Homeಅಂಕಣಗಳುಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

ಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

- Advertisement -
- Advertisement -

ಪಾಕೀಸ್ತಾನದಲ್ಲೂ ಮೋದಿ ಭಕ್ತರಿದ್ದಾರೆ, ಅವರೆಲ್ಲಾ ಮೋದಿ ಆಡಳಿತಕ್ಕೆ ಒಳಪಡಲು ಹಾತೊರೆಯುತ್ತಿದ್ದಾರೆ ಎಂದು ನಮ್ಮ ಈಶ್ವರಪ್ಪನವರು ಹೇಳಿದ್ದಾರಲ್ಲಾ. ಕೇಳಿದ ಕೂಡಲೇ ಬೆಚ್ಚಿಬೀಳುವಂತಹ ಈ ಸಂಗತಿಯ ಬಗ್ಗೆ ಈಶ್ವರಪ್ಪರನ್ನೇ ಕೇಳಿದರೆ ಹೇಗೆ ಅನ್ನಿಸಿ ಫೋನ್ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್: ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ…’

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿದ್ದಿರಿ, ಬನ್ರಿ ಮಾತಾಡಣ.”

“ಮಾತಾಡಸಕ್ಕೆ ಅಂತ ಫೋನು ಮಾಡಿದೆ ಸಾರ್.”

“ಏನಿಸೇಷ?”

“ತಾವು ಶಿವಮೊಗ್ಗದ ಖಾಸಗಿ ಬಸ್ಟಾಂಡಲ್ಲಿ ನಿಂತುಕೊಂಡು ಪಾಕೀಸ್ತಾನದ ಜನರು ಉಸುರಾಡದೆ ಕಷ್ಟ ಆಗಿದೆ. ಆದ್ರಿಂದ ಅವುರೆಲ್ಲಾ ಮೋದಿಯಂತವರು ನಮ್ಮ ದೇಶದ ಪ್ರಧಾನಿಯಾಗಬೇಕು ಅಂತ ಬಯಸಿದ್ದಾರೆ, ಅಲ್ಲಿ ಜನಕ್ಕೆ ಮೋದಿ ಆಡಳಿತದ ಒಲವಿದೆ ಅಂದಿದೀರಿ ಸಾರ್.”

“ಹೌದು ಹೇಳೀದ್ದಿನಿ, ಅದರಲ್ಲಿ ತಪ್ಪೇನು?”

“ಹಾಗಂತ ನಿಮಿಗೆ ಯಾರೇಳಿದ್ರು ಸಾರ್…”

“ಯಾರು ಹೇಳಕ್ಕೆ ಬಂದಿಲ್ಲ. ಪಾಕೀಸ್ತಾನದ ಸ್ಥಿತಿ ನೋಡಿದ್ರೆ, ನಾವೆ ಊಹೆ ಮಾಡಬಹುದು ಕಂಡ್ರಿ.”

“ಪಾಕೀಸ್ತಾನದವು ಹ್ವಟ್ಟಿಗಿಲ್ದೆಯಿದ್ರು ಮೋದಿ ಬಗ್ಗೆ ತಿಳಕತ್ತವೆ ಸಾರ್. ಗುಜರಾತ್ ಗಲಭೆ ಆಯ್ತಲ್ಲಾ, ಆಗಿನಿಂದ ಏನು ಮಾಡ್ತರೆ, ಏನೇಳ್ತರೆ ಅನ್ನದ ತಿಳಕತ್ತಾ ಅವುರೆ. ಅಂಥೊರು ಮೋದಿ ಆಡಳಿತದ ಬಗ್ಗೆ ಒಲವು ತೋರತರೆ ಅಂತಿರಲ್ಲಾ ಹ್ಯಂಗೇ?”

“ಮೋದಿ ಆಡಳಿತದಲ್ಲಿ ಹತ್ತೊರಸದಿಂದ ಗಲಭೆ ಆಗಿಲ್ಲ. ಜನಾಂಗದ ಘರ್ಷಣೆ ನಡೆದಿಲ್ಲ. ಕೊಲೆ ಸುಲಿಗೆ ಏನೂ ನಡದಿಲ್ಲ. ಇಡೀ ದೇಶ ತುಂಗಾ ನದಿಯಂಗೆ ಪ್ರಶಾಂತವಾಗಿ ಹರಿತಾ ಅದೆ.”

“ತುಂಗಾ ನದಿಗೆ ಸೇರಿದಂಗೆ ಮನೆಕಟ್ಟಿಗೊಂಡು ನೀವೀ ಮಾತೇಳದು ಸರಿ; ಆದ್ರೆ ತಾವು ಮಂತ್ರಿಯಾಗಿದ್ದಾಗ 144ನೇ ಸೆಕ್ಷನ್ ಜಾರಿಯಾಗಿದ್ರು ಎಂ.ಪಿಯಾದಿಯಾಗಿ ಮೆರವಣಿಗೆ ತಗದು ಮುಸ್ಲಿಮರ ಕೇರಿಗೆ ನುಗ್ಗಿ ಮನೆನ್ಯಲ್ಲ ಲೂಟಿ ಮಾಡಿ, ಹಲ್ಲೆ ಮಾಡುದ್ರಲ್ಲ ಸಾರ್, ಇದ ಮರತುಬುಟ್ರ?”

“ಅದು ಅಮಾಯಕನ ಕೊಲೆ ಮಾಡಿದ್ದಕ್ಕೆ ನಡೆದ ಪ್ರತಿಭಟನೆ ಕಂಡ್ರಿ.”

“ಪ್ರತಿಭಟನೆಲಿ ಹಿಂಸೆ ಇರಬವುದೊ?”

“ಕೈ ಮೀರಿದಾಗ ಏನೂ ಮಾಡಕ್ಕಾಗದಿಲ್ಲ.”

“ಅದು ಸಾರ್ವಜನಿಕರ ವಿಷಯ. ನೀವು ಮಂತ್ರಿಯಾಗಿದ್ದು ನಿಮ್ಮ ಲೀಡರ್‌ಶಿಪ್ಪಲ್ಲೆ ದೊಂಬಿ ನಡಿತು ಸಾರ್.”

“ಪುನಃ ಅದ್ನೆ ಹೇಳ್ತಿರಲ್ರೀ. ನಾವು ಮೆರವಣಿಗೆ ಹೋಗುವಾಗ ಯಾವನೊ ನಿಮ್ಮಂಥೋನು ಸಾಬರ ಮನಿಗೆ ನುಗ್ಗಿ ಟಿ.ವಿ ಹೊತ್ತಗಂಡು ಬಂದು ಬೀದಿಗಾಕಿದ. ಆಗ ಮೆತ್ತಗಾಕಪ್ಪ ವಡದೋಗತ್ತೆ ಅನ್ನಕ್ಕಾಗತ್ತ. ಇನ್ನೊಬ್ಬ ಪ್ರಿಜ್ ತಂದು ಯಸ್ದ. ಮತ್ತೊಬ್ಬ ಗುಜರಿ ಸಾಮನು ತಂದು ಚಲ್ಲಿದ. ಅಂತವರನ್ನ ತಡಿಯಕ್ಕಾಗತ್ತ?”

“ಆಗಲ್ಲ ಸಾರ್, ಅಂತ ಕ್ಯಲಸ ಮಾಡೋರ ಲೀಡ್ರು ನೀವೆ ಹಿಂದಿರುವಾಗ ಇನ್ನ ಅವುರನ್ನ್ ತಡಿಯಕ್ಕಾಗಲ್ಲ. ಇದು ಪಾಕೀಸ್ತಾನದವರಿಗೆ ಗೊತ್ತಿಲ್ಲವೆ?”

“ಅದ್ಯಂಗೆ ಗೊತ್ತಾಗತ್ತೆರಿ? ಪಾಕೀಸ್ತಾನ ಎಲ್ಲೀ ಶಿವಮೊಗ್ಗ ಎಲ್ಲಿ…”

ಇದನ್ನೂ ಓದಿ: ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

“ಮಂಡ್ಯದ ಹಿಜಾಬ್ ಹುಡುಗಿ ವಿಷಯ ಸಂಗ್ರಹಿಸಿರೋರಿಗೆ ನಿಮ್ಮ ವಿಷಯ ತಿಳಿಯಲ್ವ ಸಾರ್?”

“ತಿಳಿಲಿ ಬುಡ್ರಿ, ಅವುರೇನು ಮಾಡ್ತರೆ?”

“ಅಲ್ಲ ಸಾರ್ ಇಡೀ ದೇಶದಲ್ಲಿ ಬಿಜೆಪಿ ಮಂತ್ರಿಗಳು ಶಾಸಕರೆಲ್ಲಾ ನಿಮ್ಮಂಗೆ ಇರುವಾಗ, ಇದ ತಿಳಕಂಡ ಪಾಕಿಸ್ತಾನಿಗಳು ಅದ್ಯಂಗೆ ಮೋದಿ ಆಡಳಿತವೇ ಚಂದ ಅಂತರೆ ಅನ್ನದೆ ನಮಿಗೆ ಸಮಸ್ಯೆ.”

“ಪಾಕೀಸ್ತಾನದಲ್ಲಿ ಈಗೇನು ನ್ಯಡಿತಾ ಅದೆ ಗೊತ್ತೇನ್ರಿ?”

“ಗೊತ್ತು ಸಾರ್. ಆ ದೇಶ ಪಾಲಾದಾಗಿಂದ ನ್ಯಟ್ಟಗಿಲ್ಲ. ಆ ದೇಶಕ್ಕೆ ಮೋದಿಯಂತ ಪ್ರಧಾನಿಗಳು ಬಂದು ಹೋಗ್ಯವುರೆ, ಆದ್ರೆ ನೆಹರು, ಶಾಸ್ತ್ರಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ತರದವುರು ಬಂದಿಲ್ಲ. ಅದ್ಕೆ ಆ ದೇಶ ಅಂಗಿರದು.”

“ನಾನೇಳಿದ್ದು ಈ ಕ್ಷಣಕ್ಕೆ ಆ ಜನ ಮೋದಿ ಆಡಳಿತ ಬೇಕು ಅಂತರೆ ಅಂತ.”

“ನೋಡಿ ಸಾರ್, ಮೋದಿ ನಿಮ್ಮ ಆರಾಧ್ಯ ದೈವ ಇರಬಹುದು, ಆದ್ರೆ ಅವರು ಈ ದೇಶಕ್ಕೆ ಸುಳ್ಳು ಹೇಳ್ಯವುರೆ.”

“ಏನು ಸುಳ್ಳೇಳಿದ್ದಾರ್ರೀ?”

“ಅವುರು ಮಾತಾಡೊ ಐದು ಮಾತಲ್ಲಿ ಮೂರು ಸುಳ್ಳಿರತವೆ ಸಾರ್.”

“ಒಂದೇ ಒಂದು ಸುಳ್ಳು ತೋರಿಸಿ, ನಾನು ರಾಜಕೀಯ ನಿವೃತ್ತಿ ತಗತಿನಿ.”

“ನಿಮ್ಮ ನಿವೃತ್ತಿನ ಬಿಜೆಪಿನೇ ಮಾಡಿದೆ ಸಾರ್, ನೀವು ಸುಮ್ಮನೆ ಅದನ್ನ ಒಪ್ಪಿಗಳದೆ ಸಕ್ರಿಯವಾಗಿದ್ದೀರಿ.”

“ಬಿಜೆಪಿ ಎಲ್ಲಿ ಮಾಡಿದೆ ರೀ?”

“ಸಾರ್ ನಲವತ್ತು ಪರಸೆಂಟ್ ಕಮಿಷನ್ ವಿಷಯದಲ್ಲಿ ಪೇ ಸಿಎಂ ಬೊಮ್ಮಾಯಿ ನಿಮ್ಮ ರಾಜಿನಾಮೆ ತಗಂಡ್ರು. ಸರಕಾರನೆ ಅತ್ಮಹತ್ಯೆ ವಿಷಯದಲ್ಲಿ ಬಿ ರಿಪೋರ್ಟು ಹಾಕ್ಸಿದ್ರೂ, ಸರಕಾರದ ಅವಧಿ ಮಿಗಿಯೋವರಿಗ್ರೂ, ನಿಮ್ಮನ್ನ ತಿರಗ ಮಂತ್ರಿ ಮಾಡಲಿಲ್ಲ. ಟಿಕೆಟ್‌ನೂ ಕೊಡಲಿಲ್ಲ ಇದರರ್ಥ ಏನೂ ಅಂತ?”

“ಬಿ ರಿಪೋರ್ಟು ಬಂತಲ್ಲ. ನಾನು ಆ ವಿಷಯದಲ್ಲಿ ನಿರಪರಾಧಿ ಅಂತ ಆಯ್ತು, ಇನ್ನ ಟಿಕೆಟ್ ವಿಷಯದಲ್ಲಿ ಯುವಕನಿಗೆ ಕೊಟ್ರು ಅದು ಪಾರ್ಟಿ ತೀರ್ಮಾನ. ನಮ್ಮಲ್ಲಿ ವಂಶಾಡಳಿತ ಇಲ್ಲ.”

“ವಿಜಯೇಂದ್ರ, ರಾಘವೇಂದ್ರ, ಎಡೂರಪ್ಪ ಬೇರೆಬೇರೆ ಜಾತಿನ?”

“ಅದ್ಕೆ ನಾನೀಗ ಹಾವೇರಿಗೆ ನನ್ನ ಮಗನ್ನ ನಿಲ್ಲುಸ್ತಿನಿ.”

“ಟಿಕೆಟ್ ಕೊಡದೆ ಹೋದ್ರೆ?”

“ಪಾರ್ಟಿ ಕೆಲಸ ಮಾಡ್ತಿವಿ. ಮುಸ್ಲಿಂ ಗೂಂಡಾಗಳ ವಿರುದ್ಧ ಹೋರಾಡ್ತಿವಿ.”

“ದ್ವೇಷ ವಳ್ಳೆದಲ್ಲ ಸಾರ್.”

“ಅದ್ನನಿಗೂ ಗೊತ್ತು ಕಂಡ್ರಿ, ಬಿಜೆಪಿಲಿ ರಾಜಕಾರಣ ಮಾಡಬೇಕಾದ್ರೆ ಹಿಂಸೆ ಮಾತಾಡಬೇಕು, ಜನಗಳನ್ನ ಸುಳ್ಳು ಸುಳ್ಳೆ ಪ್ರಚೋದಿಸಬೇಕು.”

“ಇನ್ನೊಂದು ಮಾತಾಡಿದ್ದೀರಿ ಸಾರ್ ನೀವು ಬಸ್ಟಾಂಡಲ್ಲಿ. ಅಧಿಕಾರದಾಸೆಗೆ ಕಾಂಗ್ರೆಸ್‌ನವರು ದೇಶ ತುಂಡು ಮಾಡಿದ್ರು. ಈಗ್ಲಾರ ಕ್ಷಮೆ ಕೇಳಿದ್ರೆ ಪಾಕೀಸ್ತಾನ ಭಾರತದ ತೆಕ್ಕೆಗೆ ಸೇರತದೆ ಅಂದಿದೀರಿ.”

“ಹೌದು, ಅದರಲ್ಲಿ ತಪ್ಪೇನು?”

“ಪಾಕೀಸ್ತಾನ ಏನು ಅಂತ ಗೊತ್ತ ಸಾ ನಿಮಿಗೆ, ಅಲ್ಲಿ ಚುನಾಯಿತ ಸರಕಾರ ಅಂತ ಒಂದಿರುತ್ತೆ. ಅದಕ್ಕೆ ಪರ್ಯಾಯವಾಗಿ ಮಿಲಿಟ್ರಿನೂ ಆಡಳಿತ ನಡಸತ್ತೆ. ಇವುರ ನಡುವೆ ಭಯೋತ್ಪಾದಕರು, ಗೂಂಡಾಗಳು ಬೇರೆ ಅವುರೆ. ಈ ಮೂರು ಸಂಘಟನೆ ಕವುಲುಗಳೂ ಸ್ವತಂತ್ರವಾಗಿ ಅಪಾಯಕಾರಿಗಳಾಗಿವೆ. ಇಂತ ದೇಶನ ಭಾರತಕ್ಕೆ ಸೇರಿಕೊಳ್ಳುತ್ತೆ ಅಂತಿರಲ್ಲಾ, ಈ ಶತಮಾನದ ಜೋಕು ಸಾರ್ ಇದು.”

“ಅದ್ಯಂಗ್ರಿ ಜೋಕು. ನಮ್ಮ ಮಾತ್ಯಲ್ಲ ನಿಮಗೆ ಜೋಕಾಗಿ ಕಾಣತ್ತೆ.”

“ನೀವೇಳದೆಂಗೆ ಅಂದ್ರೆ, ಹುಚ್ಚರ ಜೊತೆಗೆ ತಿಕ್ಕಲ್ರು ಸೇರಿಕಂಡ್ರೆ ಎಷ್ಟು ಚನ್ನಾಗಿರುತ್ತೆ ಅನ್ನಂಗೆ ಮಾತಾಡ್ತಿರಿ.”

“ಯಾರ್ರಿ ತಿಕ್ಕಲ್ರು?”

“ತಿಕ್ಕಲರಲ್ಲ ಬಿಡಿ. ಅಸಾಮಾನ್ಯ ದೇಶಭಕ್ತರೆ ಅಂತ ಮಾತಾಡಣ. ಮಣಿಪುರ ಯಾವ ದೇಶದಲ್ಲಿದೆ ಸಾರ್? ಅದರ ಬಗ್ಗೆ ಮಾತಾಡದ ಬುಟ್ಟು ಪಾಕೀಸ್ತಾನದ ಬಗ್ಗೆ ಮಾತಾಡ್ತಿರಿ. ಅಲ್ಲಿ ಜನಾಂಗಿಯ ಹತ್ಯೆ ಶುರುವಾಗಿ, ಮೂರು ತಿಂಗಳಾಯ್ತು, ಪ್ರಧಾನಿ ಆ ವಿಷಯದಲ್ಲೂ ಬಾಯಿ ಬಿಡಕ್ಕೆ ಮೂರು ತಿಂಗಳಾಯ್ತು. ಅದೂ ಬಲವಂತವಾಗಿ ಸಂಸತ್ತಿಗೆ ಬಂದು ಎರಡು ಗಂಟೆ ಕಾಂಗ್ರೆಸ್‌ಗೆ ಬೈದು, ಐದು ನಿಮಿಷ ಮಣಿಪುರದ ಬಗ್ಗೆ ಮಾತಾಡಿದ್ರು. ಇದು ಸರಿನ?”

“ಮೋದಿ ಬಗ್ಗೆ ಮಾತಾಡಬೇಡಿ.”

“ಮಾತಾಡ್ತಿನಿ ಸಾರ್, ಅವರು ನಮ್ಮ ದೇಶದ ಪ್ರಧಾನಿ, ಅವುರ ಈ ದೇಶಕ್ಕೆ ಹೇಳಿರೊ ಸುಳ್ಳು ಯಾವುದು ಅಂದ್ರೇ: ಚೀನಾ ದೇಶ ನಮ್ಮ ದೇಶದ ಹುಲ್ಲುಗಾವಲನ್ನು ಅಕ್ರಮಿಸಿದೆ. ಇದು ಗೊತ್ತಿದ್ದೂ ಮೋದಿ ಒಂದಿಂಚು ಭೂಮಿಯನ್ನು ಚೀನಾ ಅಕ್ರಮಿಸಿಕೊಂಡಿಲ್ಲ ಅಂದ್ರು. ಪ್ರಧಾನಿ ಸುಳ್ಳಿಗೆ ಗಡಿಲಿದ್ದ ಸೈನಿಕರೆ ದಂಗುಬಡದವುರೆ ಗೊತ್ತೆ?”

“ರೀ ಚೀನಾದವುರು ಅಕ್ರಮಿಸಿರೋದು ಹುಲ್ಲುಗಾವಲು. ಆ ಹುಲ್ಲುಗಾವುಲಲ್ಲಿ ಗೋವು ಮೇಯ್‌ಸ್ತರೆ. ಗೋವು ಯಲ್ಲಾರಿಗೂ ಒಂದೆ. ಇದೂ ಒಂದು ಸುದ್ದಿ ಅಂತ ಹೇಳ್ತಿರಿ ನೀವು.”

“ಇನ್ನೊಂದು ವಿಷಯ ಸಾರ್, ನಿಮಗೆ ಗೊತ್ತಿರಲಿ ದೇಶಕ್ಕೆ ಸ್ವಾತಂತ್ರ ಬಂದಾಗ ನಿಮ್ಮ ಸಾವರಕರು ಮತ್ತೆ ಇತರರು ಇನ್ನು ಮುಂದೆ ಈ ದೇಶ ಹಿಂದೂ ರಾಷ್ಟ್ರವಾಗತ್ತೆ ಅಂದ್ರು. ಇವುರಂಗಂದ ಕೂಡ್ಲೆ ಜಿನ್ನಾ ಹಿಂದೂ ದೇಶದಲ್ಲಿ ನಾವಿರಲ್ಲ ಪಾಕೀಸ್ತಾನ ಕೊಡಿ ಅಂದ. ಅಂಗಾಗಿ ನಿಮ್ಮವುರ ಮಾತಿಂದ ದೇಶ ಒಡದು, ನಮ್ಮನಮ್ಮ ದಾರಿಲಿ ಆಗ್ಲೆ 75 ವರ್ಷ ನ್ಯಡದಿದ್ದೀವಿ. ಆ ದೇಶನೂ ಅವನತಿ ಅಂಚಿಗೆ ಬಂದಿದೆ. ತಿರಗ ಮೋದಿ ಬಂದ್ರೆ ನಾವೂ ಸರ್ವನಾಶದ ಹಾದಿಗೆ ಬೀಳ್ತಿವಿ. ಇಂಥದೊಂದು ಸ್ಥಿತಿಲಿ ನೀವು ಪಾಕೀಸ್ತಾನ ಸೇರಿಸಿಗಳಕ್ಕೆ ಹಾತೊರೆಯದರ ಬದ್ಲು ಶಿವಮೊಗ್ಗದ ಮಿಳಘಟ್ಟ, ಟಿಪ್ಪು ನಗರ ಮಂಡಿ ಕಡೆಯಿರೊ ಮುಸಲ್ಮಾನರನ್ನ ಮಾತಾಡಿಸಿ ಕಷ್ಟ ಸುಖ ಕೇಳಿ ಸಾರ್. ನೀವಂಗೆ ಮಾಡಿದ್ರೆ ಮುಂದೆ ಪಕ್ಷೇತರವಾಗಿ ನಿಂತ್ರು ಗೆಲ್ತೀರಿ.”

“ಪಕ್ಷೇತರವಾಗಿ ಈಶ್ವರಪ್ಪನ ಶರೀರದಲ್ಲಿ ಉಸಿರಿರೊವರಿಗೂ ನಿಲ್ಲಲ್ಲ.”

“ಥೂತ್ತೇರಿ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...