HomeUncategorizedಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

- Advertisement -
- Advertisement -

“ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು” ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ.

ಮಾಲಾಗೆ ತನ್ನ ಸಹೋದರಿ ಮೃದುಲಾ (ಹೆಸರು ಬದಲಿಸಲಾಗಿದೆ) ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋದಲ್ಲಿ ಇರುವುದು ಗೊತ್ತಾಗಿತ್ತು. ಅದನ್ನು ಆಕೆ ಕುಟುಂಬಸ್ಥರ ಗಮನಕ್ಕೂ ತಂದಿದ್ದರು. ಆದರೆ, ಕುಟುಂಬಸ್ಥರಿಗೆ ವಿಷಯ ಮನದಟ್ಟಾಗುವ ಮುನ್ನವೇ ರೇವಣ್ಣ ಕುಟುಂಬದ ಆಪ್ತ ಸತೀಶ್ ಬಾಬಣ್ಣ ಆಕೆಯನ್ನು ಅಪಹರಣ ಮಾಡಿದ್ದ ಎಂದು ವರದಿ ಹೇಳಿದೆ.

ಮೃದುಲಾಳ ಮಗನಿಗೆ ಎರಡು ದಿನಗಳ ನಂತರ ಕುಟುಂಬಸ್ಥರು ವಿಡಿಯೋದ ವಿಷಯ ತಿಳಿಸಿದ್ದರು. ವರ್ಷಗಳ ಹಿಂದೆ ಮೃದುಲಾಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದನ್ನು ವಿಡಿಯೋ ಮಾಡಲಾಗಿತ್ತು. ವಿಷಯ ಬೆಳಕಿಗೆ ಬಂದ ಬಳಿಕ ಆಕೆಯನ್ನು ಅಪಹರಣ ಮಾಡಲಾಗಿತ್ತು.

ಮೃದುಲಾ ಮತ್ತು ಆಕೆಯ ಪತಿ ಹೊಳೆನರಸೀಪುರದ ಗನ್ನಿಕಡದ ಹೆಚ್.ಡಿ.ರೇವಣ್ಣ ಅವರ ಜಮೀನಿನಲ್ಲಿ ಆರು ವರ್ಷಗಳಿಂದ ಕೃಷಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಕೆಲಸ ತೊರೆದ ದಂಪತಿ ಗರ್ಭಿಣಿಯಾಗಿದ್ದ ತಮ್ಮ ಮಗಳನ್ನು ಆರೈಕೆ ಮಾಡುವ ಸಲುವಾಗಿ ಮೈಸೂರು ಜಿಲ್ಲೆಯ ತಮ್ಮ ಹಳ್ಳಿಗೆ ಹಿಂದಿರುಗಿದ್ದರು.

“ಕೆಲಸ ಬಿಟ್ಟ ನಂತರವೂ ಆಕೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಬಹುಶಃ ನಾವು ಅವಳನ್ನು ದೂಷಿಸುತ್ತೇವೆ ಎಂದು ಅವಳು ಹೆದರಿದ್ದಳು ಅನಿಸುತ್ತದೆ. ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಆಕೆ ಯಾವುದೇ ತಪ್ಪು ಮಾಡಿರಲಿಲ್ಲ. ಆದರೆ, ಜನರು ಆಕೆಯ ಬಗ್ಗೆ ತಪ್ಪು ಭಾವಿಸುತ್ತಾರೆ ಎಂದು ಎಲ್ಲವನ್ನೂ ಮುಚ್ಚಿಟ್ಟಿದ್ದಳು. ನಾವು ತಪ್ಪು ಮಾಡದಿದ್ದರೂ ಜನರನ್ನು ಹೇಗೆ ಎದುರಿಸುವುದು ಎಂದು ನಮಗೆ ಗೊತ್ತಿಲ್ಲ” ಎಂದು ಮಾಲಾ ಹೇಳಿದ್ದಾರೆ.

ಕಣ್ಣೀರಿಟ್ಟ ಮಾಲಾ, “ನಾನು ಮತ್ತು ನನ್ನ ಪತಿ ಕೂಡ ಹೊಳೆನರಸೀಪುರದ ಕಾಮೇನಹಳ್ಳಿಯಲ್ಲಿ ರೇವಣ್ಣ ಕುಟುಂಬಕ್ಕೆ ಸೇರಿದ ಮತ್ತೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆವು” ಎಂದಿದ್ದಾರೆ. ಹೆಚ್‌.ಡಿ ರೇವಣ್ಣ ಕಳೆದ 24 ವರ್ಷಗಳಿಂದ ಹೊಳೆನರಸೀಪುರ ಶಾಸಕರಾಗಿದ್ದಾರೆ. ರೇವಣ್ಣ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಪುತ್ರ.

ಅಪಹರಣ ಪ್ರಕರಣದಲ್ಲಿ ಮೇ 3ರಂದು ಸತೀಶ್ ಬಾಬಣ್ಣನ್ನು ಪೊಲೀಸರು ಬಂಧಿಸಿದ್ದರು. ಮೇ 4ರಂದು ಮೈಸೂರಿನ ತೋಟದ ಮನೆಯಿಂದ ಮೃದುಲಾ ಅವರನ್ನು ರಕ್ಷಿಸಿ ಎಸ್‌ಐಟಿ ತಂಡ ಬೆಂಗಳೂರಿಗೆ ಕರೆ ತಂದಿತ್ತು. ಅದೇ ದಿನ, ನ್ಯಾಯಾಲಯ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬೆನ್ನಲ್ಲೇ ಅವರು ಬಂಧನಕ್ಕೊಳಗಾದರು. ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಎಸ್‌ಐಟಿ ಎರಡು ಬಾರಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರೂ ಪ್ರಜ್ವಲ್ ರೇವಣ್ಣ ಇನ್ನೂ ತಲೆಮರೆಸಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಲ್ಲಿ ಅವರ ಜೆಡಿಎಸ್ ಪಕ್ಷದ ಸದಸ್ಯರು, ಅಧಿಕಾರಿಗಳು ಮತ್ತು ಇತರ ಮಹಿಳೆಯರು ಸೇರಿದ್ದಾರೆ.

ಏಪ್ರಿಲ್ 24ರಂದು ಕೊನೆಯ ಬಾರಿ ಮೃದುಲಾ ಅವರನ್ನು ಮನೆಯವರು ನೋಡಿದ್ದರು. ಸತೀಶ್ ಜೊತೆ ತೆರಳಿದ್ದ ಮೃದುಲಾ ಮತದಾನದ ದಿನ (ಏಪ್ರಿಲ್ 26) ವಾಪಸ್ ಬಂದಿದ್ದರು. ಒಂದೆರಡು ದಿನಗಳ ನಂತರ ರಾತ್ರಿ 9 ಗಂಟೆಗೆ ಮತ್ತೆ ಬಂದ ಸತೀಶ್, ಪೊಲೀಸ್ ಪ್ರಕರಣದ ಕುರಿತು ಮಾತನಾಡಲು ರೇವಣ್ಣ ಕರೆದಿದ್ದಾರೆ ಎಂದು ಮೃದುಲಾಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದರು. ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಮೊದಲ ಪ್ರಕರಣ ದಾಖಲಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿತ್ತು ಎಂದು ನ್ಯೂಸ್ ಮಿನಿಟ್ ಹೇಳಿದೆ.

ಸತೀಶ್ ಜೊತೆ ತೆರಳಿದ ಮೃದುಲಾಳನ್ನು ಮನೆಯವರು ಸಂಪರ್ಕಿಸಲು ಪ್ರಯತ್ನಿಸಿದಾಗ ಸತೀಶ್ ಅವರನ್ನು ಬೆದರಿಸಿದ್ದರು. “ಮೃದುಲಾಳನ್ನು ಪೊಲೀಸರು ಬಂಧಿಸಿದ್ದಾರೆ. ಜಾಮೀನಿಗೆ ವ್ಯವಸ್ಥೆ ಮಾಡಬೇಕಿದೆ” ಎಂದಿದ್ದರು. ಮೇ 1ರಂದು ಮೃದುಲಾಳ ಮಗನಿಗೆ ಸಂಬಂಧಿಕರು ಮತ್ತು ಸ್ನೇಹಿತರು ಆತನ ತಾಯಿಯನ್ನು ಕಟ್ಟಿಹಾಕಿ ಅತ್ಯಾಚಾರ ಮಾಡಿದ ವಿಡಿಯೋಗಳ ಬಗ್ಗೆ ತಿಳಿಸಿದ್ದರು. ಆಗ ಆಕೆ ಕಿಡ್ನಾಪ್ ಆಗಿರುವುದನ್ನು ಮನೆಯವರು ಅರಿತು ಮೇ 2ರಂದು ಕೆ.ಆರ್.ನಗರ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾಲಾ ವಿವರಿಸಿದ್ದಾಗಿ ತಿಳಿಸಿದೆ.

ಗ್ರಾಮ ದೇವತೆಯಾದ ಕರಿಯಮ್ಮ ದೊಡ್ಡಮ್ಮನ ಉತ್ಸವದಲ್ಲಿ ಪಾಲ್ಗೊಳ್ಳಲು ಮಾಲಾ ಅವರು ಏಪ್ರಿಲ್ 29 ರಂದು ಸೋಮವಾರ ತಮ್ಮ ಗ್ರಾಮಕ್ಕೆ ತೆರಳಿದ್ದರು “ನಾವು ಊರಲ್ಲಿ ಮಟನ್ ಊಟಾ ಮಾಡಿ ಹಿಂತಿರುಗಿದ್ದೆವು. ನನ್ನ ತಂಗಿಗೆ ಇದೆಲ್ಲ ನಡೆದಿದೆ ಎಂದು ನಮಗೆ ತಿಳಿದಿರಲಿಲ್ಲ” ಎಂದು ನ್ಯೂಸ್ ಮಿನಿಟ್ ಮನೆಗೆ ಭೇಟಿ ನೀಡಿದಾಗ ಮಾಲಾ ಹೇಳಿದ್ದಾರೆ.

“ಆಕೆಗೆ ರೇವಣ್ಣ ಅಥವಾ ಪ್ರಜ್ವಲ್ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಏನಾದರು ಬೇಕಾದರೆ ರೇವಣ್ಣ ಅವರ ಪತ್ನಿ ಭವಾನಿ ಅವರನ್ನೇ ಸಂಪರ್ಕಿಸುತ್ತಿದ್ದಳು. ನಾವು ಬಡರು, ನಮಗೆ ಕೆಲಸದ ಅವಶ್ಯಕತೆಯಿತ್ತು. ಆದ್ದರಿಂದ ಸತೀಶ್ ಬಾಬಣ್ಣ ಕೆಲಸಕ್ಕೆ ಕರೆದಾಗ ನಾವು ಒಪ್ಪಿಕೊಂಡೆವು. ಅಲ್ಲಿ ಹೀಗಾಗುತ್ತದೆ ಎಂದು ಯಾರು ಭಾವಿಸಿರಲಿಲ್ಲ” ಎಂದು ಮಾಲಾ ತಿಳಿಸಿದ್ದಾರೆ.

ಮೃದುಲಾ ಪತ್ತೆಯಾಗಿರುವುದರಿಂದ ರೇವಣ್ಣ ಕುರಿತು ಕುಟುಂಬಸ್ಥರಿಗೆ ಈಗ ಭಯವಿಲ್ಲ. ಆದರೆ, ಅವರು ಲೈಂಗಿಕ ದೌರ್ಜನ್ಯ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಅಪಹರಣಕ್ಕೊಳಗಾದ ಮೃದುಲಾ ವಿಶ್ವಕರ್ಮ ಜಾತಿಗೆ ಸೇರಿದವರು. ವಿಶ್ವಕರ್ಮವನ್ನು ಇತರೆ ಹಿಂದುಳಿದ ವರ್ಗಗಳ ವರ್ಗ 2ಎ (ತುಲನಾತ್ಮಕವಾಗಿ ಹೆಚ್ಚು ಹಿಂದುಳಿದ) ಅಡಿಯಲ್ಲಿ ವರ್ಗೀಕರಿಸಲಾಗಿದೆ. ರೇವಣ್ಣ ಒಕ್ಕಗಲಿಗೆ ಜಾತಿಯವರು. ಒಕ್ಕಲಿಗ ಜಾತಿಯನ್ನು ಒಬಿಸಿಯ 3ಎ (ಹಿಂದುಳಿದ) ಅಡಿಯಲ್ಲಿ ವರ್ಗೀಕರಿಸಲಾಗಿದೆ. ಮಾಧ್ಯಮಗಳಲ್ಲಿ ಬಹಿರಂಗೊಳ್ಳುತ್ತದೆ ಎಂದು ಹೆದರಿ ಕುಟುಂಬಸ್ಥರು ಹೆಸರು ಹೇಳಲು ನಿರಾಕರಿಸಿದ್ದಾರೆ. ಮೇ 2ರ ಸಂಜೆಯಿಂದ ಮಾಲಾ ಮತ್ತು ಮೃದುಲಾ ಅವರ ಮನೆಗಳ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನ್ಯೂಸ್ ಮಿನಿಟ್ ಹೇಳಿದೆ.

“ನೀವು ರೇವಣ್ಣ ಕುಟುಂಬವನ್ನು ಭಯ ಪಡುತ್ತೀರಾ?” ಎಂದು ನ್ಯೂಸ್ ಮಿನಿಟ್ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ 20 ವರ್ಷದ ವ್ಯಕ್ತಿಯೊಬ್ಬರು, “ಮೃದುಲಾ ಅಪಹರಣಕ್ಕೆ ಒಳಗಾದ ನಮಗೆ ಭಯವಾಗಿತ್ತು. ಈಗ ಆಕೆ ಪತ್ತೆಯಾಗಿದ್ದಾರೆ. ಹಾಗಾಗಿ ಭಯವಿಲ್ಲ. ನಾವೇನಾದರು ಭಯಪಟ್ಟಿದ್ದರೆ ದೂರು ಕೊಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಮಾಲಾ ಕೆಲಸದ ಬಗ್ಗೆ ಚಿಂತಿತರಾಗಿದ್ದಾರೆ. ನಾವು ಹೇಗೆ ಕೆಲಸ ಹುಡುಕುವುದು ಎಂದು ಆಕೆ ಹೇಳಿದ್ದಾರೆ. “ನಮಗೆ ಮರು ಪಾವತಿಸಲು ಸಾಲ ಇದೆ. ಕಳೆದ ಫೆಬ್ರವರಿಯಲ್ಲಿ ಮಗಳ ಮದುವೆಗೆಂದು ಗ್ರಾಮದ ಮುಖಂಡನಿಂದ 3 ಲಕ್ಷ ರೂಪಾಯಿ ಮತ್ತು ಪರಿಚಯಸ್ಥರಿಂದ 2 ಲಕ್ಷ ರೂಪಾಯಿ ಸಾಲ ಪಡೆಯಲಾಗಿದೆ” ಎಂದು ಆಕೆ ತಿಳಿಸಿದ್ದಾರೆ.

“ನಮ್ಮ ಮನೆ ಬಳಿ ಪೊಲೀಸರು ಇರುವುದನ್ನು ನೋಡಿ ಜನರು ಕುತೂಹಲದಿಂದ ನೋಡುತ್ತಾರೆ. ಅವರು ವಿಡಿಯೋ ನೋಡಿದ್ದಾರೆ. ಆದರೆ, ಅದರಲ್ಲಿ ನನ್ನ ಸಹೋದರಿ ಇರುವುದು ಅವರಿಗೆ ಗೊತ್ತಿಲ್ಲ. ಪೊಲೀಸರನ್ನು ನೋಡಿ, ನಾವು ಏನೋ ತಪ್ಪು ಮಾಡಿದ್ದೇವೆ ಎಂದು ಅವರು ಭಾವಿಸಿದ್ದಾರೆ” ಎಂದು ಮಾಲಾ ಹೇಳಿದ್ದಾರೆ.

ಹಾಸನ ಗಡಿಯಿಂದ ಸುಮಾರು 20 ಕಿ.ಮೀ ಮತ್ತು ಹೊಳೆನರಸೀಪುರದಿಂದ 1.5 ಗಂಟೆಯ ಅವಧಿ ದೂರದಲ್ಲಿ ಮಾಲಾ ಅವರ ಗ್ರಾಮವಿದೆ. ಇಲ್ಲಿ ರೇವಣ್ಣನವರ ಕುಟುಂಬದ ಭಯವೇನು ಅವರಿಗೆ ಇಲ್ಲ.

ತಂದೆ ‘ಮೀಸೆ ನರಸಿಂಹಣ್ಣ’ನಂತೆಯೇ ಮೀಸೆಗೆ ಹೆಸರಾದ ಸತೀಶ್ ಅವರನ್ನು ಹಳ್ಳಿಯಲ್ಲಿ ‘ಮೀಸೆ ಬಾಬಣ್ಣ ಎಂದೇ ಕರೆಯುತ್ತಾರೆ. ಸತೀಶ್ ರೇವಣ್ಣ ಅವರ ಸಂಬಂಧಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು ಎಂದು ಗ್ರಾಮದ ನಿವಾಸಿಯೊಬ್ಬರು ತಿಳಿಸಿದ್ದಾರೆ. ಆದರೆ, ಅವರು ತಮ್ಮ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.

ರೇವಣ್ಣ ಹೆಸರು ಈ ಗ್ರಾಮದಲ್ಲಿ ಅಷ್ಟಾಗಿ ಕೇಳಿಬರುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ರಾಜಕೀಯ ಬೆಂಬಲ ಹಂಚಿಹೋಗಿದೆ. ಒಕ್ಕಲಿಗರು ಸಂಖ್ಯಾತ್ಮಕವಾಗಿ ಪ್ರಬಲರಾಗಿದ್ದಾರೆ ಮತ್ತು ಅವರು ಜೆಡಿಎಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಒಕ್ಕಲಿಗರ ಜೊತೆ ವಾಸಿಸುವ ಕುರುಬರು, ನಾಯ್ಕರು ಮತ್ತು ದಲಿತರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ.

ಜೆಡಿಎಸ್ ಬೆಂಬಲಿಗರಾಗಿರುವ ಗ್ರಾಮದ ತರಕಾರಿ ವ್ಯಾಪಾರಿಯೊಬ್ಬರು ಲೈಂಗಿಕ ದೌರ್ಜನ್ಯದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. “ನಾವು ಒಕ್ಕಲಿಗರು ಎಂದು ಜೆಡಿಎಸ್‌ಗೆ ಬೆಂಬಲ ನೀಡಿದ್ದೇವೆ. ಆದರೆ, ಪ್ರಜ್ವಲ್ ರೇವಣ್ಣ ಮಾಡಿದ್ದು ತಪ್ಪು. ಅವನು ನಮ್ಮ ಹೆಸರನ್ನು ಹಾಳು ಮಾಡಿದ್ದಾನೆ. ಇಂಥವರು ಸಂಸದರಾಗಬಾರದಿತ್ತು” ಎಂದು ಅವರು ಹೇಳಿದ್ದಾರೆ. ಆದರೆ ಅವರ ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಲೈಂಗಿಕ ದೌರ್ಜನ್ಯ, ಅಪಹರಣದಿಂದ ಮೃದುಲಾಳ ಕುಟುಂಬ ಕುಗ್ಗಿ ಹೋಗಿದೆ. ಏನಾಗಿದೆ ಎಂದು ಅರ್ಥ ಮಾಡಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಇದನ್ನು ಹೇಗೆ ಎದುರಿಸಬೇಕೆಂದು ಅವರಿಗೆ ಗೊತ್ತಿಲ್ಲ. ಅವರು ಮಾತನಾಡುವುದನ್ನೇ ಕಡಿಮೆ ಮಾಡಿದ್ದಾರೆ. ಮನೆ ಮೌನವಾಗಿದೆ ಎಂದು ನ್ಯೂಸ್ ಮಿನಿಟ್ ಹೇಳಿದೆ.

“ಪ್ರಜ್ವಲ್ ಮತ್ತು ಆತನ ತಂದೆ ರೇವಣ್ಣ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರಿಗೆ ಶಿಕ್ಷೆಯಾಗಬೇಕು. ಅವರು ಎಂದಿಗೂ ತಲೆ ಓಡಾಡಲು ಸಾಧ್ಯವಾಗಬಾರದು. ನಮಗೆ ಏನಾಯಿತೋ ಅದು ಬೇರೆಯವರಿಗೆ ಆಗಬಾರದು. ಅವರಿಗೆ ಶಿಕ್ಷೆಯಾಗದಿದ್ದರೆ, ತಮ್ಮ ಚಾಳಿಯನ್ನು ಮುಂದುವರೆಸುತ್ತಾರೆ ಎಂದು ಮೃದುಲಾ ಕುಟುಂಬಸ್ಥರು ಹೇಳಿದ್ದಾರೆ ಎಂದು ನ್ಯೂಸ್ ಮಿನಿಟ್ ತಿಳಿಸಿದೆ.

ವರದಿ ಕೃಪೆ : thenewsminute.com

ಇದನ್ನೂ ಓದಿ : ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...