ಫೋಟೋ ಕೃಪೆ: ಫಿಲ್ಮಿಬೀಟ್ ಕನ್ನಡ

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ನರಸಿಂಹರಾಜು ಅವರ ಜನ್ಮದಿನವಿಂದು. ನಟಿ ಆರ್. ಟಿ. ರಮಾ ಅವರು ನರಸಿಂಹರಾಜು ಅವರ ಜೋಡಿಯಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ನೆಚ್ಚಿನ ಹಾಸ್ಯನಟನ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಚಿತ್ರೀಕರಣ ಸಂದರ್ಭದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಅವರಿಲ್ಲಿ ನೆನಪು ಮಾಡಿಕೊಂಡಿದ್ದಾರೆ.

ಪಾಂಡುರಂಗ ಪ್ರೊಡಕ್ಷನ್ಸ್ ಅವರ ‘ಅನುರಾಧ’; ಚಿತ್ರೀಕರಣದ ಸಂದರ್ಭ. ರಾಜಾಶಂಕರ್, ಪಂಢರೀಬಾಯಿ, ಅಶ್ವಥ್ ಇತರರು ಪ್ರಮುಖ ಪಾತ್ರಗಳಲ್ಲಿದ್ದರು. ನರಸಿಂಹರಾಜು ಮತ್ತು ನಾನು ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದೆವು. ಈ ಚಿತ್ರಕ್ಕಾಗಿ ನಾನು ಸೈಕಲ್ ಕಲಿಯುವ ಅನಿವಾರ್ಯತೆ ಎದುರಾಗಿತ್ತು. ಮದ್ರಾಸ್‍ನಲ್ಲಿ ನಟ ಬೆಂಗಳೂರು ನಾಗೇಶ್ ಸಹಕಾರದಲ್ಲಿ ಲೇಡಿಸ್ ಸೈಕಲ್ ಹೊಡೆಯುವುದನ್ನು ಕಲಿತಿದ್ದೆ. ಆದರೆ ‘ಅನುರಾಧ’ ಚಿತ್ರಕ್ಕೆ ಮೈಸೂರಿನಲ್ಲಿ ಚಿತ್ರೀಕರಣ ನಡೆದಿತ್ತು. ಸೈಕಲ್ ಬರುತ್ತದೆಂದು ನಿರ್ದೇಶಕರಿಗೆ ಧೈರ್ಯದಿಂದ ಭರವಸೆ ಕೊಟ್ಟಿದ್ದೆ. ದುರದೃಷ್ಟವತಾಶ್ ಮೈಸೂರಿನಲ್ಲಿ ನನಗೆ ಲೇಡೀಸ್ ಸೈಕಲ್ ಸಿಗಲಿಲ್ಲ! ಕೊನೆಗೆ ಗಂಡಸರ ಸೈಕಲ್ ಅನ್ನೇ ಹೊಡೆಯುವುದೆಂದು
ನಿರ್ಧಾರವಾಯಿತು.

ಚಿತ್ರದಲ್ಲಿ ನರಸಿಂಹರಾಜು ಕಾರು ಡ್ರೈವ್ ಮಾಡುತ್ತಾರೆ. ಸನ್ನಿವೇಶವೊಂದರಲ್ಲಿ ನಾನು ಸೈಕಲ್‍ನಲ್ಲಿ ಅವರ ಕಾರಿಗೆ ಡ್ಯಾಷ್ ಹೊಡೆಯಬೇಕು. ಗಂಡಸರ ಸೈಕಲ್ ಆದ್ದರಿಂದ ಕುಳ್ಳಿಯಾದ ನನಗೆ ಪೆಡಲ್ ಸಿಗುತ್ತಲೇ ಇರಲಿಲ್ಲ. ಅಲ್ಲದೆ ಬ್ರೇಕ್ ಹಿಡಿಯೋದನ್ನು ಕೂಡ ಮದ್ರಾಸ್‍ನಲ್ಲಿ ಸರಿಯಾಗಿ ಕಲಿತಿರಲಿಲ್ಲ. ಆಗ ಈ ಸನ್ನಿವೇಶದ ಚಿತ್ರೀಕರಣದುದ್ದಕ್ಕೂ ತಮಾಷೆಗಳು ನಡೆದವು. ಸೈಕಲ್ ಮೇಲೆ ಕುಳಿತಿದ್ದ ನನ್ನನ್ನು ಯಾರೊ ಒಬ್ಬರು ಎತ್ತರದ ಪ್ರದೇಶದಿಂದ ದಬ್ಬುತ್ತಿದ್ದರು. ಶಾಟ್ ಮುಗಿಯುತ್ತಿದ್ದಂತೆ ಮತ್ತಿಬ್ಬರು ಓಡಿಬಂದು ಸೈಕಲ್
ಹಿಡಿದುಕೊಳ್ಳಬೇಕಿತ್ತು!

ನರಸಿಂಹರಾಜು (ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ಮೊದಲ ಟೇಕ್‍ನಲ್ಲಿ ಸೈಕಲ್ ಮೇಲೆ ಕುಳಿತಿದ್ದ ನನ್ನನ್ನು ಯಾರೋ ದಬ್ಬಿದರು. ಪೆಡಲ್ ಸಿಗದೆ ನಾನು ಪರದಾಡುತ್ತಾ ಗಾಬರಿಗೊಂಡೆ. ಬ್ರೇಕ್ ಹಿಡಿಯಲು ಗೊತ್ತಾಗದೆ ರಸ್ತೆ ಬಿಟ್ಟು ಪಕ್ಕದ ಮಣ್ಣಿನ ಗುಂಡಿಯಲ್ಲಿ ಸೈಕಲ್ ಜತೆಗೇ ಬಿದ್ದೆ! ನರಸಿಂಹರಾಜು ಕಾರಿನಿಂದಿಳಿದು ಕೂಗುತ್ತಾ ಓಡಿ ಬಂದರು. ಕೈ-ಕಾಲು ಪರಚಿಕೊಂಡ ನನ್ನನ್ನು ಮೆಲ್ಲಗೆ ನಡೆಸಿಕೊಂಡು ಬಂದರು. ನೋವು ತೋರಿಸಿಕೊಳ್ಳದೆ ಮತ್ತೊಂದು ಟೇಕ್‍ಗೆ ರೆಡಿಯಾದೆ. ನಾನು ಸೈಕಲ್ ಓಡಿಸುವ ಪರಿಯಿಂದ ಕಾರಿನ ಡ್ರೈವರ್ ಸೀಟಿನಲ್ಲಿದ್ದ ನರಸಿಂಹರಾಜು ನನಗಿಂತಲೂ ಹೆಚ್ಚು ಗಾಬರಿಗೊಂಡಿದ್ದರು! ಎರಡನೇ ಟೇಕ್‍ನಲ್ಲಿ ನಾಲ್ಕೈದು ಸಹಾಯಕರೊಂದಿಗೆ
ಅಂತೂ ಶಾಟ್ ಓಕೆ ಆಯ್ತು.

ಹಂಡೆಯೊಳಗೆ ನರಸಿಂಹರಾಜು!

‘ಕನ್ಯಕಾಪರಮೇಶ್ವರಿ’ ಸಿನಿಮಾ ಚಿತ್ರೀಕರಣದ ಒಂದು ಸನ್ನಿವೇಶ. ನರಸಿಂಹರಾಜು ನನ್ನ ಪತಿ ಹಾಗೂ ನಟಿ ರಮಾದೇವಿ ನನ್ನ ಅಮ್ಮನಾಗಿ ನಟಿಸುತ್ತಿದ್ದರು. ನನ್ನಮ್ಮನಿಗೆ ಅಳಿಯ ನರಸಿಂಹರಾಜು ಅವರನ್ನು ಕಂಡರಾಗದು. ಆಕೆ ಇಲ್ಲದ ವೇಳೆ ನೋಡಿಕೊಂಡು ನರಸಿಂಹರಾಜು ನಮ್ಮ ಮನೆಗೆ ಬರುತ್ತಾರೆ. ಅಷ್ಟರಲ್ಲಿ ಹೊರಗೆ ಹೋಗಿದ್ದ ಅಮ್ಮ, ಬೆಕ್ಕು ಅಡ್ಡ ಬಂದು ಅಪಶಕುನವಾಯ್ತೆಂದು ಮರಳಿ ಮನೆಗೆ ಬರುತ್ತಾಳೆ. ನಾನು ಅವಸರಕ್ಕೆ ಪತಿ ನರಸಿಂಹರಾಜು ಅವರನ್ನು ದೊಡ್ಡ ನೀರಿನ ಹಂಡೆಯಲ್ಲಿ ಮುಚ್ಚಿಡುತ್ತೇನೆ. ಬೆಕ್ಕು ಅಡ್ಡ ಬಂದು ಮೈಲಿಗೆಯಾಗಿದೆ ಎಂದು ಅಮ್ಮ ಸ್ನಾನ ಮಾಡಲು ಅಣಿಯಾಗುತ್ತಾಳೆ.

ನಾನು ನೀರಿನ ಹಂಡೆಯನ್ನು ಒಲೆ ಮೇಲಿಟ್ಟು ಬೆಂಕಿ ಹಾಕಬೇಕು. ಹಂಡೆ ಒಳಗೆ ನರಸಿಂಹರಾಜು! ಎರಡು ಟೇಕ್‍ನಲ್ಲೂ ಓಕೆಯಾಗದ್ದರಿಂದ ಹಿತ್ತಾಳೆಯ ಹಂಡೆ ಸಿಕ್ಕಾಪಟ್ಟೆ ಬಿಸಿಯಾಗಿತ್ತು. ಒಳಗಿದ್ದ ನರಸಿಂಹರಾಜು ಕೂಗು ಹಾಕತೊಡಗಿದ್ದರು. ಶಾಟ್ ಓಕೆಯಾಗುತ್ತಿದ್ದಂತೆಯೇ ನರಸಿಂಹರಾಜು ಒಮ್ಮೆಗೇ ಹಂಡೆಯಿಂದ ಹೊರಜಿಗಿದದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ!

ಆರ್. ಟಿ. ರಮಾ (ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ಕಾಪಾಡಿ ಕಾಪಾಡಿ!

ನರಸಿಂಹರಾಜು ಅವರೊಂದಿಗಿನ ಚಿತ್ರವೊಂದರಲ್ಲಿ ಪಜೀತಿ ಎದುರಾಗಿತ್ತು. ಶ್ರೀರಂಗಪಟ್ಟಣದ ಬಳಿಯ ಪಶ್ಚಿಮವಾಹಿನಿ ಹೊಳೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಹೊಳೆಯಲ್ಲಿ ಬಿದ್ದ ನರಸಿಂಹರಾಜು ಅವರನ್ನು ನಾನು ಕಾಪಾಡುವ ಸನ್ನಿವೇಶ. ಹೊಳೆಯಲ್ಲಿ ನೀರು ಹರಿಯುತ್ತಿದ್ದು ಸೆಳವು ಕೊಂಚ ಹೆಚ್ಚಾಗಿಯೇ ಇತ್ತು. ನರಸಿಂಹರಾಜು ಅವರಿಗೇನೋ ಈಜು ಬರುತ್ತಿತ್ತು. ಅವರನ್ನು ಕಾಪಾಡಬೇಕಿದ್ದ ಈಜಲು ಬಾರದ ನಾನು ಭಯದಿಂದ ನಡುಗತೊಡಗಿದೆ!

ನನ್ನ ಪಡಿಪಾಟಲು ನೋಡಿ ನಿರ್ದೇಶಕರು ಹೊಳೆಯಲ್ಲಿ ಮೂರಡಿ ಆಳವಿದ್ದ ಪ್ರದೇಶದಲ್ಲಿ ಶೂಟಿಂಗ್ ನಡೆಸಲು ಸಜ್ಜಾದರು. ನರಸಿಂಹರಾಜು ಅವರೇನೋ ಸಲೀಸಾಗಿ ಹೊಳೆ ಮಧ್ಯೆ ಹೋಗಿ ನಿಂತು, ನಿರ್ದೇಶಕರ ಅಣತಿಯಂತೆ `ಕಾಪಾಡಿ ಕಾಪಾಡಿ’ ಎಂದು ಕೂಗು ಹಾಕಿದರು. ಅವರನ್ನು ಕಾಪಾಡಬೇಕಿದ್ದ ನಾನು ನೀರಿಗಿಳಿದು ಕೊಂಚ ದೂರ ಹೋಗುತ್ತಿದ್ದಂತೆ ಕೂಗತೊಡಗಿದೆ!

ಕೊನೆಗೆ ನರಸಿಂಹರಾಜು ಅವರೇ ನನ್ನ ಬಳಿ ಬಂದರು. ನೀರೊಳಗೇ ನನ್ನ ಕೈ ಹಿಡಿದುಕೊಂಡು, ತಾವೇ ಮುಳುಗುತ್ತಿರುವಂತೆ `ಆ್ಯಕ್ಷನ್’ ಮಾಡಿದರು. ನಾನು ಧೈರ್ಯ ಮಾಡಿ ಅವರನ್ನು ಕಾಪಾಡುವವಳಂತೆ ನಟಿಸಿದೆ(!). ಅಂತೂ ಇಂತೂ ನಿರ್ದೇಶಕರು ಶಾಟ್ ಓಕೆ ಮಾಡಿದರು. ಇಲ್ಲಿ ಯಾರನ್ನು ಯಾರು ಕಾಪಾಡಿದರು ಎನ್ನುವ ಗೊಂದಲದಿಂದ ನರಸಿಂಹರಾಜು ಮತ್ತು ನಾನು ಇಬ್ಬರೂ ಮನಸಾರೆ ನಕ್ಕೆವು.

ನಿರೂಪಣೆ: ಶಶಿಧರ ಚಿತ್ರದುರ್ಗ


ಓದಿ: ವಿಲನ್‍ಗೆ ಡ್ಯೂಪ್ ಆದ ಆಪತ್ಭಾಂಧವ ಶಿವರಾಜ್‌ಕುಮಾರ್‌ಗೆ ಜನ್ಮದಿನದ ಶುಭಾಶಯಗಳು: ಚಿ.ಗುರುದತ್


 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here