಗದ ಜನ ತಮ್ಮ ದುಡಿಮೆಯ ಮೂಲಕ ಐಶಾರಾಮಿ ಬದುಕನ್ನು ಗಳಿಸಿಕೊಳ್ಳುವುದು ಭಾರತದ ಮಟ್ಟಿಗೆ ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಟಿವಿ ಮೂಲಕ ಐಶಾರಾಮಿ ಬದುಕನ್ನು ಪ್ರದರ್ಶಿಸಿ ಜನರನ್ನು ಸೆಳೆಯಲಾಗುತ್ತಿದೆ. ಬಿಗ್‍ಬಾಸ್ ಮನೆಯನ್ನೊಮ್ಮೆ ಅವಲೋಕಿಸಿದರೆ ಈ ಕಾರ್ಯಕ್ರಮದ ಆಯೋಜಕರು ಸಾಮಾನ್ಯ ಜನರ ನಡುವೆ ಸೃಷ್ಟಿಸುವ ಭ್ರಮಾ ಲೋಕದ ಅರಿವಾಗುತ್ತದೆ.

ಬಿಗ್‍ಬಾಸ್ ಮಾರುಕಟ್ಟೆಯ ಮೌಲ್ಯವೇನು ಗೊತ್ತಾ?

ತಮಿಳಿನ ಖ್ಯಾತನಟ ಕಮಲಹಾಸನ್ ಅಲ್ಲಿನ ಜನಪ್ರಿಯ ವಾಹಿನಿ ವಿಜಯ್ ಟಿವಿಗೆ ನಡೆಸಿ ಕೊಡುವ ತಮಿಳಿನ ಬಿಗ್‍ಬಾಸ್ 3ನೇ ಆವೃತ್ತಿ ಮುಗಿದು ಕೇವಲ ಒಂದೇ ವಾರದಲ್ಲಿ ಇದೀಗ ಕನ್ನಡದ ಬಿಗ್‍ಬಾಸ್ 7ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಒಂದು ಭಾಷೆಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುವಾಗ ಮತ್ತೊಂದು ಭಾಷೆಯಲ್ಲಿ ಅದೇ ಕಾರ್ಯಕ್ರಮ ಪೈಪೋಟಿ ನೀಡದಂತೆ ಹಾಗೂ ವರ್ಷದ ಎಲ್ಲಾ ದಿನ ಭಾರತದ ಯಾವುದಾದರೊಂದು ಪ್ರಾದೇಶಿಕ ಭಾಷೆಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಲೇ ಇರುವಂತೆ ನೋಡಿಕೊಳ್ಳುವುದು ಈ ಮಾರುಕಟ್ಟೆಯ ಬಹುದೊಡ್ಡ ಅಜೆಂಡಾಗಳಲ್ಲೊಂದು.

ಆದರೆ, ಹೀಗೆ ಬಿಗ್‍ಬಾಸ್ ಹೆಸರಿನಲ್ಲಿ ದೇಶದ ಎಲ್ಲಾ ವರ್ಗದ ಜನರ ಮನೆಯನ್ನು ಅನಾಯಾಸವಾಗಿ ಹೊಕ್ಕಿ ಬಿಡುವ ಈ ಐಶಾರಾಮಿ ಕಾರ್ಯಕ್ರಮ ವರ್ಷವೊಂದಕ್ಕೆ ನಡೆಸುವ ಒಟ್ಟು ಹಣದ ವಹಿವಾಟು ಬರೋಬ್ಬರಿ 25 ಸಾವಿರ ಕೋಟಿಗೂ ಅಧಿಕ ಎನ್ನುತ್ತವೆ ಮನರಂಜನಾ ಮಾರುಕಟ್ಟೆಯ ಮೂಲಗಳು. ಪ್ರತಿ ಬಿಗ್‍ಬಾಸ್ ಆವೃತ್ತಿಗೂ ಮಾರುತಿ ಸುಜುಕಿ, ಯುಸಿ ಬ್ರೌಸರ್, ವೂಟ್ ಮತ್ತು ಗಾರ್ನಿಯರ್‍ನಂತಹ ಬಹುರಾಷ್ಟ್ರೀಯ ಕಂಪೆನಿಗಳು ಪ್ರಾಯೋಜಕತ್ವ ವಹಿಸುತ್ತಿದ್ದು, ಪ್ರಾಯೋಜಕರಿಂದಲೇ 1,500 ಕೋಟಿಗೂ ಅಧಿಕ ಹಣ ಈ ಕಾರ್ಯಕ್ರಮಕ್ಕೆ ಹರಿದುಬರುತ್ತಿದೆ ಎಂದರೆ ಈ ಕಾರ್ಯಕ್ರಮ ಹುಟ್ಟುಹಾಕಿರುವ ಮಾರುಕಟ್ಟೆಯ ಮೌಲ್ಯವನ್ನು ನೀವು ಊಹಿಸಬಹುದು.

ಕಳೆದ 13 ಆವೃತ್ತಿಗಳಿಂದಲೂ ಹಿಂದಿಯಲ್ಲಿ ಈ ಕಾರ್ಯಕ್ರಮ ನಡೆಸಿಕೊಡುತ್ತಿರುವ ಖ್ಯಾತ ನಟ, ನಿರೂಪಕ ಸಲ್ಮಾನ್ ಖಾನ್ ಮೊದಲ 7 ಆವೃತ್ತಿಗಳಲ್ಲಿ ಸಂಚಿಕೆ ಒಂದಕ್ಕೆ ಸಂಭಾವನೆಯಾಗಿ 6ರಿಂದ 8 ಕೋಟಿ ಪಡೆಯುತ್ತಿದ್ದರು. ಆದರೆ, ಪ್ರಸ್ತುತ ಅವರು ಸಂಚಿಕೆ ಒಂದಕ್ಕೆ 31 ಕೋಟಿ ರೂ ಪಡೆಯುತ್ತಿದ್ದಾರೆ. ಅಂದರೆ ಆವೃತ್ತಿಯೊಂದಕ್ಕೆ ಸಲ್ಮಾನ್ ಖಾನ್ ಅವರ ಒಟ್ಟು ಸಂಭಾವನೆ ಸುಮಾರು 403 ಕೋಟಿ ರೂಪಾಯಿ.

ತಮಿಳಿನ ಬಿಗ್‍ಬಾಸ್ ನಿರೂಪಕನಾಗಿರುವ ಖ್ಯಾತ ನಟ ಕಮಲಹಾಸನ್ ಅವರಿಗೆ ಮೂರನೇ ಆವೃತ್ತಿಯಲ್ಲಿ ಒಟ್ಟಾರೆ 100 ಕೋಟಿ ಹಣ ನೀಡಲಾಗಿದೆ. ಇನ್ನು ಕನ್ನಡದಲ್ಲೂ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ 7ನೇ ಆವೃತ್ತಿಯಲ್ಲಿ ಸುಮಾರು 20 ಕೋಟಿಗೂ ಅಧಿಕ ಹಣ ನೀಡಲಾಗಿದೆ. ಇದಲ್ಲದೆ ಮಲಯಾಳಂ ಮತ್ತು ತೆಲುಗಿನಲ್ಲೂ ಬಿಗ್‍ಬಾಸ್ ನಿರೂಪಕರ ಸಂಭಾವನೆ 100 ಕೋಟಿಯನ್ನು ದಾಟಿದೆ. ಹೀಗೆ ಆಯೋಜಕರು ಮತ್ತು ನಿರೂಪಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಪರಿಣಮಿಸಿರುವ ಬಿಗ್‍ಬಾಸ್ ಪ್ರಸ್ತುತ ಭಾರತದ ಟಿವಿ ಮಾರುಕಟ್ಟೆಯಲ್ಲಿ ದೈತ್ಯನಾಗಿ ಬೆಳೆಯುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ಕಿಚ್ಚ ಸುದೀಪ್ ಮತ್ತು ಕನ್ನಡದ ಬಿಗ್‍ಬಾಸ್

ಕನ್ನಡದಲ್ಲಿ 2013ರಲ್ಲಿ ಖ್ಯಾತ ನಟ ಸುದೀಪ್ ನಿರೂಪಣೆಯಲ್ಲಿ ಆರಂಭವಾದ ಬಿಗ್‍ಬಾಸ್ ಮೊದಲ ಆವೃತ್ತಿ ಸುದೀಪ್ ಅವರ ಖಡಕ್ ಮಾತು ಹಾಗೂ ವಿಭಿನ್ನ ನಿರೂಪಣಾ ಶೈಲಿಯಿಂದಲೇ ಮನೆಮಾತಾಗಿತ್ತು. ನಿರೀಕ್ಷೆಯಂತೆಯೇ ಜನರ ಮನ ಗೆಲ್ಲುವಲ್ಲಿ ಮೊದಲ ಆವೃತ್ತಿ ಯಶಸ್ವಿಯಾಗಿತ್ತು, ಪರಿಣಾಮ ಇದೀಗ 7ನೇ ಆವೃತ್ತಿಯ ಹೊಸಿಲಿಗೆ ಬಂದು ನಿಂತಿದೆ.

ಸಂಪೂರ್ಣ ಸೆಲೆಬ್ರಿಟಿಗಳಿಂದಲೇ ತುಂಬಿ ಹೊಗಿದ್ದ ಮೊದಲ ಆವೃತ್ತಿಯಲ್ಲಿ ನಟ ವಿಜಯ ರಾಘವೇಂದ್ರ ವಿಜಯಿಯಾಗಿದ್ದರೆ, ಇಡೀ ಆವೃತ್ತಿಯಲ್ಲಿ ಪ್ರೇಕ್ಷಕರಿಗೆ ಅದ್ಭುತ ಮನರಂಜನೆ ನೀಡಿದ್ದ ಹಾಸ್ಯನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಹೀಗೆ ಆರಂಭವಾದ ಮೊದಲ ಆವೃತ್ತಿಯಲ್ಲೇ ಯಶಸ್ಸಿನ ಉತ್ತುಂಗ ಏರಿದ ಬಿಗ್‍ಬಾಸ್ ಕಾರ್ಯಕ್ರಮದ ಎರಡನೇ ಆವೃತ್ತಿಯಲ್ಲಿ ಕಿರುತೆರೆಯ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಮೂರನೇ ಆವೃತ್ತಿಯಲ್ಲಿ ನಟಿ ಶೃತಿ, ನಾಲ್ಕನೇ ಆವೃತ್ತಿಯಲ್ಲಿ ‘ಸ್ವಯಂಘೋಷಿತ ಒಳ್ಳೇ ಹುಡುಗ’ ಪ್ರಥಮ್, ಐದನೇ ಆವೃತ್ತಿಯಲ್ಲಿ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಹಾಗೂ ಆರನೇ ಆವೃತ್ತಿಯಲ್ಲಿ ಸಾಮಾನ್ಯ ರೈತ ಶಶಿಕುಮಾರ್ ಬಿಗ್‍ಬಾಸ್ ಟೈಟಲ್ ವಿಜಯಿಯಾಗಿದ್ದರು. ಹೀಗಾಗಿ ಏಳನೇ ಆವೃತ್ತಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಟಿಆರ್‍ಪಿಗಾಗಿ ಮತ್ತೆ ಸೆಲೆಬ್ರಿಟಿ ಮೊರೆಹೋದ ಬಿಗ್‍ಬಾಸ್-7

ಅಸಲಿಗೆ ಬಿಗ್‍ಬಾಸ್ ಮೊದಲ ನಾಲ್ಕೂ ಆವೃತ್ತಿಯಲ್ಲಿ ಹಿರಿತೆರೆ ಹಾಗೂ ಕಿರುತೆರೆ ನಟ ನಟಿಯರಿಗೆ ಮಾತ್ರ ಬಿಗ್‍ಬಾಸ್ ಮನೆ ಪ್ರವೇಶಿಸುವ ಅವಕಾಶ ನೀಡಲಾಗಿತ್ತು. ಇದೇ ಕಾರಣಕ್ಕೆ ಈ ನಾಲ್ಕೂ ಆವೃತ್ತಿ ಸಾಕಷ್ಟು ಯಶಸ್ಸು ಸಾಧಿಸಿತ್ತು. ಆದರೆ, ಇದೇ ಸಂದರ್ಭದಲ್ಲಿ ಬಿಗ್‍ಬಾಸ್ ಮನೆಗೆ ಸಾಮಾನ್ಯರಿಗೂ ಸಹ ಅವಕಾಶ ನೀಡಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯದಿಂದ ಜೋರಾಗಿಯೇ ಕೇಳಿ ಬಂದಿತ್ತು. ಇದೇ ಕಾರಣಕ್ಕೆ 5 ಮತ್ತು 6ನೇ ಆವೃತ್ತಿಯಲ್ಲಿ ಸಾಮಾನ್ಯರಿಗೂ ಸಹ ಬಿಗ್‍ಬಾಸ್ ಮನೆಗೆ ಅವಕಾಶ ಕಲ್ಪಿಸಲಾಗಿತ್ತು.

ಆರನೇ ಆವೃತ್ತಿಯಲ್ಲಿ ಸಾಮಾನ್ಯ ಕೋಟಾದ ಅಡಿಯಲ್ಲಿ ಬಿಗ್‍ಬಾಸ್ ಮನೆಗೆ ಎಂಟ್ರಿ ಪಡೆದ ಯುವ ರೈತ ಶಶಿಕುಮಾರ್ ಬಿಗ್‍ಬಾಸ್ ಸೀಸನ್ ಆರರ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಸಾಮಾನ್ಯ ವ್ಯಕ್ತಿಯೊಬ್ಬ ಬಿಗ್‍ಬಾಸ್ ಟೈಟಲ್ ಗೆದ್ದದ್ದು ಜನರ ನಡುವೆ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೂ ಈ ಎರಡೂ ಸೀಸನ್‍ಗಳು ನಿರೀಕ್ಷಿತ ‘ಗೆಲುವು’ (ಟಿಆರ್‍ಪಿ) ಸಾಧಿಸುವಲ್ಲಿ ವಿಫಲವಾಗಿತ್ತು. ಇದೇ ಕಾರಣಕ್ಕೆ ಏಳನೇ ಆವೃತ್ತಿಯಲ್ಲಿ ಮತ್ತೆ ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಬಿಗ್‍ಬಾಸ್ ಆಯೋಜಕರು ಎಲ್ಲಾ ಬಹುತೇಕ ಸ್ಪರ್ಧಿಗಳನ್ನು ಸಿನಿಮಾ, ಸೀರಿಯಲ್ ಇತ್ಯಾದಿ ಕ್ಷೇತ್ರಗಳಿಂದಲೇ ಆಯ್ಕೆ ಮಾಡಿದ್ದಾರೆ.

ಒಟ್ಟಾರೆ ಭಾರತೀಯ ಮನರಂಜನಾ ಮಾರುಕಟ್ಟೆಯಲ್ಲಿ ಬಿಗ್‍ಬಾಸ್ ಎಂಬ ಭ್ರಮಾಲೋಕದ ನಾಯಕ ವರ್ಷದಿಂದ ವರ್ಷಕ್ಕೆ ದೈತ್ಯಾಕಾರವಾಗಿ ಬೆಳೆಯುತ್ತಲೇ ಇದ್ದಾನೆ, ಸಾವಿರಾರು ಕೋಟಿ ಹಣವನ್ನು ಜೇಬಿಗೆ ಇಳಿಸುತ್ತಿದ್ದಾನೆ. ಆದರೆ, ಇದರ ಪರಿವೇ ಇಲ್ಲದ ಸಾಮಾನ್ಯ ಜನ ಇಂದು ಬಿಗ್‍ಬಾಸ್ ಕಾರ್ಯಕ್ರಮಕ್ಕೆ ವ್ಯಸನಿಗಳಾಗುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಸಮಾಜಕ್ಕೆ ಏನುಪಯೋಗ? ಈ ಕಾರ್ಯಕ್ರಮ ನಿಜಕ್ಕೂ ನೀಡುತ್ತಿರುವುದು ಮನರಂಜನೆಯಾ? ಎಂಬ ಕುರಿತು ಯಾರಿಗೂ ಸ್ಪಷ್ಟತೆ ಇಲ್ಲ. ಇಷ್ಟಕ್ಕೂ ಹಣ ಹೂಡಿ ಲಾಭ ತೆಗೆಯುವ ಮಾರುಕಟ್ಟೆಯಲ್ಲಿ ಇಂತಹ ಪ್ರಶ್ನೆಗಳಿಗೆ ಆಸ್ಪದವೂ ಇರವುದಿಲ್ಲ.

ಒಟ್ಟಿನಲ್ಲಿ ಮೇಲೆ ಜಾರ್ಜ್ ಆರ್ವೆಲ್ ಬರೆದ ಸಾಲುಗಳನ್ನು ಸಾಬೀತು ಪಡಿಸುವ ಬಿಗ್‍ಬಾಸ್ ಅತಿರೇಕದ ಪ್ರದರ್ಶನದಿಂದಾಗಿ ಕೆಟ್ಟ-ಕೊಳಕು ಕಾರ್ಯಕ್ರಮವಾಗಿ ನಿರೂಪಣೆಗೊಳ್ಳುತ್ತಿದೆ.

ಜನರೇಕೆ ಇಂಥಾ ಕಾರ್ಯಕ್ರಮಗಳನ್ನು ಮುಗಿಬಿದ್ದು ನೋಡುತ್ತಾರೆ?

ಜಾರ್ಜ್ ಆರ್ವೆಲ್ ಹೇಳಿದಂತೆಯೇ ಜನರಿಗೆ ಮತ್ತೊಬ್ಬರ ಖಾಸಗೀ ಬದುಕಿನ ವಿಚಾರಗಳನ್ನು, ಆತನ ನಡವಳಿಕೆ, ವೈಯಕ್ತಿಕ ಸಮಸ್ಯೆಗಳು, ವಿಭಿನ್ನ ವ್ಯಕ್ತಿತ್ವಗಳಂತ ವಿಷಯಗಳನ್ನು ತಿಳಿದುಕೊಳ್ಳುವ, ಬೇರೆಯವರೊಂದಿಗೆ ಹಂಚಿಕೊಳ್ಳುವುದರಲ್ಲಿ ಕ್ಯೂರಿಯಾಸಿಟಿ ಹೆಚ್ಚು. ಬಿಗ್‍ಬಾಸ್ ಅದನ್ನೇ ತೆರೆದಿಡುತ್ತದೆ. ಸೆಲೆಬ್ರೆಟಿಗಳನ್ನು ಒಂದು ದೊಡ್ಡ ಮನೆಯಲ್ಲಿ ಕೂಡಿಟ್ಟು, ತೆರೆಹಿಂದಿನ ಅವರ ವ್ಯಕ್ತಿತ್ವವನ್ನು ತೋರಿಸುವುದರಿಂದ ಜನರಿಗೆ ಆ ಸೆಲೆಬ್ರೆಟಿಗಳ ಖಾಸಗಿತನವನ್ನು ನೋಡುವುದರಲ್ಲಿ ಹುಮ್ಮಸ್ಸು ಹೆಚ್ಚಾಗಿರುತ್ತದೆ.

ಟಿವಿ ಮುಂದೆ ಕುಳಿತು ಬಿಗ್‍ಬಾಸ್ ಶೋ ನೋಡುವಾಗ ನಾವು `ಮನುಷ್ಯನ ವ್ಯಕ್ತಿತ್ವದ ವರ್ತನೆಯ ನಾನಾ ಮಜಲುಗಳ ಮೇಲೆ ಪಕ್ಷಿನೋಟ ಬೀರುತ್ತಿದ್ದೇವೆ. ಆ ಮೂಲಕ ಈ ಸಂಕೀರ್ಣ ಸಮಾಜದಲ್ಲಿ ಎಂತೆಂತಹ ಮುಖವಾಡದ ಜನರಿರುತ್ತಾರೆ. ಅವರೊಂದಿಗೆ ನಾವು ಹೇಗೆ ವರ್ತಿಸಬೇಕು ಎನ್ನುವುದನ್ನು ಕಲಿಯುತ್ತಿದ್ದೇವೆ’ ಎಂದು ನಮ್ಮನ್ನು ಬಿಗ್‍ಬಾಸ್‍ನಂತಹ ಕಾರ್ಯಕ್ರಮಗಳ ವೀಕ್ಷಣೆಯನ್ನು ಸಮರ್ಥಿಸಿಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಮನುಷ್ಯನಾದವನು ತನ್ನ ಆಂತರ್ಯದಲ್ಲಿರುವ ಮತ್ತೊಬ್ಬರ ಖಾಸಗಿ ಬದುಕುಗಳಿಗೆ, ಅವರ ಸಂಕಟಗಳಿಗೆ, ತೊಳಲಾಟಗಳಿಗೆ ಕಣ್ಣು ಆನಿಸಿ, ಕಿವಿಯಗಲಿಸಿ ವಿಕೃತ ಖುಷಿ ಪಡುವ ಕೀಳು ಅಭಿರುಚಿಯನ್ನು ತಣಿಸಿಕೊಳ್ಳುವುದಕ್ಕೇ ಅವುಗಳತ್ತ ಆಕರ್ಷಿತರಾಗಿರುತ್ತೇವೆ. ಆದರೆ ಅದನ್ನು ಒಪ್ಪಿಕೊಳ್ಳಲಾಗದೆ ಮನುಷ್ಯನ ವರ್ತನೆಗಳನ್ನು ಅರಿಯುವ ಸೈಕಾಲಜಿಕಲ್ ಸ್ಟಡಿಯ ನೆಪವನ್ನು ಕೊಟ್ಟುಕೊಳ್ಳುತ್ತೇವೆ.

ವೀಕ್ಷಕರ ಈ ಮನೋಭಾವವನ್ನೇ ಬಂಡವಾಳ ಮಾಡಿಕೊಳ್ಳುವ ಟಿಆರ್‍ಪಿ ದಾಹಿ ಟಿವಿ ಚಾನೆಲ್‍ಗಳು ವ್ಯಕ್ತಿಗಳ ವರ್ತನೆ ತೆರೆದಿಡುವ ಸೈಕಾಲಾಜಿಕಲ್ ಸೋಗಿನಲ್ಲಿ ಮನುಷ್ಯನಾಳದ ಕ್ಷುಲ್ಲಕ ಕುತೂಹಲವನ್ನು ತಣಿಸಲು ಇಡೀ ಕಾರ್ಯಕ್ರಮದಲ್ಲಿ ನಾಟಕೀಯತೆಯನ್ನು ತುಂಬುತ್ತಾ ಸಾಗುತ್ತವೆ. ಅದನ್ನು ನಾವು ಎಂಜಾಯ್ ಮಾಡುತ್ತೇವೆ. ಅದರಲ್ಲಿ ಒಬ್ಬರನ್ನೊಬ್ಬರು ಜರಿಯುವ, ಕಾಲೆಳೆಯುವ, ಅವಮಾನಿಸುವ, ಕಿತ್ತಾಡುವ ದೃಶ್ಯಗಳನ್ನು ನೋಡಿ ಆನಂದಿಸುತ್ತಿರುತ್ತೇವೆ. ಇದು ಮನುಷ್ಯ ಮನಸ್ಸಿನಲ್ಲಿ ಅರಿವಿಗೆ ಬಂದ ಅಥವಾ ಬಾರದೆ ಬೆಳೆದುಬಂದಿರುವ ಸತ್ಯ.

ಆ ಶೋನಲ್ಲಿಯೂ ಕಾಣಸಿಗುವ ಎಲ್ಲಾ ದೃಶ್ಯಗಳು ವಾಸ್ತವವಾದುವಲ್ಲ. ಎಲ್ಲವೂ ಪೂರ್ವನಿಯೋಜಿತವಲ್ಲ. ಆದರೆ ಜನರ ಮನಸ್ಸಿನಲ್ಲಿನ ಈ ಗುಣಕ್ಕೆ ರೋಚಕತೆಯನ್ನು ಉಣಬಡಿಸಲು ಕಟ್ಟಿರುವ ಇಡೀ ಚೌಕಟ್ಟೇ ಪೂರ್ವನಿಯೋಜಿತವಾದದ್ದು. ಅಲ್ಲಿ ತಮ್ಮ ಸಹಜ ಗುಣ ‘ತೋರಬೇಕಿರುವ’ ಪಾತ್ರಧಾರಿಗಳೆಲ್ಲರೂ ತೋರಿಕೆಯ ವ್ಯಕ್ತಿತ್ವವನ್ನು ಅಥವಾ ಪರಿಣಿತ ನಟನೆಯನ್ನು ಅಲ್ಲಿ ಕಾಣಿಸುತ್ತಿರುತ್ತಾರೆ. ಇದು ನೋಡುಗರಿಗೆ ‘ಸಹಜವೆಂಬಂತೆ’ ಅಪ್ಯಾಯಮಾನವಾಗುವುದು ವಿಪರ್ಯಾಸ.

ಮತ್ತೊಂದು ಸಂಗತಿಯೇನೆಂದರೆ, ಮನುಷ್ಯನಲ್ಲಿ ಒಂದು ಸುಪ್ತ ಪ್ರಜ್ಞೆ ಸದಾ ಕೆಲಸ ಮಾಡುತ್ತಿರುತ್ತದೆ. ಎಷ್ಟೇ ಉದ್ವಿಗ್ನಗೊಂಡರು, ಹತಾಶಗೊಂಡರು ಸಾರ್ವಜನಿಕವಾಗಿ ಯಾವುದು ಸ್ವೀಕಾರಾರ್ಹ ವರ್ತನೆ, ಯಾವುದು ಸ್ವೀಕಾರಾರ್ಹವಲ್ಲ ಎಂಬುದನ್ನು ಅರಿತು ಅದರಂತೆ ನಮ್ಮನ್ನು ನಾವು ಕಂಟ್ರೋಲ್ ಮಾಡಿಕೊಳ್ಳುತ್ತಿರುತ್ತೇವೆ. ಆದರೆ ಇಂತಹ ಕಾರ್ಯಕ್ರಮಗಳಿಂದ ಉಂಟಾಗುವ ಯಡವಟ್ಟೆಂದರೆ, ಚಾನೆಲ್‍ಗಳ ಟಿಆರ್‍ಪಿ ದಾಹಕ್ಕೆ ಬಲಿಯಾಗಿ ಸ್ಪರ್ಧಿಗಳು ಪ್ರಚೋದನೆಯಿಂದಲೋ, ವೀಕ್ಷಕರ ಗಮನ ಸೆಳೆಯಲೆಂದೋ ಕ್ಯಾಮೆರಾಗಳ ಮುಂದೆಯೇ ಸಾರ್ವಜನಿಕ ಸ್ವೀಕಾರಾರ್ಹವಲ್ಲದ ವರ್ತನೆಗಳನ್ನು (ಹೊಡೆಯುವುದು, ಹೀಯಾಳಿಸುವುದು, ಜನಾಂಗೀಯ ನಿಂದನೆ, ಲೈಂಗಿಕ ಕುಚೇಷ್ಟೆ) ಪ್ರದರ್ಶಿಸಿಬಿಡುತ್ತಾರೆ. ಸೆಲೆಬ್ರಿಟಿ ಎನಿಸಿಕೊಂಡವರೇ ಜನರು ನೋಡುತ್ತಿದ್ದಾರೆ ಎಂಬುದನ್ನೂ ಲೆಕ್ಕಿಸದೆ ಸ್ವೀಕಾರಾರ್ಹವಲ್ಲದ ವರ್ತನೆಗಳನ್ನು ತೋರಲು ಶುರು ಮಾಡಿದರೆ, ನೋಡುಗರ ಮನಸ್ಸೂ ಅಂತಹ ವರ್ತನೆಗಳನ್ನು ನಿಗ್ರಹಿಸಿಕೊಳ್ಳುವ ಇಚ್ಛೆಯನ್ನು ತೊರೆಯಲು ಶುರು ಮಾಡಿಬಿಡುತ್ತೆ. ಇದೂ ಸಮಾಜಕ್ಕೆ ಅಪಾಯಕಾರಿ!

ಬಿಗ್‍ಬಾಸ್ ಬ್ಯಾನ್‍ಗಾಗಿ ಪತ್ರ ಬರೆದ ಬಿಜೆಪಿ ಶಾಸಕ

ಬಿಗ್‍ಬಾಸ್ ಕಾರ್ಯಕ್ರಮವನ್ನು ವಿರೋಧಿಸಲು ಸಾಕಷ್ಟು ಕಾರಣಗಳಿರುವುದು ಈ ಶೋ ಗಮನಿಸಿದರೆ ಗೊತ್ತಾಗುತ್ತದೆ. ಹಲವು ಕಾರಣಗಳಿಗೆ ಬಹಳಷ್ಟು ಮಂದಿ ಇದನ್ನು ಟೀಕಿಸುತ್ತಾರೆ. ಆದರೆ ಇದಾವುದನ್ನೂ ಮೂಲವಾಗಿಟ್ಟುಕೊಳ್ಳದ ಗಾಜಿಯಾಬಾದ್‍ನ ಶಾಸಕ ನಂದ ಕಿಶೋರ್ ಗುಜ್ವಾರ್ ಬಿಗ್‍ಬಾಸ್ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಿಗ್‍ಬಾಸ್ 13ನೇ ಸೀಸನನ್ನು ಬ್ಯಾನ್ ಮಾಡಬೇಕೆಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೆಕರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಕಾರ್ಯಕ್ರಮವು ದೇಶದ ಸಂಸ್ಕøತಿಗೆ ವಿರೋಧವಾಗಿದೆ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಾರೆ. ಒಂದೇ ಕಡೆ ಎಲ್ಲರೂ ಸಮವಾಗಿ ಮಲಗುತ್ತಾರೆ. ಇದು ಸಂಸ್ಕøತಿಗೆ ವಿರೋಧವಾದುದು ಎಂದು ಶಾಸಕ ಆರೋಪಿಸಿದ್ದಾರೆ. ಭಿನ್ನ-ಬೇಧಗಳನ್ನು ಹುಡುಕುವ ಇಂತಹ ಕೊಳಕು ಮನಸ್ಸೂ ಇದೇ ಸಮಾಜದ ಭಾಗವೆಂಬುದನ್ನು ಮರೆಯಲಾದೀತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...