Homeಕರ್ನಾಟಕಪಂಚಮ ಪದ: ಪಂಚಮ ಪತ್ರಿಕೆಗೆ ಗೌರವ ಸಲ್ಲಿಸುವ ವಿಶಿಷ್ಟ ಪ್ರಸ್ತುತಿ

ಪಂಚಮ ಪದ: ಪಂಚಮ ಪತ್ರಿಕೆಗೆ ಗೌರವ ಸಲ್ಲಿಸುವ ವಿಶಿಷ್ಟ ಪ್ರಸ್ತುತಿ

- Advertisement -
- Advertisement -

ಕರ್ನಾಟಕದಲ್ಲಿ ಹತ್ತಾರು ಪತ್ರಿಕೆಗಳು ತಮ್ಮ ಕೆಲಸ ಮಾಡಿ ಬೇರೆಬೇರೆ ಕಾರಣಗಳಿಗೆ ಮರೆಗೆ ಮತ್ತು ಮರೆವಿಗೆ ಸರಿದಿವೆ. ಅಂತಹ ಪತ್ರಿಕೆಗಳ ಸ್ಮರಣೆ ಸಾಂಸ್ಕೃತಿಕ ಲೋಕದಲ್ಲಿ ಆಗಾಗ ನಡೆಯುತ್ತಿರುತ್ತದೆ. ಈ ಸ್ಮರಣೆಯಲ್ಲಿ ಸಣ್ಣ ಸಾಹಿತ್ಯಿಕ ಪತ್ರಿಕೆಗಳಾದ ಸಾಕ್ಷಿ (ಸಂ: ಗೋಪಾಲಕೃಷ್ಣ ಅಡಿಗ), ರುಜುವಾತು (ಸಂ: ಯು ಆರ್ ಅನಂತಮೂರ್ತಿ) ಅಂತಹವು ಸಿಂಹಪಾಲು ಜಾಗ ಪಡೆಯುತ್ತವೆ. ರಾಜಕೀಯ ಮತ್ತು ಸಾಹಿತ್ಯವನ್ನು ಮೇಳೈಸಿದ ಲಂಕೇಶ್ ಪತ್ರಿಕೆ ಕೂಡ ಮತ್ತೆಮತ್ತೆ ಕನ್ನಡ ಬೌದ್ಧಿಕ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತೆ. ಬಹಳ ದೀರ್ಘ ಕಾಲ ನಡೆದ ಸಂಕ್ರಮಣದಿಂದ ಹಿಡಿದು ಒಂದಷ್ಟು ಕಾಲ ನಡೆದು ಪ್ರಾತಿನಿಧ್ಯದ ಪ್ರಶ್ನೆಗೆ ಟೀಕೆಗೆ ಗುರಿಯಾದ ದೇಶಕಾಲದಂತಹ ಸಣ್ಣ ಸಾಹಿತ್ಯ ಪತ್ರಿಕೆಗಳು ಕೂಡ ನೆನಪಿನ ಸಂಭ್ರಮಗಳಲ್ಲಿ ಸದಾ ಭಾಗಿಯಾಗಿರುತ್ತವೆ. ಆದರೆ 70-80ರ ದಶಕದಲ್ಲಿ ಹತ್ತಾರು ವರ್ಷಗಳ ಕಾಲ ದಲಿತ ಸಂಘರ್ಷ ಸಮಿತಿಯ ಮುಖವಾಣಿಯಾಗಿ, ದಲಿತ ದೌರ್ಜನ್ಯಗಳ ಬಗ್ಗೆ ಪ್ರತಿಭಟಿಸಿದ, ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ, ವರದಿಗಳು, ಕಥೆ, ಕವನ, ಹಾಡುಗಳ ಮೂಲಕ ಜನಸಾಮಾನ್ಯರನ್ನು ಎಚ್ಚರಿಸಿ ಅಸಾಮಾನ್ಯ ಕೊಡುಗೆ ನೀಡಿದ ’ಪಂಚಮ’ ಪತ್ರಿಕೆಯ ನೆನಪು ಮೇಲೆ ಹೆಸರಿಸಿದ ಪತ್ರಿಕೆಗಳಷ್ಟು ಸಾಮಾನ್ಯವಾಗಿಲ್ಲ ಅಥವಾ ಆ ನೆನಪನ್ನು ಮರೆಗೆ ಸರಿಸಲಾಗಿದೆ ಎಂದರೂ ಸರಿಯೇ. ಇಂತಹ ಪಕ್ಷಪಾತಿ ಸಾಂಸ್ಕೃತಿಕ ರಾಜಕೀಯವನ್ನು ಪ್ರಶ್ನೆ ಮಾಡುವುದರೊಂದಿಗೆ, ಪಂಚಮ ಪತ್ರಿಕೆಯ ಕೊಡುಗೆ, ದಸಂಸ ಮತ್ತು ದಲಿತ ಹೋರಾಟಗಳನ್ನು ಸ್ಮರಿಸಲು ಜಂಗಮ ತಂಡ ’ಪಂಚಮ ಪದ’ವನ್ನು ಪ್ರಸ್ತುತಪಡಿಸಿದೆ. ಹಾಡುಗಳು, ಪತ್ರಿಕೆಯ ಕೆಲವು ಪ್ರಾತಿನಿಧಿಕ ಬರಹಗಳ ಓದು, ಪ್ರೇಕ್ಷಕರ ಜತೆಗೆ ಸಂವಾದಗಳಿಂದ ಕೂಡಿರುವ ಪಂಚಮ ಪದ ಒಂದು ವಿಶಿಷ್ಟ ಪ್ರಯೋಗ.

ಸುಮಾರು ಮೂರು ದಶಕಗಳ ಹಿಂದೆ, ಕಮ್ಮಸಂದ್ರ ಎಂಬ ಗ್ರಾಮದಲ್ಲಿ ಉತ್ಸವದ ದೇವರು ದಲಿತರ ಕೇರಿಗೆ ಬರದೆ ಇರುವ ಬಗ್ಗೆ, ಪ್ರತಿಭಟನೆಗಳ ನಂತರ ಅದು ಬಂದರೂ ದೂರದಿಂದಲೇ ಪೂಜೆ ಸಲ್ಲಿಸಬೇಕಿದ್ದ ಬಗ್ಗೆ ಬರೆದ ಹಾಡೊಂದನ್ನು (ಮುತ್ತಿನ ಪಲ್ಲಕ್ಕಿ ಮುಟ್ಟಾದ ಮುಟ್ಟಿದರೆ ಅನ್ಯಾಯವೇನಣ್ಣ) ಪ್ರಸ್ತುತಪಡಿಸುವ ಮೂಲಕ 22 ಏಪ್ರಿಲ್ 2024ರಂದು ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಪಂಚಮ ಪದ ಪ್ರಸ್ತುತಿ ಆರಂಭವಾಯಿತು. ಆ ಹಾಡಿನ ಭಾವ ಮರಿಯಮ್ಮ ಅವರ ಮುಖದಲ್ಲಿ ಸಮಾಜದ ಬಗ್ಗೆ ಸಿಟ್ಟಿನ ಅವತರಣಿಕೆಯಾಗಿ ಮೈದಾಳಿತ್ತು; ಹಾಡಿನ ಕೊನೆಯಲ್ಲಿ, ಕಮ್ಮಸಂದ್ರ ಗ್ರಾಮದಲ್ಲಿ ಈ ರೀತಿ ಮಾಡಿದ್ದು ತಪ್ಪಲ್ಲವೇ ಎಂದು ಸಭಿಕರನ್ನು ಪ್ರಶ್ನಿಸಿದರೆ, ಒಂದಷ್ಟು ಹೊತ್ತು ಮೌನವಾಗಿದ್ದ ಸಭೆ, ನಂತರ ಅಲ್ಲಲ್ಲಿ ಹೌದು-ತಪ್ಪು ಎಂಬ ಉತ್ತರ ಕೇಳಿಬಂತು. ಪಂಚಮ ಪದ ಪ್ರಸ್ತುತಿಯುದ್ದಕ್ಕೂ ಪ್ರೇಕ್ಷಕರನ್ನು ತುಸು ತಬ್ಬಿಬ್ಬುಗೊಳಿಸುವ ಮತ್ತು ಪ್ರಶ್ನಿಸುವ ನಿಟ್ಟಿನಲ್ಲಿ ಕಟ್ಟಿರುವ ಸಂಭಾಷಣೆಗಳು ಬಹಳ ಗಟ್ಟಿ ದನಿಯಲ್ಲಿ ಮೂಡಿಬಂದಿರುವುದು, ಶತಮಾನಗಳ ದಬ್ಬಾಳಿಕೆ ಇಂದಿಗೂ ಕೊನೆಯಾಗದಿರುವುದನ್ನು ಪ್ರತಿನಿಧಿಸಿದೆ ಎಂದೆನಿಸುತ್ತದೆ. ಮುಂದುವರಿದು ಅಂದು ದಲಿತರ ಮೇಲಿನ ದೌರ್ಜನ್ಯಗಳ ಕಥೆಯನ್ನು ಹೇಳಲು ಪಂಚಮವೇ ಬರಬೇಕಾಯಿತು, ಪಂಚಮವನ್ನು ನೆನಪಿಸಿಕೊಳ್ಳಲು ಜಂಗಮವೇ ಬರಬೇಕಾಯಿತು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಪ್ರೇಕ್ಷಕರನ್ನು ಆಹ್ವಾನಿಸುತ್ತದೆ.

ನಂತರ ಬಾನಂದೂರ ಕೆಂಪಯ್ಯ ಅವರ ಜನಿವಾರದ ಕಥೆಯ ಪ್ರಸ್ತುತಿ, ಅವರು ಸಂಗ್ರಹಿಸಿದ್ದ ಜನಪದ ಗೀತೆ ’ತನುವಿನೊಳಗನುದಿನವಿದ್ದು’ ಗಾಯನದ ಮೂಲಕ ಮುಂದುವರಿಯುತ್ತದೆ. ಕುಣಿಗಲ್ ತಾಲೂಕಿನ ದಾಸನಪುರದಲ್ಲಿ ನಡೆದ ಚಿಕ್ಕತಿಮ್ಮಯ್ಯನವರ ಕೊಲೆಯ ವರದಿ, ಅದರ ಸುತ್ತ ಕವಿ-ಸಾಹಿತಿ ಕೆ.ಬಿ ಸಿದ್ದಯ್ಯ ಅವರು ಕಟ್ಟಿದ ಹಾಡು, ಕೋಲಾರದ ಅನಸೂಯಮ್ಮ ಅತ್ಯಾಚಾರ ಮತ್ತು ಶೇಷಗಿರಿಯಪ್ಪ ಕೊಲೆ ಪ್ರಕರಣಗಳು, ಅದರ ಸುತ್ತ ನಡೆದ ಹೋರಾಟ ಎಲ್ಲವೂ ಹೇಗೆ ಪಂಚಮ ಪತ್ರಿಕೆಯಲ್ಲಿ ಪ್ರತಿಧ್ವನಿಸಿತ್ತು ಎಂಬುದು ಓದು ಮತ್ತು ಹಾಡುಗಳ ಮೂಲಕ ರಂಗದ ಮೇಲೆ ಮಾರ್ದನಿಸುತ್ತದೆ. ಕೆ ಚಂದ್ರಶೇಖರ್ (ಈ ಪ್ರಸ್ತುತಿಯ ನಿರ್ದೇಶಕರು ಕೂಡ), ಮರಿಯಮ್ಮ, ಶ್ರದ್ಧಾ, ಲಕ್ಷ್ಮಣ್, ಭರತ ಡಿಂಗ್ರಿ, ಶ್ವೇತಾ ಎಚ್ ಕೆ ನಂದಿನಿ ಮತ್ತು ನರಸಿಂಹರಾಜು ಒಬ್ಬರನಂತರಒಬ್ಬರು ಮೈಕ್ ಹಿಡಿದು, ಕೆ ಬಿ ಸಿದ್ದಯ್ಯ, ಸಿದ್ದಲಿಂಗಯ್ಯ, ಬಾನಂದೂರು ಕೆಂಪಯ್ಯ, ಜೆನ್ನಿ, ಕೆ ರಾಮಯ್ಯ, ಇಂಧೂದರ ಹೊನ್ನಾಪುರ, ದೇವನೂರ ಮಹಾದೇವ ಇವರುಗಳ ಬರಹಗಳನ್ನ ಪರ್ಫಾಮ್ ಮಾಡುತ್ತಾ, ಹಾಡುಗಳನ್ನು ಹಾಡುತ್ತಾ, ತಾವೇ ಅವರಾಗಿ, 70-80ರ ದಶಕದ ದೌರ್ಜನ್ಯಗಳ ಕಡೆಗೆ, ಅವುಗಳ ವಿರುದ್ಧ ನಡೆದ ಹೋರಾಟಗಳ ಕಡೆಗೆ ಗಮನ ಸೆಳೆಯುತ್ತಾರೆ. ಈ ಪ್ರದರ್ಶನದಲ್ಲಿ ಈ ಹಿಂದಿನ ’ಮುಖ್ಯವಾಹಿನಿ’ ಏಸ್ಥೆಟಿಕ್‌ಅನ್ನು ಮುರಿಯುತ್ತಾ, ಅರೆ ಮತ್ತು ತಮೆಟೆಯ ವಾದ್ಯಗಳ ಶಬ್ದಗಳೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿ, ಕೇಳಿ ಗುನುಗಿ ಬಿಟ್ಟುಬಿಡಬಹುದಾಗಿದ್ದ ಭಾವದಿಂದ ಪ್ರೇಕ್ಷಕರನ್ನು ಬೇರೆಡೆ ಹೊರಳಿಸಿ, ಅವರನ್ನು ಬೌದ್ಧಿಕವಾಗಿ ಬಡಿದೆಬ್ಬಿಸಲು ತಂಡ ಪ್ರಯತ್ನಿಸುತ್ತದೆ. ಆ ನಿಟ್ಟಿನಲ್ಲಿ ಮೂಡಿರುವ ಸಿದ್ದಲಿಂಗಯ್ಯನವರ ’ಇಕ್ರಲ, ಒದಿರ್ಲ’ ಕಾಂಪೊಸಿಷನ್ ಹೆಚ್ಚು ಅರ್ಥಪೂರ್ಣವಾಗಿಯೂ, ಹೆಚ್ಚು ಪ್ರವೊಕೆಟಿವ್ ಆಗಿಯೂ ಕೇಳಿಸುತ್ತದೆ. ಸಿದ್ದಲಿಂಗಯ್ಯನವರ ’ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’, ಆರ್ ಮಾನಸಯ್ಯನವರ ’ಸತ್ತಂತ ತೊಗಲಿಗೆ’, ಇಂಧೂದರ ಹೊನ್ನಾಪುರ ಅವರ ’ಕಪ್ಪು ಮನುಜರು ನಾವು..’- ಹೀಗೆ ಹಲವು ಹಾಡುಗಳ ಪ್ರಸ್ತುತಿ, ’ಬತ್ತಿದ ನೆಲಕ್ಕಾಗಿ ಎಚ್ಚೆತ್ತ ಜನಕ್ಕಾಗಿ ಮುತ್ತಿನ ಮಳೆಯ ನಾವು ಕರೆಯೋಣ’ ಎಂಬಂತೆ ಶೋಷಕ ಹಿನ್ನೆಲೆಯಿಂದ ಬಂದವರು ಬದಲಾವಣೆಗೆ ತೆರೆದುಕೊಂಡು ಎಲ್ಲರನ್ನು ಒಳಗೊಳ್ಳಬೇಕಾದ ವಿವೇಕಕ್ಕೆ ಕರೆಕೊಡುತ್ತದೆ.

ಈ ಪ್ರಸ್ತುತಿಯಲ್ಲಿ ಕೆಲವು ಆಸಕ್ತಿಕಾರಕ ಸಂಗತಿಗಳು ಕೂಡ ಸುಳಿಯುತ್ತವೆ. ಅಂತಹುದರಲ್ಲಿ ಒಂದು, ದೇವನೂರ ಮಹದೇವರ ಬೀಡಿ ಕುಂಚವಾಗಿ, ದಸಂಸ ಪ್ರಕಟಿಸಿದ ’ಹೋರಾಟದ ಹಾಡುಗಳ’ ಮುಖಪುಟ ರಚನೆಯಾಗಿದ್ದು.

ಪಂಚಮಕ್ಕೆ, ದಲಿತ ಹೋರಾಟಕ್ಕೆ ಗೌರವ ಸಲ್ಲಿಸುವ ಪ್ರಸ್ತುತಿಯ ನಡುವೆಯೇ, ಈ ರಂಗತಂಡ ಇದೇ ಪ್ರಸ್ತುತಿಯನ್ನು ಇಂದಿನ ಹೊಸ ಚಿಂತನೆಗಳ ಚರ್ಚೆಯ ಹಿನ್ನೆಲೆಯಲ್ಲಿ ತಮ್ಮ ಹೋರಾಟಗಳನ್ನು ರಿಫ್ಲೆಕ್ಟ್ ಮಾಡಿಕೊಳ್ಳುವುದಕ್ಕೂ ಬಳಸಿಕೊಂಡಿದೆ. ಅನಸೂಯಮ್ಮ ಹೋರಾಟದ ಭಾಗವಾಗಿ ಕೆ ರಾಮಯ್ಯನವರು ರಚಿಸಿದ ಸಾಹಿತ್ಯದಲ್ಲಿ ಇರುವ ಮತ್ತು ಹೋರಾಟದಲ್ಲಿ ಹೆಚ್ಚು ಮಹಿಳೆಯರನ್ನು ತೊಡಗಿಸಿಕೊಳ್ಳದೆ ಪುರುಷರೇ ಲೀಡ್ ಮಾಡಿದ ಪೇಟ್ರಿಯಾರ್ಕಲ್ ಸಮಸ್ಯೆಯ ಬಗ್ಗೆ ರಾಮಯ್ಯನವರ ಮಗಳು ದಿಶಾ ಬರೆಯುವ ಪತ್ರವನ್ನು ಓದುವ ಮೂಲಕ ವಿಶಾಲ ಪ್ರಾತಿನಿಧಿಕ ದಾರಿಯನ್ನು ರಂಗತಂಡ ಶೋಧಿಸಿಕೊಳ್ಳುತ್ತದೆ ಮತ್ತು ಈ ಪ್ರಸ್ತುತಿಯ ತಂಡದ ಕಾಂಪೊಸಿಷನ್‌ನಲ್ಲೂ ಅದು ಧನಾತ್ಮಕವಾಗಿ ರಿಫ್ಲೆಕ್ಟ್ ಆಗತ್ತೆ. ಈ ರೀತಿಯಲ್ಲಿ ಪ್ರಚೋದನೆಯ ಜತೆಗೆ ತಾನೂ ಹೇಗೆ ಪ್ರಶ್ನಿಸಿಕೊಂಡಿದ್ದೇನೆ ಎಂದು ತೋರಿಸುವ ಜಂಗಮ ತಂಡದ ಈ ಪ್ರಸ್ತುತಿ ಮರೆವಿಗೆ ಸರಿಸುವ ಸಾಂಸ್ಕೃತಿಕ ರಾಜಕೀಯದ ವಿರುದ್ಧ ಹೇಳಿಕೆಯೂ ಹೌದು ಮತ್ತು ಪ್ರಾತಿನಿಧ್ಯವನ್ನು ಸರಿಪಡಿಸಿಕೊಳ್ಳುವ ಆಹ್ವಾನವೂ ಹೌದು.

ಆಸಕ್ತಿದಾಯಕ ಪ್ರಯೋಗ

ಈ ಪ್ರಸ್ತುತಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ಮಾಡಿರುವ ಪ್ರಯೋಗ ಉಲ್ಲೇಖನೀಯ. ಈ ಹೋರಾಟದ ಕಥನಗಳ ನಡುವೆ ಒಂದೈದು ನಿಮಿಷ ಬ್ರೇಕ್ ನೀಡಿ, ಪ್ರೇಕ್ಷಕರಿಗೆ ತಮ್ಮ ಹೋರಾಟದ ಅನುಭವಗಳನ್ನು, ನೋವಿನ ಕಥೆಗಳನ್ನು ನಿವೇದಿಸಿಕೊಳ್ಳಲು ಆಹ್ವಾನ ನೀಡುತ್ತದೆ. ನಾನು ನೋಡಿದ ಪ್ರದರ್ಶನದಲ್ಲಿ ಬ್ರಾಹ್ಮಣ ಸಮುದಾಯದ ಇಬ್ಬರು, ಜನಿವಾರ ಹಾಕಿಕೊಂಡಾಗ ಸಣ್ಣ ಮಕ್ಕಳಿಗಾಗುವ ಆಘಾತ ಮತ್ತು ನೋವಿನ ಕಥೆಗಳನ್ನು ಹಂಚಿಕೊಂಡರು.

ಪ್ರಸ್ತುತಿಯ ಕೊನೆಗೆ ನಡೆದ ಪ್ರಶ್ನೋತ್ತರ ಸಂವಾದವೂ ಆಸಕ್ತಿದಾಯಕ ಮಾತುಕತೆಗೆ ಸಾಕ್ಷಿಯಾಯಿತು. ಈ ಕಾಲಘಟ್ಟದಲ್ಲಿಯೂ ’ಇಕ್ರಲಾ ಒದಿರ್ಲಾ’ ಎಂಬ ಪ್ರವೊಕೇಶನ್ ಬೇಕಾ ಎನ್ನುವ ಪ್ರಶ್ನೆಗೆ, ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಿಜವಾಗಿಯೂ ತಾರತಮ್ಯಗಳು ನಿಂತಿವೆಯೇ ಎಂಬ ಮರುಪ್ರಶ್ನೆ ಬಂದಿತು ರಂಗತಂಡದಿಂದ. ಈ ದೌರ್ಜನ್ಯನ ಕಥೆಗಳನ್ನು ನೀವು ಹೇಳುವಾಗ ಮಾನಸಿಕವಾಗಿ ಕುಗ್ಗಿಹೋಗುವುದಿಲ್ಲವೇ ಎಂಬ ಪ್ರಶ್ನೆಗೆ, ಇದನ್ನು ನಟನೆಗೆ ಒಗ್ಗಿಸಿಕೊಳ್ಳದೆ, ಓದು ಹಾಡಿನ ಪ್ರದರ್ಶನ ನೀಡುತ್ತಿರುವುದಕ್ಕೆ ಅದೂ ಒಂದು ಕಾರಣ ಎಂದಿತು ತಂಡ. ಬೇರೆಬೇರೆ ಶೋಗಳಲ್ಲಿ ಕುಹಕದ, ವ್ಯಂಗ್ಯದ ಮತ್ತು ಅವಮಾನಿಸುವ ಪ್ರತಿಕ್ರಿಯೆಗಳು ಬಂದಿದ್ದನ್ನು ಜಂಗಮ ತಂಡ ನರೇಟ್ ಮಾಡಿತು. ಈ ಮಟ್ಟಿಗೆ ಪ್ರೇಕ್ಷಕರನ್ನು ಚಿಂತಿಸುವಂತೆ ಪ್ರಚೋದಿಸಲು ಈ ಪ್ರಸ್ತುತಿ ನಿಜಕ್ಕೂ ಯಶಸ್ವಿಯಾಗಿದೆ ಎನ್ನಬಹುದು.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...