Homeಮುಖಪುಟದ್ವೇಷ ಭಾಷಣ ಪ್ರಕರಣ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಖುಲಾಸೆ

ದ್ವೇಷ ಭಾಷಣ ಪ್ರಕರಣ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಖುಲಾಸೆ

- Advertisement -
- Advertisement -

2019ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರನ್ನು ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯವು ಬುಧವಾರ ದೋಷಮುಕ್ತಗೊಳಿಸಿದೆ.

ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಳೆದ ವರ್ಷ (2022ರ) ಅಕ್ಟೋಬರ್‌ನಲ್ಲಿ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಅವರು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಇದರ ಪರಿಣಾಮವಾಗಿ ಉಪಚುನಾವಣೆ ನಡೆಯಿತು.

ಸಮಾಜವಾದಿ ಪಕ್ಷದ ಪ್ರಮುಖ ನಾಯಕ ಅಜಂ ಖಾನ್, ರಾಂಪುರ ಸದರ್‌ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಕಾಶ್ ಸಕ್ಷೇನಾ ಅವರು ಅಜಂ ಖಾನ್ ಅವರ ಆಪ್ತ ಅಸೀಂ ರಾಜಾ ವಿರುದ್ಧ ಗೆಲುವು ಸಾಧಿಸಿ, ಶಾಸಕರಾಗಿದ್ದಾರೆ.

2019 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ದಾಖಲಾದ ದ್ವೇಷ ಭಾಷಣ ಪ್ರಕರಣದಲ್ಲಿ ಖಾನ್ ಅವರನ್ನು ದೋಷಿ ಎಂದು ಘೋಷಿಸಿದ ಕೆಳ ನ್ಯಾಯಾಲಯವು ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಇದೀಗ ಆ ಆದೇಶವನ್ನು ರಾಂಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (MP/MLA ನ್ಯಾಯಾಲಯ) ಅಮಿತ್ವೀರ್ ಸಿಂಗ್ ರದ್ದುಗೊಳಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರಿಗೆ ಅನುಚಿತ ಭಾಷೆ ಬಳಸಿದ್ದಾರೆ ಎಂದು ಖಾನ್  ವಿರುದ್ಧ ಆರೋಪಿಸಲಾಗಿತ್ತು.

ಇದೀಗ ಸೆಷನ್ಸ್ ನ್ಯಾಯಾಲಯವು, ಖಾನ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದು ಮಾಡಿದೆ.

ಇದನ್ನೂ ಓದಿ: ಪ್ರಧಾನಿಯ ಪದವಿ ಪ್ರಕರಣ: ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್, ಎಎಪಿ ಸಂಸದನಿಗೆ ಸಮನ್ಸ್

ನ್ಯಾಯಾಲಯದಲ್ಲಿ ಖಾನ್ ಪರ ವಾದ ಮಂಡಿಸಿದ ವಕೀಲ ಜುಬೇರ್ ಅಹ್ಮದ್, ಮಾಜಿ ಸಂಸದ ಮತ್ತು ಶಾಸಕರ ಕಾನೂನು ತಂಡ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಿದರು. ”ನನ್ನ ಕಕ್ಷಿದಾರನನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ. ದ್ವೇಷಪೂರಿತ ಭಾಷಣ ಮಾಡಿದ ಆರೋಪ ಅವರ ಮೇಲಿತ್ತು… ಸೆಷನ್ ಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಪರಿಗಣಿಸಿದೆ ಮತ್ತು ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ” ಎಂದರು.

ಮುಂದುವರೆದು, ”ಇದು ಆತಂಕಕಾರಿ ವಿಷಯವಾಗಿದೆ. ಅವರನ್ನು ಖುಲಾಸೆಗೊಳಿಸಿದ ಅದೇ ಪ್ರಕರಣದಲ್ಲಿ, ಅಜಮ್ ಖಾನ್ ಅವರು ಸಾಕಷ್ಟು ಸಮಯವನ್ನು ಜೈಲಿನಲ್ಲಿ ಕಳೆದಿದ್ದಾರೆ. ಅದೇ ಪ್ರಕರಣದಲ್ಲಿ ಶಿಕ್ಷೆಯಾದ ಕಾರಣ, ಅವರು ತಮ್ಮ ವಿಧಾನಸಭೆಯ ಸದಸ್ಯತ್ವವನ್ನು ಕಳೆದುಕೊಂಡರು ಮತ್ತು ಇಲ್ಲಿ ಉಪಚುನಾವಣೆಗಳು ನಡೆದವು. ಅದೇ ಪ್ರಕರಣದಿಂದಾಗಿ, ನಂತರ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಯಿತು. ಈಗ ತೀರ್ಪು ಬಂದಿದೆ, ನಮ್ಮ ಕಾನೂನು ತಂಡವು ಈ ಬಗ್ಗೆ ಸಂಶೋಧನೆ ನಡೆಸಿ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ” ಎಂದು ಜುಬೇರ್ ಅಹ್ಮದ್ ಹೇಳಿದರು..

ಏಪ್ರಿಲ್ 9, 2019 ರಂದು ಖಾನ್ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳನ್ನು ದಾಖಲುಮಾಡಲಾಯಿತು. ಐಪಿಸಿ ಸೆಕ್ಷನ್ 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505(1) (ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು), ಹಾಗೆಯೇ ಸೆಕ್ಷನ್ 125 ( ಚುನಾವಣೆಗಳಿಗೆ ಸಂಬಂಧಿಸಿದಂತೆ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಪ್ರಜಾಪ್ರತಿನಿಧಿ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದವು.

”ಖಾನ್ ಅವರು ಮಿಲಾಕ್ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಅಸಭ್ಯ ಭಾಷೆ ಬಳಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಮತ್ತು ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಸಮುದಾಯದಿಂದ ಮತ ಕೇಳಿದರು ಮತ್ತು ದ್ವೇಷವನ್ನು ಹರಡಲು ಪ್ರಯತ್ನಿಸಿದರು, ಇದು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದೆ” ಎಂದು ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಚೌಹಾಣ್ ಅವರು ದೂರು ನೀಡಿದ್ದರು.

2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದವು. ಈ ವೇಳೆ ಖಾನ್ ಅವರ ಭಾಷಣದ ವಿರುದ್ಧ ಪ್ರಕರನ ದಾಖಲಾಗಿತ್ತು. ಖಾನ್ ಅವರು ರಾಂಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರ. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ, ನಟಿ ಜಯಪ್ರದಾ ಸೋಲು ಕಂಡಿದ್ದರು. ಆನಂತರ ಖಾನ್ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಅವರು ತಮ್ಮ ಲೋಕಸಭಾ ಸದಸ್ಯತ್ವವನ್ನು ತ್ಯಜಿಸಿದರು.

2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಖಾನ್ ವಿರುದ್ಧ ಭೂಕಬಳಿಕೆ, ವಂಚನೆ ಮತ್ತು ಕ್ರಿಮಿನಲ್ ಅತಿಕ್ರಮಣ ಸೇರಿದಂತೆ ವಿವಿಧ ಆರೋಪಗಳ ಮೇಲೆ 81 ಪ್ರಕರಣಗಳು ದಾಖಲಾಗಿವೆ. ಈ ಕೆಲವು ಪ್ರಕರಣಗಳಲ್ಲಿ ಖಾನ್ ಅವರ ಪತ್ನಿ ತಂಜೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಅಜಮ್ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮೂವರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ, ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಖಾನ್, ಭೂಕಬಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಸೀತಾಪುರ ಜೈಲಿನಿಂದ ಹೊರಬಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ| ಆರೋಗ್ಯ ಇಲಾಖೆಯ ಕ್ವಾಟ್ರಸ್‌ನಲ್ಲೇ ಭ್ರೂಣ ಲಿಂಗ ಪತ್ತೆ, ಹತ್ಯೆ: ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಭಾನುವಾರ (ಮೇ 5) ರಾತ್ರಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪಾಂಡವಪುರದ ಆರೋಗ್ಯ ಇಲಾಖೆಯ ಕ್ವಾಟ್ರಸ್‌ನಲ್ಲೇ...