Homeಕರ್ನಾಟಕಚಿತ್ರದುರ್ಗದ ಕವಾಡಿಗರಹಟ್ಟಿ ದುರಂತ; ದಲಿತರ ಜೀವಕ್ಕೆ ಬೆಲೆ ಇಲ್ಲವೇ?

ಚಿತ್ರದುರ್ಗದ ಕವಾಡಿಗರಹಟ್ಟಿ ದುರಂತ; ದಲಿತರ ಜೀವಕ್ಕೆ ಬೆಲೆ ಇಲ್ಲವೇ?

- Advertisement -
- Advertisement -

ಕೆಲವು ವರ್ಷಗಳಿಂದ ನೀರನ್ನು ಉಳಿಸಿ ಎಂಬ ಆಶಯದ ’ನೀರಲ್ಲ ಇದು ಜೀವಜಲ’ ಎಂಬ ಕಿರುನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿತ್ತು. ಆದರೆ ಚಿತ್ರದುರ್ಗದ ಕವಾಡಿಗರಹಟ್ಟಿಯ ಜನರ ಪಾಲಿಗೆ ನೀರು ಜೀವಜಲವಾಗುವುದರ ಬದಲು ಜೀವ ತೆಗೆಯುವ ವಿಷವಾಗಿ ಮಾರ್ಪಟ್ಟಿರುವುದು ದುರಂತ. ಆಳುವವರ ಅಸಡ್ಡೆ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿತ್ರದುರ್ಗ ನಗರದ ಭಾಗವಾಗಿರುವ, ಮಾದಿಗ ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಕವಾಡಿಗರಹಟ್ಟಿಯಲ್ಲಿ 7 ಜನ ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಉಂಟಾಗಿ 170ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರು. ತಮ್ಮದಲ್ಲದ ತಪ್ಪಿಗೆ ಅಷ್ಟೊಂದು ಜನ ಮೃತಪಟ್ಟರೂ, ನೂರಾರು ಜನ ನರಳಿದರೂ ಹೆಚ್ಚಿನವರಿಗೆ ಅದು ಕಾಡುವ ವಿಷಯವಾಗಲಿಲ್ಲ. ಈ ಮಾನವೀಯ ದುರಂತದಿಂದಲೂ ಆಳುವವರಿಗೆ ಶುದ್ಧ ’ಕುಡಿಯುವ ನೀರು’ ಎಂಬ ಮೂಲಭೂತ ಹಕ್ಕಿನಿಂದ ವಂಚಿತರಾಗಿ ಜನ ಮೃತಪಡುತ್ತಿರುವ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಅನಿಸಲಿಲ್ಲ.

ಜೂನ್ ತಿಂಗಳಿನಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವಿಸಿ ನಾಲ್ಕು ಜನ ಬಲಿಯಾಗಿದ್ದರು. ಅವರಲ್ಲಿ 9 ವರ್ಷದ ಬಾಲಕಿ ಸಹ ಸೇರಿದ್ದಳು. ಆಗತಾನೇ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯನವರು ವಿಶೇಷ ತಂಡ ರಚಿಸಿ ಪ್ರತಿ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಮುಂದೆ ಇದೇ ರೀತಿಯ ಪ್ರಕರಣಗಳು ವರದಿಯಾದರೆ ಜಿಲ್ಲಾ ಪಂಚಾಯತ್ ಸಿಇಓಗಳನ್ನು ಹೊಣೆ ಮಾಡಿ ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಆದರೆ ಅದಾದ ಎರಡೇ ತಿಂಗಳುಗಳಲ್ಲಿ ಚಿತ್ರದುರ್ಗದ ದುರಂತ ಸಂಭವಿಸಿಬಿಟ್ಟಿತು. ಜನ ಹುಳುಗಳಂತೆ ಸಾಯುತ್ತಿದ್ದರೂ, ಕುಡಿಯುವ ನೀರಿಗೆ ವಿಷ ಬೆರೆಸಲಾಗಿದೆ ಎಂಬ ಆರೋಪ ಕೇಳಿಬಂದರೂ ಯಾಕಾಗಿ ನೀರು ಕಲುಷಿತವಾಯಿತು? ಯಾಕಾಗಿ ಜನ ಸತ್ತರು ಎಂಬುದನ್ನು ನಿಖರವಾಗಿ ಕಂಡು ಹಿಡಿಯಲು ಅಧಿಕಾರಗಳು ವಿಫಲವಾದರು.

ಇಂತಹ ಘೋರ ದುರಂತ ಸಂಭವಿಸಿದ್ದರೂ ಮಾಧ್ಯಮಗಳಿಗೆ ಅದು ಅನ್ಯಾಯ ಅನ್ನಿಸಲೇ ಇಲ್ಲ. ಯಾಕಾಯಿತು? ಹೇಗಾಯಿತು? ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಲ್ಲವೇ ಎಂದು ಪಟ್ಟು ಹಿಡಿದು ಕೇಳಬೇಕಾಗಿದ್ದ ಮಾಧ್ಯಮಗಳು ಇದನ್ನು ಹತ್ತರಲ್ಲಿ ಒಂದು ಘಟನೆ ಎಂಬಂತೆ ಮರೆತುಬಿಟ್ಟವು ಮಾತ್ರವಲ್ಲದೇ ನಟ ವಿಜಯ್ ರಾಘವೇಂದ್ರರವರ ಪತ್ನಿ ಸ್ಪಂದನಾರವರು ನಿಧನರಾದ ಸುದ್ದಿಯನ್ನೇ ಸತತ ಮೂರು ದಿನಗಳ ಕಾಲ ಬಿತ್ತರಿಸಿದವು. ಅವರ ಸಾವಿಗೆ ಕಂಬನಿ ಮಿಡಿಯಬೇಕಾಗಿದ್ದು ನ್ಯಾಯವೇ, ಆದರೆ ಕವಾಡಿಗರಹಟ್ಟಿಯಲ್ಲಿ ಪ್ರಾಣ ಬಿಟ್ಟವರು ಮನುಷ್ಯರಲ್ಲವೇ? ಅವರ ಅನ್ಯಾಯದ ಸಾವಿಗೆ ನ್ಯಾಯ ಬೇಡವೇ?

ಕವಾಡಿಗರಹಟ್ಟಿಯೆಂಬ ಬಡತನವನ್ನು ಹಾಸಿ ಹೊದ್ದ ಪ್ರದೇಶ

ಚಿತ್ರದುರ್ಗದ ಮುರುಘಾಮಠದಿಂದ ಕೂಗಳತೆ ದೂರದಲ್ಲಿರುವ 17ನೇ ವಾರ್ಡ್‌ಗೆ ಸೇರಿದ ಬಡಾವಣೆಯೆ ಕವಾಡಿಗರಹಟ್ಟಿ. 700ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿರುವ ಇಲ್ಲಿ ಮಾದಿಗ ಸಮುದಾಯವೇ ಬಹುಸಂಖ್ಯಾತರು. ನೋಡಿದರೆ ಹಳ್ಳಿಯಂತೆ ಕಾಣುವ, ಆದರೆ ನಗರದಂತೆ ಒತ್ತೊತ್ತಾಗಿ ಸಣ್ಣಸಣ್ಣ ಅಂಟಿಕೊಂಡಿರುವ ಮನೆಗಳನ್ನು ಕಟ್ಟಿಕೊಂಡಿರುವ ಇಲ್ಲಿನ ಹೆಚ್ಚಿನ ಜನರು ಶೌಚಾಲಯ ನಿರ್ಮಿಸಿಕೊಳ್ಳಲಾಗದೇ ಬಯಲನ್ನೇ ಆಶ್ರಯಿಸಿದ್ದಾರೆ. ಭೂಮಿ ಹೊಂದಿಲ್ಲದ, ಅಷ್ಟೇನೂ ವಿದ್ಯಾವಂತರಲ್ಲದ ಕಾರಣ ದಿನಗೂಲಿಯೇ ಬಹುತೇಕ ಕುಟುಂಬಗಳ ಹೊಟ್ಟೆ ತುಂಬಿಸುತ್ತಿದೆ. ಮಹಿಳೆಯರು 200 ರೂಗಳಿಗೆ ದಿನವಿಡೀ ದುಡಿಯುವ ಕೂಲಿಗೆ ಹೋದರೆ, ಹೆಚ್ಚಿನ ಗಂಡಸರು ಹಮಾಲಿ ಕೆಲಸಕ್ಕೆ ಹೋಗುತ್ತಾರೆ. ಅಂದು ದುಡಿದು ಅಂದು ಉಣ್ಣುವ ಅಲ್ಲಿನ ಜನರು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕಾರಣ ಅವರು ದಲಿತರಾಗಿರುವುದು, ಶಿಕ್ಷಿತರಾಗಿಲ್ಲದಿರುವುದು ಮತ್ತು ದನಿಯಿಲ್ಲದವರಾಗಿರುವುದು.

ಜನರು ಗೌರವದಿಂದ ಬದುಕಲು ಸರ್ಕಾರ ಅತ್ಯಗತ್ಯವಾಗಿ ಒದಗಿಸಬೇಕಾದ ಶಿಕ್ಷಣ, ಆರೋಗ್ಯ, ಉದ್ಯೋಗ ಬಿಟ್ಟುಬಿಡಿ; ಇಲ್ಲಿನ ಜನರಿಗೆ ಕನಿಷ್ಟ ಕುಡಿಯುವ ನೀರು ಕೊಡಲಾಗುತ್ತಿಲ್ಲವೆಂದರೆ ಎಷ್ಟು ಅಸಡ್ಡೆ ಇರಬೇಕು? ಚಿತ್ರದುರ್ಗ ನಗರಕ್ಕೆ ಪ್ರತಿದಿನ 22ಎಂಎಲ್‌ಡಿ ಕುಡಿಯುವ ನೀರು ಬೇಕು. ಆದರೆ ಸದ್ಯ ಪೂರೈಕೆಯಾಗುತ್ತಿರುವುದು 18.5 ಎಂಎಲ್‌ಡಿ ಮಾತ್ರ. ಅದರಲ್ಲಿಯೂ ಸೋರಿಕೆಯ ನಂತರ ಪ್ರತಿಷ್ಟಿತ ಬಡಾವಣೆಗಳಿಗೆ ಹೆಚ್ಚಿನ ನೀರು ಸಿಕ್ಕೆರೆ ಕವಾಡಿಗರಹಟ್ಟಿಯಂತಹ ದನಿಯಿಲ್ಲದವರ ಬೀದಿಗೆ ಈ ಹಿಂದೆ ವಾರಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿತ್ತು ಎಂದರೆ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತು ಆಲೋಚಿಸಿ.

ಕೆಲವು ಮಾನವೀಯ ಜಿಲ್ಲಾಧಿಕಾರಿಗಳ ಒತ್ತಡದಿಂದ ಮೂರು ದಿನಕ್ಕೊಮ್ಮೆ-ಎರಡು ದಿನಕ್ಕೊಮ್ಮೆ ನೀರು ಸಿಗುವುದು ಆರಂಭವಾಗಿದೆಯಾದರೂ ಕವಾಡಿಗರಹಟ್ಟಿಯಲ್ಲಿ ನೈರ್ಮಲ್ಯ ಕಾಣದಾಗಿದೆ. ನೀರು ಸಂಗ್ರಹಿಸಿಟ್ಟುಕೊಳ್ಳುವುದು ಇಲ್ಲಿನ ಜನರಿಗೆ ದೊಡ್ಡ ಸವಾಲು. ಸಣ್ಣಸಣ್ಣ ಮನೆಗಳಾದ್ದರಿಂದ ಮನೆಯ ಹೊರಗೆ ಪಾತ್ರೆಗಳಲ್ಲಿ, ಬಿಂದಿಗೆಗಳಲ್ಲಿ, ಇನ್ನೂ ಕೆಲವರು ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಬೀದಿಬದಿಯ ಕಸ, ಧೂಳು ಒಂದು ಕಡೆಯಾದರೆ ಬೀದಿನಾಯಿ ಮತ್ತು ಹಂದಿಗಳ ಹಾವಳಿ ಇನ್ನೊಂದು ಕಡೆ. ಇಂತಹ ಪರಿಸ್ಥಿತಿಯಲ್ಲಿ ನೀರು ಹೇಗೆ ಕಲುಷಿತಗೊಳ್ಳುತ್ತದೆ ಎಂಬ ತಿಳಿವಳಿಕೆ ಇಲ್ಲದ ಜನ ಅವರು. ಬಡತನದ ಬೇಗೆಯಲ್ಲಿರುವ ಇಲ್ಲಿನ ಜನರು ಅಂದು ದುಡಿದು ಅಂದು ಬದುಕುವುದರಲ್ಲಿಯೇ ಹೈರಾಣಾಗುತ್ತಿರುವಾಗ ಸ್ವಚ್ಛತೆ ಎಂಬುದು ಅವರಿಗೆ ಮರೀಚಿಕೆ. ಅದು ಅವರ ತಪ್ಪು ಎನ್ನುವುದಕ್ಕಿಂತ ಅವರನ್ನು ಅಂತಹ ಸ್ಥಿತಿಯಲ್ಲಿಟ್ಟ ಸರ್ಕಾರ ಮತ್ತು ನಾಗರಿಕ ಸಮಾಜದ ಬಗ್ಗೆ ಏನು ಹೇಳೋಣ?

ಇಂತಹ ಕವಾಡಿಗರಹಟ್ಟಿಯಲ್ಲಿ ಆಗಸ್ಟ್ 1ರ ಮುಂಜಾನೆಯಿಂದಲೇ ವಾಂತಿ ಭೇದಿಯಿಂದ ಜನ ಅಸ್ವಸ್ಥರಾದರು. ಒಂದೂವರೆ ವರ್ಷದ ಮಗುವಿನ ತಾಯಿ ಮಂಜುಳ ಮೃತಪಟ್ಟರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರಘು ಎಂಬಾತ ಮೂರು ದಿನಕ್ಕೆಂದು ಊರಿಗೆ ಬಂದು ನೀರು ಸೇವಿಸಿದ ಪರಿಣಾಮ ಪ್ರಾಣ ಬಿಟ್ಟಿದ್ದರು. ಚಿಕ್ಕಪ್ಪನ ಅಂತ್ಯಕ್ರಿಯೆಗೆ ಬಂದಿದ್ದ ಪ್ರವೀಣ್ ಎಂಬುವವರು ಕೂಡ ಕೊನೆಯುಸಿರೆಳೆದಿದ್ದರು. ರುದ್ರಪ್ಪ ಹಾಗೂ ಪಾರ್ವತಪ್ಪ ಎಂಬುವವರು ಕಲುಷಿತ ನೀರಿಗೆ ಶವವಾಗಿದ್ದರು. ಮಹಿಳೆಯೊಬ್ಬರಿಗೆ ಗರ್ಭಪಾತವಾಗಿ ಮಗು ಸಾವನ್ನಪ್ಪಿದೆ. ಬೇರೆ ಊರಿಂದ ಬಂದವರೊಬ್ಬರು ನೀರು ಸೇವಿಸಿದ ಕಾರಣ ಸಾವನ್ನಪ್ಪಿದ್ದಾರೆ.

ನೀರುಗಂಟಿ ಪೈಪಿನ ಮೂಲಕ ವಿಷ ಬೆರೆಸಿದ್ದಾನೆ, ಹಾಗಾಗಿ ಜನ ಸತ್ತಿದ್ದಾರೆ ಎಂದು ಕವಾಡಿಗರಹಟ್ಟಿಯ ಕೆಲವರು ಆರೋಪಿಸಿದ್ದಾರೆ. ಈ ಹಿಂದೆ ದಲಿತ ಹುಡುಗ ಲಿಂಗಾಯಿತ ಸಮುದಾಯದ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಯುವಕನನ್ನು ಬಂಧಿಸಿದ್ದ ಪೊಲೀಸರು ಯುವತಿಯನ್ನು ಬಾಲಮಂದಿರದಲ್ಲಿ ಬಿಟ್ಟಿದ್ದರು. 18 ವರ್ಷ ತುಂಬಿದ ನಂತರ ಆಕೆ ಮತ್ತೆ ಆ ಯುವಕನನ್ನು ಜೈಲಿನಿಂದ ಬಿಡಿಸಲು ಮತ್ತು ಮದುವೆಯಾಗಲು ಬಯಸಿದ್ದಳು. ಹಾಗಾಗಿ ದಲಿತರ ಮೇಲಿನ ದ್ವೇಷದಿಂದ ಕುಡಿಯುವ ನೀರಿಗೆ ವಿಷ ಬೆರೆಸಲಾಗಿದೆ ಎಂಬ ಆಕ್ರೋಶ ಹಲವರದು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ: ಮೃತರ ಸಂಖ್ಯೆ 3ಕ್ಕೆ ಏರಿಕೆ, 78 ಜನ ಅಸ್ವಸ್ಥ

ಅಧಿಕಾರಿಗಳು ನೀರಿನಲ್ಲಿ ಕಾಲರಾ ಹರಡಬಹುದಾದ ವಿಬ್ರಿಯೊ ಬ್ಯಾಕ್ಟೀರಿಯ ಪತ್ತೆಯಾಗಿದೆ ಎಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಚಿತ್ರದುರ್ಗ ನಗರಕ್ಕೆ ನೀರು ಪೂರೈಸುವ ಶಾಂತಿಸಾಗರ (ಸೂಳೆ ಕೆರೆ) ನೀರು ಸೇವನೆಗೆ ಯೋಗ್ಯವಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಇನ್ನು ಆ ಕೆರೆಯ ನೀರನ್ನು ಶುದ್ಧೀಕರಿಸಿ ಬಿಡಬೇಕೆಂಬ ಕೂಗಿಗೆ ಮಾನ್ಯತೆ ಇಲ್ಲವಾಗಿದೆ. ಸಮರ್ಪಕ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಅರಸನಕೆರೆ, ಮಲ್ಲಾಪುರ ಕೆರೆ ಬೋರ್‌ವೆಲ್‌ನಿಂದ ಕವಾಡಿಗರ ಹಟ್ಟಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಆ ಕೆರೆಗಳಿಗೆ ಚರಂಡಿ ನೀರು ಹರಿದುಬರುತ್ತಿರುವುದರಿಂದ ಅದು ಕಲುಷಿತ ನೀರು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳಿದೆ. ಇಷ್ಟೆಲ್ಲ ಅವಾಂತರಗಳಿರುವಾಗ ದುರಂತ ಸಂಭವಿಸದೇ ಇರಲು ಸಾಧ್ಯವೇ?

ಹಾಗಾಗಿಯೇ ಆಗಸ್ಟ್ 1ರಂದು ಕಲುಷಿತ ನೀರಿನಿಂದ ಜನ ಸಾಯುತ್ತಿದ್ದರೂ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕವಾಡಿಗರಹಟ್ಟಿಯ ಕಡೆ ತಲೆ ಹಾಕುವ ಧೈರ್ಯ ತೋರಲಿಲ್ಲ. ಜನರ ಆಕ್ರೋಶಕ್ಕೆ ತುತ್ತಾಗುವ ಭಯ ಇದ್ದುದರಿಂದ ಮೂರು ದಿನ ಕಳೆದ ಮೇಲೆ ಹೋಗಿ ಆಹಾರ ಕಿಟ್ ವಿತರಿಸುವುದು, ಪರಿಹಾರ ಧನಕ್ಕೆ ಪ್ರಯತ್ನಿಸುವುದು ಮಾಡಿದ್ದಾರೆ. ಬಹುತೇಕ ದಲಿತರೇ ಸಾವನಪ್ಪಿದ್ದರೂ ಸಮಾಜ ಕಲ್ಯಾಣ ಇಲಾಖೆ ತಲೆ ಕೆಡಿಸಿಕೊಂಡಿಲ್ಲ.

ನಗರಸಭೆಯೆಂಬ ಅವಿವೇಕಿಗಳ ಅಡ್ಡೆ

“ಚಿತ್ರದುರ್ಗವೆಂಬ ಐತಿಹಾಸಿಕ ನಗರ ಇಷ್ಟು ಕೆಟ್ಟದಾಗಿದೆ ಎಂದು ಗೊತ್ತಿರಲಿಲ್ಲ” ಹೀಗೆಂದು ಉದ್ಘಾರ ತೆಗೆದವರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲರವರು. ಇದಕ್ಕೆ ಕಾರಣ ನಗರಸಭೆಯ ಅಧಿಕಾರಿಗಳು. ಕವಾಡಿಗರಹಟ್ಟಿ ಮಾತ್ರವಲ್ಲದೇ ಚನ್ನಕ್ಕಿ ಹೊಂಡ ಸೇರಿದಂತೆ ಹಲವಾರು ಪ್ರದೇಶಗಳು ಮೂಲಭೂತ ಸೌಲಭ್ಯಗಳಿಲ್ಲದೆ ಅನೈರ್ಮಲ್ಯದಿಂದ ಬಳಲುತ್ತಿವೆ. ಆದರೆ ಅದನ್ನು ಸರಿಪಡಿಸಬೇಕಾದ ಜವಾಬ್ದಾರಿ ಹೊತ್ತಿರುವ ನಗರಸಭೆ ಗಾಢ ನಿದ್ದೆಯಲ್ಲಿದೆ. 5 ಜನ ಪ್ರಾಣ ತೆತ್ತರೂ ಅವರು ನಿದ್ದೆಯಿಂದ ಎದ್ದಿಲ್ಲ ಎನ್ನುವುದನ್ನು ನಗರದ ಹೊಸ ಹಟ್ಟಿಯಲ್ಲಿ ಕಲುಷಿತ ನೀರಿನ ಪ್ರಕರಣಗಳು ವರದಿಯಾಗುತ್ತಿರುವುದೇ ಸಾಕ್ಷಿ.

ಇನ್ನು ಕವಾಡಿಗರಹಟ್ಟಿಯ 50,000 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್‌ಅನ್ನು ದುರಂತ ನಡೆದ ನಂತರ ಸ್ವಚ್ಛಗೊಳಿಸಲಾಯಿತು. ಆ ಸಂದರ್ಭದಲ್ಲಿ ಅದರಲ್ಲಿ ಅತಿ ಹೆಚ್ಚಿನ ಕಸ ತುಂಬಿರುವುದು ಕಂಡು ಬಂದಿದೆ. ಎಷ್ಟೋ ವರ್ಷಗಳಿಂದ ಅದನ್ನು ಸ್ವಚ್ಛಗೊಳಿಸಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಆದರೆ ನಗರಸಭೆಯ ಕಡತಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸ್ಚಚ್ಛಗೊಳಿಸಿರುವುದಾಗಿ ಬರೆದು ಬಿಲ್ ಪಡೆಯಲಾಗಿದೆ!

ಮೂಲಭೂತ ಬದಲಾವಣೆ ಇಲ್ಲದೆ ಪರಿಹಾರ ಅಸಾಧ್ಯ

ಕವಾಡಿಗರಹಟ್ಟಿಯ ದುರಂತ ಮತ್ತೆ ಸಂಭವಿಸಬಾರದು ಅಥವಾ ಬೇರೆ ಕಡೆ ಮರುಕಳಿಸಬಾರದು ಎಂಬ ಧ್ಯೇಯ ಸರ್ಕಾರಕ್ಕಾಗಲೀ, ಸ್ಥಳೀಯ ಆಡಳಿತಕ್ಕಾಗಲೀ ಇದ್ದಂತೆ ಕಾಣುತ್ತಿಲ್ಲ. ಏಕೆಂದರೆ ಶುದ್ಧ ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದು ಸರ್ಕಾರದ ಕರ್ತವ್ಯ. ಆಗ ಮಾತ್ರವೇ ಅಲ್ಲಿನ ಜನರಿಗೆ ಸ್ವಚ್ಛತೆ ನೈರ್ಮಲ್ಯದ ಬಗ್ಗೆ ತಿಳಿವಳಿಕೆ ಮೂಡಿಸಲು ಸಾಧ್ಯ. ಆದರೆ ಅದನ್ನು ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು. ಆ ಬಗ್ಗೆ ತಲೆಕೆಡಿಸಿಕೊಳ್ಳಲು ಸರ್ಕಾರಕ್ಕೆ ಸಮಯವೆಲ್ಲಿದೆ? ಹೇಗಿದ್ದರೂ ಸತ್ತವರು ದಲಿತರಲ್ಲವೇ? ಅದರಲ್ಲಿಯೂ ಶೋಷಿತ ಮಾದಿಗರಲ್ಲವೇ? ಅವರು ಹೋರಾಡುವ ಶಕ್ತಿಯಾದರೂ ಎಲ್ಲಿದೆ ಎಂಬ ದಾರ್ಷ್ಟ್ರ್ಯ ಸರ್ಕಾರದ್ದಾಗಿದೆ. ಸತ್ತವರು ಮಾದಿಗ ಸಮುದಾಯದ ಬದಲಿಗೆ ಬೇರೆ ಬಲಾಢ್ಯ ಜಾತಿಗಳಿಗೆ ಸೇರಿದ್ದರೆ ಇಷ್ಟೊತ್ತಿಗೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತೆ. ಆದರೆ ಇಲ್ಲಿ ದಲಿತ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ.

ಕವಾಡಿಗರಹಟ್ಟಿಯ ದುರಂತ ಏಕಮಾತ್ರ ಘಟನೆಯಲ್ಲ. ಕಳೆದ ಒಂದು ವರ್ಷದಲ್ಲಿ ನೂರಾರು ಜನರು ಕಲುಷಿತ ನೀರಿನಿಂದ ಸಾವನಪ್ಪಿದ ಹಲವು ಪ್ರಕರಣಗಳು ವರದಿಯಾಗಿವೆ. ಹೆಚ್ಚಿನ ಪ್ರಕರಣಗಳು ಉತ್ತರ ಕರ್ನಾಟಕದಲ್ಲಿಯೇ ಕಂಡುಬಂದಿವೆ. ಪ್ರತಿ ಬಾರಿಯೂ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂಬ ಎಚ್ಚರಿಕೆ ಬಿಟ್ಟರೆ ಬೇರೇನೂ ಮೂಲಭೂತ ಬದಲಾವಣೆಗಳಾಗಿಲ್ಲ. 2025ರ ವೇಳೆಗೆ ಭಾರತವನ್ನು ಕಾಲರಾಮುಕ್ತ ದೇಶವನ್ನಾಗಿ ಮಾಡುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಭಾರತದ ಪ್ರತಿನಿಧಿಗಳು, ಸ್ವಚ್ಛ ಭಾರತ್ ಎಂದು ಬೊಬ್ಬಿರಿಯುವುದನ್ನ ಬಿಟ್ಟು ನಿಜವಾದ ಅರ್ಥದಲ್ಲಿ ಕಾರ್ಯಪ್ರವೃತ್ತರಾಗದಿದ್ದರೆ ಮುಂದೆ ಭಾರೀ ಗಂಡಾಂತರ ತಪ್ಪಿದ್ದಲ್ಲ ಎಂಬುದನ್ನು ಕವಾಡಿಗರಹಟ್ಟಿಯ ಪ್ರಕರಣಗಳು ಸಾರಿ ಹೇಳುತ್ತಿವೆ. ಸರ್ಕಾರ ಕೇಳಿಸಿಕೊಳ್ಳುತ್ತದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಬೆದರಿಕೆ, ಚಿತ್ರಹಿಂಸೆ ಕಾರಣ?

0
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅವರನ್ನು ಬೆದರಿಸಿ ಚಿತ್ರಹಿಂಸೆ ನೀಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ವಿರೋಧ...