Homeಕರ್ನಾಟಕಕರ್ನಾಟಕದಲ್ಲಿ ತೀವ್ರ ಏರಿಕೆ ಕಂಡ ಫೇಕ್ ನ್ಯೂಸ್‌ಗಳ ಹರಿದಾಟ; ಕಡಿವಾಣಕ್ಕೆ ಸಿದ್ಧವಾಗಿದೆಯೇ ಸರ್ಕಾರ?

ಕರ್ನಾಟಕದಲ್ಲಿ ತೀವ್ರ ಏರಿಕೆ ಕಂಡ ಫೇಕ್ ನ್ಯೂಸ್‌ಗಳ ಹರಿದಾಟ; ಕಡಿವಾಣಕ್ಕೆ ಸಿದ್ಧವಾಗಿದೆಯೇ ಸರ್ಕಾರ?

- Advertisement -
- Advertisement -

ಸಾಮಾಜಿಕ ಜಾಲತಾಣಗಳ ಬಳಕೆ ಹಲವು ರೀತಿಯ ಅನುಕೂಲವನ್ನೇನೋ ಕಲ್ಪಿಸಿದೆ; ದಿನನಿತ್ಯದ ಆಗುಹೋಗುಗಳ ಬಗ್ಗೆ ಅಪ್ಡೇಟ್ ಆಗುತ್ತಿದ್ದೇವೆ ಎಂಬುದು ನಿಜ. ಆದರೆ ಅವುಗಳಿಂದಲೇ ಹರಡಲಾಗುತ್ತಿರುವ ತಪ್ಪು ಮಾಹಿತಿಗಳನ್ನು-ತಪ್ಪು ನರೆಟಿವ್‌ಗಳನ್ನು ನಂಬಿ ನಾವು ಮೂರ್ಖರಾಗುತ್ತಿದ್ದೇವೆ ಎನ್ನುವುದು ಸಹ ಅಷ್ಟೇ ನಿಜ. ಏಕೆಂದರೆ ಈ ಸಾಮಾಜಿಕ ಜಾಲತಾಣಗಳು ಈಗ ಫೇಕ್‌ನ್ಯೂಸ್‌ಗಳ ಪ್ರಚಾರ ತಾಣಗಳಾಗಿ ಬದಲಾಗಿವೆ. ಸುಮಾರು ಅರ್ಧದಷ್ಟು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಓದುತ್ತಿದ್ದರೆ, ಅವರಲ್ಲಿ ಅರ್ಧದಷ್ಟು ಜನರು ಅದು ಸುಳ್ಳು ಎಂಬುದನ್ನು ಅರಿಯದೇ ಹಂಚಿಕೊಳ್ಳುತ್ತಿದ್ದಾರೆ ಎಂದು ConsumerLab ವರದಿ ತಿಳಿಸಿದೆ.

ಇನ್ನು ಫೇಕ್‌ನ್ಯೂಸ್‌ಗಳು ಶರವೇಗದಲ್ಲಿ ಹರಡಲು ಮಾಧ್ಯಮಗಳ ಕೊಡುಗೆ, ಅದರಲ್ಲಿಯೂ ಟಿ.ವಿ ಚಾನೆಲ್‌ಗಳ ಕೊಡುಗೆ ಬೆಟ್ಟದಷ್ಟಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ’ಹಿಂದೆ ಜನರು ಸುಳ್ಳು ಹೇಳುತ್ತಿದ್ದರು, ಪತ್ರಿಕೆಗಳು ನಿಜ ಬರೆಯುತ್ತಿದ್ದವು. ಆದರೆ ಈಗ ಮಾಧ್ಯಮಗಳೇ ಸುಳ್ಳು ಹೇಳುತ್ತಿವೆ, ಜನರು ನಿಜ ತಿಳಿಸುತ್ತಿದ್ದಾರೆ’ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿ ಸುಳ್ಳು ಸುದ್ದಿಗಳು ಸೃಷ್ಟಿಯಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತಷ್ಟು ಹೆಚ್ಚಾಗಿವೆ.

ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಿ ಕಾಂಗ್ರೆಸ್ ಬಹುಮತ ಸಾಧಿಸುತ್ತಿದ್ದಂತೆ ಎರಡು ಪ್ರಮುಖ ಫೇಕ್ ನ್ಯೂಸ್‌ಗಳನ್ನು ಹರಡಲಾಗಿತ್ತು. ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಪಾಕ್ ಧ್ವಜ ಹಾರಾಟ ಎಂದು ಸುದ್ದಿ ಬಿತ್ತರವಾದರೆ, ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಲಾಯ್ತು. ಆ ಮೂಲಕ ಕಾಂಗ್ರೆಸ್ ಸರ್ಕಾರ ಬರುತ್ತಲೇ ಹಿಂದೂಗಳಿಗೆ ಭದ್ರತೆ ಇಲ್ಲ ಎನ್ನುವ ಫೇಕ್ ನರೇಟಿವ್‌ಅನ್ನು ಕಟ್ಟಲು ಯತ್ನಿಸಲಾಗಿತ್ತು.

ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ’ಶಕ್ತಿ ಗ್ಯಾರಂಟಿ ಯೋಜನೆ’ ಘೋಷಣೆಯಾದ ನಂತರ ನೂರಾರು ಫೇಕ್ ನ್ಯೂಸ್‌ಗಳನ್ನು ಹರಿಬಿಡಲಾಯ್ತು. ಮಳವಳ್ಳಿಯಲ್ಲಿ ಮಹಿಳೆಯರು ಬಸ್ ಬಾಗಿಲು ಮುರಿದರು ಎಂದು ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಹರಡಿದವು. ಸ್ವತಃ ಕೆಎಸ್‌ಆರ್‌ಟಿಸಿ ಸ್ಪಷ್ಟೀಕರಣ ನೀಡಿ ದುಸ್ಥಿತಿಯಲ್ಲಿದ್ದ ’ಬಸ್ ಬಾಗಿಲನ್ನು ತೆಗೆದು ಬೇರೆಯದು ಜೋಡಿಸಿದ್ದೇವೆಯೇ ಹೊರತು ಮಹಿಳೆಯರು ಮುರಿದಿಲ್ಲ’ ಎಂದು ಫ್ಯಾಕ್ಟ್ ಚೆಕ್ ಪ್ರಕಟಿಸಿತ್ತು.

ಈ ಎರಡೂ ಪ್ರಕರಣಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಸುಳ್ಳು ಸುದ್ದಿಗಳನ್ನು ಸೃಷ್ಟಿಸಲಾಗಿತ್ತು. ಇದರಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳೆರಡೂ ಕೈಜೋಡಿಸಿದ್ದವು. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಾಡುತ್ತದೆ ಮತ್ತು ಹಿಂದೂ ವಿರೋಧಿ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಕೆಲ ವ್ಯಕ್ತಿಗಳು ಕೆಲಸ ಮಾಡಿದ್ದರು. ಮಾಧ್ಯಮಗಳು ಹೆಚ್ಚು ವೀಕ್ಷಣೆ ಗಳಿಸಲು-ಟಿಆರ್‌ಪಿಗಾಗಿ ಸುಳ್ಳು, ಅರೆ ಸತ್ಯದ ಮೊರೆ ಹೋಗಿದ್ದವು. ಆ ಮೂಲಕ ಆರ್ಥಿಕ ಲಾಭ ಪಡೆಯಲು ಯತ್ನಿಸಿದ್ದವು.

ಬಿಸಿಯೂಟ ತಯಾರಿಸುವ ಮಹಿಳೆಯರು ಕೈಬಳೆ ತೊಡುವಂತಿಲ್ಲ ಎಂಬ ಹಿಂದೂ ವಿರೋಧಿ ಆದೇಶವನ್ನು ಸಿದ್ದರಾಮಯ್ಯನವರ ಸರ್ಕಾರ ಹೊರಡಿಸಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳು ಹೇಳಿದ್ದರು. ಆದರೆ ವಾಸ್ತವದಲ್ಲಿ ಈ ಆದೇಶ ಹೊರಡಿಸಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಾಗಿತ್ತು. ಸತ್ಯ ತಿಳಿದ ಮೇಲೂ ಅವರು ಒಂದು ಕ್ಷಮೆ ಕೇಳುವ ಗೋಜಿಗೂ ಹೋಗಲಿಲ್ಲ. ಏಕೆಂದರೆ ಸುಳ್ಳು ಸುದ್ದಿ ಅವರಿಗೆ ಮತ್ತು ಅವರ ಪಕ್ಷಕ್ಕೆ ಹೊಸದೇನಲ್ಲ ಅಲ್ಲವೇ?

ಈ ಹಿಂದೆ ಅಮಿತ್ ಶಾ ಒಂದು ಮಾತು ಹೇಳಿದ್ದರು. ಅದೇನೆಂದರೆ, “ಅದು ಸುಳ್ಳಾಗಲಿ ಅಥವಾ ಸತ್ಯವಾಗಲಿ, ನಾವು ಮನಸ್ಸು ಮಾಡಿದರೆ 5 ನಿಮಿಷದಲ್ಲಿ ವೈರಲ್ ಮಾಡುತ್ತೇವೆ. ಅಂತಹ ನೆಟ್‌ವರ್ಕ್ ನಮಗಿದೆ” ಎಂದು. ಆ ನೆಟ್‌ವರ್ಕ್ ಯಾವುದಪ್ಪ ಎಂದರೆ ಬಿಜೆಪಿ ಐಟಿ ಸೆಲ್ ಎಂಬುದೇ ಆಗಿದೆ. ಇನ್ನು ಬಿಜೆಪಿಗಿರುವ ವಾಟ್ಸಾಪ್ ಗುಂಪುಗಳ ಬಗ್ಗೆ ಮಾತನಾಡುತ್ತಾ, “ನಮಗೆ ಉತ್ತರ ಪ್ರದೇಶದಲ್ಲಿ 32 ಲಕ್ಷ ಜನರಿರುವ ವಾಟ್ಸಾಪ್ ಗುಂಪುಗಳಿದ್ದು ಸತ್ಯ ತಿಳಿದಿರಲಿ ಎಂದು ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಒಂದೊಂದು ಸಂದೇಶ ಕಳಿಸುತ್ತೇವೆ. ಒಂದು ದಿನ ನಮ್ಮ ಕಾರ್ಯಕರ್ತನೊಬ್ಬ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್‌ರವರಿಗೆ ಕಪಾಳಮೋಕ್ಷ ಮಾಡಿದ್ದರು ಎಂಬ ಸುದ್ದಿ ಹರಿಯಬಿಟ್ಟ. ವಾಸ್ತವದಲ್ಲಿ ಅದು ನಿಜವಾಗಿರಲಿಲ್ಲ. ಏಕೆಂದರೆ ಇಬ್ಬರೂ 600 ಕಿ.ಮೀ ದೂರದ ಅಂತರದಲ್ಲಿ ವಾಸಿಸುತ್ತಿದ್ದರು. ಆದರೆ 10 ಗಂಟೆ ವೇಳೆಗೆ ನನಗೆ ಹಲವಾರು ಜನ ಫೋನ್ ಮಾಡಿ ಸರ್, ಅಖಿಲೇಶ್ ಯಾದವ್ ಅವರ ತಂದೆಗೆ ಹೊಡೆದಿದ್ದಾರಂತೆ ಎಂದು ಹೇಳುತ್ತಿದ್ದರು” ಎಂದು ಶಾ ತಮ್ಮ ನೆಟ್‌ವರ್ಕ್ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದ್ದರು.

ದೇಶಾದ್ಯಂತ ಬಿಜೆಪಿಯು ಈ ರೀತಿಯ ವಾಟ್ಸಾಪ್ ನೆಟ್‌ವರ್ಕ್ ಹೊಂದಿದೆ. ಎಲ್ಲಾ ರಾಜ್ಯಗಳಲ್ಲಿ ಐಟಿ ಸೆಲ್ ಸಕ್ರಿಯವಾಗಿದೆ. ಅದರ ಮುಖ್ಯಸ್ಥರಾದ ಅಮಿತ್ ಮಾಳವೀಯ ಉದ್ದೇಶಪೂರ್ವಕವಾಗಿ ನೂರಾರು ಸುಳ್ಳುಗಳನ್ನು ಹೇಳಿದ್ದಾರೆ. ಇಂದು ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಅತಿಹೆಚ್ಚು ಸುಳ್ಳು ಸುದ್ದಿ ಹರಡುತ್ತಿರುವವರು ಬಿಜೆಪಿ ಬೆಂಬಲಿಗರು, ಕಾರ್ಯಕರ್ತರೇ ಆಗಿದ್ದಾರೆ ಎಂಬುದನ್ನು ಫ್ಯಾಕ್ಟ್‌ಚೆಕ್ ಪ್ರಕಟಿಸುವ ಆಲ್ಟ್‌ನ್ಯೂಸ್, ಬೂಮ್ ಲೈವ್, ಲಾಜಿಕಲ್ ಇಂಡಿಯಾ, ಕ್ವಿಂಟ್‌ನ ವೆಬ್‌ಖೂಫ್ ವೆಬ್‌ಸೈಟ್ ಲೇಖನಗಳನ್ನು ನೋಡಿದರೆ ಸುಲಭವಾಗಿ ತಿಳಿಯುತ್ತದೆ. ತಾವು ಸೃಷ್ಟಿಸುತ್ತಿರುವುದು ಸುಳ್ಳು ಸುದ್ದಿ ಎಂದು ಅರಿತೇ ಕೆಲವರು ಆ ಕೆಲಸ ಮಾಡುತ್ತಾರೆ. ಆದರೆ ಅದನ್ನು ಹಂಚುವವರು ನಿಜವೆಂದು ನಂಬಿರುತ್ತಾರೆ ಮತ್ತು ಇತರರು ನಂಬಬೇಕೆಂದು ಬಯಸುತ್ತಾರೆ. ಈ ತಿಕ್ಕಾಟ ಮುಂದುವರಿದು ಅದು ದ್ವೇಷದ ಮಾತುಗಳಿಗೂ ಎಡೆಮಾಡಿಕೊಟ್ಟಿರುವ ಉದಾಹರಣೆಗಳಿವೆ.

ಬಿಜೆಪಿ ಪರವಾಗಿ ಮತ್ತು ವಿರೋಧ ಪಕ್ಷಗಳ ವಿರುದ್ಧವಾಗಿ ಒಂದು ಟ್ವೀಟ್ ಮಾಡಿದರೆ ಅಥವಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದರೆ ಅವರಿಗೆ ಬಿಜೆಪಿ ವತಿಯಿಂದ 2 ರೂ ನೀಡಲಾಗುತ್ತದೆ ಎಂದು ಹಲವರು ಆರೋಪಿಸಿದ್ದಾರೆ. ಆದರೆ ಇದುವರೆಗೂ ಅದನ್ನು ಅಲ್ಲಗಳೆಯುವ ಗೋಜಿಗೆ ಬಿಜೆಪಿ ಹೋಗಿಲ್ಲ!

ನಾವೀಗ ಕರ್ನಾಟಕದ ವಿಷಯಕ್ಕೆ ಬರುವುದಾದರೆ ಬಿಜೆಪಿ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿತು. ಕಾಂಗ್ರೆಸ್ ಜಯಭೇರಿ ಬಾರಿಸಿತು. ಇದರಿಂದ ಹತಾಶರಾದ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಮನಸೋಇಚ್ಛೆ ಸುಳ್ಳು ಸುದ್ದಿಗಳನ್ನು ಹರಡಲು ಆರಂಭಿಸಿದರು. ಕನಿಷ್ಟ 2024ರ ಲೋಕಸಭಾ ಚುನಾವಣೆಯಲ್ಲಾದರೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರಕುವಂತಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಹಳಿಯುವುದು ಅವರಿಗೆ ಅನಿವಾರ್ಯವಾಗಿದೆ. ಹಾಗಾಗಿ ಎಗ್ಗಿಲ್ಲದೇ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅದು ಯಾವ ಮಟ್ಟಿಗೆ ಎಂದರೆ ಬಿ.ಆರ್ ಪಾಟೀಲ್ ಹೆಸರಿನಲ್ಲಿ ಫೇಕ್ ಲೆಟರ್ ತಯಾರಿಸಿ ವೈರಲ್ ಮಾಡುವಷ್ಟು.

ಇನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳು ಬಿಜೆಪಿಗರ ನಿದ್ದೆ ಕೆಡಿಸಿರುವುದು ಸುಳ್ಳಲ್ಲ. ಹಾಗಾಗಿಯೇ ಕಾಂಗ್ರೆಸ್ ಗ್ಯಾರಂಟಿಗಳಿಂದ ಟೊಮ್ಯಾಟೋ ಬೆಲೆ ಏರಿಕೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಡಲಾಯ್ತು. ಆದರೆ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಟೊಮ್ಯಾಟೊ ಬೆಲೆ ಹೆಚ್ಚೆಂದು ತಿಳಿದ ನಂತರ ಸುಮ್ಮನಾದರು. ಇನ್ನು ಉಡುಪಿ ವಿಡಿಯೋ ಪ್ರಕರಣದಲ್ಲಿ ತಮಿಳುನಾಡಿನ ಹಳೆಯ ಬೆತ್ತಲೆ ವಿಡಿಯೋ ಸೇರಿಸಿ ಎಡಿಟ್ ಮಾಡಿ ಮುಸ್ಲಿಮರನ್ನು ಅಪರಾಧಿಗಳಂತೆಯೂ, ಕಾಂಗ್ರೆಸ್ ಪಕ್ಷವನ್ನು ಅವರ ಬೆಂಬಲಿಗರಂತೆ ತೋರಿಸಲು ಹಿಡನ್ ಕ್ಯಾಮರಾ ಇತ್ತು ಎಂಬ ಸುಳ್ಳು ಸುದ್ದಿಗಳನ್ನು ಹರಿಬಿಡಲಾಯ್ತು. ಆದರೆ ಅವರದೇ ಪಕ್ಷದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಖುಷ್ಬೂ ಅದನ್ನು ಸುಳ್ಳು ಎಂದು ಹೇಳಬೇಕಾಯಿತು.

ಇದನ್ನೂ ಓದಿ: ದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

ಇನ್ನು ತಿರುಪತಿ ಲಡ್ಡು ತಯಾರಿಕೆಗೆ ಬಳಸುತ್ತಿದ್ದ ನಂದಿನಿ ತುಪ್ಪದ ಸರಬರಾಜನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಸಿ.ಟಿ ರವಿ ಕಿಡಿಕಾರಿದರು. ಆದರೆ ನಮ್ಮ ಬೆಲೆಗಿಂತ ಕಡಿಮೆಗೆ ಮಾರಲು ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ಆಡಳಿತವಿದ್ದ 2021ರ ಸಮಯದಿಂದಲೇ ಪೂರೈಕೆ ಸ್ಥಗಿತಗೊಳಿಸಿದ್ದೇವೆ ಎಂದು ಕೆಎಂಎಫ್ ಸ್ಪಷ್ಟೀಕರಣ ನೀಡಿದೆ.

ಒಟ್ಟಾರೆಯಾಗಿ ಜನರನ್ನು ಬಾಧಿಸುವ ನಿಜವಾದ ವಿಷಯಗಳಿಂದ ಡೈವರ್ಟ್ ಮಾಡುವುದು, ರಾಷ್ಟ್ರೀಯತೆ-ರಾಷ್ಟ್ರಭಕ್ತಿಯ ಹೆಸರಿನಲ್ಲಿ ಮರಳು ಮಾಡುವುದು, ಅನ್ಯ ಪಕ್ಷಗಳನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುವುದು ಅದರ ಗುರಿಯಾಗಿದೆ. ಹಾಗಾಗಿ ಈ ರೀತಿಯ ಸುಳ್ಳು ಸುದ್ದಿಗಳ ಮೂಲಕ ದೇಶದ ಬಹುಸಂಖ್ಯಾತರು ಯಾವಾಗಲೂ ಅನುಮಾನದಿಂದ ಅಸ್ಥಿರವಾಗಿ ಬದುಕುವಂತೆ ಮಾಡುವುದು ಬಿಜೆಪಿಯ ಹುನ್ನಾರವಾಗಿದೆ. ಅದರಿಂದ ಧ್ರುವೀಕರಣವನ್ನು ಸಾಧಿಸಿ ರಾಜಕೀಯ ಮೈಲೇಜ್ ಪಡೆಯುವುದಾಗಿದೆ. ಅದರ ಭಾಗವಾಗಿ ಈ ಸುಳ್ಳು ಸುದ್ದಿಗಳನ್ನು ಹರಡುತ್ತದೆ ಮತ್ತು ಅಂತಿಮವಾಗಿ ಬಹುಸಂಖ್ಯಾತರ ಮತ ಪಡೆದು ಅಧಿಕಾರಕ್ಕೇರಲು ಹವಣಿಸುತ್ತಿದೆ. 2002ರಲ್ಲಿ ಗುಜರಾತ್‌ನಲ್ಲಿ ಈ ಪ್ರಯೋಗ ಮಾಡಿ ಅಧಿಕಾರದ ರುಚಿ ಹಿಡಿದ ಅದು ಈಗ ಸಾಮಾಜಿಕ ಜಾಲತಾಣಗಳನ್ನು ಬಳಿಸಿಕೊಂಡು ಸುಳ್ಳು ಸುದ್ದಿ ಪ್ರಸಾರಕ್ಕ ಮುಂದಾಗಿದೆ.

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಫೇಕ್ ನ್ಯೂಸ್‌ಗಳ ಹಾವಳಿ ಹೆಚ್ಚಾಗಿತ್ತು. ಈ ಬಾರಿ ಕೂಡ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮಾಮೂಲಿಯಂತೆ ಫೇಕ್ ನ್ಯೂಸ್‌ಗಳನ್ನು ಹೆಚ್ಚೆಚ್ಚು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆರಂಭದಲ್ಲೇ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆಹಚ್ಚಿ ಅವುಗಳನ್ನು ಬೇರು ಸಮೇತ ಕತ್ತರಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಕಾನೂನಿನ ಅಗತ್ಯ ಬಿದ್ದರೆ ಅದನ್ನು ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ಹೇಟ್ ಸ್ಪೀಚ್ ಬೇಡ ಎಂಬ ಅಭಿಯಾನ ನಡೆಸುತ್ತಿರುವ ವಿನಯ್ ಶ್ರೀನಿವಾಸ್‌ರವರು ಈ ಕುರಿತು ನಾನುಗೌರಿ ಜೊತೆ ಮಾತನಾಡಿ, “ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಲು ಫೇಕ್ ನ್ಯೂಸ್‌ಗಳನ್ನು ಸೃಷ್ಟಿಸಲಾಗುತ್ತಿತ್ತು. ಈಗ ಹೊಸ ಸರ್ಕಾರ ಬಂದ ಮೇಲೆ ಅವು ಮತ್ತಷ್ಟು ಹೆಚ್ಚಾಗಿವೆ. ಜೈನ ಮುನಿ ಕೊಲೆ, ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ವಿಷಯಗಳ ಸುತ್ತ ಫೇಕ್ ನ್ಯೂಸ್ ಹರಡಿದರು. ಇವುಗಳನ್ನು ಇಟ್ಟುಕೊಂಡು ದ್ವೇಷ ಹಬ್ಬಿಸುತ್ತಿದ್ದಾರೆ. ಇವುಗಳಿಗೆ ಕೂಡಲೇ ಕಡಿವಾಣ ಹಾಕುವುದು ಅನಿವಾರ್ಯ” ಎಂದರು.

“ಸರ್ಕಾರ ಸುಳ್ಳು ಸುದ್ದಿಗಳ ಪತ್ತೆ ಹಚ್ಚುವಿಕೆಗೆ ಯುವಜನರಿಗೆ ತರಬೇತಿಗಳನ್ನು ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿರುವ ಫ್ಯಾಕ್ಟ್ ಚೆಕ್ ವಿಭಾಗ ವಿಸ್ತಾರಗೊಳ್ಳಬೇಕು. ಸರ್ಕಾರ ಸಾಮಾಜಿಕ ಸಂಘಟನೆಗಳ ಜೊತೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಸಲಹೆ ಪಡೆಯಬೇಕು. ಫೇಕ್ ನ್ಯೂಸ್ ಹರಡುವವರು, ಹೇಟ್ ಸ್ಪೀಚ್ ಮಾಡುವವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಪಕ್ಷಗಳ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ಫೇಕ್ ನ್ಯೂಸ್ ಹರಡಿದರೆ ಅವರಿಗೂ ನೋಟಿಸ್ ಹೋಗಬೇಕು” ಎಂದು ಅವರು ಆಗ್ರಹಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಕಂಡುಬಂದಲ್ಲಿ ಅದರೊಟ್ಟಿಗೆ ಎಚ್ಚರಿಕೆ ಟ್ಯಾಗ್ ಹಾಕಬೇಕು. ಪದೇಪದೇ ಸುಳ್ಳು ಸುದ್ದಿ ಹರಡುವವರ ಖಾತೆಗಳನ್ನು ಬಂದ್ ಮಾಡಿಸಬೇಕು. ಪೋಸ್ಟ್ ಕಾರ್ಡ್‌ನಂತಹ ದಿನವಿಡೀ ದ್ವೇಷ ಹರಡುವ ಖಾತೆಗಳ ಅಡ್ಮಿನ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯಾಗಿ ಸರ್ಕಾರ ನಿರಂತರ ನಿಗಾ ಇಟ್ಟಲ್ಲಿ ಮಾತ್ರ ಫೇಕ್ ನ್ಯೂಸ್‌ಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯ. ಇದರೊಟ್ಟಿಗೆ ಜವಾಬ್ದಾರಿಯುತ ನಾಗರಿಕರು ಯಾವುದೇ ಸಂದೇಶಗಳು, ಆರೋಪಗಳ ಪೋಸ್ಟ್ ಹಂಚಿಕೊಳ್ಳುವ ಮೊದಲು ಸುದ್ದಿಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ಅದು ಸತ್ಯ ಎಂದು ತಿಳಿದ ನಂತರವೇ ಹಂಚಿಕೊಳ್ಳುವ ಮೂಲಕ ಫೇಕ್ ನ್ಯೂಸ್‌ಗಳಿಂದ ದೂರವಿರಬೇಕಾಗಿರುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.

ಇದನ್ನೂ ಓದಿ: ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...