Homeಮುಖಪುಟಸಿನಿ ಪ್ರಬಂಧ; ನಾನು ನೋಡಿದ ಮಲೆಯಾಳಂ ಸಿನಿಮಾಗಳನ್ನು ಹಿಂದಿರುಗಿ ನೋಡಿದಾಗ..

ಸಿನಿ ಪ್ರಬಂಧ; ನಾನು ನೋಡಿದ ಮಲೆಯಾಳಂ ಸಿನಿಮಾಗಳನ್ನು ಹಿಂದಿರುಗಿ ನೋಡಿದಾಗ..

- Advertisement -
- Advertisement -

ಸುಮಾರು ಹನ್ನೆರಡು ವರ್ಷಗಳಿಂದ ಮಲೆಯಾಳಂ ಸಿನಿಮಾಗಳನ್ನು ಫಾಲೋ ಮಾಡಿಕೊಂಡು ಬಂದಿದ್ದೇನೆ. ಎಲ್ಲವನ್ನೂ ನೋಡಿದ್ದೇನೆಂದಲ್ಲ; ಒಳ್ಳೆಯ ಸಿನಿಮಾಗಳೆಂದು ಹಲವು ವಿಮರ್ಶೆಗಳು ರೆಫರ್ ಮಾಡಿದವನ್ನು ಮಾತ್ರ. ಈ ಸಿನಿಮಾಗಳು ಮತ್ತದರ ನಿರ್ದೇಶಕರು ಹಾಗು ಆ ಸಿನಿಮಾದ ಕಲಾವಿದರನ್ನು ಸಂಭ್ರಮಿಸಿ ಅಭಿಮಾನ ಕೂಡ ಬೆಳೆಸಿಕೊಂಡವನು ನಾನು. ಸಾಕಷ್ಟು ಸ್ನೇಹಿತರಿಗೆ ಈ ಸಿನಿಮಾಗಳನ್ನು ನೋಡಲು ಪ್ರೇರೇಪಿಸಿದ್ದೇನೆ. ಆದರೆ, ಈಗ ಬಹಳ ದಿನಗಳಿಂದ ಹೊಸ ತಲೆಮಾರಿನ ನಿರ್ದೇಶಕರು ಮತ್ತು ಕಲಾವಿದರ ಸಿನಿಮಾಗಳನ್ನು ಅನುಸರಿಸಲು ಪ್ರಾರಂಭಿಸಿದ ಮೇಲೆ, ಈ ಹಿಂದೆ ಸಂಭ್ರಮಿಸಿದ ಸಿನಿಮಾಗಳನ್ನ ಯಾವ ವೈಚಾರಿಕ ಮತ್ತು ಕಾಲ-ದೇಶಗಳ ಹಿನ್ನೆಲೆಯಲ್ಲಿ ಗ್ರಹಿಸಿ ಅವುಗಳ ಸ್ಥಾನವನ್ನು ಗುರುತಿಸಬೇಕು ಎಂಬ ಜಿಜ್ಞಾಸೆ ಕಾಡುತ್ತಲೇ ಇತ್ತು. ಇತ್ತೀಚಿಗೆ ಬಿಡುಗಡೆಯಾದ ಇರಟ್ಟ ಮತ್ತು ತುರಮುಖಂ ಎಂಬ ಎರಡು ಸಿನಿಮಾಗಳು ಮತ್ತು ಅವುಗಳಿಗೆ ಸಿಗುತ್ತಿರುವ ಸ್ಪಂದನೆಯನ್ನು ನೋಡಿ ಇದುವರೆಗೂ ನಾನು ನೋಡಿರುವ ಮಲೆಯಾಳಂ ಸಿನಿಮಾಗಳ ಬಗ್ಗೆ ಬೆಳೆಸಿಕೊಂಡಿರುವ ಗ್ರಹಿಕೆಯನ್ನು ಮರು ಅವಲೋಕಿಸಬಹುದೇ ಎನ್ನಿಸಿತು.

****

ಬಹಳ ವರ್ಷಗಳ ಹಿಂದೆ ಹಿರಿಯ ಸ್ನೇಹಿತರಾದ ಕೆ. ಫಣಿರಾಜ್ ಅವರು ಇರಾನ್ ಸಿನಿಮಾ ನಿರ್ದೇಶಕ ಜಾಫರ್ ಫನಾಹಿಯವರ ’ಟ್ಯಾಕ್ಸಿ ತೆಹರಾನ್’ (2015) ಬಗ್ಗೆ ಮಾತನಾಡುವಾಗ, ’ಫನಾಹಿ ಇದರಲ್ಲಿ ಕೆಲವು ಪಾತ್ರಗಳ ಮುಖಾಂತರ ತನ್ನ ಸಮಕಾಲೀನ ಸಿನಿಮಾ ನಿರ್ದೇಶಕರಾದ ಮೋಷೆನ್ ಮಕ್ಮಲ್ಬಫ್, ಮಾಜಿದ್ ಮಾಜಿದಿ, ಅಸ್ಗರ್ ಫರ್ಹಾದಿ, ಅಬ್ಬಾಸ್ ಕಿರೋಸ್ತಮಿ ಇವರನ್ನೆಲ್ಲಾ ವಿಡಂಬನೆ ಮಾಡ್ತಾನೆ, ಪ್ರಭುತ್ವದ ದೌರ್ಜನ್ಯದ ಅತಿರೇಕದ ಸಂದರ್ಭದಲ್ಲೂ ಇವರು ಸುಭೋಗದ ಸಿನಿಮಾಗಳನ್ನು ಮಾಡುತ್ತಾರೆಂದು’ ವಿವರಿಸಿದರು. ಮಾಜಿದ್ ಮಾಜಿದಿ ಬಗ್ಗೆ ಇದು ಸರಿ ಅನಿಸಿದರು ಉಳಿದ ನಿರ್ದೇಶಕರ ಮೇಲಿನ ಅಭಿಮಾನದ ಕಾರಣಕ್ಕಾಗಿಯೋ ಏನೊ ಆ ಮಾತು ಅಂದು ಅಷ್ಟು ಕನ್ವಿನ್ಸ್ ಆಗಲಿಲ್ಲ. ಇರಲಿ..

ಮಲೆಯಾಳಂ ಸಿನಿಮಾಗಳ ಬಗ್ಗೆ ನಾನೊಂದು ರೀತಿಯ ತಪ್ಪು ಕಲ್ಪನೆ ಬೆಳೆಸಿಕೊಂಡಿದ್ದೆ. ಬಹುಶಃ ತಡರಾತ್ರಿ ಏಷಿಯಾನೆಟ್ ಮತ್ತು ಸೂರ್ಯ ಟಿ.ವಿ. ನೋಡುತ್ತಿದ್ದ ಪರಿಣಾಮ ಇರಬೇಕು. ಆದರೆ, ಯಾವಾಗ 22 ಫಿಮೇಲ್ ಕೊಟ್ಟಾಯಮ್ ನೋಡಿದೆನೋ, ಆನಂತರ ಸ್ನೇಹಿತರ ರೆಫರೆನ್ಸ್ ಮೇರೆಗೆ ಒಂದಾದ ಮೇಲೆ ಒಂದರಂತೆ ಮಲೆಯಾಳಂ ಸಿನಿಮಾಗಳನ್ನ ಹುಡುಕಿ ನೋಡುವಂತಾಯಿತು. 22 ಫಿಮೇಲ್ ಕೊಟ್ಟಾಯಮ್, ಅಂಜು ಸುಂದರಿಗಳ್, ದೃಶ್ಯಂ, ನಾರ್ತ್ 24 ಕಥಂ, ಉಸ್ತಾದ್ ಹೊಟೆಲ್ ಈ ಐದು ಸಿನಿಮಾಗಳನ್ನ ನನ್ನ ಕಂಪ್ಯೂಟರ್‌ನಲ್ಲಿ ಇಟ್ಟುಕೊಂಡು ಎಷ್ಟು ಸಲ ನೋಡಿದ್ದೇನೋ ಲೆಕ್ಕವಿಲ್ಲ. ಆನಂತರ ಮಲೆಯಾಳಂ ಸಿನಿಮಾ ಹುಚ್ಚು ಹಿಡಿಯಿತು. ಶೈಜು ಖಾಲಿದ್, ಸಮೀರ್ ಥಾಹಿರ್, ಆಶಿಕ್ ಅಬು, ಅಮಲ್ ನೀರದ್, ಅನ್ವರ್ ರಶೀದ್, ಅಂಜಲಿ ಮೆನನ್, ಅಲ್ಫೊನ್ಸೆ ಪುತಿರನ್, ಮಾರ್ಟಿನ್ ಪ್ರಕ್ಕಟ್ ಹೀಗೆ ಹೊಸ ತಲೆಮಾರಿನ ನಿರ್ದೇಶಕರು ತಾವು ಆಯ್ಕೆ ಮಾಡಿಕೊಂಡ ವಸ್ತು, ಅವರು ಕಟ್ಟುವ ಕ್ರಮ, ಕಥೆಯ ಬ್ಯಾಕ್‌ಡ್ರಾಪ್, ಅವರು ಕಟ್ಟಿಕೊಡುವ ಅವರ ಪರಿಸರದ ನೇಟಿವಿಟಿ, ಸಂಗೀತ, ಸಿನಿಮಾಟೊಗ್ರಫಿ, ಪಾತ್ರವರ್ಗದ ಸಹಜವಾದ ನಟನೆ, ಇವೆಲ್ಲಾ ಒಂದಕ್ಕಿಂತ ಒಂದು ಮೀರಿಸುವಂತೆ ಸೆಳೆದು ಇದುವರೆಗೂ ಈ ತರಹದ ಸಿನಿಮಾಗಳನ್ನು ನೋಡಿಯೇ ಇಲ್ಲವೆನಿಸಿಬಿಟ್ಟಿತ್ತು. ಪ್ರೇಮಂ, ಚಾರ್ಲಿ, ಕಾಲಿ, ಬೆಂಗಳೂರ್ ಡೇಸ್, ವಿಕ್ರಮಾದಿತ್ಯ, ಚಪ್ಪಮ್ ಕುರಿಶು, ಟ್ರಾಫಿಕ್, ಮಹೇಶಿಂಟೆ ಪ್ರತಿಕಾರಂ, ಮಾಯಾನದಿ, ಸುಡಾನಿ ಫ್ರಂ ನೈಜಿರಿಯಾ, ಅಂಗಮಲೈ ಡೈರೀಸ್ ಹೀಗೆ ಒಂದಕ್ಕಿಂತ ಒಂದು ಭಿನ್ನ ವಸ್ತುಗಳ ಸಿನಿಮಾ. ಇವುಗಳಲ್ಲಿ ನಟಿಸಿದ, ನಿತ್ಯ ಮೆನನ್, ಸಾಯಿ ಪಲ್ಲವಿ, ಪಾರ್ವತಿ ಮೆನನ್, ಸೌಬಿನ್ ಶಾಹಿರ್, ನಿವಿನ್ ಪೌಲಿ, ಫಹಾದ್ ಫಾಸಿಲ್, ಡುಲ್ಕರ್ ಸಲ್ಮಾನ್, ವಿನೋದ್ ಜೊಷ್, ಇವರೆಲ್ಲಾ ಹೊಸ ತಲೆಮಾರಿನ ಕಲಾವಿದರೆ! ಈ ನಟರು ಮತ್ತು ಅಲ್ಲಿ ಬರುತ್ತಿರುವ ಸಿನಿಮಾಗಳು ಭಾರತದ ಯಾವ ಭಾಷೆಯಲ್ಲೂ ಇಲ್ಲ ಎಂದೆನಿಸುವುದಕ್ಕೆ ಶುರುವಾಯಿತು.

ಇವುಗಳನ್ನು ನೋಡುತ್ತಿದ್ದ ಕಾಲಕ್ಕೇ ನೋಡಿದ ಮತ್ತೊಂದು ಸಿನಿಮಾ ರಾಜೀವ್ ರವಿ ನಿರ್ದೇಶನದ ’ಅನ್ನಾಯುಮ್ ರಸೂಲುಮ್’. ಯಾಕೋ ಇದು ಈ ಮೇಲೆ ಹೆಸರಿಸಿದ ಎಲ್ಲಾ ಸಿನಿಮಾಗಳಿಗಿಂತ ಭಿನ್ನ ಅನ್ನಿಸಿತ್ತು. ಆದರೆ ಆಗ ಹೋಲಿಕೆ ಮಾಡಲು ಹೋಗಲಿಲ್ಲ. ರಾಜೀವ್ ರವಿ ಮುಖ್ಯವಾಗಿ ಸಿನಿಮಾಟೊಗ್ರಾಫರ್. ಹಿಂದಿಯ ಬಹಳಷ್ಟು ಅದರಲ್ಲೂ ಅನುರಾಗ್ ಕಶ್ಯಪ್ ಅವರ ಬಹುತೇಕ ಸಿನಿಮಾಗಳಿಗೆ ಇವರದ್ದೇ ಸಿನಿಮಾಟೊಗ್ರಫಿ. ಅನ್ನಾಯುಮ್ ರಸೂಲುಮ್‌ನಲ್ಲಿನ ಒಂದೊಂದು Mise-en-scèneನಲ್ಲಿ ಕಟ್ಟಿಕೊಡುವ ಸ್ಥಳೀಯ ಬದುಕಿನ ವಿವರಗಳನ್ನು ನೋಡಿ ಅಬ್ಬಾ ಎಂಥಾ ಕ್ರಾಫ್ಟ್ ಈ ನಿರ್ದೇಶಕನದ್ದು ಅನಿಸಿತ್ತು.

ಬರ್ತಾಬರ್ತಾ ಮಲೆಯಾಳಂ ಸಿನಿಮಾಗಳ ಬಗೆಗಿನ ನನ್ನ ಗ್ರಹಿಕೆ ಯಾಕೋ ಯಡವಟ್ಟಿನದು ಅಂತ ವಸಿ ಅನಿಸೋದಕ್ಕೆ ಶುರುವಾಯಿತು. ಸಿನಿಮಾದಲ್ಲಿನ ಯಾವ ಸಂಗತಿಗಳ ಬಗ್ಗೆ ಬಹಳ ಮೆಚ್ಚುಗೆ ಆಗುತ್ತಿತ್ತೋ ಅವುಗಳೆಲ್ಲ ಸಿದ್ಧ ಸೂತ್ರಗಳಂತೆನ್ನಿಸಿ ಒಂದು ರೀತಿಯ ಏಕತಾನತೆ ಕಾಡಿತು. ವಿಷಯಗಳು ಭಿನ್ನ ಅನಿಸಿದರೂ ಅವುಗಳ ಕಟ್ಟುವ ಕ್ರಮ, ಬ್ಯಾಕ್‌ಡ್ರಾಪ್, ಆ ಸಿನಿಮಾಗಳು ಕೊನೆಗೆ ನಮ್ಮಲ್ಲಿ ಉಂಟು ಮಾಡುತ್ತಿದ್ದ ಭಾವನೆಗಳೆಲ್ಲಾ ಫೀಲ್ ಗುಡ್ ಮಿತಿಯನ್ನು ದಾಟಿ ನಮ್ಮನ್ನು ಅಲೋಚನೆಗೆ ಹಚ್ಚುತ್ತಲೇ ಇಲ್ಲವೆಲ್ಲ ಎನಿಸಿತು; ಸಮಕಾಲಿನ ತಲ್ಲಣಗಳಿಗೆ ಮಲೆಯಾಳಂ ಸಿನಿಮಾಗಳ ಕಾಂಟ್ರಿಬ್ಯೂಷನ್ ಏನೆಂಬ ಪ್ರಶ್ನೆ ಹುಟ್ಟಿತು. ಹೀಗೆ ಕೊರೆಯುತ್ತಿದ್ದಾಗಲೇ ಕಮ್ಮಟಿ ಪಾಡಂ (2016), ಕಿಸ್ಮತ್ (2016), ಈಡಾ (2018), ಕುಂಬಲಂಗಿ ನೈಟ್ಸ್ (2019), ನ್ಯಾಯಟ್ಟು (2021)ನಂತಹ ಈ ದೇಶದ ಸುಡು ವಾಸ್ತವ ಜಾತಿ ವಿಷಯವನ್ನು ಡೀಲ್ ಮಾಡಿದ ಸಿನಿಮಾಗಳು ಬಂದವು. ಇವುಗಳನ್ನು ನೋಡುತ್ತಿದ್ದಂತೆ ಮತ್ತೆ ಮಲೆಯಾಳಂ ಸಿನಿಮಾ ಅಭಿಮಾನ ಶುರುವಾಯಿತು. ಇಲ್ಲೂ ರಾಜೀವ್ ರವಿಯ ’ಕಮ್ಮಟಿ ಪಾಡಂ’ ಸಿನಿಮಾ ಭಿನ್ನ ಅನಿಸಿದ್ದು ನಿಜ. ಆದರೆ, ’ಕಮ್ಮಾಟಿ ಪಾಡಂ’ ನೋಡಿದ ಮರುದಿನವೇ, ಕೇರಳದ ಟ್ಯಾಗೋರ್ ಚಿತ್ರಮಂದಿರದಲ್ಲಿ ಜಯಂತ್ ಕೆ ಚೆರಿಯನ್ ಅವರ ’ಕ ಬಾಡಿಸ್ಕೇಪ್’ (2016) ನೋಡಿದೆ. ಅದೇ ಪ್ರಭಾವದಲ್ಲಿ ಅವರ ಹಿಂದಿನ ’ಪ್ಯಾಪಿಲಾನ್ ಬುದ್ಧ’ (2013), ನೋಡಿದ ಮೇಲಂತೂ ಇಡಿಯಾಗಿ ಎಲ್ಲ ಮಲೆಯಾಳಂ ಸಿನಿಮಾ ನಿರ್ದೇಶಕರಗಿಂತ ಚೆರಿಯನ್ ಭಿನ್ನ ಮತ್ತು ಬಂಡುಕೋರ ಅನಿಸೋದಿಕ್ಕೆ ಶುರುವಾಯಿತು. ಇನ್ನೂ ವಿದು ವಿನ್ಸೆಂಟ್ ನಿರ್ದೇಶನದ ’ಮ್ಯಾನ್ ಹೋಲ್’ (2016) ಬೇರೆಯದೆ ಲೆವಲ್ ಸಿನಿಮಾ. ಅಂಬೇಡ್ಕರ್ ಅವರ Educate Agitate Organize ಘೊಷಣೆ ಮತ್ತು ತತ್ವವನ್ನು ಬಹಳ ಅದ್ಭುತವಾದ ದೃಶ್ಯಗಳಲ್ಲಿ ಮೂಡಿಸಿದ ಸಿನಿಮಾ. ಅದೇ ರೀತಿ ಲಿಜೊ ಪೆಲ್ಲಿಸಿರಿ ನಿರ್ದೇಶನದ ಈ.ಮ.ಯು (2018) ನೋಡಿದಾಗಲಂತೂ ಅಬ್ಬಾ ಎಂಥಾ ಸಿನಿಮಾ ಇದು; ಧರ್ಮದ ಬುಡಕ್ಕೆ ಕೈ ಹಾಕಿ ಅದರ ಭಯೋತ್ಫಾದನೆಯನ್ನ ಎಷ್ಟು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾನೆ ಅನಿಸಿಬಿಟ್ಟಿತು. ಇನ್ನೊಂದು ಸಿನಿಮಾವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು ಅದು ಬಿಜುಕುಮಾರ್ ದಾಮೋದರನ್ ನಿರ್ದೇಶನದ ’ಕಾಡು ಪೊಕ್ಕುನ್ನ ನೇರಂ’ (2016).

ಇದನ್ನೂ ಓದಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ಇದರ ನಡುವೆಯೇ ಆಕಸ್ಮಿಕವಾದ ಒಂದು ಸಂದರ್ಭದಲ್ಲಿ ಕೊಂಚ ಹಳೆ ನಿರ್ದೇಶಕರಾದ ಶಾಜಿ ಎನ್ ಕರುಣ್ ಅವರ ಪಿರವಿ (1989), ವಾನಪ್ರಸ್ಥಂ (1999) ಮತ್ತು ಅಡೂರ್ ಗೋಪಾಲಕೃಷ್ಣ ಅವರ ಎಲಿಪತ್ತಾಯಂ (1981), ವಿಧೇಯನ್ (1993), ಕಥಾಪುರುಷನ್ (1995), ವೈಕಂ ಮಹ್ಹಮದ್ ಬಶೀರ್ ಅವರ ಕೃತಿ ಆಧಾರಿತ ’ಮತಿಲುಕಲ್’ (1990), ನಾಲು ಪೆಣ್ಣುಂಗಲ್ (2007), ಜೊತೆಗೆ ಮತ್ತೊಂದೆರಡು ಸಿನಿಮಾಗಳನ್ನು ನೋಡಿದೆ. ಇವು ನೋಡಿದ ಮೇಲೆ, ನಾವೇಕೆ ಯಾವಾಗಲೂ ಸತ್ಯಜಿತ್ ರೇ, ಮೃಣಾಲ್ ಸೇನ್, ಋತ್ವಿಕ್ ಘಟಕ್ ಅಂತ ಉತ್ತರದ ಕಡೆ ಮುಖ ಮಾಡ್ತೀವಿ, ನಮ್ಮ ಪಕ್ಕದವರೇ ನಿರ್ದೇಶಿಸಿರುವ ಇಷ್ಟು ಅದ್ಭುತ ಸಿನಿಮಾಗಳನ್ನು ನೋಡಲು ಆಗಿಲ್ಲವಲ್ಲ ಅಂತ ಕೊರಗು ಶುರುವಾಯಿತು.

ರಾಜೀವ್ ರವಿ

ಮಲೆಯಾಳಂನಲ್ಲೂ ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾ ರಂಗಗಳಲ್ಲಿ ರೊಟೀನ್ ಆಗಿ ಬರುವಂತಹ ಸಿನಿಮಾಗಳು ಬಂದಿವೆ ಈಗಲೂ ಬರುತ್ತಿವೆ. ಅವುಗಳನ್ನು ಇಲ್ಲಿ ಹೆಸರಿಸಿಲ್ಲ. ಪ್ರೇಕ್ಷಕ ಮತ್ತು ವಿಮರ್ಶಕರು ಮೆಚ್ಚಿದ ಸಿನಿಮಾಗಳನ್ನು ಮಾತ್ರ ಇಲ್ಲಿ ಹೇಳಿದ್ದೇನೆ. (ಶಾಜಿ ಎನ್ ಕರುಣ್, ಅಡೂರ್ ಗೋಪಾಲಕೃಷ್ಣ ಮತ್ತು ಜಯನ್ ಕೆ ಚೆರಿಯನ್ ಸಿನಿಮಾಗಳನ್ನು ಬಿಟ್ಟು) ನಿಜವಾಗಿಯೂ ಕಲೆ ಏನನ್ನು ಸಾಧಿಸಬೇಕು ಎಂದು ಕೇಳಿಕೊಂಡಾಗ ಈ ಮೇಲಿನ ಸಿನಿಮಾಗಳನ್ನು ನನ್ನ ಬದಲಾದ ಅಲೋಚನೆಗೆ ತಕ್ಕಂತೆ ಮೂರು ನಾಲ್ಕು ಹಂತದ ಗ್ರೇಡ್ ಮಾಡಬಹುದು. ಅದರ ಭಾಗವಾಗಿ ನಾನು ಬಹಳವೇ ಮೆಚ್ಚಿದ ಹಿಂದಿನ ತಲೆಮಾರಿನ ಇಬ್ಬರು ನಿರ್ದೇಶಕರ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಎರಡು ಸಿನಿಮಾಗಳ ಬಗ್ಗೆ ನೋಡೋಣ.

ಅಡೂರ್ ಗೋಪಾಲಕೃಷ್ಣ ಮತ್ತು ಶಾಜಿ ಎನ್ ಕರುಣ್ ಅವರ ಬಹುತೇಕ ಸಿನಿಮಾಗಳನ್ನು ಇಂಡಿಯನ್ ಕ್ಲಾಸಿಕ್ ಸಿನಿಮಾ ಅಂತ ಗುರುತಿಸುತ್ತಾರೆ. ಅಡೂರ್ ಗೋಪಾಲಕೃಷ್ಣ ಅವರ ವಿಧೇಯನ್ (1993) ಮತ್ತು ಶಾಜಿ ಕರುಣ್ ಅವರ ವಾನಪ್ರಸ್ಥಂ (1999) ಈ ಎರಡು ಸಿನಿಮಾಗಳು ಜಾತಿ ದೌರ್ಜನ್ಯದ ಕುರಿತಾದವು. ಇವುಗಳನ್ನು ನೋಡಿದ್ದ ಕಾಲಕ್ಕೆ ಅದ್ಭುತ ಸಿನಿಮಾಗಳೆನಿಸಿದ್ದು ಹೌದು. ಈಗಲೂ ಮೇಕಿಂಗ್ ದೃಷ್ಟಿಯಿಂದ ಅಧ್ಭುತವಾಗಿಯೇ ಇದೆ. ಆದರೆ ಇಲ್ಲಿ ಬರುವ ದಲಿತ ಪಾತ್ರಗಳು ಪ್ರಧಾನವಾಗಿದ್ದರೂ ಬಹಳ ಚಿಂತಾಜನಕವಾಗಿ ಕಟ್ಟಿಕೊಡಲಾಗಿದೆ. ಇದು ಅರ್ಥ ಆಗುವುದಕ್ಕೆ ದೌರ್ಜನ್ಯಕ್ಕೆ ಒಳಗಾದ ಸಮುದಾಯದ ಪ. ರಂಜಿತ್ ಮತ್ತು ಮಾರಿ ಸೆಲ್ವರಾಜ್ ಅವರ ಸಿನಿಮಾಗಳೇ ಬರಬೇಕಾಯಿತು. ಘನತೆಯೇ ಇಲ್ಲದೆ ಬಹಳ ನಿಸ್ಸಹಾಯಕ ದೈನ್ಯತೆಯ ರೀತಿ ದಲಿತ ಪಾತ್ರಗಳನ್ನು ಸೃಷ್ಟಿಸುವುದು ಕೊನೆಗೆ ಅದೇ ಪ್ರಿವಿಲೇಜ್ಡ್ ಸಮುದಾಯದ ಸೋ-ಕಾಲ್ಡ್ ಪ್ರಗತಿಪರ ನೋಟವಷ್ಟೆ ಅನ್ನಿಸಿತು.

ಮತ್ತೊಂದು ಉದಾಹರಣೆಯಲ್ಲಿ ಹೊಸ ತಲೆಮಾರಿನ ನಿರ್ದೇಶಕರ ಒಂದು ಸಿನಿಮಾವನ್ನು ನೋಡುವುದಾದರೆ, ಕಳೆದ ತಿಂಗಳು ಬಿಡುಗಡೆಗೊಂಡು ಭಾರಿ ಪ್ರಶಂಸೆ ಪಡೆಯುತ್ತಿರುವ ರೋಹಿತ್ ಎಂ.ಜಿ. ಕೃಷ್ಣನ್ ಅವರ ’ಇರಟ್ಟು’ ಸಿನಿಮಾ ನೋಡೋಣ: ಕುಟುಂಬ ಬೇರ್ಪಟ್ಟ ಕಾರಣ ಭಿನ್ನ ಪರಿಸರದ ಪ್ರಭಾವದಲ್ಲಿ ಬೆಳೆಯುವ ಅವಳಿ ಸಹೋದರರ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ತಂದೆ ಮತ್ತು ತನ್ನ ಸಮುದಾಯದಿಂದ ಆಗುವ ಕಹಿ ಅನುಭವಗಳಿಂದ ರೂಕ್ಷ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವ ಸಹೋದರನ ಪಾತ್ರ ತಾನು ನಡೆಸಿದ ಲೈಗಿಂಕ ದೌರ್ಜನ್ಯಕ್ಕಾಗಿ ಪಶ್ಚಾತ್ತಾಪಕ್ಕೆ ಒಳಗಾಗುತ್ತಾನೆ. ಕಥೆಯೇನೊ ಒಳ್ಳೆಯ ಆಶಯದ್ದೇ ಆಗಿದೆ. ಆದರೆ ಈ ಲೈಂಗಿಕ ದೌರ್ಜನ್ಯವನ್ನು ಸಿನಿಮಾದಲ್ಲಿ ಒಂದು ಚೀಪ್ ಥ್ರಿಲ್‌ಗಾಗಿ ಸಲುವಾಗಿ ಸೃಷ್ಟಿಸಲಾಗಿರುವಂತೆ ಭಾಸವಾಗುತ್ತದೆ. ಆ ಪಾತ್ರದ ಮನಃಪರಿವರ್ತನೆಗೆ ಪೂರಕವಾಗಿ ಬರುವ ಹೆಣ್ಣು ಪಾತ್ರಗಳ ಸರಿಯಾದ ಪೋಷಣೆಯೇ ಇಲ್ಲ. ಅಂತಹ ಪಾತ್ರಗಳ ಪೋಷಣೆಯಿಂದ ದುಷ್ಟನೊಬ್ಬ ತನ್ನ ಹೀನಕೃತ್ಯಗಳಿಗೆ ಹೇಸಿಗೆ ಪಟ್ಟು ಹಂತಹಂತವಾಗಿ ಮನುಷ್ಯನಾಗುವ ಚಿತ್ರಣವನ್ನು ಕಟ್ಟಿಕೊಡುವ ಸಾಕಷ್ಟು ಅವಕಾಶಗಳಿದ್ದರೂ, ನಿರ್ದೇಶಕರಿಗೆ ಈ ಮನುಷ್ಯನಾಗುವ ಪ್ರಕ್ರಿಯೆಗಿಂತ, ಪ್ರೇಕ್ಷಕನನ್ನು ಅಗ್ಗದ ಎಮೋಷನ್‌ನಲ್ಲಿ ಮುಳುಗಿಸುವ, ಕುತೂಹಲದ ಸಲುವಾಗಿ ಕಳಪೆ ಥ್ರಿಲ್ ಮತ್ತು ಮನರಂಜನೆ ನೀಡುವುದೆ ಮುಖ್ಯವಾಗಿದೆ.

ಇವತ್ತಿನ ಯುವ ಮಲಯಾಳಂ ನಿರ್ದೇಶಕರ ಸಿನಿಮಾಗಳನ್ನು ಕಾಲ-ದೇಶಗಳ ನಿಕಷಕ್ಕೆ ಒಡ್ಡಿ, ಅವುಗಳು ಜನಸಾಮಾನ್ಯರ ದೈನಂದಿನ ಬದುಕು ಮತ್ತು ತಲ್ಲಣಗಳಿಗೆ ಹೇಗೆ ಸ್ಪಂದಿಸುತ್ತವೆ, ಮನುಷ್ಯ ಘನತೆಯನ್ನು ಎತ್ತಿಹಿಡಿದು, ವೈಚಾರಿಕತೆ ಮತ್ತು ಮನುಷ್ಯತ್ವವನ್ನು ಪ್ರತಿಪಾದಿಸುತ್ತವೆಯೇ ಎಂದು ಚರ್ಚಿಸಿ ಅವುಗಳ ಸ್ಥಾನವನ್ನು ನಿರ್ಧರಿಸಿ ಸಂಭ್ರಮಿಸಬೇಕೇನೊ ಅನಿಸುತ್ತದೆ.

ಮುಂದಿನ ಭಾಗದಲ್ಲಿ: ರಾಜೀವ್ ರವಿಯವರ ’ತುರಮುಖಂ’: ಘನತೆ ಮತ್ತು ಮನುಷ್ಯತ್ವದ ಹೋರಾಟದ ಕಥನ

ಯದುನಂದನ್ ಕೀಲಾರ
ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...