Homeಅಂಕಣಗಳುಸಂಸತ್ತಿನಿಂದ ಪ್ರತಿಪಕ್ಷಗಳ ಸಂಸದರ ಸಾಮೂಹಿಕ ಉಚ್ಚಾಟನೆ; ಬಿಗಿಗೊಳ್ಳುತ್ತಿರುವ ಸರ್ವಾಧಿಕಾರಿ ಕಪಿಮುಷ್ಠಿ 2023: ದುರಂತಗಳ ಸರಮಾಲೆಯಲ್ಲಿ ಕೊನೆಯಾಗುತ್ತಿರುವ...

ಸಂಸತ್ತಿನಿಂದ ಪ್ರತಿಪಕ್ಷಗಳ ಸಂಸದರ ಸಾಮೂಹಿಕ ಉಚ್ಚಾಟನೆ; ಬಿಗಿಗೊಳ್ಳುತ್ತಿರುವ ಸರ್ವಾಧಿಕಾರಿ ಕಪಿಮುಷ್ಠಿ 2023: ದುರಂತಗಳ ಸರಮಾಲೆಯಲ್ಲಿ ಕೊನೆಯಾಗುತ್ತಿರುವ ವರ್ಷ

- Advertisement -
- Advertisement -

ಕರ್ನಾಟಕದ ಮಟ್ಟಿಗೆ 2023ಅನ್ನು ಚೂರು ಆಶಾದಾಯಕವಾದ ಮತ್ತು ಭರವಸೆಯನ್ನು ಹುಟ್ಟಿಸಿದ ವರ್ಷ ಎಂದು ಕರೆಯಬಹುದಾದರೂ, (ಜನವಿರೋಧಿ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿದ್ದು) ಇತ್ತೀಚಿಗೆ ನಡೆದ ಐದು ರಾಜ್ಯದ ವಿಧಾನಸಭಾ ಚುನಾವಣೆಗಳು (ಮೂರರಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು), ಕೆಲವು ಪ್ರಮುಖ ಸುಪ್ರೀಂ ಕೋರ್ಟ್ ತೀರ್ಪುಗಳು, ಸಂಸತ್ತಿನಲ್ಲಿ ನಡೆಯುತ್ತಿರುವ ಸಂಸದರ ಅಮಾನತ್ತು ಪ್ರಹಸನ (ಡಿಸೆಂಬರ್ 21ರ ಹೊತ್ತಿಗೆ ಈ ಸಂಖ್ಯೆ 146 ಮುಟ್ಟಿದೆ- ಅದರಲ್ಲಿ 100 ಜನ ಲೋಕಸಭಾ ಸದಸ್ಯರು), ಅದರ ಬೆನ್ನಲ್ಲೇ ಚರ್ಚೆಯಾಗದೆ ಜಾರಿಯಾಗುತ್ತಿರುವ ಕಾನೂನುಗಳು- ಒಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಚರ್ಚಿಸುತ್ತಿರುವಂತೆ ಕುಸಿಯುತ್ತಿರುವ ಪ್ರಜಾಪ್ರಭುತ್ವ 2023 ವರ್ಷದ ಕೊನೆಗೆ ವೇಗ ಪಡೆದುಕೊಳ್ಳುತ್ತಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇಷ್ಟು ಸಾಲದು ಎಂಬಂತೆ ದೇಶದ ಕೋಮು ಚಹರೆಯನ್ನು ಇನ್ನಿಲ್ಲದಂತೆ ಬದಲಾಯಿಸಿದ ಬಾಬ್ರಿ ಮಸೀದಿ ಧ್ವಂಸವನ್ನು ಮರೆಯುವಂತೆ ಮಾಡಿ ಅಲ್ಲಿ ತಲೆ ಎತ್ತುತ್ತಿರುವ ರಾಮಮಂದಿರದ ಉದ್ಘಾಟನೆಯ ಸಂಘ ಪರಿವಾರದ ’ಸಂಭ್ರಮ’ದ ಸುತ್ತಲೇ ಸುದ್ದಿಗಳನ್ನು ಉತ್ಪಾದಿಸುವ ಕೆಲಸ ಜಾರಿಯಲ್ಲಿದ್ದು ಇದು ಹೊಸ ವರ್ಷಕ್ಕೂ ಮುಂದುವರಿಯಲಿದೆ. ಇದು ದೇಶದ ಪಾಡಾದರೆ, ಇನ್ನೂ ನಿಲ್ಲದ ರಷ್ಯಾ-ಉಕ್ರೇನ್ ಯುದ್ಧ, ಪ್ರಜಾಪ್ರಭುತ್ವದ ಮೌಲ್ಯವನ್ನು ಕಸಿಯುವಂತಹ ಸರ್ಕಾರ ಬದಲಾವಣೆಗಳು, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಮಾರಣಹೋಮ ಹೀಗೆ ಜಾಗತಿಕವಾಗಿಯೂ 2023 ದುರಂತದ ವರ್ಷವಾಗಿಯೇ ಕೊನೆಗೊಳ್ಳುತ್ತಿದೆ.

ವಿರೋಧ ಪಕ್ಷಗಳೂ ಬೇಡ, ವಿರೋಧವೂ ಬೇಡ

ಅಯೋಧ್ಯೆಯಲ್ಲಿ ಕಟ್ಟಿಕೊಂಡಿರುವ ರಾಮಮಂದಿರ ಉದ್ಘಾಟನೆಯ ಮದದಲ್ಲಿ ತೇಲುತ್ತಿರುವ ಬಿಜೆಪಿ ಮುಖಂಡರಿಗೆ, ಪ್ರಜಾಪ್ರಭುತ್ವದ ದೇವಾಲಯವಾಗಿರುವ ಸಂಸತ್ತಿನ ಬಗ್ಗೆ ಇರುವ ಅ’ಗೌರವ’ ಮತ್ತೊಮ್ಮೆ ಅನಾವರಣಗೊಂಡಿದೆ. ಕೆಲವು ಯುವಕ-ಯುವತಿಯರು ಪಾರ್ಲಿಮೆಂಟ್‌ನ ಭದ್ರತಾ ಲೋಪವನ್ನು ಬಳಸಿಕೊಂಡು ಯಾರಿಗೂ ಸಮಸ್ಯೆಯನ್ನುಂಟುಮಾಡದಂತೆ ಹೊಗೆಡಬ್ಬಿಯನ್ನು ಲೋಕಸಭೆಯ ಕಾರ್ಯಕಲಾಪದ ಸಮಯದಲ್ಲಿ ಎಸೆದ ಪ್ರಕರಣ, ಹಲವರ ಬಂಧನಕ್ಕೆ ಮತ್ತು ಅವರ ವಿರುದ್ಧ ಯುಎಪಿಎ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಕಾರಣವಾಗಿತ್ತು. ಈ ಕರಾಳ ಕಾನೂನಿನಡಿ ಕೇಸುಗಳನ್ನು ದಾಖಲಿಸಿದ ಸರಿತಪ್ಪಿನ ವಿಷಯಕ್ಕೆ ಮತ್ತೆ ಬರೋಣ; ಆದರೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭದ್ರತಾ ಲೋಪದ ಬಗ್ಗೆ ಗೃಹಮಂತ್ರಿ ಹೇಳಿಕೆ ಕೊಡಬೇಕೆಂದು ಆಗ್ರಹಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ವಿರೋಧ ಪಕ್ಷಗಳ 146 ಸಂಸದರನ್ನು (ಡಿಸೆಂಬರ್ 21ರ ಸಂಖ್ಯೆ ಇದು) ಚಳಿಗಾಲದ ಅಧಿವೇಶನದಿಂದಲೇ ವಜಾ ಮಾಡಲಾಗಿದೆ! 237 ವಿರೋಧ ಪಕ್ಷಗಳ ಸಂಸದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರನ್ನು ಅಧಿವೇಶನದಿಂದ ವಜಾ ಮಾಡಿರುವ ವಿದ್ಯಮಾನ ಹಿಂದೆಂದೂ ನಡೆದ ಉದಾಹರಣೆಯಿಲ್ಲ! ಚುನಾಯಿತ ಪ್ರತಿನಿಧಿಗಳನ್ನು ಸಂಸತ್ತಿನಿಂದ ವಜಾ ಮಾಡುವ ಮೂಲಕ ಸರ್ಕಾರಕ್ಕೆ ಪ್ರಶ್ನೆ ಕೇಳುವುದನ್ನು ಹತ್ತಿಕ್ಕುತ್ತಿರುವುದು, ಭಾರತದಲ್ಲಿ ಪ್ರಜಾಪ್ರಭುತ್ವ ವೇಗವಾಗಿ ಕುಸಿಯುತ್ತಿರುವುದಕ್ಕೆ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲೆ ದಾಳಿ ತೀವ್ರವಾಗಿರುವುದಕ್ಕೆ ತಾಜಾ ಉದಾಹರಣೆ ಇದಾಗಿದೆ.

ಸಂಸತ್ತಿನ ಅಥವಾ ವಿಧಾನಸಭೆಗಳ ಬಾವಿಗೆ ಇಳಿದು ಪ್ರತಿಭಟಿಸುವುದು, ಕಲಾಪಗಳಿಂದ ಹೊರನಡೆಯುವುದು ಅತಿ ಸಾಮಾನ್ಯವಾದ ಸಂಗತಿ ಎಂದು ನಾವೆಲ್ಲರೂ ಹಲವು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ; ಸರ್ಕಾರದ ನೀತಿ ಮತ್ತು ನಡೆಗಳನ್ನು ವಿರೋಧಿಸಿ-ಪ್ರಶ್ನಿಸಿ ಸರಿಯಾದ ಕ್ರಮಕ್ಕೆ ಮತ್ತು ಉತ್ತರದಾಯಿತ್ವಕ್ಕೆ ಆಗ್ರಹಿಸುವ ಪ್ರಜಾಸತ್ತಾತ್ಮಕ ನಡೆ ಇದು ಸಾಬೀತಾಗಿದ್ದು ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಕೂಡ ಇವುಗಳನ್ನು ಧಾರಾಳವಾಗಿ ಮಾಡಿದ್ದಿದೆ. ಇದನ್ನು ಸಹಿಸಿಕೊಳ್ಳುವ ಮತ್ತು ಜವಾಬ್ದಾರಿಯುತ ಉತ್ತರವನ್ನು ನೀಡುವ ಸೈರಣೆಯನ್ನು ಯಾವುದೇ ಸರ್ಕಾರ ಬೆಳೆಸಿಕೊಳ್ಳಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ನೂರಾರು ಸಂಸದರನ್ನು ವಜಾ ಮಾಡುವ ಕ್ರಮ ಪ್ರಜಾಪ್ರಭುತ್ವದ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಈ ವಜಾ ಮಾಡಿದ ಅಧ್ಯಾಯ ಎಷ್ಟು ಬೇಕಾಬಿಟ್ಟಿಯಾಗಿತ್ತು ಎಂದರೆ, ಸದರಿ ಚಳಿಗಾಲ ಅಧಿವೇಶನದ 11ನೇ ದಿನ ಅಂದರೆ ಡಿಸೆಂಬರ್ 13ರಂದು, ಕಲಾಪಗಳಿಗೆ ಅಡ್ಡಿಪಡಿಸಿದ ಕಾರಣ ನೀಡಿ ಲೋಕಸಭೆಯಿಂದ 14 ಸಂಸದರನ್ನು ಅಧಿವೇಶನದ ಉಳಿದ ಪೂರ್ತಿ ಸಮಯದವರೆಗೆ ವಜಾಗೊಳಿಸಲಾಗಿತ್ತು. ಅದರಲ್ಲಿ ಡಿಎಂಕೆ ಸಂಸದ ಎಸ್.ಆರ್ ಪಾರ್ಥಿಬನ್ ಅವರ ಹೆಸರು ಕೂಡ ಸೇರಿತ್ತು. ಆದರೆ ಅಂದು ಅವರು ಅನಾರೋಗ್ಯದ ಸಂಬಂಧವಾಗಿ ಅಧಿವೇಶನದಲ್ಲಿ ಹಾಜರಿರಲಿಲ್ಲ. ಮುಂದಿನ ದಿನ ಅದು ’ತಪ್ಪು ಗುರುತು’ ಕಾರಣಕ್ಕೆ ಆಗಿದ್ದು ಎಂದು ಹೇಳಿ ಅವರ ವಜಾ ಆದೇಶವನ್ನು ರಿವೋಕ್ ಮಾಡಲಾಗಿತ್ತು! ಇಡೀ ಪ್ರಹಸನದ ಅಸಲಿಯತ್ತಿನ ಬಗ್ಗೆ ಇದು ಗುಮಾನಿ ಹುಟ್ಟಿಸುತ್ತದೆ. ಈ ಅಮಾನತ್ತು ಪ್ರಹಸನ ಪೂರ್ವ ನಿಶ್ಚಿತವಾಗಿತ್ತೇ ಎಂಬ ಅನುಮಾನವನ್ನೂ ಹುಟ್ಟಿಸುತ್ತದೆ.

ಪ್ರತಿಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ ಚರ್ಚೆಯಿಲ್ಲದೇ ಪಾಸ್ ಆದ ವಿವಾದಾತ್ಮಕ ಬಿಲ್‌ಗಳು

146 ಜನ ಸಂಸದರನ್ನು ಸಂಸತ್ತಿನಿಂದ ಹೊರಹಾಕಿ, ಯಾವುದೇ ಚರ್ಚೆಯಿಲ್ಲದೆ, ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯಿದೆಗಳನ್ನು ಬದಲಿಸಿರುವ ಭಾರತೀಯ ನ್ಯಾಯಸಂಹಿತೆ ಕಾಯ್ದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು ಲೋಕಸಭೆಯಲ್ಲಿ ಜಾರಿಯಾಗಿವೆ. ಇದು ವಸಾಹತುಶಾಹಿ ಕಾನೂನುಗಳನ್ನು ಬದಲಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೂ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸರ್ಕಾರ ತನ್ನ ಅಧಿಕಾರ ಹೆಚ್ಚಿಸಿಕೊಳ್ಳಲು ಮಾಡಿರುವ ಬದಲಾವಣೆ ಇದು ಎಂಬ ಆರೋಪಗಳಿವೆ. ಅವುಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದೇ ಬೇಡವೆಂದು ಈ ಸಾಮೂಹಿಕ ಅಮಾನತ್ತಿನ ಕ್ರಮ ತೆಗೆದುಕೊಳ್ಳಲಾಯಿತೇ? ಲೋಕಸಭೆಯಲ್ಲಿ ಉಳಿದಿದ್ದ ವಿರೋಧ ಪಕ್ಷದ ಕೆಲವೇ ಕೆಲವು ಸಂಸದರಲ್ಲಿ ಒಬ್ಬರಾದ ಅಸಾದುದ್ದೀನ್ ಒವೈಸಿಯವರು ಇದನ್ನು ಬ್ರಿಟಿಷರು ಜಾರಿ ಮಾಡಿದ್ದ ರೌಲತ್ ಆಕ್ಟ್‌ಗೆ ಹೋಲಿಸಿದ್ದಾರೆ. ಅಮಿತ್ ಶಾ ಗಟ್ಟಿ ದನಿಯಲ್ಲಿ ತಾವು ಪಾಸ್ ಮಾಡಿರುವ ಕಾನೂನನ್ನು ಸಮರ್ಥಿಸಿಕೊಂಡು, ಎಂದಿನಂತೆ ವಿರೋಧ ವ್ಯಕ್ತಪಡಿಸಿದವರನ್ನು ಇಟಲಿಯ ಸಮರ್ಥಕರು ಎಂದು ಜರಿದಿದ್ದಾರೆ! ಇಡೀ ದೇಶವನ್ನು ಅಫೆಕ್ಟ್ ಮಾಡಲಿರುವ ಒಂದು ಗಂಭೀರ ಕಾಯ್ದೆಯ ಬಗ್ಗೆ ಎತ್ತಿರುವ ಪ್ರಶ್ನೆಗೆ ’ಇಟಲಿ’ಯ ರೆಫರೆನ್ಸ್ ತಂದು ಹುಳುಕು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ!

ಇನ್ನು ಟೆಲಿಕಮ್ಯುನಿಕೇಷನ್ ಬಿಲ್ 2023ಅನ್ನು ಈ ಬಾರಿಯ ಲೋಕಸಭಾ ಅಧಿವೇಶನದಲ್ಲಿ ಮಂಡಿಸಲಾಯಿತು. ಆದರೆ ಅದನ್ನು ಹಣಕಾಸು ಬಿಲ್ ಎಂದು ಮಂಡಿಸಲಾಯಿತು. ಸಾಮಾನ್ಯವಾಗಿ ರಾಜ್ಯಸಭೆಯಲ್ಲಿ ಚರ್ಚೆಯನ್ನು ಮಾಡದೆ ಹಣಕಾಸು ಮಸೂದೆಗಳನ್ನು ಪಾಸ್ ಮಾಡುವುದಕ್ಕೆ ಅವಕಾಶವಿದೆ. ಆದರೆ ಟೆಲಿಕಮ್ಯುನಿಕೇಶನ್ ಬಿಲ್‌ಅನ್ನು ಮನಿ ಬಿಲ್ ಆಗಿ ಪರಿಚಯಿಸಿದ ಔಚಿತ್ಯದ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರ ನೀಡದೆ, ವಿರೋಧ ಪಕ್ಷಗಳ ಸದಸ್ಯರು ಇಲ್ಲದ ಖಾಲಿ ಬೆಂಚುಗಳ ನಡುವೆ ಇದನ್ನು ಜಾರಿ ಮಾಡಲಾಗಿದೆ. ಇನ್ನು ಈ ಕಾಯ್ದೆಯಲ್ಲಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಒಂದು ಇಡೀ ಟಿಲಿಕಮ್ಯುನಿಕೇಶನ್ ನೆಟ್‌ವರ್ಕ್ ಅನ್ನೇ ತನ್ನ ವಶ ಮಾಡಿಕೊಳ್ಳಬಹುದು! ಯಾವುದೇ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯ ಕಾರಣ ನೀಡಿ ಇಂಟರ್‌ನೆಟ್ ಸ್ಥಗಿತಗೊಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಇಂತಹ ಮಿತಿಮೀರಿದ ಅಧಿಕಾರವನ್ನು ಒಳಗೊಂಡಿರುವ ಮಸೂದೆಗಳ ಬಗ್ಗೆ ಚರ್ಚೆ ನಡೆಸದಂತೆ ಮಾಡಲು ಈ ರೀತಿಯಲ್ಲಿ ಗುಂಪುಗುಂಪಾಗಿ ವಿರೋಧ ಪಕ್ಷಗಳ ಸಂಸದರನ್ನು ಅಮಾನತ್ತು ಮಾಡಲಾಯಿತೇ ಎಂಬ ಅನುಮಾನ ಇದರಿಂದ ದಟ್ಟವಾಗುತ್ತದೆ!

ಇದು ಸಾಲದು ಎಂಬಂತೆ, ಮುಖ್ಯ ಚುನಾವಣಾಧಿಕಾರಿ ಮತ್ತು ಇತರ ಚುನಾವಣಾಧಿಕಾರಿಗಳನ್ನು ನೇಮಿಸುವ ಬಿಲ್ ಅನ್ನು ಈ ಸಂಪಾದಕೀಯ ಬರೆಯುವ ಹೊತ್ತಿಗೆ ಪಾಸ್ ಮಾಡಲಾಗಿದೆ. ಹಿಂದಿನ ಸುಪ್ರೀಂಕೋರ್ಟ್ ಆದೇಶದಂತೆ, ಮುಖ್ಯ ಚುನಾವಣಾಧಿಕಾರಿಯನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಒಬ್ಬ ಸದಸ್ಯರಾಗಿದ್ದರು. ಆದರೆ ಈಗ ಪಾಸ್ ಆಗಿರುವ ಕಾಯ್ದೆಯ ಪ್ರಕಾರ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಕೇಂದ್ರ ಸರ್ಕಾರದ ಸಚಿವರೊಬ್ಬರು ರಿಪ್ಲೇಸ್ ಮಾಡುತ್ತಾರೆ. ಈ ಬಗೆಯಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಇದು ಕೂಡ ಚರ್ಚೆಯಾಗದೆ ಸರಾಗವಾಗಿ ಕಾನೂನಾಗಿದೆ!

ಹೊಗೆ ಎಬ್ಬಿಸಿದ್ದಕ್ಕೆ ಬಿತ್ತು ಯುಎಪಿಎ

ಐದು ಜನ ಯುವಕ-ಯುವತಿಯರು ತಮಗೆ ಉದ್ಯೋಗ ದೊರೆಯುತ್ತಿಲ್ಲ, ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಹೇಳಿಕೊಂಡು, ನಮ್ಮ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಸಂಸತ್ತಿನಲ್ಲಿ ’ಯಾರಿಗೂ ಅಪಾಯವಾಗದಂತೆ’ ಹೊಗೆಡಬ್ಬಿಯನ್ನು ಸಿಡಿಸಿದ ಪ್ರಕರಣ ಅವರ ಮೇಲೆ ಕರಾಳ ಯುಎಪಿಎ ಕೇಸು ಜಡಿಯಲು ಕಾರಣವಾಯಿತು. ಈ ಯುವಕ-ಯುವತಿಯರು ತಮ್ಮ ಪ್ರತಿಭಟನೆಯ ಮಾರ್ಗದಲ್ಲಿ ಚೂರು ಎಲ್ಲೆ ಮೀರಿರಬಹುದು, ಆದರೆ ಅವರ ಕೆಲಸ ಭಾರತದ ಸಾರ್ವಭೌಮತ್ವಕ್ಕೆ ವಿರುದ್ಧವಾಗಿತ್ತಾ? ಮೇಲ್ನೋಟಕ್ಕೆ ಅವರ ಉದ್ದೇಶವಂತೂ ಯಾವುದೇ ಹಿಂಸೆಗೆ ಪ್ರಚೋದಿಸದೆ, ದೇಶದ ಲಕ್ಷಾಂತರ ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಗಮನ ಸೆಳಯುವದಾಗಿತ್ತು! ಇದಕ್ಕೆ ಯುಎಪಿಎ ಅಡಿ ಪ್ರಕರಣ ದಾಖಲಿಸುವ ಅವಶ್ಯಕತೆ ಏನಿತ್ತು?

ಇದನ್ನೂ ಓದಿ: ಸಿಎಎ ಈ ನೆಲದ ಕಾನೂನು, ಅದರ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್‌ ಶಾ

ಈಗಾಗಲೇ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದೇಶದ ಹಲವು ಚಿಂತಕರ ವಿರುದ್ಧ ಯುಎಪಿಎ ಕೇಸುಗಳನ್ನು ಹಾಕಿ, ಅವರನ್ನು ನಡೆಸಿಕೊಂಡಿರುವ ಬಗೆಯನ್ನು ಇಡೀ ದೇಶ ಕಂಡಿದೆ. ಕರಾಳ ಯುಎಪಿಎ ಕಾಯ್ದೆಯ ಬಗ್ಗೆಯೇ ಪ್ರಶ್ನೆಗಳಿರುವಾಗ, ಪ್ರತಿಭಟನೆಯಾಗಿ ಸ್ವಲ್ಪ ತೀವ್ರ ಮಾರ್ಗದಲ್ಲಿ ಮುಂದಡಿಯಿಟ್ಟ ದೇಶವಾಸಿಗಳ ಮೇಲೆ ಯುಎಪಿಎ ಜಡಿಯುವ ವಿದ್ಯಮಾನ ಒಟ್ಟಿನಲ್ಲಿ ನಿರಾಳವಾಗಿ ಮುಂದುವರಿದಿದೆ ಎನ್ನಬಹುದು.

ಕಳವಳ ಹುಟ್ಟಿಸಿದ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಸುಪ್ರೀಂ ತೀರ್ಪು ಸಂವಿಧಾನದ ವಿಧಿ 370ಅನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡು ಅದನ್ನು ವಿಭಜಿಸಿ ಎರಡು ಭಾಗ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ತೀರ್ಪು ಮಾನ್ಯ ಮಾಡಿದ್ದು 2023ರ ಕಳವಳಕಾರಿ ಸಂಗತಿಯಾಗಿ ಉಳಿದುಕೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಒಪ್ಪಿಗೆ ಇಲ್ಲದೆ ತೆಗೆದುಕೊಂಡ ಈ ಕ್ರಮದಿಂದ ಆ ರಾಜ್ಯದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಕತ್ತಲೆಯಲ್ಲಿ ಇಡಲಾಗಿತ್ತೆಂಬ ಅಂಶ, ಈಗಾಗಲೇ ’ಅರಗಿಸಿಕೊಳ್ಳಲಾಗಿರುವ’ ದುರಂತಗಳ ಸಾಲಿನಲ್ಲಿ ಸೇರಿಕೊಂಡು ’ನ್ಯೂ ನಾರ್ಮಲ್’ ಅನಿಸಿಕೊಳ್ಳಲಿದೆ.

ದ ವಾಷಿಂಗ್ಟನ್ ಪೋಸ್ಟ್ ಸ್ಟೋರಿ ಚರ್ಚೆಯಾಗಲೇ ಇಲ್ಲ

ವಿದೇಶಗಳಲ್ಲಿ ಪ್ರಧಾನಿ ಮೋದಿ ಅವರ ಟೀಕಾಕಾರರಿಗೆ ಮಸಿ ಬಳಿಯಲೆಂದೇ, ದೆಹಲಿಯಿಂದ ’ಡಿಸ್‌ಇನ್ಫೋ ಲ್ಯಾಬ್’ ಎಂಬ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂಬ ಅಮೆರಿಕ ಮೂಲದ ’ದ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ತನಿಖಾ ವರದಿಯನ್ನು ಭಾರತದಲ್ಲಿ ಬಹುತೇಕ ಎಲ್ಲ ಮುಖ್ಯವಾಹಿನಿ ಮಾಧ್ಯಮಗಳು ನಿರ್ಲಕ್ಷಿಸಿದವು. ಗುಪ್ತಚರ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದಿಬ್ಯಾ ಸತ್ಪಥಿ ಎಂಬ ವ್ಯಕ್ತಿ ಶುರು ಮಾಡಿದ ಈ ಸಂಸ್ಥೆ ಇಲ್ಲಿನ ಆಡಳಿತ ಬಿಜೆಪಿ ಪಕ್ಷಕ್ಕೆ ನೆರವಾಗುವಂತಹ ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ನಡೆಸುತ್ತಾರೆಂದು ಆರೋಪಿಸಿರುವ ಈ ಸ್ಫ್ಪೋಟಕ ಮಾಹಿತಿ ಕೂಡ ಚರ್ಚೆಯಿಲ್ಲದೆಯೇ ಸತ್ತುಹೋಯಿತು. ಉಪರಾಷ್ಟ್ರಪತಿ ರಾಜ್ಯಸಭಾ ಸ್ಪೀಕರ್ ಜಗ್‌ದೀಪ್ ಧನಕರ್ ಅವರನ್ನು, ಉಚ್ಚಾಟನೆಗೊಂಡಿರುವ ಪ್ರತಿಭಟನಾನಿರತ ಸಂಸದರೊಬ್ಬರು ಅಣಕಿಸಿದರು ಎಂಬ ಆರೋಪವನ್ನು ದೊಡ್ಡ ಸುದ್ದಿ ಮಾಡಿ ನಿರಂತರವಾಗಿ ಬಿತ್ತರಿಸುವ ಮುಖ್ಯವಾಹಿನಿ ಮಾಧ್ಯಮಗಳಿಗೆ, ಜನಸಾಮಾನ್ಯರ ಯೋಚನೆಯನ್ನು ಪ್ರಭಾವಿಸುವ, ಮ್ಯಾನಿಪ್ಯುಲೇಟ್ ಮಾಡುವ ಸಲುವಾಗಿ ಸಂಸ್ಥೆಯೊಂದು ಸರ್ಕಾರದ ಆಣತಿಯಲ್ಲಿ ಕೆಲಸ ಮಾಡುತ್ತಿದೆ ಎಂಬ ತನಿಖಾ ವರದಿ ಮುಖ್ಯವಾಗಲೇ ಇಲ್ಲ!

ನಿಲ್ಲದ ಇಸ್ರೇಲ್ ಮಾರಣಹೋಮ

ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಅಕ್ಟೋಬರ್‌ನಿಂದ ಇಲ್ಲಿಯವರೆಗೆ (ಡಿಸೆಂಬರ್ 20) ಸುಮಾರು 19 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ. ಪ್ರತಿ ಬಾರಿ ಯುದ್ಧವಿರಾಮಕ್ಕಾಗಿ ವಿಶ್ವಸಂಸ್ಥೆಯಲ್ಲಿ ಎದ್ದಿರುವ ಕೂಗನ್ನು ಅಮೆರಿಕ ತನ್ನ ವಿಟೋ ಅಧಿಕಾರದ ಮೂಲಕ ಸಪ್ರೆಸ್ ಮಾಡುತ್ತಾ ಬರುತ್ತಿದೆ. ಮೊದಲಿಗೆ ಯುದ್ಧ ವಿರಾಮಕ್ಕೆ ವೋಟ್ ಹಾಕುವುದಕ್ಕೆ ನಿರಾಕರಿಸಿ ತಟಸ್ಥವಾಗಿ ಉಳಿಯುತ್ತೇನೆಂದು ಹೇಳಿದ್ದ ಭಾರತ ಈಗ ಯುದ್ಧವಿರಾಮಕ್ಕೆ ಮತ ಹಾಗಿರುವುದೊಂದೇ ಬಹುಶಃ ಸಮಾಧಾನದ ವಿಷಯ. ಆದರೆ ಆ ಕನ್ವಿಕ್ಷನ್ ಎಷ್ಟು ದಿನ ಹಾಗೆಯೇ ಉಳಿಯುತ್ತದೆ ಎಂಬುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.

ಒಟ್ಟಿನಲ್ಲಿ ದೇಶದ ಮಟ್ಟಿಗೆ ಮತ್ತು ಜಾಗತಿಕವಾಗಿ 2023 ದುರಂತಗಳ ಸರಮಾಲೆಯಾಗಿ ನೆನಪಿನಲ್ಲುಳಿಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಗುಜರಾತ್‌ನ ಅದಾನಿ ಬಂದರಿನ ಮೂಲಕ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ...

0
ಗುಜರಾತ್‌ನ ಅದಾನಿ ಬಂದರಿನ ಮೂಲಕ ಟ್ರಕ್‌ಗಳಲ್ಲಿ ಸಾವಿರಾರು ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಾಯಕ್ ಕಟ್ಟಿಕ್ಕರ ಕನ್ನಡಿಗ ಎಂಬ ಫೇಸ್‌ಬುಕ್ ಬಳಕೆದಾರ...