Homeಅಂಕಣಗಳುಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

ಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

- Advertisement -
- Advertisement -

ನಮ್ಮದೇ ಭಾಷೆ,ಪರಿಸರದ ಸಿನಿಮಾಗಳು ಹೆಚ್ಚಿನ ಸಮಯ ನಮಗೆ ಅಪರಿಚಿತವಾಗಿ ಬಿಡುತ್ತವೆ. ಸಾಮಾನ್ಯ ಮನುಷ್ಯನ ದಿನ ನಿತ್ಯದ ಬದುಕು, ಆ ಬದುಕಿನ‌ ಮೇಲಿರುವ  ಪ್ರಭಾವಗಳು, ಎದುರಾಗುವ ಸವಾಲುಗಳು ಮತ್ತು ಇವುಗಳ ನಡುವೆ ಇರುವ ಸಂಕೀರ್ಣ ಹೆಣಿಗೆಯನ್ನ ನಮ್ಮ ಪರಿಸರದ ಸಿನಿಮಾಗಳು ಪ್ರತಿಬಿಂಬಿಸಿದ್ದು ಅಷ್ಟಕ್ಕಷ್ಟೆ. ಆದರೆ ಭೌಗೋಳಿಕವಾಗಿ ನಮ್ಮಿಂದ ಬಹಳ ದೂರ ಇರುವ ಮತ್ತು ಸಾಂಸ್ಕೃತಿಕ,ಧಾರ್ಮಿಕ,ರಾಜಕೀಯವಾಗಿ ಭಿನ್ನ ಪ್ರಭಾವವಿರುವ ಪ್ರದೇಶದ – ಭಾಷೆಯ ಸಿನಿಮಾಗಳು ನಮ್ಮದು ಮಾತ್ರವೇ ಅಲ್ಲ ನನ್ನನ್ನೇ ಪ್ರತಿಬಿಂಬಿಸುತ್ತಿದೆಯೇನೊ ಅನ್ನಿಸುವಷ್ಟು ಹತ್ತಿರವಾಗಿ ಬಿಡುತ್ತವೆ.

ಪೋಲೆಂಡಿನ   ಕ್ರಿಝ್ಟೊಫ್ ಕಿಸ್ಲೋಸ್ಕಿ (Krzysztof Kieślowski) ಈ ತರಹದ ಸಿನಿಮಾ ನಿರ್ಮಾತೃಗಳಲ್ಲಿ ಒಬ್ಬ. ಕಿಸ್ಲೋಸ್ಕಿ ಸಿನಿಮಾಗಳ ಮೂಲ ಸೆಲೆ ಯಾವುದು, ಅವನು ತನ್ನ ಸಿನಿಮಾಗಳ ಮೂಲಕ ಏನನ್ನು ಶೋಧಿಸುತ್ತಿದ್ದಾನೆ ಅಥವಾ  ಅಭಿವ್ಯಕ್ತಿಸುತ್ತಿದ್ದಾನೆ ಎಂದು ಯೋಚಿಸಿದರೆ, ಅವನೇ ಒಂದು ಕಡೆ ಹೇಳಿದ ಈ ಮಾತು  ಸ್ಪಷ್ಟಪಡಿಸುತ್ತವೆ. “Different people in different parts of the world can be thinking the same thoughts at the same time. It’s an obsession of mine. That Different people in different places are thinking the same thing but for different reasons. I try to makes films which connect people”

ಕಿಸ್ಲೋಸ್ಕಿ ಬದುಕಿನ ಕಾಲಾವಧಿಯಲ್ಲಿ, ಮೂರು ರೀತಿಯ ಸಂಗತಿಗಳು ಪೋಲೆಂಡ್ ಜನ ಸಮುದಾಯದ  ಬದುಕು ಮತ್ತು ಅಲೋಚನೆಗಳ ಮೇಲೆ ಪ್ರಭಾವ ಬೀರಿವೆ. ಒಂದು: ಕಮ್ಯುನಿಸ್ಟ್ ಸರ್ಕಾರದ ನಿರಂಕುಶ ಆಡಳಿತ, ಎರಡು: ಕ್ರಿಶ್ಚಿಯನ್ ಧರ್ಮದ ನೈತಿಕ ಬೋಧನೆ ಮತ್ತು ಮೂರು: ಫ್ರೆಂಚ್ ಕ್ರಾಂತಿಕಾರಕ ಘೋಷಣೆಗಳು(ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ).   ಸಾಮಾನ್ಯ ಪೋಲಿಷ್ ಮನುಷ್ಯನ ದಿನನಿತ್ಯದ ಬದುಕಿನಲ್ಲಿ ಈ ಮೂರು ಸಂಗತಿಗಳು  ಹೇಗೆ ಮುಖಾಮುಖಿಯಾಗುತ್ತವೆ ಮತ್ತು ಅವುಗಳಿಗೆ ಸಾಮಾನ್ಯ ಜನರ ಪ್ರತಿಸ್ಪಂದನೆ ಏನು ಎಂಬುದನ್ನ ಕಾಲಾನುಕ್ರಮವಾಗಿಯೇ ಕಿಸ್ಲೋಸ್ಕಿ ತನ್ನ ಸಿನಿಮಾಗಳಲ್ಲಿ  ಕಟ್ಟಿಕೊಡುತ್ತಾನೆ.

‘ವಾಸ್ತವ ಅನ್ನುವುದು ಕಲ್ಪನೆಗಿಂತ ಹೆಚ್ಚು ಅಪರಿಚಿತ ಮತ್ತು ನಾಟಕೀಯವಾದದ್ದು’ ಎಂದು ನಂಬಿದ್ದ ಕಿಸ್ಲೋಸ್ಕಿ 1968ರಲ್ಲಿ ಲಾಡ್ಝ್ ನ ಸಿನಿಮಾ ಶಾಲೆಯಲ್ಲಿ ಕಲಿಕೆ ಮುಗಿಸಿದ ನಂತರ ಮುಂದಿನ ಹತ್ತು ವರ್ಷಗಳಲ್ಲಿ ನಿರ್ಮಿಸಿದ್ದು ಮಾತ್ರ ಡಾಕ್ಯುಮೆಂಟರಿಗಳೇ. ಲೊಡ್ಝ್ ನಗರ ಕುರಿತ ಕೇವಲ 17 ನಿಮಿಷಗಳ 1968ರ  City of Lodz ಅವುಗಳಲ್ಲಿ ಒಂದು. ಯದ್ಧಾನಂತರ ಲೋಡ್ಝ್ ಜನರ ಕಷ್ಟಕರ ಜೀವನವನ್ನು ಪರಿಚಯಿಸುವ ಸಾಕ್ಷ್ಯಚಿತ್ರ. ಯುದ್ಧದ ಸಂದರ್ಭದಲ್ಲಿ ಕಣ್ಣು ಕಳೆದುಕೊಂಡ ಸೈನಿಕರ ಸಂದರ್ಶನ ಕುರಿತದ್ದು, ಅವನ 1970ರ ‘I Was a Soldier’ ಸಾಕ್ಷ್ಯ ಚಿತ್ರ. ಇದರಲ್ಲಿ ಕೀಸ್ಲೋಸ್ಕಿ ಕಣ್ಣು ಕಳೆದುಕೊಂಡ ಸೈನಿಕರಿಗೆ ತಮ್ಮ ಕನಸುಗಳನ್ನು ವಿವರಿಸಲು ಕೇಳುತ್ತಾನೆ. ಕಮ್ಯೂನಿಸ್ಟ್ ಸರ್ಕಾರದ ಹಿಡಿತದಲ್ಲಿದ್ದ ಅಂದಿನ ಪೋಲಿಷ್  ಸೆನ್ಸಾರ್ ಮಂಡಳಿ, ಸಿನಿಮಾ ನಿರ್ಮಾತೃಗಳ ಮೇಲೆ ಹಾಗು ಮಾಧ್ಯಮ ಮತ್ತು ಪ್ರೇಕ್ಷಕರ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತಿತ್ತು. ಕಿಸ್ಲೋಸ್ಕಿಯ ‘Workers’71: Nothing About Us Without Us’ (1971) ಸಾಕ್ಷ್ಯಚಿತ್ರದಲ್ಲಿ ಪೋಲೆಂಡಿನ ಕಾರ್ಮಿಕರನ್ನು  ಸಂದರ್ಶಿಸಿರುವ ದೃಶ್ಯಾವಳಿಗಳಿವೆ. ತಮ್ಮ‌ ಕುಸಿದ  ಜೀವನ ಮಟ್ಟ, ಸಾಕಾಗದ ಸಂಬಳ ಮತ್ತು ಪ್ರಭುತ್ವದ ಮೇಲೆ ಅವರಿಗಿರುವ ಅಸಮಾಧಾನವನ್ನೆಲ್ಲಾ ಕಾರ್ಮಿಕರು ಹೊರಹಾಕುತ್ತಾರೆ. ವಿಷಾದವೆಂದರೆ ,  ಸೆನ್ಸಾರ್ ಬೋರ್ಡ್ ಇದಕ್ಕೆ ಸಾಕಷ್ಟು ಕತ್ತರಿ ಹಾಕಲು ತಿಳಿಸುತ್ತದೆ. ಕೊನೆಗೂ ಈ ಸಿನಿಮಾಗೆ ಬಿಡುಗಡೆ ಯೋಗ ಸಿಗುವುದಿಲ್ಲ.

ತನ್ನ ಸಿನಿಮಾ ವೃತ್ತಿಯ ಪ್ರಾರಂಭದ ಹಲವು ವರ್ಷ ಡಾಕ್ಯುಮೆಂಟರಿ ಫಿಲಂಗಳನ್ನು ಮಾತ್ರವೇ ನಿರ್ಮಿಸಿದ ಕೀಸ್ಲೋಸ್ಕಿ, ಮೊದಲ ಡ್ರಮ್ಯಾಟಿಕ್ ಫಿಲಂ ಮಾಡಿದ್ದು 1973ರಲ್ಲಿ. ಅದು ‘Pedestrian Subway’ ಎಂಬ ಟೆಲಿಫಿಲಂ ಮುಖಾಂತರ. ಸುದೀರ್ಘ ಹಲವು ವರ್ಷಗಳ ಡಾಕ್ಯುಮೆಂಟರಿ ಫಿಲಂ ನಿರ್ಮಾಣದ ಅನುಭವದ ಮೂಲಕ ತನ್ನ ಕಥಾ ಚಿತ್ರಗಳ ದೃಶ್ಯ ಕಲಾತ್ಮಕತೆಯಲ್ಲಿ ಒಂದು ವಿಶಿಷ್ಟ ಸಾಧ್ಯತೆಯನ್ನ ಕಂಡುಕೊಳ್ಳಲು ಕೀಸ್ಲೋಸ್ಕಿಗೆ ಸಾಧ್ಯವಾಯಿತೇನೊ ಅನಿಸುತ್ತದೆ. ಕಿಸ್ಲೋಸ್ಕಿಯ ಫೀಚರ್ ಫಿಲಂಗಳು, ಸಾಮಾನ್ಯ ಮನುಷ್ಯನ ಆಳದಲ್ಲಿರುವ ಬದುಕಿನ ಕಲ್ಪನೆ, ಕನಸು, ಅನುಭೂತಿಗಳನ್ನು ನಿಧಾನಗತಿಯ ಕ್ಯಾಮೆರಾ ಚಲನೆಯ ಮೂಲಕ, ಪ್ರಾಥಮಿಕವಾದ ಸಣ್ಣ ಸಣ್ಣ  ಸಂಗತಿಗಳನ್ನೂ  ವಿವರವಾಗಿ ಕಟ್ಟಿಕೊಡುತ್ತವೆ. ಆ ದೃಶ್ಯ ಕಟ್ಟುಗಳು ಸಾಂಕೇತಿಕ ಪ್ರತಿಮೆಗಳಾಗಿ ಪ್ರೇಕ್ಷಕನ ಆಳವನ್ನು ಮುಟ್ಟುವುದಷ್ಟೇ ಅಲ್ಲ, ಅವನನ್ನು ಹೊಸ ಬಗೆಯ ಅಲೋಚನೆಗೆ ಪ್ರೇರೇಪಿಸುತ್ತವೆ.

ಬಹುಶಃ ಕೀಸ್ಲೋಸ್ಕಿ ಪೋಲೆಂಡ್ ಹೊರಗೆ ಪರಿಚಯವಾಗಿದ್ದು ಅವನ ‘Camera Buff’ (1979) ಸಿನಿಮಾ ಮೂಲಕ. ಮಾಸ್ಕೊ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇದಕ್ಕೆ ʼಗ್ರಾಂಡ್ ಪ್ರಿಕ್ಸ್ʼ ಮನ್ನಣೆ ಕೂಡ ಸಿಕ್ಕಿತು. ಸಾಮಾಜಿಕ- ಆರ್ಥಿಕ ಸಂಗತಿಗಳನ್ನು ಪ್ರತಿಫಲಿಸುವ  ಪೋಲೆಂಡಿನ  ಹವ್ಯಾಸಿ ಸಿನಿಮಾ‌ ಸಂಸ್ಕೃತಿಯ ಪ್ರಾತಿನಿಧಿಕ ಸಿನಿಮಾವಾಗಿ Camara Buffನ್ನು ಗುರುತಿಸಲಾಗುತ್ತದೆ. ʼಕಾರ್ಮಿಕನಾದ ಫಿಲಿಪ್ ಒಂದು 8mm ಕ್ಯಾಮೆರಾವನ್ನು ಖರೀದಿಸುತ್ತಾನೆ. ಆಗತಾನೆ ಜನಿಸಿದ ತನ್ನ ಮಗಳ ಫೋಟೋಗಳನ್ನು ತೆಗೆಯುವ ಫಿಲಿಪ್ ನನ್ನು ಅವನ ಕಂಪನಿ ನಿರ್ದೇಶಕ ಕಾರ್ಖಾನೆ ಪರವಾಗಿ ಪ್ರೊಪಾಗ್ಯಾಂಡ ( ಪ್ರಚಾರ) ಸಿನಿಮಾ ಮಾಡಲು ನೇಮಿಸಿಕೊಳ್ಳುತ್ತಾನೆ. ಈ ಮುಖಾಂತರ ಫಿಲಿಪ್ ಗೆ ಸಿನಿಮಾ ನಿರ್ಮಾಣದ ಹಲವು ತಾಂತ್ರಿಕ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ನಂತರದಲ್ಲಿ ಇವನು ಒಂದು ಫಿಲಂ ಕ್ಲಬ್ ಸಂಘಟಿಸೋದು ಮಾತ್ರವೇ ಅಲ್ಲ ತನ್ನ ಕೆಲಸವನ್ನ ಸ್ಥಳೀಯ ಅಮೇಚ್ಯೂರ್ ಫಿಲಂ ಫೆಸ್ಟಿವಲ್ಗೆ ಕಳುಹಿಸಿಕೊಡುತ್ತಾನೆ.

1980ರಲ್ಲಿ ಪೋಲೆಂಡ್ ನಲ್ಲಿ, ಕೆಲವು ನಾಗರಿಕ ಹಕ್ಕುಗಳಿಗೆ ಅವಕಾಶ ಮಾನ್ಯ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಬಂದ ಸಿನಿಮಾ ‘Blind Chance’ (1981). ʼವೈದ್ಯ ವಿದ್ಯಾರ್ಥಿಯಾದ ವಿಟೆಕ್ ತನ್ನ ತಂದೆಯ ಸಾವಿನ ಕಾರಣವಾಗಿ ವಾರ್ಸಾದಿಂದ ಲೋಡ್ಝ್ಗೆ  ರೈಲು ಹಿಡಿಯುವ ಮತ್ತು ಅದು ತಪ್ಪುವುದನ್ನು ನೆಪವಾಗಿಟ್ಟುಕೊಂಡು ಅವನ ಬದುಕಿನ ಮೂರು ಸಾಧ್ಯತೆಗಳನ್ನು ಈ ಚಿತ್ರ ಚರ್ಚಿಸುತ್ತದೆ.ʼ ಕಿಸ್ಲೋಸ್ಕಿ ಈ ಸಿನಿಮಾ ದೃಶ್ಯ ಕಲಾತ್ಮಕತೆಯಲ್ಲಿ  ಜಿಗಿತವನ್ನು ಸಾಧಿಸಿದ್ದಾನೆ. 1981ರ ಕೊನೆಯಲ್ಲಿ ಪೋಲೆಂಡಿನ ಕಮ್ಯುನಿಸ್ಟ್ ಅಥಾರಿಟಿ, ಮಾರ್ಷಿಯಲ್ ಲಾ ಘೋಷಣೆ ಮಾಡುತ್ತದೆ. ಈ ಅವಧಿಯಲ್ಲಿ ಹಲವಾರು ಸಿನಿಮಾ ನಿರ್ಮಾತೃಗಳು ಮತ್ತು ಕಲಾವಿದರಗೆ ಕಮ್ಯುನಿಸ್ಟ್ ಪಕ್ಷಕ್ಕೆ ಬದ್ಧರಾಗಿರಬೇಕೆಂದು ನೋಟಿಸ್ ಜಾರಿಗೊಳಿಸಲಾಗುತ್ತದೆ. ಪ್ರಭುತ್ವ ಪ್ರಾಯೋಜಿತ ಸರ್ಕಾರಿ ವಾಹಿನಿಯ ಸಿನಿಮಾಗಳನ್ನು ಹೊರತುಪಡಿಸಿ ಬೇರೆ ಎಲ್ಲ ರೀತಿಯ ಸಿನಿಮಾಗಳನ್ನು ನಿರ್ಬಂಧಿಸಲಾಗುತ್ತದೆ. ಕಿಸ್ಲೋಸ್ಕಿ ಜೀವನೋಪಾಯಕ್ಕಾಗಿ ಟ್ಯಾಕ್ಸಿ ಡ್ರೈವರ್ ಆಗಲು ಪ್ರಯತ್ನಿಸುತ್ತಾನೆ ಆದರೆ ಸಾಧ್ಯವಾಗುವುದಿಲ್ಲ. ಇದೇ ಸಮಯದಲ್ಲಿ ಕಿಸ್ಲೋಸ್ಕಿಯ ತಾಯಿ ಕಾರು ಅಪಘಾತದಲ್ಲಿ ಮರಣ ಹೊಂದುತ್ತಾರೆ. ಸುಮಾರು ನಾಲ್ಕು ವರ್ಷಗಳ ತರುವಾಯ ಅವನ ʼNo End’ (1985) ಸಿನಿಮಾ ತೆರೆಕಾಣುತ್ತದೆ. ʼಸಾವುʼ  ಈ ಸಿನಿಮಾದ ಪ್ರಧಾನ ವಿಷಯ.

ಜಾಗತಿಕ ಸಿನಿಮಾ ಕ್ಷೇತ್ರ ಕಿಸ್ಲೋಸ್ಕಿ ಕಡೆ ಗಮನಹರಿಸಿದ್ದು ಪೊಲೆಂಡ್ ಸರ್ಕಾರಿ ಟಿವಿ ವಾಹಿನಿಗೆ ಅವನು ಮಾಡಿದ ಒಂದು ಗಂಟೆ ಅವಧಿಯ ಹತ್ತು ಕಿರುಚಿತ್ರಗಳಾದ ʼThe Dekalog’ (1988) ಹೊರಬಂದ ಮೇಲೆ. ಇತರೆ ಪಶ್ಚಿಮ ದೇಶಗಳಷ್ಟೇ ಅಲ್ಲ ಹಾಲಿವುಡ್ ಸಿನಿಮಾ ಜಗತ್ತು ಇವುಗಳ ಕುರಿತು ಸಾಕಷ್ಟು ಪ್ರಶಂಸೆ ಮತ್ತು ಚರ್ಚೆಯನ್ನು ಮಾಡಿವೆ. ಇವತ್ತಿಗೂ ಈ ಕಿರು ಚಿತ್ರಗಳ ಮೇಲೆ ಸಿನಿಮಾ ತಜ್ಞರು ತಮ್ಮ ಅಭಿಪ್ರಾಯ ಮತ್ತು ವಿಮರ್ಶೆಗಳನ್ನು ದಾಖಲಿಸುತ್ತಿದ್ದಾರೆ. ಸಿನಿಮಾ ವಿದ್ಯಾರ್ಥಿಗಳಿಗೆ ಇವು ಕಲಿಕೆಯ ಸಾಮಾಗ್ರಿಗಳಾಗಿವೆ. ನೈತಿಕತೆಯನ್ನು ಬೋಧಿಸುವ ಕ್ರಿಶ್ಚಿಯನ್ ಧರ್ಮದ ಹತ್ತು ಆದರ್ಶಗಳನ್ನು (Ten Commandments) ಆಧಾರವಾಗಿಟ್ಟುಕೊಂಡು, ನಿರ್ಮಾಣಗೊಂಡ ಈ ಹತ್ತು ಚಿತ್ರಗಳು ʼಧರ್ಮ ಮತ್ತು ಮನುಷ್ಯನ ದಿನ ನಿತ್ಯದ ಬದುಕುʼ ಇವುಗಳನ್ನು ಎದುರುಬದುರಾಗಿಟ್ಟು ಚರ್ಚಿಸುತ್ತವೆ. ಒಂದೇ ವಸತಿ ಸಂಕೀರ್ಣದಲ್ಲಿ ಬದುಕುತ್ತಿರುವ ಹತ್ತು ಭಿನ್ನ ಕುಟುಂಬಗಳ ಖಾಸಗಿ ಚಿತ್ರಣವನ್ನು,  ಬದುಕಿನ ವಾಸ್ತವ ಮತ್ತು ಧರ್ಮದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ,  ಕಿಸ್ಲೋಸ್ಕಿ ಸಾಮಾನ್ಯ ಗ್ರಹಿಕೆಗೆ ನಿಲುಕದ ಅಲೋಚನೆಗಳನ್ನು ಸಂಕೇತಗಳ ಮೂಲಕ ಹೆಚ್ಚು ಆಕರ್ಷಕವಲ್ಲದ ದೃಶ್ಯಗಳಲ್ಲಿ ಕಟ್ಟಿಕೊಡುತ್ತಾನೆ. ಈ ಸಿನಿಮಾಗಳಲ್ಲಿ ಪ್ರೀತಿ ಮತ್ತು ವೇದನೆ ಇವೆರಡರ ಆಳವಾದ ಅಭಿವ್ಯಕ್ತಿ ಮತ್ತು ಭಾವನೆಗಳ ತೀವ್ರತೆ ಅವಿಸ್ಮರಣೀಯವಾದಂತದ್ದು. ಈ ಹತ್ತು ಸಿನಿಮಾಗಳಲ್ಲಿನ ದೃಶ್ಯ ಸಂಯೋಜನೆಯಲ್ಲಿ ಯಾವ ಭಿನ್ನತೆಯೂ ಕಾಣಿಸದಷ್ಟು ಒಂದೇ ಹರಹಿನಲ್ಲಿ ತುಂಬಾ ಆಪ್ತವಾಗಿ ಕಟ್ಟಲಾಗಿದೆ ಅನಿಸಿದರೂ ಈ ಸಿನಿಮಾಗಳಿಗೆ ಒಂಬತ್ತು ಬೇರೆ ಬೇರೆ ಸಿನಿಮಾಟೋಗ್ರಫರ್ ಗಳನ್ನು ಕೀಸ್ಲೋಸ್ಕಿ ಆಯ್ಕೆ ಮಾಡಿಕೊಂಡಿದ್ದಾನೆ. ಅಮೆರಿಕಾದ ಹೇಸರಾಂತ ಸಿನಿಮಾ ನಿರ್ದೇಶಕ ʼಸ್ಟ್ಯಾನ್ಲಿ ಕ್ಯೂಬ್ರಿಕ್ʼ ʼThe Dekalog’ ನೋಡಿ ಕಿಸ್ಲೋಸ್ಕಿ ಮತ್ತು ಚಿತ್ರಕತೆ ಬರೆದ Piesiewicz ಕುರಿತು ಹೇಳಿದ ಮಾತು ʼThey have the very ability to dramatize their ideas rather than just talking about them. By making their points through the dramatic action of the story they gain the added power of allowing the audience the audience discover what’s really going on’.

ಕಿಸ್ಲೋಸ್ಕಿ ಸಿನಿಮಾ ವೃತ್ತಿಯ ಉತ್ತುಂಗ ಅಥವಾ ಮೇರು ಕೃತಿಗಳೆಂದೇ ಕರೆಯಬಹುದಾದ ಅವನ ‘Three Colours Trilogy’ (1993-1994). ಫ್ರೆಂಚ್ ಕ್ರಾಂತಿಯ ಉದ್ಘೋಷಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳನ್ನು ಪ್ರತಿನಿಧಿಸುವ ಮೂರು ಬಣ್ಣಗಳಾದ Blue, white & Red ಹೆಸರಿನ ಈ ಸಿನಿಮಾಗಳು. ಕಿಸ್ಲೋಸ್ಕಿ ಈ ಉದಾರ ತತ್ವಗಳು ಸಾಮಾನ್ಯನ ದಿನ ನಿತ್ಯದ ಜೀವನದ ಖಾಸಗಿ ಸಂಗತಿಗಳ ಎದುರಿಗಿಟ್ಟು ಚರ್ಚಿಸುವ ಈ ಚಿತ್ರಗಳನ್ನು ಯುರೋಪಿನ ಮೂರು ಬೇರೆ ಬೇರೆ ದೇಶಗಳ ಹಿನ್ನೆಲೆಯಲ್ಲಿ ಚಿತ್ರಸುತ್ತಾನೆ. Blue ಸಿನಿಮಾಮವನ್ನು ಪ್ರಾನ್ಸಿನಲ್ಲಿ, white ಸಿನಿಮಾವನ್ನ ಪೋಲೆಂಡಿನಲ್ಲಿ  ಮತ್ತು Red ಸಿನಿಮಾವನ್ನ ಸ್ವಿಜರ್ಲೆಂಡಿನ ಹಿನ್ನಲೆಯಲ್ಲಿ ಕಟ್ಟಲಾಗಿದೆ.  ಕೇವಲ ಒಂದೂವರೆ ವರ್ಷದಲ್ಲಿ ತಯಾರಾದ ಈ ಸಿನಿಮಾಗಳಿಗಾಗಿ ಕೀಸ್ಲೋಸ್ಕಿ ಅಹರ್ನಿಶಿ ದುಡಿದಿದ್ದಾನೆ. Blue ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೇ white ಸಿನಿಮಾದ ಚಿತ್ರಕಥೆ ಸಿದ್ಧವಾಗುತ್ತಿರುತ್ತದೆ. White ಸಿನಿಮಾ ಚಿತ್ರಿಕರಣವಾಗುತ್ತಿದ್ದ ಸಂದರ್ಭದಲ್ಲೇ Red ಸಿನಿಮಾದ ಚಿತ್ರಕಥೆ ಸಿದ್ಧವಾಗುತ್ತಿರುತ್ತದೆ. ಈ ಮೂರು ಸಿನಿಮಾಗಳಿಗೆ ವ್ಯಯಿಸಿದ ದೈಹಿಕ ಶ್ರಮ, ಅಲೋಚನೆಗಳ ಒತ್ತಡ 1994ರಲ್ಲಿ Red ಸಿನಿಮಾ ಬಿಡುಗಡೆ ನಂತರ ಕೀಸ್ಲೋಸ್ಕಿ ನಿವೃತ್ತಿಯನ್ನು ಘೋಷಿಸಿಕೊಳ್ಳುತ್ತಾನೆ. ಇದಾದ ಎರಡು ವರ್ಷದಲ್ಲೇ ಅಂದರೆ 1996ರಲ್ಲಿ ತನ್ನ 54ನೇ ವಯಸ್ಸಿಗೆ ಹೃದಯಘಾತದಿಂದ ಮರಣ ಹೊಂದುತ್ತಾನೆ.

Blue (1993): ಫ್ರಾನ್ಸಿನ  ಪ್ರಸಿದ್ಧ ಸಂಗೀತ ಸಂಯೋಜಕನ ಪತ್ನಿ  ʼಜ್ಯೂಲಿʼ ತನ್ನ ಗಂಡ ಮತ್ತು ಐದು ವರ್ಷದ ಮಗಳ ಜೊತೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಅಪಘಾತ ಸಂಭವಿಸಿ ಗಂಡ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಈ ಘಟನೆ ʼಜ್ಯೂಲಿʼಯನ್ನ ಅಗಾಧವಾಗಿ ಘಾಸಿಗೊಳಿಸುತ್ತದೆ. ಪ್ರೀತಿ ಕೂಡ ಅಸಾಧ್ಯ ನೋವು ಉಂಟು ಮಾಡುತ್ತದೆ ಎಂದು ಈ ಎಲ್ಲಾ ನೆನಪುಗಳಿಂದ ಮತ್ತು ಬಂಧನಗಳಿಂದ ಸ್ವಾತಂತ್ರ್ಯ ಪಡೆಯಲು ಬಯಸಿ ತನ್ನ ಮನೆ ಆಸ್ತಿ ಎಲ್ಲವನ್ನು ಮತ್ತೊಬ್ಬರ ಹೆಸರಿಗೆ ವರ್ಗಾಯಿಸಿ, ಜ್ಯೂಲಿ ಅಜ್ಞಾತ ಸ್ಥಳಕ್ಕೆ ಅಂದರೆ ತನ್ನನ್ನೂ ಯಾರು ಗುರುತಿಸಲು ಸಾಧ್ಯವಾಗದ ಸ್ಥಳಕ್ಕೆ ತೆರಳುತ್ತಾಳೆ. ಜ್ಯೂಲಿ ಪ್ರಜ್ಞಾಪೂರ್ವಕವಾಗಿ ಎಷ್ಟೇ ಶ್ರಮವಹಿಸಿದರೂ, ನೆನಪು, ಪ್ರೀತಿ, ಮನುಷ್ಯ ಸಂಬಂಧ ಇವ್ಯಾವುಗಳಿಂದಲೂ ಹೊರಬರಲು ಮತ್ತು ಅವುಗಳಿಂದ ಪ್ರತ್ಯೇಕವಾಗಿ ಬದುಕಲು ಸಾಧ್ಯವಾಗುವುದೇ ಇಲ್ಲ. ಮನುಷ್ಯ ಈ ರೀತಿ ಎಲ್ಲಾ ಬಂಧನಗಳಿಂದ ದೂರವಾಗಿ ಸರ್ವ ಸ್ವತಂತ್ರವಾಗಿ ಬದುಕಲು ಸಾಧ್ಯವೇ?   ಹಾಗಿದ್ದಾಗ ಫ್ರೆಂಚ್ ಕ್ರಾಂತಿಯ ಉದಾತ್ತ ಘೋಷಣೆಯಾದ ʼಸ್ವಾತಂತ್ರ್ಯʼ ಮತ್ತು ನಮ್ಮ ದಿನ ನಿತ್ಯದ ಬದುಕಿನ ಸ್ವಾತಂತ್ರ್ಯದ ನಡುವೆ ಇರುವ ಸಂಘರ್ಷ ಯಾವ ರೀತಿಯದು, ಕಿಸ್ಲೋಸ್ಕಿ ಈ ಪ್ರಶ್ನೆಗಳನ್ನ ಪ್ರೇಕ್ಷಕನ ಅಲೋಚನೆಗೆ ಬಿಡುತ್ತಾನೆ.

Blue ಸಿನಿಮಾದ ಪ್ರೊಟೊಗಾನಿಸ್ಟ್ ʼಜ್ಯೂಲಿʼಯ ಮನಸ್ಸಿನ ಬೇಗುದಿಯನ್ನು ಕೀಸ್ಲೋಸ್ಕಿ ಬಹಳ ತೀವ್ರವಾಗಿ ನೀಲಿ ಬಣ್ಣದ ಹಿನ್ನಲೆಯ ದೃಶ್ಯಗಳಲ್ಲಿ  ಕಟ್ಟಿಕೊಡುತ್ತಾನೆ. ಜ್ಯೂಲಿ ಪಾತ್ರದ ಯಾವ ಭಾವನೆಗಳು ವಾಚ್ಯವಾಗದ ಹಾಗೆ ಅವಳ ಪ್ರತಿಯೊಂದು ಕ್ರಿಯೆಯೂ ಅವಳ ಮನಸ್ಸಿನ ಆಳದ ವೇದನೆಯ ಅಭಿವ್ಯಕ್ತಿಯೇ ಅನಿಸುವಷ್ಟು ಆ ಪಾತ್ರದ ಪರಕಾಯ ಪ್ರವೇಶ ಮಾಡಿದ ನಟಿ  ʼಜ್ಯೂಲಿಯೆಟ್ ಬಿನೋಷೆʼ. 1993ರಲ್ಲಿ ಬಿನೋಷೆಗೆ ಕಿಸ್ಲೊಸ್ಕಿಯಿಂದ ಮಾತ್ರವಲ್ಲದೇ ಹಾಲಿವುಡ್ ಖ್ಯಾತಿಯ ಸ್ಟೀವನ್ ಸ್ಪೀಲ್ಬರ್ಗ್ ನ‘Jurassic Park’ನಲ್ಲಿ ನಟಿಸಲು ಆಫರ್ ಬರುತ್ತದೆ. ಬಿನೋಷೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಕಿಸ್ಲೋಸ್ಕಿಯ Blue ಸಿನಿಮಾವನ್ನ. ಈ ಆಯ್ಕೆ ಬಗ್ಗೆ ಬಿನೋಷೆಗೆ ಬಹಳ ಹೆಮ್ಮೆ. ಕಿಸ್ಲೋಸ್ಕಿ ಎಷ್ಟು ಸೂಕ್ಷ್ಮಗ್ರಾಹಿ ನಿರ್ದೇಶಕ ಎಂಬುದನ್ನು ಬಿನೋಷೆ ಈ ರೀತಿ ನೆನಪು ಮಾಡಿಕೊಳ್ಳುತ್ತಾಳೆ: ʼಸಾಮಾನ್ಯ ಪ್ರೊಡಕ್ಷನ್ ವೆಚ್ಚ ಕಡಿಮೆ ಮಾಡುವ ಸಲುವಾಗಿ ಟೇಕ್ ತೆಗೆದುಕೊಳ್ಳುವ ಮೊದಲು ಆ ದೃಶ್ಯವನ್ನು ಸಾಕಷ್ಟು ಬಾರಿ ರಿಹರ್ಸಲ್ ಮಾಡಲಾಗುತ್ತಿತ್ತು. ಆ ನಂತರ ಒಂದೇ ಟೇಕ್ ನಲ್ಲಿ ಆ ದೃಶ್ಯವನ್ನ ಓಕೆ ಮಾಡಲಾಗುತ್ತಿತ್ತು. ಜ್ಯೂಲಿ ಪಾತ್ರ ಮೆಟ್ಟಿಲು ಮೇಲೆ ಏಕಾಂತವಾಗಿ ಕುಳಿತ ಒಂದು ದೃಶ್ಯವನ್ನು ರೀ ಟೇಕ್ ಸಲುವಾಗಿ ಮತ್ತೊಮ್ಮೆ ನಟಿಸಲು ನನ್ನನ್ನು ಕೇಳಿದರು, ನಾನು ನಟಿಸಿದೆ.  ಆ ಎರಡು ಟೇಕ್ ಗಳಲ್ಲೂ ನನಗೆ ಅಂತಹ ವ್ಯತ್ಯಾಸ ಕಾಣಲಿಲ್ಲ. ಇದನ್ನ ಹೇಳಿದಾಗ ಕಿಸ್ಲೋಸ್ಕಿ ‘ಎರಡನೇ ಟೇಕ್ನಲ್ಲಿ ನಿನ್ನ ಉಸಿರಾಟ ಬಹಳ ಭಿನ್ನವಾಗಿತ್ತುʼ ಎಂದರು.   ಅವರ ಈ ಪ್ರತಿಕ್ರಿಯೆ ಕೇಳಿ ನನಗೆ ಬಹಳ ಸೋಜಿಗವಾಗಿತ್ತು’.

White (1994) ಮತ್ತು Red(1994) ಈ ಎರಡೂ ಸಿನಿಮಾಗಳು Blue ಸಿನಿಮಾದಷ್ಟೆ ಪ್ರಮುಖವಾದವು. ಈ ಸಿನಿಮಾಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಕ್ಕಿಂತ ವಿವರವಾಗಿ ಹೇಳುವುದು ಸೂಕ್ತ ಅನಿಸುತ್ತದೆ. ಮುಂದಿನ ದಿನಗಳಲ್ಲಿ ಇವುಗಳ ಜೊತೆ ‘Double Life of Veronique’ (1991) ಸಿನಿಮಾ ಬಗ್ಗೆ ಕೂಡ ನನ್ನ ಅಭಿಪ್ರಾಯಗಳನ್ನು ವಿವರವಾಗಿ ಹಂಚಿಕೊಳ್ಳುತ್ತೇನೆ.. ಸುಮಾರು 25 ವರ್ಷಗಳ ಕಿಸ್ಲೋಸ್ಕಿಯ ವೃತ್ತಿ ಜೀವನದ ಎಲ್ಲಾ ಹಂತಗಳ ಸಿನಿಮಾಗಳು, ಅವುಗಳು ನಿರ್ವಹಿಸಿದ ವಸ್ತು ಮತ್ತು ಅವುಗಳಲ್ಲಿ ಅಭಿವ್ಯಕ್ತಿಯಾದ ಅಲೋಚನೆಗಳ ಕಾರಣವಾಗಿ ಬಹಳ ಮುಖ್ಯವಾದವು. ಆದರೆ ದೃಶ್ಯದ ಕಲಾತ್ಮಕತೆ ದೃಷ್ಟಿಯಿಂದ ಕಿಸ್ಲೋಸ್ಕಿ ಪ್ರಪಂಚದ ಗಮನ ಸೆಳೆದಿದ್ದು ʼThe Dekalog’ (1988) ಮುಖಾಂತರ. ತನ್ನ ವೃತ್ತಿ ಜೀವನದ ಕೊನೆಯ ಆರು ವರ್ಷಗಳ ಅವನ ಸಿನಿಮಾ ಜಗತ್ಪ್ರಸಿದ್ಧಿಯನ್ನು ಪಡೆದವು. ಇವತ್ತಿಗೂ ʼThe Dekalog’ (1988) ಮುಂಚಿನ ಅವನ ಸಾಕ್ಷ್ಯಚಿತ್ರಗಳು ಪ್ರಮುಖವಾಗಿದ್ದರೂ ಹೆಚ್ಚು ಚರ್ಚೆ ಆಗುವುದು ಮಾತ್ರ ಅವನ ಫೀಚರ್ ಫಿಲಂಗಳು ಮಾತ್ರ. ಕಿಸ್ಲೋಸ್ಕಿಯ ವೃತ್ತಿ ಬದುಕಿನ ದಿನಗಳು ಸಂಕಷ್ಟದವು, ಅವನ ಸಿನಿಮಾಗಳು ಪ್ರಪಂಚದ ಕಣ್ಣಿಗೆ ಬಿದ್ದು ಅವುಗಳು ಹೆಸರು ಮಾಡಿ ಕಿಸ್ಲೋಸ್ಕಿ ಪ್ರಸಿದ್ಧಿ ಪಡೆಯುವಷ್ಟರಲ್ಲಿ ಅವನು ತನ್ನ ವೃತ್ತಿಜೀವನದ ಕಡೆಯ ಘಟ್ಟದಲ್ಲಿದ್ದ. ಇವುಗಳನ್ನು ಅನುಭವಿಸುವ ಮೊದಲೇ ಬಹಳ ಬೇಗ ಅಗಲಿಬಿಟ್ಟ.

ಕೀಸ್ಲೋಸ್ಕಿ ʼಬದುಕಿನ ಮೂಲಭೂತ ಸಂಗತಿಗಳು ಬಹಳ ಸಮಸ್ಯಾತ್ಮಕವಾದವು. ಕೆಟ್ಟ ಮತ್ತು ಮೂರ್ಖತನದ ದಾರಿಯಲ್ಲಿ ಈ ನಮ್ಮ ಬದುಕು ವ್ಯವಸ್ಥೆಗೊಂಡಿದೆʼ ಎಂದು ಗುರಿತಿಸಿದರೂ ಕೂಡ, ತನ್ನ ಎಲ್ಲಾ  ಸಿನಿಮಾಗಳಲ್ಲೂ ಕಿಸ್ಲೋಸ್ಕಿಯ ಅಲೋಚನೆಗಳು ವ್ಯಕ್ತವಾಗಿದ್ದು ಮಾತ್ರ ಮನುಷ್ಯನ ಆಳದಲ್ಲಿರುವ ಮಾನವೀಯ ತಂತುವನ್ನು ಗುರುತಿಸುವುದೇ ಆಗಿದೆ ಅನಿಸುತ್ತದೆ.

– ಯದುನಂದನ್ ಕೀಲಾರ, ಅವರಿಗೆ ಜಾಗತಿಕ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...