ಹಸಿವೆಂಬ ಹೆಬ್ಬಾವು

ತಮ್ಮ ಸಾವಿಗೆ ಬಾಧ್ಯಸ್ಥರು ಯಾರು? ಎಂಬ ಪ್ರಶ್ನೆಯನ್ನಿಟ್ಟು ಹೋದ ಮಣ್ಣು ತಿಂದು ಹಸಿವ ನೀಗಿಸಿಕೊಳ್ಳಲು ಹೋಗಿ ಸತ್ತ ಮಕ್ಕಳು.

ವಿನಯಾ ಒಕ್ಕುಂದ |
ಹಸಿವೆಂಬ ಹೆಬ್ಬಾವು ಬಸಿರ ನುಂಗುವ ಬವಣೆಗೆ ಆಗಾಗ ಸಾಕ್ಷ್ಯಗಳು ಒದಗುತ್ತಲೇ ಇವೆ. ಮಣ್ಣು ತಿಂದು ಹಸಿವ ನೀಗಿಸಿಕೊಳ್ಳಲು ಹೋಗಿ ಸತ್ತ ಮಕ್ಕಳು ತಮ್ಮ ಸಾವಿಗೆ ಬಾಧ್ಯಸ್ಥರು ಯಾರು ಎಂಬ ಪ್ರಶ್ನೆಯನ್ನಿಟ್ಟು ಹೋಗಿವೆ. ಇದರಿಂದ ನಾಗರಿಕ ಸಮಾಜವೇನೂ ಬೆಚ್ಚಿ ಬೀಳುವುದಿಲ್ಲ. ದೇವರ ತೇರಿನ ಗಾಲಿಗೆ ಸಿಕ್ಕು ಜಿಬ್ಬೆಯಾಗಿ ಹೋದ ಇರುವೆಯಂತೆ, ಇಂತಹ ಸಾವುಗಳೂ ನಾಗರಿಕತೆಯ ಭರಾಟೆಗೆ ಸಹಜ ಮತ್ತು ಅನಿವಾರ್ಯವೆಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಆ ಮಕ್ಕಳ ಪಾಲಕರು ಬಡವರು, ಬೇಜವಾಬ್ದಾರಿ ಕುಡುಕರು ಎಂಬುದಷ್ಟೇ ಈ ಘಟನೆಯ ಹಿನ್ನೆಲೆಯಾಗುತ್ತಿದೆಯೇ? ರಾಜ್ಯ-ರಾಜ್ಯಗಳ, ದೇಶ-ದೇಶಗಳ ಅಂಚಿನಲ್ಲಿ ಆ ನೆಲಕ್ಕೆ ಸಂಬಂಧಿಸಿಯೂ ನಿರಾಶ್ರಿತರಾಗಿ ಅಲೆಮಾರಿಗಳಾಗುವ ಜನರ ಸ್ಥಿತಿಗೆ ಕಾರಣಗಳೇನು? ಎರಡೇ ವರ್ಷಗಳ ಹಿಂದೆ ದೆಹಲಿಯ ಮಾಂಡವಳಿ ಪ್ರದೇಶದಲ್ಲಿ ಮೂರು ಎಳೆಯ ಹುಡುಗಿಯರು ಮೃತರಾಗಿದ್ದರು. ಅವರ ಹೊಟ್ಟೆಯಲ್ಲಿ ಆಹಾರದ ಒಂದಗುಳೂ ಇರಲಿಲ್ಲ ಎಂದು ಪೋಸ್ಟಮಾರ್ಟಂ ವರದಿ ಹೇಳಿತು. ಮೂಲತಃ ಪಶ್ಚಿಮ ಬಂಗಾಳದ ಈ ಜನರು ಉದ್ಯೋಗವನ್ನರಸಿ ರಾಜಧಾನಿ ಸೇರಿದವರು. ಈ ಹುಡುಗಿಯರ ಸಾವಿನ ಸಂದರ್ಭದಲ್ಲಿ ಅವರ ತಂದೆ ಮಂಗಲ್ ರಾಷ್ಟ್ರದ ರಾಜಧಾನಿಯ ಬೀದಿಗಳಲ್ಲಿ ಕೆಲಸವನ್ನು ಅರಸುತ್ತಿದ್ದ. ಅದಕ್ಕೂ ಮೊದಲು ಹೊಟ್ಟೆಹೊರೆಯುವ ದುಡಿಮೆಗಾಗಿ ಅವನು ಹಲವು ಪ್ರಯೋಗಗಳನ್ನು ನಡೆಯಿಸಿ ವಿಫಲನಾಗಿದ್ದ. ಮಂಗಲ್ ಕೂಡ ಮದ್ಯವ್ಯಸನಿಯಾಗಿದ್ದ. ಬಡವರಿಗೂ ಅವರ ಅಪಮಾನಿತ ಅಸಹನೀಯ ಬದುಕಿಗೂ ಮದ್ಯದಂತಹ ವ್ಯಸನಕ್ಕೂ ಇರುವ ಸಂಬಂಧವನ್ನು ಕನ್ನಡದ ಪ್ರಜ್ಞೆಯನ್ನು ರೂಪಿಸಿದ ಬೇಸಿಕ್ಸಗಳಂತಹ ಕೃತಿಗಳು ಹೇಳಿವೆ. ಚೋಮನನ್ನೂ ದುಡಿಯನ್ನೂ ಅವನ ಸಾರಾಯಿಯನ್ನು ಬೇರ್ಪಡಿಸುವುದಾದರೂ ಹೇಗೆ? ತನ್ನ ಮಕ್ಕಳು ಚೆನಿಯ ಗುರುವ ಕಾಫಿತೋಟದ ಕೆಲಸಕ್ಕೆ ಹೋಗಬೇಕಾಗಿ ಬಂದಾಗ, ‘ಕುಡೀಬ್ಯಾಡಿ. ಅದು ನನ್ನ ತಲೆಗೇ ಸಾಕು’- ಎಂದು ಆಪ್ತವಾಗಿ ಹೇಳಿ ಕಳಿಸುವ ಅಪ್ಪ ಚೋಮ; ಬದುಕು ಹಾಕಿದ ಎದುರೇಟುಗಳಿಂದ ದಿಕ್ಕೆಟ್ಟು ಹೋಗುತ್ತಾನೆ. ಚೆನಿಯನ ಸಾವು, ಗುರುವನ ಮತಾಂತರ ಅವನನ್ನು ವಿಚಿತ್ರ ಹತಾಶೆಗೆ ತಳ್ಳುತ್ತದೆ. ಸಣ್ಣಮಕ್ಕಳಾದ ಕಾಳ-ನೀಲರಿಗೆ ತಾನೇ ಗಡಂಗಿಗೆ ಕರೆದೊಯ್ಯುತ್ತಾನೆ. ಬಡ ಚೋಮನ ಮಕ್ಕಳು ಯಾವಾಗ ಏನಾಗ್ತಾವೋ? ಇರುವಷ್ಟು ದಿನ ಕುಡ್ದಾರೂ ಸಾಯ್ಲಿ – ಎಂಬಷ್ಟು ತಾತ್ಸಾರಬದುಕೆಂದರೆ. ಬಡವರ ಕುಡಿತದ ಅಮಲಿನಲ್ಲಿರುವ ಸುಡು ಸತ್ಯಗಳು ಬೇರೆಯೇ. ಬಡವರಿಗೆ ದಲಿತರಿಗೆ ಮೀಸಲಿಟ್ಟ ವೃತ್ತಿಗಳಿವೆ. ಅವುಗಳಲ್ಲಿ ಪೌರಕಾರ್ಮಿಕ ವೃತ್ತಿಯೂ ಒಂದು. 2011ರ ಜನಗಣತಿ- ದೇಶದಲ್ಲಿ ಚರಂಡಿ ಸ್ವಚ್ಛತೆಗಿಳಿವ 8 ಲಕ್ಷ ಕಾರ್ಮಿಕರಿದ್ದಾರೆಂದು ಹೇಳಿದೆ. ಪ್ರತಿದಿನ ಸರಾಸರಿ 3 ಕಾರ್ಮಿಕರು ಚರಂಡಿ ಸ್ವಚ್ಛತೆಗಿಳಿದು ಉಸಿರುಗಟ್ಟಿ ಸಾಯುತ್ತಿದ್ದಾರೆ. ಇದು ದೇಶದ ಅಭಿವೃದ್ಧಿ ನಕಾಶೆಗೆ ಅಡಚಣೆಯನ್ನೇನೂ ಮಾಡುತ್ತಿಲ್ಲ. ಕ್ಷಣಾರ್ಧದಲ್ಲಿ ಕ್ಷಿಪಣಿ ಉಡ್ಡಯನವೋ ಸರ್ಜಿಕಲ್ ಸ್ಟ್ರೈಕೋ ಸಾಧ್ಯವಾಗಿರುವ ವಿಜ್ಞಾನ-ತಂತ್ರಜ್ಞಾನ ಮತ್ತು ಶ್ರೀಮಂತಿಕೆ ತುಂಬಿ ತುಳುಕುತ್ತಿರುವ ದೇಶದಲ್ಲಿ -ಸ್ವಚ್ಛತೆಗಾಗಿ ಮಾನವ ರಹಿತ ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಸಾಧ್ಯವಾಗುತ್ತಿಲ್ಲ. ಮಾನವ ನಿರ್ಮಿತ ಕಲ್ಮಶ-ತ್ಯಾಜ್ಯ ತುಂಬಿದ ಚರಂಡಿಗಿಳಿಯುವಾತ ಮದ್ಯ ಸೇವಿಸದೆ ಇನ್ನೇನು ತಾನೆ ಮಾಡಬಲ್ಲ? ನನಗೆ ಹೇಳಬೇಕಿರುವುದು- ಮಣ್ಣು ತಿಂದು ಸತ್ತ ಮಕ್ಕಳ ಸಾವಿಗೆ ಮದ್ಯವ್ಯಸನಿ ಕುಟುಂಬ ಎಷ್ಟು ಕಾರಣವೋ, ಬಡವರ ಸ್ಥಿತಿಯನ್ನು ಇನ್ನೂ ಇನ್ನೂ ಹೈರಾಣಾಗಿಸುತ್ತಿರುವ ಪ್ರಭುತ್ವದ ಸ್ವಾರ್ಥಸಾಧಕತನವೂ ಅಷ್ಟೇ ಕಾರಣ. ಅಸಮಾನ ಭಾರತದ ಸ್ಥಿತಿಯನ್ನು ಕಂಡೂ ಕಾಣದವರಂತೆ ಅವಕಾಶವಾದಿಗಳಾಗಿರುವ ನಾಗರಿಕರ ಮನಸ್ಥಿತಿ ಇವುಗಳ ಮೂಲ ಪ್ರೇರಣ ಶಕ್ತಿ, ಅಮತ್ರ್ಯಸೇನ್‍ರ ನೊಬೆಲ್ ಪುರಸ್ಕಾರ ಪಡೆದ “ಪಾವರ್ಟಿ ಆಂಡ್ ಫ್ಯಾಮಿನ್” ಕೃತಿಯ ಪ್ರಾರಂಭದ ವಾಕ್ಯ ಹೀಗಿದೆ. – ಹಸಿವು ಎನ್ನುವುದು ಸಮಾಜದಲ್ಲಿ ಕೆಲವರಿಗೆ ಆಹಾರ ದೊರೆಯದಿರುವ ಸಮಸ್ಯೆಯೇ ವಿನಃ ಅದು ಆಹಾರ ಇಲ್ಲದಿರುವ ಸಮಸ್ಯೆಯಲ್ಲ. ಭಾರತ ಆರ್ಥಿಕ ಅಸಮತೋಲನದ ಅಪಾಯದ ಹಂತವನ್ನು ತಲುಪಿಯಾಗಿದೆ. ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಆಳು-ಯಜಮಾನನ ಸಂಪಾದನೆಯ ಅನುಪಾತ 1:3000 ಮೀರಬಾರದು. ಹಾಗೆ ಮೀರಿದರೆ ಅದು ಭ್ರಷ್ಟ ಸಮಾಜ. ಭಾರತದಲ್ಲಿ ಈ ಅನುಪಾತದ ಸರಾಸರಿಯೇ 1:30,000 ಆಗಿದೆ ಮತ್ತು ನಾವಿದನ್ನು ಅಭಿವೃದ್ಧಿಯ ಸಮಾಜ ಎನ್ನುತ್ತಿದ್ದೇವೆ- ಎನ್ನುತ್ತಾರೆ ಪಿ.ಸಾಯಿನಾಥ. ಕಾರ್ಪೊರೇಟ್ ವ್ಯವಸ್ಥೆ ಎಲ್ಲ ಲಾಭವನ್ನೂ ಪಡೆದುಕೊಳ್ಳುತ್ತ ಬಡವರ ಬದುಕಿನ ಹಕ್ಕಿನ ಮೇಲೆ ಪ್ರಹಾರ ಮಾಡುತ್ತಿದೆ. ಆರುಂಧತಿರಾಯ್ ಬರೆಯುತ್ತಾರೆ- “ದೈತ್ಯ ಕಂಪನಿಗಳು ವಸ್ತುತಃ ದೇಶವನ್ನು ಆಳುತ್ತಿವೆ. ರಾಜಕೀಯ ಸಂಸ್ಥೆಗಳು ಈ ದೈತ್ಯ ಕಂಪನಿಗಳ ಅಧೀನ ಸಂಸ್ಥೆಗಳಂತೆ ಕಾರ್ಯ ನಿರ್ವಹಿಸುತ್ತಿವೆ. ದೇಶದ ಒಟ್ಟೂ ಜಿಡಿಪಿಯ ನಾಲ್ಕರಲ್ಲಿ ಒಂದು ಭಾಗ ನೂರು ಮಂದಿ ಅತಿ ಶ್ರೀಮಂತರ ಕೈಯಲ್ಲಿದೆ. 120 ಕೋಟಿ ಜನರಿರುವ ದೇಶದಲ್ಲಿ 80 ಕೋಟಿಗೂ ಅಧಿಕ ಮಂದಿ ದಿನಕ್ಕೆ 20 ರೂ ಗೂ ಕಡಿಮೆ ಆದಾಯವನ್ನು ಬಳಸುತ್ತಿದ್ದಾರೆ.” ಈ ಅಸಮಾನ ಭಾರತವೇಕೆ ಅಭಿವೃದ್ಧಿಯ ಹರಿಕಾರರಿಗೆ ಕಾಣುವುದಿಲ್ಲ? ಪ್ರಭುತ್ವದ ತಪ್ಪು ದಾರಿಗಳು ಬಡವರ ಕುರಿತು ನಿಷ್ಕಾಳಜಿಗಳು, ಸಮಾಜಪರವೆಂದು ಪ್ರಚಾರ ಮಾಡಿ ಜಾರಿಗೆ ತರುವ ಬಹುತೇಕ ಯೋಜನೆಗಳಲ್ಲಿ ಕಣ್ಣಿಗೆ ರಾಚುತ್ತದೆ. ಸರ್ಕಾರದ ಆದಾಯ ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಕೂಡುತ್ತಿರುತ್ತದೆ. ನೇರ ತೆರಿಗೆಗಳನ್ನು ಸರ್ಕಾರಗಳು ಕೆಲವೊಮ್ಮೆ ಕಡಿತಗೊಳಿಸಬಹುದು. ಇದು ಮಧ್ಯಮ ಮತ್ತು ಶ್ರೀಮಂತ ವರ್ಗಕ್ಕೆ ಸಂಬಂಧಿಸಿರುತ್ತದೆ. ಆದರೆ ಪರೋಕ್ಷ ತೆರಿಗೆ ಇದು ವಸ್ತುಗಳಿಗೆ ಉಪಭೋಗಿ ಪದಾರ್ಥಗಳಿಗೆ ಸಂಬಂಧಿಸಿರುವುದರಿಂದ ಬಡವ-ಶ್ರೀಮಂತರೆಲ್ಲರೂ ಇದನ್ನು ಸಮಾನವಾಗಿಯೇ ಭರಿಸಬೇಕಾಗುತ್ತದೆ. ಜಿಎಸ್‍ಟಿಯಂತಹ ಪರೋಕ್ಷ ತೆರಿಗೆ ಹೆಚ್ಚಳಗೊಳ್ಳುವದು ಎಂದರೆ, ಬಡವರ ದೈನಂದಿನ ಬದುಕು ಇನ್ನೂ ಭಾರವಾಗುವುದು ಎಂದರ್ಥ. ನಮ್ಮ ದೇಶದಲ್ಲಿ 1443 ಲಕ್ಷ ಭೂರಹಿತ ದಿನಗೂಲಿ ಕೃಷಿ ಕಾರ್ಮಿಕರಿದ್ದಾರೆ. ಕರ್ನಾಟಕದಲ್ಲಿ 71.56 ಲಕ್ಷ ಇದ್ದಾರೆ. ಇದು ಸರಾಸರಿ ಮಾನವ ಸಂಪನ್ಮೂಲದ 25.67% ಆಗಿದೆ. ಈ ವಲಯದ ಬಡವರಿಗೆ, ಮೂಲಭೂತ ಅಗತ್ಯಗಳ ಪೂರೈಕೆಯನ್ನು ಅವರ ಹಕ್ಕಾಗಿ ಮಾಡಬೇಕಿದೆ. ಆಹಾರ ಭದ್ರತೆ ಕಾಯ್ದೆ, ಅನ್ನಭಾಗ್ಯದಂಥ ಯೋಜನೆಗಳು ಈ ಕಾರಣಕ್ಕಾಗಿ ಮುಖ್ಯವಾಗುತ್ತವೆ.

ಅತೀ ಆದರ್ಶದ ಕಪಟ ಸ್ಲೋಗನ್ನುಗಳನ್ನು ಹಾರಿಸಿಡುತ್ತ, ವಾಸ್ತವವಾಗಿ ಜನರ ಬಡತನದ ಕುರಿತು ಅಸಹನೆಯಿರುವ ಆಡಳಿತಗಾರರು ದೇಶದ ಅಸಮಾನತೆಯ ಗಾಯವನ್ನು ಇನ್ನೂ ಆಳಕ್ಕಿಳಿಸುತ್ತಾರೆ. 2017-18ರಲ್ಲಿ ನಮ್ಮ ರಾಜ್ಯದಲ್ಲೇ ನಡೆದ ಎರಡು ಘಟನೆಗಳನ್ನು ನೆನಪಿಸಿಕೊಳ್ಳುವ. ಸ್ವಚ್ಛ ಭಾರತ್ ಅಭಿಯಾನದ ಜಾರಿಗಾಗಿ, ಶೌಚಾಲಯ ಇಲ್ಲದ ಮನೆಗಳಿಗೆ ಪಡಿತರ ನಿಲ್ಲಿಸುವ ಆದೇಶವನ್ನು ಜಿಲ್ಲಾಡಳಿತಗಳು ಹೊರಡಿಸಿದವು. ದಾವಣಗೆರೆಯ ಅನ್ನಪೂರ್ಣ ಎಂಬ ಯುವತಿಯದು ಬಡ ಕುಟುಂಬ. ಜೈಲು ಕೋಣೆಯಂತಹ ಮನೆಯ ಜನದಟ್ಟಣೆ. ಶೌಚಾಲಯ ಕಟ್ಟಿಸಲು ಅನುವಿಲ್ಲ. ಹಾಗಾಗಿ ಅನಿವಾರ್ಯವಾಗಿ ಶೌಚಗುಂಡಿಯನ್ನು ಮನೆಯ ಹೊರಗಿನ ಮೂಲೆಯಲ್ಲಿ ತೆಗೆಸಲು ಹೋಗುತ್ತಾರೆ. ಇದು ಜಗಳಕ್ಕೆ, ಪೊಲೀಸರ ಮಧ್ಯಪ್ರವೇಶಿಕೆಗೆ ಒರಟು ಬುದ್ಧಿವಾದಕ್ಕೆ ಕಾರಣವಾಗುತ್ತದೆ. ಕೆಳಗೆ ಜಗಳ ನಡೆದಾಗ ಅಪಮಾನದಿಂದ ನೊಂದ ಹುಡುಗಿ ಬೆಂಕಿಹಚ್ಚಿಕೊಂಡು, ಮಹಡಿಯಿಂದ ಜಿಗಿದು ಸಾಯುತ್ತಾಳೆ. ಅದೇ ವರ್ಷ ದಾವಣಗೆರೆ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಆಯ್ಕೆಯಾಯಿತು! ಶೌಚಾಲಯ ಇಲ್ಲದ ಮನೆಗಳಿಗೆ ಪಡಿತರ ಕೊಡದ ಕಾರಣದಿಂದ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಹಳ್ಳಿಯೊಂದರಲ್ಲಿ ತಂದೆ-ತಾಯಿ-ಮಗಳು ಹಸಿವಿನಿಂದ ಸತ್ತುಹೋದರು. ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ವಿಶ್ವಬ್ಯಾಂಕಿನಿಂದ 10 ಸಾವಿರಕೋಟಿ ಸಾಲಪಡೆದ ಕೇಂದ್ರ ಸರ್ಕಾರ ಇದರ ಬಹುದೊಡ್ಡ ಮೊತ್ತವನ್ನು ಜಾಹೀರಾತಿಗೆ ಮೀಸಲಿಟ್ಟು, ಆ ಮೂಲಕ ರಾಜಕೀಯ ಲಾಭ ಪಡೆಯುವ ಉಪಾಯವನ್ನೂ ಪ್ರಕಟಿಸಿತು. ಈ ಎಲ್ಲ ಸಣ್ಣ ಸಾವುಗಳು ಅಭಿವೃದ್ಧಿಯೋಜನೆಗಳನ್ನೇನೂ ಅಲ್ಲಾಡಿಸುವುದಿಲ್ಲ. ಅದು ಹಾಗಲ್ಲ, ಅವರಿಗೆ ಕಾಯಿಲೆ – ಎಂದು ಪೋಲೀಸ್ ವರದಿ ತೇಪೆ ಸಾರಿಸಿಯೂ ಆಯಿತು.

ಬಡತನ, ಹಸಿವು, ಅಪೌಷ್ಠಿಕತೆಗಳು ಮನುಷ್ಯ ಬದುಕನ್ನು ವಿಕಾರಗೊಳಿಸುತ್ತಲೇ ಇವೆ. ಜಗತ್ತಿನಲ್ಲಿಯೇ ಅತಿಹೆಚ್ಚು ಸಂಖ್ಯೆಯ ಮಕ್ಕಳ ಮರಣವನ್ನು ಕಾಣುವ ದೇಶ ನಮ್ಮದು. ಜನಿಸುವ 1000 ಮಕ್ಕಳಲ್ಲಿ 34 ತಾಯಿಯ ಗರ್ಭಾಶಯದಲ್ಲೇ ಸಾಯುತ್ತವೆ. ವರ್ಷವೊಂದರಲ್ಲಿ 5 ವರ್ಷದೊಳಗಿನ 3 ಲಕ್ಷ ಮಕ್ಕಳು ಸಾಯುತ್ತಾರೆ. ಹಸಿವು ಆ ಕ್ಷಣದಲ್ಲಿ ಕಾಣುವ ಸತ್ಯವಾಗಿರಲಿಕ್ಕಿಲ್ಲ ಅದು ಬಲು ದೀರ್ಘಕಾಲದ ಪರಿಣಾಮ ಸರಪಳಿಯನ್ನು ಹೊಂದಿರುತ್ತದೆ. ಆದರೆ ಈ ಎಲ್ಲ ಸಾವುಗಳು ಬೇರೆ ಬೇರೆ ಕಾಯಿಲೆಯ ರೂಪದಲ್ಲಿ ದಾಖಲಾಗಿರುತ್ತವೆ. ಈ ಹಸಿವು ಎಂಬ ರೋಗ ಬದುಕಿರುವ ಮಕ್ಕಳನ್ನೂ ದೈಹಿಕವಾಗಿ, ಮಾನಸಿಕವಾಗಿ ದುರ್ಬಲರನ್ನಾಗಿಸುತ್ತದೆ. ದೈಹಿಕ ಬೆಳವಣಿಗೆಯ ಸಮಸ್ಯೆಯಾಗಿ, ಆನುವಂಶಿಕ ಕಾಯಿಲೆಯ ರೂಪವಾಗಿ ಸತಾಯಿಸುತ್ತದೆ. ಹಸಿವು ಮೆದುಳಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸದೆ, ಸಶಕ್ತತನದಿಂದ ವಂಚಿಸುತ್ತದೆ. ಈ ಸ್ಥಿತಿಯ ಕಾಣರದಿಂದಾಗಿ, ವಿದ್ಯೆ, ಕಲೆ, ಕ್ರೀಡೆಗಳಲ್ಲಿ ಪೌಷ್ಠಿಕಾಂಶವನ್ನು ಸ್ವೀಕರಿಸಿ ತ್ರಾಣ ಪಡೆದ ಶ್ರೀಮಂತ ಮಕ್ಕಳೊಂದಿಗೆ ಎಂದೂ ಸ್ಪರ್ಧಿಸದಂತೆ ಹಿಂದೂಡುತ್ತದೆ. ತಲೆತಲಾಂತರದಿಂದ ಸಾಂಸ್ಕøತಿಕ ಚಹರೆಯಾಗಿ ಕೆಲವರನ್ನು ಜಾಣರೆಂದು, ಜ್ಞಾನಿಗಳೆಂದು, ಇನ್ನು ಕೆಲವರನ್ನು ದಡ್ಡರು ಮೂರ್ಖರೆಂದು ಗುರುತಿಸಿಕೊಂಡು ಬರಲಾಗಿದೆ. ಈ ಜಾತಿ ಅಸ್ಮಿತೆಯ ಕಾರಣ ಆರ್ಥಿಕ ಸಂಪನ್ನತೆಯಲ್ಲಿರುವುದನ್ನು ಇನ್ನಾದರೂ ಗಮನಿಸಬೇಕು. ಬಹುದೊಡ್ಡ ಸಂಖ್ಯೆಯಲ್ಲಿ ಯುವಜನತೆಯನ್ನು ಹೊಂದಿದ ದೇಶ ನಮ್ಮದು ಆದರೆ ಗ್ರಾಮೀಣ ಕಾಲೇಜುಗಳಲ್ಲಿ ರಕ್ತದಾನ ಶಿಬಿರಗಳನ್ನು ಯೋಜಿಸಿದರೆ 500 ರಲ್ಲಿ 50 ವಿದ್ಯಾರ್ಥಿಗಳೂ ಶಕ್ತರಾಗುವುದಿಲ್ಲ. ಇದು ವಾಸ್ತವ. ಅವರ ರಕ್ತಹೀನ ಶರೀರಗಳನ್ನು ಹೊರಗಿನ ಪೋಷಾಕಿನಿಂದ ಮುಚ್ಚಿಡುವ ಸಾಹಸದಲ್ಲಿರುತ್ತಾರೆ. ಬಡವರು ಯಾವುದೋ ಸಣ್ಣ-ಪುಟ್ಟ ಕಾಯಿಲೆಯ ನೆಪದಿಂದ ಸುಲಭವಾಗಿ ಹುರುಪಳಿಸಿ ಹೋಗುತ್ತಾರೆ. ಇದು ನಿರಂತರವಾಗಿ ನಡೆಯುತ್ತಿದೆ. ಆದರೆ, ಎಲ್ಲೂ ಹಸಿವಿನ ಸಾವಾಗಿ ದಾಖಲಾಗುವುದಿಲ್ಲ. ಮಣ್ಣು ತಿಂದು ಸತ್ತಾಗ, ಮೈಮೇಲೆ ಮಲ ಸುರಿದುಕೊಂಡಾಗ ಅರೆಕ್ಷಣ ಕಂಪಿಸುತ್ತೇವೆ. ಬಲುಬೇಗ ಮರೆತು ಮತ್ತದೇ ಆವರ್ತನಕ್ಕೆ ಸಿದ್ಧರಾಗುತ್ತೇವೆ. ನಾಗರಿಕ ಕ್ರೌರ್ಯ ಇದಕ್ಕಿಂತ ಬೇರೆ ಇರಲಿಕ್ಕಿಲ್ಲ, ಅಲ್ಲವೇ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here