Homeಅಂಕಣಗಳುನಾಲ್ಕು ನೂರು ಗೆಲ್ಲಲು ಇಷ್ಟು ಸುಳ್ಳುಗಳು ಸಾಕಾಗುವುದಿಲ್ಲವೇ!?

ನಾಲ್ಕು ನೂರು ಗೆಲ್ಲಲು ಇಷ್ಟು ಸುಳ್ಳುಗಳು ಸಾಕಾಗುವುದಿಲ್ಲವೇ!?

- Advertisement -
- Advertisement -

ಚುನಾವಣೆಯ ಸಮಯದಲ್ಲಿ ವಿವಿಧ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದು, ಕೆಲವೊಮ್ಮೆ ಮಾತಿನ ಭರದಲ್ಲಿ ಗೆರೆ ದಾಟುವುದು- ಇವೆಲ್ಲಾ ಸಾಮಾನ್ಯ. ಇಂಥದನ್ನು ಹದ್ದುಬಸ್ತಿನಲ್ಲಿ ಇಡಲೆಂದೇ ಚುನಾವಣಾ ಆಯೋಗ ಹಲವು ನೀತಿಸಂಹಿತೆಗಳನ್ನು ಸೃಷ್ಟಿಸಿ ಹದ್ದಿನ ಕಣ್ಣಿಟ್ಟು ಕಾಯಬೇಕಿದೆ; ಇದು ಅದರ ಹಲವು ಕರ್ತವ್ಯಗಳಲ್ಲಿ ಅತಿ ಪ್ರಮುಖವಾದದ್ದು. ಸುಳ್ಳು, ದ್ವೇಷಗಳು ಚುನಾವಣಾ ಭಾಷಣಗಳಲ್ಲಿ ನುಸುಳದಂತೆ ಅದು ಎಚ್ಚರ ವಹಿಸಬೇಕು. ಚುನಾವಣಾ ನೀತಿಸಂಹಿತೆಯ ಪ್ರಕಾರ ’ಯಾವುದೇ ಪಕ್ಷವಾಗಲೀ ಅಥವಾ ಅಭ್ಯರ್ಥಿಯಾಗಲೀ, ಜಾತಿಗಳ ಮತ್ತು ಸಮುದಾಯಗಳ ನಡುವೆ, ಧಾರ್ಮಿಕ ಅಥವಾ ಭಾಷಿಕವಾಗಿ, ಪರಸ್ಪರ ದ್ವೇಷಿಸುವ ಅಥವಾ ಉದ್ವಿಘ್ನ ಪರಿಸ್ಥಿತಿ ಉಂಟುಮಾಡುವ ಅಥವಾ ಈಗಿರುವ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವಂತಹ ಯಾವುದೇ ಕ್ರಿಯೆಯಲ್ಲಿ ಭಾಗಿಯಾಗಬಾರದು’. ವಿರೋಧ ಪಕ್ಷಗಳ ಪಾಲಿಗೆ ಚುನಾವಣಾ ಆಯೋಗ ಕಾಯುವ ಕೆಲಸವನ್ನು ಒಂದು ಮಟ್ಟಿಗೆ ಮಾಡುತ್ತಿದೆಯಾದರೂ, ಒಕ್ಕೂಟದಲ್ಲಿ ಸದ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಸದಸ್ಯರ ಭಾಷಣಗಳಿಗೆ ಅದರ ಕಿವಿ ಮತ್ತು ಕಣ್ಣು ಮುಚ್ಚಿಹೋಗಿದೆ. ಇನ್ನು ಪ್ರಧಾನ ಮಂತ್ರಿ ಮೋದಿಯವರ ಚುನಾವಣಾ ಭಾಷಣಗಳಿಗೆ ಲಂಗುಲಗಾಮೇ ಇಲ್ಲದಂತೆ ಆಗಲು ಚುನಾವಣಾ ಆಯೋಗದ ಪಕ್ಷಪಾತಿ ನಿಷ್ಕ್ರಿಯತೆ ಕೂಡ ಮುಖ್ಯ ಕಾರಣ. ಚುನಾವಣಾ ಆಯೋಗದ ನಿಷ್ಕ್ರಿಯತೆಯನ್ನು ಹೊರತುಪಡಿಸಿ ಹೇಳುವುದಾದರೂ, ಇಲ್ಲಿಯವರೆಗೂ ಪ್ರಧಾನ ಮಂತ್ರಿಯ ಹುದ್ದೆಯಲ್ಲಿದ್ದವರು ಆ ಹುದ್ದೆಯ ಘನತೆಯ ಕಾರಣವೂ ಸೇರಿದಂತೆ ತಮ್ಮ ಮಾತುಗಳು ತೂಕ ಕಳೆದುಕೊಳ್ಳಬಾರದೆಂಬ ಎಚ್ಚರಿಕೆ ವಹಿಸುತ್ತಿದ್ದರು; ಆದರೆ ಸದರಿ ಪ್ರಧಾನಿ ಮೋದಿಯವರು ಇಂತಹ ಯಾವುದೇ ಎಚ್ಚರಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿಲ್ಲ. ಸೀಮಾತೀತವಾಗಿ ವಿರೋಧಪಕ್ಷಗಳ ವಿರುದ್ಧ ದಾಳಿ ಮಾಡುತ್ತಾ, ಸುಳ್ಳಾದರೆ ಸುಳ್ಳು, ದಾರಿ ತಪ್ಪಿಸುವ ಮಾತಾದರೆ ಅದೂ ಇರಲಿ ಎಂದು ಮುನ್ನುಗ್ಗಿದ್ದಾರೆ. ಈ ಬಾರಿ 400 ದಾಟುತ್ತೇವೆ ಎಂಬ ಹುಸಿ ಪ್ರತಿಪಾದನೆಗೋಸ್ಕರ ಎಷ್ಟಾದರೂ ಸುಳ್ಳುಗಳ ಸರಮಾಲೆಯನ್ನು ಪೋಣಿಸಬಹುದೇ ಎಂಬುದು ಸಾಮಾನ್ಯ ನಾಗರಿಕರ ಪ್ರಶ್ನೆಯಾಗಿದೆ.

ಏಪ್ರಿಲ್ 19ರಂದು ಈ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವಾಯಿತು. ತಮಿಳುನಾಡಿನಲ್ಲಿ ಎಷ್ಟೇ ಸರ್ಕಸ್ ಮಾಡಿದರೂ ಎಲ್ಲಾ 39 ಸೀಟುಗಳನ್ನು ಡಿಎಂಕೆ ಗೆಲ್ಲುವ ಪರಿಸ್ಥಿತಿ ಇದೆ ಎಂಬ ಸಮೀಕ್ಷೆಗಳ ಕಾರಣಕ್ಕೂ, ತಮ್ಮ ಭದ್ರಕೋಟೆ ಎನಿಸಿಕೊಂಡಿದ್ದ ಉತ್ತರ ಪ್ರದೇಶದಲ್ಲಿಯೂ ಮುನ್ನಡೆ ಕಾಯ್ದುಕೊಳ್ಳಲು ಕಷ್ಟದ ಪರಿಸ್ಥಿತಿ ಇದೆ ಎಂಬ ವರದಿಗಳ ನಡುವೆ ಮೋದಿ ತಮ್ಮ ಭಾಷಣಗಳಲ್ಲಿ ಮತ್ತಷ್ಟು ಅಗ್ರೆಸ್ಸಿವ್ ಆದರು. ಏಪ್ರಿಲ್ 21ರಂದು ರಾಜಸ್ಥಾನದ ಬನಸವಾರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಸುಳ್ಳುಗಳ ಮಳೆಗೈದರು. ‘ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಕಸಿಯಲಿದೆ; ನಿಮ್ಮ ಆಸ್ತಿಯನ್ನು ಕಸಿದು ನುಸುಳುಕೋರರಿಗೆ ಮತ್ತು ಹೆಚ್ಚು ಮಕ್ಕಳನ್ನು ಹೆರುವವರಿಗೆ ಹಂಚಲಿದೆ’ (ಮುಸಲ್ಮಾನರನ್ನು ಗುರಿಯಾಗಿಸಿಕೊಂಡು) ಎಂದರು. ಹಿಂದಿನ ಮನಮೋಹನ್ ಸಿಂಗ್ ಸರ್ಕಾರ ಭಾರತದ ಸಂಪನ್ಮೂಲಗಳ ಮೇಲೆ ಮುಸಲ್ಮಾನರಿಗೆ ಮೊದಲ ಹಕ್ಕಿದೆ ಎಂದಿದೆ ಎಂಬ ಸುಳ್ಳನ್ನೂ ಹಿಂಜರಿಕೆಯಿಲ್ಲದೆ ಓಡಿಸಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದೆ ಎಂದು ಹೇಳಿದ ಮಾತು ಸುಳ್ಳಾದರೆ, ಮುಸಲ್ಮಾನರನ್ನು ನುಸುಳುಕೋರರು ಎಬಂತೆ ರೆಫರ್ ಮಾಡಿದ್ದು ದ್ವೇಷದ ನುಡಿ ಮತ್ತು ಮನಮೋಹನ್ ಸಿಂಗ್ ಸರ್ಕಾರದ ಹೇಳಿಕೆ ಎಂದು ಭಾಷಣ ಬಿಗಿದಿದ್ದು ತಿರುಚಿದ ಮಾತು ಎಂಬುದು ಈಗ ಜಗಜ್ಜಾಹೀರವಾಗಿದೆ. ಹೀಗಿದ್ದರೂ ಚುನಾವಣಾ ಆಯೋಗ ಹಲ್ಲು ಕಿತ್ತ ಹಾವಿನಂತಾಗಿದೆ; ಕನಿಷ್ಟ ಪಕ್ಷ ಬುಸುಗುಡುವ ನಾಟಕವನ್ನು ಕೂಡ ಆಡುತ್ತಿಲ್ಲ.

ಇಷ್ಟಕ್ಕೆ ಈ ಸುಳ್ಳಿನ ಸರಮಾಲೆ ನಿಲ್ಲಲಿಲ್ಲ. ಏಪ್ರಿಲ್ 22ರಂದು ಅಲಿಘರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿಯ ಸರ್ವೇ ಮಾಡಿ ಅದನ್ನು ಮರುಹಂಚಿಕೆ ಮಾಡಲಿದೆ ಎಂದು ಅದರ ಪ್ರಣಾಳಿಕೆ ಹೇಳುತ್ತದೆ ಎಂದು, ಅದೊಂದು ಭಯಭೀತಿಯ ಸಂಗತಿ ಎಂಬಂತೆ ಪ್ರಧಾನಿ ಮೋದಿ ಹೇಳಿದರು. ಮರುಹಂಚಿಕೆಯ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಅಷ್ಟು ಸ್ಪಷ್ಟವಾಗಿ ಏನೂ ಹೇಳದೇ ಇದ್ದರೂ, ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಿರುಚಿ ಮಾಡಿದ ಭಾಷಣ ಅದಾಗಿತ್ತು. ಅಷ್ಟಕ್ಕೂ ಯಾರಾದರೂ ಮರುಹಂಚಿಕೆಯ ಮಾತುಗಳನ್ನು ಆಡಿದರೆ ಅದು ಮೋದಿ ಗೆಳೆಯರಾದ ಅದಾನಿ ಮತ್ತು ಅಂಬಾನಿಯಂಥವರ ಆಸ್ತಿಗೆ ತೆರಿಗೆಗಳನ್ನು ಹಾಕಿ ಮರುಹಂಚಿಕೆಯ ಮಾತುಗಳನ್ನಾಡುತ್ತಾರೆಯೇ ಹೊರತು, ಬಡಬಗ್ಗರ ಅಥವಾ ದಮನಿತರ ಬಳಿ ಇರುವ (ಸಾಮಾನ್ಯವಾಗಿ ಇರದಿರುವ) ಹಣ-ಆಸ್ತಿಯ ಬಗ್ಗೆ ಮಾತನಾಡುವುದಿಲ್ಲ. ಆದರೂ ತಾನು ಏನನ್ನಾದರೂ ಮಾತಾಡಿ ಮಂಕುಬೂಧಿ ಎರಚಬಹುದು ಎಂಬ ಮೋದಿಯವರ ಆತ್ಮಸ್ಥೈರ್ಯಕ್ಕೆ ದೊಡ್ಡಪೆಟ್ಟು ಬೀಳುವ ಸಾಧ್ಯತೆಗಳ ಬಗೆಗಿನ ವಿಶ್ಲೇಷಣೆಗಳ ನಡುವೆಯೂ ಅವರ ಫೇಕ್ ನರೆಟಿವ್‌ಗಳು ಎಗ್ಗಿಲ್ಲದೆ ಮುಂದುವರಿಯುತ್ತಲೇ ಇವೆ.

ಈ ಪಟ್ಟಿ ಇಲ್ಲಿಗೆ ನಿಲ್ಲುವುದಿಲ್ಲ. ಉತ್ತರಾಧಿಕಾರಿ ಆಸ್ತಿ ತೆರಿಗೆ ಬಗೆಗೆ, ಅಲ್ಪಸಂಖ್ಯಾತರ ಮೀಸಲಾತಿ ಬಗೆಗೆ ಸುಳ್ಳುಗಳ ಕಂತೆಯನ್ನು ಬಿಚ್ಚುತ್ತಿದ್ದಾರೆ. ತಳ ಸಮುದಾಯಗಳ ಮನಸ್ಸಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ದ್ವೇಷ ತುಂಬುವಂತಹ ಮಾತುಗಳನ್ನು ಮೀಸಲಾತಿ ವಿಷಯದ ಜತೆಗೆ ಬೆರೆಸಿ ಆಡುತ್ತಿದ್ದಾರೆ. ಇನ್ನೂ ಅವರ ತೆಕ್ಕೆಯಲ್ಲಿ ಎಂತೆಂಥ ದ್ವೇಷಪೂರಿತ ಸುಳ್ಳುಗಳ ತುಂಬಿವೆಯೋ ಊಹಿಸಲು ಅಸಾಧ್ಯ. ಹತ್ತು ವರ್ಷಗಳ ತಮ್ಮ ಅಧಿಕಾರಾವಧಿಯ ಸಾಧನೆಗಳು ಬಗ್ಗೆ ಹೇಳಿಕೊಳ್ಳುವಂಥದ್ದು ಏನಿಲ್ಲವಾದ್ದರಿಂದ ಇಂಥ ಮನೆಮುರುಕ ಮಾತುಗಳ ಮೊರೆ ಹೋಗುವ ಒತ್ತಡದಲ್ಲಿ ಅವರಿದ್ದಾರೆ. ಆದರೆ ಈಗ ಅದು ಜನಸಾಮಾನ್ಯರಿಗೆ ತಿಳಿಯದ ವಿಷಯವಾಗೇನೂ ಉಳಿದಿಲ್ಲ.

ಈಗ ಮೂರನೇ ಸುತ್ತಿನ ಮತದಾನ ಮೇ7ರಂದು ನಡೆಯಲಿದೆ. ಕರ್ನಾಟಕದ ಉಳಿದ 14 ಕ್ಷೇತ್ರಗಳ ಮತದಾನ ಅಂದು ನಡೆಯಲಿದೆ. ಬಹುತೇಕ ಆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಮತ್ತು ಕೆಲವು ಕಡೆ ಸಮಬಲದ ಸ್ಪರ್ಧೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಉತ್ತರಪ್ರದೇಶದಲ್ಲಿಯೂ ಬಿಜೆಪಿಗೆ ನೆಲ ಮೊದಲಿನಂತಿಲ್ಲ. 2019ರಲ್ಲಿ ಗೆದ್ದ 62 ಸ್ಥಾನಗಳನ್ನು ಉಳಿಸಿಕೊಳ್ಳಲು ಕಷ್ಟ ಎಂಬ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರ ಚುನಾವಣಾ ಭಾಷಣಗಳ ಮಟ್ಟ ಇನ್ನೂ ಪಾತಾಳಕ್ಕೆ ಕುಸಿಯುವುದನ್ನು ಊಹಿಸಲು ಕಷ್ಟವೇನಿಲ್ಲ.

ಇದನ್ನೂ ಓದಿ : ಕಳೆದ ಒಂದು ವರ್ಷದಲ್ಲಿ ಒಂದು ಬಾರಿಯೂ ಮಣಿಪುರಕ್ಕೆ ತೆರಳದ ಮೋದಿ: ಈ ಅವಧಿಯಲ್ಲಿ ವಿವಿಧ…

ಆದರೆ ಈ ಬಾರಿ ಜನ ಈ ಸುಳ್ಳು ಮತ್ತು ದ್ವೇಷಪೂರಿತ ಭಾಷಣಗಳನ್ನು ಸುಲಭವಾಗಿ ನಂಬುವ ಸ್ಥಿತಿಯಲ್ಲಿಲ್ಲ. ಜನ ಬೆಲೆ ಏರಿಕೆ, ನಿರುದ್ಯೋಗ, ಅಸಮಾನತೆ, ಸರ್ಕಾರದ ಕಾರ್ಪೊರೆಟ್ ಹಿತಾಸಕ್ತಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಎನ್ನುತ್ತಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳಷ್ಟು ಸಂಪನ್ಮೂಲಗಳು ಇಲ್ಲದೇ ಇದ್ದರೂ ಜನಪರ ಮಾಧ್ಯಮಗಳು ಬಿಜೆಪಿ ಪಕ್ಷದ ಸುಳ್ಳ್ಳುಗಳನ್ನು ಬಯಲಿಗೆಳೆದು ಮನೆಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಈ ಎಚ್ಚೆತ್ತ ಪರಿಸ್ಥಿತಿಯಲ್ಲಿ ಅಧಿಕಾರದ ದುರ್ಬಳಕೆ ಎಷ್ಟೇ ದೊಡ್ಡಮಟ್ಟದಲ್ಲಿದ್ದರೂ ಅದು 2019ರಂತೆ ಸಫಲವಾಗಲು ಜನಸಾಮಾನ್ಯರ ’ನಂಬಿಕೆ’ ಫ್ಯಾಕ್ಟರ್ ಈ ಬಾರಿ ಕೈಕೊಡುತ್ತಿದೆ. ಈ ನಿಟ್ಟಿನಲ್ಲಿ 400 ಸೀಟುಗಳನ್ನು ಗೆಲ್ಲಲು ಇಷ್ಟು ಸುಳ್ಳುಗಳು ಖಂಡಿತಾ ಸಾಕಾಗುವುದಿಲ್ಲ ಎಂದು ಅವರು ನಂಬಿದ್ದಾರೆ. ಅದಕ್ಕಾಗಿ ಇನ್ನೂ ಹೆಚ್ಚು ಸುಳ್ಳುಗಳನ್ನು ಹೇಳಬೇಕು. ಫೇಕ್ ಫ್ಯಾಕ್ಟರಿ ಹೆಚ್ಚೆಚ್ಚು ಉತ್ಪಾದಿಸಬೇಕು, ಜನರ ವಿಶ್ವಾಸಕ್ಕೆ ವಿವೇಕಕ್ಕೆ ಸವಾಲು ಎಸೆಯಬೇಕು! ಆದರೆ ಇದು ಸುಲಭಕ್ಕೆ ಕೈಗೂಡುತ್ತಿಲ್ಲ ಎನ್ನುವಂತಿದೆ ಚುನಾವಣಾ ವಾತಾವರಣ; ಜೂನ್ ನಾಲ್ಕಕ್ಕೆ ಫಲಿತಾಂಶ ಕಂಡುಕೊಳ್ಳಬೇಕು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಆಲ್ ಐಸ್ ಆನ್ ರಫಾ’: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡ ಪೋಸ್ಟ್‌ನ ಅರ್ಥವೇನು?

0
ಇಸ್ರೇಲ್‌ ರಫಾ ಮೇಲಿನ ಆಕ್ರಮಣದ ಮಧ್ಯೆ 'ಆಲ್ ಐಸ್ ಆನ್ ರಫಾ' ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡಿದೆ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಈ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಟ ದುಲ್ಕರ್...