Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-4)

- Advertisement -
- Advertisement -

ಪ್ರಿನ್ಸ್ ಮಾತನಾಡುತ್ತಲೇ ಅಭಿನಯಪೂರ್ವಕ ಭಾವತೀವ್ರನಾಗುತ್ತಾ ಹೋದ; ಅವನ ಮಾತನಾಡುವ ಶೈಲಿಯು ಮೊದಲಿನಂತೆಯೇ ಇದ್ದರೂ ಅವನ ಬಿಳಿಚಿಕೊಂಡ ಮುಖದಲ್ಲಿ ಬಣ್ಣದ ಛಾಯೆ ಮೂಡಲು ಶುರುವಾಯಿತು. ಸೇವಕ, ಪ್ರಿನ್ಸ್‌ನ ಮಾತುಗಳನ್ನ ಸಹಾನುಭೂತಿಯಿಂದ ಕೂಡಿದ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ. ಈ ಸಂಭಾಷಣೆಯನ್ನ ಅಂತ್ಯಗೊಳಿಸಲು ಯಾವುದೇ ರೀತಿಯಲ್ಲಿಯೂ ಅವನು ಉತ್ಸುಕನಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಯಾರಿಗೆ ಗೊತ್ತು? ಬಹುಶಃ ಅವನೂ ಕೂಡ ಚಿಂತಿಸಲು ಸ್ವಲ್ಪ ಶಕ್ತಿಯಿರುವ ಕಲ್ಪನಾಶೀಲ ವ್ಯಕ್ತಿಯಾಗಿದ್ದಿರಬಹುದು.

“ಸರಿ, ಬೇರೆಯದೇ ಆದ ವಿಧಾನಗಳಿಗೆ ಹೋಲಿಸಿದರೆ ಆ ಪಾಪದ ಮನುಷ್ಯನ ತಲೆಯನ್ನ ಒಂದೇ ಏಟಿಗೆ ತುಂಡರಿಸಿದಾಗ ಅವನು ಆ ನೋವನ್ನು ಅನುಭವಿಸದೇ ಇರುವುದೂ ಕೂಡ ಇದರಲ್ಲಿರುವ ಒಂದು ಒಳ್ಳೆಯ ಅಂಶ”, ಅವನು ತನ್ನ ಅಭಿಪ್ರಾಯವನ್ನ ಹೇಳಿದ.

“ಆದರೂ ನಿನಗೆ ಗೊತ್ತಾ”, ಪ್ರಿನ್ಸ್ ಆತ್ಮೀಯತೆಯಿಂದ ಕೂಡಿದ ಏರು ಧ್ವನಿಯಲ್ಲಿ ಹೇಳಿದ, “ನೀನು ಆ ಅಭಿಪ್ರಾಯವನ್ನ ಈಗ ಹೇಳಿದೆ, ಮತ್ತು ಪ್ರತಿಯೊಬ್ಬರೂ ಕೂಡ ಅದನ್ನೇ ಹೇಳುತ್ತಾರೆ; ಆ ಯಂತ್ರವನ್ನ ವಿನ್ಯಾಸಗೊಳಿಸಿರುವುದು ಅಪರಾಧಿಗೆ ನೋವು ಆಗದೇ ಇರುವ ರೀತಿಯಲ್ಲಿ, ಅದೇ ನಾನು ಹೇಳುತ್ತಿರುವುದು ಈ ಗಿಲೊಟಿನ್ ಬಗ್ಗೆ; ಆದರೆ ಆ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಆಲೋಚನೆಯೊಂದು ಮೂಡಿತು: ಅದು ಎಲ್ಲದಕ್ಕಿಂತ ಕೆಟ್ಟದಾದ ಯೋಚನೆ ಆಗಿದ್ದರೆ ಏನು? ಬಹುಶಃ ನೀನು ನನ್ನ ಈ ಯೋಚನೆಯ ಬಗ್ಗೆ ನಗಬಹುದು, ಆದರೆ ಈ ಕಲ್ಪನೆಯು ನನ್ನಲ್ಲಿ ಮೂಡದೇ ಇರುವಂತೆ ಮಾಡಲು ನನಗೆ ಸಾಧ್ಯವಿರಲಿಲ್ಲ. ಈಗಿನ ಹಳೆಯ ಪದ್ಧತಿಗಳಲ್ಲಿ ಅಂದರೆ ನೇಣುಗಂಬಕ್ಕೇರಿಸುವುದು ಅಥವಾ ಹಿಂಸಿಸಿ ಕೊಲ್ಲುವುದರಲ್ಲಿ ಅಪರಾಧಿ ಭಯಾನಕವಾದ ನೋವನ್ನು ಅನುಭವಿಸುವುದು ಖಂಡಿತವಾಗಿಯೂ ನಿಜ; ಆದರೆ ಆ ಹಿಂಸೆ ಆಗುವುದು ದೇಹಕ್ಕೆ ಮಾತ್ರ, (ಅನುಮಾನವಿಲ್ಲದೇ ಅದು ಸಾಕಷ್ಟು ಹೆಚ್ಚೇ ಇರುತ್ತದೆ) ಮತ್ತು ಸಾಯುವವರೆಗೆ ಮಾತ್ರ ಇರುತ್ತದೆ. ಇಲ್ಲಿ ನಾನು ಕಲ್ಪಿಸಿಕೊಳ್ಳಬೇಕಿರುವುದು, ಈ ಇಡೀ ಶಿಕ್ಷೆಯ ಎಲ್ಲದಕ್ಕಿಂತ ಹೆಚ್ಚು ಭಯಾನಕವಾದ ಅಂಶ, ದೇಹಕ್ಕೆ ಉಂಟುಮಾಡುವ ನೋವು ಮಾತ್ರ ಅಲ್ಲವೇ ಅಲ್ಲ, ಬದಲಿಗೆ ಒಂದು ಗಂಟೆಯ ನಂತರ, ಆಮೇಲೆ ಹತ್ತು ನಿಮಿಷಗಳ ನಂತರ ಅಥವಾ ಅರ್ಧ ನಿಮಿಷದ ನಂತರ, ಅಥವಾ ಅದು ಈಗಲೇ ತಕ್ಷಣದಲ್ಲಿಯೇ ನಿನ್ನ ಆತ್ಮ ನಿನ್ನ ದೇಹವನ್ನ ಬಿಟ್ಟು ಹೋಗಲಿದೆ ಮತ್ತು ಮುಂದೆ ನೀನೆಂದೂ ಮನುಷ್ಯನಾಗಿ ಉಳಿಯುವುದಿಲ್ಲ ಅನ್ನುವ ನಿಶ್ಚಿತ ತಿಳಿವಳಿಕೆ, ಅದು ಖಡಾಖಂಡಿತವಾಗಿ ನಿಶ್ಚಿತವಾದದ್ದು ಎಂಬುದು ಹೆಚ್ಚು ಹಿಂಸಾತ್ಮಕವಾದದ್ದು. ಇಲ್ಲಿನ ಮುಖ್ಯ ಅಂಶ ಏನೆಂದರೆ ಅದರ ನಿಶ್ಚಿತತೆ; ಅದರ ಖಚಿತತೆ. ನಿಗದಿತ ಜಾಗದಲ್ಲಿ ತಲೆಯನ್ನ ಇರಿಸಿದ ಕ್ಷಣ, ಕಬ್ಬಿಣದ ಗೇಟು ಮೇಲಿನಿಂದ ಕತ್ತಿನ ಮೇಲೆ ಬೀಳುವ ಶಬ್ದವನ್ನ ಕೇಳಿದಾಗ, ಆ ಕಾಲು ಸೆಕೆಂಡುಗಳು ಮಾತ್ರ ಎಲ್ಲದಿಕ್ಕಿಂತ ಹೆಚ್ಚು ಭೀಕರವಾದದ್ದು.

“ಇದು ಅತ್ಯದ್ಭುತವಾದ ನನ್ನದ್ದೇ ಸ್ವಂತ ಅಭಿಪ್ರಾಯವಂತೇನೂ ಇಲ್ಲ- ಅನೇಕ ಜನರು ಇದೇ ರೀತಿ ಯೋಚಿಸಿದ್ದಾರೆ; ಆದರೆ ನಾನಿದನ್ನು ಬಹಳ ಆಳವಾಗಿ ಅನುಭವಿಸಿದ ಕಾರಣದಿಂದ ನಾನೇನನ್ನು ಯೋಚಿಸಿದೆ ಅನ್ನುವುದನ್ನ ನಿನಗೆ ಹೇಳುತ್ತಿದ್ದೇನೆ. ನನ್ನ ನಂಬಿಕೆಯ ಪ್ರಕಾರ ಕೊಲೆ ಮಾಡಿದವನಿಗೆ ಮರಣದಂಡನೆಯನ್ನ ವಿಧಿಸುವುದು ಅವನ ಅಪರಾಧಕ್ಕೆ ಸರಿಸಮಾನವಲ್ಲದಷ್ಟು ಘೋರವಾದ ಮತ್ತು ಅಳತೆ ಮೀರಿದ ಶಿಕ್ಷೆ. ನ್ಯಾಯಾಲಯದ ತೀರ್ಪಿನ ಕಾರಣದಿಂದ ಕೊಲ್ಲುವುದು ಒಬ್ಬ ಅಪರಾಧಿಯು ಇನ್ನೊಬ್ಬನನ್ನು ಕೊಂದಿದ್ದಕ್ಕಿಂತ ಹೆಚ್ಚು ಘೋರವಾದದ್ದು. ಒಬ್ಬ ಮನುಷ್ಯನನ್ನು ಗಾಢಾಂಧಕಾರದ ಕಾಡಿನಲ್ಲಿ ಅಥವ ಇನ್ನೆಲ್ಲಿಯಾದರೂ, ರಾತ್ರಿಯ ವೇಳೆ ದರೊಡೆಕೋರರು ದಾಳಿಮಾಡಿದಾಗ ಆತ ಅನುಮಾನವಿಲ್ಲದೇ ಭರವಸೆಯಿಂದಿರುತ್ತಾನೆ ಮತ್ತು ಸಾಯುವವರೆಗೂ ಬಚಾವಾಗಬಹುದು ಅನ್ನುವ ಭರವಸೆಯಿಂದ ಇರುತ್ತಾನೆ. ಅವನ ಕತ್ತನ್ನು ಕುಯ್ದ ನಂತರವೂ ಕೂಡ, ಒಬ್ಬ ಮನುಷ್ಯ ತಪ್ಪಿಸಿಕೊಂಡು ಓಡಿ ಹೋಗಿರುವ, ಅಥವಾ ಈ ಎಲ್ಲಾ ಸಂದರ್ಭಗಳಲ್ಲಿಯೂ ಒಂದು ಮಟ್ಟದ ಭರವಸೆಯೊಂದಿಗೆ ಕ್ಷಮಾದಾನಕ್ಕಾಗಿ ಅರಸಿರುವ ಅನೇಕ ಉದಾಹರಣೆಗಳಿವೆ. ಆದರೆ ಮರಣದಂಡನೆಯ ಸಮಯದಲ್ಲಿ ಆ ಕೊನೆಯ ಭರವಸೆಯನ್ನು- ಯಾವುದು ಸಾಯುವ ಬಗೆಗಿನ ಘೋರತೆಯನ್ನ ಅಳತೆಗೆ ಸಿಗದಷ್ಟು ಕಮ್ಮಿಮಾಡುತ್ತಾ ಹೋಗುತ್ತದೊ, ಅದನ್ನ ಆಳದಿಂದ ಕಿತ್ತುಕೊಳ್ಳಲಾಗುತ್ತದೆ ಮತ್ತು ಅದನ್ನು ಖಚಿತತೆ ಬದಲಿಸಿಬಿಡುತ್ತದೆ. ಅವನಿಗಾಗಲೇ ಶಿಕ್ಷೆ ವಿಧಿಸಲಾಗಿದೆ, ಮತ್ತು ಅದರ ಜೊತೆಗೆ ಸಾವಿನಿಂದ ಬಚಾವಾಗಲು ಸಾಧ್ಯವೇ ಇಲ್ಲ ಅನ್ನುವ ಭಯಾನಕವಾದ ಖಚಿತತೆ, ನಾನು ಅದನ್ನ ಪ್ರಪಂಚದಲ್ಲೇ ಅತ್ಯಂತ ಭೀಕರವಾದ ವೇದನೆ ಎಂದು ಪರಿಗಣಿಸುತ್ತೇನೆ. ಯುದ್ಧದಲ್ಲಿ ನೀನು ಒಬ್ಬ ಸೈನಿಕನನ್ನು ಒಂದು ಫಿರಂಗಿಯ ಬಾಯಿಗೆ ಕಟ್ಟಿ ಅವನ ಮೇಲೆ ಗುಂಡು ಹಾರಿಸಬಹುದು- ಆ ಸಂದರ್ಭದಲ್ಲೂ ಅವನಿಗೊಂದು ಭರವಸೆ ಇರುತ್ತದೆ. ಆದರೆ ಅದೇ ಸೈನಿಕನ ಮುಂದೆ ಅವನ ಮರಣದಂಡನೆಯ ತೀರ್ಪನ್ನು ಓದಿದಾಗ, ಅವನು ಹುಚ್ಚನಂತಾಗುತ್ತಾನೆ ಅಥವ ಕಣ್ಣೀರಿಟ್ಟು ಗೋಳಾಡಲು ಶುರುಮಾಡುತ್ತಾನೆ. ಯಾವ ಮನುಷ್ಯನೇ ಆದರೂ ಹುಚ್ಚನಾಗದೇ ಈ ಹಿಂಸೆಯನ್ನ ಅನುಭವಿಸುತ್ತಾನೆ ಎಂದು ಹೇಳುವಷ್ಟು ಧೈರ್ಯ ಯಾರಿಗಿದೆ? ಇಲ್ಲ ಇಲ್ಲ, ಇದೊಂದು ದುರುಪಯೋಗ, ನಾಚಿಕೆಗೇಡಿನದು, ಇದು ಅನಗತ್ಯವಾದದ್ದು. ಇಂತಹದ್ದು ಅಸ್ತಿತ್ವದಲ್ಲಿ ಯಾತಕ್ಕೋಸ್ಕರ ಇರಬೇಕು? ಯಾರಿಗೆ ಮರಣ ದಂಡನೆಯನ್ನ ವಿಧಿಸಲಾಗಿತ್ತೋ, ಯಾರು ಈ ರೀತಿಯ ಮಾನಸಿಕ ವೇದನೆಯನ್ನ ಸ್ವಲ್ಪ ಕಾಲವಾದರೂ ಅನುಭವಿಸಿದ್ದರೋ, ಅಂತಹವರಲ್ಲಿ ಕೆಲವರು ಕ್ಷಮಾದಾನದಿಂದ ಉಳಿದಿರುವ ಬಗ್ಗೆ ಅನುಮಾನಗಳಿಲ್ಲ; ಆದರೆ, ಬಹುಶಃ ಅಂತಹವರು ತಾವು ಮಾನಸಿಕವಾಗಿ ಅನುಭವಿಸಿದ ಭಾವನೆಗಳ ಬಗ್ಗೆ ನಂತರದ ದಿನಗಳಲ್ಲಿ ಯೋಚಿಸಿರಲಿಕ್ಕೂ ಸಾಧ್ಯವಿದೆ. ನಮ್ಮ ಲಾರ್ಡ್ ಕ್ರಿಸ್ತ ಆ ರೀತಿಯ ವೇದನೆ ಮತ್ತು ಭಯದ ಬಗ್ಗೆ ಹೇಳಿದ್ದರು. ಇಲ್ಲ ಇಲ್ಲ! ಕೂಡದು! ಯಾವುದೇ ಮನುಷ್ಯನನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವಹಾಗಿಲ್ಲ, ನಡೆಸಿಕೊಳ್ಳಬಾರದು!”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

ಸೇವಕನಿಗೆ, ಪ್ರಿನ್ಸ್ ಇವನ್ನೆಲ್ಲಾ ವಿವರಿಸಿದ ರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೇ ಇದ್ದಿರಬಹುದಾದರೂ, ಅವನು ಇದನ್ನೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ಗ್ರಹಿಸಿಕೊಂಡ; ಅವನ ಬದಲಾದ ಅಭಿವ್ಯಕ್ತಿಯಲ್ಲಿ ಹೆಚ್ಚು ಸೌಹಾರ್ದತೆಯು ಕಾಣತೊಡಗಿದ್ದೇ ಇದಕ್ಕೆ ಸಾಕ್ಷಿಯಾಯಿತು. “ನಿನಗೆ ಧೂಮಪಾನ ಬೇಕೇಬೇಕು ಎಂದೆನಿಸುತ್ತಿದ್ದರೆ, ಅದಕ್ಕೆ ಬಹುಶಃ ವ್ಯವಸ್ಥೆ ಮಾಡಬಹುದು, ಆದರೆ ನೀನು ಅದನ್ನು ಬೇಗ ಮುಗಿಸಬೇಕು. ಅವರು ಯಾವುದೇ ಗಳಿಗೆಯಲ್ಲಿ ನಿನ್ನ ಕೇಳಿಕೊಂಡು ಆಚೆ ಬರಬಹುದು, ಆ ಸಮಯದಲ್ಲಿ ನಿನ್ನ ಜಾಗದಲ್ಲಿ ನೀನಿಲ್ಲದೇ ಹೋದರೆ. ಆ ಕಡೆ ಒಂದು ಬಾಗಿಲಿರುವುದನ್ನ ನೋಡಿದೆಯಾ? ಅದರೊಳಗಡೆಗೆ ಹೋದರೆ ಬಲಗಡೆಯಲ್ಲಿ ನಿನಗೊಂದು ಸಣ್ಣ ಕೋಣೆ ಕಾಣುತ್ತದೆ; ನೀನಲ್ಲಿ ಧೂಮಪಾನ ಮಾಡಬಹುದು, ಕಿಟಕಿಗಳನ್ನ ಮಾತ್ರ ತೆರೆಯಬೇಕು, ಕಾರಣ ನಾನು ಇದಕ್ಕೆಲ್ಲಾ ನಿಜವಾಗಲೂ ಅವಕಾಶ ಮಾಡಿಕೊಡುವ ಹಾಗಿಲ್ಲ-.” ಆದರೆ ಇದಕ್ಕೆಲ್ಲಾ ಸಮಯವೇ ಇರಲಿಲ್ಲ.

ಆ ಕ್ಷಣದಲ್ಲಿ ತನ್ನ ಕೈಯ್ಯಲ್ಲಿ ಕಾಗದಗಳ ಕಂತೆಯೊಂದನ್ನು ಹಿಡಿದುಕೊಂಡು ಒಬ್ಬ ಯುವಕ ಸೇವಕರ ಕೋಣೆಯೊಳಗಡೆಗೆ ಬಂದ. ಸೇವಕ ಅವನ ಓವರ್ ಕೋಟನ್ನು ತೆಗೆಯುವುದಕ್ಕೆ ಸಹಾಯ ಮಾಡಲು ಮುಂದಕ್ಕೆ ಹೋದ. ಹೊಸದಾಗಿ ಬಂದವ ಪ್ರಿನ್ಸ್ ಕಡೆಗೆ ಓರೆಗಣ್ಣಿನಿಂದ ನೋಡಿದ.

“ಗ್ಯಾವ್ರಿಲ ಅರ್ಡಾಲಿಯೊನೋವಿಚ್, ಈ ವ್ಯಕ್ತಿ ಹೇಳಿಕೊಳ್ಳುತ್ತಿರುವುದು” ಗೌಪ್ಯವಾಗಿ ಮತ್ತು ಬಹುತೇಕ ಪರಿಚಯದವನಂತೆ ಸೇವಕ ಶುರುಮಾಡಿದ, “ತಾನು ಪ್ರಿನ್ಸ್ ಮೂಯಿಶ್ಕಿನ್ ಮತ್ತು ಮೇಡಮ್ ಎಪಾಂಚಿನ್ ಅವರ ಸಂಬಂಧಿಕ ಎಂದು, ಮತ್ತು ಅವನ ಬಳಿ ಇರುವ ಸಾಮಾನುಗಳೆಂದರೆ ಒಂದು ಬಟ್ಟೆಯ ಗಂಟು ಮಾತ್ರ.”

ಪ್ರಿನ್ಸ್‌ಗೆ ಕಡೆಯಲ್ಲಿ ಹೇಳಿದ್ದು ಕೇಳಿಸಲಿಲ್ಲ, ಕಾರಣ ಅದನ್ನು ಸೇವಕ ಪಿಸುಧ್ವನಿಯಲ್ಲಿ ಮಾತಾಡುತ್ತಿದ್ದುದು.

ಗ್ಯಾವ್ರಿಲ ಅರ್ಡಾಲಿಯೊನೋವಿಚ್ ಗಮನವಿಟ್ಟು ಕೇಳಿಸಿಕೊಂಡ, ಮತ್ತು ಬಹಳ ಕುತೂಹಲದಿಂದ ಪ್ರಿನ್ಸ್ ಕಡೆಗೆ ನೋಡಿದ. ಕೊನೆಗೂ ಸೇವಕನನ್ನು ಪಕ್ಕಕ್ಕೆ ಹೋಗುವಂತೆ ಹೇಳಿ ಪ್ರಿನ್ಸ್ ಕಡೆಗೆ ಅವಸರದಿಂದ ಹೆಜ್ಜೆಹಾಕಿದ.

“ನೀನು ಪ್ರಿನ್ಸ್ ಮೂಯುಶ್ಕಿನ್ ಹೌದ?” ಅತೀವವಾದ ಸೌಜನ್ಯತೆ ಮತ್ತು ಸೌಹಾರ್ದತೆಯಿಂದ ಅವನು ಕೇಳಿದ.

ಅವನು ಸುಮಾರು ಇಪ್ಪತ್ತೆಂಟು ವರ್ಷ ವಯಸ್ಸಿನ ಗಮನಾರ್ಹ ದೇಹರ್ಧ್ಯಢ್ಯದ ಸುಂದರ ಯುವಕ ಮತ್ತು ಮಧ್ಯಮ ಎತ್ತರದವನಾಗಿದ್ದ; ಸಣ್ಣ ಗಡ್ಡವನ್ನ ಕೂಡ ಬಿಟ್ಟಿದ್ದ, ಮತ್ತು ಅವನ ಮುಖ ಅವನು ಅತ್ಯಂತ ಬುದ್ಧಿವಂತ ಎನ್ನುವುದನ್ನ ಬಿಂಬಿಸುತ್ತಿತ್ತು. ಆದರೂ ಅವನ ನಗೆ, ಅದರಲ್ಲಿನ ಮಧುರತೆಯ ಹೊರತಾಗಿಯೂ, ಸ್ವಲ್ಪ ಶಿಷ್ಟಾಚಾರದಿಂದ ಕೂಡಿತ್ತು, ಮತ್ತು ಸಾಲಾಗಿ ಜೋಡಿಸಿದಂತಿದ್ದ ಅವನ ದಂತಪಂಕ್ತಿ ಸ್ವಲ್ಪ ಮಾತ್ರ ಕಾಣಿಸುವಂತೆ ನಗುತ್ತಿದ್ದ. ಅವನ ನೋಟ ಸ್ನೇಹಪರ ಮತ್ತು ಮುಗ್ಧತೆಯಿಂದ ಕೂಡಿದ್ದರೂ, ತುಸು ಅತಿಯಾದ ಕುತೂಹಲಕಾರಿ ವ್ಯಕ್ತಿ ಎಂಬುದನ್ನ ಬಿಂಬಿಸುತ್ತಿತ್ತು. ಆದರೆ ಒಟ್ಟಿನಲ್ಲಿ ಅವನ ಇಡೀ ವ್ಯಕ್ತಿತ್ವ ಹಿತಕರವಾಗಿತ್ತು.

“ಬಹುಶಃ ಅವನು ಏಕಾಂತದಲ್ಲಿದ್ದಾಗ ಅವನು ಬೇರೆಯೇ ತರಹ ಕಾಣಿಸುತ್ತಾನೆ ಮತ್ತು ಸ್ವಲ್ಪವೂ ನಗುವುದೇ ಇಲ್ಲ ಅಂತ ಕೂಡ ಅನಿಸುತ್ತದೆ!” ಪ್ರಿನ್ಸ್ ಮನಸ್ಸಿನೊಳಗೇ ಯೋಚಿಸಿದ.

ಅವನು ಹಿಂದೆ ರೊಗೊಜಿನ್ ಮತ್ತು ಸೇವಕನಿಗೆ ತನ್ನ ಬಗ್ಗೆ ವಿವರಿಸಿದ್ದನ್ನೆಲ್ಲಾ ಸಂಕ್ಷಿಪ್ತವಾಗಿ ಈಗಲೂ ವಿವರಿಸಿದ.

ಗ್ಯಾವ್ರಿಲ ಅರ್ಡಾಲಿಯೊನೋವಿಚ್ ಏತನ್ಮಧ್ಯೆ ಏನನ್ನೋ ನೆನಪಿಸಿಕೊಳ್ಳುತ್ತಿದ್ದವನಂತೆ ಕಂಡ.

“ನೀನೇ ಅಲ್ಲವೇ ಸ್ವಿಟ್ಜರ್ಲೆಂಡಿನಿಂದ ಒಂದು ವರ್ಷದ ಹಿಂದೆ ಕಾಗದವೊಂದನ್ನು ಬರೆದಿದ್ದು, ನನ್ನ ಪ್ರಕಾರ ಅದನ್ನ ಎಲಿಜಬತ್ ಪ್ರಕೊಫಿಯೆನ್ವಗೆ (ಎಪಾಂಚಿನ್‌ನ ಹೆಂಡತಿಗೆ) ಬರೆದಿದ್ದು ಅಲ್ವಾ?”

“ಹೌದು ಅದು ನಾನೇ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

“ಓ, ಹಾಗಾದರೆ ನೀವು ಯಾರು ಅನ್ನುವುದನ್ನ ಅವರು ನೆನಪಿಸಿಕೊಳ್ಳುತ್ತಾರೆ. ನೀವು ಜನರಲ್‌ರನ್ನು ನೋಡಲು ಬಂದಿದ್ದೀರ? ನಾನು ಕೂಡಲೇ ಜನರಲ್‌ಗೆ ತಿಳಿಸುತ್ತೇನೆ. ಒಂದೇ ನಿಮಿಷದಲ್ಲಿ ಅವರು ಬಿಡುವಾಗುತ್ತಾರೆ; ಆದರೆ ನೀವು ನಿರೀಕ್ಷಣಾ ಕೋಣೆಯಲ್ಲಿ ಕಾಯುವುದು ಒಳ್ಳೆಯದು. ಅಲ್ಲವ, ಇಲ್ಲೇಕೆ ಅವರಿದ್ದಾರೆ?” ಅವನು ಕಟುವಾಗಿ ಸೇವಕನನ್ನ ಕೇಳಿದ.

“ಅವರೇ ಇಲ್ಲಿರಲು ಇಷ್ಟಪಟ್ಟರು ಸರ್!” ಸೇವಕ ಉತ್ತರಿಸಿದ.

ಇದೇ ವೇಳೆಗೆ ಓದುವ ಕೋಣೆಯ ಬಾಗಿಲು ತೆರೆದುಕೊಂಡಿತು, ಒಬ್ಬ ಸೈನ್ಯದ ಮನುಷ್ಯ, ತನ್ನ ಕೈಯ್ಯಲ್ಲಿ ಬ್ರೀಫ್ ಕೇಸನ್ನು ಹಿಡಿದುಕೊಂಡು ಆಚೆಗೆ ಜೋರಾಗಿ ಮಾತನಾಡುತ್ತಾ ಬಂದ, ಒಳಗಿದ್ದ ಯಾರಿಗೋ ವಿದಾಯ ಹೇಳುತ್ತಾ ಹೊರಟುಹೋದ.

ಓದುವ ಕೋಣೆಯಿಂದ ಧ್ವನಿಯೊಂದು “ನೀನಲ್ಲೇ ಇದೀಯ ಗನ್ಯ?” ಎಂದಿತು, “ಒಳಗೆ ಬಾ” ಅಂತ ಕರೆ ಬಂತು.

ಗ್ಯಾವ್ರಿಲ ಅರ್ಡಾಲಿಯೊನೋವಿಚ್ ಪ್ರಿನ್ಸ್‌ನ ಕಡೆಗೆ ತಿರುಗಿ ತಲೆಯಾಡಿಸಿ ಬೇಗನೆ ರೂಮಿನೊಳಗಡೆಗೆ ಹೋದ.

ಎರಡು ನಿಮಿಷಗಳ ನಂತರ ಪುನಃ ಬಾಗಿಲು ತೆರೆಯಿತು ಮತ್ತು ಗನ್ಯಾನ ಸ್ನೇಹಪರ ಧ್ವನಿ ಕೂಗಿ ಹೇಳಿತು:

“ದಯವಿಟ್ಟು ಒಳಗೆ ಬನ್ನಿ ಪ್ರಿನ್ಸ್!” ಎಂದು.

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...