Homeಅಂಕಣಗಳು’ಜಾಫರ್ ಪನಾಹಿ’ ಸಿನಿಮಾ ಜಗತ್ತಿನ ಬಂಡುಕೋರ: ಕೀಲಾರ ಟೆಂಟ್ ಹೌಸ್-5

’ಜಾಫರ್ ಪನಾಹಿ’ ಸಿನಿಮಾ ಜಗತ್ತಿನ ಬಂಡುಕೋರ: ಕೀಲಾರ ಟೆಂಟ್ ಹೌಸ್-5

ಸಿನಿಮಾ ಮಾಡುವುದರಿಂದ ನಿಷೇಧಕ್ಕೊಳಪಟ್ಟ ಮೇಲೆ ಪನಾಹಿ ಕಾನೂನುಬಾಹಿರವಾಗಿ ಮೂರು ಸಿನಿಮಾಗಳನ್ನು ಮಾಡುತ್ತಾನೆ.

- Advertisement -
- Advertisement -

ಡಿ.ಆರ್. ನಾಗರಾಜ್ ತಮ್ಮ ಲೇಖನವೊಂದದರಲ್ಲಿ ಜಾನಪದ ಕಥೆಯೊಂದನ್ನ ಉಲ್ಲೇಖ ಮಾಡುತ್ತಾರೆ. ಜಾಫರ್ ಪನಾಹಿಯ ವ್ಯಕ್ತಿತ್ವ ಮತ್ತು ಆತನ ವೃತ್ತಿಗೆ ಆ ಕಥೆ ರೂಪಕದಂತಿದೆ.

“ಇಬ್ಬರು ರಾಜರ ನಡುವಿನ ಯುದ್ಧದಲ್ಲಿ, ಗೆದ್ದ ರಾಜ ಸೋತ ರಾಜನನ್ನು ಅವನ ಕೋತಿಯೊಂದಿಗೆ ಬಂಧಿಸಿ ತನ್ನ ಊಳಿಗದ ತೊತ್ತನ್ನಾಗಿ ಮಾಡಿಕೊಳ್ಳುತ್ತಾನೆ. ಸೋತ ರಾಜನಿಗೆ ಸಾಕಷ್ಟು ಹಿಂಸೆಕೊಟ್ಟು ಅಪಮಾನಿಸುತ್ತಾನೆ. ಈ ಬಗೆಯ ಕಿರುಕುಳ ಮತ್ತು ಅಪಮಾನ ಯಾವುದೇ ಮನುಷ್ಯನನ್ನೂ ಸಹ ಸರ್ವನಾಶ ಮಾಡುತ್ತದೆ ಎಂದು ಭಾವಿಸಿದ್ದ ಗೆದ್ದವನಿಗೆ, ತನ್ನ ತೊತ್ತಿನಲ್ಲಿದ್ದ ರಾಜನ ವ್ಯಂಗ್ಯದ ನಡೆವಳಿಕೆ ಮಾತ್ರ ಆಶ್ಚರ್ಯ ಉಂಟು ಮಾಡುತ್ತದೆ.”

“ಸೋತ ರಾಜನ ಆಂತರಿಕ ಸ್ವಾಸ್ಥ್ಯದ ಈ ಮೂಲ ಸೆಲೆ ಯಾವುದು ಎಂದು ಹುಡುಕಿದಾಗ, ಅವನು, ತನ್ನ ಕೋತಿಗೆ ರಾಜನ ಉಡುಗೆ ತೊಡಿಸಿ ಗೆದ್ದ ರಾಜನ ಗರ್ವದ ಮಾತುಗಳನ್ನೆಲ್ಲಾ ಆ ಕೋತಿಯಲ್ಲಿ ಪುನಾರವರ್ತಿಸಿ ಅಣಕಿಸುತ್ತಾ ಸಂತೋಷ ಪಡುತ್ತಿರುತ್ತಾನೆ. ಗರ್ವದ ರಾಜನಿಗೆ ಇದು ಅಪಮಾನವೆನಿಸಿ ಆ ಕೋತಿಯನ್ನೂ ಕೊಲ್ಲಿಸುತ್ತಾನೆ. ಇದರಿಂದ ಸೋತರಾಜ ಮಂಕಾಗುತ್ತಾನೆ.”

“ಸ್ವಲ್ಪದಿನದ ನಂತರ ಮತ್ತೆ ಅವನ ಆಂತರಿಕ ಸ್ವಾಸ್ಥ್ಯ ಚಿಗುರುತ್ತದೆ. ಇದು ಗೆದ್ದ ರಾಜನಿಗೆ ಅಸಾಧ್ಯ ಸಿಟ್ಟಿನ ಜೊತೆ ಅಳುಕನ್ನೂ ಉಂಟುಮಾಡುತ್ತದೆ. ಇದು ಹೇಗೆ ಸಾಧ್ಯ ಎಂದು ಮೂಲ ಹುಡುಕಲು ಹೋದಾಗ, ಸೋತ ರಾಜನ ಕನಸಿನಲ್ಲಿ ಕೋತಿ ಜೀವಂತವಾಗಿರುತ್ತದೆ, ಅವನು ತನ್ನ ಕನಸಿನಲ್ಲಿ, ಮತ್ತದೇ ರೀತಿ ಆ ಕೋತಿಗೆ ಗೆದ್ದ ರಾಜನ ಉಡುಗೆ ತೊಡಿಸಿ ಅವನ ಗರ್ವದ ಮಾತುಗಳನ್ನೆಲ್ಲಾ ಅದರ ಕೈಯಲ್ಲಿ ಪುನಾರವರ್ತಿಸಿ ಅಣಕಿಸಿ ಸಂತೋಷಪಡುತ್ತಿರುತ್ತಾನೆ. ಈಗ ಗೆದ್ದ ಗರ್ವದ ರಾಜನಿಗೆ ಏನೂ ಮಾಡಲು ಸಾಧ್ಯ ವಾಗುವುದಿಲ್ಲ; ಏಕೆಂದರೆ ಕನಸಿನ ಕೋತಿಯನ್ನು ಕೊಲ್ಲಲಾಗುದಿಲ್ಲ!”

ಇರಾನಿನ ಹೊಸ ಅಲೆ ಸಿನಿಮಾ ನಿರ್ಮಾತೃಗಳಲ್ಲಿ ಜಾಫರ್ ಪನಾಹಿಯದು ಬಹು ದೊಡ್ಡ ಹೆಸರು. ಬಹುತೇಕ ಅವನ ಎಲ್ಲ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮತ್ತು ಪ್ರಶಸ್ತಿಗಳನ್ನು ಪಡೆದಿವೆ. ತನ್ನ ಸಮಾಜದ ಸಾಮಾನ್ಯ ಜನರ ದಿನನಿತ್ಯದ ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲೂ ಮನುಷ್ಯತ್ವವನ್ನು ಶೋಧಿಸುವ ಇವನ ಸಿನಿಮಾಗಳು, ಇರಾನಿನ ಸಮಾಜಿಕ ಪರಿಸ್ಥಿತಿಗಳನ್ನು ಚರ್ಚೆ ಮಾಡುತ್ತಲೇ ಅಲ್ಲಿನ ರಾಜಕೀಯ ಹಳವಂಡಗಳನ್ನು ಬಯಲು ಮಾಡುತ್ತವೆ.

ಜಾಫರ್‌ ಪನಾಹಿ PC:Google.com

ಈ ಕಾರಣಕ್ಕಾಗಿಯೇ ಪನಾಹಿಯ ಎಷ್ಟೋ ಚಿತ್ರಕಥೆಗಳಿಗೆ ಸಿನಿಮಾ ಮಾಡಲು ಅಲ್ಲಿನ ಪ್ರಭುತ್ವ ಅನುಮತಿಯನ್ನೇ ನೀಡಲಿಲ್ಲ. ದ ವೈಟ್ ಬಲೂನ್ (1995), ದ ಮಿರರ್ (1997), ದ ಸರ್ಕಲ್ (2000), ಕ್ರಿಮ್ಸನ್ ಗೋಲ್ಡ್ (2003), ಆಫ್ ಸೈಡ್ (2006) ಪನಾಹಿಯ ಈ ಎಲ್ಲಾ ಸಿನಿಮಾಗಳಲ್ಲಿ ಇರಾನಿನ ಜನಸಮುದಾಯದ ಬವಣೆಗಳು ಅಲ್ಲಿನ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಪ್ರತಿಫಲನಗೊಳ್ಳುತ್ತವೆ. ಆ ಸಿನಿಮಾಗಳಲ್ಲಿನ ಪಾತ್ರಗಳೂ ಸಹ ಈ ರೀತಿಯ ತೊಂದರೆಗಳಿಂದ ಹೊರಬಂದು ಸಾಮಾಜಿಕ ನಿರ್ಬಂಧದ ಎಲ್ಲೆಗಳನ್ನು ಮೀರಲು ತವಕಿಸುತ್ತವೆ.

ಪನಾಹಿ “ನನಗೆ ನಾನೊಬ್ಬ ಸಾಮಾಜಿಕ ಸಿನಿಮಾ ನಿರ್ಮಾತೃ ಎಂದು ಗುರುತಿಸಿಕೊಳ್ಳಲು ಹೆಮ್ಮೆಯೇ ಹೊರತು ಒಬ್ಬ ರಾಜಕೀಯ ಸಿನಿಮಾ ನಿರ್ಮಾತೃ ಎಂದು ಅಲ್ಲ. ಆದರೆ, ಪ್ರತಿಯೊಂದು ಸಾಮಾಜಿಕ ಸಿನಿಮಾವು ಅಲ್ಲಿನ ರಾಜಕೀಯ ಸಂಗತಿಗಳಿಂದ ಪ್ರೇರೇಪಿತವಾಗಿರುತ್ತದೆ. ಯಾಕೆಂದರೆ, ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ಕೂಡ ಅಲ್ಲಿನ ರಾಜಕೀಯ ತಪ್ಪುಗಳಿಂದ ಉದ್ಭವಿಸಿದವೇ ಆಗಿರುತ್ತವೆ” ಎಂದು ಹೇಳಿಕೊಂಡಿದ್ದಾರೆ.

ಪನಾಹಿಯ ಸಮಕಾಲೀನನಾದ ಅವನಷ್ಟೇ ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದ ಇರಾನಿನ ಹೊಸ ಅಲೆ ಸಿನಿಮಾಗಳನ್ನು ಪ್ರತಿನಿಧಿಸುವ ಮೊಹಸೆನ್ ಮಕ್ಮುಲ್‌ಬಫ್ ಆದಿಯಾಗಿ ಅಬ್ಬಾಸ್ ಕೀರೊಸ್ತಮಿ, ಮಾಜಿದ್ ಮಾಜಿದಿ, ಅಸ್ಗರ್ ಫರ್ಹಾದಿ ಇನ್ನೂ ಮುಂತಾದ ಸಿನಿಮಾ ನಿರ್ಮಾತೃಗಳೆಲ್ಲಾ, ಇರಾನಿನ ಜನಸಮುದಾಯದ ಸಾಮಾಜಿಕ ಸಂಗತಿಗಳನ್ನೆಲ್ಲಾ ತಮ್ಮ ಅಗಾಧ ಪ್ರತಿಭೆಯಿಂದ ಸಿನಿಮಾದ ತಾಂತ್ರಿಕತೆ ಮತ್ತು ಏಸ್ಥೆಟಿಕ್ಸ್ ಮುಖಾಂತರ ಪನಾಹಿಗಿಂತ ತುಂಬಾ ಉತ್ಕೃಷ್ಟವಾಗಿ ಪ್ರಸ್ತುತಪಡಿಸಿದರು ಕೂಡ ಪನಾಹಿ ಇವರೆಲ್ಲರ ನಡುವೆ ಬಹಳ ಭಿನ್ನವಾಗಿ ಕಾಣುತ್ತಾನೆ. ಈ ಮೇಲಿನ ನಿರ್ದೇಶಕರುಗಳಲ್ಲಿ ಪನಾಹಿಯ ಬಂಡುಕೋರತನವಾಗಲಿ ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವ ಎದೆಗಾರಿಕೆಯಾಗಲಿ ಕಾಣಲಾಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

ಪ್ರಭುತ್ವದ ವಿರುದ್ಧ ಪ್ರಪಾಗ್ಯಾಂಡ ಮಾಡುತ್ತಿದ್ದಾನೆ ಎಂದು 2010 ರಲ್ಲಿ ಇರಾನ್ ಸರ್ಕಾರ ಪನಾಹಿಯನ್ನು ಬಂಧಿಸಿ ಜೈಲಿನಲ್ಲಿಡುತ್ತದೆ. 6 ವರ್ಷಗಳ ಸೆರೆವಾಸದ ಜೊತೆಗೆ 20 ವರ್ಷಗಳ ಕಾಲ ಯಾವುದೇ ಸಿನಿಮಾ ಮಾಡುವ ಹಾಗಿಲ್ಲ. ದೇಶದ ಹೊರಗೆ ಕಾಲಿಡುವಂತಿಲ್ಲ ಮತ್ತು ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ ಎಂದು ನಿರ್ಬಂಧಿಸಲಾಗುತ್ತದೆ. ಮೂರು ತಿಂಗಳ ಜೈಲುವಾಸದ ತರುವಾಯ ಶಿಕ್ಷೆ ಪ್ರಕಟಿಸುವ ಪೂರ್ವದಲ್ಲಿ ಅವನನ್ನು ಗೃಹ ಬಂಧನದಲ್ಲಿ ಇಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಪನಾಹಿ, ಒಬ್ಬ ಕ್ಯಾಮೆರಾಮೆನ್ (ಮೊಜ್ತಾಬ್ ಮಿರ್ತ್ಹಾಸಬ್) ಸಹಾಯದಿಂದ, ಒಂದು ಹ್ಯಾಂಡ್ ಕ್ಯಾಮೆರಾ ಮತ್ತು ಮೊಬೈಲ್ ಮೂಲಕ ತನ್ನ ಮನೆಯಲ್ಲೇ ಖಾಸಗಿಯಾಗಿ ದಾಖಲಿಸಿಕೊಂಡ ವಿಡಿಯೊವನ್ನ ಎಡಿಟ್ ಮಾಡಿ ಒಂದು ಪೆನ್ ಡ್ರೈವ್‌ ಮೂಲಕ ಬರ್ತಡೆ ಕೇಕಿನೊಳಗಿಟ್ಟು 2011ರ ಕಾನ್ ಚಲನಚಿತ್ರೋತ್ಸವಕ್ಕೆ ಗುಪ್ತವಾಗಿ ಕಳಿಸಿಕೊಡುತ್ತಾನೆ! ಕಾನ್‌ನಲ್ಲಿ ‘This Is Not A Film’ ಎಂಬ ಹೆಸರಲ್ಲಿ ವಿಶೇಷ ಪ್ರದರ್ಶನ ಕಂಡ ಈ ಸಿನಿಮಾ ನಂತರ ನ್ಯೂಯಾರ್ಕ್, ವಾರ್ಸಾ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡಿದ್ದು ಮಾತ್ರವಲ್ಲ ಸಿನಿಮಾ ವಿಮರ್ಶಕರಿಂದ ಭಾರೀ ಮನ್ನಣೆ ಪಡೆಯುತ್ತದೆ.

PC: Stanford

‘ದಿಸ್ ಇಸ್ ನಾಟ್ ಎ ಫಿಲ್ಮ್’ ಸಿನಿಮಾದಲ್ಲಿ ಪನಾಹಿ, ʼನನಗೆ ಸಿನಿಮಾ ಮಾಡುವುದು ಅಪರಾಧ ಎಂದು ಹೇಳಲಾಗಿದೆಯೇ ಹೊರತು ಸಿನಿಮಾದ ಚಿತ್ರಕಥೆಯನ್ನು ಓದುವುದು ಅಪರಾಧ ಎಂದು ಹೇಳಿಲ್ಲʼ ಎಂದು ಹೇಳಿ, ಹಿಂದೆ ಪ್ರಭುತ್ವ ಸಿನಿಮಾ ಮಾಡಲು ಅನುಮತಿ ನೀರಾಕರಿಸಿದ ‘ರಿಟರ್ನ್ʼ ಎಂಬ ಚಿತ್ರಕಥೆಯನ್ನು ಓದುವುದಷ್ಟೇ ಅಲ್ಲ ಅದನ್ನು ಸಿನಿಮಾ ಮಾಡಲು ಯಾವ ರೀತಿ ಯೋಚಿಸಿದ್ದೆ ಎಂಬುದನ್ನೆಲ್ಲಾ, ತನ್ನ ಮನೆಯೊಳಗೇ ಆ ಕಥೆಯ ಪರಿಸರವನ್ನು ನಿರ್ಮಿಸಿ ವಿವರಿಸುತ್ತಾ ಹೋಗುತ್ತಾನೆ.

ಹೀಗೆ ವಿವರಿಸುವಾಗ ಒಂದು ಹಂತದಲ್ಲಿ ಉದ್ವೇಗಕ್ಕೆ ಒಳಗಾಗುವ ಪನಾಹಿ, ‘ಹೀಗೆ ಬಾಯಲ್ಲೇ ಎಲ್ಲಾ ಹೇಳುವುದಾದರೆ, ಸಿನಿಮಾ ಮಾಡುವುದಾದರೂ ಏತಕ್ಕೆ?’ ಎಂದು ಕೇಳಿಕೊಳ್ಳುತ್ತಾನೆ. ತನ್ನದೇ ಸಿನಿಮಾದ ಡಿವಿಡಿಗಳನ್ನು ಟಿವಿಯಲ್ಲಿ ಹಾಕಿ ಕೆಲವು ತುಣುಕಗಳನ್ನು ತೋರಿಸಿ ಸಿನಿಮಾ ಹೇಗೆ ಚಿತ್ರೀಕರಣ ಪರಿಸರದಲ್ಲಿ ನಿರ್ದೇಶಕನ ಹಿಡಿತವನ್ನೂ ದಾಟಿ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತದೆ ಎಂದು ವಿವರಿಸುತ್ತಾನೆ.

ಈ ರೀತಿಯ ಸೃಜನಶೀಲ ಕಲಾವಿದನೊಬ್ಬನ ಮೇಲೆ ಪ್ರಭುತ್ವದ ದಬ್ಬಾಳಿಕೆ ಕೇವಲ ಇರಾನಿನಲ್ಲಿ ಅಷ್ಟೇ ಅಲ್ಲ ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ನಡೆದಿರುವಂಥದ್ದೆ. ಪೋಲೆಂಡಿನ ಕಮ್ಯೂನಿಸ್ಟ್ ಸರ್ಕಾರ ಅಲ್ಲಿನ ಉದಾರ ಅಲೋಚನೆಯ ಕಲಾವಿದರ ಮೇಲೆ ನಿರ್ಬಂಧ ಹೇರಿದ್ದು, ತನ್ನ ಪರವಾಗಿ ಕಲೆಯ ಮುಖಾಂತರ ಪ್ರಪಾಗ್ಯಾಂಡ ಮಾಡಲು ಒತ್ತಾಯಿಸಿದ್ದನ್ನು ಅಲ್ಲಿನ ಪ್ರಸಿದ್ಧ ಸಿನಿಮಾ ನಿರ್ದೇಶಕ ಅನ್ಡ್ರೆಝ್ ವಾಜ್ಡ ಬಹಳ ಪರಿಣಾಮಕಾರಿಯಾಗಿ ತನ್ನ ʼಆಫ್ಟರ್ ಇಮೇಜ್ʼ (2016) ಸಿನಿಮಾ ಮುಖಾಂತರ ಪ್ರಸ್ತುತಪಡಿಸುತ್ತಾನೆ.

ಅದೇ ಪೋಲೆಂಡಿನ ಸಿನಿಮಾ ನಿರ್ದೇಶಕ ಕ್ರಿಝ್ಸ್ಟೋಫ್ ಕೀಸ್ಲೊಸ್ಕಿಯ ಹಲವು ಡಾಕ್ಯುಮೆಂಟರಿಗಳಿಗೆ ಅದೇ ಕಮ್ಯೂನಿಸ್ಟ್ ಸರ್ಕಾರ ಕತ್ತರಿ ಹಾಕಿ, ನಿಷೇದಿಸಿದ ಉದಾಹರಣೆಗಳು ಇವೆ. ಸ್ಪೇನ್ ದೇಶ 1938 ರಿಂದ 1945ರವರೆಗೆ ಫ್ರಾನ್ಸಿಸ್ಕೊ ಫ್ರಾಂಕೊ (Francisco Franco) ಎಂಬ ಸರ್ವಾಧಿಕಾರಿಯ ಹಿಡಿತದಲ್ಲಿರುತ್ತದೆ. (ಇವನ ಅಧಿಕಾರವಧಿಯನ್ನ ಫ್ರಾಂಕೋಯಿಸ್ಟ್ ಸ್ಪೇನ್ ಎಂದು ಕರೆಯಲಾಗುತ್ತದೆ) ಅಲ್ಲಿನ ಕಾರ್ಲಾಸ್ ಸೌರ ಒಳಗೊಂಡತೆ ಹಲವಾರು ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಪ್ರಭುತ್ವದ ದಬ್ಬಾಳಿಕೆ ಮತ್ತು ಆ ಕಾರಣವಾಗಿ ಮನುಷ್ಯನಲ್ಲಿ ಉಂಟಾಗುವ ಟ್ರೋಮಗಳನ್ನೆಲ್ಲಾ ಅಲ್ಲಿನ ಸೆನ್ಸಾರ್ ಬೊರ್ಡಿನ ಗಮನಕ್ಕೆ ಬಾರದ ಹಾಗೆ ಬಹಳ ಸಾಂಕೇತಿಕವಾಗಿ, ಅಸಂಗತವಾಗಿ ಕಟ್ಟಿಕೊಡುವ ಕ್ರಮವನ್ನ ಕಂಡುಕೊಂಡರು.

Francisco Franco (PC:Wikipedia)

ಈ ಎಲ್ಲರ ಪ್ರತಿರೋಧಕ್ಕಿಂತ ಪನಾಹಿಯ ಪ್ರತಿರೋಧ ಒಂದು ಹೆಜ್ಜೆ ಮುಂದಿನದು. ಪ್ರಭುತ್ವ ಪನಾಹಿಯನ್ನು ಸಿನಿಮಾ ಮಾಡಲು ನಿರ್ಬಂಧಿಸಿದಾಗಲೆಲ್ಲಾ ತನ್ನ ಅಭಿವ್ಯಕ್ತಿ ಪರವಾಗಿ ಯಾವುದೇ ಉತ್ಪ್ರೇಕ್ಷೆ ಅಥವಾ ಹೆಚ್ಚುಗಾರಿಕೆ ಇಲ್ಲದೆ ತಣ್ಣಗೆ ‘ಇದು ಸಹಜ ನಡೆವಳಿಕೆಯೆನೋ’ ಅನ್ನುವ ರೀತಿ ತನ್ನ ಬಂಡಾಯವನ್ನು ದಾಖಲಿಸಿದವನು. ಪ್ರಭುತ್ವ, ಯಾವ ಸಂಗತಿಗಳ ಆಧಾರದಲ್ಲಿ ಇವನ ಅಭಿವ್ಯಕ್ತಿಯನ್ನು ತುಳಿಯಲು ಪ್ರಯತ್ನಿಸಿತ್ತೋ ಅದೇ ಸಂಗತಿಗಳನ್ನು ಇನ್ನೂ ಪ್ರಖರವಾಗಿ ತನ್ನ ಸಿನಿಮಾಗಳಲ್ಲಿ ಅಭಿವ್ಯಕ್ತಿಸಿದ, ಬಂಡುಕೋರ ಪನಾಹಿ.

ಅಮೆರಿಕಾದ The National Board of Review of Motion Pictures ಪನಾಹಿಯ ‘ದ ಸರ್ಕಲ್’ ಸಿನಿಮಾಗೆ ‘Freedom of Expression Award’ (ಅಭಿವ್ಯಕ್ತಿ ಸ್ವಾತಂತ್ಯ್ರ ಪ್ರಶಸ್ತಿ) ಮಾನ್ಯ ಮಾಡಿದ ಸಂದರ್ಭದಲ್ಲಿ, ಆ ಕಾರ್ಯಕ್ರಮಕ್ಕೆ ಭಾಗವಹಿಸಲು ನ್ಯೂಯಾರ್ಕ್ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿನ ಸಿಬಂದ್ದಿಗಳು ಪನಾಹಿಯ ರಾಷ್ಟ್ರೀಯತೆಯ ಕಾರಣವಾಗಿ ಅವನ ಬೆರಳಿನ ಮುದ್ರೆ ಮತ್ತು ಭಾವಚಿತ್ರವನ್ನು ಕೇಳುತ್ತಾರೆ. ಕೊಡಲು ನಿರಾಕರಿಸಿದಾಗ ಅವನ ಕೈ ಕಾಲುಗಳಿಗೆ ಕೋಳ ತೊಡಿಸಿ ಯಾರನ್ನೂ ಸಂಪರ್ಕಿಸಲು ಅವಕಾಶ ಕೊಡದೆ ಅಪಮಾನಿಸುತ್ತಾರೆ.

ಈ ಘಟನೆಯನ್ನು ವಿರೋಧಿಸಿ ಅಮೆರಿಕಾದ Board of Review of Motion Pictures ಗೆ ಪನಾಹಿ ನೀಡಿದ ಪ್ರತಿಭಟನಾ ಹೇಳಿಕೆ ಉಲ್ಲೇಖನೀಯ: ‘ನ್ಯೂಯಾರ್ಕ್ ನಗರವನ್ನು ವಿಮಾನದ ಕಿಟಕಿ ಮುಖಾಂತರ ನೋಡುತ್ತಿದ್ದೇನೆ. ಎರಡು ದಿನಗಳ ಮಟ್ಟಿಗೆ ಈ ನಗರದಲ್ಲಿ ನನ್ನ ಸಿನಿಮಾ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು ಎಂದು ಕೇಳಿದ್ದೇನೆ. ಅಲ್ಲಿನ ಪ್ರೇಕ್ಷಕರು ನನ್ನ ಸಿನಿಮಾ ನೋಡುವ ಸಂದರ್ಭದಲ್ಲಿಯೇ ಆ ಸಿನಿಮಾದ ನಿರ್ದೇಶಕ ಸರಪಳಿಗಳಿಂದ ಬಂಧಿತನಾಗಿರುವುದನ್ನು ಗ್ರಹಿಸಬಹುದಾದರೆ, ಅವರು ನನ್ನ ಸಿನಿಮಾವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ’.

ಅಮೇರಿಕಾದ ಅಮಾನವೀಯ ಕ್ರೌರ್ಯದ ನಡೆವಳಿಕೆಯನ್ನ ಪನಾಹಿಯ ಈ ಪತ್ರ ಬೆತ್ತಲು ಮಾಡಿಬಿಟ್ಟಿತು. ಸಿನಿಮಾ ಮಾಡುವುದರಿಂದ ನಿಷೇಧಕ್ಕೊಳಪಟ್ಟ ಮೇಲೆ ಪನಾಹಿ ಕಾನೂನುಬಾಹಿರವಾಗಿ ಮೂರು ಸಿನಿಮಾಗಳನ್ನು ಮಾಡುತ್ತಾನೆ, ದಿಸ್ ಈಸ್ ನಾಟ್ ಎ ಫಿಲ್ಮ್ (2011), ಕ್ಲೋಸ್ಡ್ ಕರ್ಟನ್ (2013) ಮತ್ತು ಟ್ಯಾಕ್ಸಿ ಟೆಹರಾನ್(2015). ಈ ಮೂರೂ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರು ಮಾಡುತ್ತವೆ. ಟ್ಯಾಕ್ಸಿ ಸಿನಿಮಾಗೆ 2015ರ ಪ್ರತಿಷ್ಟಿತ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನ ಗೋಲ್ಡನ್ ಬೇರ್ ಅವಾರ್ಡ್ ಕೂಡ ಲಭಿಸುತ್ತದೆ.

ಸ್ವತ: ಫನಾಹಿ ಟ್ಯಾಕ್ಸಿ ಚಾಲಕನಾಗಿ ಇಡೀ ಟೆಹರಾನ್ ನಗರದಲ್ಲಿ ವಿವಿಧ ಜನಸಮುದಾಯದೊಂದಿಗೆ ಸಂಭಾಷಿಸುವ ವಸ್ತುವನ್ನು ಒಳಗೊಂಡ ಈ ಸಿನಿಮಾ ಮುಖಾಂತರ ಪನಾಹಿ ಏನು ಹೇಳುತ್ತಿದ್ದಾನೆ ಎಂಬುದನ್ನು ನೆನೆಸಿಕೊಂಡರೆ ಪುಳಕವಾಗುತ್ತದೆ. ಮನೆಯಲ್ಲಿ ಬಂಧಿಸಿದರೆ ಮನೆಯಲ್ಲೆ ಸಿನಿಮಾ ಮಾಡಬಲ್ಲ, ಒಂದು ಪಕ್ಷ ಕಾರಲ್ಲೇ ಬಂಧಿಸಿದರೂ ಅಲ್ಲೂ ಕೂಡ ಸಿನಿಮಾ ಮಾಡಬಲ್ಲ, ಸಿನಿಮಾ ಮಾಡುವುದು ತನ್ನ ಅಭಿವ್ಯಕ್ತಿ ಸ್ವಾಂತಂತ್ರ‍್ಯ ಇದಕ್ಕೆ ಧಕ್ಕೆ ಆಗುವುದಾದರೆ ಯಾವ ಹಂತದವರೆಗೂ ಪ್ರತಿಭಟಿಸಬಲ್ಲೆ ಎಂಬ ಮನೊಧರ್ಮದ ವ್ಯಕ್ತಿ ಪನಾಹಿ.

ಯದುನಂದನ್ ಕೀಲಾರ

(ಲೇಖಕರಿಗೆ ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.)


ಓದಿ: ಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಪರೂಪದ ಬರಹ. ತುಂಬಾ ಇಷ್ಟವಾಯಿತು. ಪನಾಹಿ ಬಗ್ಗೆ ತಿಳಿಸಿದ್ದಕ್ಕೆ ಯದುನಂದನ್ ಸರ್ ಗೆ ಮತ್ತು ನಾನೂ ಗೌರಿ ಬಳಗಕ್ಕೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...