Homeಅಂಕಣಗಳುದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

ದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

- Advertisement -
- Advertisement -

ಜೆಡಿಎಸ್ ಎಂಬ ಪಿತೃ ಪಕ್ಷ ಮುಂದೆ ಏಕಾಂಗಿಯಾಗಿಯೇ ಹೋರಾಡಿ ಮಡಿಯಲಿದೆ ಎಂದು ದೇವೇಗೌಡರು ಖಚಿತವಾಗಿ ಹೇಳಿದ್ದಾರಲ್ಲಾ. ಆದರೂ ಜನಕ್ಕೆ ಡವುಟು ಬಂದಿರುವುದು ಇಲ್ಲೆ; ಏಕೆಂದರೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಈತರದ ಮನೋಲ್ಲಾಸದ ಕಡೆ ಮನಸ್ಸನ್ನು ಕಿಂಚಿತ್ತೂ ಹರಿಯಬಿಡದೆ ರಾಜಕಾರಣಕ್ಕೆ ಕೇಂದ್ರೀಕರಿಸಿರುವ ದೇವೇಗೌಡರು ದೇಶಕಂಡ ಅಪರೂಪದ ರಾಜಕಾರಣಿ. ಇದನ್ನಾಗಲೇ ಜೀವನ ಚರಿತ್ರೆಕಾರರು ದಾಖಲಿಸಿ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ್ದಾರಂತಲ್ಲಾ. ತಮ್ಮ ಅಂಗೈನಲ್ಲಿಯೇ ಇನ್ನೂರ ಇಪ್ಪತ್ತ ನಾಲ್ಕು ಕ್ಷೇತ್ರಗಳ ಗೆರೆಗಳನ್ನ ನೋಡುವ ಗೌಡರು, ಹಿಂದೊಮ್ಮೆ ಮುಖ್ಯಮಂತ್ರಿ ಆಸೆ ತೋರಿಸಿ ಮಗನನ್ನು ಕಮಲದವರು ಅಪಹರಿಸಿದರೆಂದೂ, ಅದರಲ್ಲಿ ನನ್ನ ಪಾತ್ರವಿಲ್ಲ ಅದಕ್ಕೆ ನಾನು ಮುಂದಿನ ಇಪ್ಪತ್ತು ತಿಂಗಳನ್ನ ಎಡೂರಪ್ಪನಿಗೆ ಬಿಡದೆ ನನ್ನ ಜಾತ್ಯತೀತ ಕಾಯ್ದುಕೊಂಡೆ ಎಂದೂ ಲೋಕಸಭೆಯಲ್ಲಿ ನಂಬಿಸುವ ದನಿಯಲ್ಲಿ ಹೇಳಿದ್ದರು. ಲೋಕ ನಂಬಿತು, ಆದರೆ ಈಗ ಜನಕ್ಕೆ ಡವುಟಾಗುತ್ತಿರುವುದು ಏಕೆಂದರೆ 1983ರಲ್ಲಿ ಇದೇ ಸಿದ್ದರಾಮಯ್ಯ ಬಿಜೆಪಿ ಬೆಂಬಲಿತ ಜನತಾ ಸರಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೆ ಎಂದು ಗೌಡರು ನೆನಪಿಸಿದ್ದಾರಲ್ಲಾ, ಥೂತ್ತೇರಿ.

*****

1983ರಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದುದು ನಿಜ. ಏಕೆಂದರೆ ಪ್ರತಿಭಾವಂತನಂತೆ ಕಾಣುತ್ತಿದ್ದ ಅವರನ್ನು ಖಾಲಿ ಬಿಡಬಾರದೆಂದು ನಜೀರ್ ಸಾಬ್ ಮತ್ತು ರಾಚಯ್ಯ, ರಾಮಕೃಷ್ಣ ಹೆಗಡೆಯವರಿಗೆ ಶಿಫಾರಸ್ಸು ಮಾಡಿದ್ದರು. ಆ ಕಾರಣವಾಗಿ ಸಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು. ಹೆಗಡೆ ಸರಕಾರಕ್ಕೆ ಬೆಂಬಲಕೊಟ್ಟಿದ್ದ ಬಿಜೆಪಿ ಇಂದಿನ ಬಿಜೆಪಿಯಾಗಿರಲಿಲ್ಲ. ಇವತ್ತಿನ ಬಿಜೆಪಿಗಳ ತರಹ ಅಂದಿನ ಕಾಂಗ್ರೆಸ್ಸಿಗರಿದ್ದರು. ಎ.ಕೆ ಸುಬ್ಬಯ್ಯನವರ ನೇತೃತ್ವದ ಬಿಜೆಪಿ ದೇವೇಗೌಡರ ವಿಶ್ವಾಸದಲ್ಲಿತ್ತು. ಅಂದಿನ ಬಿಜೆಪಿ ಬ್ರಾಹ್ಮಣರು ಹೆಗಡೆ ನೇತೃತ್ವಕ್ಕೆ ತಮ್ಮನ್ನ ಅರ್ಪಿಸಿಕೊಂಡಿದ್ದರಿಂದ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಇಳಿಯಿತು. ಹೆಗಡೆಯವರು ಸುಬ್ಬಯ್ಯರನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾದಾಗ ದೇವೇಗೌಡರು ಸುಬ್ಬಯ್ಯನವರ ಪರವಿದ್ದರು. ತಮ್ಮ ಸರಳ ಸಜ್ಜನಿಕೆ ಸಿದ್ಧಾಂತದಿಂದ ದೇವೇಗೌಡರು ಅಂದು ಅವರ ಪಕ್ಷದಲ್ಲಿದ್ದ ಪಟೇಲ್, ಬೊಮ್ಮಾಯಿ, ಸಿಂಧ್ಯಾ, ಸಿದ್ದು, ಪ್ರಕಾಶ್ ಮತ್ತು ಆಳ್ವ ರಘುಪತಿ, ರಾಮಯ್ಯ ಇಂತಹ ಘಟಾನುಘಟಿ ರಾಜಕಾರಣಿಗಳ ಲೀಡರಾಗಿದ್ದರು. ಈಗ ಅವರಲ್ಲಿ ಕೆಲವರು ಭೌತಿಕವಾಗಿ ಇಲ್ಲ. ಮತ್ತೆ ಉಳಿದವರು ದೇವೇಗೌಡರ ಪಾರ್ಟಿಯಲ್ಲಿ ಇಲ್ಲ. ’ಹಾಳೂರಿಗೆ ಉಳಿದವನೇ ಗೌಡ’ ಎಂಬ ಗಾದೆಯಂತೆ ನಾನಿನ್ನೂ ಸೆಕ್ಯುಲರ್ ಮ್ಯಾನ್ ಎಂಬುವುದನ್ನ ತೋರಿಸಿಕೊಳ್ಳಲು ಇಬ್ರಾಹಿಂ ಎಂಬ ಮಾತಿನ ಮಲ್ಲರನ್ನ ಜೊತೆಗಿಟ್ಟುಕೊಂಡು ಮಗನನ್ನು ಆಟ ಆಡಲು ಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

 

ಮಗನನ್ನು ಆಟ ಆಡಲು ಬಿಟ್ಟಿದ್ದಾರೆ ಎಂಬ ನಮ್ಮ ಆಪಾದನೆಗೆ ಸಾಕ್ಷಿಯೊದಗಿಸಬೇಕಲ್ಲವೇ! ಕುಮಾರಣ್ಣ ಬಿಜೆಪಿ ಸಖ್ಯ ಬೆಳೆಸಿಕೊಂಡು ಮುಖ್ಯಮಂತ್ರಿಯಾದದ್ದು ದಿಢೀರ್ ಬೆಳವಣಿಗೆಯೇನಲ್ಲ; ದಿನ ಬೆಳಗಾಯ್ತೆಂದರೆ ಮಗನನ್ನ ಮನೆಗೆ ಕರೆಸಿಕೊಂಡು ಮುಂದೆ ನಡೆಯುವ ಮಹಾ ನಾಟಕಕ್ಕೆ ತಾಲೀಮು ಕೊಡುತ್ತಿದ್ದರು ದೇವೇಗೌಡರು. ಹೇಳಿದಂತೆ ಕೇಳುವ ಜೆಡಿಎಸ್ ಅಧ್ಯಕ್ಷನಿದ್ದ ಆ ಕಾಲದಲ್ಲಿ ತೋರಿದ್ದನ್ನು ತಲೆಯ ಮೇಲೆ ಹೊತ್ತು ಮಾಡುವ ಸ್ಪೀಕರ್ ಇದ್ದರು; ಹಾಗಾಗಿ ಗೌಡರು ಮನೆಯಲ್ಲೇ ಕುಳಿತು ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡುವುದಾದರೆ ನನ್ನ ಹೆಣದ ಮೇಲಾಗಲಿ ಎಂದರು. ದಳದವರೆಲ್ಲಾ ಹೆದರಿ ಗೌಡರನ್ನ ಉಳಿಸಿಕೊಂಡರು. ಮುಂದೆ ಕೆಲವೇ ತಿಂಗಳಲ್ಲಿ ಗೌಡರು ಮಗನೊಂದಿಗೆ ಸೇರಿ, ಯಯಾತಿಯಂತಾಗಿ ಈ ನಾಡನ್ನ ಸುತ್ತತೊಡಗಿದರು; ಮಗನ ಸುತ್ತಲೂ ಇದ್ದ ಮಂತ್ರಿಗಳ ಖಾತೆಗಳ ಮೇಲೆ ಹಿಡಿತ ಸಾಧಿಸಿದರು. ಮುಂದೆ ಜೆಡಿಎಸ್‌ನ ಪ್ರಶ್ನಾತೀತ ನಾಯಕನಾಗಿ ಮಗನನ್ನು ಪ್ರತಿಷ್ಠಾಪಿಸಿದರು. ಆಗ ದಳದ ಪತನ ಆರಂಭವಾಗಿ ಸಿಂಧ್ಯಾ, ಪ್ರಕಾಶ್ ಇಂತವರೆಲ್ಲಾ ವಲಸಿಗರಾಗಿ ಕಾಂಗ್ರೆಸ್ ಸೇರಿಕೊಂಡರು. ಆದರೇನು ಗೌಡರು ಬಿಜೆಪಿ ಜನತೆಗಿನ ಸರಸವನ್ನ ಇನ್ನೂ ಬಿಟ್ಟಿಲ್ಲ. ಈಗ ಗೌಡರ ಪಾರ್ಟಿ ಕಚೆರಿಗೆ ಎರಡು ಬಾಗಿಲಂತಲ್ಲಾ. ಒಂದರ ಮುಖಾಂತರ ಬಿಜೆಪಿಗೆ ಹೋಗುವವರು ಹೋಗಬಹುದು, ಮತ್ತೊಂದರ ಮುಖಾಂತರ ಕಾಂಗ್ರೆಸ್ಸಿಗೆ ಹೋಗುವವರು ಹೋಗಬಹುದು; ಕುಮಾರಣ್ಣ ಸಿಂಗಪುರಕ್ಕೆ ಹೋಗಿರುವುದರಲ್ಲಿ ಈ ಸಂದೇಶವೂ ಅಡಗಿದೆಯಂತಲ್ಲಾ, ಥೂತ್ತೇರಿ.

*****

ಕುಮಾರಣ್ಣ ಸಿಂಗಪುರದಲ್ಲಿದ್ದರೂ ಅವರು ಬಿಜೆಪಿಗಳನ್ನೇ ಮೀರಿಸಿ ಬಿಜೆಪಿಯಾಗಿರುವುದು ಹಳೆ ಸುದ್ದಿಯಂತಲ್ಲಾ. ಬಿಜೆಪಿಯ ಬೃಹಸ್ಪತಿಗಳು ರೈತವಿರೋಧಿ ಕಾನೂನು ತಂದಾಗ ಗೌಡರು ಮತ್ತು ಕುಮಾರಣ್ಣ ಮೋದಿಗೆ ನೋವಾಗದಂತೆ ನಡೆದುಕೊಂಡಿದ್ದರು. ಮತಾಂತರ ನಿಷೇದಧ ಕಾಯ್ದೆ ಜಾರಿಯಾಗುವಾಗ ಉಸಿರೆತ್ತದೆ ಬೆಂಬಲಿಸಿದರು. ಹೆಚ್ಚು ಗೋಮಾಂಸ ರಫ್ತು ಮಾಡುವ ಬಿಜೆಪಿಗರ ವಿರುದ್ಧ ದನಿ ಎತ್ತಲಿಲ್ಲ. ಕಾರಿನವರೆಗೂ ಬಂದು ನನ್ನನ್ನ ಮೋದಿ ಬೀಳ್ಕೊಟ್ಟರು ಎಂದು ಗೌಡರು ಮೋದಿಯ ದೊಡ್ಡತನವನ್ನ ಕೊಂಡಾಡಿದರೆ, ಮೋದಿ ಮಾತನ್ನು ನಾನು ಕೇಳಿದ್ದರೆ ಮುಖ್ಯಮಂತ್ರಿಯಾಗಿ ತಾಜ್‌ವೆಸ್ಟ್‌ಎಂಡ್ ಹೋಟೆಲಿನಲ್ಲೇ ಅಧಿಕಾರ ಅನುಭವಿಸಿ ಅವಧಿ ಮುಗಿಸುತ್ತಿದ್ದೆ ಎನ್ನುವ ಕುಮಾರಣ್ಣ ಈಗ ಅಧಿಕೃತ ಬಿಜೆಪಿಯ ವಕ್ತಾರನಾಗಿರುವುದಲ್ಲದೆ, ವಿರೋಧ ಪಕ್ಷದ ಅನಧಿಕೃತ ನಾಯಕನೂ ಆಗಿದ್ದಾರಲ್ಲಾ. ಇದಕ್ಕೆ ಸಿಕ್ಕ ತಾಜಾ ಉದಾಹರಣೆಯೆಂದರೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಪ್ರತಿಭಟಿಸುವ ಬಿಜೆಪಿ ಲೆಟರ್‌ಗೆ ಆ ಪಾರ್ಟಿಯ ಆಫೀಸಿಗೆ ಹೋಗಿ ಸಹಿಮಾಡಿದ್ದು ಮತ್ತು ಬೊಮ್ಮಾಯಿ ಆಡಬೇಕಾದ ಮಾತನ್ನ ತಾವೇ ಆಡುತ್ತಿರುವುದು. ಉದಾಹರಣೆಗೆ ಹಿಂದಿನ ಸರಕಾರ ಆರ್ಥಿಕ ಅಶಿಸ್ತಿನಿಂದ ನಡೆದುಕೊಂಡಿದೆ ಎಂದು ಸದರಿ ಸರ್ಕಾರ ಟೀಕಿಸಿದರೆ, ಕುಮಾರಸ್ವಾಮಿಯವರು ಶಿಸ್ತಿನಿಂದಲೇ ಆಡಳಿತ ನಡೆಸಿದ್ದಾರೆ ಎನ್ನುತ್ತಿದ್ದಾರಲ್ಲಾ. ಇದಲ್ಲವೆ ಬಿಜೆಪಿಯ ಕಾರ್ಯಕರ್ತನ ಮಾತು ಎಂದು ಬಿಜೆಪಿಗಳೇ ಹೇಳುತ್ತಿದ್ದಾರಲ್ಲಾ, ಥೂತ್ತೇರಿ.

*****

ಕುಮಾರಣ್ಣ ಬಿಜೆಪಿ ಬಾಗಿಲಲ್ಲಿ ನಿಂತು ಹೋಗಿ ಬರುವವರನ್ನ ನೋಡಿ “ಹಲೋ ಬ್ರದರ್” ಎಂಬುದನ್ನ ಕೇಳಿ ಶಿವಮೊಗ್ಗದ ಆಯನೂರ್ ಮಂಜುನಾಥ್ ಕಂಗಾಲಾಗಿದ್ದಾರಂತಲ್ಲಾ. ಏಕೆಂದರೆ ಶಿವಮೊಗ್ಗದ ಹರಕುಬಾಯಿ ಈಶ್ವರಪ್ಪನ ವಿರುದ್ದ ಸೆಡ್ಡು ಹೊಡೆದು ಫ್ಲೆಕ್ಸ್ ಹಾಕಿದ್ದರು. ಕಾಂಗ್ರೆಸ್ ಕಡೆ ಹೊರಟಾಗ ಕಾಂಗೈನ ಕೆಲವರು ತಡೆಯೊಡ್ಡಿದರು. ಆಗ ಆಯನೂರ್ ಅನಿವಾರ್ಯವಾಗಿ ದಳ ಸೇರಿ ಕ್ಯಾಂಡಿಡೇಟ್ ಆದರು. ಈಗತಾನೆ ಅವರ ಪಾರ್ಟಿಗೆ ಹೋಗಿ ಸೋತು ಸುಧಾರಿಸಿಕೊಳ್ಳುತ್ತಿರುವಾಗಲೇ ಕುಮಾರಣ್ಣ ಬಿಜೆಪಿಗೆ ಹೊರಟದ್ದು ನೋಡಿ ದಿಕ್ಕುತೋಚದಂತಾಗಿದ್ದಾರಂತಲ್ಲಾ. ಏಕೆಂದರೆ ಪುನಃ ಬಂದರೆ ಆಯನೂರರನ್ನು ಹಲ್ಲುಗಿಂಜಿ ಅಣುಕಿಸಲು ಈಶ್ವರಪ್ಪನ ಕಡೆಯವರು ಕಾಯುತ್ತಿದ್ದಾರಂತೆ. ಆಯನೂರ್ ಕತೆ ಹಿಂಗಾದರೆ ಇನ್ನ ನಾಡಿನ ತುಂಬ ಆಯನೂರ್‌ನಂತ ಆಸಾಮಿಗಳು ಎಷ್ಟಿದ್ದಾರೆಯೋ ಏನೋ, ಥೂತ್ತೇರಿ.

ಇದನ್ನೂ ಓದಿ: ಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...